Sri Ganesh Tel

ನದಿಗಳು ಬರೀ ಹರಿಯುವ ನೀರಲ್ಲ

Posted In : ಅಂಕಣಗಳು, ಪ್ರಾಣೇಶ್ ಪ್ರಪಂಚ್

ನನ್ನ ಗಂಗಾವತಿ ನೀರಿಗೆ ತವರೂರು. ಇಲ್ಲಿ ಎಂದೂ ನೀರಿಗೆ ಬರ ಬಂದಿಲ್ಲ. ಹೆಸರಿನಲ್ಲೇ ಗಂಗೆ ಇದ್ದಾಳೆ. ತುಂಗಭದ್ರೆ ಮನೆ ಮನೆಗೂ ಹರಿದು ಬರುತ್ತಾಳೆ ನಲ್ಲಿಗಳ ಮೂಲಕ. ಊರ ಹೊರಗೆ, ಊರ ಪಕ್ಕದಲ್ಲಿ ತುಂಬಿ ಹರಿಯುವ ಕೆನಾಲುಗಳು. ‘ಕಾಲಿವೆಗೆ ನೀರು ಬಿಟ್ಟಾರೆ, ಟಿ.ಬಿ ಡ್ಯಾಂ ತುಂಬೇದ’ ಅಂದರ ಸಾಕು ಇಲ್ಲಿನ ರೈತ ಕುಣಿದು ಕುಪ್ಪಳಿಸುತ್ತಾನೆ. ಕಷ್ಟ ಜೀವಿಯಾದರೆ ವರ್ಷಕ್ಕೆ ಮೂರು ಭತ್ತದ ಬೆಳೆ ತೆಗೆಯುತ್ತಾನೆ. ಆದರೆ, ನೀರು ನಿರಂತರವಾಗಿರಬೇಕು. ನಮ್ಮ ಭಾಗದ ರೈತರು’ ನಮ್ಮೂರಿಗೆ ಮಳೆ ಆಗಲಿ’ ಎಂದು ದೇವರನ್ನು ಬೇಡುವುದಿಲ್ಲ. ‘ದೇವರೇ, ಸಾಗರ, ಶಿವಮೊಗ್ಗಗಳಲ್ಲಿ ಮಳೆಯಾಗಲಪ್ಪ’ ಎಂದೇ ಪ್ರಾರ್ಥಿಸುತ್ತಾರೆ. ಕಾರಣ, ಆ ಊರುಗಳ ಮಳೆ ಸಂಗ್ರಹವಾಗುವುದು ನಮ್ಮ ತುಂಗಭದ್ರಾ ಡ್ಯಾಂನಲ್ಲೆ.

ಹೀಗಾಗಿ, ಎಲ್ಲೋ ರೈತಪ್ಪ ನಿನ್ನ ಮಳೆ ಮೂಲ ಎಂದು ಹಾಡಿದರೆ, ‘ಶಿವಮೊಗ್ಗ, ಸಾಗರ ಮಳೆಗಾಲ’ ಎಂದೇ ನಮ್ಮ ರೈತಪ್ಪ ಮರುಧ್ವನಿ ಹಾಡಲ್ಲಿ ಉತ್ತರ ಕೊಡುತ್ತಾನೆ. ಇರಲಿ, ಕಳೆದ ಮೂರು ವರ್ಷಗಳ ಮಳೆಯಿಲ್ಲದ ಆ ದಿನಗಳು. ಈ ವರ್ಷ ಅತಿವೃಷ್ಠಿ ರೂಪದಲ್ಲಿ ಸುರಿದು ಅವಾಂತರ ಎಬ್ಬಿಸಿದೆ. ವರ್ಷ ವರ್ಷವೂ ಮಳೆ ಕೊಡು ಎಂದರೆ ದೇವರಿಗೆ, ಆತ ಮೂರು ವರ್ಷದ್ದನ್ನೂ ಒಮ್ಮೆಲೇ ಸುರಿಸಿ ನದಿಗಳ ಜೋಡಣೆಯನ್ನು ವಿಶೇಷವಾಗಿ ಬೆಂಗಳೂರಿನಲ್ಲಿ ರಸ್ತೆಗಳಲ್ಲೇ ಮಾಡಿ ತೋರಿಸಿಬಿಟ್ಟ. ಬೆಂಗಳೂರು ದ್ವೀಪವಾಗಿದೆ. ಹೆಲಿಕಾಪ್ಟರ್‌ಗಳಿಂದ ತಿಂಡಿ ಪೊಟ್ಟಣಗಳನ್ನು ಎಸೆಯುವುದೊಂದೇ ಬಾಕಿ ಪಾಪ!

ಇಂದಿರಾ ಕ್ಯಾಂಟಿನ್‌ಗಳಿಂದ ಅದನ್ನೂ ಮಾಡಿ’ ಅಂತರಿಕ್ಷದಿಂದ ಆಹಾರ ಭಾಗ್ಯ’ ಎಂಬ ಮತ್ತೊಂದು ದರಿದ್ರ ಯೋಜನೆ, ಕ್ಷಮಿಸಿ, ದರಿದ್ರ ಯೋಜನೆ ಸಿದ್ದರಾಮಣ್ಣವರ ಮಂತ್ರಿಮಂಡಲಕ್ಕೆ ಬಂದಿಲ್ಲವೆಂಬುದೇ ನಮ್ಮ ಪುಣ್ಯ. ವಿದ್ವಾನ್ ಕೆ. ಹಯವದನ ಪುರಾಣಿಕರು ಅನುವಾದಿಸಿದ ಶ್ರೀ ಹರಿಕಥಾಮೃತಸಾರ’ ಎಂಬ ಗ್ರಂಥಗಳನ್ನು ಕಳೆದ ಒಂದು ತಿಂಗಳಿಂದ ಓದುತ್ತಿದ್ದೇನೆ. ಇದನ್ನು ನಮ್ಮ ಪಕ್ಕದ ಮಾನವಿ ತಾಲೂಕಿನ ಬಾಗಲವಾಡದಲ್ಲಿ ಜನಿಸಿದ ಶ್ರೀ ಜಗನ್ನಾಥದಾಸರು ಬರೆದಿದ್ದಾರೆ. ಆಸ್ತಿಕ ಸಮಾಜದ ಯಾರ ಮನೆಯೇ ಇರಲಿ, ಬಾಲ್ಯದಿಂದಲೂ ಇದನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸುವುದು ಈ ಭಾಗದಲ್ಲಿನ ಹಿರಿಯರ ವಾಡಿಕೆ. ಆಸ್ತಿಕ ಬ್ರಾಹ್ಮಣರ ಮನೆಗಳಲ್ಲಿಯಂತೂ ಮನೆಗೆ ಯಾರೇ ಬರಲಿ ಅವರ ಮುಂದೆ ತಮ್ಮ ಮಕ್ಕಳನ್ನು ನಿಲ್ಲಿಸಿ ಎಲ್ಲಿ ಹರಿಕಥಾಮೃತಸಾರ ಹೇಳು ಎಂದರೆ ಆ ಮಗು ಹರಿಕಥಾಮೃತಸಾರ ಗುರುಗಳ ಕರುಣೆಯಿಂದಾ ಪನಿತು ಪೇಳುವೆ ಪರಮ ಭಗವದ್ಬಕ್ತ್ರಿದನಾದರದಿ ಕೇಳುವುದು’ ಎಂಬ ಪಲ್ಲವಿಯೊಂದಿಗೆ ಶುರು ಮಾಡುತ್ತವೆ, ಈಗಿನ ಕಾನ್ವೆಂಟ್ ಮಕ್ಕಳು ‘ಜಾನಿ ಜಾನಿ ಎಸ್ ಪಾಪಾ, ಟೆಲ್ಲಿಂಗ್ ಲೈ ನೋ ಪಾಪಾ, ಈಟಿಂಗ್ ಶುಗರ್ ನೋ ಪಾಪಾ’ ಎಂಬಂತೆಯೇ ಇದು. ಆದರೆ, ಇದು ಮುಗಿಯುತ್ತದೆ. ಹರಿಕಥಾಮೃತಸಾರ ಶುರುವಾಗುತ್ತದೆ.

ಇದು ಅರ್ಥವಾದಂತೆ, ಬದುಕಿಗೆ ಅರ್ಥಬರುತ್ತದೆ. ಕೃಷ್ಣ ಗೀತೆಯಲ್ಲಿ ಹೇಳಿದಂತೆ’ ವಿದ್ಯೆ ಎಂದರೆ ಅಧ್ಯಾತ್ಮ ವಿದ್ಯೆಯೊಂದೇ ಎಂದು ಮನವರಿಕೆಯಾಗುತ್ತದೆ. ಹರಿಕಥಾಮೃತಸಾರದ ಬಹುದೊಡ್ಡ ಹಿರಿಮೆ ಎಂದರೆ ಇದು ಕನ್ನಡದಲ್ಲೇ ರಚನೆಯಾದ ಮೊದಲ ಅಧ್ಯಾತ್ಮ ಗ್ರಂಥ, ಎಲ್ಲ ಅಧ್ಯಾತ್ಮ ಗ್ರಂಥಗಳೂ ಸಂಸ್ಕೃತದಿಂದಲೇ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡರೆ, ಈ ಗ್ರಂಥವು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡಿದೆ ಎಂಬುದೊಂದು ಬಹುದೊಡ್ಡ ಹೆಮ್ಮೆ, ಹೆಗ್ಗಳಿಕೆ.ಈ ಗ್ರಂಥದ ‘ಭೋಜನರಸವಿಭಾಗ ಸಂಧಿ’ – 4ರಲ್ಲಿ ಒಂದು ಶ್ಲೋಕದಲ್ಲಿ ನಮ್ಮ ನದಿಗಳ ಬಗ್ಗೆ ಓದಿ ರೋಮಾಂಚನವಾಯಿತು. ಮಳೆಯಾದರೆ ನೀರು, ನದಿಯಾಗಿ ಹರಿಯುತ್ತದೆ. ಸಮುದ್ರ ಸೇರುತ್ತದೆ. ನದಿಯಾಗಿ, ಹಳ್ಳವಾಗಿ ಹರಿಯುವಾಗ ನಾವು ಹಿಡಿದಿಟ್ಟುಕೊಳ್ಳದಿದ್ದರೆ, ಕುಡಿಯಲೂ, ಕೃಷಿಗೂ, ನೀರಿಲ್ಲದೇ ಕಂಗಾಲಾಗುತ್ತೇವೆ ಎಂಬುದಷ್ಟೆ ನಮಗೆ ತಿಳಿದಿರುವ ಪರಿಸರದ ಬಗ್ಗೆ ಮೂವತ್ತೈದು ಮಾರ್ಕ್ಸಿಗೆ ಮೀಸಲಾದ ಜ್ಞಾನ. ಆದರೆ, ನಮಗರಿವಾದಾಗ ಅದ್ಭುತ ರಹಸ್ಯ ಈ ನದಿಗಳಲ್ಲಿ, ಈ ನೀರಿನಲ್ಲಿದೆ. ಜಗನ್ನಾಥದಾಸರು ಹೇಳುತ್ತಾರೆ

‘ಜಾಗರ ಸ್ವಪ್ನಂಗಳೊಳು ವರ ಭೋಗಿಶಯನನು
ಬಹುಪ್ರಕಾರ ವಿಭಾಗಗೈಸಿ ನಿರಂಶಜೀವರ
ಚಿಚ್ಛರೀರವನು ಭೋಗವಿತ್ತು ಸುಷಪ್ತಿಕಾಲದಿ
ಸಾಗರವ ನದಿ ಕೂಡುವಂತೆ, ವಿಯೋಗ ರಹಿತನು
ಅಂಶಗಳನೇಕತ್ರ ವೈದಿಸುವ॥’ ( ಹ.ಕ.ಸಾ. 4ನೇ ಸಂಧಿ)

ಇದರ ತಾತ್ಪರ್ಯವೇನೆಂದರೆ ‘ವಾಯುದೇವ ಸಮುದ್ರದಲ್ಲಿರುವ ಆಯಾ ನದಿಗಳ ನೀರನ್ನು ಸೂರ್ಯಕಿರಣದ ಸಹಾಯದಿಂದ ಮೋಡದ ರೂಪದಿಂದ ಒಯ್ದು ಆಯಾ ಆಯಾ ನದೀ ಪಾತ್ರದಲ್ಲಿ ಸುರಿಸುತ್ತಾನೆ. ತಿರುಗಿ ನದಿಗಳು ಸಾಗರದಲ್ಲಿ ತಮ್ಮ ನೀರನ್ನೆ ಹೋಗಿ ಸೇರುತ್ತವೆ ಹೊರತು ಒಂದು ನದಿಯ ನೀರು ಇನ್ನೊಂದು ನದಿಯನ್ನು ಸೇರುವುದಿಲ್ಲ. ಹರಿಯುವ ನದಿಗಳು ಸಮುದ್ರದ ಕಡೆಗೆ ಹರಿಯುತ್ತಾ ಸಮುದ್ರವನ್ನು ಸೇರಿ, ಜನರ ಸಾಮಾನ್ಯ ದೃಷ್ಟಿಗೆ ಗೋಚರವಾಗದಂತೆ ಸಮುದ್ರದಲ್ಲಿರುವ ಆಯಾ ನದಿಗಳ ಗಂಗಾ, ಯಮುನಾ, ಕಾವೇರಿ, ತುಂಗಾ ನದಿಗಳು ಪ್ರತ್ಯೇಕವಾಗಿಯೇ ಇರುತ್ತವೆ’, ಜತೆಗೆ, ನಿಮ್ಮ ಊರಿನಲ್ಲಿ ನಿಮ್ಮ ಹೊಳೆ, ಹಳ್ಳ, ನದಿಗಳನ್ನು ನೀವು ಅಪವಿತ್ರಗೊಳಿಸಿ, ಮಲಿನಗೊಳಿಸಿ ಕಸಕಡ್ಡಿಗಳನ್ನು ಸುರಿದು ಅಪವಿತ್ರಗೊಳಿಸಿದ್ದರೆ, ಸೂರ್ಯನ ಸಹಾಯದಿಂದ ವಾಯುದೇವರು ಮೋಡಗಳ ರೂಪದಲ್ಲಿ ಆ ಮಲಿನತೆಯನ್ನು ಮತ್ತೆ ನಿಮ್ಮ ಊರಿಗೇ ತಂದು ಮಳೆಯ ರೂಪದಲ್ಲಿ ಸುರಿದು ನಿಮ್ಮ ಊರನ್ನು ಮಲಿನಗೊಳಿಸುತ್ತಾನೆ. ‘ಮಾಡಿದ್ದುಣ್ಣೋ ಮಹರಾಯ, ಕೊಟ್ಟಿದ್ದು ಪಡೆಯೋ ಪುಣ್ಯಾತ್ಮಾ’ ಎಂಬ ಗಾದೆಗಳ ಅರ್ಥ ಇದುವೆ.

ಅದಕ್ಕೆ ನಾನು ಚಿಕ್ಕವನಾಗಿದ್ದಾಗ ಹೊಳೆ,ನದಿ,ಕಾಲುವೆಗಳಲ್ಲಿ ಈಜುವಾಗ ದಂಡೆಯ ಮೇಲೆ ಕೂತ ಹಿರಿಯರು ‘ನೀರಾಗ ಉಚ್ಚಿ ಹೊಯ್ಯಬ್ಯಾಡ್ರಲೆ, ದೇವರು ನಿಮಗ ಅವನ್ನ ಕುಡಿಸ್ತಾನ ನೋಡ್ರಿ’ ಎಂದು ಗದರಿಸುತ್ತಿದ್ದರು. ನೀವು ಮಾಡಿದ ಮಲ, ಮೂತ್ರ, ಕಸ, ಕಡ್ಡಿ ಎಲ್ಲವೂ ನಿಮ್ಮ ಮನೆಗೇ, ನಿಮ್ಮ ಊರಿಗೇ, ನಿಮ್ಮ ಬಾಯಿಗೇ, ನೀವು ಕುಡಿಯುವ ನೀರಲ್ಲೇ ಬರುತ್ತದೆ’ ಎಂಬ ತತ್ವವಿದೇ ಆಗಿತ್ತು. ಕೈಗಾರಿಕೆ, ಕಾರ್ಖಾನೆ, ಧೂಳು, ಕಲ್ಲು, ಎಲ್ಲ ನದಿಗಳಿಗೆ ಬಿಟ್ಟು ನೀರಿನಲ್ಲಿ ‘ಜಲಜಾ ನವ ಲಕ್ಷಾಣಿ ಒಂಬತ್ತು ಲಕ್ಷ ಜೀವಚರಗಳು,ಅಂದರೆ ನೀರಲ್ಲೇ ವಾಸಿಸುವ ಜೀವಿಗಳ ನಾಶಕ್ಕೆ ಕಾರಣವಾಗುವುದಕ್ಕೇ, ಅತಿವೃಷ್ಠಿಗಳಾಗಿ ಊರೆಲ್ಲಾ ನೀರು ನಿಂತು ರೋಗ ರುಜಿನಗಳು ಹಬ್ಬಿ ನೀವು ಕೊಂದ ಆ ಕ್ರಿಮಿಗಳೇ ಡೆಂಘೀ, ಕಾಲರಾ, ಮಲೇರಿಯಾ ಕ್ರಿಮಿಗಳು ನಿಮ್ಮನ್ನು ಬಲಿ ತೆಗೆದುಕೊಳ್ಳುವುದಂತೆ. ಇದು ಸೃಷ್ಟಿಯ ರಹಸ್ಯ ವಿಷ್ಣು ಪುರಾಣವೆಂಬ ಗ್ರಂಥ ಹೇಳುವಂತೆ, ಭಗವಂತನ ಸೃಷ್ಟಿಯಲ್ಲಿ ಏನೇನಿದೆ ಎಂಬುದೇ ನಮಗಿನ್ನು ತಿಳಿಯದೇ ‘ನಾವು ಮಂಗಳದ ಅಂಗಳ ಮುಟ್ಟಿದ್ದೇವೆ’ ಎಂದು ಗರ್ವಿಸುತ್ತೇವೆ. ಕೆಳಗಿನ ಈ ಶ್ಲೋಕ ನೋಡಿ

‘ಜಲಜಾನವಲಕ್ಷಾಣಿ, ಸ್ಥಾವರಾ ಲಕ್ಷ ವಿಂಶತಿ
ಕೃಮಯೋರುದ್ರ ಸಂಖ್ಯಾತಾಃ ಪಕ್ಷಿಣಾಂದಶಲಕ್ಷಕಂ॥
ತ್ರಿಂಶಲ್ಲಕ್ಷಾಣಿ ಪಶವಃ ಚತುರ್ಲಕ್ಷಾಣಿ ಮಾನುಷಾ
ಅಂದರೆ ಭಗವಂತನ ಸೃಷ್ಟಿಯಲ್ಲಿ, ನೀರಿನಲ್ಲಿ 9 ಲಕ್ಷ, ಮರಗಿಡಗಳಲ್ಲಿ 20ಲಕ್ಷ, ಕ್ರಿಮಿಗಳಲ್ಲಿ 11ಲಕ್ಷ, ಪಕ್ಷಿಗಳಲ್ಲಿ 10ಲಕ್ಷ, ಪಶುಗಳು 30ಲಕ್ಷ, ಮನುಷ್ಯರಲ್ಲಿ 4ಲಕ್ಷ, ಜೀವ ಪ್ರಬೇಧಗಳಿವೆಯಂತೆ,
ನೋಡಿದಿರಾ ? ಎಲ್ಲೋ ಅಲ್ಲೊಂದು ಇಲ್ಲೊಂದು ಬ್ಯಾಕ್ಟಿರಿಯಾ ಗುರುತಿಸಿ ‘ಹಾ ಹೊ’ ಎಂದು ಕೂಗಿ ಗದ್ದಲವೆಬ್ಬಿಸಿ, ಒಂದು ಪಕ್ಷಿ ಹಿಡಿದು ತಂದು ಪದ್ಮಶ್ರೀ ಕೊಡಿ, ಒಂದು ರೋಗದ ಹೆಸರು ಗುರುತಿಸಿ ರಾಷ್ಟ್ರ ಪ್ರಶಸ್ತಿ ಕೊಡಿ, ಎನ್ನುವ ನಮಗೆ ಭಗವಂತನ ಈ ಸೃಷ್ಟಿಗಳೆಲ್ಲದರ ಪರಿಚವಿದೆಯೇ? ಇನ್ನೊಂದು ಮಾತು, ಮೇಲೆ ಹೇಳಿದ ಶ್ಲೋಕಗಳಲ್ಲಿರುವ ಎಲ್ಲ ಪ್ರಾಣಿ, ಪಕ್ಷಿ, ಪಶು, ಕ್ರಿಮಿಗಳು ಬೇರಾರೂ ಅಲ್ಲ, ಪಾಪಾದಿ ಕರ್ಮಗಳನ್ನು ಗೈದ ನಮ್ಮ ಪೂರ್ವಜರೇ, ನೀನು ತಿನ್ನಲು ವಧಿಸುವ ಕೋಳಿ, ಕುರಿ, ಹಸು, ಹಿಂದಿನ ಜನ್ಮದ ನಿನ್ನ ಮಕ್ಕಳು, ಮೊಮ್ಮಕ್ಕಳೇ, ಮುಂದೆ ನಿನ್ನ ಮಕ್ಕಳು, ಮೊಮ್ಮಕ್ಕಳು ತಿನ್ನಲು ಕೋಳಿ, ಕುರಿಯಾಗಲಿರುವವನು ನೀನೇ !

ಇದು ಸೃಷ್ಟಿಯ ರಹಸ್ಯ. ಇದು ವಿಜ್ಞಾನಕ್ಕೆ, ವೈಜ್ಞಾನಿಕತೆಗೆ, ಸಂಶೋಧನೆಗೆ ನಿಲುಕುವುದಲ್ಲ, ಪ್ರಯೋಗ ಶಾಲೆಯಲ್ಲಿ ಉತ್ಪಾದಿಸುವುದಲ್ಲ, ಮಾಲ್‌ಗಳಲ್ಲಿ, ಲೈಬ್ರರಿಗಳಲ್ಲಿ ಸಿಗುವುದಲ್ಲ, ಆನ್‌ಲೈನ್ ನಲ್ಲಿ ಬುಕ್ ಮಾಡಿ ತರಿಸಿಕೊಂಡು ಬಿಚ್ಚಿ ನೋಡಿ ಬೆಚ್ಚಿ ಅಳುವುದಲ್ಲ, ಜಗದಿಂದ ದೂರವಾಗಿ ಒಬ್ಬನೇ ಕುಳಿತು ತ್ರಿಕರಣ ಪೂರ್ವಕ ‘ತನ್ನಂತೆ ಇತರರು’ ಎಂದು ಬಗೆದ ಮಹಾನುಭಾವರಿಗೆ ಅಂಗೈಯಲ್ಲಿರುವ ನೆಲ್ಲಿಕಾಯಿಯಷ್ಟೇ ಸ್ಪಷ್ಟವಾಗಿ ತೋರುವ ಸತ್ಯವಿದು.

ವಿಜ್ಞಾನದ ಮೂಲಕ, ತರ್ಕಗಳ ಮೂಲಕ, ಸಂಶೋಧನೆಗಳ ಮೂಲಕ ಹೇಳಿದ್ದೆಲ್ಲವನ್ನು ಶಿಕ್ಷಣದ ಮೂಲಕ ಮಕ್ಕಳಿಗೆ ತುಂಬಿ ತುಂಬಿ ಗುದ್ದಿ ಗುದ್ದಿ ಕಲಿಸಿದ್ದೇವೆ. ಆದರೆ, ಭಾವನಾತ್ಮಕವಾಗಿ ಮಕ್ಕಳು ಜಡರಾಗಿ ಹೋಗಿದ್ದಾರೆ. ಯಾವುದನ್ನೂ ನಂಬದ, ನೆಚ್ಚದ, ಸ್ಥಿತಿಗೆ ತಲುಪಿದ್ದಾರೆ. ‘ನಂಬರು ನೆಚ್ಚರು ಬರಿದೇ ಕರೆಯುವರು ! ಎಂಬ ಬಸವಣ್ಣನ ಕರೆಯಂತೆ ‘ರಕ್ಷಿಸಲು, ಬೆಳೆಸಲು, ಬೇಜಾರು, ಬೇಕೆಂದಾಗ ನೀನು ಇರು ಕಣ್ಮುಂದೆ ಹಾಜರು’ ಎಂಬ ಸೂತ್ರ ಅಳವಡಿಸಿಕೊಂಡು ಎದುರಿಗೆ ಕಂಡುದ್ದೆಲ್ಲವನ್ನೂ ನಮ್ಮ ಸುಖಕ್ಕೆ ಬಳಸಿಕೊಳ್ಳುತ್ತೇವೆ. ನೆಲ, ಜಲ, ಎಲ್ಲವನ್ನೂ ಬೇಕಾಬಿಟ್ಟಿ ಬಳಸಿದ್ದೇವೆ. ಹೀಗಾಗಿ ಬೇಡಿ ತಿನ್ನುವ ಪರಿಸ್ಥಿತಿಯನ್ನ ತಂದುಕೊಂಡಿದ್ದೇವೆ.

ಖಲೀಲ್ ಗಿಬ್ರಾನ್ ಒಂದು ಕಡೆ ಹೇಳಿದ್ದಾನೆ ‘ಆಧುನಿಕ ಪೀಳಿಗೆ ಕೈಯಲ್ಲಿ ಗತಕಾಲದ ಮಣ್ಣಿದೆ, ಭವಿಷ್ಯದ ಬೀಜಗಳಿವೆ. ಆದರೆ ಈ ಪೀಳಿಗೆ ಆ ಮಣ್ಣಿನ ಮೇಲೆ ಸೆಲ್ಫಿ, ವ್ಹೀಲಿಂಗ್, ಕ್ರೌರ್ಯ,ಕೊಲೆ, ಸೇಡಿಗಾಗಿ ಮಣ್ಣಾಗುತ್ತಿದೆ, ಬೀಜಗಳು ಗಾಳಿಗೆ ತೂರಿ ಹೋಗಿದೆ. ಇಷ್ಟುದಿನ ನೀರಿಲ್ಲ, ಮರಗಿಡಗಳನ್ನು ಬೆಳೆಸಿ ಎಂದು ಬೊಬ್ಬಿಟ್ಟೆವು , ಇಂದು , ಎಲ್ಲೆಲ್ಲೂ ನೀರು, ಮರ ಮೈಮೇಲೆ ಬಿದ್ದು ಕಾರು ಜಖಂ ಎನ್ನುತ್ತಿದ್ದೇವೆ. ಸಶಕ್ತವಾದ ಪಾಪ, ಪ್ರಾಕೃತಿಕ ಕೋಪದಿಂದ ಜಗತ್ತನ್ನು ಶಿಕ್ಷಿಸುವುದೆಂದರೆ ಇದೆ ಅನ್ನಿಸುತ್ತಿದೆ. ಅಲ್ಲವೆ?

Leave a Reply

Your email address will not be published. Required fields are marked *

14 + fifteen =

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top