ವಿಶ್ವವಾಣಿ

ಪ್ರಿಂಟ್ ಪತ್ರಕರ್ತರು ಓಡುವುದಿಲ್ಲ, ಟಿವಿ ಪತ್ರಕರ್ತರು ಓದುವುದಿಲ್ಲ!

ನನ್‌ನ್ ತಕರಾರು ಇರುವುದೇ ಪತ್ರಿಕೆಗಳಿಗೆ ಬರೆಯುವ ಪತ್ರಕರ್ತರನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಇತ್ತೀಚಿನ ದಿನಗಳಲ್ಲಿ ಅವರು ಓಡಾಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಅದರಲ್ಲೂ ಟಿವಿ ಮಾಧ್ಯಮ ಜನಪ್ರಿಯವಾದ ನಂತರ ಪ್ರಿಂಟ್ ಪತ್ರಕರ್ತರು ಪರಮ ಆಲಸಿಗಳಾಗಿಬಿಟ್ಟಿದ್ದಾರೆ. ಆಫೀಸಿನಲ್ಲೋ, ಮನೆಯಲ್ಲೋ ಟಿವಿ ನೋಡಿ ವರದಿ ಮಾಡುತ್ತಾರೆ. ಕೆಲವು ವರದಿಗಾರರು ಘಟನಾ ಸ್ಥಳಕ್ಕೆ ಹೋಗುವುದೇ ಇಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅಥವಾ ವೆಬ್ ಪತ್ರಿಕೋದ್ಯಮ ಜನಪ್ರಿಯವಾಗುತ್ತಿದೆಯಲ್ಲ?ಪ್ರಿಂಟ್ ಪತ್ರಕರ್ತರು ಪಿಂಚಣಿದಾರರಂತೆ ವರ್ತಿಸಲಾರಂಭಿಸಿದ್ದಾರೆ. ನಾಲ್ಕು ವೆಬ್‌ಸೈಟ್‌ಗಳನ್ನು ನೋಡಿ ‘ಕಟ್ ಆ್ಯಂಡ್ ಪೇಸ್‌ಟ್ ಮನೆಯಲ್ಲೇ ಕುಳಿತು ತಮ್ಮ ವರದಿ ಸಲ್ಲಿಸುತ್ತಿದ್ದಾರೆಂಬುದನ್ನು ಅವರ ವರದಿ ನೋಡಿಯೇ ಹೇಳಬಹುದು. ಇತ್ತೀಚೆಗೆ ಈ ಬಗ್ಗೆ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ ಮೂವರು ಹಿರಿಯ ಪತ್ರಕರ್ತ ಸ್ನೇಹಿತರ ಜತೆ ಚರ್ಚಿಸಿದಾಗ, ಅವರೂ ಸಹ ಈ ವಿಷಯವನ್ನು ದೃಢಪಡಿಸಿದರು. ಪತ್ರಿಕೆಗಳ ವರದಿಗಳು ಯಾಕೆ ನೀರಸವಾಗುತ್ತಿದೆಯೆಂದರೆ, ವರದಿಗಾರರು ಹೊರಕ್ಕೆ ಹೋಗುವುದಿಲ್ಲ. ಮನೆ ಹಾಗೂ ಆಫೀಸಿನಿಂದ ಕದಲುವುದಿಲ್ಲ. ಘಟನಾಸ್ಥಳಕ್ಕೆ ಹೋಗಿ ವರದಿ ಮಾಡುವುದಿಲ್ಲ. ಹೀಗಾಗಿ ಅವರ ವರದಿಗಳಲ್ಲಿ ದೃಶ್ಯಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಎಲ್ಲ ನೀರಸವಾಗಿರುತ್ತವೆ. ವರದಿಯಲ್ಲಿ ಮೂಡ್ ಸಹ ಇರುವುದಿಲ್ಲ. ಬರೀ ಹೇಳಿದರು, ತಿಳಿಸಿದರು. ನುಡಿದರು ಎಂದಿರುತ್ತದೆ. ಕಾರಣ ವರದಿಗಾರರು ಕಾರ್ಯಕ್ರಮಕ್ಕೆ ಹೋಗಿರುವುದಿಲ್ಲ. ಆ ಕಾರ್ಯಕ್ರಮ ವರದಿ ಮಾಡಲು ಹೋದ ಟಿವಿ ವರದಿಗಾರನನ್ನು ಕೇಳಿ ಬರೆಯುತ್ತಾರೆ.

‘ಬ್ರದರ್, ನೀನು ಹೋದ ಕಾರ್ಯಕ್ರಮದಲ್ಲಿ ಏನೇನಾಯ್ತು? ನಾಲ್ಕು ಪಾಯಿಂಟ್‌ಸ್ ಕೊಡು’ ಎಂದು ಮನೆಯಲ್ಲೇ ಕುಳಿತು ವರದಿ ಮಾಡುತ್ತಾರೆ. ಇಲ್ಲವೇ ಬೆಳಗ್ಗೆ ನಡೆದ ಕಾರ್ಯಕ್ರಮದ ವರದಿ ವೆಬ್‌ಸೈಟ್‌ಗಳಲ್ಲಿ ಬಂದಿರುತ್ತದೆ. ಸಾಯಂಕಾಲದ ಪತ್ರಕೆಗಳಲ್ಲಿ ಪ್ರಕಟವಾಗಿರುತ್ತದೆ. ಆ ಪತ್ರಿಕೆಗಳು, ವೆಬ್‌ಸೈಟ್‌ಗಳಿಗೆ ‘ಕಟ್ ಆ್ಯಂಡ್ ಪೇಸ್‌ಟ್ ’ ಮಾಡಿ, ಅಲ್ಪಸ್ವಲ್ಪ ಬದಲಾವಣೆ ಮಾಡಿ, ಒಪ್ಪಿಸುತ್ತಾರೆ. ಇದರಿಂದ ವರದಿಯಲ್ಲಿ ಯಾವುದೇ ಹೊಸ ಸಂಗತಿ, ನೋಟ, ಹುಡುಕಾಟಗಳಿರುವುದಿಲ್ಲ.

ಪ್ರಿಂಟ್ ವರದಿಗಾರ ಕಾರ್ಯಕ್ರಮ ಅಥವಾ ಘಟನಾ ಸ್ಥಳಗಳಿಗೆ ಹೋದರೆ ಟಿವಿ ಕೆಮರಾಗಳಿಗೆ ಕಾಣದ ಹೊಸ ನೋಟಗಳು ಕಾಣಬಹುದು. ಅವೆಲ್ಲವನ್ನೂ ತನ್ನ ವರದಿಯಲ್ಲಿ ಪ್ರಸ್ತಾಪಿಸಬಹುದು. ಪ್ರತಿ ವರದಿಗೂ ಅದರದ್ದೇ ಆದ ಆ್ಯಂಗಲ್(ದೃಷ್ಟಿಕೋನ), ಮೂಡ್ (ಭಾವ) ಹಾಗೂ ಕಲರ್(ಬಣ್ಣ) ಎಂಬುದಿರುತ್ತದೆ. ಅವೆಲ್ಲವೂ ವರದಿಯಲ್ಲಿ ಪ್ರಕಟವಾದರೆ ಅದಕ್ಕೊಂದು ಹೊಸ ಆಯಾಮ ವರದಿಯಲ್ಲಿ ಮೂಡ್ ಇಲ್ಲದಿದ್ದರೆ. ಬಣ್ಣ ಇಲ್ಲದಿದ್ದರೆ ಸಪ್ಪೆ ಎನಿಸುತ್ತದೆ. ಕಣ್ಣಿಲ್ಲದ ಓದುಗ ಪತ್ರಿಕೆಯನ್ನು ಬೇರೆಯವರಿಂದ ಓದಿಸಿಕೊಂಡಾಗಲೂ ಅವನ ಮುಂದೆ ದೃಶ್ಯಗಳು ಹಾದು ಹೋಗಬೇಕು. ಹಾಗೆ ಆಗಬೇಕೆಂದರೆ, ವರದಿಗಾರ ತನ್ನ ವರದಿಯಲ್ಲಿ ಅಕ್ಷರಗಳಲ್ಲಿ ದೃಶ್ಯವನ್ನು ಮೂಡಿಸಬೇಕು. ಹಾಗೆ ಮೂಡಿಸಬೇಕೆಂದರೆ, ಆತ ಸಾಕ್ಷಾತ್ ಆ ಕಾರ್ಯಕ್ರಮ ಅಥವಾ ಘಟನಾ ಸ್ಥಳದಲ್ಲಿರಬೇಕು.

ಟಿವಿ ಬರುವುದಕ್ಕೆ ಮುನ್ನ ಪತ್ರಿಕಾ ವರದಿಗಾರರು ಸ್ವತಃ ಸ್ಥಳಕ್ಕೆ ಹೋಗುತ್ತಿದ್ದರು. ಅಪಘಾತವಾದ ಜಾಗಕ್ಕೆ ಹೋಗಿ ವರದಿ ಮಾಡುತ್ತಿದ್ದರು. ನಾನು ಹೈಸ್ಕೂಲಿನಲ್ಲಿ ಪತ್ರಿಕೆಗಳಲ್ಲಿ ಸಾಕ್ಷಾತ್ ವರದಿ, ಪ್ರತ್ಯಕ್ಷದರ್ಶಿ ವರದಿ ಎಂದೆಲ್ಲ ವರದಿಗಳು ಪ್ರಕಟವಾಗುತ್ತಿದ್ದವು. ಬೆಂಗಳೂರಿಗೆ ಸನಿಹದ ತೊಂಡೆಬಾವಿ ಎಂಬ ಊರಿನಲ್ಲಿ ಕರ್ನಾಟಕ ಎಕ್‌ಸ್ಪ್ರೆಸ್ ರೈಲು ಅಪಘಾತಕ್ಕೀಡಾಗಿತ್ತು. ರಾತ್ರೋರಾತ್ರಿ ಪತ್ರಿಕಾ ಕಚೇರಿಗಳಿಂದ ವರದಿಗಾರರು ಸುರಿವ ಮಳೆಯನ್ನು ಲೆಕ್ಕಿಸದೇ, ರಾತ್ರಿ ಹನ್ನೆರಡು ಘಂಟೆಗೆ ಅಪಘಾತ ನಡೆದ ಸ್ಥಳಕ್ಕೆ ಭೇಟಿ ಕೊಟ್ಟು, ಹತ್ತಿರದ ಗ್ರಾಮಕ್ಕೆ ಟೆಲಿಫೋನ್ ಹುಡುಕಿಕೊಂಡು ಹೋಗಿ, ಅಲ್ಲಿಂದಲೇ ಫೋನ್ ಮೂಲಕ ಘಟನೆಯ ವಿವರಗಳನ್ನು ನೀಡಿ, ವರದಿ ಮಾಡಿದ್ದನ್ನು ಪತ್ರಿಕೆಯಲ್ಲಿ ಓದಿದ್ದು ಈಗಲೂ ನೆನಪಿದೆ.

ಇತ್ತೀಚಿನ ದಿನಗಳಲ್ಲಿ ಇಂಥ ವರದಿಗಳು ಪತ್ರಿಕೆಯಲ್ಲಿ ಕಾಣುವುದೇ ಇಲ್ಲ. ಯಾಕೆಂದರೆ ಪತ್ರಿಕಾ ವರದಿಗಾರ ಅಷ್ಟೆಲ್ಲ ಶ್ರಮಪಟ್ಟು ಘಟನಾ ಸ್ಥಳಕ್ಕೆ ಹೋಗುವುದೇ ಇಲ್ಲ. ಈ ಕೆಲಸವನ್ನು ಟಿವಿ ವರದಿಗಾರ ಹಾಗೂ ಟಿವಿ ಕೆಮರಾಮನ್ ಮಾಡುತ್ತಾರೆ. ಅವರು ಘಟನಾ ಸ್ಥಳದಿಂದಲೇ ಲೈವ್ ವರದಿ ಮಾಡುತ್ತಾರೆ. ಅದನ್ನು ಮನೆಯಲ್ಲೋ, ಆಫೀಸಿನಲ್ಲೋ ಕುಳಿತು ಪ್ರಿಂಟ್ ವರದಿಗಾರ ನೋಡಿ ವರದಿ ಮಾಡುತ್ತಾನೆ. ಕೆಮರಾಕಣ್ಣಿಗೆ ಕಂಡಷ್ಟೇ ವಿವರಗಳು ಅವನಿಗೂ ಕಾಣಲು ಸಾಧ್ಯ. ಅದಕ್ಕಿಂತ ಮಿಗಿಲಾದ ಸಂಗತಿಗಳು ಅವನ ಹೇಗೆ ಸಾಧ್ಯ? ಪತ್ರಿಕೆಗಳಲ್ಲಿ ಪ್ರತ್ಯಕ್ಷದರ್ಶಿಗಳು, ಅಧಿಕಾರಿಗಳ,ಪವಾಡಸದೃಶ ರೀತಿಯಲ್ಲಿ ಬದುಕುಳಿದವರ ಮಾತು ಹಾಗೂ ಇನ್ನಿತರ ಮಾನವ ಆಸಕ್ತಿ ವಿಷಯಗಳು ಆ ವರದಿಯಲ್ಲಿರಲು ಹೇಗೆ ಸಾಧ್ಯ?

ಟಿವಿ ಚಾನೆಲ್‌ಗಳು ಬಂದ ನಂತರ ಪತ್ರಿಕಾ ವರದಿಗಾರರು ಪರಮ ಸೋಂಭೇರಿಗಳಾಗಿದ್ದಾರೆ. ಯಾರೂ ಸಹ ತಮ್ಮ ವೃತ್ತಿಗೆ ನ್ಯಾಯ ಒದಗಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದಿನಕ್ಕೆ ಮೂರು-ನಾಲ್ಕು ಪ್ರಚಾರಸಭೆಗಳಲ್ಲಿ ಮಾತಾಡಿದರು. ಅವರ ಭಾಷಣಗಳನ್ನು ಎಲ್ಲ ಟಿವಿ ಚಾನೆಲ್‌ಗಳು ಲೈವ್ ಪ್ರಸಾರ ಕೆಲವು ಪತ್ರಿಕಾ ವರದಿಗಳನ್ನು ಮರುದಿನ ಓದಿದಾಗ, ಅದನ್ನು ಬರೆದ ವರದಿಗಾರರು ಖಂಡಿತವಾಗಿಯೂ ಆ ಕಾರ್ಯಕ್ರಮದಲ್ಲಿ ಭಾಗವಹಸಿಲ್ಲ ಎಂದು ಯಾರು ಬೇಕಾದರೂ ಹೇಳಬಹುದಿತ್ತು. ಕಾರಣ ಟಿವಿಯಲ್ಲಿ ಪ್ರಸಾರವಾಗಿದ್ದಕ್ಕಿಂತ ಹೆಚ್ಚಿನ ಯಾವ ಸಂಗತಿಗಳೂ ಆ ವರದಿಗಳಲ್ಲಿ ಇರಲಿಲ್ಲ. ಪತ್ರಿಕಾ ವರದಿಗಾರ ಮನೆಯಲ್ಲಿ ಆರಾಮ ಕುರ್ಚಿಯಲ್ಲಿ ಪವಡಿಸಿ ಬರೆದಾಗ ಮಾತ್ರ ಇಂಥ ವರದಿ ಹುಟ್ಟಲು ಸಾಧ್ಯ. ಇಲ್ಲದಿದ್ದರೆ ವರದಿಗಾರರಿಗೆ ಇನ್ನೂ ಅನೇಕ ಸಂಗತಿಗಳು, ದೃಶ್ಯಗಳು, ಕಾಣುತ್ತಿದ್ದವು. ಅವು ವರದಿಯಲ್ಲಿ ಪ್ರಸ್ತಾಪವಾಗದೇ ಹೋಗುತ್ತಿರಲಿಲ್ಲ. ಆದರೆ ಯಾವ ಕುರುಹುಗಳೂ ವರದಿಯಲ್ಲಿ ಇರಲಿಲ್ಲ.

ಇತ್ತೀಚೆಗೆ ವಿಪರೀತ ಮಳೆಯಿಂದ ಚಾರ್ಮಾಡಿ ಘಾಟಿನಲ್ಲಿರುವ ರಸ್ತೆ ಭೂಕುಸಿತದಿಂದ ಸಂಚಾರ ಬಂದ್ ಆದಾಗ, ದಿನಗಟ್ಟಲೆ ವಾಹನಗಳಲ್ಲಿರುವ ಪ್ರಯಾಣಿಕರು ಪರದಾಡುವಂತಾಯಿತು.. ಆಗ ಎಲ್ಲ ಚಾನೆಲ್‌ಗಳು ದಿನವಿಡೀ ಆ ದೃಶ್ಯಗಳನ್ನು ಸ್ಥಳದಿಂದಲೇ ವರದಿ ಮಾಡಿದವು. ಪ್ರಯಾಣಿಕರು ಅನುಭವಿಸಿದ ತಾತ್ರಯಗಳನ್ನು ತೋರಿಸಿದವು. ಆದರೆ ಪತ್ರಿಕೆಗಳ ವರದಿಗಾರರು ಬೆಚ್ಚಗೆ ಟಿವಿ ನೋಡುತ್ತಾ ಕುಳಿತಿದ್ದರು. ಅದನ್ನು ನೋಡಿಯೇ ಎಲ್ಲರೂ ವರದಿ ಮಾಡಿದರು. ಹೀಗಾಗಿ ಯಾವ ಪತ್ರಿಕೆಗಳಲ್ಲೂ ಪ್ರಯಾಣಿಕರು ಅನುಭವಿಸಿದ ಕರುಣಾಜನಕ ಓದುಗರಿಗೆ ಗೊತ್ತೇ ಆಗಲಿಲ್ಲ.

ಟಿವಿ ಚಾನೆಲ್ಲುಗಳು ಪತ್ರಿಕಾ ವರದಿಗಾರರಿಗೆ ಸಿದ್ಧಪಡಿಸಿದ ಗೈಡುಗಳಾಗಿವೆ, ಉತ್ತರ ಪತ್ರಿಕೆಗಳಂತಾಗಿವೆ. ಎಲ್ಲವನ್ನೂ ಟೇಬಲ್ ಮೇಲೆ ಇಟ್ಟರೆ ಏನೂ ಶ್ರಮ ಪಡದೇ, ಊಟ ಮಾಡಿ ಎದ್ದು ಹೋಗುವಂತೆ. ಪತ್ರಿಕಾ ವರದಿಗಾರರ ಕೆಲಸ ಅಷ್ಟು ಸುಲಭವಾಗಿದೆ. ಇದೇನು ಆರೋಪ ಅಲ್ಲ. ಒಂದು ವೇಳೆ ಆರೋಪ ಅಂತ ಭಾವಿಸಿದರೂ ತಪ್ಪಿಲ್ಲ. ಕಾರಣ ಇದು ವಾಸ್ತವ. ಯಾವುದಾದರೊಬ್ಬ ವರದಿಗಾರ ತಾನು ಗ್ರೌಂಡ್ ರಿಪೋರ್ಟ್ ಮಾಡಿದ್ದೇನೆ, ಸಾವಿರಾರು ಕಿ.ಮೀ. ತಿರುಗಾಡಿ ವರದಿ ಎಂದು ಹೇಳಲಿ, ನೋಡೋಣ.

ನನಗೆ ಇಲ್ಲಿ ಪಿ. ಸಾಯಿನಾಥ ಅವರ ನೆನಪಾಗುತ್ತದೆ. ಅವರು ಗ್ರಾಮೀಣ ಭಾರತದ ನೈಜ ಸ್ಥಿತಿ ಅರಿಯಲು, ದೇಶಾದ್ಯಂತ ಹತ್ತಾರು ಸಾವಿರ ಕಿ.ಮೀ. ಸಂಚರಿಸಿದರು. ವರ್ಷಗಟ್ಟಲೆ ಅಲೆದಾಡಿದರು. ಅಷ್ಟು ದಿನಗಳ ಕಾಲ ಹಳ್ಳಿಗಳಲ್ಲಿಯೇ ವಾಸ್ತವ್ಯ ಹೂಡಿದರು. ದೇಶದ ಬೆನ್ನೆಲುಬಾದ ರೈತನ ಕಷ್ಟ- ಕಾರ್ಪಣ್ಯಗಳನ್ನು ಸಾಕ್ಷಾತ್ ನೋಡಿದರು. ಅಲ್ಲಿಯವರೆಗೆ ಗ್ರಾಮೀಣ ಭಾರತವನ್ನು ಯಾರೂ ಅಷ್ಟು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿರಲಿಲ್ಲ. ಅನಂತರ ಅವರು ಪತ್ರಿಕೆಗಳಲ್ಲಿ ಸರಣಿ ಲೇಖನಗಳನ್ನು ಬರೆದರು.

ಅಂಥ ವರದಿ ಇಂದಿನವರೆಗೂ ಭಾರತದ ಯಾವ ಪತ್ರಿಕೆಯಲ್ಲೂ ಪ್ರಕಟವಾಗಿಲ್ಲ. ಕನ್ನಡದಲ್ಲಂತೂ ಇಂಥ ಪ್ರಯತ್ನವೇ ಆಗಿಲ್ಲ. ಇತ್ತೀಚಿನ ಯಾವ ಪತ್ರಕರ್ತರಲ್ಲೂ ಅಂಥ ಹುಕಿ ಇರುವುದನ್ನು ನಾನಂತೂ ಗಮನಿಸಿಲ್ಲ. ಕನ್ನಡದ ಯಾವ ಪತ್ರಕರ್ತನೂ ಆಳ-ಅಗಲ ವರದಿಗಳಲ್ಲಿ ಆಸಕ್ತಿ ಹೊಂದಿಲ್ಲ. ‘ಪ್ರಜಾವಾಣಿ’ ಪತ್ರಿಕೆಯೊಂದೇ ವಾರದಲ್ಲಿ ಅಂಥ ಒಂದು ವರದಿ ಮಾಡಿ ಕೈತೊಳೆದುಕೊಳ್ಳುತ್ತಿದೆ. ಅಷ್ಟರಮಟ್ಟಿಗಾದರೂ ಆ ಪತ್ರಿಕೆ ಪ್ರಯತ್ನ ಮೆಚ್ಚಲೇಬೇಕು.

ನಾನು ಇನ್ನೂ ಒಂದು ಸಂಗತಿಯನ್ನು ಕೇಳಿದ್ದೇನೆ. ಅದೇನೆಂದರೆ, ಯಾವುದಾದರೂ ಒಂದು ಕಾರ್ಯಕ್ರಮಕ್ಕೆ ಎಲ್ಲಾ ಪತ್ರಿಕೆಗಳ ವರದಿಗಾರರು ಭಾಗವಹಿಸುವುದಿಲ್ಲ. ಮೂರೋ- ನಾಲ್ಕೋ ವರದಿಗಾರರು ಮಾತ್ರ ವರದಿ ಮಾಡಲು ಹೋಗುತ್ತಾರೆ. ಹೋಗದವರು ಹೋದವರಿಂದ ಎಲ್ಲ ಮಾಹಿತಿ ಪಡೆದು ವರದಿ ಸಲ್ಲಿಸುತ್ತಾರೆ. ಇಂಥ ವರದಿಗಾರರಿಂದ ಯಾವ ರೀಯ ವರದಿ ನೀರಿಕ್ಷಿಸಲು ಸಾಧ್ಯ? ಯೋಚಿಸಿ.

ಚುನಾವಣೆ ಸಂದರ್ಭದಲ್ಲಾದರೂ ವರದಿಗಾರರು ಸಾಕ್ಷಾತ್ ಸಮೀಕ್ಷೆ ಮಾಡುತ್ತಿದ್ದರು. ಮೊನ್ನೆಯ ವಿಧಾನಸಭಾ ಚುನಾವಣೆಯನ್ನು ಗಮನಿಸಿದಾಗ ಆ ಸಂಪ್ರದಾಯಕ್ಕೂ ತಿಲಾಂಜಲಿ ಇತ್ತಂತೆ ಕಾಣುತ್ತಿದೆ.

ಇನ್ನೊಂದು ಸಂಗತಿ ಗಮನಿಸಿರಬಹುದು. ಅದೇನೆಂದರೆ, ಯಾವುದೇ ಕಾರ್ಯಕ್ರಮ, ಪತ್ರಿಕಾಗೋಷ್ಠಿ ಅಥವಾ ಇನ್ನಿತರ ಟಿವಿ ವರದಿಗಾರರು, ಕೆಮರಾಮನ್‌ಗಳು ಮಾತ್ರ ವಿಜೃಂಭಿಸುತ್ತಾರೆ. ಪತ್ರಿಕೆಗಳ ವರದಿಗಾರರು ಕಾಣುವುದೇ ಇಲ್ಲ. ಕಂಡರೂ ಅಂಥವರ ಸಂಖ್ಯೆ ಕಡಿಮೆ ಇರುತ್ತದೆ. ಅವರು ಆಫೀಸಿನಲ್ಲೇ ಕುಳಿತು ಈ ವಿದ್ಯಮಾನಗಳನ್ನು ನೋಡುತ್ತಾ ವರದಿ ಮಾಡುವುದರಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ.

ನನಗಂತೂ ಈ ಪತ್ರಕರ್ತರ ವರದಿಗಳಲ್ಲಿ ಹೊಸತನ, ನಾವೀನ್ಯ ಕಾಣುತ್ತಿಲ್ಲ. ಕೆಲವರಿಗಂತೂ ವಿಧಾನಸೌಧ ಸುತ್ತುವುದರಲ್ಲೇ ಹೆಚ್ಚು ಆಸಕ್ತಿ. ಇನ್ನು ಕೆಲವರು ಪ್ರೆಸ್ ಕ್ಲಬ್‌ನಲ್ಲಿಯೇ ಕುಳಿತು ಎಲ್ಲಾ ವರದಿಗಳನ್ನು ಬರೆಯುತ್ತಾರೆಂದು ಸಹ ಕೇಳಿದ್ದೇನೆ. ಆಂಥವರು ಬರೆಯುವ ವರದಿಗಳನ್ನು ಸೂಕ್ಷ್ಮ ಮನಸ್ಸಿನ ಓದುಗರಿಗೆ ಘಟನಾ ಸ್ಥಳಕ್ಕೆ ಹೋಗದೇ ಬರೆದ ವರದಿಗಳೆಂದು ಗೊತ್ತಾಗುತ್ತದೆ. ಪತ್ರಿಕಾ ವರದಿಗಾರನಾದವನು ವರದಿಗಾರಿಕೆಗೆ ಎರಡನೆಯ ಅಥವ ಮೂರನೆಯ ಮೂಲಗಳನ್ನು ನೆಚ್ಚಿಕೊಂಡರೆ, ಆತ ಸಂವೇದನೆರಹಿತನಾಗುತ್ತಿದ್ದಾನೆಂದೇ ಅರ್ಥ. ಪತ್ರಕರ್ತರ ಈ ಕೆಟ್ಟ ಚಾಳಿ ಫೋಟೊಜರ್ನಲಿಸ್ಟಗಳಿಗೂ ಅಂಟಿಕೊಳ್ಳುತ್ತಿದೆ. ಟಿವಿ ಚಾನೆಲ್ಲುಗಳ ಭರಾಟೆಯಲ್ಲಿ ಅವರೂ ಮಂಕಾಗುತ್ತಿದ್ದಾರೆ. ಒಬ್ಬ ತೆಗೆದ ಫೋಟೊ ನಾಲ್ಕೈದು ಪತ್ರಿಕೆಗಳಿಗೆ ರೀಸೈಕಲ್ ಆಗುತ್ತದೆ. ಹೀಗಾಗಿ ಎಲ್ಲಾ ಪತ್ರಿಕೆಗಳಲ್ಲಿ ಒಂದೇ ರೀತಿಯ ಫೋಟೊ ಪ್ರಕಟವಾಗುತ್ತದೆ. ಮೊನ್ನೆ ಕೇರಳದಲ್ಲಿ ಮಹಾಪ್ರವಾಹ ಬಂದಾಗ, ಮಾಥ್ಯೂ ಜರ್ನಲಿಸ್‌ಟ್ ಎದೆವರೆಗಿನ ನೀರಿನಲ್ಲಿ ಹೋಗಿ, ಜೀವದ ಹಂಗು ತೊರೆದು ತೆಗೆದ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಪತ್ರಿಕಾ ವರದಿಗಾರರಲ್ಲೂ ಅಂಥ ಛಲ, ವೃತ್ತಿನಿಷ್ಠೆ, ಸಾಹಸ ಪ್ರವೃತ್ತಿಯನ್ನು ಓದುಗರು ಬಯಸುತ್ತಾರೆ. ನಮಗೆ ‘ಆರ್ಮ್ ಚೇರ್ ಜರ್ನಲಿಸ್‌ಟ್ ’ಗಳು ಬೇಡ.

ಈ ವಿಷಯದಲ್ಲಿ ಟಿವಿ ಚಾನೆಲ್‌ಗಳ ಪತ್ರಕರ್ತರೇ ವಾಸಿ. ಅವರು ಯಾವ ಘಟನೆ, ಎಲ್ಲಿಯೇ ನಡೆದರೂ ತಕ್ಷಣ ಘಟನಾ ಸ್ಥಳಕ್ಕೆ ಓಡುತ್ತಾರೆ. ಎಲ್ಲರಿಗಿಂತ ಮುಂಚೆ ತಾನೇ ಹೋಗಬೇಕು, ಮೊದಲ ತಾನೇ ಸೆರೆ ಹಿಡಿಯಬೇಕು ಎಂಬ ಧಾವಂತದಲ್ಲಿ ಓಡೋಡಿ ಹೋಗುತ್ತಾರೆ. ಪತ್ರಿಕಾ ವರದಿಗಾರರಲ್ಲಿ ಕಂಡುಬರುವ ಆಲಸ್ಯ, ದಪ್ಪ ಚರ್ಮ ಅವರಲ್ಲಿ ಕಂಡು ಬರುವುದಿಲ್ಲ. ಟಿವಿ ಪತ್ರಕರ್ತರಿಗೆ ಬೈಟ್‌ಸ್ ಬೇಕು, ವಿಶುವಲ್‌ಸ್ ಬೇಕು. ಅದಕ್ಕಾಗಿ ಅವರು ಪಾತಾಳಕ್ಕೆ ಬೇಕಾದರೂ ಮುಳುಗು ಹಾಕಬಲ್ಲರು. ಕನಿಷ್ಠ ಹತ್ತು ಸೆಕೆಂಡ್‌ಗಳ ವಿಶುವಲ್‌ಗೆ ಎಂಥ ಹರಸಾಹಸವನ್ನಾದರೂ ಮಾಡಬಲ್ಲರು. ಪ್ರವಾಹ ಬರಲಿ, ಭೂಕಂಪವಾಗಲಿ, ದುರಂತಗಳು ಸಂಭವಿಸಲಿ, ಬೆಂಕಿ ಬೀಳಲಿ, ಟಿವಿ ವರದಿಗಾರರು, ಕೆಮರಾಮನ್‌ಗಳ ಜತೆಯಲ್ಲಿ ಅರೆಕ್ಷಣದಲ್ಲಿ ಹಾಜರ್!

ಮುಂಬೈ ಸ್ಫೋಟದಲ್ಲಿ ಟಿವಿ ವರದಿಗಾರರು ಹಾಗೂ ಕೆಮರಾಮನ್‌ಗಳ ಕಾಯಕನಿಷ್ಠೆ ಕಂಡು ನಾನು ಬೆರಗಾಗಿದ್ದೆ. ವಾರಗಟ್ಟಲೆ ಮುಂಬೈನ ಒಬೇರಾಯ್ ಹಾಗೂ ತಾಜ್ ಹೋಟೆಲ್ ಮುಂದೆ ನಿಂತು ವರದಿ ಮಾಡಿದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಆದರೆ ಅಂಥ ಕಾಯಕನಿಷ್ಠೆ ಪತ್ರಿಕಾ ವರದಿಗಾರರಲ್ಲಿ ಕಾಣಲಿಲ್ಲ. ಘಟನಾ ಸ್ಥಳಕ್ಕೆ ಹೋಗದೇ ವರದಿ ಮಾಡುವುದು ಸಾಧ್ಯವೇ ಇಲ್ಲ ಎಂದು ಟಿವಿ ವರದಿಗಾರ ಭಾವಿಸಿದರೆ, ಪತ್ರಿಕಾ ವರದಿಗಾರ ಈ ವಿಷಯದಲ್ಲಿ ಸರೀ ಉಲ್ಟಾ!

ಟಿವಿ ವರದಿಗಾರರಿಂದ ಪತ್ರಿಕಾ ವರದಿಗಾರರು ಬೆಳೆಸಿಕೊಂಡಿರುವುದು ನಿಜ. ಘಟನಾಸ್ಥಳಕ್ಕೆ ಹೋಗದಿದ್ದರೂ ಆಗುತ್ತದೆ ಎಂಬ ಮನೋಭಾವವನ್ನು ಪತ್ರಿಕಾವರದಿಗಾರರು ಬೆಳೆಸಿಕೊಂಡುಬಿಟ್ಟಿದ್ದಾರೆ. ಹನ್ನೆರಡು-ಹದಿನೈದು ವರ್ಷಗಳ ಹಿಂದೆ, ಮುಖ್ಯಮಂತ್ರಿಗಳ ಮನೆಯಲ್ಲೋ, ಶಾಸಕರ ಗುಂಪಿನಲ್ಲೋ ಚಟುವಟಿಕೆಗಳು ಗರಿಗೆದರಿದರೆ, ಪತ್ರಿಕಾ ವರದಿಗಾರರು ಓಡುತ್ತಿದ್ದರು. ಈಗ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬಂದರೂ ಕಚೇರಿ ಬಿಟ್ಟು ಕದಲುವುದಿಲ್ಲ. ಟಿವಿ ನೋಡುತ್ತಾ ವರದಿ ಬರೆದು ಕೊಡುತ್ತಾರೆ. ಆಗ ವರದಿಗಾರನಾದವನು ವೀಕ್ಷಕನಾಗುತ್ತಾನೆ. ಎಲ್ಲ ವಿಕ್ಷಕರು ನೋಡಿದ್ದನ್ನೇ ವರದಿಗಾರ ನೋಡುತ್ತಾನೆ. ಅವನಿಗೆ ಹೊಸ ಸಂಗತಿಗಳು ಕಾಣಲು ಸಾಧ್ಯವಿಲ್ಲ. ಹೀಗಾಗಿ ಮರುದಿನ ಪತ್ರಿಕಾ ವರದಿಯಲ್ಲಿ ಹೊಸ ವಿಷಯಗಳು ಸಿಗುವುದಿಲ್ಲ. ಪತ್ರಿಕೆಯಲ್ಲಿ ಬರೆದಿದ್ದನ್ನು ಹಿಂದಿನ ದಿನವೇ ಟಿವಿಯಲ್ಲಿ ನೋಡಿರುತ್ತಾನೆ.

ನನಗೆ ಟಿವಿ ವರದಿಗಾರರ ಬಗ್ಗೆ ಇರುವ ಒಂದೇ ಒಂದು ತಕರಾರೆಂದರೆ ಅವರು ಓದುವುದೇ ಇಲ್ಲ. ಉತ್ತಮ ಟಿವಿ ವರದಿಗಾರನಾಗಲು ಮಾತು, ಹಾವಭಾವ ಮಾತ್ರ ಇದ್ದರೆ ಸಾಕು ಎಂಬ ಭಾವನೆಯಿರುವುದರಿಂದ ಅವರು ಓದುವುದಿಲ್ಲ. ಅಲ್ಲದೇ ಅವರು ಓದುವುದಿಲ್ಲ ಎಂಬುದು ಅವರ ಮಾತುಗಳನ್ನು ಕೇಳಿದರೆ ಗೊತ್ತಾಗುತ್ತದೆ. ಕನಿಷ್ಠ ಪತ್ರಿಕೆಗಳನ್ನಾದರೂ ಓದದೇ ಒಳ್ಳೆಯ ಟಿವಿ ವರದಿಗಾರನಾಗಲು ಸಾಧ್ಯವೇ ಪುಸ್ತಕಗಳನ್ನಂತೂ ಟಿವಿ ವರದಿಗಾರರು ಓದುವುದೇ ಇಲ್ಲ. ಓದುವ ಅಭ್ಯಾಸವನ್ನು ಇಟ್ಟುಕೊಂಡರೆ, ಟಿವಿ ವರದಿಗಾರರಿಂದ ಇನ್ನೂ ಹೆಚ್ಚಿನ ಜ್ಞ್ಠಿಠಿ ನಿರೀಕ್ಷಿಸಬಹುದು. ಭಾಷಾಜ್ಞಾನವಿಲ್ಲದ ಟಿವಿ ವರದಿಗಾರ ಬಹುಬೇಗ ಬೆತ್ತಲಾಗುತ್ತಾನೆ. ವಿಷಯ ಸಂಗ್ರಹ, ಓದು, ಸಂಶೋಧನೆ ಇಲ್ಲದಿದ್ದರೆ, ಹೇಳಿದ್ದನ್ನೇ ಹೇಳುತ್ತಾ ತೌಡು ಕುಟ್ಟಬೇಕಾಗುತ್ತದೆ. ವೀಕ್ಷಕನ ಮುಂದೆ ಬರಿದಾಗಲು ಹೆಚ್ಚು ಹೊತ್ತುಬೇಡ. ಟಿವಿ ಪತ್ರಕರ್ತರು ಓದುಕೊಂಡಿದ್ದಾರೋ ಇಲ್ಲವೋ ಎಂಬುದು ಅವರ ಮಾತಿನಿಂದಲೇ ಗೊತ್ತಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ತಮ್ಮ ಕಾಯಕವನ್ನು ಸಮರ್ಪಕವಾಗಿ ಈಡೇರಿಸಲು ಓದುವುದೊಂದೇ ಮಾರ್ಗ ಅವರಿಗೆ ಗೊತ್ತಿರಬೇಕು. ಓದದೇ ಬರೆಯಲು ಸಾಧ್ಯವಿಲ್ಲ, ಮಾತಾಡುವುದೂ ಸಾಧ್ಯವಿಲ್ಲ.

ಇಷ್ಟು ಹೇಳಲೇಬೇಕೆನಿಸಿತು. ಒಬ್ಬ ಪತ್ರಿಕಾ ಓದುಗನಾಗಿ, ಟಿವಿ ವೀಕ್ಷಕನಾಗಿ.