About Us Advertise with us Be a Reporter E-Paper

ಯಾತ್ರಾ

ಪ್ರಧಾನಿ ಸ್ಮಾರಕ ಸಾವೇಜ್ ಮೆಮೊರಿಯಲ್

* ಮಂಜುನಾಥ. ಡಿ.ಎಸ್.

ವಾಕ್ಪಟುತ್ವ, ಸ್ನೇಹಪರತೆ, ಪರೋಪಕಾರಿ ಗುಣಗಳಿಂದಾಗಿ ಎಲ್ಲರ ಚಾಚಾ ಎನಿಸಿಕೊಂಡಿದ್ದ ಮೈಕೇಲ್ ಜೋಸೆಫ್ ಸಾವೇಜ್ ನ್ಯೂಜಿಲೆಂಡ್‌ನ 23ನೆಯ ಪ್ರಧಾನಿಯಾಗಿ 1935ರಲ್ಲಿ ಅಧಿಕಾರ ವಹಿಸಿಕೊಂಡರು. ಆ ದೇಶದ ಪ್ರಥಮ ಲೇಬರ್ ಸರ್ಕಾರ ರಚಿಸಿ ನೂತನ ಕಲ್ಯಾಣ ರಾಜ್ಯದ ರೂವಾರಿ ಎನಿಸಿಕೊಂಡರು.

ಮೂವರು ಚಕ್ರವರ್ತಿಗಳ ಅವಧಿಯಲ್ಲಿ ನ್ಯೂಜಿಲೆಂಡ್‌ನ ಪ್ರಧಾನಿಯಾಗಿದ್ದ ಹೆಗ್ಗಳಿಕೆ ಇವರದು. ಅಲ್ಲಿನ ಶ್ರೇಷ್ಠ ಹಾಗು ಗೌರವಾನ್ವಿತ ಪ್ರಧಾನಿ ಎನಿಸಿಕೊಂಡಿದ್ದ ಸಾವೇಜ್ ತಮ್ಮ ಅಂತ್ಯದ ತನಕ ಆ ಹುದ್ದೆ ಅಲಂಕರಿಸಿದ್ದರು. ಇವರ ಸ್ಮರಣಾರ್ಥ ನಿರ್ಮಿಸಲಾದ ಸ್ಮಾರಕ ಬ್ಯಾಸ್ಟಿಯನ್ ಪಾಯಿಂಟ್‌ನಲ್ಲಿದೆ.

ಈ ಸ್ಮಾರಕದ ವಿನ್ಯಾಸಕ್ಕಾಗಿ ಲೇಬರ್ ಸರ್ಕಾರ 1941ರ ಫೆಬ್ರವರಿಯಲ್ಲಿ ಸ್ಪರ್ಧೆಯನ್ನು ಅಯೋಜಿಸಿತ್ತು. ಆಕ್ಲೆಂಡ್‌ನ ವಾಸ್ತುಶಿಲ್ಪಿಗಳಾದ ಟಿಬೋರ್ ಡಾನರ್ ಮತ್ತು ಆಂತೊನಿ ಬಾರ್ಟ್ಲೆಟ್ ಈ ಸ್ಪರ್ಧೆಯಲ್ಲಿ ವಿಜಯಿಗಳಾದರು. ಇವರು ಸಲ್ಲಿಸಿದ ವಿನ್ಯಾಸ ಸಮಾಧಿ, ಸ್ತಂಭ, ಉದ್ಯಾನ, ಹಾಗು ಕೊಳಗಳನ್ನು ಒಳಗೊಂಡಿದ್ದವು. ಕಂಬದ ತುದಿಯಲ್ಲಿ ಕಾರ್ಯನಿರತ ವ್ಯಕ್ತಿಯ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾವನೆ ಮೂಲ ವಿನ್ಯಾಸದಲ್ಲಿತ್ತು. ಆಡಂಬರವೆನಿಸುತ್ತದೆ ಎಂಬ ಕಾರಣದಿಂದ ಇದನ್ನು ಕೈಬಿಡಲಾಯಿತು. ಬದಲಿಗೆ ಪ್ರಖ್ಯಾತ ಶಿಲ್ಪಿ ರಿಚರ್ಡ್ ಗ್ರಾಸ್ ಕಂಚಿನ ಮಡೋನ್ನ ಶಿಲ್ಪವನ್ನು ಇಲ್ಲಿ ಸ್ಥಾಪಿಸಲಾಯಿತು.

ಯುದ್ಧ ಸಮಯದಲ್ಲಿ ಸ್ಮಾರಕಕ್ಕೆ ದುಂದುವೆಚ್ಚ ಮಾಡುವುದು ಹಲವಾರು ಪ್ರಜೆಗಳಿಗೆ ಇಷ್ಟವಿರಲಿಲ್ಲ. ಈ ಪ್ರತಿರೋಧದ ನಡುವೆಯೇ 1941ರ ಜೂನ್ ತಿಂಗಳಿನಲ್ಲಿ ಫ್ಲೆಚರ್ ಕನ್ಸಸ್ಟ್ರಕ್ಷನ್ ಈ ಸ್ಮಾರಕದ ನಿರ್ಮಾಣ ಕಾರ್ಯ ಆರಂಭಿಸಿತು. ಮರು ವರ್ಷದ ಮಾರ್ಚ್ ತಿಂಗಳಿನಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿತಾದರೂ ಸ್ಮಾರಕ ಲೋಕಾರ್ಪಣೆಗೊಂಡಿದ್ದು 1943ರ ಮಾರ್ಚ್‌ನಲ್ಲಿ. ಸಮಾಧಿಗೆ ವೆಚ್ಚವಾದ ಸುಮಾರು 4000 ಪೌಂಡ್ ಹಣವನ್ನು ಲೇಬರ್ ಪಕ್ಷ ಭರಿಸಿತು. ಉಳಿದ ಖರ್ಚನ್ನು ಪೀಟರ್ ಸರ್ಕಾರ ವಹಿಸಿಕೊಂಡಿತು.

ಸಾವೇಜ್ ಬಳಸುತ್ತಿದ್ದ ಅನೇಕ ವಸ್ತುಗಳನ್ನು 1993ರ ತನಕ ಈ ಸ್ಮಾರಕದಲ್ಲಿ ಇರಿಸಲಾಗಿತ್ತು. ತದನಂತರ, ಸುರಕ್ಷತೆಯ ದೃಷ್ಟಿಯಿಂದ, ಇವುಗಳನ್ನು ಆಕ್ಲೆಂಡ್‌ನ ಸಾರ್ವಜನಿಕ ಗ್ರಂಥಾಲಯಕ್ಕೆ ವರ್ಗಾಯಿಸಲಾಯಿತು. ಅಸಂಖ್ಯಾತ ಸಂದರ್ಶಕರನ್ನು ಆಕರ್ಷಿಸುವ ಈ ಸ್ಮಾರಕ ಬೆಳಗ್ಗೆ 6.30ರಿಂದ ರಾತ್ರಿ 9.30ರ ತನಕ ವೀಕ್ಷಣೆಗೆ ತೆರೆದಿರುತ್ತದೆ. ಸುಮಾರು 45 ನಿಮಿಷಗಳಲ್ಲಿ ನೋಡಬಹುದಾದ ಈ ಸ್ಮಾರಕಕ್ಕೆ ಪ್ರವೇಶ ಉಚಿತ.

Tags

Related Articles

Leave a Reply

Your email address will not be published. Required fields are marked *

Language
Close