ಮನೆಯೊಳಗ ಹಾವಿರಲಿ, ಹಿಡಿವಾತ ಬರದಿರಲಿ

Posted In : ಅಂಕಣಗಳು, ಪ್ರಾಣೇಶ್ ಪ್ರಪಂಚ್

‘ನೂರು ತಪ್ಪುಗಳಾದವೆಂದರೆ ಚೇಳು ಕಡಿತದೆ, ಸಾವಿರ ತಪ್ಪು ಮಾಡಿದರೆ ಹಾವು ಕಡಿತದೆ’ ಎಂಬ ಮಾತು ನಮ್ಮ ಕಡೆ ಚಾಲ್ತಿಯಲ್ಲಿದೆ. ಇವುಗಳಿಂದ ಕಚ್ಚಿಸಿಕೊಂಡು ನರಳುವವರ ಮುಂದೆ ಕೂತ ಅಜ್ಜಿಯಂದಿರು ‘ನೂರು ತಪ್ಪು ಯಾವ್ಯಾವು ಅಂತ ನೆನೆಸ್ಕೋ, ನೋವು ಕಮ್ಮಿ ಆಗಿ ವಿಷ ಇಳೀತದೆ’ ಅಂತ ಹೇಳಿ ನರಳುವವನ ನೋವನ್ನು ಇನ್ನೂ ಹೆಚ್ಚು ಮಾಡುವುದರ ಜತೆಗೆ ವಿಷ ತಲೆಗೆ ಏರಿ ಇವರ ಸಾವಿರದಾ ಒಂದು ನೂರನೆ ತಪ್ಪು ಇವನು ಸಾಯವುದೇ ಆಗುತ್ತಿತ್ತು. ಆಗೆಲ್ಲ ಕಂತಿ, ತೊಲೆಗಳ ಮಣ್ಣಿನ ಮನೆಗಳು, ಹಾವು, ಚೇಳುಗಳಿಗೆ ‘ಫೈವ್ ಸ್ಟಾರ್’ ಹೊಟೇಲ್‌ಗಳ ಸೌಲಭ್ಯ ಒದಗಿಸುತ್ತಿದ್ದವು. ಎಷ್ಟೋ ಸಾರಿ, ಅಂಗಾತ ಮಲಗಿದಾಗ ರಾತ್ರಿ ಹಾವಿನ ಬಾಲದ ತುದಿ ಮಾತ್ರ ತೊಲೆಗಳಿಂದ ಕಂಡು’ ಅಮ್ಮಾ ಹಾವು’ ಎಂದರೆ, ಅಮ್ಮ ‘ ರಾತ್ರಿ ಹಾವು, ಚೇಳು ಅನಬಾರದು ಆಸ್ತಿಕ, ಆಸ್ತಿಕ ಕರಿಯಪ್ಪಾ ತಾತಾ’ ಅಂದುಕೋತ ಮಲಗಿರಿ ಅವು ಏನೂ ಮಾಡಂಗಿಲ್ಲ’ ಎಂದು ಮಲಗಿಸಿಬಿಡುತ್ತಿದ್ದಳು. ನಮ್ಮ ತಂದೆಯ ತಮ್ಮ ನಾರಾಯಣಾಚಾರ್ಯ, ಆತನನ್ನು ನಾವು ನಾರಾಯಣ ಕಕ್ಕ ಎನ್ನುತ್ತಿದ್ದೆವು.

ಆತ ಹಾವುಗಳನ್ನು ಹೊಡೆಯುವುದರಲ್ಲಿ ಎತ್ತಿದ ಕೈ, ‘ ಆತನ ಕೈಯಾಗೆ ಗರುಡ ಮಚ್ಚೆ ಇದೆ, ಆತನಿಗೆ ಹಾವು ಕಡಿಯಲ್ಲ, ಅಲ್ಲದೇ ಆತನ್ನ ಬಸಿರಿದ್ದಾಗ ನಮ್ಮತ್ತಿಗೆಗೆ ಹಾವು ಚೇಳು ಕಡಿದಿದ್ದರಿಂದ ಆತನಿಗೆ ವಿಷ ಏರಂಗಿಲ್ಲ ಆತನ ಕೈಯಾಗಿನ ಗರುಡ ಮಚ್ಚೆ ನೋಡಿದರೆ ಹಾವಿಗೆ ಕಣ್ಣು ಹೋಗಿಬಿಡ್ತಾವಾ, ಈತ ಏನು ಮಾಡಿದ್ರೂ ಅವು ಸುಮ್ಮನಿರ್ತಾಾವ’ ಎಂದು ಧೈರ್ಯ ಹೇಳುತ್ತಿದ್ದ ನಮ್ಮ ಅಮ್ಮ ಮರುದಿನ ಆತನನ್ನು ಕರೆಸಿ, ತೊಲೆಯೊಳಗೆ ರಾತ್ರಿ ನಾನು ಹಾವಿನ ಬಾಲ ನೋಡಿದ ಜಾಗ ತೋರಿಸುತ್ತಿದ್ದಳು. ಕುರ್ಚಿ ಹಾಕಿಕೊಂಡು ನಿರ್ಭಯವಾಗಿ ಏರಿ, ಜಂತಿ ತೊಲಿಯೊಳಗ ಕೈ ಹಾಕಿ ಕಕ್ಕ ಹಾವಿನ ಬಾಲ ಹಿಡಿದು ಹೊರಗೆಳೆದು ಅದನ್ನು ಹೊಡೆಯುತ್ತಿದ್ದ. ಅದು ಸಿಗದಾಗ ‘ಒಳಗ ಗುದ್ದು ಅಂತ ಅಕ್ಕಿ ಕಾಳು ಮಂತ್ರಿಸಿ ಆ ಗುದ್ದಿಗೆ ಹಾಕಿ, ಆ ಗುದ್ದಿಗೆ ಬಟ್ಟೆ ತುರುಕಿ ಇನ್ನು ಈ ಮನೆಗೆ ಹಾವು ಬರಂಗಿಲ್ಲ’ ಎಂದು ಧೈರ್ಯ ಹೇಳುತ್ತಿದ್ದ.

ಆಗೆಲ್ಲ ಫೋನುಗಳಿರಲಿಲ್ಲ. ಫೋನು ಮಾಡಿದರೆ ಹಾವು ಹಿಡಿಯಲು ಬರುವ ಪರಿಸರ ಸ್ನೇಹಿ ಮೈಸೂರಿನ ಸ್ನೇಕ್ ಶ್ಯಾಂನಂಥವರೂ ಇರಲಿಲ್ಲ. ಈಗ ಇದೊಂದು ಹಾವು ಹಿಡಿದು ಅದನ್ನು ಕೊಲ್ಲದೆ ಮತ್ತೆ ಕಾಡಿಗೆ ಬಿಟ್ಟು ಬರುವವರ ಒಂದು ಸಂಘವೇ ಇರುವುದು ಒಂದು ಸಮಾಧಾನದ ವಿಷಯ. ನಮ್ಮ ಗಂಗಾವತಿಯಲ್ಲೂ ಡಾ. ಎಚ್.ಎನ್ ಶಿರಿಗೇರಿಯವರ ಮಗ ಶ್ರೀ ರಾಘವೇಂದ್ರ ಶಿರಿಗೇರಿ ಈ ಸೇವಾಕಾರ್ಯ ಮಾಡುತ್ತಿದ್ದಾರೆ.ಕೆಲವು ಕಡೆ ಇದನ್ನು ದಂಧೆ ಮಾಡಿಕೊಂಡವರೂ ಇದ್ದಾರೆ. ಅವರೇ ಹಾವು ಬಿಟ್ಟು ಅದನ್ನು ಹಿಡಿಯಲು ಸಾವಿರಾರು ರೂಪಾಯಿ ಕೇಳುವ ಸುಲಭ ಶ್ರೀಮಂತಿಕೆ ಪಡೆಯಲು ಹೋಗಿ ಪೊರಕೆ ಸೇವೆ ತೆಗೆದುಕೊಂಡವರಿದ್ದಾರೆ. ಆಗೆಲ್ಲ ಹಾವು ಸಿಕ್ಕರೆ ಹೊಡೆದು ಕೊಂದೇ ಬಿಡುತ್ತಿದ್ದರು. ವಿಷಜಂತು ಬದುಕಿದ್ದರೆ ಇನ್ನೊಬ್ಬರನ್ನು ಕೊಲ್ಲುತ್ತದೆ ಎಂದು ಅದಕ್ಕೆ ಜಾಮೀನು ಕೊಡದೇ ಗಲ್ಲಿಗೇ ಏರಿಸಿಬಿಡುತ್ತಿದ್ದರು. ಈ ಕಾನೂನು ರಾಜಕಾರಣಿಗಳಿಗೂ ಅಷ್ಟೇ ಆದರೆ ಒಳ್ಳೆಯದೇನೋ ಎನಿಸುತ್ತದೆ ಒಮ್ಮೊಮ್ಮೆ.

ನಮ್ಮ ಗುರುಗಳಾದ ಬೀಚಿಯವರು ಒಂದು ಪ್ರಸಿದ್ಧ ಮಾತನ್ನು ಹೇಳುತ್ತಿದ್ದರು. ‘ ಬಹಳ ದಿನ ಬದುಕಬೇಕೆಂಬ ಹಾವು ಬೀದಿಗೆ ಬರಬಾರದು, ಮರ್ಯಾದೆಯಿಂದ ಬದುಕಬೇಕೆಂಬುವ ಮನುಷ್ಯರಾಜಕಾರಣಕ್ಕೆ ಬರಬಾರದು’ ಎಂದು ಹೇಳುತ್ತಿದ್ದರು. ಹಾವು ಚೇಳು ಇದ್ದ ಮನೆಯೊಳಗೆ ನಿಧಿ ಇರುತ್ತದೆ ಎಂಬ ಮಾತು ಆಗ ಚಾಲ್ತಿಯಲ್ಲಿತ್ತು. ಈಗಿನಂತಾಗಿದ್ದರೆ ಐಟಿ ರೈಡ್ ಮಾಡುವವರು ಹಾವು ಚೇಳುಗಳಿರುವ ಮನೆಗೆ ಮುತ್ತಿಗೆ ಹಾಕುತ್ತಿದ್ದರು. ಜಂತಿ,ತೊಲೆಗಳ ಮಣ್ಣಿನ ಮನೆಗಳು ಹೋಗಿ ಆರ್‌ಸಿಸಿ ಮನೆಗಳು ಬಂದ ಮೇಲೆ ಹಾವು,ಚೇಳು, ತಿಗಣೆಗಳು ಕಡಿಮೆ ಆಗಿ ‘ಡೆಂಗ್ಯೂ’ಸೊಳ್ಳೆಗಳು ಮಾತ್ರ ಹೆಚ್ಚಾದವು. ನಮ್ಮ ಬಾಲ್ಯದ ದಿನಗಳಲ್ಲಿ ಶೇಷಾಚಾರ್ ಎಂಬುವ ನಿಷ್ಟಾವಂತ ತ್ರಿಕಾಲ ಸಂಧ್ಯಾವಂದನೆ, ತ್ರಿಕಾಲ ಪೂಜಾ, ತ್ರಿಕಾಲ ಮಡಿಯಲ್ಲೇ ಇರುತ್ತಿದ್ದವರ ಮನೆಯಲ್ಲಿ ಸದಾ ಚೇಳು, ಹಾವು ಬರುತ್ತಿದ್ದವು. ಮನೆ ತುಂಬಾ ಬಟ್ಟೆ ಗಂಟುಗಳು, ಎಲ್ಲೆಂದರಲ್ಲಿ ಒದ್ದೆ ಪಂಚೆ, ಸೀರೆಗಳು, ದಾನವಾಗಿ ಬಂದ ಮೊರತಾಮ್ರದ ಪಾತ್ರೆಗಳಲ್ಲಿ ಹಾವೋ, ಚೇಳೋ ಖಾಯಂ ಇರುತ್ತಿದ್ದವು. ಅವು ಕಂಡ ಕೂಡಲೇ ಅವುಗಳನ್ನು ಕೊಲ್ಲದ ಆಚಾರರು ಇದ್ದಿಲಿನಿಂದ ಅಲ್ಲೊಂದು ಗರುಡ ಮಚ್ಚೆ ಬಿಡಿಸುತ್ತಿದ್ದರು. ಹೀಗಾಗಿ ಆಚಾರರು ಸುಣ್ಣ ಹಚ್ಚಿದ ಮನೆ ತುಂಬಾ ಇದ್ದಿಲಿನಿಂದ ಬರೆದ ಕರ‌್ರಗಿನ ಗರುಡ ಮಚ್ಚೆಗಳೇ, ನಿಷ್ಠಾವಂತ ವೈದಿಕ ಬ್ರಾಹ್ಮಣನ ಮನೆ ಈ ಗರುಡ ಮಚ್ಚೆಗಳಿಂದ ಮಲೆಯಾಳಿ ಮಾಂತ್ರಿಕನ ಮನೆಯಂತೆ ಕಾಣುತ್ತಿತ್ತು.

ಒಮ್ಮೆಯಂತೂ ಮಾರುದ್ದದ ಇಲಿ ನುಂಗಿದ ಹಾವು ಏಕಾದಶಿ ದಿನ ಆಚಾರರ ಮನೆ ಹೊಕ್ಕಿತು. ನಿರಾಹಾರದಿಂದ ನಿತ್ರಾಣವಾಗಿದ್ದ ಆಚಾರರು ಹಾವನ್ನು ನೋಡಿ ಕುಸಿದು ಹೋದರು. ‘ ಆಚಾರ‌್ರ ಮನ್ಯಾಗೆ ಮತ್ತೆ ಹಾವು ಬಂದದ, ಈ ಸಲ ದೊಡ್ಡ ಹಾವು’ ಅಂತ, ‘ಹೊಸ ಸಿನಿಮಾ ಬಂದದ’ ಅನ್ನೋ ರೀತಿಯಲ್ಲಿ ಓಣಿ ಹುಡುಗರು ಕೂಗುತ್ತಿದ್ದಂತೆಯೇ ಆಚಾರರ ಮನೆ ಮುಂದೆ ಜನ ಸೇರಿದ್ದರು. ಮಡಿ ಹೆಂಗಸು ರಿಂದವ್ವನಂತೂ ‘ ಆಚಾರ್ರು, ಏನ್ ಹಾವು ಗಂಟು ಬಿದ್ದಾವರಿ ನಿಮ್ಮ ಮನೀಗೆ ನೀವು ಶೇಷಾಚಾರ್ ಅನ್ನೊ ಹೆಸರೇ ಬಿಟ್ಟು ಬೇರೆ ಹೆಸರಿಟ್ಟುಕೊಳ್ಳಿ, ವೈಷ್ಣವರು ಅಂತ ಒಂದೂ ಶಿವನ ಫೋಟೋ ಇಲ್ಲ ನಿಮ್ಮ ಮನೀಯೊಳಗೆ, ಕಡೇಮನೆ ಆ ಲಿಂಗಾಯತರ ರುದ್ರಮೂರ್ತಿ ಸದಾ ಅಂತಿರ್ತಾನ, ಹಾವುಗಳು ವಿಷ್ಣು ದೇವರಿಗೆ ಹೆದರೋದಿಲ್ಲಂತೆ, ಮನೆಯಲ್ಲಿ ಶಿವನ ಫೋಟೋ ಇದ್ದರೆ ಅವು ಬರಂಗಿಲ್ಲಂತೆ, ಆಚಾರ್ರಿಗೆ ಹೇಳ್ರಿ ನಾನೇ ಒಂದು ಶಿವನ ಫೋಟೋಕ್ಕ ಕಟ್ಟು ಹಾಕಿಸಿ ಕೊಡ್ತೀನಿ ಅಂದಾನಂತೆ’ ಎಂದು ಹೇಳಿದ್ದು ನೆನಪಾಗಿ, ಆಚಾರರು ಅದಕ್ಕೂ ಒಪ್ಪಿದರು.

ಆದರೆ ಆ ರುದ್ರ ಮೂರ್ತಿ ಒಂದು ಸಣ್ಣ ಶಿವಲಿಂಗದ ಫೋಟೋ ಮೇಲೆ ಹಾಕಿ ಕೆಳಗೆ ಅರ್ಧಕ್ಕೂ ಹೆಚ್ಚು ಜಾಗದಲ್ಲಿ ‘ಪ್ರೀತಿಯ ಕಾಣಿಕೆ ರುದ್ರಮೂರ್ತಿಯವರಿಂದ’ ಅಂತ ಹೆಸರು ಹಾಗೂ ತನ್ನ ಫೋಟೋ ಹಾಕಿಬಿಟ್ಟಿದ್ದ. ನಂತರ ಅನೇಕರು ಮನಿ ಒಳಗೆ ಹೋಗಿ ಸಿಂಬೆ ಸುತ್ತಿ ಮಲಗಿದ್ದ ಹಾವನ್ನು ನೋಡಿ ಗಾಬರಿಯಾಗಿ ಹೊರಬಂದುಬಿಟ್ಟರು. ಹೌಹಾರಿ ಕೂತಿದ್ದ ಆಚಾರರಿಗೆ ಅವರ ಗದ್ದೆ ಕೆಲಸ ಮಾಡುತ್ತಿದ್ದ ಉಡುಚಪ್ಪ ಬರೋದು ಕಾಣಿಸಿತು. ದಷ್ಟಪುಷ್ಟ ಆಳು, ಗಿರಿಜಾ ಮೀಸೆ, ಗುಂಗುರು ಕೂದಲಿನ ಉಡುಚಪ್ಪ ಕೂದಲಿನಷ್ಟೆ ಕಪ್ಪು ಬಣ್ಣ ಹೊಂದಿದ್ದು ಕಾಳ ಯಮನಂತೆ ಇದ್ದ, ಕೈಯಲ್ಲಿ ಎಳನೀರು ಒಂದಷ್ಟು ಅಕ್ಕಿ ಸಮೇತ ಆಚಾರರ ಭೇಟಿಗೆ ಅವರೇ ಹೇಳಿದಂತೆ ಏಕಾದಶಿ ದಿನ ಬಂದಿದ್ದ. ಏಕಾದಶಿ, ಪೂಜೆ, ಊಟ, ಮಡಿಯ ರಗಳೆ ಇರೋದಿಲ್ಲ. ಬೇರೆಯವರಿಗೂ ಊಟದ ವ್ಯವಸ್ಥೆ ಮಾಡುವ ಪ್ರಸಂಗ ಬರುವುದಿಲ್ಲವೆಂಬುದು ಆಚಾರರ ಸನಾತನ ತತ್ವವಾಗಿತ್ತು. ಹೀಗಾಗಿ ಅವತ್ತೇ ಅನನನ್ನು ಕರೆಸಿದ್ದರು.

‘ಉಡುಚಪ್ಪ ಬಂದ, ಉಡುಚಪ್ಪ ಬಂದ, ಅವ ಹಾವ್ ಬಡೀತಾನ’ ಅಂತ ಓಣಿ ಮಂದಿ ಸಡಗರಪಟ್ಟರು, ಕೆಲವರು‘ ಉಡುಚಪ್ಪ ಹಾವು ಹೊರಗ ತಂದು ತೋಡಿಸಿ ಹೊಡಿಯೋ ನೋಡ್ತೀವಿ, ಇಷ್ಟು ದೊಡ್ಡ ಹಾವು ನೋಡೋದಿಕ್ಕೆ ನಮಗೆ ಅಡವಿಗೆ ಹೋಗೋದಾಗೋದಿಲ್ಲ. ಅನಾಯಾಸ ಇದ್ದಲ್ಲಿಗೇ ಆಚಾರ‌್ರಮನಿಗೆ ಬಂದದ’ ಎಂದು ಅಹವಾಲು ಸಲ್ಲಿಸಿದರು. ಮೊದಲೇ ಕುಗ್ಗಿದ್ದ, ಉಪವಾಸದಿಂದ ಸೋತಿದ್ದ ಆಚಾರ್ಯರು‘ ಲೇ ಉಡುಚಪ್ಪ ಹಾವು ಒಯ್ದು ಅವರ ಕೊರಳಾಗ ಹಾಕಲೇ ನೋಡಿ, ಅಪ್ಪಿಿಕೊಂಡು ಮುದ್ದು ಕೊಡವಲ್ಲರ್ಯಾಕೆ’ ಎಂದು ರೇಗಿದರು. ಸೇರಿದ್ದ ಜನ,ತನ್ನ ಬರುವಿಕೆಗೆ ಹಿಗ್ಗಿದ್ದ ಜನರನ್ನು ಕಂಡು ಉಡುಚಪ್ಪ ಒಳ ಹೋಗಿ ಹಾವಿನ ಗಾತ್ರ ನೋಡಿ ಗಾಬರಿಯಾಗಿ ಹೊರಬಂದ. ‘ಇವತ್ತು ಶನಿವಾರ ನಾನು ಹಾವು ಮುಟ್ಟಂಗಿಲ್ಲ, ಹೊಡೆಯಂಗಿಲ್ರಿ’ ಎಂದು ಹೇಳಿ ‘ ಆಚಾರ್ರು, ನಾ ಮುಂದಿನ ಶನಿವಾರ ಬರ್ತಿನ್ರಿ’ ಎಂದು ಹೇಳಿ ಹೊರಟೇ ಬಿಟ್ಟ. ಅದರ ಸುತ್ತ ಗರುಡ ಮಚ್ಚೆ ಬರೆದ ಆಚಾರರು ಸುಮ್ಮನೆ ಕೂತರು. ಓಣಿಯ ಹುಡುಗರು ಸೈಕಲ್ ಏರಿ ಊರಿನ ಮೂಲೆ ಮೂಲೆ ಹುಡುಕಿ ಒಬ್ಬ ಮುಸ್ಲಿಂನನ್ನು ಕರೆತಂದು ಆತ ಅದನ್ನು ಒಯ್ದಾಗ ರಾತ್ರಿ. ‘ ಅದನ್ನು ಕೊಂದು ಬಿಡೋ, ಬಿಟ್ಟ ಬಿಟ್ಟೀಯಂದ್ರ ಅದು ಮತ್ತ ನನ್ನ ಮನೀಗೇ ಬರ್ತದ’ ಅಂತ ಆಚಾರರು ಹಿಂದಿನಿಂದ ಕೂಗಿ ಕೂಗಿ ಹೇಳಿದ್ರು.

ಮನಿ ಒಳಗೆಲ್ಲ ಗರುಡ ಮಚ್ಚೆ ಬರೆದಿದ್ದ ಆಚಾರರು, ಹಾವು ಚೇಳು ಕಡಿದವರಿಗೆ ಅವು ಕಡಿದ ಜಾಗದಲ್ಲಿ, ಆಗಿನ ‘ಪತ್ತಿಪೆನ್’(ಇಂಕ್‌ಪೆನ್)ನ ಹಿತ್ತಾಳೆಯ ನಾಲಿಗೆಯಿಂದ ಗೀರಿ, ಗೀರಿ ಗರುಡ ಮಚ್ಚೆ ಬರೆಯುತ್ತಿದ್ದರು. ಪೆನ್ನಿನ ನಾಲಿಗೆ ಗೀರುವಿಕೆಗೆ ಚರ್ಮಕಿತ್ತು, ರಕ್ತ ಸುರಿದು ಅವನಿಗೆ ಹಾವು ಚೇಳು ಕಡಿದ ನೋವು ಹೋಗಿ ಆ ಗಾಯದ ನೋವೇ ತಿಂಗಳುಗಟ್ಟಲೆ ಇರುತ್ತಿತ್ತು. ಆಗೆಲ್ಲ ಹಾವು ಕಡಿತಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಇಂಜೆಕ್ಷನ್ ಮಾಡುತ್ತಿದ್ದರು. ಹಾವಿನಲ್ಲೂ ಹಲವಾರು ಬಗೆ, ಕ್ಯಾರೆ, ಹಾಮ, ಬಳಿವಡಕ, ನೀರುಹಾವು, ನಾವೆಲ್ಲ ಮಳೆಹುಳುಗಳೇ ಮುಂದೆ ಬಂದು ಬೆಳೆದು ನಾಗರಹಾವಾಗುತ್ತದೆ ಎಂದು ಬಾಟಲಿಯಲ್ಲಿ ಅವನ್ನು ಹಿಡಿದಿಟ್ಟು ದಿನವೂ ಅದನ್ನು ನೋಡುತ್ತಾ ‘ಬುಸ್’ ಎಂದ ಕೂಡಲೇ ಬಿಟ್ಟರಾಯಿತೆಂದು ಕಾಯುತ್ತಿದ್ದೆವು. ಒಮ್ಮೆಯಂತೂ ಹಾಲಿನ ಹಂಪಮ್ಮನ ಮನೆಯ ಹೊರಗಿನ ಕಟ್ಟೆಯ ಕಲ್ಲಿನ ತೂತಿನಿಂದ ಒಂದು ಚೇಳು ಹೊರಬಂತು, ಕಲ್ಲು ತಗೊಂಡು ಜಜ್ಜಿಕೊಂಡೆವು.ಅದರ ಹಿಂದೆಯೇ ಮತ್ತೊಂದರ ಕಥೆ ಮುಗಿಸಿದೆವು. ಮತ್ತೆ ಒಂದು ಕಾಣಿಸಿಕೊಂಡಿತು. ಹೀಗೆ ಆ ಸಂದಿಯಿಂದ ಹೈದರಾಲಿ ಸೈನಿಕರು ಬಂದಂತೆ ಒಂದೊಂದೇ ಬಂದ ಚೇಳುಗಳನ್ನು ಹೊರ ತೆಗೆದೆವು. ಹೀಗೆ ಬಂದ ಚೇಳು ಅರವತ್ತಕ್ಕೂ ಹೆಚ್ಚು ಇದ್ದವು. ಕಟ್ಟೆ ಕೆಳಗೆ ನಿಧಿ ಇದೆ ಅದಕ್ಕೆ ಇಷ್ಟು ಚೇಳು ಇವೆ ಎಂದು ಹಂಪಮ್ಮನನ್ನು ನಂಬಿಸಿ ಇಡೀ ಕಟ್ಟೆಯನ್ನು ಕೆಡವಿ, ತೆಗೆದು ಹುಡುಕಿದರೆ ಒಂದೂ ಇಲ್ಲ! ಕಟ್ಟೆ ಹಾಳಾದಕ್ಕೆ ಹಂಪಮ್ಮ ನಮಗೆಲ್ಲ ‘ಚೇಳು ಕಡಿದೇ ನೀವೆಲ್ಲ ಸಾಯಿರಿ’ ಎಂದು ಶಪಿಸಿದಳು.

ಅಂತಾರಾಷ್ಟ್ರೀಯ ಖ್ಯಾತಿಯ ಮೈಸೂರ್ ಸ್ನೇಕ್ ಶ್ಯಾಂನಿಂದ ಹಿಡಿದು ನಮ್ಮೂರಿನ ಶಿರಿಗೇರಿ ರಾಘವೇಂದ್ರನವರೆಗೆ ಅನೇಕ ಯುವಕರು ಹಾವು ಹಿಡಿದು ಜನರ ಭೀತಿ ತೊಲಗಿಸುವ ಕೆಲಸಕ್ಕೆ ಜೀವದ, ಅಪಾಯದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಫಲಾಪೇಕ್ಷೆ ಇಲ್ಲದೇ ಯುವಕರಿಗೆ ಈ ಕಲೆಯನ್ನು ಕಲಿಸುತ್ತಿದ್ದಾರೆ. ಇಂಥವರಿಗೆ ಸಂಘ ಸಂಸ್ಥೆಗಳಿಂದ ಗೌರವ ಸಲ್ಲಬೇಕು. ಹಾವು ಕಚ್ಚಿದವರಿಗೆ ಶೀಘ್ರ ಚಿಕಿತ್ಸೆ ಸೌಲಭ್ಯ ಸಿಗುವಂತಾಗಬೇಕು. ಹಾವು ಹಿಡಿಯಲು ಬರುವ ಸಮಾಜ ಸೇವಾಕರ್ತರಿಗೆ ಗೌರವ ಕೊಡಬೇಕು. ಹಾವು ಹಿಡಿಯಲು ಹೋಗುವಾಗ ಕೆಲವು ಮನೆಗಳವರು ಆಡುವ ಮಾತು, ನಡೆದುಕೊಳ್ಳುವ ರೀತಿಗಳನ್ನು ಶಿರಿಗೇರಿ ರಾಘವೇಂದ್ರ ಅನುಭವ ರೂಪದಲ್ಲಿ ಪ್ರಕಟಿಸಬೇಕು. ಅದು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗುತ್ತದೆ. ಹಾವು ಅರಿತು ಹಿಡಿಯುವವನಿಗೆ ಹೋಮ, ಅದೇ ಹಾವು, ಮರೆತು ಮುಟ್ಟುವವನಿಗೆ ತಂದೀತು ಸಾವು. ಈ ದಿಸೆಯಲ್ಲಿ ತರಬೇತಿ ಶಿಬಿರಗಳು ನಡೆಯಬೇಕು. ತರಬೇತಿ ಪಡೆದವರು ಇದನ್ನೂ ಒಂದು ಅಂಜಿಸಿ, ಸುಲಿಯುವ ದಂಧೆ ಮಾಡಿಕೊಳ್ಳದೇ, ಸೇವೆಯ ಸಾಧನ ಮಾಡಿಕೊಳ್ಳಬೇಕು. ಅದು ಬಿಟ್ಟು ಹಾವಿಗಿಂತ ಹಾವು ಹಿಡಿಯುವವರಿಗೇ ಅಂಜುವಂತಾಗಬಾರದು. ‘ಮನೆಯೊಳಗೆ ಹಾವೇ ಇರಲಿ; ಹಿಡಿಯುವಾತನೇ ಒಳಗೆ ಬರದಿರಲಿ’ ಎಂಬ ನಾಣ್ಣುಡಿ ಜಾರಿಗೆ ಬರದಿರಲಿ.

Leave a Reply

Your email address will not be published. Required fields are marked *

4 × three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top