ಯುದ್ಧಕ್ಕೂ ಮೊದಲು ಶಸ್ತ್ರತ್ಯಾಗ ಮಾಡಿದ ಕುಮಾರಸ್ವಾಮಿ!

Posted In : ಸಂಗಮ, ಸಂಪುಟ

ಪ್ರದಕ್ಷಿಣೆ: ಬಿ. ಗಣಪತಿ

ಮುಖ್ಯಮಂತ್ರಿ ಕುಮಾರ ಸ್ವಾಮಿ ಆಡಳಿತಕ್ಕೆ 20 ತಿಂಗಳು. ಕುಮಾರ ಸ್ವಾಮಿ ಅವರ ರಾಜಕೀಯ ಜೀವನದಲ್ಲಿ 20 ರ ಸಂಖ್ಯೆಯೇ ಟ್ರಂಪ್ ಯಡಿಯೂರಪ್ಪನವರೊಂದಿಗೆ ಕೂಡಿ ರಚಿಸಿದ ಸಮ್ಮಿಶ್ರ ಸರಕಾರದ ಅವರ 20 ತಿಂಗಳ ಆಡಳಿತವೇ ಅವರ ಕಳೆದ ಚುನಾವಣೆಯ ಅಸ್ತ್ರವೂ ಆಗಿತ್ತು. ಆದರೆ ಈಗ ಕಾಂಗ್ರೆಸ್‌ನೊಂದಿಗೆ ಸೇರಿ ರಚಿಸಿದ ಸಮ್ಮಿಶ್ರ ಸರಕಾರ ಅವರ ಅಂಗ ವಸ್ತ್ರವನ್ನೂ ಜಾರಿಸುವ ಲಕ್ಷಣ ದಟ್ಟವಾಗಿದೆ.

ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸೇರಿ ನಾನು ಮಾಡಿದ ಸಮ್ಮಿಶ್ರ ಸರಕಾರ, ತಂದೆ ದೇವೇಗೌಡರ ತತ್ವ, ಸಿದ್ಧಾಂತ, ರಾಜಕೀಯ ಜೀವನದ ಧ್ಯೇಯೋದ್ದೇಶಕ್ಕೆ ನಾನು ಎಸಗಿದ ದ್ರೋಹ. ಅದು ನಾನು ಮಾಡಿದ ಮಹಾಪಾಪ. ಆ ಪ್ರಾಯಶ್ಚಿತ್ತ ಹಾಗೂ ವಿಮೋಚನೆಗೆ ಆ ದೇವರೇ ನನಗೆ ಒದಗಿಸಿದ ಅವಕಾಶ ಇದು ಎಂದು ಪ್ರಮಾಣ ವಚನದ ಪೂರ್ವದ ಕುಮಾರಸ್ವಾಮಿ ಅವರ ಮಾತು, ಈ 20 ದಿನಗಳಲ್ಲೇ ಅಪಭ್ರಂಶಕ್ಕೆ ತುತ್ತಾಗಿದೆ. ಬಿಜೆಪಿ ಮತ್ತು ಕುಮಾರಸ್ವಾಮಿ ಮೈತ್ರಿ ಜಾತ್ಯತೀತ ಜನತಾದಳದ ದೃಷ್ಟಿಯಿಂದ ‘ಪಾಪ’ ಆಗಿರಬಹುದಾದರೂ ಅಲ್ಲೊಂದು ಸಂಯಮ, ಸುಲಲಿತತೆ, ಗೊಂದಲ ರಹಿತ, ವಾಕರಿಕೆ ರಹಿತ, ಹೇಸಿಗೆ ರಹಿತ, ರೇಜಿಗೆರಹಿತವಾಗಿತ್ತು. ಆದರೆ ಈಗಣ ಜನತಾದಳ, ಕಾಂಗ್ರೆಸ್ ಮೈತ್ರಿ ಕರ್ನಾಟಕದಜನತೆಯ ತಾಳ್ಮೆಗೆಡಿಸಿದೆ. ತಾವು ಸರಿಯಾಗಿ ಕರ್ನಾಟಕಕ್ಕೆ ಇಂಥ ಜೋಭದ್ರ ಸ್ಥಿತಿ ನಿರ್ಮಾಣವಾಗಿದ್ದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಹಂತಕ್ಕೆ ಜನತೆ ಬಂದು ನಿಂತಿದೆ. ಮಾನ, ಮರ್ಯಾದೆ, ಶೀಲ, ಅಶ್ಲೀಲ, ಎಲ್ಲವುಗಳ ಗಡಿಗಳನ್ನೂ ದಾಟಿ, ಅಧಿಕಾರ, ಅಧಿಕಾರ ಕೇವಲ ‘ಅಧಿಕಾರ’ ಎಂಬ ಏಕಸೂತ್ರದಡಿ ಒಗ್ಗಟ್ಟಿನ ನಾಟಕ ಪ್ರದರ್ಶನ ಭರ್ಜರಿಯಾಗಿ ನಡೆದಿದೆ.

ಕುಮಾರಸ್ವಾಮಿಯವರೇ, ಆರಂಭದಲ್ಲೇ ತಾವು ಇಷ್ಟು ಸುಸ್ತಾದರೆ ಹೇಗೆ? ಇಷ್ಟು ಹತಾಶರಾದರೆ ಹೇಗೆ? ದಿನಕ್ಕೊಂದು ಮಾತು, ದಿನಕ್ಕೊಂದು ರಗಳೆ, ದಿನಕ್ಕೊಂದು ತಗಾದೆ. ಇದೇನಾ ನೀವು ಜನರಿಗೆ ಕೊಡುವ ಸುಭೀಕ್ಷ ಬಸವರಾಜ ಹೊರಟ್ಟಿ, ವಿಶ್ವನಾಥ್‌ರಂಥ ಹಿರಿಯರು, ಅನುಭವಿಗಳು, ವಿದ್ಯಾವಂತರನ್ನ ಹೊರಗಿಟ್ಟು ಶೇ. 70ಕ್ಕೂ ಹೆಚ್ಚಿನ ಸಚಿವರನ್ನ ಎಸ್‌ಎಸ್‌ಎಲ್‌ಸಿ, ಪಿಯುಸಿ, ದಾಟದವರನ್ನ ಕಟ್ಟಿಕೊಂಡು ಏನನ್ನು ಕಡಿದು ಕಟ್ಟುತ್ತೀರಿ? ನೀವು ಮುಖ್ಯಮಂತ್ರಿ. ನಿಮ್ಮ ಅಪ್ಪ ಸೂಪರ್ ಮುಖ್ಯಮಂತ್ರಿ. ಇನ್ನು ಸಮನ್ವಯ ಸಮಿತಿಯ ನಿಮ್ಮ ಆಜನ್ಮ ಶತ್ರು, ಸಿದ್ದರಾಮಯ್ಯನವರು ನಿಮ್ಮಿಬ್ಬರ ಮೇಲೂ ಕತ್ತಿ ಅಲ್ಲಾಡಿಸೋ ಸ್ಪೆಷಲ್ ಸಿಎಂ. ಈ ಮಧ್ಯೆ ಡಿ.ಕೆ.ಶಿವಕುಮಾರ್, ಡಿ,ಕೆ. ಸುರೇಶ್ ಮತ್ತು ನಿಮ್ಮ ಮಹಾ ಬ್ರದರ್ ಮೂಗಿನ ಹೊಳ್ಳೆಯನ್ನೇ ತನ್ನ ಮಾಡಿಕೊಂಡು ಹೊಳೆನರಸೀಪುರದ ಹುಲಿ ರೇವಣ್ಣ ಮಧ್ಯೆ ಕ್ಷಣ ಕ್ಷಣದ ಫೈಟ್. ಕಾಂಗ್ರೆಸ್ಸಿನ ಅತೃಪ್ತರು, ದಳದ ಅತೃಪ್ತರು. ಅವರ ಪ್ರತ್ಯೇಕ ಸಭೆ. ಅಧಿಕಾರಿಗಳ ಅಸಹಕಾರ.

ನೀವು, ದೇವೇಗೌಡರು, ರೇವಣ್ಣ ಸೇರಿ ಒಕ್ಕಲಿಗರ ಸರಕಾರ ಮಾಡಲೇ ಬೇಕು ಅಂತ ಹರಸಾಹಸಕ್ಕಿಳಿದರೆ, ಕಾಂಗ್ರೆಸ್ಸಿಗರು ಸಮನ್ವಯ ಸಮಿತಿಯ ಸೂತ್ರಪಾಶ ಹಾಕಿ ಎಳೆಯುತ್ತಿದ್ದಾರೆ. ನಿನ್ನೆ ಸಂಜೆ ನಡೆದ ಸಮನ್ವಯ ಸಮಿತಿ ಸಭೆ, ತಮ್ಮ ಕೈಕಾಲು ಬಾಯಿ ಕಟ್ಟಿಹಾಕುವುದಕ್ಕೆ ಭರ್ಜರಿ ಸಿದ್ಧತೆ ನಡೆಸಿದೆ. ಸಮಾನ ಪ್ರಣಾಳಿಕೆ ರಚನೆಗೊಂದು ಇವೆಲ್ಲದರ ಮಧ್ಯೆ ತಾವು ವಿಧಾನಸೌಧದಲ್ಲಿ ರಾಜ್ಯದ ಉದ್ಧಾರದ ನಕ್ಷೆ ಎಳೆಯುತ್ತಿದ್ದರೆ, ತಮ್ಮ ಪಿತಾಶ್ರೀ ಅವರು ದಿಢೀರನೆ ಸರಕಾರದ ಕಾರ್ಯದರ್ಶಿಯಿಂದ ಸಂಪೂರ್ಣ ಅಂಗೋಪಾಂಗದ ಮುಖ್ಯಸ್ಥರ ಸಭೆ ನಡೆಸಿಬಿಡುತ್ತಾರೆ. ಮಧ್ಯೆ ಮಧ್ಯೆ ಭವಾನಿ ರೇವಣ್ಣ, ಪ್ರಜ್ವಲ್, ನಿಖಿಲ್, ಅನಿತಾ ಮುಂತಾದ ಕುಟುಂಬಿಕರ ಬಹುಮುಖಿ ಪ್ರತಿಭಾ ಪ್ರದರ್ಶನ. ನೀವು ಕಾಂಗ್ರೆಸ್ಸಿಗರನ್ನೂ ಬ್ರದರ್ ಅಂತೀರಿ, ದಳದವರನ್ನೂ ಬ್ರದರ್ ಅಂತೀರಿ. ಅವರೆಲ್ಲ ಬೆಂಗಳೂರಿನ ಕಾಸ್ಮೋಪಾಲಿಟಿನ್ ಸಿಟಿಯ ಭಾಷೆಯಲ್ಲಿ ‘ಬ್ರೋ’ ಎಂದು ಚೇಷ್ಠೆಗೆ ಇಳಿದಿದ್ದಾರೆ.

ನೀವು ಗಂಭೀರ, ಆಡಳಿತಗಾರ. ಜನೋದ್ಧಾರದ ಕನಸುಗಾರ. ನಿಜವಾದ ರೈತರ ಸಮಸ್ಯೆಯ ನಿವಾರಕ. ಸರಳ, ಸುಂದರ, ಸಮೃದ್ಧ ಕರ್ನಾಟಕದ ಹರಿಕಾರ ನೀವಾಗುತ್ತೀರಿ, ಮುಂತಾಗಿ ನನ್ನಂಥವರಿಂದ ಬಹಳಷ್ಟು ಈ ನಾಡಿಗರು ಭಾವಿಸಿದ್ದರು. ಆದರೆ ನೀವು ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದ್ದೀರಿ. ಮಾತು ಮಾತಿಗೆ ಸಮ್ಮಿಶ್ರ ಸರಕಾರದ ಇತಿಮಿತಿಯ, ಬೇಲಿಯನ್ನ ಎದುರಿಟ್ಟು ಕೈಲಾದುದನ್ನ ಮಾಡುತ್ತೇನೆ ಅನ್ನುತ್ತಾ ಹತಾಶ ಪರ್ವದ ಅಭಿಮನ್ಯು ಆಗುತ್ತಿದ್ದೀರಿ. ನೀವು ರಾಜಕೀಯದಲ್ಲಿ ಮಹಾ ಅನುಭವಿಗಳಲ್ಲ. ಆದರೆ ರಾಹುಲ್ ಗಾಂಧಿಗೆ ಹೋಲಿಸಿದರೆ ನಿಮ್ಮದೇ ಭಾಷೆಯಲ್ಲಿ ‘ಬಚ್ಚಾ’ ಅಂಥ ಒಬ್ಬ ಅನನುಭವಿ, ವಯಸ್ಸಿನಿಂದ ಸಣ್ಣವ ಅವರಿಗೆ ನೀವು ಪುಣ್ಯಾತ್ಮ ಅಂತೀರಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಅಮ್ಮ-ಮಗನ ದರ್ಶನಕ್ಕೆ ನಡುಬಗ್ಗಿಸಿ ನಡೆಯುತ್ತೀರಿ. ಸ್ವತಃ ಕಾಂಗ್ರೆಸ್ಸಿಗರೇ ಹೈಕಮಾಂಡ್‌ಗೆ ಸೆಡ್ಡು ಹೊಡೆದರೆ, ತಾವು ವಿನೀತ ಸೇವಕ ಭಾವ ಮರೆಯುತ್ತೀರಿ. ಸಮ್ಮಿಶ್ರ ಸರಕಾರ ಇರಬಹುದು.ನಿಮಗೂ 38 ಸಿಟಿನ ಬಲವಿದೆ.

ಈ ದೇಶದ ರಾಜಕಾರಣದಲ್ಲೇ ಚಾಣಕ್ಯ , ಶಕುನಿ, ದುರ್ಯೋಧನ ಎಲ್ಲರ ಸಮ್ಮಿಶ್ರ ಭಾವದಂತಿರುವ ತಂದೆ ದೇವೇಗೌಡರಿದ್ದಾರೆ. ನೀವಿಲ್ಲದಿದ್ದರೆ ಕಾಂಗ್ರೆಸ್ ಅಧಿಕಾರದ ಕನಸು ಸ್ಥಿತಿಯೂ ರಾಜ್ಯದಲ್ಲಿ ಸದ್ಯಕ್ಕಂತೂ ಇಲ್ಲವೇ ಇಲ್ಲ. ಈ ಗಂಭೀರ ಚಿತ್ರ-ಸ್ಥಿತಿಯ ಅರಿವಿದ್ದರೂ ಏಕೆ ಬೆನ್ನೆಲುಬನ್ನೇ ಮರೆತಂತೆ ವರ್ತಿಸುತ್ತಿದ್ದೀರಿ? ಕಾಂಗ್ರೆಸ್ಸಿನ ಒಳವ್ಯವಹಾರ , ಒಳ ವೈಷಮ್ಯ , ಅತೃಪ್ತಿ ಅದು ಅವರ ಸರಹದ್ದು ಅಂತ ತಿಳಿದಿದ್ದರೂ ‘ತಿಂಡಿ’ ನೆಪದಲ್ಲಿ ಎಂ.ಬಿ.ಪಾಟೀಲ್ ಮನೆಗೆ ಹೋಗಿ ದಂಡವಾದಿರಿ ಯಾಕೆ?

ಪ್ರಾಯಶಃ ದೇಶದ ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿ ಭ್ರಷ್ಟಾಚಾರದ ಬಗ್ಗೆ ನಿಮ್ಮಂತೆ ಹೇಳಿಕೆ ನೀಡಿದ ಉದಾಹರಣೆ ಇಲ್ಲ. ‘ವಿಧಾನಸೌಧದಲ್ಲೇ ಭ್ರಷ್ಟಾಚಾರವಿದೆ. ಅದರ ನಿರ್ಮೂಲನೆಗೆ ನಾನೇನಾದರೂ ನಾನೇ ಎರಡು ನಿಮಿಷ ಅಧಿಕಾರದಲ್ಲಿ ಉಳಿಯಲಾರೆ’ ಏನಿದು? ನೀವು ನಿಜಕ್ಕೂ ಅಂಥ ಘೋರ ಇಕ್ಕಟ್ಟಿನಲ್ಲಿ ಇದ್ದೀರಿ. ಅದು ಸತ್ಯ. ಆದರೆ ಅದನ್ನ ಸಾರ್ವಜನಿಕವಾಗಿ ಹೇಳುವ ಲಜ್ಜೆಗೇಡಿತನ ಏಕೆ? ಅಷ್ಟೂ ಅಧಿಕಾರದ ಪ್ರಜ್ಞೆ, ಅದರ ರೀತಿ ರಿವಾಜುಗಳ ಅರಿವಿಲ್ಲವೇ? ನೀವು ಅಲ್ಲಿ ಭ್ರಷ್ಟಾಚಾರ ಇದೆ ಅನ್ನುವುದು, ಅದನ್ನ ಟಚ್ ಮಾಡಲು ಅಸಾಧ್ಯ ಅನ್ನುವುದನ್ನ ಇಷ್ಟು ಅಸಹಾಯಕರಾಗಿ ಒಪ್ಪಿಕೊಂಡರೆ ರಾಜ್ಯಕ್ಕೆ ಎಂಥಾ ಸರಕಾರ, ಆಡಳಿತ ಕೊಡಬಲ್ಲಿರಿ? ಎರಡು ನಿಮಿಷ ಅಧಿಕಾರದಲ್ಲಿ ಉಳಿಯಲಾರೆ ಅಂದರೆ ಏತಕ್ಕಾಗಿ ಇಂಥ ಅಧಿಕಾರದ ದಾಹ, ಆಸೆ? ರಾಜ್ಯ ಕೊಳ್ಳೆ ಹೋದರೂ ಚಿಂತೆ ಇಲ್ಲ, ನಾನು ಅಧಿಕಾರದಲ್ಲಿ ಇರಬೇಕು.

ಅಧಿಕಾರವೇ ಅಂತಿಮ. ಅಧಿಕಾರಕ್ಕಾಗಿ ಭ್ರಷ್ಟ ಆಡಳಿತ , ಭ್ರಷ್ಟಾಚಾರ, ಭ್ರಷ್ಟ ಮಂತ್ರಿಮಹೋದಯರು. ‘ಜನಹಿತಕ್ಕಾಗಿ ಮೈತ್ರಿ’ ಅರ್ಥ ಇದೇ ಏನು? ಖಾತೆ ಅಪೇಕ್ಷೆ, ಜಗಳ, ಹೊಡೆ ಬಡಿ ಕಾದಾಟವಾದಾಗಲೇ ಕುಮಾರಸ್ವಾಮಿ ಅವರೇ, ಈ ಸಮ್ಮಿಶ್ರ ಸರಕಾರ ಏಕೆ ಆಡಳಿತಕ್ಕೆ ಬಂದಿದೆ ಅನ್ನುವ ಸಾಮಾನ್ಯ ಜ್ಞಾನ ಜನರಿಗಾಗಿದೆ. ವಿಧಾನಸೌಧದ ಕಂಬಕಂಬಗಳೂ ಕೇಳಿಸಿಕೊಂಡ ಗೊತ್ತಾ ‘ಅಣ್ಣಾ, ಈ ಸರಕಾರ ಎಷ್ಟು ದಿನಗಳೋ, ತಿಂಗಳುಗಳೋ, ಇದ್ದಷ್ಟು ದಿನ ಒಂದಿಷ್ಟು ಬಾಚಿಕೊಂಡು ಹೋಗೋಣ’ ಇದು ನಿಮ್ಮ ಸಂಪುಟದ ಮಂತ್ರಿಗಳ ಆಪಸ್‌ನಾಥೆ ಮಾತು. ಓಡಿ ಹೋಗುವವನ ಹರಿದುಕೊಂಡಷ್ಟು ಬಂತು. ಅವರು ಭ್ರಷ್ಟಾಚಾರಿಗಳು, ಇವರು ಭ್ರಷ್ಟಾಚಾರಿಗಳು ಎಂದು ಭಾಷಣ ಮಾಡುವ ತಾವು ನಿಮ್ಮ ಸಮ್ಮಿಶ್ರ ಸರಕಾರದ ಸಾಮೂಹಿಕ ಭ್ರಷ್ಟಾಚಾರಕ್ಕೆ ಏನನ್ನುತ್ತೀರಿ? ಅದನ್ನ ನಿರ್ಮೂಲನೆ ಬಿಡಿ, ಕಂಟ್ರೋಲ್, ಮಾಡಲೂ ತಾನು ಅಸಹಾಯಕ ಎಂದ ತಮ್ಮ ಮಾತು ಹಗಲು ದರೋಡೆಯ ಬಿಚ್ಚು ತಾನೆ?

ವಂಶಾಡಳಿತದ ವಿರುದ್ಧ ದನಿಎತ್ತಿದ ಪಕ್ಷ ತಮ್ಮದು. ಆದರೆ ಅದರ ಕ್ರೂರ ವ್ಯಂಗ್ಯವೆಂದರೆ, ತನ್ನ ವಂಶವೇ ಆಡಳಿತದ ಆಯಕಟ್ಟಿನ ಜಾಗದಲ್ಲಿರಬೇಕು ಅನ್ನುವ ಆತ್ಯಂತಿಕ ಹೋರಾಟ ಮಾಡಿದ್ದೇ ತಮ್ಮ ಕುಟುಂಬ. ಮಾಜೀ ಪ್ರಧಾನಿ ದೇವೇಗೌಡರು, ನೀವು ವಿಧಾನ ಸೌಧಕಾಯುತ್ತಿರುವಾಗ ಅವರು ಕುಳಿತಲ್ಲಿಂದಲೇ ಆಡಳಿತ ಸೂತ್ರದ ಚಾಟಿ ಬೀಸುತ್ತಾರೆ. ನಿಮ್ಮ ಘನ ಸಹೋದರ ರೇವಣ್ಣ ಸಾಹೇಬರು ಅವರ ಖಾತೆ, ಮತ್ತೆ ಉಳಿದವರ ಖಾತೆ ಎಂಬ ಯಾವ ಪರಿಭೇದವೂ ಇಲ್ಲದೆ ರಾಜಕೀಯವಾಗಿ ಕೈ ಮತ್ತು ಮೂಗು ಮೂರನ್ನೂ ತೂರಿಸುತ್ತಾರೆ. ದೊಡ್ಡಗೌಡರ ಹಿಂಭಾಗದಲ್ಲೇ ನಿಂತು ಶ್ರೀಮತಿ ರೇವಣ್ಣನವರು ನಿಮಗೆ ಮೂವರಿಗೂ ಅರಿವಿರದ ಗುಪ್ತ ಕಾರ್ಯಾಚರಣೆಯನ್ನು ಸರ್ಜಿಕಲ್ ಆಗಿ ನಡೆಸುತ್ತಾರೆ. ಪ್ರಾಯಶಃ ಈ ಅತ್ಯದ್ಭುತ, ವರ್ಣರಂಜಿತ ರಾಜಕೀಯದ ಆಟ, ಆವುಟಗಳನ್ನ ನೋಡುತ್ತಿರುವ ಜನ ಕಾಂಗ್ರೆಸ್ಸಿನ ವಂಶಾಡಳಿತವಾದರೂ ಓಕೆ, ಈ ಗೌಡರ ಮನೆಯಾಡಳಿತ, ಕಟ್ಟೆ ಪಂಚಾಯಿತಿ ಬೇಡವೇ ಬೇಡ ಅನ್ನುವ ಮಟ್ಟಕ್ಕೆ ಬರುತ್ತಿದ್ದಾರೆ.

ಎಲ್ಲಿಗೆ ಹೋಯಿತು ತಮ್ಮ ಪಕ್ಷದ ಸಿದ್ಧಾಂತ? ಛೇ ಛೇ ತಪ್ಪಾಗಿ ನಾನೇ ಗ್ರಹಿಸಿದೆ. ಜನತಾದಳಕ್ಕೆ ಸಿದ್ಧಾಂತ, ನಿಲುವು , ಗುರಿ, ಮಾತು ಅಂತಹ ಯಾವುದಾದರೂ ದುಶ್ಚಟಗಳೆಲ್ಲ ಎಂದಿದ್ದವು? ಎಲ್ಲಿದ್ದವು. ಅನುಕೂಲವಾದ, ಅನುಕೂಲ ಸಿದ್ಧಾಂತ ಅದೇ ತಾನೆ ನಮ್ಮ ಪಕ್ಷದ ಅಂತರಂಗದ ನೀತಿ, ನಿಲುವು, ಸ್ವಭಾವ. ಅದರ ತುರಿಯಾವಸ್ಥೆ ಇಂದಿನ ಸಮ್ಮಿಶ್ರ ಸರಕಾರ. ಬಿಜೆಪಿಯವರೊಂದಿಗೆ ಮಾಡಿಕೊಂಡ ಮೈತ್ರಿ ನನ್ನ ಜೀವನದ ಮಹಾಪಾಪ ಅಂದಿದ್ದೀರಿ. ನಿಜವಾಗಿ ಹೇಳಿ ಕುಮಾರಸ್ವಾಮಿ ಅವರೆ, ನಿಮಗೆ ನಿಮ್ಮದೇ ಆದ ಶೈಲಿಯ, ಯೋಚನೆ, ಯೋಜನೆಯ ಸರಕಾರವನ್ನ ರಚಿಸಲು, ಮುನ್ನಡೆಸಲು ಆಡಳಿತ ಮಾಡಲು ಬಿಜೆಪಿಯವರು ತಾನೆ ಬಿಟ್ಟಿದ್ದು. ನಿಮ್ಮಿಬ್ಬರ ಕೂಡಿಕೆ, ನಂತರ ಪ್ರಮಾಣ, ಸಂಪುಟ ರಚನೆ, ಖಾತೆ ಹಂಚಿಕೆ ಎಲ್ಲಿಯಾದರೂ ಇಂದಿನ ಮಹಾಭಾರತ ನಡೆದಿತ್ತೇ?

ಇದರ ಅರ್ಥ ನೀವು ಬಿಜೆಪಿಯೊಂದಿಗೆ ಹಸ್ತಲಾಘವ ಮಾಡಬೇಕಿತ್ತು, ಅನ್ನುವುದು ನನ್ನ ವಾದವಲ್ಲ ಅಥವಾ ನಾನು ಬಿಜೆಪಿ ಪರ ವಕಾಲತ್ತನ್ನೂ ಮಾಡುತ್ತಿಲ್ಲ. ವಸ್ತುಸ್ಥಿತಿಯನ್ನ ಒಬ್ಬ ಸಾಮಾನ್ಯ ನಾಗರಿಕ ಹಾಗೂ ಪತ್ರಕರ್ತನಾಗಿ ಅವಲೋಕಿಸುತ್ತಿದ್ದೇನೆ. ಅಂದಿನ ಬಿಜೆಪಿಯೊಂದಿಗಿನ ಸಖ್ಯ ತಾನೆಸಗಿದ ಪಾಪ ಅನ್ನುವುದರ ಅರ್ಥವೇನು? ಇದು ನನ್ನ ಪ್ರಶ್ನೆ. ನಿಮ್ಮ ಆರೋಗ್ಯ, ತಾಳ್ಮೆ ಎಲ್ಲವನ್ನೂ ಮೂರಾಬಟ್ಟೆ ಮಾಡುತ್ತಿರುವ ಇಂದಿನ ಸಮ್ಮಿಶ್ರ ಸರಕಾರ ಪುಣ್ಯದ ಕೂಡಿಕೆಯೇ? ಬಿಜೆಪಿ ಕೋಮು ಕೋಮು ಅನ್ನುತ್ತೀರಲ್ಲಾ, ನೀವು ಮುಖ್ಯಮಂತ್ರಿ ಆಗುವ ಪೂರ್ವ, ಆದ ನಂತರ, ಅದೆಷ್ಟು ದೇವಸ್ಥಾನ, ಮಠ, ಹವನ, ಯಾಗ, ಮಸೀದಿ, ಚರ್ಚ್, ಜೋತಿಷ್ಯ, ಮಾಟ, ಮಂತ್ರ ಮಾಡಿದಿರಿ. ಅದರಲ್ಲೂ ತಮ್ಮದೇ ಹೊಸ ಇತಿಹಾಸ.

ಆ ಕಾಂಗ್ರೆಸ್ಸಿಗರು, ಮೂಢನಂಬಿಕೆ ನಿಷೇಧ ಕಾಯಿದೆ ತರಲು ಗುಟುರು ಹಾಕಿ , ಈಗ ಲಿಂಬೆ ಹಣ್ಣು ಹಿಡಿದೇ ವಿಧಾನ ಸೌಧಕ್ಕೆ ಆ ಸಭಾಪತಿ ರಮೇಶ್ ಕುಮಾರ್, ಅವರ್ಯಾರೋ ಗತಿ ಗೋತ್ರ ಇಲ್ಲದ ಬಾಲ ಸ್ವಾಮೀಜಿ ಉಗುಳಿದ ಉಗುಳಿನಲ್ಲೂ ಕಾಸಿದೆ ಎಂದು ‘ಕೈಲಾಸ’ ಭಾವದಲ್ಲಿ ಕೈ ಹಿಡಿಯುತ್ತಾರೆ. ಇದು ಕೋಮುವಾದಕ್ಕಿಂತ ಭೀಭತ್ಸ ಅನ್ನಿಸಲ್ವೇ? ಇಷ್ಟಾದರೂ ನಮ್ಮ ‘ಮೂಢನಂಬಿಕೆ ನಿಷೇಧ’ ಸಮಿತಿಯ ಅಧ್ಯಕ್ಷರು , ಸದಸ್ಯರು ಮತ್ತು ಬುದ್ಧಿ ಜೀವಿಗಳು, ವಿಚಾರವಾದಿಗಳು ಇನ್ನೂ ಹೊರಬರದೆ ಬಿಲದಲ್ಲಿರುವುದರ ಮರ್ಮವೇನೋ?

ಇಷ್ಟನ್ನು ಏಕಗಂಟಿನಲ್ಲಿ ನಿಮ್ಮೆದುರು ಏಕೆ ಒದರಿಕೊಂಡೆ ಗೊತ್ತಾ? ತಾವೊಬ್ಬ ನಿಜವಾಗಿಯೂ ಜನಾನುರಾಗಿ. ಜನಪರ. ಜನರ ದುಃಖದ ಬಗ್ಗೆ ಅರಿವಿರುವ ರಾಜಕಾರಣಿ. ನೀವು ಆ 20 ತಿಂಗಳ ಮುಖ್ಯಮಂತ್ರಿಯಾಗಿ ಈ ನಾಡಿನ ಜನರ ಮನದಲ್ಲಿ ನಿಂತವರು. ನೀವು ಕಾಂಗ್ರೆಸ್ ಜತೆ ಕೈ ಜೋಡಿಸಿದ ಅವರಸರದಲ್ಲೂ ನಿಮ್ಮಿಂದ ಉತ್ತಮ ಆಡಳಿತ ನಿರೀಕ್ಷಿಸಿದ್ದೆವು. ಅದು ಸುಳ್ಳಾಗುವುದಿರಲಿ, ಹೇಸಿಗೆಯಾಗಿ ಹೋಯಿತಲ್ಲಾ. ಕಾದಾಟ, ಕಚ್ಚಾಟ, ಮೋಸ, ವಂಚನೆ, ದಗಲುಬಾಜಿತನ, ಭ್ರಷ್ಟತೆ, ಸ್ವಜನ ಪಕ್ಷಪಾತ, ಜಾತಿ ರಾಜಕಾರಣ, ಅಧಿಕಾರದ ಅಮಲು, ಅಧಿಕಾರ ಉಳಿಸಿಕೊಳ್ಳುವ ಹವಣಿಕೆ ಇವೇ ಆದುವಲ್ಲ. ಈ 20 ದಿನಗಳಲ್ಲಿ ಭರವಸೆಯ ಒಂದು ಕಿರಣ(ಮಳೆ, ಮೋಡ ಜಾಸ್ತಿಯೂ ಇದೆ. ಆ ಮಾತು ಬೇರೆ) ಗೋಚರಿಸುತ್ತಿಲ್ಲವಲ್ಲ.

ಮೊದಲ ಇಂಪ್ರೆಷನ್, ಮೊದಲ ನೋಟವೇ ಹೀಗಾದರೆ ಇನ್ನು ಮುಂದೆ ಪ್ರಜಾಸತ್ತೆಯ, ಮತದಾರನ ನಿರೀಕ್ಷೆಯ ಶವಯಾತ್ರೆ ಗ್ಯಾರಂಟಿ ಅಲ್ವಾ ಕುಮಾರಸ್ವಾಮಿಯವರೇ? ಒಂದುಮಾತು ನೆನಪಿಡಿ! ಮಾಹಾಮೈತ್ರಿ, ಚೋಟಾ ಮೈತ್ರಿ ಅಂತ ರಾಜರಾಜೇಶ್ವರಿ, ಜಯನಗರ ಮುಂದೆ ರಾಮನಗರವನ್ನೂ ಸಮ್ಮಿಶ್ರದ ಫಲವಾಗಿ ಗೆದ್ದುಕೊಳ್ಳಬಹುದು. ಆದರೆ ಜನತಾದಳ ಕಾಂಗ್ರೆಸ್ಸಿನ ಈ ಮೈತ್ರಿ ತಮ್ಮ ಸರಕಾರದ ಕಾರ್ಯವೈಖರಿಯ ರೌದ್ರಾವತಾರದಲ್ಲಿ ಮೊದಲು ಕಾಂಗ್ರೆಸ್ ನಾಶವಾಗಲಿದೆ. ನಂತರ ಸರದಿ. ಇದರ ಅರ್ಥ ಬಿಜೆಪಿ ಸುಭಗ ಪಕ್ಷ ಅಂತ ಅಲ್ಲ. ಅಲ್ಲಿ ಒಬ್ಬನೇ ಗಂಡು ಯಡಿಯೂರಪ್ಪನವರು. ಉಳಿದವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ. ಬಿಜೆಪಿ ಕರ್ನಾಟಕದ ಮಟ್ಟಿಗೆ ಅದು ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ.

ಅದು ವ್ಯಕ್ತಿ ವ್ಯಕ್ತಿಗೊಂದು ಪಕ್ಷವಾಗಿದೆ. ಹೊರಗೆ ಶೃಂಗಾರ, ಒಳಗೆ ಗೋಳಿ ಸೊಪ್ಪು. ಯಡಿಯೂರಪ್ಪನಮ್ಮ ನಾಯಕ, ಮುಖ್ಯಮಂತ್ರಿ ಎಂದೇ ಉಬ್ಬಿಸಿ ಒಳಗೊಳಗೆ ಈಶ್ವರಪ್ಪ , ಅನಂತ್ ಕುಮಾರ್, ಅಶೋಕ್ ಹೀಗೆ ಒಬ್ಬೊಬ್ಬರೇ ಅವರನ್ನು ಮುಗಿಸಲು ಸ್ಕೆಚ್ ಹಾಕಿ ಕುಳಿತಿದ್ದಾರೆ. ಹಂತಹಂತವಾಗಿ ಜಾರಿಯಾಗುತ್ತಲೂ ಇದೆ. ಯಡಿಯೂರಪ್ಪ ಹಲವು ಅಧ್ವಾನ, ಅವಸರ, ಸಿಟ್ಟು, ದ್ವೇಷ, ಗುಂಪು ಇತ್ಯಾದಿಗಳ ಮಧ್ಯೆಯೂ ಮುಳುಗುವ ದೋಣಿಯನ್ನು ದಡಸೇರಿಸುವ ಏಕೈಕ ನಾಯಕ. ಸ್ವಯಂಕೃತ ಅಪರಾಧಗಳಿಂದ ಬಿಜೆಪಿ ಕೃಶಗೊಂಡರೆ; ಬಿಜೆಪಿ, ಪರ್ಯಾಯವಾಗಿ ಮೋದಿ ಅವರನ್ನು ತಡೆಯುವ ಧಾವಂತದಲ್ಲಿ ಜನತಾದಳ, ಕಾಂಗ್ರೆಸ್ ಸೂಸೈಡ್ ಮಾಡಿಕೊಳ್ಳುತ್ತಿದೆ. ಈ ಮೂವರ ‘ಅಧಿಕಾರ ರಾಜಕಾರಣ’ಕ್ಕೆ ಕರ್ನಾಟಕ ಬಲಿಪಶು ಅಷ್ಟೆ.

Leave a Reply

Your email address will not be published. Required fields are marked *

1 × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top