ಬೆಳಗಾವಿಯ ಕುಂದ ಹಾಸ್ಯ ಕೂಟವೆಂಬ ಕಂದ

Posted In : ಅಂಕಣಗಳು, ಪ್ರಾಣೇಶ್ ಪ್ರಪಂಚ್

ನಾನು ನಗಿಸಲು ಶುರುಮಾಡಿದ ಘಳಿಗೆ ಚೆನ್ನಾಗಿದೆಯೇನೋ. ಸಾಕು ಸಾಕೆನಿಸುವಷ್ಟು ಕಾರ್ಯಕ್ರಮ, ರೋಸಿಹೋಗುವಷ್ಟು ಜನಪ್ರಿಯತೆ, ಉರಿದು ಬೀಳುವಷ್ಟು ಟಿ.ವಿಯಲ್ಲಿ ಮೇಲಿಂದ ಮೇಲೆ ನನ್ನ ಮಾತು ಮುಖಗಳ ಪ್ರಸಾರದಿಂದಾಗಿ(ನನಗೇ ಉರಿದು ಬೀಳುವಂತಾಗಿದೆ ಎಂದರೆ ನನ್ನನ್ನು ಕಂಡರೆ ಆಗದವರಿಗೆ ಅದೆಷ್ಟು ಉರಿದು ಬೀಳುವಂತಾಗಿರ ಬೇಡ ಪಾಪ!) ನನಗೆ ಶುರು ಮಾಡಿದ ಟೈಮ್, ಘಳಿಗೆ ಬಗ್ಗೆ ಕುತೂಹಲವಾಗಿದೆ. ಯಾವ ಜ್ಯೋತಿಷಿಯೂ ತೆಗೆದು ಹೇಳಿದ ವೇಳೆ, ಮುಹೂರ್ತ ಅದಲ್ಲ. ಹೀಗೆ ಆದರೆ ಹೇಗೆ ಎಂಬ ಹತಾಶ ಘಳಿಗೆ ಅದು 8-12-1994. ಮೊದಲ ಹಾಸ್ಯಸಂಜೆ, ನನ್ನೂರು ಗಂಗಾವತಿಯ ರಾಯರ ಓಣಿಯಲ್ಲಿರುವ ಪುಟ್ಟ ಎಂಬ ಐವತ್ತು ಅರವತ್ತು ಜನರು ಸೇರದ ಸಭೆ.

ಸಂದರ್ಭ ಬೀಚಿಯವರ ಪುಣ್ಯ ತಿಥಿ ಆಚರಣೆ, ಅವರ ಪುಸ್ತಕ ಮುಂದಿಟ್ಟುಕೊಂಡೇ ಅದರಲ್ಲಿನ ಸ್ವಾರಸ್ಯ ಪ್ರಸಂಗಗಳನ್ನೆ ಓದುತ್ತಿದ್ದೆ ಅಷ್ಟೆ. ಕತ್ತೆತ್ತಿ ಜನರನ್ನು ನೋಡಿದರೆ ಸಭಾ ಕಂಪ, ನಾಲಿಗೆ ಒಣಗುತ್ತಿತ್ತು. ಆಗ ವರ್ಷಕ್ಕೆ ಐದೋ, ಆರೋ ಕಾರ್ಯಕ್ರಮಗಳಷ್ಟೆ ‘ನೀವು ಬಾಯ್ಲಲೇ ಹೇಳ್ರಿ ಓದೋದಾದ್ರೆ ನಾವೇ ಓದಿಕೋತೀವಿ, ಅದಕ್ಕೆ ನೀವ್ಯಾಕೆ?’ ಎಂದು ಜನ ಛೇಡಿಸಲಾರಂಭಿಸಿದರು. ಓದಿಕೊಂಡು, ಕಂಠಪಾಠಮಾಡಿ ಹೇಳಲಾರಂಭಿಸಿದೆ, ಹೀಗೆ ಕೆಲವರ್ಷ ನಡೆಯಿತು. ಗಂಗಾವತಿ ಊರುಗಳ-ಹಳ್ಳಿಗಳಿಂದ ಸಣ್ಣಗೆ ಕರೆ ಶುರುವಾದವು, ನಾನೇ ಸಾಹಿತ್ಯ ಬಳಗದವತಿಯಿಂದ ಬೀಚಿ ಪುಣ್ಯ ತಿಥಿ ಆಚರಿಸುತ್ತಿದ್ದೆ.

ಇದನ್ನು ನೋಡಿ ಜೆ.ಕೆ.ಶ್ರೀನಿವಾಸ ಸಿಂಧನೂರಲ್ಲಿ ಬೀಚಿ ಬಳಗ ಕಟ್ಟಿದರು. ಅದರ ಉದ್ಘಾಟನೆಗೆ ಬೆಳಗಾವಿಯ ಖ್ಯಾತ ಹಾಸ್ಯ ಸಾಹಿತಿ ಅನಂತ ಕಲ್ಲೋಳ್‌ರನ್ನು ಕರೆಸಿದರು. ಅವರ ಅಧ್ಯಕತೆಯಲ್ಲಿ ನಾನು ಮುಖ್ಯ ಅತಿಥಿ ಅದು 7-4-1996. ಅಲ್ಲಿ ನನ್ನ ಮಾತು ಕೇಳಿದ ಅನಂತ ಕಲ್ಲೋಳರು ರಾಜ್ಯೋತ್ಸವ ಕಾರ್ಯಕ್ರಮದ ಅತಿಥಿಯಾಗಿ ಬೆಳಗಾವಿಯ ಕ್ರಿಯಾಶೀಲ ಬಳಗ ಸಂಸ್ಥೆಯವರಿಗೆ ನನ್ನನ್ನು ಕರೆಸಲು ಅದರಂತೆ 1-11-1996 ರಂದು ಮೊದಲ ಬಾರಿಗೆ ಬೆಳಗಾವಿಗೆ ಕಾಲಿಟ್ಟೆ.

ಇದು ಸಣ್ಣಮಾತಲ್ಲ, ಹಿರಿಯ ಸಾಹಿತಿ ಶ್ರೀಅನಂತ ಕಲ್ಲೋಳ ತಾವು ಮಾತುಗಾರರಾಗಿದ್ದರೂ ನನ್ನಂಥ ಕಿರಿಯನನ್ನು ಅಲ್ಲಿಗೆ ಕರೆಸಿಕೊಂಡರು ನನ್ನನ್ನು ಹೊಗಳಿ, ಹುರಿದುಂಬಿಸಿ ಮಾತನಾಡಲು ಬೆಳಗಾವಿ ಜನರ ಮುಂದೆ ನಿಲ್ಲಿಸಿದರು. ಮರಾಠಿ ಹಾಸ್ಯ ಕೇಳಿದ ಬೆಳಗಾವಿ ಜನ, ಕಥಾಕಥನ ಎಂಬ ಶೈಲಿ ಮಾತುಗಾರರನ್ನು ಕಂಡಿದ್ದ ಬೆಳಗಾವಿ ಜನ ನನ್ನ ಬೀಚಿಯವರ ವಿಚಾರಗಳಿಗೂ ಬಿದ್ದು ಬಿದ್ದು ನಕ್ಕರು. ಬೀಚಿ ಸಾಹಿತ್ಯದ ಹೂರಣವಿಲ್ಲದಿದ್ದರೆ ನನ್ನ ಬೆಳಗಾವಿಗೆ ನಾನು ಇಲ್ಲಿಯವರೆಗೂ ಐವತ್ತು ಬಾರಿ ಹೋಗಲು ನನ್ನ ಕಾಲಿಗೆ, ನಾಲಿಗೆಗೆ ಶಕ್ತಿ ತುಂಬುತ್ತಿರಲಿಲ್ಲ. ಬೀಚಿ ಸಾಹಿತ್ಯ, ಕಲ್ಲೋಳರ ಸ್ನೇಹಪರತೆ ನನ್ನನ್ನು ಇಂದಿನವರೆಗೂ ಬೆಳಗಾವಿ ಹಾಸ್ಯ ಪ್ರಿಯರ ಹೃದಯ ಸಿಂಹಾಸನದಲ್ಲಿ ನೆಲೆಯೂರಿಸಿವೆ. ಆ ಮೇಲೆ ಬಿ.ಎಸ್.ಗವಿಮಠ, ಜಿನದತ್ತ ದೇಸಾಯಿ, ಕೆಎಲ್‌ಇ ಸಂಸ್ಥೆಗಳು, ಗೋಗಟೆ ಕಾಲೇಜಿನ ಡಾ. ಡಿ.ಎಚ್.ರಾವ್, ಹಲವಾರು ಹಿರಿಯರು ಕರೆಸಿ ಕರೆಸಿ ಕೇಳಿ ಹಿಗ್ಗಿದರು.

13-04-2001ರಲ್ಲಿ ತಲೆಬೇಕು ಪುಸ್ತಕ ಬಿಡುಗಡೆಗೆ ಕರೆಸಿದವರೇ ಈ ವಾರದ ಲೇಖನದ ಕಥಾನಾಯಕ. ಮಧುಕರ್ ಇವರ ನನ್ನ ಸ್ನೇಹ ಸರಿ ಸುಮಾರು 20 ವರ್ಷದ್ದು. ಸ್ನೇಹಜೀವಿ, ಸರಳತೆ, ಮೆದುಮಾತು, ಕೇವಲ ಸೌಜನ್ಯದಿಂದಲೇ ಕಾರ್ಯಕ್ರಮಗಳಿಗೆ ಒಪ್ಪಿಸಿ ಅದ್ಭುತ ಪ್ರೇಕ್ಷಕರನ್ನು ಸೇರಿಸಿ ಸ್ಮರಣೀಯ ಕಾರ್ಯಕ್ರಮಗಳನ್ನು ಅತಿಥಿಗಳಿಗೆ ಕೊಡಿಸುವ ಕುಶಲಿ ಸಂಘಟಕ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬೆಳಗಾವಿಯಲ್ಲಿ ಗುಂಡೇನಟ್ಟೆ ಎಂದರೆ ಕಡಿಮೆ ಬಜೆಟ್ಟಿನಲ್ಲಿ ರಾಷ್ಟ್ರಪ್ರಶಸ್ತಿ ಪಡೆಯುವಂಥ, ಬ್ಲಾಕ್ ಆ್ಯಂಡ್ ವೈಟ್ ಸಿನಿಮಾ ತೆಗೆಯುವ ನಿರ್ಮಾಪಕ ಕಂ ನಿರ್ದೇಶಕ ಇದ್ದಂತೆ. ನಾಗತಿಹಳ್ಳಿ ಚಂದ್ರಶೇಖರ, ಗಿರೀಶ್ ಕಾಸರವಳ್ಳಿ, ಸತ್ಯು, ಪುಟ್ಟಣ್ಣಕಣಗಾಲರ ಸೇರಿಸುವಂಥವರು.

ಒಬ್ಬ ನಟ ರಾಷ್ಟ್ರ ಪ್ರಶಸ್ತಿ ಸಿನಿಮಾದಲ್ಲಿ ನಟಿಸಿ ಪ್ರಶಸ್ತಿ ಪಡೆದನೆಂದರೆ ಹೇಗೆ ಆಮೇಲೆ ಕಲರ್ ಸಿನಿಮಾಗಳಲ್ಲಿ, ಗ್ಲಾಮರ್ ಸಿನಿಮಾಗಳಲ್ಲಿ ಖ್ಯಾತನಾಗುತ್ತಾನೆಯೋ ಹಾಗೆಯೇ ಪಂಢರಿಬಾಯಿ ಜತೆ ಬೇಡರ ಕಣ್ಣಪ್ಪ ಮಾಡಿದ ರಾಜಕುಮಾರ ಮುಂದೆ ಹಿಂದಿ ನಟಿಯರಾದ ರೇಖಾ, ಜ್ಯೂಲಿಲಕ್ಷ್ಮೀ ಹಾಗೂ ಜಮುನಾ, ಪದ್ಮಪ್ರಿಯಾ ರಂಥ ನಟಿಯರ ಜತೆ ಮಿಂಚಲಿಲ್ಲವೇ? ಅಂಥ ಯೋಗವನ್ನು ಸಾಹಿತಿಗಳಿಗೆ ಸಾಹಿತ್ಯಿಕ ರಂಗದಲ್ಲಿ ಕೊಡುವ ನಿರ್ದೇಶಕ-ನಿರ್ಮಾಪಕ ಶ್ರೀ ಗುಂಡೇನಟ್ಟಿ ಮಧುಕರ್. ನನಗೂ ಇದೇ ಅನುಭವವೇ. ಇವರು ಮೊದಲ ನನ್ನ ಕಾರ್ಯಕ್ರಮ ಪುಟ್ಟದಾದ ಸಾಹಿತ್ಯ ಭವನದಲ್ಲಿ ಅಲ್ಲಿಂದ ಮುಂದೆ ಬೆಳಗಾವಿಯ ಜೀರಿಗೆ ಸಭಾಂಗಣದಂತಹ ಸಭೆಗಳಲ್ಲಿಯೇ ನಾನು ಹಲವಾರು ಕಾರ್ಯಕ್ರಮಗಳನ್ನು ಕೊಟ್ಟೆ. ನನಗೂ ಇವರಿಗೂ ಇರುವ ಸಮಾನ ಅಭಿರುಚಿ ಎಂದರೆ ಇವರು ಬೀಚಿಯವರ ಅಪ್ಪಟ ಅಭಿಮಾನಿ.

ಬೆಳಗಾವಿಯ ತಮ್ಮ ಮನೆಯ ಮುಂದೆ ಇವರು ಜೀವನೋಪಾಕ್ಕಾಗಿ ನಡೆಸುತ್ತಿದ್ದ ಎಸ್.ಟಿ.ಡಿ. ಬೂತ್‌ಗೆ ಬೀಚಿ ಡಾಯಲಿಂಗ್ ಸೆಂಟರ್ ಎಂದು ಹೆಸರಿಟ್ಟಿದ್ದರು. ಪ್ರಾರಂಭದ ದಿನಗಳಲ್ಲಿ ಇವರ ಮನೆಯಲ್ಲಿಯೇ ನಾನು ಉಳಿದು ಕೊಂಡದ್ದೂ ಉಂಟು. ಸಣ್ಣ ತಮ್ಮ ನಯ ವಿನಯಗಳಿಂದ ಅಪಾರ ಸಾಹಿತ್ಯ ಆಸಕ್ತರನ್ನು ಕಲೆಹಾಕಿ ಸಂಘಟನೆ ಕಟ್ಟಿ ಬೆಳಗಾವಿಯಲ್ಲಿ ಕನ್ನಡದ ಉಳಿವಿಗಾಗಿ ಗುಂಡೇನಟ್ಟಿ ಇಂದಿಗೂ ಅಹರ್ನಿಶಿ ದುಡಿಯುತ್ತಿದ್ದಾರೆ. ಭುವನೇಶ್ವರಿ ಹೆಗಡೆ, ಡುಂಢಿರಾಜ್, ನಟ ವಿಷ್ಣುವರ್ಧನ್ ನಂಥವರಿಂದ ಹಿಡಿದು ನನ್ನಂಥವನವರೆಗೂ ಆದರ, ಆತಿಥ್ಯ, ಸ್ಥಳೀಯ ಪತ್ರಿಕೆಗಳಿಗೆ ಸಂದರ್ಶನ, ವೇಣುಧ್ವನಿ ಎಂಬ ಸಮುದಾಯ ಬಾನುಲಿ ಕೇಂದ್ರಕ್ಕೊಂದು ಮಾತುಕತೆ ಮಾಡುತ್ತಾ ಬಂದಿದ್ದಾರೆ.

ಇವೆಲ್ಲರ ಫಲವಾಗಿ ಹಾಸ್ಯಕೂಟ ಎಂಬ ಸಂಘಟನೆಯೊಂದನ್ನು ಆರಂಭಿಸಿದ್ದಾರೆ. ಹಿರಿಯ ಪತ್ರಕರ್ತ ಎಲ್.ಎನ್ ಶಾಸ್ತ್ರೀಯವರೇ, ಬೀಚಿಯವರ ದಾಸಕೂಟ ಪ್ರೇರಣೆಯಿಂದಾಗಿ ಇದಕ್ಕೆ ನಗೆಕೂಟ ಎಂದು ನಾಮಕರಣ ಮಾಡಿದ್ದಾರೆ. ಈಗಾಗಲೇ ಐವತ್ತರ ಮೇಲ್ಪಟ್ಟು ಕಾರ್ಯಕ್ರಮ, ಹತ್ತಿರ ಹತ್ತಿರ ಐದನೆಯ ವರ್ಷಕ್ಕೆ ಕಾಲಿಡುತ್ತಿದೆ. ಇದರ ಹಿಂದೆ ಪ್ರೊ. ಜಿ.ಕೆ.ಕುಲಕರ್ಣಿ, ಅಶೋಕ ಮಳಗಲಿ ಅರವಿಂದ ಹುನಗುಂದ, ಹೀಗೆ ಹಾಸ್ಯಪ್ರಿಯ ಉತ್ಸಾಹಿ ಹಿರಿಯರ ತಂಡವೇ ಇದೆ. 2014ರ ಏಪ್ರಿಲ್ 12 ರಂದು ಆರಂಭವಾಗಿರುವ ಈ ನಗೆ ಕೂಟ ಸ್ಥಳೀಯ ಹಾಗೂ ಬೆಳಗಾವಿಯ ಗ್ರಾಮಾಂತರ ಕವಿ, ಲೇಖಕ, ಸಾಹಿತಿಗಳಿಗೆ ತಾಲಿಮಿನ ಕೇಂದ್ರವಾಗುತ್ತಿದೆ.

ಪ್ರತಿ ತಿಂಗಳ ಎರಡನೆ ಒಂದೊಂದು ವಿಷಯ ಚರ್ಚಿಸುವ ಈ ಸಹೃದಯ ಸತ್ಸಂಗಿಗಳು ವಿಷಯದ ಆಯ್ಕೆಯಲ್ಲೂ ಜಾಣತನ, ವಿಟ್ ಆ್ಯಂಡ್ ವಿಸ್‌ಡಂ ಸೇರಿಸುವ ಆಕರ್ಷಕ ಶೀರ್ಷಿಕೆ ಕೊಟ್ಟು ಜನರನ್ನು ಹಾಸ್ಯಕೂಟಕ್ಕೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉದಾಹರಣೆಗೆ ಸೆಪ್ಟೆಂಬರ್ ತಿಂಗಳ ಐದನೇ ತಾರಿಖಿನಂದು ಬರುವ ಶಿಕ್ಷಕ ದಿನಾಚರಣೆ ನಿಮಿತ್ತ ವಿಷಯದ ಶೀರ್ಷಿಕೆ ತಲೆ ಕೆಡಿಸಿ ಕೊಳ್ಳುವಂಥಹುದಲ್ಲ ಅಗದೀ ಸರಳವಾಗಿ ಮತ್ತೇನು ಗುರು? ಎಂಬ ವಿಷಯ. ಇಲ್ಲಿ ಗುರುವಿನ ಕಾಲಿಗೆ ಎರಗುವುದರಿಂದ ಹಿಡಿದು ಗುರುವಿನ ಕಾಲೆಳೆಯುವವರೆಗೂ ಏನು ಮಾತನಾಡಬಹುದು.

ಇನ್ನು ಮಕ್ಕಳ ದಿನಾಚರಣೆ ಹಾಗೂ ಮಧುಮೇಹಿಗಳ ದಿನಾಚರಣೆಯ ಎರಡೂ ನವೆಂಬರ್ ತಿಂಗಳಲ್ಲಿ ಬರುವುದರಿಂದ ಆ ತಿಂಗಳ ವಿಷಯ ಮಧು-ನಗು-ಮಗು. ಮಹಿಳಾ ದಿನಾಚರಣೆ ಸಂದರ್ಭದಲ್ಲಿನ ವಿಷಯ ಎಲ್ಲರಂಥವನಲ್ಲ ನನ ಗಂಡ, ಮಡದಿಯ ಮಾತು ಕೇಳ ಬೇಕೆ? ಬೇಡವೆ? ಇತ್ಯಾದಿ. ಈ ಭಾಗದ ಉದಯೋನ್ಮುಖ ಕಲಾವಿದರಿಗೆ ಇದೊಂದು ವರದಾನ ವೇದಿಕೆಯಾಗಿದೆ. ಇಲ್ಲಿ ಐದು ನಿಮಿಷಗಳು ಮಾತ್ರ ಅವಕಾಶ ಕೇಳಿ ಬಂದ ಬೈಲ ಹೊಂಗಲದ ಎಂ.ಬಿ.ಹೊಸಳ್ಳಿ, ಬೆಳಗಾವಿ ಜಿ.ಎಸ್.ಸೋನಾರ್, ರಾಜೇಂದ್ರ ಭಂಡಾರಿ ರಾಜ್ಯಮಟ್ಟದಲ್ಲಿ ಬೆಳೆದು ನಿಂತಿದ್ದಾರೆ.

ಜಂಜಡದ ಹಳವಂಡದ ಅಜ್ಞಾನಿಗಳೇ ಹೆಚ್ಚಾಗುತ್ತಿರುವ ಈ ದಿನಗಳ ನಗುತ್ತಾ, ನಗಿಸುತ್ತಾ ಜನರನ್ನು ಹಗುರ ಮಾಡುತ್ತಿರುವ ಬೆಳಗಾವಿಯ ಹಾಸ್ಯಕೂಟದಂತಹವು ಮಾವು, ಬೇವಿನ ಮರಗಳಂತೆ ಬೆಳೆದು ಹಬ್ಬಬೇಕು. ಇಂಥಹ ಸಂಘಟನೆಗಳಿಗೆ ಐದಲ್ಲ, ಐವತ್ತಲ್ಲ ಐದುನೂರು, ವರ್ಷವಾಗಬೇಕು. ಇಂಥ ಸಂಘಟನೆಗಳು, ಗುಂಡೇನಟ್ಟಿಯಂಥ ಸಂಘಟಕರು ಇರುವ ಈ ನೆಲದಲ್ಲೇ ನಗುವುದಕ್ಕೂ ಯೋಚಿಸುವ, ನಕ್ಕರೆ ಅಪಮಾನವಾಗುತ್ತದೆ ಎಂದು ಭಾವಿಸುವ ಪಶುಗಳೂ ಇವೆ ಎಂಬುದು ನನಗೆ ಆಶ್ಚರ್ಯ ನೀಡುತ್ತದೆ.  ವ್ಯತಿರಿಕ್ತವಾದ ಇನ್ನೊಂದು ಅನುಭವ ಅದೊಂದು ಊರು ಅಲ್ಲೊಂದು ಕುಟುಂಬ ಎಲ್ಲರೂ ಅವರ ಮನೆಯಲ್ಲಿ ರ್ಯಾಂಕ್, ಗೋಲ್ಡಮೆಡಲ್ ಪಡೆದ ಬುದ್ಧಿ(?)ವಂತರೇ, ಕೆಂಪಗೆ, ಆಕರ್ಷಕ ಮೈಕಟ್ಟಿನ ಸುಂದರಕಾಯದ ಹೆಣ್ಣು, ಗಂಡು ಮಕ್ಕಳಿರುವ ತುಂಬು ಕುಟುಂಬ.

ತಂದೆ ದೊಡ್ಡ ಸರಕಾರಿ ಉದ್ಯೋಗಿ, ಅಧಿಕಾರವನ್ನು ಎಷ್ಟು ದುರ್ಬಳಕೆ ಮಾಡಿಕೊಳ್ಳಬೇಕೋ ಅದಕ್ಕಿಂತ ಹೆಚ್ಚೇ ದುರ್ಬಳಕೆ ಮಾಡಿ ಹಣಗಳಿಸಿ ಬೃಹತ್ ಬಂಗಲೆ ಕಟ್ಟಿಸಿದ್ದರು. ಎಂಟು ಬೆಡ್ ರೂಂಗಳಿರುವ ಮನೆ ಅದು, ಪ್ರತಿಯೊಬ್ಬರಿಗೂ ಅವರದೇ ಸ್ವಂತ ಕಾರು, ಒಂದೇ ಮನೆಯಲ್ಲಿ ಎಂಟು ಟಿ.ವಿ. ಪಾಯಿಖಾನೆ, ಒಬ್ಬರದನ್ನು ಇನ್ನೊಬ್ಬರು ಬಳಸುವಂತಿಲ್ಲ, ಪ್ರತಿಯೊಬ್ಬರದೂ ಅವರವರದೇ ಸೋಪು, ಪೇಸ್ಟು, ಶೂಸು, ಚಪ್ಪಲಿ-ಪ್ರತ್ಯೇಕ, ಸಹಬಾಳ್ವೆ ಎಂಬುದೇ ಇಲ್ಲ. ಮುಳ್ಳುಗಳಂತೆ ತಂದೆ ಎಂಬ ಜಾಲಿಗಿಡದಲ್ಲಿ ಬೆಳೆದಿದ್ದರಾಗಲಿ ಪ್ರತಿಯೊಬ್ಬರೂ ತುದಿಯೂ ಚೂಪು, ಇನ್ನೊಬ್ಬರಿಗೆ ಚುಚ್ಚಿಕೊಳ್ಳುತ್ತಿದ್ದರು.

ಒಂದೇ ಗಿಡದ ಹೂವುಗಳಿಂತರಿದೆ, ಒಂದೇ ಗಿಡದ ಮುಳ್ಳುಗಳಿದ್ದಂತೆ ಇದ್ದರು. ಆದರೆ, ಅವರ ಮನೆಯಲ್ಲಿ ಇರಲಾದ ವಸ್ತುವೆಂದರೆ ನಗು ಒಂದೇ. ಯಾರ ಮುಖದಲ್ಲೂ ನಗುವಿಲ್ಲ, ನಗುವೆಂದರೆ ಗೊತ್ತೇ ಇಲ್ಲ. ಇವರೆಲ್ಲರ ಪಿತಾಮಹ-ತಂದೆ ಎಂಬ ಮಹಾನುಭಾವ ಸರಕಾರಿ ನೌಕರಿ ದುಡ್ಡು-ಬಂಗಾರವನ್ನು ಬಾಚಿ ಬಾಚಿ ಬಳಿದು ಸಂಗ್ರಹಿಸಿದ. ದೇವರ ಗುಡಿಯಲ್ಲೇ ಸಿಕ್ಕ ಒಂದು ರೂಪಾಯಿಯನ್ನು ಹುಂಡಿಗೆ ಹಾಕದೆ ಮನೆಗೇ ತಂದು ಹಾಕಿದ. ನಿವೃತ್ತಿಯಾದ ಕೂಡಲೇ ಅದೇನು ಅಜ್ಞಾನ ಉದಯವಾಯಿತೋ ಕಾಣೆ-ನವರಂಧ್ರಗಳಲ್ಲೂ ಭಕ್ತಿ-ದೇವರು-ಧರ್ಮಗಳ ಜಾಗೃತಿಯಾಗಿ ಬಿಟ್ಟಿತು.

ನೌಕರಿ ಇದ್ದಾಗ ರಾಕ್ಷಸನಂತಿದ್ದವ, ನಿವೃತ್ತಿಯಾದ ಮೇಲೆ ದೇವರು, ಮಡಿ, ಮೈಲಿಗೆ ಪೂಜೆ ಎನ್ನುತ್ತಾ ಬ್ರಹ್ಮ ರಾಕ್ಷಸನಾದ. ಇಡೀ ಮನೆ ಕೇದಗೆಯ ಬನ, ನೋಡಲು ಎಲ್ಲರೂ ಚೆಂದ. ಆದರೆ, ಅಲ್ಲಿರುವರೆಲ್ಲ ಹಾವುಗಳೇ. ಈ ಮಹಾನುಭಾವ ಒಮ್ಮೆ ಒಂದು ಕಾರ್ಯಕ್ರಮಕ್ಕೆ ಏಕೆ ಬಂದಿದ್ದನೋ, ಯಾರಿಗಾಗಿ ಬಂದಿದ್ದನೋ ಗೊತ್ತಿಲ್ಲ. ಮುಂದೆ ಬಂದು ಕೂತಿದ್ದು ಇಡೀ ಸಭಾಂಗಣದಲ್ಲಿ ನಗುತ್ತಿದ್ದರೆ, ಮುಖ ಗಂಟು ಹಾಕಿ ನನ್ನನ್ನೇ ದುರುಗುಟ್ಟಿ ನೋಡುತ್ತಾ ಕೂತಿದ್ದ. ಕಾರ್ಯಕ್ರಮದ ಹೆಸರು ‘ನಗುನಗುತಾ ನಲಿ, ಏನೇ ಆಗಲಿ’. ಆದರೆ, ಈ ವ್ಯಕ್ತಿ ಏನೇ ಆಗಲಿ ನಗಬಾರದೆಂದೇ ಕೂತಿದ್ದ. ನಾವು ನಗೆ ಭಾಷಣಕಾರರು ತಾಯಿ ಇದ್ದಂತೆ ಏಕೆಂದರೆ ಆರೋಗ್ಯವಾಗಿರುವ ಎಂಟು ಮಕ್ಕಳನ್ನು ತಾಯಿ ಗಮನಿಸುವುದಿಲ್ಲ, ಕಾಯಿಲೆ ಬಿದ್ದ ಮಗುವನ್ನೇ ಹೇಗೆ ನೋಡುತ್ತಿರುತ್ತಾಳೋ ಇಡೀ ಸಭಾಂಗಣ ಬಿದ್ದು ಬಿದ್ದು ನಗುತ್ತಿದ್ದರೂ ನಗದ ಈ ಕಾಯಿಲೆ ಮಗುವಿನ ಮೇಲೆ ನನ್ನ ಮನವಿತ್ತು. ಸಭೆ ಮುಗಿದು ನಾನು ಹೊರಡಲು ಅಣಿಯಾಗುತ್ತಿದ್ದೆ. ವೇದಿಕೆ ಹಿಂಭಾಗಕ್ಕೆ ಬಂದ ಈ ವ್ಯಕ್ತಿ ‘ನಗುತ್ತಾ ಇರಿ, ನಗ್ರಿ ಅಂತ ಹೇಳ್ತಿರಲ್ಲರಿ, ಸದಾ ನಗೋರು ಸೂಳೇರು, ಅವರು ಸದಾ ನಗುತ್ತಿರಬೇಕು, ನಾವಲ್ಲ ಎಂದು ಬಿಡಬೇಕೆ?

ಎಷ್ಟು ವಿಚಿತ್ರ ಈ ಜಗತ್ತು. ಜನರನ್ನು ನಗಿಸಬೇಕೆಂದೇ ಸಂಘ ಕಟ್ಟಿರುವ ಬೆಳಗಾವಿ ಗುಂಡೇನಟ್ಟಿ ಹಾಗೂ ಅವರ ನಗೆಕೂಟದ ಈ ನೆಲದ ಮೇಲೆಯೇ ಇಂಥಹ ನಗುವವರನ್ನು ಕಂಡರೆ ಕೆಂಡಕಾರುವವರನ್ನೂ ಸೃಷ್ಟಿ ಮಾಡಿರುವ ದೇವರ ಲೀಲೆಗೆ ಬೆರಗಾದೆ. ಇಂತಹವರನ್ನು ತಿದ್ದುವ ಕೆಲಸ ನಮ್ಮಿಂದಾಗದು ಇವರನ್ನು ದೇವರ ಪಾದಕ್ಕೇ ಒಪ್ಪಿಸುವುದು ಒಳಿತು.

2 thoughts on “ಬೆಳಗಾವಿಯ ಕುಂದ ಹಾಸ್ಯ ಕೂಟವೆಂಬ ಕಂದ

Leave a Reply

Your email address will not be published. Required fields are marked *

3 × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top