ವಿಶ್ವವಾಣಿ

ರೋಬೊಟ್‌ಗಳಿಗೂ ಪಾಪ್‌ಕಾರ್ನ್ ಪೌಷ್ಟಿಕ ಆಹಾರ!

ಅವಲಕ್ಕಿಗಿಂತ ಅರಳು ಲಕ್ಕಿ ಎಂದು ಮಂಡಕ್ಕಿಯು ಅನ್ನಲಿಕ್ಕೆ ಕಾರಣ ಎಂದೆಂದೂ ಬತ್ತದ ಉತ್ಸಾಹ. ತಲೆಬುಡ ಅರ್ಥವಾಗಿರಲಿಕ್ಕಿಲ್ಲ ಆ ವಾಕ್ಯ ಬಹುಶಃ ನಿಮಗೆ. ಅಂಥದೇನೂ ಗಾಢ ಗಂಭೀರ ಅರ್ಥ ತುಂಬಿಸಿರಲಿಲ್ಲ ಬಿಡಿ. ಬತ್ತ ಮತ್ತು ಅದರ ನಾಲ್ಕು ಅವತಾರಗಳು- ಅವಲಕ್ಕಿ, ಮಂಡಕ್ಕಿ, ಅರಳು, ಮತ್ತು ಅನ್ನ- ಇವಿಷ್ಟೂ ಬರುವಂತೆ ಒಂದು ಪದಚಮತ್ಕಾರ ಮಾಡಿದ್ದು ಅಷ್ಟೇ. ಆದರೂ, ನಿಮಗೆ ಪುರುಸೊತ್ತಿದ್ದರೆ ಒಮ್ಮೆ ‘ಅವಲಕ್ಕಿಗಿಂತ ಅರಳು ಲಕ್ಕಿ’ ಎಂಬ ಭಾಗವನ್ನಷ್ಟೇ ತುಸು ಚಿಂತನೆಯ ಒರೆಗೆ ತಿಕ್ಕಿ ನೋಡಿ. ಹೌದಲ್ವಾ ಎನಿಸುವ ಒಂದು ಹೊಳಹು ಅದರಲ್ಲಿದೆ!

ಅವಲಕ್ಕಿಯ ತಯಾರಿ ವಿಧಾನ ಏನು? ಬತ್ತವನ್ನು ಕುಟ್ಟಿ ಚಪ್ಪಟೆಗೊಳಿಸಿದಾಗ ಸಿಗುವುದು ಅವಲಕ್ಕಿ. ಅಂದರೆ ಶೋಷಣೆಯಿಂದ ಪಡೆದುಕೊಂಡ, ಬತ್ತದ ಮೇಲೆ ಒತ್ತಡ ಹಾಕಿ ತಂದುಕೊಂಡ ಉತ್ಪನ್ನ ಅವಲಕ್ಕಿ. ಆದರೆ ಅರಳು ಹಾಗಲ್ಲ, ಬತ್ತವನ್ನು ಶಾಖಕ್ಕೆ ಒಡ್ಡಿ ಅದು ಅರಳುವಂತೆ ಮಾಡುವುದು. ಹೆಸರೇ ಅರಳು ಎಂದಮೇಲೆ ಅಲ್ಲಿರುವುದು ಅರಳುವ ಪ್ರಕ್ರಿಯೆಯೇ. ಒಂದು ರೀತಿಯಲ್ಲಿ, ಪ್ರೋತ್ಸಾಹವೆಂಬ ಉತ್ತೇಜನದ ಕಾವನ್ನು ಕೊಟ್ಟು ಒಬ್ಬ ವ್ಯಕ್ತಿಯ ಪ್ರತಿಭೆ ಅರಳುವುದಕ್ಕೆ ಕಾರಣವಾಗುವ ಹಾಗೆ. ಸಮಾಜದಲ್ಲಿಯೂ ಹಾಗೆಯೇ. ಕೆಲವರು ಯಾವ್ಯಾವುದೋ ಕಾರಣಗಳಿಂದಾಗಿ ತುಳಿಯಲ್ಪಡುತ್ತಾರೆ, ತಮ್ಮದಲ್ಲದ ತಪ್ಪಿಗೆ ಒತ್ತಡಕ್ಕೊಳಗಾಗಿ ಜೀವನದ ಶಕ್ತಿ-ಚೈತನ್ಯಗಳನ್ನು ಕಳೆದುಕೊಂಡು ಬಿಡುತ್ತಾರೆ. ಕೆಲವರಿಗೆ ಅದೃಷ್ಟ ಒಲಿಯುತ್ತದೆ. ಭಗವಂತನೇ ಕಳಿಸಿಕೊಟ್ಟನೇನೋ ಎಂಬಂಥ ವ್ಯಕ್ತಿಗಳಿಂದ, ಅಗೋಚರ ಶಕ್ತಿಗಳಿಂದ, ಪ್ರೋತ್ಸಾಹ ಬೆಂಬಲ ಸಿಗುತ್ತದೆ. ಅರಳುವುದಕ್ಕೆ ಹೇರಳ ಅವಕಾಶಗಳು ಸಿಗುತ್ತವೆ. ಬದುಕಿನಲ್ಲಿ ಏನೋ ಒಂದನ್ನು ಸಾಧಿಸುವುದಕ್ಕೆ ದಾರಿ ಸುಗಮವಾಗುತ್ತದೆ.

ಮತ್ತೆ, ಕಳೆದ ವಾರದ ಅಂಕಣದಲ್ಲಿ ಮನನ ಮಾಡಿಕೊಂಡಿದ್ದಂತೆ ಛವಿ ಮತ್ತು ಸವಿ ಇದ್ದರಂತೂ ಮಿಕ್ಕಿದ್ದೆಲ್ಲ ನಿಮಿತ್ತ ಮಾತ್ರ. ಈ ದೃಷ್ಟಿಯಿಂದ ನೋಡಿದರೆ ‘ಅವಲಕ್ಕಿಗಿಂತ ಅರಳು ಲಕ್ಕಿ’ ಎಂಬ ಮಾತು ನೂರಕ್ಕೆ ನೂರು ಸತ್ಯ ಅಂತನಿಸುವುದಿಲ್ಲವೇ? ಅರಳು ನಮ್ಮ ಗೌರವಯುತ ಸ್ಥಾನ ಪಡೆದಿರುವಂಥದ್ದೇ. ಆ ವಿಚಾರದಲ್ಲಿ ಅವಲಕ್ಕಿಯೂ ಅನ್‌ಲಕ್ಕಿ ಏನಲ್ಲ, ಆದರೂ ಅರಳಿನ ಶ್ರೇಷ್ಠತೆ ತುಸು ಹೆಚ್ಚಿನದೇ. ನನ್ನ ಅಮ್ಮ ಮಾಡುತ್ತಿದ್ದ ಉಪವಾಸಗಳಲ್ಲಿ ‘ಅವಲಕ್ಕಿ ತಿನ್ನಬಹುದು ಕ್ಯಾಟೆಗರಿಯ ಉಪವಾಸಗಳಿಗಿಂತ ‘ಅರಳು ಮಾತ್ರ ತಿನ್ನಬಹುದು ಕ್ಯಾಟೆಗರಿಯವು ಕಠಿಣದವು. ಬರೀ ಒಂದು ತಿನಿಸಾಗಿ ಅಷ್ಟೇ ಅಲ್ಲ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿವಿಧಾನಗಳಲ್ಲಿಯೂ ಅರಳು ಒಂದು ಅತ್ಯಾವಶ್ಯಕ ಸಾಮಗ್ರಿ. ನಮ್ಮ ಕರಾವಳಿಯಲ್ಲಿ ನಾಗಾರಾಧನೆಯಲ್ಲಿ, ನಾಗರಪಂಚಮಿಯ ಪೂಜೆಯಂದು ಅರಳು ಬೇಕೇಬೇಕು. ಮಳೆಗಾಲದಲ್ಲಿ ಬಿಡಿಹೂಗಳು ಸಿಗುವುದು ಹೂವುಗಳ ಸ್ಥಾನವನ್ನೂ ಅರಳೇ ವಹಿಸಬೇಕಾಗುತ್ತದೆ. ಗಣೇಶನ ಅರಳುಪ್ರಿಯತೆಯಂತೂ ಅಥರ್ವಶೀರ್ಷ ಮಂತ್ರದಲ್ಲಿ ಬರುವ ‘ಯೋ ಲಾಜೈರ್ಯಜತಿ ಸ ಯಶೋವಾನ್ ಭವತಿ ಸ ಮೇಧಾವಾನ್ ಭವತಿ’ (ಯಾರು ಗಣಪನನ್ನು ಅರಳಿನಿಂದ ಅರ್ಚಿಸುತ್ತಾರೋ ಅವರು ಯಶಸ್ಸನ್ನು ಗಳಿಸುತ್ತಾರೆ, ಬುದ್ಧಿವಂತರಾಗುತ್ತಾರೆ) ಎಂಬುದರಿಂದ ಗೊತ್ತಾಗುತ್ತದೆ. ಅರಳಿನಿಂದ ಮಾಡಿದ ಉಂಡೆ ಗಣೇಶನ ಪ್ರಿಯಭಕ್ಷ್ಯಗಳಲ್ಲೊಂದು

 ಅಂತೆಯೇ ಉಪನಯನ ಸಮಾರಂಭದಲ್ಲಿ ವಟುವಿಗೆ ಭಿಕ್ಷೆ ಹಾಕುವುದಕ್ಕೂ ಅರಳಿನ ಉಂಡೆ ಮಾಡುವ ಸಂಪ್ರದಾಯ ಇದೆ. ಮದುವೆಯಲ್ಲಿ ವಿವಾಹಹೋಮದಲ್ಲಿ ವಧುವಿನ ಬೊಗಸೆಯಲ್ಲಿ ವಧುವಿನ ಸಹೋದರ ತುಂಬಬೇಕು. ವಧು ಅದನ್ನು ವರನೊಂದಿಗೆ ಸೇರಿ ಹೋಮಕ್ಕೆ ಆಹುತಿ ಕೊಡಬೇಕು. ‘ಲಾಜಾಹೋಮ’ ಎಂಬ ಈ ಧಾರ್ಮಿಕವಿಧಿ ಬಹುಶಃ ಕರ್ನಾಟಕದಲ್ಲಿ ಎಲ್ಲ ಸಮುದಾಯಗಳ ಮದುವೆಗಳಲ್ಲಿ ಇದೆಯೆಂದುಕೊಂಡಿದ್ದೇನೆ. ನಮ್ಮ ಚಿತ್ಪಾವನ ಸಮುದಾಯದಲ್ಲಿ ಉತ್ತರಕ್ರಿಯೆಯ ಒಂದು ಭಾಗವಾದ ‘ಧರ್ಮೋದಕ’ ವಿಧಾನದಲ್ಲಿ, ಮೃತ ವ್ಯಕ್ತಿಯ ಮಕ್ಕಳು ಮತ್ತು ಬಂಧುಬಾಂಧವರು ಹತ್ತನೆಯ ದಿನದಂದು ನದೀತೀರದಲ್ಲಿ ಕರ್ಮಕಾರ್ಯ, ನದಿಯಲ್ಲಿ ಮುಳುಗು ಮುಗಿಸಿ ಮನೆಗೆ ಹಿಂದಿರುಗುವಾಗ ಹೆಂಗಳೆಯರು ದಾರಿಯುದ್ದಕ್ಕೂ ಅರಳು ಚೆಲ್ಲುತ್ತ ಬರುವ ಕ್ರಮವಿದೆ. ದುಃಖದ ಮಡುವಿನಲ್ಲಿ ಮುಳುಗಿಕೊಂಡೇ ಬಿಟ್ಟು, ಮನೆಯಲ್ಲಿ/ ಕುಟುಂಬದಲ್ಲಿ ಮುಂದಿನ ಉತ್ತರೋತ್ತರ ಕಲ್ಯಾಣಕ್ಕೆ ತೊಡಗಿಸಿಕೊಳ್ಳಲು ಅರಳು ಒಂದು ಶುಭಸಂಕೇತ.

ಅರ್ಥಭರಿತ ಸಂಕೇತ ಸಹ. ಅರಳು ಎಂಬ ಕ್ರಿಯಾಪದದ ಅರ್ಥವೇ ಅಲ್ಲಿಯೂ. ಮುದುಡಿಕೊಂಡು ಇರುವುದು ಜೀವನವಲ್ಲ, ತಾತ್ಕಾಲಿಕ ಕಷ್ಟ-ದುಃಖಗಳನ್ನು ಗೆದ್ದು ಮತ್ತೆ ಅರಳಬೇಕು ಎಂಬ ಸಂದೇಶ. ಇದನ್ನೆಲ್ಲ ಗಮನಿಸಿದರೂ, ಅವಲಕ್ಕಿಗಿಂತ ಅರಳು ಲಕ್ಕಿ ಎಂಬ ಅಂಶ ನಮಗೆ ಮನದಟ್ಟಾಗುತ್ತದೆ. ಇದುವರೆಗೂ ನಾನು ವ್ಯಾಖ್ಯಾನಿಸಿದ್ದು ಬತ್ತದ ಅರಳನ್ನು ಕುರಿತು. ಆದರೆ ಲೇಖನದ ವಸ್ತು ಜೋಳದ ಅರಳು. ಪಾಪ್ ಅಂತೇವಲ್ಲ ಅದು. ಅರಳುವ ಪ್ರಕ್ರಿಯೆಯನ್ನು, ನಮ್ಮ ಧಾರ್ಮಿಕ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅರಳಿಗಿರುವ ಮಹತ್ವವನ್ನು ವಿವರಿಸಲಿಕ್ಕೆ ಬರೀ ಒಂದು ತಿನಿಸಾಗಿಯಷ್ಟೇ ಬಳಕೆಯಾಗುವ ಪಾಪ್‌ಕಾರ್ನ್‌ಗಿಂತ ಬತ್ತದ ಅರಳೇ ಅತ್ಯಂತ ಸೂಕ್ತ ಎಂದು ಆಯ್ದುಕೊಂಡೆ. ಪಾಪ್‌ಕಾರ್ನ್ ಬಗ್ಗೆಯೂ ಸ್ವಾರಸ್ಯಕರ ಸಂಗತಿಗಳನೇಕವನ್ನು ಸೇರಿಸಬಹುದು, ಪರಂತು ಅದರಲ್ಲಿ ‘ಭಾರತೀಯತೆ’ಯ ಭಾವ ಸಿಗಲಿಕ್ಕಿಲ್ಲ ಅಂತ ಅಷ್ಟೇ. ಉದಾಹರಣೆಗೆ, ಅಮೆರಿಕನ್ನರು ವರ್ಷಕ್ಕೆ ಸುಮಾರು 17 ಬಿಲಿಯನ್ ಕ್ವಾರ್ಟ್‌ಗಳಷ್ಟು (ಲೀಟರ್ ಪಾತ್ರೆಯಲ್ಲಿ ಅಳೆದರೆ ಸುಮಾರು ಒಂದುಸಾವಿರದ ಏಳುನೂರು ಕೋಟಿ ಲೀಟರ್‌ಗಳಷ್ಟು) ಕಾರ್ನ್ ಮೆಲ್ಲುತ್ತಾರೆ. ಈ ಪ್ರಮಾಣವನ್ನು ಸಂಖ್ಯೆಯಲ್ಲಿ ಹೇಳೋದಕ್ಕಿಂತ ರೂಪಕವಾಗಿ ಹೇಳಿದರೆ ಚೆನ್ನ- ನ್ಯೂಯಾರ್ಕ್ ನಗರದಲ್ಲಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲಿ 18 ಸರ್ತಿ ತುಂಬಿಸಬಹುದಾದಷ್ಟು ಪಾಪ್‌ಕಾರ್ನ್! ‘ಹಿಂದಿನ ಕಾಲದಲ್ಲಿ ಪಾಪ್‌ಕಾರ್ನ್ ತಯಾರಿಸುವುದು ದೊಡ್ಡ ದೊಡ್ಡ ಮಡಕೆಗಳನ್ನು ಒಲೆಯ ಮೇಲೆ ಇಟ್ಟು ಅದರೊಳಗೆ ಮರಳಿನ ಕಣಗಳು ಮತ್ತು ಜೋಳದ ಬೀಜಗಳನ್ನು ಹಾಕಿ ಹುರಿಯುವುದರ ಮೂಲಕ’ ಎಂದು ಅಮೆರಿಕನ್ ಮಕ್ಕಳಿಗೆ ಹೇಳಿಕೊಡುತ್ತಾರೆ.

ನಮ್ಮ ಹಳ್ಳಿಯಲ್ಲಿ ಈಗಲೂ ಬತ್ತದ ಅರಳು ಮಾಡುವುದು ಇದೇ ವಿಧಾನದಲ್ಲಿ. ಸೀಳಿ ಅರ್ಧ ಮಾಡಿದ ದೊಡ್ಡದೊಂದು ಮಣ್ಣಿನ ಮಡಕೆಯನ್ನು ಒಲೆಯ ಮೇಲಿಟ್ಟು ಅದರೊಳಗೆ ಮರಳು ಮತ್ತು ಬತ್ತ ಹಾಕಿ, ಹಿಡಿಸೂಡಿಯನ್ನೇ ಸಟ್ಟುಗವಾಗಿಸಿ ಶಾಖದ ಹದವನ್ನು ನಿಯಂತ್ರಿಸುವುದು. ತಟಪಟ ಶಬ್ದ ಮಾಡುತ್ತ ಅರಳು ಸಿಡಿಯುವುದು. ಮಲೆನಾಡಿನ ಹೆಣ್ಣಿನ (ಮಾತಿನಮಲ್ಲಿ ಅಂತನಿಸಿಕೊಳ್ಳುವ ಹೆಚ್ಚಿನೆಲ್ಲ ಹೆಣ್ಮಕ್ಕಳ) ‘ಮಾತು ನಿನ್ದು ಹುರಿದ ಅರಳು ಸಿಡಿದ್ಹಂಗೆ ಕಣ್ಣುಗಳು ಮಿಂಚ್ಹಂಗೇ’ ಆಗುವುದು ಆ ದೃಶ್ಯದ ಹೋಲಿಕೆಯಿಂದಲೇ. ಇಲ್ಲಿ ಇನ್ನೊಂದು ಸ್ವಾರಸ್ಯಕರ ಅಂಶವನ್ನೂ ಗಮನಿಸಬೇಕು. ಅಮೆರಿಕದಲ್ಲಿ ಪಾಪ್‌ಕಾರ್ನ್‌ಗೆ ಸಂಬಂಧಿಸಿದಂತೆ ಇರುವ ‘ಕರ್ನೆಲ್’ ಎಂದರೆ ಪಾಪ್‌ಕಾರ್ನ್ ಮಾಡಲು ಸಿದ್ಧಗೊಳಿಸಿರುವ ಜೋಳದ ಬೀಜ. ಮೈಕ್ರೋವೇವ್‌ನಲ್ಲಾಗಲೀ ಬೇರೆ ಯಾವುದೇ ಕುಲುಮೆಗಳಲ್ಲಾಗಲೀ ಪಾಪ್‌ಕಾರ್ನ್ ಮಾಡುವಾಗ ನೂರು ಶೇಕಡಾ ಕರ್ನೆಲ್‌ಗಳೆಲ್ಲವೂ ಅರಳುತ್ತವೆ ಎಂದೇ.

ನಿಲ್ಲ. ಒಂದೆರಡು ಪ್ರತಿಶತ ಬೀಜಗಳು ಹಾಗೇ ಉಳಿಯುತ್ತವೆ. ಅವುಗಳನ್ನು ‘ಸ್ಪಿನ್‌ಸ್ಟರ್’ ಎನ್ನುತ್ತಾರೆ. ಅಂದರೆ, ಮದುವೆಯಾಗದ ಹೆಣ್ಣಿಗೆ ಅಥವಾ ಕನ್ಯೆಗೆ ಇಂಗ್ಲಿಷ್‌ನಲ್ಲಿ ‘ಸ್ಪಿನ್‌ಸ್ಟರ್’ ಎನ್ನುತ್ತಾರಲ್ಲ ಅದೇ ಪದ! ಈಗ ತಾಳೆಮಾಡಿ- ನಮ್ಮ ಸಂಸ್ಕೃತಿಯಲ್ಲಿ ಮದುವೆಯ ದಿನ ‘ಲಾಜಾಹೋಮ’ ಮಾಡಿಸುವುದು ಏಕೆ ಎಂದು! ಆಯ್ತು, ಪಾಪ್‌ಕಾರ್ನ್ ಒಂದಿಷ್ಟು ಪೀಠಿಕೆಯ ಮಾತಾಯ್ತು. ಈಗಿನ್ನು ಮುಖ್ಯ ವಿಷಯಕ್ಕೆ ಬರೋಣ. ಬತ್ತದ ಅರಳಿರಲಿ, ಜೋಳದ ಅರಳು ಅಥವಾ ಪಾಪ್‌ಕಾರ್ನ್ ಇರಲಿ, ಅದನ್ನು ಮಾಡುವ ಪ್ರಕ್ರಿಯೆಯಲ್ಲಿ ಒಂದು ಆಸಕ್ತಿಕರ ರಸಾಯನಶಾಸ್ತ್ರದ ಅಂಶ ಇದೆ. ಈಗ ವಿಜ್ಞಾನಿಗಳು ಈ ರಸಾಯನಶಾಸ್ತ್ರ ಅಂಶವನ್ನು ರೋಬೊಟಿಕ್‌ಸ್ ಅಥವಾ ಯಂತ್ರಮಾನವ ನಿರ್ಮಾಣದಲ್ಲಿ ಬಳಸಬಹುದೆಂದು ಸಂಶೋಧನಾ ಪ್ರಯೋಗಗಳಿಂದ ಸಾಬೀತುಪಡಿಸಿದ್ದಾರೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್‌ಸ್ ಎಂಜಿನಿಯರುಗಳ ಅಂತಾರಾಷ್ಟ್ರೀಯ ಸಂಸ್ಥೆಯ (‘ಐ ಟ್ರಿಪಲ್ ಇ’) ಈ ವರ್ಷದ ಸಮ್ಮೇಳನದಲ್ಲಿ ರೋಬೊಟುಗಳಲ್ಲಿ ಪಾಪ್ ಬಳಸಬಹುದಾದ- ತೀರಾ ವಿಚಿತ್ರವೆನಿಸಬಹುದಾದ- ಸಂಶೋಧನಾ ಪ್ರಬಂಧ ಮಂಡಿಸಲಾಗಿದೆಯಂತೆ. ‘ಪಾಪ್ ಕಾರ್ನ್ ಡ್ರಿವನ್ ರೋಬೊಟಿಕ್ ಆಕ್ಚುವೇಟರ್ಸ್ ಎಂಬ ಶೀರ್ಷಿಕೆಯ ಪ್ರಬಂಧವನ್ನು ಮಂಡಿಸಿದ ವಿಜ್ಞಾನಿಗಳು ಕಾರ್ನೆಲ್ ವಿಶ್ವವಿದ್ಯಾಲಯದ ಸ್ಟೀವನ್ ಸಿರಾನ್, ಅಲೀನಾ ಕುರುಮುಂಡಾ, ಈಶನ್ ಗರ್ಗ್, ಮೀರಾ ಕಿಮ್, ಟೋಸಿನ್ ಯೇಕು, ಮತ್ತು ಕ್ರಿಸ್ಟೀನ್ ಪೀಟರ್‌ಸನ್.

ಈವರ್ಷ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಈ ಪ್ರಬಂಧವನ್ನು ಮಂಡಿಸಿದರು. ಅಲ್ಲಿ ಭಾಗವಹಿಸಿದ ಇತರ ವಿಜ್ಞಾನಿಗಳು ಮತ್ತು ಸಂಶೋಧಕರಲ್ಲಿ ಸಾಕಷ್ಟು ಮೆಚ್ಚುಗೆ ಆಸಕ್ತಿಗಳನ್ನು ಗಳಿಸಿದ ಅದಾಗಿತ್ತಂತೆ. ತಿನಿಸಿನ ವಿಚಾರ, ಅದೂ ಪಾಪ್‌ಕಾರ್ನ್‌ನಂಥ ಟೈಂಪಾಸ್ ತಿನಿಸು ಅಂದಮೇಲೆ ಆಸಕ್ತಿ ಸಿಡಿಯದಿರುತ್ತದೆಯೇ? ರೋಬೊಟ್‌ನ ಚಲಿಸುವ ಅಂಗಗಳಲ್ಲಿ (ಕೈ, ಕಾಲು, ಕುತ್ತಿಗೆಯ ಭಾಗ. ರೋಬೊಟಿಕ್‌ಸ್ನಲ್ಲಿ ಇದಕ್ಕೆ ‘ಆಕ್ಚುವೇಟರ್’ ಎಂದು ಹೆಸರು) ಜೋಳದ ಬೀಜಗಳನ್ನು ತುಂಬಿಸಿಟ್ಟು, ವಿದ್ಯುಚ್ಛಕ್ತಿಯ ಮೂಲಕ ಹದವಾದ ಶಾಖ ನಿರ್ಮಾಣವಾಗುವಂತೆ ಮಾಡಿದಾಗ ಜೋಳದ ಬೀಜಗಳು ಅರಳುತ್ತವೆ. ಅರಳುವ ಪ್ರಕ್ರಿಯೆಯಿಂದ ಚಲನಶಕ್ತಿ ಉಂಟಾಗುತ್ತದೆ. ರೋಬೊಟ್‌ನ ಅಂಗಾಂಗಗಳು ಬೇಕಾದ ರೀತಿಯಲ್ಲಿ ಚಲಿಸುವಂತಾಗುತ್ತದೆ. ಇದು ಆ ಸಂಶೋಧನೆಯ ಸ್ಥೂಲ ವಿವರಣೆ. ಸಾಮಾನ್ಯವಾಗಿ ಗಾಳಿ, ಹೈಡ್ರಾಲಿಕ್ ಗಳು, ಮತ್ತು ವಿದ್ಯುಚ್ಛಕ್ತಿಯ ಮಿಳಿತದಿಂದ ಕಾರ್ಯವೆಸಗುವಂತೆ ವಿನ್ಯಾಸ ಮಾಡಲಾಗುತ್ತದೆ.

ಆದರೆ ಈ ರೀತಿ ಜೋಳದ ಕರ್ನೆಲ್ಗಳನ್ನು ಬಳಸುವುದು ರೋಬೊಟ್ ನಿರ್ಮಾಣದ ಖರ್ಚನ್ನು ಗಣನೀುವಾಗಿ ತಗ್ಗಿಸುತ್ತದಂತೆ. ನಿಜ, ಜೋಳದ ಕರ್ನೆಲ್ ಒಮ್ಮೆ ಸಿಡಿದು ಪಾಪ್‌ಕಾರ್ನ್ ಆದಮೇಲೆ ಆ ಆಕ್ಚುವೇಟರ್ ಉಪಯೋಗಕ್ಕಿಲ್ಲ. ಆದರೆ ಎಷ್ಟೋ ಸಂದರ್ಭಗಳಲ್ಲಿ ‘ಒಮ್ಮೆ ಮಾತ್ರ ಕೆಲಸ ಮಾಡಬೇಕಾದ’ ಅಗತ್ಯ ಇದ್ದಾಗ (ಉದಾಹರಣೆಗೆ ಬಾಹ್ಯಾಕಾಶ ಪ್ರಯೋಗಗಳಲ್ಲಿ) ಸಾಂಪ್ರದಾಯಿಕವಾದ ಗಾಳಿ-ಹೈಡ್ರಾಲಿಕ್‌ಸ್-ವಿದ್ಯುಚ್ಛಕ್ತಿಯ ಆಕ್ಚುವೇಟರ್‌ಗಳನ್ನು ನಿರ್ಮಿಸುವುದು ದುಬಾರಿ ಮತ್ತು ಅದಕ್ಕಿಂತ ‘ಯೂಸ್ ಏಂಡ್ ಥ್ರೋ’ ರೀತಿಯದಕ್ಕೆ ಅದೇ ಕೆಲಸವನ್ನು ಅಗ್ಗದಲ್ಲಿ ಮಾಡುವ ಸಾಮಗ್ರಿಗಳು ಸೂಕ್ತ. ಅದಕ್ಕೆ ಹೇಳಿಮಾಡಿಸಿದ್ದು ಪಾಪ್‌ಕಾರ್ನ್. ಅದರ ಇನ್ನೊಂದು ಪ್ರಮುಖ ಅನುಕೂಲವೆಂದರೆ

ಪರಿಸರಕಾಳಜಿಯನ್ನೂ ಪಾಲಿಸಿದಂತೆ ಆಗುತ್ತದೆ. ಜೋಳದ ಬೀಜ ಸಿಡಿಯಲಿ ಸಿಡಿಯದಿರಲಿ ಬಯೋಡಿಗ್ರೇಡೆಬಲ್ ತಾನೆ?
ಪ್ಲಾಸ್ಟಿಕ್ ಅಥವಾ ಲೋಹದ ಚೂರುಗಳನ್ನು ಭೂಮಿಗೆ ಎಸೆದು ಪಾಪಿಷ್ಠರಾಗುವುದಕ್ಕಿಂತ ರೋಬೊಟ್‌ಗೆ ಜೋಳದ ಪಿಷ್ಟ ಉಣಿಸುವುದು ಒಳಿತೆಂದು ವಿಜ್ಞಾನಿಗಳ ಅಂಬೋಣ. ಜೋಳದ ಬೀಜ ಅಥವಾ ಕರ್ನೆಲ್‌ಗಳನ್ನು ಶಾಖಕ್ಕೆ ಒಡ್ಡಿದಾಗ ಅವುಗಳೊಳಗಿನ ನೀರಿನ ಆವಿಯಾಗುತ್ತದೆ. ಅಲ್ಲಿ ಉಂಟಾಗುವ ಶಕ್ತಿಯು ಬೀಜದ ಸಿಪ್ಪೆಯನ್ನು ಭೇದಿಸಿ ಒಳಗಿನ ಗಂಜಿಯಂಥ ದ್ರವಾಂಶವು ಹಾರುವುದಕ್ಕೆ ಕಾರಣವಾಗುತ್ತದೆ. ವಾಯುಭಾರ ಒತ್ತಡ ಒಮ್ಮಿಂದೊಮ್ಮೆಲೇ ಕಡಿಮೆಯಾದಾಗ ಆ ದ್ರವವು ಹರಡಿಕೊಳ್ಳುತ್ತದೆ, ಅರ್ಥಾತ್ ಹೂವಿನಂತೆ ಅರಳುತ್ತದೆ.

ಹೊರಗಿನ ಉಷ್ಣತೆಯು ಗಣನೀಯವಾಗಿ ಕಡಿಮೆ ಇರುವುದರಿಂದ ಅರಳಿಕೊಂಡ ದ್ರವವು ತಣ್ಣಗಾಗಿ ಘನೀಕೃತವಾಗುತ್ತದೆ. ಕೆಲವೇ ಸೆಕೆಂಡುಗಳೊಳಗೆ ನಡೆದುಹೋಗುವ ಈ ಪ್ರಕ್ರಿಯೆ ಯಾವ ಡೈನಮೈಟ್‌ಗೂ ಕಮ್ಮಿಯದೇನಲ್ಲ. ಜೋಳದ ಬೀಜ ಅಥವಾ ಕರ್ನೆಲ್ ತನ್ನ ಮೂಲ ಗಾತ್ರಕ್ಕಿಂತ ಸುಮಾರು 16 ಪಟ್ಟು ಆ ಶಕ್ತಿಯು, ರೋಬೊಟ್‌ನ ಆಕ್ಚುವೇಟರ್ ಗಳನ್ನು ಅತ್ತಿಂದಿತ್ತ ತಿರುಗಿಸಲಿಕ್ಕೆ ಧಾರಾಳ ಸಾಕು. ಇದೇ

ಪರಿಣಾಮವನ್ನು ಗಾಳಿ-ಹೈಡ್ರಾಲಿಕ್‌ಸ್-ವಿದ್ಯುಚ್ಛಕ್ತಿ ಸರಬರಾಜಿನಿಂದಲೂ ಮಾಡಿಕೊಳ್ಳಬಹುದಾದರೂ, ಆಗಲೇ ಹೇಳಿದಂತೆ ಅದು ದುಬಾರಿ ವಿಧಾನ. ‘ಒಂದೇ ಸಲ ಬಳಕೆ ಸಂದರ್ಭಗಳಲ್ಲಿ ಸಂಪನ್ಮೂಲಗಳನ್ನು ಅನಾವಶ್ಯಕ ಪೋಲು ಮಾಡಿದಂತೆ ಆಗುತ್ತದೆ. ಅದಕ್ಕಿಂತ, ಪಾಪ್‌ಕಾರ್ನ್ ವಿಧಾನ ಅಗ್ಗ, ಪರಿಸರಕ್ಕೆ ಅನುಕೂಲಕರ. ಪಾಪ್‌ಕಾರ್ನ್‌ನದೇ ವಿಷಯವಾದ್ದರಿಂದ ಇನ್ನೊಂದಿಷ್ಟು ಸ್ವಾರಸ್ಯಕರ ಸಂಗತಿಗಳನ್ನು ನಿಮ್ಮ ಮೆಲ್ಲುವಿಕೆಗೆಂದೇ ಸಂಗ್ರಹಿಸಿ ಇಲ್ಲಿ ಕೊಡುತ್ತಿದ್ದೇನೆ. ಇವು ವಿಜ್ಞಾನದ ಕಬ್ಬಿಣದ ಕಡಲೆ ಅಲ್ಲ. ಮತ್ತು ಸಾಮಾನ್ಯ ಜ್ಞಾನಾಭಿವೃದ್ಧಿಯ ಚುರುಮುರಿ ಚೌಚೌ ಇದ್ದಂತೆ. ಬಾಯಾಡಿಸುತ್ತೇವೆಂದು ಊಹಿಸಿ ನೀರೂರಿಸಿಕೊಳ್ಳಬಹುದು. ಅಮೆರಿಕದಲ್ಲಿ ನೆಬ್ರಾಸ್ಕಾ ಸಂಸ್ಥಾನದಲ್ಲಿ ಅತಿ ಹೆಚ್ಚು (ವರ್ಷಕ್ಕೆ 250 ಮಿಲಿಯನ್ ಪೌಂಡ್‌ಗಳಷ್ಟು) ಪಾಪ್‌ಕಾರ್ನ್ ಉತ್ಪಾದನೆ. ಇಲಿನಾಯ್ ಸಂಸ್ಥಾನದಲ್ಲಿ ಪಾಪ್‌ಕಾರ್ನ್‌ಗೆ ‘ಅಫೀಶಿಯಲ್ ಸ್ನ್ಯಾಕ್ ಎಂಬ ಮನ್ನಣೆ. 1958ರಿಂದೀಚೆಗೆ ವರ್ಷಕ್ಕೊಮ್ಮೆ ಪಾಪ್‌ಕಾರ್ನ್ ದಿನಾಚರಣೆ. ತೂಕ ನಿಯಂತ್ರಕ ಆಹಾರ ಸೇವಿಸುವವರು ಬ್ರೆಡ್‌ನ ಬದಲಿಗೆ ಪಾಪ್‌ಕಾರ್ನ್ ತಿನ್ನುವುದೊಳ್ಳೆಯದು ಎಂದು ಅಮೆರಿಕನ್ ಡಯಟಿಕ್ ಎಸೋಸಿಯೇಷನ್ ಮತ್ತು ಅಮೆರಿಕನ್ ಡಯಾಬಿಟಿಕ್ ಎಸೋಸಿಯೇಷನ್ ವೈದ್ಯರ ಶಿಫಾರಸು.

ಸಂದರ್ಭದಲ್ಲಂತೂ ಎಲ್ಲದಕ್ಕೂ ರೇಷನ್ ಇರುತ್ತಿತ್ತಾದ್ದರಿಂದ ಮೂರುಹೊತ್ತೂ ಅನಿವಾರ್ಯವಾಗಿ ಪಾಪ್‌ಕಾರ್ನ್‌ಅನ್ನೇ ತಿನ್ನಬೇಕಾದ ಪರಿಸ್ಥಿತಿ ಅನೇಕ ದೇಶಗಳಲ್ಲಿತ್ತು. ಪಾಪ್‌ಕಾನ್ ನರ್ಲ್ಲಿ ಇತರೆಲ್ಲ ಧಾನ್ಯಗಳಿಗಿಂತ ಹೆಚ್ಚು ಪ್ರೊಟೀನ್ ಇದೆ. ಕೋಳಿಮೊಟ್ಟೆಯಲ್ಲಿರುವುದಕ್ಕಿಂತ ಹೆಚ್ಚು ಕಬ್ಬಿಣಾಂಶವಿದೆ. ಪ್ರೆಟ್ಜೆಲ್ ಮತ್ತು ಪೊಟ್ಯಾಟೊ ಚಿಪ್‌ಸ್ನಲ್ಲಿರುವುದಕ್ಕಿಂತ ಹೆಚ್ಚು ಫೈಬರ್ ಅಂಶವಿದೆ. ಪ್ರಪಂಚದ ಅತಿದೊಡ್ಡ ಪಾಪ್‌ಕಾರ್ನ್ ಉಂಡೆ ಮಾಡಿದ್ದು 12 ಅಡಿ ವ್ಯಾಸ ಮತ್ತು 5000 ಪೌಂಡ್ ಗಳಷ್ಟು ತೂಕವಿತ್ತಂತೆ. ಕರ್ನೆಲ್‌ಗಳನ್ನು ಶಾಖಕ್ಕೊಡ್ಡಿದಾಗ ಉಂಟಾಗುವ ಪಾಪ್‌ಕಾರ್ನ್ ಒಂದೋ ಹಿಮಕಣದ ಆಕಾರವುಳ್ಳದ್ದು ಇಲ್ಲವೇ ಆಕಾರವುಳ್ಳದ್ದಿರುತ್ತದೆ. ಹಿಮಕಣದ ಆಕಾರವುಳ್ಳ ಪಾಪ್‌ಕಾರ್ನ್‌ಗೆ ಹೆಚ್ಚು ಬೇಡಿಕೆ. ಪರಗ್ವೇ ದೇಶದಲ್ಲಿ ಬುಡಕಟ್ಟು ಜನಾಂಗದ ಹೆಂಗಸರು ರಾತ್ರಿಹೊತ್ತು ಪಾಪ್‌ಕಾರ್ನ್‌ಅನ್ನು ತಲೆಯಲ್ಲಿ ಹೂವಿನಂತೆ ಮುಡಿದುಕೊಳ್ಳುತ್ತಾರಂತೆ. ಪೆರು ದೇಶದಲ್ಲಿ ಸುಮಾರು ಕ್ರಿಸ್ತಪೂರ್ವ 4700ರಷ್ಟು ಹಿಂದೆಯೇ ಪಾಪ್‌ಕಾರ್ನ್ ಬಳಕೆ ಇತ್ತೆಂದು ಇತಿಹಾಸಜ್ಞರ ಇಂಗಿತ. ಅಜ್‌ಟೆಕ್ ಜನಾಂಗದವರು ಪಾಪ್‌ಕಾರ್ನ್‌ಅನ್ನು ಕೊರಳಲ್ಲಿ ಮಾಲೆಯ ಆಭರಣದಂತೆ ಬಳಸುತ್ತಿದ್ದರು.

ಧಾರ್ಮಿಕ ಸಮಾರಂಭಗಳಲ್ಲಿ ಅವರ ದೇವರುಗಳಿಗೂ ಪಾಪ್‌ಕಾರ್ನ್ ಅಲಂಕಾರ ಇರುತ್ತಿತ್ತಂತೆ. ಅಮೆರಿಕನ್ ಮೂಲನಿವಾಸಿ ರೆಡ್ ಇಂಡಿಯನ್‌ಸ್ ಜೋಳದ ಕರ್ನೆಲ್‌ಗಳೊಳಗೆ ದೆವ್ವ ಪಿಶಾಚಿಗಳಿರುತ್ತವೆ, ಸಿಡಿದು ರೋಷ ತೋರಿಸುತ್ತವೆ ಎಂದು ನಂಬಿದ್ದರಂತೆ. ಸುಮಾರು ಕ್ರಿಸ್ತಶಕ 300ರ ಕಾಲದ ಪಾಪ್‌ಕಾರ್ನ್ ಕಡಾಯಿಗಳು ಉತ್ಖನನಕಾರರಿಗೆ ಸಿಕ್ಕಿವೆ. ಆಧುನಿಕ ಪಾಪ್‌ಕಾರ್ನ್ ಯಂತ್ರದ ಆವಿಷ್ಕಾರವಾದದ್ದು 1893ರಲ್ಲಿ ಶಿಕಾಗೊದಲ್ಲಿ ನಡೆದ ಅಂತಾರಾಷ್ಟ್ರೀಯ ಮೇಳದಲ್ಲಿ. ಮೈಕ್ರೋವೇವ್ ಅವನ್‌ನಲ್ಲಿ ಪಾಪ್‌ಕಾರ್ನ್ ತಯಾರಿಸಬಹುದೆಂದು 1945ರಲ್ಲಿ ಸಂಶೋಧನೆ ಮಾಡಿದವನು ಪೆರ್ರಿ ಸ್ಪೆನ್ಸರ್ ಎಂಬಾತ. ಇಷ್ಟೆಲ್ಲ ಚರಿತ್ರೆ ಇದೆಯೆಂದ ಮೇಲೆ ಅವಲಕ್ಕಿಗಿಂತ ಅರಳು ಲಕ್ಕಿ ಎನ್ನಲಿಕ್ಕೆ ಏನೂ ತೊಂದರೆಯಿಲ್ಲ!