ವಿಶ್ವವಾಣಿ

ರಾಜಕೀಯ ಹಳವಂಡಕ್ಕೆ ಜನಾಂದೋಲನವೇ ತಪರಾಕಿ!

ಳೆದ  ವಾರದಿಂದ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಕೂಗು, ಪ್ರತಿಭಟನೆ, ವಿರೋಧ ಕೇಳಿಬರುತ್ತಿದೆ. ನಿನ್ನೆ ಕೆಲವು ಕಿಡಿಗೇಡಿ ಸಂಘಟನೆಗಳು ಬಂದ್‌ಗೂ ಕರೆ ನೀಡಿದ್ದವು. ಈ ಅಪಾಪೋಲಿಗಳ ಮಾತಿಗೆ ಉತ್ತರ ಕರ್ನಾಟಕದ ಬುದ್ಧಿವಂತ, ಜವಾಬ್ದಾರಿಯುತ ನಾಗರಿಕರು ಕ್ಯಾರೇ ಅನ್ನಲಿಲ್ಲ. ಬಂದ್‌ಗೇ ‘ಬಂದ್’ ಮಾಡಿದ ಜನರು ಬಂದ್‌ನ ಬಲೂನು ಠುಸ್ ಆಗುವಂತೆಯೂ ಮಾಡಿದರು. ರಾ.ಹ. ದೇಶಪಾಂಡೆ, ರಾಮಚಂದ್ರ ಹಣಮಂತರಾವ್ ದೇಶಪಾಂಡೆಯವರಂಥ ಧೀಮಂತ ಕನ್ನಡ ಪ್ರೇಮಿ, ಮುತ್ಸದ್ದಿ ಸ್ವಾತಂತ್ರ್ಯ ಪೂರ್ವ 50 ವರ್ಷಗಳ  ಅಖಂಡ ಕರ್ನಾಟಕದ ಕನಸು ಕಂಡವರು. ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತಿನಂಥ ಚಾರಿತ್ರಿಕ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದವರು. 19ನೇ ಶತಮಾನದ ಉತ್ತರಾರ್ಧದಲ್ಲಿ ಕನ್ನಡದ ಅಳಿವು-ಉಳಿವಿನ ನಿರ್ಣಾಯಕ ಸಂದರ್ಭದ ಚಾರಿತ್ರಿಕ ದನಿ ರಾ.ಹ. ದೇಶಪಾಂಡೆ. ಇವರು ಹೊತ್ತಿಸಿದ ಕನ್ನಡ, ಕನ್ನಡ ನಾಡಿನ ಏಕೀಕರಣದ ಕಿಡಿ ಸ್ವತಂತ್ರ ಭಾರತದಲ್ಲಿ ನಂದಾದೀಪವಾಗಿ, ಹರಿದು ಹಂಚಿ ಹೋಗಿದ್ದ ಕನ್ನಡ ಭುವನೇಶ್ವರಿಯ ಸಮಗ್ರ ರೂಪ-ಸ್ವರೂಪ ನಿಚ್ಚಳವಾಗಿ ನೆಲೆಗೊಂಡಿದ್ದು ಉತ್ತರ ಕರ್ನಾಟಕದಿಂದ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ,  ಗಂಡುಮೆಟ್ಟಿನ ನೆಲ ಉತ್ತರ ಕರ್ನಾಟಕ. ಕರ್ನಾಟಕದ ರಾಜಕೀಯದ ಸೂತ್ರದಾರಿಕೆ ಹಿಡಿದದ್ದೂ ಇದೇ ಉತ್ತರ ಕರ್ನಾಟಕ. ಕರ್ನಾಟಕ ವಿಧಾನಸಭೆಯ 222 ಸದಸ್ಯರಲ್ಲಿ 120 ಕ್ಷೇತ್ರಗಳು, ಶಾಸಕರು ಉತ್ತರ ಕರ್ನಾಟಕದಿಂದಲೇ ಬರುವಂತದ್ದು. ಶೇ. 50ಕ್ಕೂ ಹೆಚ್ಚಿನ ಶಾಸನಸಭಾ ಸದಸ್ಯತ್ವ, ಶಕ್ತಿ ಆ ಭಾಗದ್ದು. ಅಲ್ಲಿನ ಯಾವುದೇ ಬೆಳವಣಿಗೆ ಕರ್ನಾಟಕದ ಒಟ್ಟೂ ರಾಜಕೀಯ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುವಂಥದ್ದು ಇತಿಹಾಸ. ಕಳೆದ ಸಿದ್ದರಾಮಯ್ಯ ಸರಕಾರ ಮತ ರಾಜಕಾರಣಕ್ಕೆ, ಚುನಾವಣೆಗೆ ಐದು ತಿಂಳಿರುವಾಗ  ವೀರಶೈವ ಧರ್ಮ ಪ್ರತ್ಯೇಕತೆಯ ರಾಜಕಾರಣ ಮಾಡಿ ಮೂತಿಗೆ ಇಕ್ಕಿಸಿಕೊಂಡದ್ದನ್ನು ಕರ್ನಾಟಕ ರಾಜಕಾರಣ ಮರೆಯುವುದಾದರೂ ಹೇಗೆ? ಇಂಥ ನಿರ್ಣಾಯಕ ಪ್ರದೇಶವನ್ನು ಕುಮಾರಸ್ವಾಮಿ ಅವರು ತನ್ನ ಪಕ್ಷ ರಾಜಕಾರಣಕ್ಕೆ, ಪರ್ಯಾಯವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ನಿರ್ವೀರ್ಯಗೊಳಿಸಲು ‘ಪ್ರತ್ಯೇಕ ಬಜೆಟ್’ ಸಂದರ್ಭವನ್ನು ಬಳಸಿಕೊಂಡದ್ದು ಮಾತ್ರ ದುರಂತ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ರಾಜಕಾರಣ ಮಾಜಿ ಪ್ರಧಾನಿ, ಚಾಣಾಕ್ಯ ರಾಜಕಾರಣಿ ದೇವೇಗೌಡರ ಸ್ವಪಕ್ಷ ಮತ್ತು ಕುಟುಂಬ ರಾಜಕಾರಣದ ಅಂತಿಮ ಅಸ್ತ್ರವಾಗಿ ಬಳಸಲ್ಪಡುತ್ತಿದೆಯೇ ಹೊರತು, ಅದೊಂದು ರಾಜ್ಯದ  ಕೂಡು ರಾಜಕಾರಣದ ಒಂದು ಸಮನ್ವಯದ ಪ್ರಯೋಗವೋ ಆಗಿ ಉಳಿದಿಲ್ಲ. ಕಾರಣ ಅದರ ಮೂಲ ಉದ್ದೇಶವೇ ಸ್ವಾರ್ಥ. ಅಧಿಕಾರ ದಾಹ ಮತ್ತು ಏನಕೇನ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲೇಬೇಕೆಂದು ಟೊಂಕಕಟ್ಟಿದ ಕಾಂಗ್ರೆಸ್ಸಿನ ಮಸಲತ್ತಿನ ದುರುಪಯೋಗ. ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಕಥೆ.

ಅರಾಜಕ ಕಾಂಗ್ರೆಸ್ಸಿನ ರಾಜ್ಯರಾಜಕಾರಣವನ್ನು ಅಪ್ಪ ಮತ್ತು ಮಕ್ಕಳು ಕೂಡಿ ತಮ್ಮ ಪಕ್ಷ ರಾಜಕಾರಣದ ಬಲವರ್ಧನೆ ಹಾಗೂ ಭವಿಷ್ಯದ ಮಹಾಚುನಾವಣೆಗೆ ಬಳಸಿಕೊಂಡ ಮಹಾಚತುರತೆಯ ಫಲವದು. ರಾಜ್ಯ ಕಾಂಗ್ರೆಸ್ಸಿನ ಧುರೀಣರಿಂದ  ಈ ಗುಟ್ಟು, ಫಟಿಂಗತನದ ಅರಿವಿಲ್ಲದೇನೂ ಇಲ್ಲ. ಆದರೆ ಹೆಡ್ಡಾಫೀಸಿನ ಹುಕೂಂ, ಕರ್ನಾಟಕ ಕಾಂಗ್ರೆಸ್ಸಿನ ವ್ಯಕ್ತಿ, ವ್ಯಕ್ತಿಗಳ ಮಧ್ಯೆಯ ವೈಷಮ್ಯ, ಶೀಥಲ ಒಳಯುದ್ಧ, ಮುಗಿಸುವ ಆಟದ ಪರಿಣಾಮ ಜೆಡಿಎಸ್‌ಗೆ ಕೊರಳು ಕೊಟ್ಟು ಹೊಡೆಸಿಕೊಳ್ಳುವ ಪ್ರಾರಬ್ಧ. ಬಿಸಿ ತುಪ್ಪ. ಉಗಿದರೂ, ನುಂಗಿದರೂ ಕಷ್ಟ.. ಕಷ್ಟ. ಕಾಂಗ್ರೆಸ್ಸಿನ ಪರಿಸ್ಥಿತಿ ಯಾವ ರಾಜಕಾರಣಿಗೂ, ಪಕ್ಷಕ್ಕೂ ಬರಬಾರದೆನ್ನುವುದು ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿಗಳದ್ದೇ ಅಭಿಪ್ರಾಯ. ರಾಜ್ಯ ಕಾಂಗ್ರೆಸ್ಸಿನ ಆಂತರಿಕ ದೌರ್ಬಲ್ಯಗಳನ್ನು ಅತ್ಯಂತ ಸಮರ್ಥವಾಗಿ ಅರಿತಿರುವ, ಅಧ್ಯಯನ ಮಾಡಿರುವ  ಕುಮಾರಸ್ವಾಮಿ ಮತ್ತು ತಂಡ ಅದರ ಪ್ರತಿಫಲವನ್ನು, ಒಳಹೊಕ್ಕು ಹೊಡೆಯುವ ಸಮಯಸಾಧಕತನದ ಕುಕೃತ್ಯವನ್ನು ಅನಾಯಾಸವಾಗಿ ಮಾಡುತ್ತಿದೆ. ಕಾಂಗ್ರೆಸ್ ಕರ್ನಾಟಕದ ಮತ ಬಾಂಧವರ ಎದುರು ನಾಮರ್ಧತೆಯಿಂದ, ನಗೆಪಾಟಲಾಗಿ ಬೋರಲು ಬೀಳುತ್ತಿರುವುದು ಕ್ಷಣ ಕ್ಷಣದ ಕತೆ ಮತ್ತು ಸ್ಕ್ರೀನ್ ಪ್ಲೇ. ಇದು ಸದ್ಯದ ಕೊಳಕು ರಾಜಕಾರಣ, ಆಡಳಿತ ಮತ್ತು ತಂತ್ರಗಾರಿಕೆಯ ಸ್ಥೂಲನೋಟವಾದರೆ, ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯ ಇತ್ಯಾದಿಗಳ ಪ್ರಶ್ನೆ ಮತ್ತದರ ಒಳಸತ್ಯ ಬೇರೆಯೇ ಇದೆ. ಹಾಗೇ ಈ ಪ್ರಶ್ನೆ, ಪ್ರತ್ಯೇಕ ರಾಜ್ಯದ  ಹೊಸತೇನು ಅಲ್ಲ. ಸ್ವತಂತ್ರ ಭಾರತದ ಪೂರ್ವಕ್ಕೂ ನಂತರಕ್ಕೂ ಅಂಟಿಕೊಂಡೇ ಬಂದ ಆಪಾದನೆ, ಆಕ್ಷೇಪ, ಕೋರಿಕೆ, ಹೋರಾಟ, ಪ್ರತಿಭಟನೆ. ಆದರೆ ಉತ್ತರ ಕರ್ನಾಟಕದ ಜನತೆ ಎಂದೂ ತಮ್ಮ ಸ್ವಹಿತಾಸಕ್ತಿ ಅಥವಾ ಸ್ವಾರ್ಥಕ್ಕಾಗಿ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಇಟ್ಟವರಲ್ಲ. ಒಂದಾಗಿ ಬಾಳುವ ದಿಕ್ಕಿನತ್ತ, ರಾಜಧಾನಿ, ವ್ಯಾವಹಾರಿಕ ಪರಿಭಾಷೆಗೆ ಸಾವಿರಾರು ಮೈಲಿ ದೂರವಾದರೂ ಹೊಂದಿಕೊಂಡವರು. ಸಹಿಸಿದವರು. ಒಂದು ಸುವರ್ಣ ವಿಧಾನ ಸೌಧ, ಹೈಕೋರ್ಟ್ ವಿಭಾಗೀಯ ಪೀಠ ಕೊಟ್ಟಾಗ, ಇದು ಉತ್ತರ ಕರ್ನಾಟಕದ ಅಭಿವೃದ್ಧಿಯ  ಮೊದಲ ಹೆಜ್ಜೆ, ಮುಂದೆ ನಮ್ಮ ಸಮಗ್ರ ಅಭಿವೃದ್ಧಿಯ ಕನಸು ನನಸಾದೀತು ಎಂದು ಕಾದವರು. ಹಂಬಲಿಸಿದವರು. ಸಾತ್ವಿಕತೆಯಿಂದ ಸ್ಪಂದಿಸಿದವರು. ಯಾವಾಗ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹಾಸನಕ್ಕೆ 370 ಕೋಟಿ, ರಾಮನಗರ ಮತ್ತು ಚೆನ್ನಪಟ್ಟಣಕ್ಕೆ ಕೊಡುಗೆ, ಅನುದಾನ, ಯೋಜನೆಗಳ ಕಡತಗಳನ್ನೇ ಮೀಸಲಿಟ್ಟರೋ ಆಗ ಉತ್ತರ ಕರ್ನಾಟಕದ ಜನರ ತಾಳ್ಮೆ, ನಿರೀಕ್ಷೆಯ ಕಟ್ಟೆ ಒಡೆಯಿತು. ಅಭಿವೃದ್ಧಿಗೆ ಮುಂದಾಗದ ನಿಮ್ಮ ಸರಕಾರವೂ, ರಾಜ್ಯವೂ, ಅಖಂಡತೆಯೂ ನಮಗೆ ಬೇಡ ಎಂಬ ಪ್ರತಿರೋಧ, ಹೋರಾಟ, ಬೇಡಿಕೆ ಪ್ರತಿಧ್ವನಿಸಿತು.  ಕೊಟ್ಟು ಪೆಟ್ಟು ತಿಂದ ಕಥೆ ಕುಮಾರಸ್ವಾಮಿ ಅವರದ್ದು.

‘ಕೋಲು ಕೊಟ್ಟ ಕುಮಾರಣ್ಣನೇ ಪೆಟ್ಟು ತಿನ್ನಲಿ’ ಎಂದು ಕಾಂಗ್ರೆಸ್ಸಿಗರೂ ಮಹಾಮೌನ ತಾಳಿದರು. ಈ ಪ್ರಹಸನ ಮತ್ತು ಪ್ರಸಂಗದಲ್ಲಿ ನನಗೆ ಅನ್ನಿಸಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿ ಎಂಬ ಈ ಪ್ರಶ್ನೆ ಕೇವಲ ಆ ಭಾಗಕ್ಕೆ ಮಾತ್ರ ಸೀಮಿತವಾಗಿದೆಯೇ? ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಅನ್ನುವುದು ಸತ್ಯ. ಆದರೆ ಈ ನಿರ್ಲಕ್ಷ್ಯ ಕೇವಲ ಆ ಭಾಗಕ್ಕೆ ಮಾತ್ರ ಸೀವಿುತವಾಗಿದೆಯೇ? ಸಮಗ್ರ ಕರ್ನಾಟಕ ಈ  ಭಾರತದ ಏಳೂವರೆ ದಶಕಗಳಲ್ಲಿ ಎಷ್ಟು ಅಭಿವೃದ್ಧಿ ಕಂಡಿದೆ? ರಾಜಕಾರಣಿಗಳು ಅಭಿವೃದ್ಧಿ, ಸಮೃದ್ಧಿ ಹೊಂದಿರುವುದನ್ನು ಬಿಟ್ಟರೆ ರಾಜ್ಯದ ಅಭಿವೃದ್ಧಿಯ ಒಟ್ಟು ಪರಿಸ್ಥಿತಿ, ಫಲಿತಾಂಶ ಹೇಗಿದೆ? ಈವರೆಗಿನ ಯಾವುದೇ ಪಕ್ಷ ರಾಜಕಾರಣ ಯಾ ರಾಜಕೀಯ ನಾಯಕರಿಗೆ ಸಮಗ್ರ ಕರ್ನಾಟಕ ಮತ್ತು ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ಎಂದಾದರೂ ಇತ್ತೇ? ಬೇಡ, ಈ ಎಪ್ಪತ್ತಾರು ವರ್ಷಗಳಲ್ಲಿ ಸಮಗ್ರವಾಗಿ ಬೆಂಗಳೂರನ್ನು ಅಭಿವೃದ್ಧಿ ಮಾಡಲಾಯಿತೇ ಇವರಿಗೆ? ಒಂದು ಉತ್ತಮ ಸಾರಿಗೆ, ಸಂಪರ್ಕ, ಫುಟ್‌ಪಾತ್, ಬೆಳಕಿನ ವ್ಯವಸ್ಥೆ, ಒಳಚರಂಡಿ,  ನೀರಿನ ವ್ಯವಸ್ಥೆ, ಕಸ ವಿಲೇವಾರಿ, ಕಳ್ಳಕಾಕರ ರಾಜಾಲೂಟಿ, ಡ್ರಗ್‌ಸ್, ರೌಡಿಸಂ, ಮಳೆಗಾಲದಲ್ಲಿ ಮುಳುಗುವ ಬೆಂಗಳೂರು, ರಾಜಕಾಲುವೆಯ ದುರವಸ್ಥೆ, ಆ ರಾಜಕಾಲುವೆಯಲ್ಲಿ ಹರಿವ ನೀರಿನ ಶುದ್ಧೀಕರಣ, ಮರುಬಳಕೆ, ಕೆರೆಗಳ ಹವಿರ್ಭಾಗವೇ ಆಗಿದ್ದ ಬೆಂಗಳೂರು ಇಂದು ಉಳಿದ ಕೆರೆಗಳನ್ನಾದರೂ ಉಳಿಸಿಕೊಳ್ಳುವ ಹೋರಾಟ, ಇದ್ದ ಬದ್ದ ಜೀವನಾಡಿ ಕೆರೆ, ನದಿಗಳೆಲ್ಲ ವಿಶಕಾರಕವಾಗಿದೆ. ಅದನ್ನು ಪುನರ್‌ನಿರ್ಮಿಸುವ ಕಾರ್ಯ ಮಾಡಿದ್ದೀರಾ? ಶುದ್ಧ ಬೆಂಗಳೂರು ಆಗಿದೆಯಾ? ಜನನಿಬಿಡ, ವಾಹನ ನಿಬಿಡ ಅಶುದ್ಧ ಗಾಳಿ, ಶಬ್ಧ ಮಾಲಿನ್ಯ, ಯಾವುದನ್ನು  ಮಾಡಿದ್ದೀರಿ?

ಅಧಿಕಾರಕ್ಕೆ ಬಂದವರೆಲ್ಲ ಬೊಗಳೆ ಹೊಡೆದೇ ತಂತಮ್ಮ ಉದ್ಧಾರ, ಅಭಿವೃದ್ಧಿ ಮಾಡಿಕೊಂಡದ್ದನ್ನ ಬಿಟ್ಟರೆ ಬೆಂಗಳೂರು ಒಂದು ಮಾದರಿ ಸಿಟಿ ಆಗಿದೆಯೇನು? ಇದ್ದ ಬದ್ದ ಹಸಿರನ್ನು ಭೂಮಾಫಿಯಾ ಕಬಳಿಸುತ್ತಿದೆ. ಅದಕ್ಕೆ ರಾಜಕಾರಣಿಗಳ ಆಡಳಿತದ ಕುಮ್ಮಕ್ಕು ಬಿಟ್ಟರೆ, ಇನ್ನೇನು ಕಡಿದು ಹಾಕಿದ್ದೀರಿ?

ಆಯುಷ್ಯಪೂರ್ತಿ ರಾಜಕಾರಣದಲ್ಲೇ ಕಳೆದ ಶ್ರೀಮಾನ್ ದೇವೇಗೌಡರೂ ಇದಕ್ಕೆ ಉತ್ತರಿಸಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿ ಮಗ ಕುಮಾರಸ್ವಾಮಿಗೆ ಶ್ವೇತಪತ್ರ ಹೊರಡಿಸಲು ಹೇಳಿದ ದೇವೇಗೌಡರು, ತಾವು ಮುಖ್ಯಮಂತ್ರಿ ಮತ್ತು ಪ್ರಧಾನಿ  ಉತ್ತರ ಕರ್ನಾಟಕಕ್ಕೆ ಏನು ಕೊಟ್ಟಿದ್ದೀರಿ ಅನ್ನುವುದನ್ನ ಮೊದಲು ಶ್ರುತಪಡಿಸಲಿ. ಉತ್ತರ ಕರ್ನಾಟಕದ ಮುಖ್ಯಮಂತ್ರಿಗಳನ್ನ (ಎಸ್.ಆರ್. ಬೊಮ್ಮಾಯಿ, ಜೆ.ಎಚ್.ಪಟೇಲ್, ಧರ್ಮಸಿಂಗ್) ಮುಖ್ಯಮಂತ್ರಿ ಪದದಿಂದ ಇಳಿಸಿದ್ದನ್ನ ಬಿಟ್ಟರೆ ದೊಡ್ಡಗೌಡರ ಸಾಧನೆ ಏನು? ಮಣ್ಣಿನ ಮಗ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಎಲ್ಲರೂ ರಾಜಕಾರಣದಲ್ಲಿದ್ದಾರೆ. ದೇವೇಗೌಡರು ಈ ನಾಡಿನ ಪ್ರಶ್ನಾತೀತ ರೈತರು. ರೈತಾಪಿ. ಮಣ್ಣಿನ ಮಗ. ಆಯ್ತು, ತನ್ನ ಸುಧೀರ್ಘ ರಾಜಕೀಯ, ರಾಜಕಾರಣ, ಆಡಳಿತದಲ್ಲಿ ಒಂದೇ ಒಂದು ರೈತಹಿತ ಸಾರ್ವಕಾಲಿಕ ಯೋಜನೆಯನ್ನ ಅನುಷ್ಠಾನಕ್ಕೆ ತಂದ  ಇದ್ದರೆ ಹೇಳಲಿ. ಇಂದಿಗೂ ಕರ್ನಾಟಕ, ಕರ್ನಾಟಕದ ಜನಹಿತ ಕಾರ್ಯ ಅಂದರೆ ‘ಉಳುವವನೇ ಹೊಲದೊಡೆಯ’ ಅಂದ ದೇವರಾಜ ಅರಸ್, ರಾಜ್ಯದ ಮನೆಮನೆಗೆ ನೀರುಣಿಸಿದ ಸಜ್ಜನ ರಾಜಕಾರಣಿ ನಜೀರ್ ಸಾಬ್ ತಾನೆ ನೆನಪಿನಂಗಳದ ನಿತ್ಯ ತಾರೆಯರು. ಏನು ಮಾಡಿದ್ದಾರೆ ಉಳಿದವರು?

ಉತ್ತರ ಕರ್ನಾಟಕದ ಅಭಿವೃದ್ಧಿ ಅಂತೇವಲ್ಲ, ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲರು, ಎಸ್.ಆರ್.ಬೊಮ್ಮಾಯಿ, ಧರ್ಮಸಿಂಗ್, ಜಗದೀಶ ಶೆಟ್ಟರು ಐದು ಜನ ಮುಖ್ಯಮಂತ್ರಿಗಳಾಗಿದ್ದಾರೆ ಆ ಭಾಗದಿಂದ. ಇವರೆಲ್ಲ ಏನು ಮಾಡಿದ್ದಾರೆ? ವಿಧಾನಸಭೆಯ ಅರ್ಧದಷ್ಟು ಸದಸ್ಯರು  ಭಾಗದಿಂದ ಆರಿಸಿಬರುತ್ತಾರಲ್ಲಾ, ಇವರೆಲ್ಲ ತಾವು ಪ್ರತಿನಿಧಿಸುವ ಭಾಗಕ್ಕೆ ಏನು ಮಾಡಿದ್ದಾರೆ? ರಾಜಕೀಯಕ್ಕಾಗಿ ಜನರ ಭಾವನೆಯನ್ನ, ಪ್ರಾದೇಶಿಕತೆಯನ್ನ ಕೆದಕಿ ಬೆದಕಿ ಬೆಂಕಿ ಹಚ್ಚಲು ಸುಲಭ. ಆದರೆ ಆ ಭಾವನೆಯೊಂದಿಗೆ ತಾನೂ ರಾಜಕೀಯ ಆಟ-ಆವುಟಗಳನ್ನ ಆಡಿೊಂಡೇ ಬೆಳೆದಿದ್ದೇನೆ ಅನ್ನುವ ಪ್ರಜ್ಞೆ ಪಕ್ಷಾತೀತವಾಗಿ ಆ ಭಾಗದ ರಾಜಕಾರಣಿಗಳಿಗೆ ಇರಬೇಕು. ಜನರು ಕೂಡ ಈ ರಾಜಕಾರಣಿಗಳ ಕೊರಳುಪಟ್ಟಿ ಹಿಡಿದು ಯಾಕೆ ಕೇಳುತ್ತಿಲ್ಲ? ಅಭಿವೃದ್ಧಿ ಅಂದಾಗ ಅದು ಪಕ್ಷಾತೀತವಾಗಿ ನಡೆಯಬೇಕು ತಾನೆ.

350 ಕಿ.ಮೀ. ಉದ್ದದ  ತಟ ಕರ್ನಾಟಕದಲ್ಲಿದೆ. ಇಲ್ಲಿ ಸಾವಿರಾರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗಳಿಸಬಹುದಾದ ಅತ್ಯಂತ ಸಮೃದ್ಧ ಪ್ರವಾಸೀ ತಾಣಗಳಿವೆ. ಬಹುಷಃ ಈ ಒಂದು ಕರಾವಳಿ ಕರೆಯನ್ನ, ಅದರ ಪಕ್ಕದ ನದಿ ಕಿನಾರೆ, ಹಾಗೇ ಸಮುದ್ರ, ನದಿಯನ್ನ ಹರಿಯಲು, ಉಕ್ಕಲು ಬಿಟ್ಟು ತನ್ನ ಪಾಡಿಗೆ ತಾನು ಹೊದ್ದು ಮಲಗಿದ ಪಶ್ಚಿಮಘಟ್ಟ ಸಾಲುಳನ್ನ ಬಳಸಿಕೊಂಡು ಒಂದು ಸಮಗ್ರ ಪ್ರವಾಸೀ ನೀಲನಕ್ಷೆ ರೂಪಿಸಿ ‘ಕಲ್ಚರಲ್ ಟೂರಿಸಂ’ನ್ನು ಕಾರ್ಯರೂಪಕ್ಕೆ ತರುತ್ತಿದ್ದರೆ ಈ ಏಳೂವರೆ ದಶಕಗಳಲ್ಲಿ ಕರ್ನಾಟಕದ ಬೊಕ್ಕಸಕ್ಕೆ  ಆದಾಯ ಮಾತ್ರವೇ ಸಾಕಾಗುತ್ತಿತ್ತು, ಮಾಡಿದ್ದೀರಾ? ಮಡಿಕೇರಿ, ಅಲ್ಲಿನವರೂ ಪ್ರತ್ಯೇಕತೆಯ ಕೂಗು ಹಾಕುತ್ತಿದ್ದಾರೆ. ಅಲ್ಲೇನು ಮಾಡಿದ್ದೀರಿ? ಚಿಕ್ಕಮಗಳೂರು, ಶೃಂಗೇರಿ, ಆಗುಂಬೆ, ತೀರ್ಥಹಳ್ಳಿ ಹೀಗೆ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಾಭಿವೃದ್ಧಿಗೆ ಏನು ಮಾಡಿದ್ದೀರಿ? ಉಳಿದ ಅಭಿವೃದ್ಧಿ ಬಿಡಿ, ಸಮೃದ್ಧ ಕಾಡು ನಾಶ ಮಾಡಲಾಗಿದೆ. ಪರಿಸರ ವಿನಾಶಗೊಂಡಿದೆ. ಘಟ್ಟ ಪ್ರದೇಶದ ನಾಲ್ಕಾರು ಘಟ್ಟದ ದಾರಿಗಳನ್ನೇ ಪ್ರತೀವರ್ಷ ರಿಪೇರಿ.. ರಿಪೇರಿ ಎಂದು ಜನಸಂಚಾರಕ್ಕೆ ಹೈರಾಣಾಗಿಸುವುದು, ರಸ್ತೆ ಕುಸಿತ ನಿರಂತರ. ಪ್ರತೀವರ್ಷ ಕಾಂಕ್ರೀಟ್ ರೋಡಿನ ಹೆಸರಿನಲ್ಲಿ  ಕೋಟಿ ಗುಳುಂ. ಶಾಶ್ವತ ಪರಿಹಾರ, ಮಾರ್ಗ ಇಂದಿಗೂ ಆಗಿಲ್ಲ. ಅದು ಆಗಲೂ ತಮ್ಮ ರಾಜಕಾರಣ ಬಿಡುವುದಿಲ್ಲ. ಇಂದಿಗೂ ಬೆಂಗಳೂರು – ತಾಳಗುಪ್ಪ ರೈಲು ಅಲ್ಲಿಯೇ ನಿಂತಿದೆ. ಸಿರ್ಸಿ, ಸಿದ್ಧಾಪುರ, ಬನವಾಸಿ ಬಳಸಿ ಹುಬ್ಬಳ್ಳಿಯನ್ನೋ, ಗೇರುಸೊಪ್ಪೆ ಘಟ್ಟ ಇಳಿದು ಹೊನ್ನಾವರದ ಕೊಂಕಣ ರೈಲನ್ನೋ ತಲುಪಿಲ್ಲ. ಆಗುಂಬೆ ಘಟ್ಟವನ್ನ ಟನಲ್ ಮೂಲಕ ಕೊರೆದು ರೈಲೋ, ಸಮೃದ್ಧ ರಸ್ತೆಯನ್ನೋ ಮಾಡಲಾಗುವುದಿಲ್ಲ. ಈಕಡೆ ಸಾಂಸ್ಕೃತಿಕ ರಾಜಧಾನಿ ಮೈಸೂರು. ಮಹಾರಾಜರ ಕಾಲದಲ್ಲಿ ಅವರು ಹಾಕಿದ ಅಸ್ತಿವಾರ,  ಅಭಿವೃದ್ಧಿ, ನಿರ್ಮಿಸಿದ ಮೂಲಭೂತ ಸೌಕರ್ಯಗಳನ್ನ ಬಳಸಿಕೊಂಡು, ಅದರ ಅಂದ, ಆಕೃತಿಯನ್ನ ಇನ್ನಷ್ಟು ಹಾಳುಗೆಡಹಿದ್ದನ್ನ ಬಿಟ್ಟರೆ ಇನ್ನೇನು ಮಾಡಿದ್ದೀರಿ? ಮಾಡಲಾಗಿದೆ?

ಕೃಷ್ಣಾ ನದಿಗೆ ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರ ಹೆಸರಿನಲ್ಲಿ ಒಂದು ಬೃಹತ್ ಡ್ಯಾಂನ್ನು ಸ್ವತಂತ್ರ ಭಾರತದಲ್ಲಿ ಕರ್ನಾಟಕ ಕಟ್ಟಿದ್ದನ್ನು ಬಿಟ್ಟರೆ ಉಳಿದೆಲ್ಲವೂ ಸ್ವಾತಂತ್ರ್ಯಪೂರ್ವದ್ದು. ಕಟ್ಟಿದ್ದಿದ್ದರೆ ಸಣ್ಣ ಪುಟ್ಟ ಡ್ಯಾಂಗಳು. ಮಂಡ್ಯ ಜಿಲ್ಲೆ ಕಳೆದ ವರ್ಷದ ಅಂಕಿಸಂಖ್ಯೆಯ ಪ್ರಕಾರ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ದಾಖಲೆ. ಮಂಡ್ಯ ನಮ್ಮದು ಅನ್ನುವ  ಮನೆತನ ಇದನ್ನ ಗಂಭೀರವಾಗಿ ಗಮನಿಸಿದೆಯೇ? ಹಾಸನ ತಮ್ಮ ಕುಟುಂಬದ ಆಸ್ತಿ ಎಂದೇ ಭಾವಿಸಿದ ರೇವಣ್ಣ, ದೇವೇಗೌಡರು, ಕನಿಷ್ಟ ಸಕಲೇಶಪುರ, ಆಲೂರು ಭಾಗದಲ್ಲಿನ ಕಾಡಾನೆ ಹಾವಳಿಯನ್ನ ಶಾಶ್ವತವಾಗಿ ತಪ್ಪಿಸಲು ಯೋಜನೆ ರೂಪಿಸಿಲ್ಲ. ಕೆಜಿಎಫ್, ಚಿಂತಾಮಣಿ ಪ್ರದೇಶದಲ್ಲಿ ಫ್ಲೋರೈಡ್ ನೀರು ಕುಡಿದು ಸಾಯುತ್ತಿದ್ದಾರೆ. ವಿಚಿತ್ರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅರಸೀಕೆರೆ, ತರೀಕೆರೆ ಅರೆ ಬಯಲುಸೀಮೆ ಇಂದಿಗೂ ಕುಡಿಯುವ ನೀರಿಗೆ ಬಾಯಿಬಿಟ್ಟು ಕುಳಿತಿದೆ. ತುಮಕೂರಿಗೆ ಅಮ್ಮಣ್ಣಿ ಕೆರೆ ಬಿಟ್ಟರೆ ಇವತ್ತಿಗೂ ಕುಡಿಯುವ ನೀರಿನ ಸಮಗ್ರ  ಶಾಶ್ವತ ಯೋಜನೆಗೆ ಕಾದುುಳಿತಿದೆ. ಹೇಮಾವತಿ ನೀರು ಕೊಡ್ತೀನಿ ಅಂತ ಹೇಳಿ ದಶಕವೇ ದಾಟಿದೆ. ಗೌರಿಬಿದನೂರು, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ತರ್ತೀವಿ ಅಂತ ಹೇಳಿ 25 ವರ್ಷಗಳೇ ದಾಟಿವೆ. ಭಾರತದಲ್ಲಿ ಅತಿ ಹೆಚ್ಚು ಬರಡು ಭೂಮಿ ಇರುವ ಎರಡನೇ ರಾಜ್ಯ (ರಾಜಸ್ಥಾನ ಬಿಟ್ಟರೆ) ಕರ್ನಾಟಕ. ವಾಣಿವಿಲಾಸ ಅಣೆಕಟ್ಟಿಗೆ ಅಪ್ಪರ್‌ತುಂಗಾ ನೀರು ತರುತ್ತೇವೆ ಅಂದ ಆಶ್ವಾಸನೆಗೆ 20 ವರ್ಷಗಳು ಸಂದಿವೆ. ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಪಿಎಚ್‌ಡಿ ಪ್ರಬಂಧವನ್ನೇ ಬರೆಯಬಹುದು.

ಉತ್ತರ  ಅಭಿವೃದ್ಧಿ ನಿರ್ಲಕ್ಷ್ಯ ಎಂಬ ಚಳವಳ ಇಡೀ ಕರ್ನಾಟಕದ ಅಭಿವೃದ್ಧಿ ಚಳವಳ ಆಗಬೇಕಾದ ತುರ್ತಿದೆ. ಜನರನ್ನ ಭಾಗ್ಯಗಳ ಆಮಿಷವೊಡ್ಡಿ ಮತ ಗಿಟ್ಟಿಸುವ ರಾಜಕಾರಣ, ಮಳೆಗಾಲದ ಅಬ್ಬರದಲ್ಲೂ ರಸ್ತೆಗಳ ಡಾಂಬರೀಕರಣ, ಉತ್ತಮವಾಗಿದ್ದ ಉದ್ಯಾನವನಗಳನ್ನೂ ಪುನಃ ಪುನಃ ಅಗೆದು ಹೊಸರೂಪ ಕೊಡುವ ಅಭಿವೃದ್ಧಿ, ಕಾಂಕ್ರೀಟ್ ರೋಡು ಅಂತರ್ಜಲ ಬರಕ್ಕೆ ಮೂಲಕಾರಣ ಎಂದು ಅಂತಾರಾಷ್ಟ್ರೀಯ ವರದಿ ಹೇಳಿದರೂ ತಂತಮ್ಮ ಸ್ವಾರ್ಥಕ್ಕೆ, ಹಣ ಮಾಡುವ ದಂಧೆಗೆ ಹುಡುಕಿ ಹುಡುಕಿ ಕಾಂಕ್ರೀಟೀಕರಣ ಮಾಡುವ ಈ ದರಿದ್ರ ರಾಜಕಾರಣಿಗಳಲ್ಲಿ  ಅಭಿವೃದ್ಧಿ ಆಶಿಸುವುದು ಹೇಗೆ? ಹಿಂದೆ ರಾಜಕಾರಣ ಕಿಂಚಿತ್ತಾದರೂ ಜನ ಹಿತ, ಜನಸೇವೆ ಮತ್ತು ಅಭಿವೃದ್ಧಿಯ ಕಾಳಜಿಯಿಂದ ಕೂಡಿತ್ತು. ನೀತಿ, ನಿಯತ್ತು ಒಂದಿಷ್ಟು ಪ್ರಾಮಾಣಿಕತೆಯ ವಾಸನೆಯಾದರೂ ಇತ್ತು. ಇಂದು ಹಳ್ಳಿಯಿಂದ ದಿಲ್ಲಿಯವರೆಗೆ ರಾಜಕೀಯ ಅಂದರೆ ಹಣ ಮಾಡುವ, ಆಸ್ತಿ ಮಾಡುವ, ಜನರನ್ನು ಅವರ ಅಸಹಾಯಕತೆಯ ಲಾಭ ಪಡೆದು ಬೋಳಿಸುವುದೇ ಘೋಷವಾಕ್ಯವಾಗಿದೆ. ಪ್ರತಿಯೊಂದರಲ್ಲೂ ಲಂಚ, ರುಷವತ್ತು ಮತ್ತು ಪರ್ಸಂಟೇಜ್. ಜಾತಿ, ಧರ್ಮ, ಪ್ರದೇಶ, ಬಡವ, ಬಲ್ಲಿದ ಎಲ್ಲವೂ ರಾಜಕಾರಣದ ದಾಳಗಳಾಗಿವೆ. ಜನಸೇವೆ,  ಹೆಸರಿನಲ್ಲಿ ದೋಚುವ ದಂಧೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅನ್ನುವ ಬೇಧ-ಭಾವ ಇಲ್ಲವೇ ಇಲ್ಲ. ಹೀಗಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯ ಅನ್ನುವುದು ಜನಪರ, ಜನಮುಖಿ, ಸಮಾಜಮುಖಿ ಚಳವಳಕ್ಕೆ ಒಂದು ಕಾರಣವಾಗಬೇಕಿದೆ. ದುಷ್ಟರಾಜಕಾರಣ ಮತ್ತು ಜನಪ್ರತಿನಿಧಿಗಳ ಅಸಲಿಯತ್ತನ್ನು, ಅವರ ಮುಖವಾಡವನ್ನು ಕಳಚುವುದಕ್ಕೊಂದು ‘ಮಾರ್ಗ’ವಾಗಬೇಕಾಗಿದೆ. ಮುಕ್ಕಾಲು ಶತಮಾನದ ಸ್ವತಂತ್ರ ಭಾರತದಲ್ಲಿ ಕರ್ನಾಟಕದ ಒಟ್ಟೂ ಅಭಿವೃದ್ಧಿಯ ಮೌಲ್ಯಮಾಪನಕ್ಕೆ ಇದೊಂದು ನೆಲೆಯಾಗಬೇಕಿದೆ. ಉತ್ತರ ಕರ್ನಾಟಕ, ರಾಜಕಾರಣದ ದೃಷ್ಟಿಯಿಂದ, ನೈಸರ್ಗಿಕವಾಗಿ, ಸಾಂಸ್ಕೃತಿಕವಾಗಿ ಅತ್ಯಂತ ಬಲಿಷ್ಠ ಪ್ರದೇಶ.  ಹತ್ತು ಚಳವಳಗಳನ್ನು ಹಡೆದ ಹಾಗೂ ನಿರ್ಣಾಯಕವಾಗಿ ಸಂಘಟಿಸಿದ ಕೀರ್ತಿ ಈ ಪ್ರದೇಶಕ್ಕೆ ಸೇರಿದೆ. ಹಾಗಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯದ ಜತೆ ರಾಜಕಾರಣ, ರಾಜಕಾರಣಿಗಳು ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿ ಮರೆತ ಆಡಳಿತಶಾಹಿಯ ವಿರುದ್ಧ ವಿಶಾಲ ಅರ್ಥದಲ್ಲಿ ನಿಜವಾದ ಜನಾಂದೋಲನ ಸಂಘಟಿತಗೊಳ್ಳಬೇಕು. ಅದಕ್ಕಿದು ಸಕಾಲ. ಕರ್ನಾಟಕವನ್ನು ರಾಜಕಾರಣಿಗಳು ಎಂದೂ ಇಡಿಯಾಗಿ ನೋಡಿಯೇ ಇಲ್ಲ. ಅವರು ತುಂಡು ತುಂಡಾಗಿಯೇ ನೋಡಿದ್ದು. ಆ ರೀತಿಯಲ್ಲಿಯೇ ಜನರನ್ನು ಒಡೆದು ಆಳಿದ್ದು. ಗೋಕಾಕ್ ಚಳವಳ  ಬಿಟ್ಟರೆ ಕರ್ನಾಟಕ ಯಾವ ಚಳವಳದ ಪ್ರಶ್ನೆಯಲ್ಲೂ ನಾಡು ಒಂದಾಗಿ ಧ್ವನಿಸಿಲ್ಲ. ಒಂದಾಗಲು ಈ ರಾಜಕಾರಣ ಬಿಡುತ್ತಲೂ ಇಲ್ಲ. ದೇಶ, ರಾಜ್ಯವನ್ನು ಲೂಟಿಗೈಯ್ಯುವ ಈ ರಾಜಕಾರಣಕ್ಕೆ ಜನರನ್ನು ಎಷ್ಟು ಸಾಧ್ಯವೋ ಅಷ್ಟು ಇಡಿಯಾಗಿಸದೆ ಬಿಡಿಬಿಡಿಯಾಗಿಸಿಯೇ ಆಳುವುದು ಮೂಲಭೂತ ಇರಾದೆ, ಸಂಚು. ಕರ್ನಾಟಕದಲ್ಲೂ ಇದೇ ಆಗಿರುವುದು. ಅದನ್ನು ಇನ್ನಾದರೂ ಜನತೆ ಅರ್ಥಮಾಡಿಕೊಳ್ಳಬೇಕಿದೆ. ಮಡಿಕೇರಿ ಪ್ರತ್ಯೇಕ, ತುಳು ನಾಡು ಪ್ರತ್ಯೇಕ, ಹೀಗೆ ನಾವು ಅಖಂಡತೆಯ ಬಲವನ್ನು ಕುಂದಿಸಿಕೊಳ್ಳುವ ಮಕ್ಕಳಾಟಕ್ಕೆ ಇಳಿಯದೆ ಸಮೃದ್ಧ ಕರ್ನಾಟಕದ  ಯೋಚಿಸಬೇಕಿದೆ. ರಾಜಕೀಯೇತರ ನೆಲೆಯಲ್ಲಿ ಸಂಘಟಿತರಾಗಬೇಕಿದೆ. ಅದಿಲ್ಲವಾದಲ್ಲಿ ಒಡೆದು ಆಳುವ ರಾಜಕಾರಣ ಕರ್ನಾಟಕವನ್ನು ಇನ್ನಷ್ಟು ಅಧೋಗತಿಗೆ ಕೊಂಡೊಯ್ದು ನಿಲ್ಲಿಸುವುದು ಬೆಳಕಿನಷ್ಟೇ ಸತ್ಯ.

ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗಿಗೆ ಕುಮಾರಸ್ವಾಮಿ ಅವರ ‘ಮನೆ ಕಾಯುವ ಬಜೆಟ್’ ಕಾರಣವಾದರೆ, ಜೆಡಿಎಸ್ ಮಾಡಿದ ತಪ್ಪಿಗೆ ಅದೇ ಪಕ್ಷ ಹೊಡೆಸಿಕೊಳ್ಳಲಿ ಅಂತ ಕಾಂಗ್ರೆಸ್ ಕಾಯುವ ತಂತ್ರಕ್ಕೆ ಶರಣಾಗಿದೆ. ಬಿಜೆಪಿ ಹಾವು ಮತ್ತು ಕೋಲು ಎರಡನ್ನೂ ಹಿಡಿದು ಸ್ವಲಾಭಕ್ಕೆ ಎದುರು ನೋಡುತ್ತಿದೆ. ಮಠ ಮಂದಿಯ ರಾಜಕಾರಣ ಸಮಗ್ರ  ಅಭಿವೃದ್ಧಿ ಏಳ್ಗೆ ಅದರ ಉದ್ದೇಶವೇ ಅಲ್ಲ. ಪ್ರಾದೇಶಿಕತೆ, ಧಾರ್ಮಿಕತೆ, ಲಿಂಗಾಯತ, ಬ್ರಾಹ್ಮಣ ಈ ತರಹೇವಾರಿ ವಿಂಗಡನೆಯಲ್ಲಿಯೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಬಿಡಿ, ಜಾತಿ, ಧರ್ಮ, ಪ್ರಾಂತ, ಪ್ರಾದೇಶಿಕತೆಗಳನ್ನ. ಒಟ್ಟೂ ರಾಜ್ಯ, ಸಮಗ್ರ ಕರ್ನಾಟಕದ ದೃಷ್ಟಿಯನ್ನ ನೆಟ್ಟು ಸಮಾಜದ ಹಿತಚಿಂತಕರೆಲ್ಲ ಒಂದಾಗಿ ಬನ್ನಿ. ನಾಡು, ನುಡಿ, ನೆಲ, ಜಲ, ಸಮೃದ್ಧಿಯೊಂದಿಗೆ ಕನ್ನಡ ಜನತೆಯ ಸರ್ವಾಂಗೀಣ ವಿಕಾಸಕ್ಕಾಗಿ ಟೊಂಕ ಕಟ್ಟೋಣ ಬನ್ನಿ. ರಾಜಕಾರಣದ ಈ ಹಳವಂಡಕ್ಕೆ ಜನಸೇವೆಯ ಹೆಸರಿನ ದಗಲುಬಾಜಿತನಕ್ಕೆ ಜನಾಂದೋಲನದ  ಹಾಕೋಣ ಬನ್ನಿ. ಮತರಾಜಕಾರಣದ ವರಸೆಗೆ ಜನಶಕ್ತಿಯ ವಿರಾಡ್‌ರೂಪ ದರ್ಶನ, ದಮ್ಮು ದಾವಾಗ್ನಿಯಾಗಿ ಪ್ರಜ್ವಲಿಸಿದಾಗಲೇ ನಿಜ ಅಭಿವೃದ್ಧಿಯ ಶಕೆ ಆರಂಭ.