ಕನ್ಯಾಸಂಸ್ಕಾರವೇನೆಂದು ತಿಳಿಯದೇ ಪ್ರತಿಭಟಿಸುವುದು ಸಂಸ್ಕಾರವೇ?

Posted In : ಅಂಕಣಗಳು, ಪ್ರಥಮ ಪೂಜೆ

ಪಾಪ. ಈ ವರ್ಷ ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀ ರಾಘವೇಶ್ವರ ಸ್ವಾಮೀಜಿ ವಿರುದ್ಧ ಹೋರಾಡುವ ದುಷ್ಕರ್ಮಿಗಳಿಗೆ ಯಾವ ವಿಷಯವೂ ಸಿಕ್ಕಿಲ್ಲ! ‘ಪ್ರೇತಾ’ ಪ್ರಕರಣ ಟುಸ್ ಆಯಿತು. ಒಂದು ವರ್ಷ ಬಿಟ್ಟು ಎಚ್ಚರಗೊಂಡ ಇನ್ನೊಬ್ಬಳ ದೂರಿನಲ್ಲಿ ಹುರುಳೇ ಇರಲಿಲ್ಲ. ಅದಾದ ಮೇಲೆ ಬೆಂಗಳೂರಿನ ಗಿರಿನಗರದಲ್ಲಿರುವ ಮಠದ ಜಾಗವನ್ನೇ ಕಿತ್ತುಕೊಳ್ಳುವ ಪ್ರಯತ್ನವೂ ನಡೆಯಿತು. ಇದಕ್ಕೆ ಅನುಮತಿ ನೀಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಅನುಮತಿ ರದ್ದುಪಡಿಸುವ ಬೃಹತ್ ಕೆಲಸವೇ ನಡೆಯಿತು. ಆದರೆ ನ್ಯಾಯಾಲಯ ಅವರಿಗೆ ತಪರಾಕಿ ಬಾರಿಸಿ, ದಂಡವನ್ನೂ ಹಾಕಿತು. ಸರಕಾರವೇ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಮೂಲಕ, ಮಠವನ್ನೇ ಲಪಾಟಿಯಿಸಬೇಕು ಎಂಬ ಯೋಚನೆ ನಡೆಸಿತು. ಅದೂ ಕೈಗೂಡಲಿಲ್ಲ.

ಶತಾಯಗತಾಯ ಪ್ರಯತ್ನ ಮಾಡಿದರೂ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಗಳನ್ನಾಗಲಿ, ಮಠವನ್ನಾಗಲಿ, ಮಠದ ಭಕ್ತರನ್ನಾಗಲಿ ಅಲುಗಾಡಿಸಲೂ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಕಿತಾಪತಿ ಹಾಗೂ ಪಿತೂರಿ ಮಾಡುವ ಸಮಾನಮನಸ್ಕರೆಲ್ಲ ಸೇರಿ, ಎಲ್ಲ ಬುದ್ದಿ ಹಾಗೂ ಒಂದಷ್ಟು ದುಡ್ಡು ಕರ್ಚು ಮಾಡಿ, ಏನಾದರೊಂದು ಮಾಡಲೇಬೇಕು ಎಂಬ ಹಠಕ್ಕೆ ಬಿದ್ದು, ಏನೂ ಸಿಗದೆ, ಕನ್ಯಾ ಸಂಸ್ಕಾರ ವಿರೋಧಿಸುವ ಕುಕೃತ್ಯ ನಡೆಸಿದ್ದಾರೆ. ಸೋಮವಾರ ಗಿರಿನಗರದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಎದುರು ಪ್ರತಿಭಟನೆ ಮಾಡಿದವರು ನೆಪ ಮಾತ್ರ. ಅವರಿಗೆ ಏನೇನೂ ಗೊತ್ತಿಲ್ಲ ಎಂಬುದು ಅಲ್ಲೇ ಮಾತನಾಡುವಾಗ ಹಾಗೂ ಟಿವಿ ಚರ್ಚೆಯಲ್ಲಿ ಬಹಿರಂಗವಾಗಿದೆ. ಮಠದ ಒಳಗೆ ಬಂದು ಸತ್ಯ ತಿಳಿಯುವ ಆಸಕ್ತಿ, ಅಂತಹ ಸಾಮರ್ಥ್ಯ ಅವರಲ್ಲಿ ಇರಲಿಲ್ಲ. ಅವರ ಆಸಕ್ತಿಯೇನಿದ್ದರೂ ಕೇವಲ ಪ್ರತಿಭಟನೆ ಮಾಡಿ, ಸುದ್ದಿಯಾಗುವುದರಲ್ಲಿ ಮಾತ್ರ ಇತ್ತು.

ಇದು ‘ಕೂಳಿಗಾಗಿ ಕಾಳು’ ಯೋಜನೆ ಎಂಬುದು ಎಲ್ಲಿರಿಗೂ ಗೊತ್ತಾಗುವ ಸತ್ಯ. ಒಂದು ಕಾರ್ಯಕ್ರಮದ ಉದ್ದೇಶವೇ ತಿಳಿಯದೇ ಅದನ್ನು ವಿರೋಧಿಸುವುದು ಮೂರ್ಖತನವಲ್ಲವೇ? ಗೊತ್ತಿಲ್ಲದೇ ವಿರೋಧಿಸಿದ್ದೀರಿ ಅಂದಮೇಲೆ ಅದನ್ನು ವಿರೋಧಿಸಲು ಹೇಳಿದವರ ಹೆಸರು ಬಹಿರಂಗಪಡಿಸಿ. ಆಗ ನಿಮ್ಮ ಹೋರಾಟದ ನಿಜಬಣ್ಣ ಬಯಲಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಸಂಘಟನೆ ಎಷ್ಟು ಟೊಳ್ಳು ಎಂಬುದು ಜಗಜ್ಜಾಹೀರಾಗುತ್ತದೆ. ಈ ವಿಷಯದಲ್ಲೂ ‘ದಲಿತ’ರನ್ನು ತರುವ ಅಗತ್ಯವೇನಿತ್ತು? ಮಠದ ಎದುರಿಗೆ ಜಮಾಯಿಸಿದ್ದ ದಲಿತ ಸಂಘಟನೆ ಸದಸ್ಯರಿಗೆ ತಾವೇನು ಮಾಡಲು ಬಂದಿದ್ದೇವೆಂಬ ಅರಿವೇ ಇರಲಿಲ್ಲ. ಮಹಿಳೆಯರ ಪ್ರತಿನಿಧಿಯಾಗಿ ಬಂದಿದ್ದ ರೇವತಿಯವರಿಗೂ ಕನ್ಯಾಸಂಸ್ಕಾರ ಅಂದರೇನು? ಅದರಲ್ಲಿ ಏನು ಮಾಡಲಾಗುತ್ತದೆ? ಸಂಸ್ಕಾರದ ಪ್ರಕ್ರಿಯೆಗಳೇನು ಎಂಬ ಬಗ್ಗೆ ನಯಾ ಪೈಸೆಯೂ ಗೊತ್ತಿರಲಿಲ್ಲ. ಮೊದಲಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಬಂದಿದ್ದೇನೆ ಎಂದರು. ಇವರ ಉದ್ದೇಶ ಅಷ್ಟೇ ಆಗಿದ್ದರೆ ಈ ಮಹಿಳಾ ಪರ ಹೋರಾಟಗಾರ್ತಿಯೇಕೆ ಸಂಘಟನೆಯ ಶಾಲು ಧರಿಸಿ, ಒಂದಷ್ಟು ಜನರ ಬಳಿ ಬಾವುಟ ಕೊಟ್ಟು ಕರೆದುಕೊಂಡು ಬರಬೇಕಿತ್ತು? ಯಾಕೆ ಘೋಷಣೆ ಕೂಗಿಸಬೇಕಿತ್ತು? ಅಲ್ಲಿಗೆ ಮಠಕ್ಕೆ ನುಗ್ಗಿ ಹೋರಾಟ ಮಾಡುವುದು ಪೂರ್ವ ನಿಯೋಜಿತವೆಂದಾಗಲಿಲ್ಲವೇ?

ಕನ್ಯಾ ದೀಕ್ಷೆಯೆಂದರೆ ಏನು ಹೇಳಿ ಎಂದು ಕಿರಿಕ್ ಶುರು ಮಾಡಿಕೊಂಡರು. ಆದರೆ ಮಠದಲ್ಲಿ ಕನ್ಯಾದೀಕ್ಷೆ ನಡೆಯುತ್ತಿದೆ ಎಂದು ಇವರಿಗೆ ಹೇಳಿದ ಮೂರ್ಖ ಯಾರು? ಯಾವುದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆಂದೇ ಗೊತ್ತಿಲ್ಲದೇ, ಏನು ನಡೆಯುತ್ತಿದೆ ಎಂಬುದರ ಅರಿವೂ ಇಲ್ಲದೇ ಸುಮ್ಮನೆ ವೋ ಎಂದು ‘ಓ’ರಾಟ ಮಾಡುವವರ ಬಗ್ಗೆ ಎಲ್ಲೂ ಕೇಳಿಲ್ಲವಾದರೆ, ಮೊನ್ನೆ ಮಠದ ಮುಂದೆ ಹೋರಾಟ ಮಾಡಿದವರನ್ನು ನೋಡಬಹುದು. ವಿಷಯವೇ ಗೊತ್ತಿಲ್ಲದೇ ಈ ಹೋರಾಟಗಾರ್ತಿಯವರು ಟಿವಿಯ ಚರ್ಚೆಯಲ್ಲೂ ಪಾಲ್ಗೊಂಡಿದ್ದರು. ಅಲ್ಲೂ ಅದೇ ಹಳೇ ಕ್ಯಾಸೆಟ್ ಹಚ್ಚಿ ಕುಳಿತಿದ್ದರು. ಕೊನೆಗೆ ಕನ್ಯಾಸಂಸ್ಕಾರ ಎಂಬುದು ಏನೆಂದು ತಿಳಿದ ಮೇಲೆ, ಇದನ್ನು ದಲಿತ ಹೆಣ್ಣುಮಕ್ಕಳಿಗೇಕೆ ಕೊಡಲಾಗುತ್ತಿಲ್ಲ ಅಥವಾ ಮುಸ್ಲಿಮ್ ಹೆಣ್ಣುಮಕ್ಕಳಿಗೇಕೆ ಕೊಟ್ಟಿಲ್ಲ ಎಂದು ಕೇಳಲು ಶುರು ಮಾಡಿಕೊಂಡರು.

ಚರ್ಚೆಯಲ್ಲಿ ಮಠದ ಪ್ರತಿನಿಧಿಯಾಗಿ ಕುಳಿತಿದ್ದ ಮಂಜುನಾಥ್ ಎಂಬುವವರು ‘ಇಲ್ಲ, ಇದು ಕೇವಲ ಒಂದೇ ಜಾತಿಯ ಅಥವಾ ಧರ್ಮದ ಹೆಣ್ಣುಮಕ್ಕಳಿಗಲ್ಲ, ಬದಲಿಗೆ ಎಲ್ಲ ಜಾತಿಯ, ಧರ್ಮದ ಹೆಣ್ಣು ಮಕ್ಕಳೂ ಬರಬಹುದು. ಬಂದು ತಂದೆ ತಾಯಿಯರ ಒಪ್ಪಿಗೆಯ ಮೇಲೆ ಎಲ್ಲರೂ ಪಾಲ್ಗೊಳ್ಳಬಹುದು’ ಎಂದು ಹೇಳಿದಾಗ, ವಾದ ಮತ್ತೊಂದು ಬದಿ ತಿರುಗಿತ್ತು. ‘ಅತ್ಯಾಚಾರದ ಆರೋಪ ಹೊಂದಿರುವ ಸ್ವಾಮೀಜಿ, ಗೌಪ್ಯವಾಗಿ ಹೆಣ್ಣು ಮಕ್ಕಳಿಗೆ ಏಕಾಂತದಲ್ಲಿ ಉಪದೇಶ ಮಾಡುವುದೇನಿದೆ?’ ಎಂದರು. ಅಲ್ಲ ತಾಯಿ, ಅತ್ಯಾಚಾರ ಪ್ರಕರಣವನ್ನೇ ಕೋರ್ಟ್ ಕೈಬಿಟ್ಟಿರುವಾಗ ಇನ್ನೂ ಆರೋಪಿ, ಆರೋಪಿ ಎಂದು ಕರೆಯುವುದು ಕಾನೂನು ಬಾಹಿರ ಎಂದು ಗೊತ್ತಿಲ್ಲವೇ? ಅಷ್ಟಕ್ಕೂ ಸ್ವಾಮೀಜಿಯೇನು ಕದ್ದು ಮುಚ್ಚಿ ಅಲ್ಲಿ ಬಂದಿದ್ದ ಹೆಣ್ಣು ಮಕ್ಕಳಿಗೆ ಉಪದೇಶ ನೀಡುತ್ತಿರಲಿಲ್ಲ. ಕಾರ್ಯಕ್ರಮದ ಸಂಪೂರ್ಣ ಲೈವ್ ವಿಡಿಯೊ ಶ್ರೀ ಸಂಸ್ಥಾನದ ಅಧಿಕೃತ ಫೇಸ್ಬುಕ್ ಪೇಜ್‌ನಲ್ಲಿ ಬರುತ್ತಿತ್ತು.

ಗೌಪ್ಯವಾಗಿ ಉಪದೇಶ ನೀಡುವವರು ಫೇಸ್ಬುಕ್ ಲೈವ್‌ನಲ್ಲಿ ನೀಡುತ್ತಾರೆ ಎಂದು ಗೊತ್ತಾಗಿದ್ದೇ ಮೊನ್ನೆ ಈ ಹೋರಾಟಗಾರ್ತಿ ಟಿವಿ ಮುಂದೆ ಹೇಳಿದಾಗ. ಇವರು ಹೇಳುವುದೇನೆಂದರೆ, ಕನ್ಯಾಸಂಸ್ಕಾರ ಮಾಡುವ ವಿಡಿಯೊ ಟಿವಿಗಳಲ್ಲಿ ಪ್ರಕಟವಾಗಬೇಕಿತ್ತಂತೆ. ಆಗ ಅದು ಗೌಪ್ಯ ಅಲ್ಲ ಎಂದರ್ಥವಂತೆ. ಫೇಸ್ಬುಕ್ ಯಾರು ನೋಡುತ್ತಾರೆ ಎಂದೆಲ್ಲ ಕೇಳಿಬಿಟ್ಟರು. ಏನು ಲಾಜಿಕ್ ಇವರದ್ದು? ಫೇಸ್ಬುಕ್ ಗೊತ್ತಿಲ್ಲ, ವಿಡಿಯೊ ಗೊತ್ತಿಲ್ಲ, ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲ, ಇನ್ನು ಕನ್ಯಾಸಂಸ್ಕಾರ ಎಂಬುದಂತೂ ಅನ್ಯಗ್ರಹದ ಪದ! ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದ ಹಾಗೆ ಇವರು ಏನೂ ತಿಳಿದುಕೊಳ್ಳದೇ ಹೋರಾಟ ಮಾಡಿದ್ದರು ಎಂಬುದು ಪದೇ ಪದೆ ಸಾಬೀತಾದ ಮೇಲೂ ಮತ್ತೇನನ್ನೋ ಕೆದಕುತ್ತಾ ಇದ್ದರು.

ರಾಮಚಂದ್ರಾಪುರ ಮಠದ ವಿರುದ್ಧ ಹೋರಾಟ ನಡೆಸುವ ಆಸಕ್ತಿ ಇರುವ ನೀವು, ಇತರೆ ಧರ್ಮಗಳಲ್ಲಿರುವ ಕೆಲವು ಆಚರಣೆಗಳನ್ನೂ ವಿರೋಧಿಸುತ್ತೀರಾ? ಆ ತಾಕತ್ತು ನಿಮ್ಮ ಸಂಘಟನೆಗಿದೆಯಾ? ನಿಮ್ಮನ್ನು ಪ್ರತಿಭಟನೆಗೆ ಕಳುಹಿಸಿದವರಿಗೆ ಎದುರಿಗೆ ಬರುವ ಧೈರ್ಯವಿಲ್ಲದರಿವುದಾಗ, ಅವರ ಮಾತು ಕೇಳಿ ಬರುವ ನಿಮಗಿನ್ನೆಷ್ಟು ಧೈರ್ಯವಿದ್ದೀತು? ಮಠದಲ್ಲಿ ನಡೆಯುವ ಧಾರ್ಮಿಕ ಕೆಲಸಗಳಿಗೆ ನಿಮ್ಮ ಅನುಮತಿ ಪಡೆಯಬೇಕು ಎಂದು ಎಲ್ಲಿ ನಿಯಮವಿದೆ? ಅದು ಮಠಕ್ಕೂ ಭಕ್ತರಿಗೂ ಸಂಬಂಧಿಸಿದ್ದು. ಇಷ್ಟ ಇರುವ ಭಕ್ತರು ಅದರಲ್ಲಿ ಪಾಲ್ಗೊಳ್ಳುತ್ತಾರೆ. ಸಂಸ್ಕಾರ ಪಡೆದುಕೊಳ್ಳುತ್ತಾರೆ. ಅಲ್ಲಿ ಯಾರಿಗೂ ಯಾರೂ ಒತ್ತಾಯ ಮಾಡುವುದಿಲ್ಲ.

ಇವರು ಪ್ರತಿಭಟನೆ ಮಾಡಿದ್ದು ನೋಡಿದರೆ, ಏನೊ ಹೊಸದೊಂದು ಸಂಪ್ರದಾಯ ಆರಂಭಿಸಿದ್ದಾರೆ ಎಂಬಂತಿದೆ. ಆದರೆ ಕನ್ಯಾಸಂಸ್ಕಾರ ಎಂಬುದು ಪುರಾತನ ಪದ್ಧತಿ. ಬೋಧಾಯನ ಸೂತ್ರದಲ್ಲೇ ಇದೆ. ಶ್ರೀ ರಾಮಚಂದ್ರಾಪುರ ಮಠದಲ್ಲಿ 2007ರಿಂದಲೂ ಕನ್ಯಾ ಸಂಸ್ಕಾರ ನೀಡಲಾಗುತ್ತಿದೆ. ಈವರೆಗೆ 1000ದಷ್ಟು ಹೆಣ್ಣು ಮಕ್ಕಳಿಗೆ ಕನ್ಯಾ ಸಂಸ್ಕಾರ ನೀಡಲಾಗಿದೆ. 10 ವರ್ಷದ ನಂತರ ನಿಮಗೆ ಪ್ರತಿಭಟಿಸಬೇಕು ಎಂಬ ಎಚ್ಚರವಾಗಿದೆ.

ಅಬ್ಬಾ! ಎಂಥ ಜಾಗೃತ ಸಂಘಟನೆ ನಿಮ್ಮದು! ಹುಟ್ಟಿದ ಪ್ರತಿಯೊಬ್ಬರಿಗೂ ಸಂಸ್ಕಾರ ಅಗತ್ಯ ಎಂದು ಧರ್ಮ ಶಾಸ್ತ್ರ ಹೇಳುತ್ತದೆ. ಯಾವ ಧರ್ಮದವರೇ ಆಗಿರಲಿ ಅವರಿಗೆ ಸಂಸ್ಕಾರ ಅಗತ್ಯ. ಅದೇ ನಮ್ಮ ಜೀವನವನ್ನು ರೂಪಿಸಬಹುದಾದಂಥದ್ದು. ಅದು ಅವರವರ ನಂಬಿಕೆಗೆ ಬಿಟ್ಟಿದ್ದು. ಮಾನವನ ಜೀವನದ ಉನ್ನತಿಗೆ ಷೋಡಶ (16) ಸಂಸ್ಕಾರಗಳನ್ನು ಹೇಳಲಾಗಿದೆ. ನೆನಪಡಿ. ಯಾವುದೂ ಕಡ್ಡಾಯವಲ್ಲ. ಅದರಲ್ಲಿ ಕನ್ಯಾ ಸಂಸ್ಕಾರವೂ ಒಂದು. ಸಾವಿರಾರು ವರ್ಷಗಳ ಹಿಂದೆಯೇ ಬೋಧಾಯನಾಚಾರ್ಯರು ಹೇಳಿದ ಗೃಹ್ಯಸೂತ್ರದಲ್ಲಿ ಕನ್ಯಾಸಂಸ್ಕಾರದ ಉಲ್ಲೇಖವಿದೆ. ಅದೇ ಕ್ರಮದಲ್ಲಿ ಹೆಣ್ಣುಮಕ್ಕಳಿಗೆ ಕನ್ಯಾಸಂಸ್ಕಾರ ನೀಡಲಾಗುತ್ತಿದೆ.

ಕನ್ಯಾಸಂಸ್ಕಾರ ಗೌಪ್ಯವಾಗಿ, ಏಕಾಂತದಲ್ಲಿ ಕೊಡುವಂಥದ್ದಲ್ಲ. ಬಹಿರಂಗವಾಗಿ ಮತ್ತು ಪೋಷಕರ ಸಮಕ್ಷಮದಲ್ಲಿ ನೀಡಲಾಗುತ್ತದೆ. ಕನ್ಯಾಸಂಸ್ಕಾರದಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಇಲ್ಲಿಯವರೆಗೆ ಕನ್ಯಾಸಂಸ್ಕಾರ ಪಡೆದ ಯಾವ ಕನ್ಯೆ ಅಥವಾ ಅವರ ಪೋಷಕರು ಯಾರೋಬ್ಬರು ಒಂದು ಸಣ್ಣ ಅಪಸ್ವರವನ್ನು ಎತ್ತಿಲ್ಲ. ಆ ಹೆಣ್ಣು ಮಕ್ಕಳ ಅಪ್ಪ-ಅಮ್ಮನಿಗೂ ಇರದಷ್ಟು ಕಾಳಜಿ ಅವರ ಬಗ್ಗೆ ಈ ಸಂಘಟನೆಗಳಿಗಿದೆಯೇ? ಸಾಮಾನ್ಯವಾಗಿ ಎಲ್ಲ ಸಂಸ್ಕಾರಗಳೂ ಮನೆಯಲ್ಲೇ ಆಗಬೇಕು. ಆದರೆ ಕನ್ಯಾಸಂಸ್ಕಾರ ಎಂಬ ಪದ್ಧತಿಯೇ ನಶಿಸಿಹೋಗಿದ್ದರಿಂದ ಮಠದಲ್ಲಿ ಸಾಮೂಹಿಕವಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆಸಕ್ತಿ ಇರುವವರು ಬರಬಹುದೇ ಹೊರತು, ಕಡ್ಡಾಯವಲ್ಲ. ಪ್ರತಿಭಟಿಸಿದ ಮಹಾಜನಗಳೇ ಹಾಗೂ ಅವರನ್ನು ಕಳುಹಿಸಿದ ಹೇಡಿಗಳೇ, ಹೇಳಿ ಇದರಲ್ಲೇನು ಅಕ್ರಮವಿದೆ? ಇದರಲ್ಲಿ ಹೆಣ್ಣು ಮಕ್ಕಳಿಗೆ ಯಾವ ಅನ್ಯಾಯ ಮಾಡಲಾಗಿದೆ? ಇದರಲ್ಲಿ ಹೆಣ್ಣು ಮಕ್ಕಳ ಮೇಲೆ ಯಾವ ರೀತಿಯ ಶೋಷಣೆ ಸಾಧ್ಯ?

ವಾಟ್ಸ್‌‌ಆ್ಯಪ್‌ನ ಯಾವ ಗ್ರೂಪ್‌ನಲ್ಲಿ ಯಾವುದನ್ನು ಚರ್ಚಿಸಬೇಕೆಂದು ಗೊತ್ತಿಲ್ಲದ, ದುರ್ಬುದ್ಧಿ ಜೀವಿಗಳಾಗಲು ಹವಣಿಸುತ್ತಿರುವ ಕೆಲವರು ಈ ಬಗ್ಗೆ ಪ್ರಶ್ನಿಸಿದ್ದನ್ನು ಓದಿದ್ದೆ. ಅಲ್ಲೇ ಕೆಲವರು ‘ಮಠಕ್ಕಾಗುತ್ತಿರುವ ಲಾಭ ಯಾಕೆ ತಪ್ಪಿಸುತ್ತೀರಿ?’ ಎಂದು ಕೊಂಕು ನುಡಿದವರೂ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಇಂತಹ ಪ್ರಶ್ನೆಗಳು ಬಂದಿವೆ. ಸ್ವಾಮಿ ಲಾಭ ಮಾಡಲು ಬೇಕಾದಷ್ಟು ದಾರಿಗಳಿವೆ. ಕಾಲೇಜು ನಡೆಸಬಹುದು. ಪ್ರತಿ ಕಾರ್ಯಕ್ರಮಕ್ಕೂ ಪ್ರವೇಶ ಧನ ಇಡಬಹುದು. ಕೆಲವು ವಸ್ತುಗಳ ಬ್ರ್ಯಾಂಡ್ ಮಾಡಿ, ಮಾರಾಟ ಮಾಡಬಹುದು. ಧಾರ್ಮಿಕವಾಗಿಯೇ ಜನರಿಂದ ದುಡ್ಡು ಕೀಳಲು ಸಾಕಷ್ಟು ಮಾರ್ಗಗಳಿವೆ. ಅದಕ್ಕೆ ಕನ್ಯಾಸಂಸ್ಕಾರವೇ ಆಗಬೇಕಾ? ಹಾಗಂತ ಕನ್ಯಾಸಂಸ್ಕಾರಕ್ಕೆ ಮಠದಲ್ಲಿ ಯಾವುದೇ ದರ ನಿಗದಿ ಮಾಡಲಾಗಿಲ್ಲ. ಅದು ಭಕ್ತರ ಇಷ್ಟ.

ಇಷ್ಟಕ್ಕೂ ರಾಮಚಂದ್ರಾಪುರ ಮಠಕ್ಕೆ ಹಣ ಗಳಿಸಬೇಕು, ಲಾಭ ಮಾಡಬೇಕು ಎಂದಿದ್ದರೆ ಸರಕಾರದ ನೀತಿಯಿಂದ ಆಹಾರವೂ ಸಿಗದೆ ಪರದಾಡುತ್ತಿದ್ದ ಸಾವಿರಾರು ಗೋವುಗಳಿಗೆ ಅಂದಾಜು 3 ಕೋಟಿ ರು. ವೆಚ್ಚದಲ್ಲಿ ಮೇವು ಒದಗಿಸಬೇಕಿತ್ತಾ? ಅದರಿಂದ ಮಠಕ್ಕೇನು ಲಾಭ ಸ್ವಾಮಿ? ಇದ್ದ ದುಡ್ಡೂ ಕರ್ಚಾಗುತ್ತದೆ. ಈಗ ಶ್ರೀ ರಾಘವೇಶ್ವರ ಸ್ವಾಮೀಜಿ ಹೊ ಯೋಜನೆಯೊಂದನ್ನು ಮಾಡಿದ್ದಾರೆ. ಆ ಯೋಜನೆಯಲ್ಲಿ ಕಟುಕರಿಗೆ ಮಾರಾಟವಾಗುವ ಗೋವುಗಳನ್ನು ರೈತರಿಂದ ನೇರವಾಗಿ ಖರೀದಿಸುವ ಯೋಜನೆ ರೂಪಿಸಿದ್ದಾರೆ. ಇದರಿಂದ ಮಠಕ್ಕೇನು ಲಾಭ? ಭಕ್ತರಿಂದ ಸಂಗ್ರಹಿಸಿದ ಹಣದಲ್ಲಿ ಈ ಯೋಜನೆಗಳನ್ನು ನಡೆಸುತ್ತಿದ್ದಾರೆ.
ಶ್ರೀ ರಾಮಚಂದ್ರಾಪುರ ಮಠ ನಷ್ಟದಲ್ಲಿದ್ದ ಕೆಲವು ಶಿಕ್ಷಣ ಸಂಸ್ಥೆಗಳನ್ನು ಭಕ್ತರ ಬೇಡಿಕೆಯ ಹಿನ್ನೆಲೆಯಲ್ಲಿ ನಡೆಸುತ್ತಿದೆಯೇ ಹೊರತು, ಲಾಭದ ಉದ್ದೇಶದಿಂದ ಎಲ್ಲೂ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿಲ್ಲ. ಗವ್ಯೋತ್ಪನ್ನಗಳನ್ನು ಮಠ ತಯಾರಿಸುತ್ತದೆಯಾದರೂ, ಅದರಿಂದ ಬಂದ ಲಾಭವನ್ನು ಗೋವುಗಳಿಗೇ ವಿನಿಯೋಗಿಸುತ್ತಿದೆ ಹೊರತು, ಮಠದ ಕರ್ಚು ವೆಚ್ಚಕ್ಕೆ ಅದನ್ನು ಬಳಸುತ್ತಿಲ್ಲ. ಬಹುಶಃ ರಾಜ್ಯದಲ್ಲಿ ಲೆಕ್ಕಪತ್ರಕ್ಕಾಗಿ ಐಎಸ್‌ಒ ಪ್ರಮಾಣಪತ್ರ ಪಡೆದ ಮೊದಲ ಮಠವೆಂದರೆ ಶ್ರೀ ರಾಮಚಂದ್ರಾಪುರ ಮಠ.

ಹೀಗಿದ್ದೂ ಮಠ ಲಾಭ ಮಾಡಲು ಅಥವಾ ಆದಾಯಕ್ಕಾಗಿ ಕನ್ಯಾಸಂಸ್ಕಾರ ಮಾಡುತ್ತಿದೆ ಎನ್ನುವರಿಗೆ ಮನಸಾಕ್ಷಿ ಎಂಬುದೇನಾದರೂ ಇದೆಯೇ? ಹುಡುಗರಿಗೆ ಉಪನಯನದಂತೆ, ಹೆಣ್ಣು ಮಕ್ಕಳಿಗೆ ಕನ್ಯಾಸಂಸ್ಕಾರ. ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ನಾಮಕರಣದ ನಂತರ ಮದುವೆಯವರೆಗೆ ಯಾವುದೇ ಧಾರ್ಮಿಕ ಸಂಸ್ಕಾರ ಅಥವಾ ಕಾರ್ಯಕ್ರಮಗಳು ಹೆಣ್ಣು ಮಕ್ಕಳಿಗೆ ಇಲ್ಲ. ನಂತರವೂ ಹೆಚ್ಚಿನ ಧಾಮಿಕ ಜವಾಬ್ದಾರಿಗಳು ಗಂಡು ಮಕ್ಕಳಿಗೇ ಇರುತ್ತವೆ. ಹೀಗಿರುವಾಗ ಹುಡುಗರಿಗೆ ಉಪನಯನದಂತೆ, ಹುಡುಗಿಯರಿಗೂ ಧಾರ್ಮಿಕ ಸಂಸ್ಕಾರ ನೀಡಿದರೆ ತಪ್ಪೇನು? ಅದನ್ನು ಕೆಟ್ಟ ದೃಷ್ಟಿಯಿಂದಲೇ ನೋಡುವವರು ಅದನ್ನು ವಿರೋಧಿಸಬಹುದು. ಆದರೆ ನಾನು ಅದನ್ನು ಬೆಂಬಲಿಸುತ್ತೇನೆ. ಯಾಕೆಂದರೆ ನಾನು ಕನ್ಯಾಸಂಸ್ಕಾರ ಕಾರ್ಯಕ್ರಮವನ್ನು ಹುಡುಗಿಯರಿಗೆ ನೀಡಿದ ಪ್ರಾಧಾನ್ಯ ಎಂದು ಪರಿಗಣಿಸುತ್ತೇನೆ. ಹುಡುಗರಂತೆ ಹುಡುಗಿಯರಿಗೂ ಧಾರ್ಮಿಕ ಸಂಸ್ಕಾರ ನೀಡುವ ಮೂಲಕ ಮಠದಲ್ಲಿ ಹುಡುಗರಿಗೆ ಸಮಾನರಾಗಿ ಹುಡುಗಿಯರನ್ನೂ ಪರಿಗಣಿಸಲಾಗುತ್ತಿದೆ ಎಂದು ಅರ್ಥೈಸುತ್ತೇನೆ. ಒಂದೆಡೆ ಹೆಣ್ಣಿಗೆ ಹೆಚ್ಚು ಮಹತ್ವ ನೀಡಲಾಗುತ್ತಿಲ್ಲ ಎಂದು ಪ್ರತಿಭಟಿಸುತ್ತಾರೆ. ಇಲ್ಲಿ ನೋಡಿದರೆ ಹೆಣ್ಣಿಗೆ ಹೆಚ್ಚು ಮಹತ್ವ ನೀಡಿದರೂ ಪ್ರತಿಭಟಿಸುತ್ತಾರೆ.

ಕನ್ಯಾಸಂಸ್ಕಾರ ವಿರೋಧಿಸುವವರು ಮಹಿಳೆಯರಿಗೆ ಪ್ರಾಮುಖ್ಯ ನೀಡುವುದನ್ನು ವಿರೋಧಿಸುತ್ತಾರೆ ಎಂದಾಗಲಿಲ್ಲವೇ? ಈಗ ಹೇಳಿ ಪ್ರತಿಭಟನಾಕಾರರೇ ನೀವು ಮಹಿಳಾ ವಿರೋಧಿಗಳೇ? ಮಹಿಳೆಯರಿಗೆ ಪ್ರಾಮುಖ್ಯ ನೀಡುವುದನ್ನು ವಿರೋಧಿಸುತ್ತೀರಾ? ಮಹಿಳೆಯರಿಗೆ ಜೀನ್ಸ್‌ ಹಾಕುವಲ್ಲಿ, ಬಿಯರ್ ಕುಡಿಯುವಲ್ಲಿ, ಬಾರ್‌ಗೆ ಹೋಗುವಲ್ಲಿ, ಗಿಡ್ಡ, ಗಿಡ್ಡ, ಬಟ್ಟೆ ಧರಿಸುವಲ್ಲಿ ಮಾತ್ರ ಸಮಾನತೆ, ಸ್ವಾತಂತ್ರ್ಯ ಬೇಕಿರುವುದಾ? ಬೇರೆ ಕಡೆಯಂತೆ ಧಾರ್ಮಿಕ ಸಂಸ್ಕಾರದಲ್ಲೂ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಿದರೆ ತಪ್ಪೇನು? ತಾಕತ್ತಿದ್ದರೆ ಇದಕ್ಕೆ ಉತ್ತರಿಸಿ. ಇಲ್ಲವಾದಲ್ಲಿ ಬೇರೆ ಮನೆಯ ಹೆಣ್ಣು ಮಕ್ಕಳ ಸಂಸ್ಕಾರದ ವಿಷಯವನ್ನು ಅವರವರಿಗೇ ಬಿಟ್ಟುಬಿಡಿ.

3 thoughts on “ಕನ್ಯಾಸಂಸ್ಕಾರವೇನೆಂದು ತಿಳಿಯದೇ ಪ್ರತಿಭಟಿಸುವುದು ಸಂಸ್ಕಾರವೇ?

  1. ಬಾಲಕಿಯರಿಗೆ ವೇದ ಸಂಸ್ಕಾರ ನೀಡುವ ಮೊದಲು ಅವರಿಗೆ ಯಜ್ಞೋಪವೀತ ಸಂಸ್ಕಾರವನ್ನು ಮಾಡಲಾಗುತ್ತದೆ. ಹಿಂದೆಲ್ಲಾ ಸ್ತ್ರೀಯರಿಗೆ ಯಜ್ಞೋಪವೀತ ಸಂಸ್ಕಾರ ಇದ್ದಿತು. ಆದರೆ ಸ್ತ್ರೀ ವಿರೋಧಿ ಪುರಾಣ ಯುಗ ಬಂದ ಮೇಲೆ ಸ್ತ್ರೀಯರುನ್ನು ಶೂದ್ರರೆಂದು ಪರಿಗಣಿಸಿ ಅವರ ಯಜ್ಞೊಪವೀತದ ಹಕ್ಕನ್ನು ಕಸಿದು ಅವರ ಗಂಡಂದರಿಗೆ ನೀಡಲಾಯಿತು, ವೇದಗಳಲ್ಲಿ ಹೇಳಿರುವುದು ಮೂರೆಳೆ ಜನಿವಾರ. ಆದರೆ ಇಂದು ಬ್ರಾಹ್ಮಣ ವಿವಾಹಿತ ಪುರುಷರು ಧರಿಸುವುದು ಆರು ಎಳೆ ಜನಿವಾರ. [ತನ್ನದು ಮತ್ತು ತನ್ನ ಹೆಂಡತಿಯದು} ಇದು ಶುದ್ಧ ವೇದ ವಿರೋಧಿ ಮತ್ತು ಮಹಿಳಾ ವಿರೋಧಿ ಆಚರಣೆ.

    ಈ ಕನ್ಯಾ ಸಂಸ್ಕಾರ ಯಾವ ವೇದಗಳಲ್ಲಿದೆ? ಕೇವಲ ರಾಮಚಂದ್ರ ಮಠಕ್ಕೆ ಇದು ಸೀಮಿತವೇ? ಅನ್ಯ ಮಠಗಳು ಇದನ್ನು ಏಕೆ ಮಾಡುವುದಿಲ್ಲ.
    ಈ ಕನ್ಯಾಸಂಸ್ಕಾರ ಎಂಬ ಕುಸಂಪ್ರದಾಯವನ್ನು ಬಿಟ್ಟು ಇಚ್ಛಿತ ಎಲ್ಲಾ ಬಾಲಕಿಯರಿಗೆ ಯಜ್ಞೋಪವೀತ ಸಂಸ್ಕಾರವನ್ನು ಮಾಡಲಿ. ಅದಕ್ಕೆ ಅರ್ಥವಿದೆ. ಈ ಬುಡುಬುಡುಕೆ ಕನ್ಯಾ ಸಂಸ್ಕಾರ ಕಲ್ಲ.

  2. ವಿನಾಯಕ ಭಟ್ಟರೇ, ನಮ್ಮ ಆರ್ಷ ಪದ್ಧತಿಯ ಪರಂಪರೆಯ ಷೋಡಶ ಸಂಸ್ಕಾರಗಳಲ್ಲಿ ‘ಕನ್ಯಾ ಸಂಸ್ಕಾರ’ ಎಂಬ ಹೆಸರಿನ ಯಾವುದೇ ಸಂಸ್ಕಾರವಿರುವುದಿಲ್ಲ. ಹಾಂ, ಉಪನಯನ ಸಂಸ್ಕಾರವಿದ್ದು ಅದನ್ನು ಹುಡುಗ ಹಾಗೂ ಕನ್ಯೆಯರಿಬ್ಬರಿಗೂ ಮಾಡುವ ಪರಂಪರೆಯಿತ್ತು. ಅದು ಮಧ್ಯ ಯುಗದಲ್ಲಿ ವಿನಷ್ಟಗೊಂಡಿತು. ಈಗ ಈ ಸ್ವಾಮೀಜಿಗಳು ಪ್ರಕೃತ ಹೆಸರಿನ ಒಂದು ಸಂಸ್ಕಾರವನ್ನು ಶುರು ಮಾಡಿದ್ದಾರೆ, ಉದ್ದೇಶ ಉತ್ತಮವೇ ಆಗಿದೆ. ಆದರೆ ಇದಕ್ಕೆ ನೀವು ಹೇಳಿದ ಹಾಗೆ ‘ಬೋಧಾಯನ ಆಚಾರ್ಯರ’ ಸ್ಮೃತಿಯ ಪ್ರಮಾಣವಿರುವುದಿಲ್ಲ.

Leave a Reply

Your email address will not be published. Required fields are marked *

16 + seventeen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top