ಜಾತಿ ಗಣತಿಯನ್ನು ಪ್ರಗತಿಪರರೇಕೆ ವಿರೋಧಿಸುತ್ತಿಲ್ಲ ?

Posted In : ರಾಜ್ಯ, ಸಂಗಮ, ಸಂಪುಟ

ಜಾತಿ ಜನಗಣತಿಯ ವಿಷಯದಲ್ಲಿ ಪ್ರಗತಿಪರರ ಮತ್ತು ಬುದ್ಧಿಜೀವಿಗಳ ಬಣ್ಣ ಕೊನೆಗೂ ಬಯಲಾಗಿದೆ. ಜಾತೀಯತೆಯನ್ನು ವಿರೋಧಿಸುವ ಈ ಜನರು ಜಾತಿ ಜನಗಣತಿಯನ್ನು ಯಾಕೆ ವಿರೋಧಿಸುತ್ತಿಲ್ಲ? ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿಯೂ ಮೂಡುತ್ತಿದೆ. ಜಾತಿ ಅನಿಷ್ಟ ಎಂಬುದು ಸತ್ಯ. ಆದರೆ ಈ ಜಾತಿ ಜನಗಣತಿ ಇಷ್ಟ ಅಂದರೆ ಇದರ ಅರ್ಥವೇನು? ಜಾತೀಯತೆ ಯಾರಿಗೆ ಅನಿಷ್ಟ, ಯಾರಿಗೆ ಇಷ್ಟ? ಎನ್ನುವುದು ಗೋಚರವಾಗುತ್ತಿದೆ. ಜನಗಣತಿ ಇಲ್ಲದೇ ಇದ್ದರೂ ಜಾತಿ ಇದ್ದೇ ಇರುತ್ತದೆ. ಮೀಸಲಾತಿಯಂತಹ ಒಡೆದು ಆಳುವ ನೀತಿಯಿಂದ ಜಾತೀಯತೆಗೆ ಕೊನೆ ಎಂಬುದೇ ಇಲ್ಲವಾಗಿದೆ. ಎಲ್ಲಿಯವರೆಗೆ ಜಾತಿ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರುತ್ತದೆ ಎಂದು ಉದ್ದುದ್ದ ಭಾಷಣ ಬಿಗಿಯುವುದರ ಮೂಲಕ ಪುಢಾರಿಗಳು ಪ್ರಚಾರ ಗಿಟ್ಟಿಸುತ್ತಿದ್ದಾರೆ.

 ಯಾವ ಪ್ರಕಾರ ಬೆಂಕಿಗೆ ತುಪ್ಪವನ್ನು ಸುರಿಯುವುದರಿಂದ ಬೆಂಕಿ ನಂದದೇ ಹೆಚ್ಚು ಹೆಚ್ಚು ಕಾಲ ಉರಿಯುತ್ತದೆಯೋ ಹಾಗೆ ಜಾತಿ ಜನಗಣತಿಯಿಂದ ಜಾತಿ ಭಾವನೆ ಕಡಿಮೆ ಆಗುವುದಿಲ್ಲ. ಬದಲಾಗಿ ಹೆಚ್ಚಾಗುತ್ತದೆ. ಜಾತಿ ಜನಗಣತಿಯಿಂದ ಇಬ್ಬಗೆಯ ಪರಿಣಾಮ ಉಂಟಾಗುತ್ತದೆ. ಒಂದು ಜಾತಿ ಬಹುಸಂಖ್ಯಾತ ಎಂದು ಕೇಳಿದಾಗ ಆ ಜಾತಿಯ ಜನರಲ್ಲಿ ದಬ್ಬಾಳಿಕೆಯ ಮನೋಭಾವ ಉಂಟಾಗುವ ಸಾಧ್ಯತೆ ಇದೆ. ಇನ್ನು ಜಾತಿಯ ನೆಲೆಯಲ್ಲಿ ಅಲ್ಪಸಂಖ್ಯಾತರು ಎಂದು ತಿಳಿದು ಬಂದಾಗ ಆ ಜಾತಿಯ ಜನರಲ್ಲಿ ಮಾನಸಿಕ ಹಿಂಜರಿತ ಉಂಟಾಗಲೂಬಹುದು. ಅಥವಾ ಕೆಲವೊಮ್ಮೆ ಆತ್ಮರಕ್ಷಣೆಗಾಗಿ ಸೇಡಿನ ಮನೋಭಾವ ಉದ್ದೀಪಿತವಾಗಬಹುದು.

ಸರಕಾರದ ಸೌಲಭ್ಯಗಳನ್ನು ಜಾತಿಯ ಆಧಾರದ ಮೇಲೆ ನಿಗದಿ ಪಡಿಸಿದರೆ ಸಂಖ್ಯೆಯಲ್ಲಿ ಹೆಚ್ಚಿರುವ ಜಾತಿಯವರಿಗೆ ಹೆಚ್ಚು ಸೌಲಭ್ಯ, ಸಂಖ್ಯೆಯಲ್ಲಿ ಕಡಿಮೆ ಇರುವ ಜಾತಿಯವರಿಗೆ ಕಡಿಮೆ ಸೌಲಭ್ಯ ಅಥವಾ ಕಾಲಾಂತರದಲ್ಲಿ ಯಾವ ಸೌಲಭ್ಯವೂ ಸಿಗದೇ ಹೋಗಬಹುದು. ಮೀಸಲಾತಿಯ ಪ್ರಭಾವದಿಂದ ಇಂದು ಒಂದು ವರ್ಗದವರು ಉದ್ಯೋಗದಲ್ಲಿ ಹಾಗೂ ಶಿಕ್ಷಣ ಮೊದಲಾದ ರಂಗಗಳಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ. ಬೇರೆ ದಾರಿ ಕಾಣದೇ ಇಂಥವರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಯಾಕೆಂದರೆ ಮೀಸಲಾತಿ ಇಲ್ಲದೇ ಇದ್ದರೂ ಜಗತ್ತಿನ ಯಾವ ಭಾಗದಲ್ಲಾದರೂ ಬುದ್ಧಿ ಬಲದಿಂದ ಬದುಕುವ ಹಕ್ಕು ಅವರಿಗೆ ಇದ್ದೇ ಇರುತ್ತದೆ. ಬಾಯಿ ತೆಗೆದರೆ ಮೇಲ್ವರ್ಗದವರಿಂದ ದಬ್ಬಾಳಿಕೆ ಎಂದು ಗಿಳಿಪಾಠ ಒಪ್ಪಿಸುವ ನಮ್ಮ ಪ್ರಗತಿಪರರು ಮತ್ತು ಬುದ್ಧಿಜೀವಿಗಳು, ಇಂದು ನಿಜವಾಗಿ ದಬ್ಬಾಳಿಕೆ ನಡೆಯುತ್ತಿರುವುದು ಯಾರಿಂದ? ಎನ್ನುವ ವಿಷಯ ತಿಳಿದರೂ ಬಾಯಿ ಬಿಡುತ್ತಿಲ್ಲ. ಯಾಕೆಂದರೆ ಸತ್ಯ ಅವರಿಗೂ ಗೊತ್ತಿದೆ. ಮಾತನಾಡಿದರೆ ಕಷ್ಟ ಎನ್ನುವುದು ಅವರಿಗೂ ತಿಳಿದಿದೆ. ಈ ದೇಶದಲ್ಲಿ ಜಾತೀಯತೆಯ ನಿರ್ಮೂಲನೆ ಅಸಾಧ್ಯ. ಆದರೆ ಆಯಾ ಜಾತಿಯವರ ಭಾವನೆಯನ್ನು ಸರಕಾರ ಸದಾ ಗೌರವಿಸುತ್ತ ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿ ಕಟ್ಟದೇ ಇದ್ದರೆ ಜಾತಿ ಅಷ್ಟೊಂದು ಅನಿಷ್ಟವನ್ನು ಉಂಟು ಮಾಡಲಾರದು. ಜಾತಿ ಜಾತಿಗಳನ್ನು ಒಡೆದು ಆಳುವುದೇ ಜಾತಿ ಜನಗಣತಿಯ ಮೂಲ ಉದ್ದೇಶ. ಇದರಿಂದ ಜನಸಾಮಾನ್ಯರಿಗೆ ಪ್ರಯೋಜನ ಆಗದೇ ಇದ್ದರೂ ರಾಜಕೀಯದವರಿಗಂತೂ ಪ್ರಯೋಜನ ಇದ್ದೇ ಇದೆ. ಶಿಕ್ಷಣ ಹಾಗೂ ಜಗತ್ತಿನ ವಿಭಿನ್ನ ಪ್ರದೇಶಗಳ ಪರಿಚಯ ಅಲ್ಲಿನ ಜನರ ರೀತಿನೀತಿ ಇವುಗಳನ್ನು ತಿಳಿದವರಲ್ಲಿ ಜಾತೀಯತೆ ಕ್ರಮೇಣ ಕಡಿಮೆಯಾಗುತ್ತಿದೆ.

ಜಾತಿ ಅವರವರ ವೈಯಕ್ತಿಕ ವಿಷಯವಾಗಿದೆಯೇ ಹೊರತು ಅದೊಂದು ಪ್ರತಿಷ್ಠೆಯ ಅಥವಾ ಪ್ರಯೋಜನದ ವಿಷಯವಾಗಿ ಇಂದು ಉಳಿದಿಲ್ಲ. ಆದ ಕಾರಣ ಜಾತೀಯತೆಯ ಮನೋಭಾವ ಕಡಿಮೆ ಆಗಬೇಕು ಅಂದರೆ ಜಾತಿಯ ಆಧಾರದಲ್ಲಿ ಜನಗಣತಿಯನ್ನು ಕೈಬಿಡಬೇಕು. ಇತ್ತೀಚೆಗೆ ನಡೆದ ಜಾತಿಯ ಜನಗಣತಿಯಲ್ಲಿ ಕೆಲವೊಂದು ವರ್ಗದವರನ್ನು ಬುದ್ಧ್ಯಾಪೂರ್ವಕವಾಗಿ ವಂಚಿಸಲಾಗಿದೆ ಎನ್ನುವ ವಿಷಯ ತಿಳಿದು ಬರುತ್ತಿದೆ. ಇಂತಹ ಮೋಸದ ನಡೆಯಿಂದ ಯಾವುದೇ ಸರಕಾರಕ್ಕೆ ಸಜ್ಜನಿಕೆಯ ಮೆರಗು ಬರಲಾರದು. ಆದ್ದರಿಂದ ಒಮ್ಮೆ ಜಾತಿ ಜನಗಣತಿ ನಡೆಸಿದರೂ ಸಹ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಮವಾಗಿ ವಿತರಿಸಬೇಕು. ಮೀಸಲಾತಿಯ ಆಧಾರದ ಮೇಲೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ನಿರಂತರವಾಗಿ ಅವಕಾಶ ವಂಚಿತರಾಗುತ್ತಿರುವ ಒಂದು ವರ್ಗದವರ ಹಿತಾಸಕ್ತಿಯನ್ನು ಕಾಪಾಡಲಿಕ್ಕೆ ಸರಕಾರ ಕೃತಸಂಕಲ್ಪಿತವಾಗಬೇಕು. ಅನ್ಯಾಯ ಎಲ್ಲಿ ನಡೆದರೂ ನಾವು ಪ್ರತಿಭಟಿಸುತ್ತೇವೆ ಎಂದು ಬೊಬ್ಬೆ ಹೊಡೆಯುವ ಬುದ್ಧಿಜೀವಿಗಳು ಹಾಗೂ ಪ್ರಗತಿಪರರು ಇನ್ನಾದರೂ ಜಾತಿ ಜನಗಣತಿಯ ಅನಿಷ್ಟದ ಬಗ್ಗೆ ಧ್ವನಿ ಎತ್ತಬೇಕಾಗಿದೆ.

ಪ್ರೊ. ವಿಷ್ಣು ಜೋಶಿ, ಕುಮಟಾ

(ಲೇಖಕರು ಹವ್ಯಾಸಿ ಬರಹಗಾರರು)

2 thoughts on “ಜಾತಿ ಗಣತಿಯನ್ನು ಪ್ರಗತಿಪರರೇಕೆ ವಿರೋಧಿಸುತ್ತಿಲ್ಲ ?

  1. No one want suport to the castisum and cast counting . it all required for only politician and some 420 basters not to puplic.

Leave a Reply

Your email address will not be published. Required fields are marked *

eleven + nine =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top