ಗದ್ದರ್‌ನೇ ಗದ್ದುಗೆ ಬೇಕೆಂದ ಮೇಲೆ ಇವರದ್ಯಾವ ಗದ್ದಲ ಸ್ವಾಮಿ?

Posted In : ಸಂಗಮ, ಸಂಪುಟ

ಸಚಿವರೊಬ್ಬರು ಕಳಿಸಿದ ಸಂದೇಶ ಹೀಗಿತ್ತು.‘ತಮ್ಮಾ, ಬಲಗೈ ಊಟಾ ಮಾಡ್ಲಿಕ್ಕೆ ಬೇಕು, ಎಡಗೈ ಅಂಡು ತೊಳಕೊಳ್ಳೋಕ ಬೇಕು, ಎಡ-ಬಲ ಬೇಕೇ ಬೇಕಲೇ…’ ತಕ್ಷಣ ನನಗೆ ನೆನಪಿಗೆ ಬಂದದ್ದು ಬಾಣ ಭಟ್ಟರ ‘ಭಟ್ಟರ್ ಸ್ಕಾಚ್’ ಓದುಗನೊಬ್ಬ ಪ್ರಶ್ನೆ ಕೇಳಿದ್ದ,‘ ಬಾಣಭಟ್ಟರೆ, ನೀವು ಎಡಪಂಥೀಯರೋ, ಬಲಪಂಥೀಯರೋ? ಬಾಣಭಟ್ಟರ ಉತ್ತರ ಸ್ವಾರಸ್ಯಕರವಾಗಿತ್ತು. ‘ನಾನು ನಡು ಪಂಥೀಯ’ ಉತ್ತರ ದ್ವಂದ್ವಾರ್ಥಕ್ಕೆಡೆ ಮಾಡಿದರೂ ಅದರ ಹಿಂದಿರುವ ಫಿಲಾಸಫಿ ಎಷ್ಟು ದೊಡ್ಡದಲ್ಲವೆ? ಎನಿಸಿತು.

ಸಚಿವರ ಸಂದೇಶದ ಬಗ್ಗೆ ನನ್ನ ವಿರೋಧವಿಲ್ಲ. ಪಂಥಕ್ಕಿಂತ ಬದುಕು ದೊಡ್ಡದು. ಹುಟ್ಟುವಾಗ ಪಂಥವಿಟ್ಟುಕೊಂಡು ಹುಟ್ಟಿರುವುದಿಲ್ಲ. ಬಾಲ್ಯದಲ್ಲಿ ಅದರ ಜಂಜಾಟವೇ ಇರುವುದಿಲ್ಲ. ಯೌವನದಲ್ಲಿ ಒಡಮೂಡಿದ ಬದುಕಿನ ಹೆಜ್ಜೆ ,ಸಿದ್ಧಾಂತ ಮುಪ್ಪೇರುವ ಹೊತ್ತಿಗೆ ದಿಕ್ಕನ್ನೇ ಬದಲಿಸಿರುತ್ತದೆ. ಕಳೆದ ಒಂದು ವಾರದಿಂದ ನಿತ್ಯ ಗೌರಿ ಲಂಕೇಶರ ಹತ್ಯೆಯ ಸುತ್ತವೇ ಸುತ್ತಿಕೊಳ್ಳುತ್ತಿರುವ ಲೇಖನಗಳ ಹುತ್ತ ನೋಡಿದ ಎಲ್ಲರಿಗೂ ಇದು ಎಡ ಮತ್ತು ಬಲಪಂಥಗಳ ಕುಸ್ತಿ ಅಂತಲೇ ಅನಿಸಿರುತ್ತದೆ. ನಾನು ಹಾಗೆ ಭಾವಿಸದೇ ಹೋದರೂ ಗೌರಿ ಸುತ್ತ ಇದ್ದ ಪಟಾಲಂ ತಾವೆಲ್ಲ ‘ಎಡ’ಅಂತಲೇ ಆರೋಪಿಸಿಕೊಂಡುಬಿಟ್ಟಿರುವುದರಿಂದ ಅವರನ್ನು ಹೊರತುಪಡಿಸಿ ಉಳಿದವರೆಲ್ಲ ಅವರ ಪಾಲಿಗೆ ಬಲಪಂಥೀಯರೆ! ಅಷ್ಟೇ ಅಂದಿದ್ದರೆ ಪರವಾಗಿಲ್ಲ, ಅವರೆಲ್ಲ ಮೂಲಭೂತವಾದಿಗಳು, ಹಿಂದೂ(?)ಗಳು ಅಂತೆಲ್ಲ ಆರೋಪಿಸುವ ಮೂಲಕ ತಮ್ಮ ತಳಮಳಕ್ಕೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಅಸಲಿಗೆ ಇಲ್ಲಿ ಗೌರಿ ನೆಪ ಮಾತ್ರ! ಸಾವನ್ನು ಕಂಡು ಸಂಭ್ರಮಿಸುತ್ತಿದ್ದೀರಿ ಅಂತ ಬಾಯಿ ಬಡಕೊಳ್ಳುವವರಿಗೆಲ್ಲ ನನ್ನ ಒಂದೇ ಪ್ರಶ್ನೆ. ಹಾಗಂತ ಅವಳ ಹತ್ಯೆಯನ್ನು ವಿಶ್ಲೇಷಿಸದೆ ನ್ಯಾಶನಲ್ ಹೈವೇದಲ್ಲಿ ಲಾರಿಗೆ ಸಿಲುಕಿ ಸತ್ತು ಹೋದ ಅನಾಥ ಹೆಣದಂತೆ ಬಿಟ್ಟು ಬಿಡುವುದೇ? ನಮ್ಮೊಳಗೇ ನಮಗೆ ದ್ವಂದ್ವ. ಆ ಕುರಿತು ಚರ್ಚಿಸಿದರೆ ಇವರು ಸ್ಯಾಡಿಸ್ಟುಗಳು, ಮಾತನಾಡದೇ ಹೋದರೆ ಸಾಮಾಜಿಕ ಕಾಳಜಿ ಇಲ್ಲ ಎಂಬ ಆಕ್ಷೇಪ. ಅಪರಕರ್ಮ ನಡೆಯುವುದು ಸಾವಿನ ನಂತರವೇ! ಈ ವಿಷಯವನ್ನು ಎಲ್ಲರೂ ಪರಿಗಣಿಸಲೇಬೇಕು.

ಆಯಿತು, ಗೌರಿ ಹತ್ಯೆಯ ಬಗ್ಗೆ ತೀರ ಕಾಳಜಿ ಇಟ್ಟುಕೊಂಡಿರುವವರೆಲ್ಲ ಮಾಡಿದ್ದೇನು? ಅಲ್ಲಲ್ಲಿ, ಪ್ರತಿಭಟನೆ, ಒಂದಿಷ್ಟು ಸಂತಾಪ ಸೂಚಕ ಸಭೆಗಳು, ನಿನ್ನೆ ನ್ಯಾಶನಲ್ ಕಾಲೇಜಿನಲ್ಲಿ ನಡೆದ ಸಮಾವೇಶ. ಆ ಮೂಲಕ ಇನ್ನೂ ಆರೋಪಿ, ದುಷ್ಕರ್ಮಿ ಯಾರು ಎಂದು ಗೊತ್ತಿರದೇ ಹೋದರೂ ಪುಂಖಾನುಪುಂಖವಾಗಿ ಮೂಲಭೂತವಾದದ ಖಂಡನೆ. ಅಲ್ಲಿಗೆ ಪರೋಕ್ಷವಾಗಿ ಇಡೀ ಕೊಲೆಯ ಹೊಣೆಯನ್ನು ಆರ್‌ಎಸ್‌ಎಸ್ ತಲೆಗೆ ಕಟ್ಟಿದಂತಾಯಿತು. ಅಂದರೆ ಒಂದು ನೆಪವನ್ನಿಟ್ಟುಕೊಂಡು ತಮಗಾಗದವರನ್ನು ಹಣಿಯುವ ಷಡ್ಯಂತ್ರ ನೆಲಕಚ್ಚಿ ಹೋಗಿದ್ದ ಎಡಪಂಥ ಚಳವಳಿಗೆ ಪುನರುಜ್ಜೀವನ ನೀಡುವ ಹುನ್ನಾರ. ಅದಕ್ಕಾಗಿಯೇ ಕಮ್ಯುನಿಸ್ಟರು, ನಕ್ಸಲೀಯರನ್ನೆಲ್ಲ ಒಟ್ಟುಗೂಡಿಸಿ ಮಾಡಿದ ಮೆರವಣಿಗೆ.

ಇರಲಿ, ಇಷ್ಟೆಲ್ಲ ಸಿದ್ಧಾಂತ ಹೇಳುವ ಇವರ್ಯಾರೂ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೇ ಬದುಕಿನಲ್ಲಿ ಸ್ಪಷ್ಟ ನಿಲುವು ಹೊಂದಿದವರಾ? ಸರಕಾರಿ ಆಡಳಿತ ಯಂತ್ರಕ್ಕೆ ಡೊಗ್ಗು ಸಲಾಮು ಹೊಡೆದು ತಮ್ಮ ಬದುಕಿನ ಅಂಗಡಿ ನಡೆಸಿಕೊಂಡಿಲ್ಲವೇ? ನಿಮ್ಮದು ಯಾವ ಪಂಥ? ಬಲಪಂಥೀಯನೋ, ಎಡಪಂಥೀಯನೋ ಎಂದು ಕೇಳುವವರಿಗೆ ನನ್ನ ಈ ಸವಾಲು. ಹಾಗೆ ನೋಡಿದರೆ ದೇವನೂರ ಮಹಾದೇವ ಎಂಬ ಬಂಡಾಯ ಸಾಹಿತಿ ಕೂಡ ತನ್ನ ನವತಾರುಣ್ಯದಲ್ಲಿ ಆರ್‌ಎಸ್‌ಎಸ್ ಒಡನಾಟ ಹೊಂದಿದವರೇ! ನಂತರ ಅವರ ಚಿಂತನೆಗಳು ಬದಲಾದವು. ಒಂದಷ್ಟು ದಿನ ಸರ್ವೋದಯ ಎಂದರು, ನಂತರ ದಲಿತಪರ ಚಿಂತನೆಗಳು ಎಂದು ಮಿಡಿದರು. ಮತ್ತಿನ್ನೇನೋ ನುಡಿದರು. ಆದರೆ ಅವರ ಚಿಂತನೆಯ ಉಗಮ ಇದೇ ಬಲಪಂಥದ್ದು ಎಂಬುದನ್ನು ಅವರು ಆತ್ಮಸಾಕ್ಷಿಯಿಂದ ಅಲ್ಲಗಳೆಯಲಿ ನೋಡೋಣ!

ಮೈಸೂರಿನಲ್ಲಿ ಕೆ. ರಾಮದಾಸ್ ಎಂಬ ಚಿಂತಕರಿದ್ದರು. ಅವರು ಸಾಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಲ್ಲಿದ್ದವರೇ! ನಂತರ ಪ್ರಖರ ಎಡಪಂಥ ಧೋರಣೆ ಎಂದು ವೇಷ ಬದಲಿಸಿಕೊಂಡರು. ಇರಲಿ ಮನುಷ್ಯ ಬೆಳೆಯುತ್ತಾ ಆಲೋಚನೆಗಳ ದಿಕ್ಕೂ ಬದಲಾಗುತ್ತದೆ. ಅದು ಬೆಳವಣಿಗೆಯ ಲಕ್ಷಣ ಕೂಡ! ಆದರೆ ತದನಂತರ ತಮ್ಮ ಮಗಳ ಮದುವೆ, ಆರತಕ್ಷತೆಯನ್ನು ಮೈಸೂರಿನ ಅಂದಿನ ಪ್ರಸಿದ್ಧ ಚಿತ್ರವನ ರೆಸಾರ್ಟ್‌ನಲ್ಲಿ ಮಾಡಿದರು. ಅಲ್ಲಿ ತಮ್ಮ ನಿಲಯದ ಕಲಾವಿದರಿಂದ ಬಂಡಾಯಗೀತೆ ಹಾಡಿಸಿದ ಮಾತ್ರಕ್ಕೆ ಅವರು ಅದ್ಧೂರಿ ಮದುವೆ ಮಾಡಿದ್ದು ಸುಳ್ಳೆ? ಪುರೋಹಿತರನ್ನು ಕರೆಸಿ ದಕ್ಷಿಣೆ ಕೊಡಲಿಲ್ಲ ಎಂದ ಮಾತ್ರಕ್ಕೆ, ಮಣಮಣ ಮಂತ್ರ ಗುನುಗಲಿಲ್ಲ ಎಂದ ಮಾತ್ರಕ್ಕೆ ಅಚ್ಚುಕಟ್ಟಾದ ಮದುವೆ ಸುಳ್ಳೆ? ಸರಳ ಬದುಕು, ಸರಳ ವಿವಾಹ ಅಂತೆಲ್ಲ ಹೇಳಿ ‘ಮಾನವ ಮಂಟಪ’ ಎಂಬ ಸಂಸ್ಥೆ ಮಾಡಿಕೊಂಡು ಕಂಡವರ ಮಕ್ಕಳಿಗೆಲ್ಲ ಮನೆ ಮಾಳಿಗೆಯ ಮೇಲೆ ಅರಿಷಿಣ ಬೇರು ಕಟ್ಟಿಸಿ ತಾವು ಮಾತ್ರ ಅದಕ್ಕೆ ಹೊರತಾಗಿ ಬದುಕಿದರೆ ಇದಕ್ಯಾವ ಪಂಥ ಎನ್ನೋಣ!

ಇದು ಹೋಗಲಿ, ಬಂಡಾಯದ ಹೆಸರು ಹೇಳಿಕೊಂಡು ಬದುಕಿನಲ್ಲೊಂದು ಘಟ್ಟ ತಲುಪಿ, ಒಂದಿಷ್ಟು ಹುಡುಗರ ತಲೆಯನ್ನು ಕೆಡಿಸಿ ನಂತರ ಸರಕಾರೀ ಕೃಪಾ ಘೋಷಿತ ಮಂಡಳಿ ಪ್ರಾಧಿಕಾರ, ಅಕಾಡೆಮಿ ಅಧ್ಯಕ್ಷ ಹಿರಿಯ ಸ್ಥಾನ ಗಿಟ್ಟಿಸಿಕೊಳ್ಳುವುದಿದೆಯಲ್ಲ! ಇದ್ಯಾವ ಪಂಥ ನೀವೇ ಹೇಳಿ!
ಸರಕಾರಗಳು ಬದಲಾಗುತ್ತವೆ, ಅಧಿಕಾರಿಗಳು ಬದಲಾಗುತ್ತಾರೆ. ಆದರೆ ಈ ಪ್ರಭೃತಿಗಳು ಮಾತ್ರ ಅರಸೊತ್ತಿಗೆಯ ಜತೆ ರಾಜಿ ಮಾಡಿಕೊಂಡು ಹಲ್ಲುಗಿಂಜಿಕೊಳ್ಳುತ್ತ ಆಯಕಟ್ಟಿನ ಜಾಗ ಆಕ್ರಮಿಸಿಬಿಡುತ್ತಾರೆ. ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಎಲ್ಲ ಯೋಜನೆಗಳಿಗೆ ನಾಮಕರಣ ಮಾಡಿದ್ದು ನಮ್ಮ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರೇ!

ಅವರು ಅಂದಿನಿಂದ ಇಂದಿನವರೆಗೂ ರಾಜಕೀಯ ವಲಯದಲ್ಲಿ ಪ್ರಸ್ತುತವಾಗಿಯೇ ಇದ್ದಾರೆ. ಯಾವುದೇ ವ್ಯಕ್ತಿಗೆ ಸಚಿವ ಪಟ್ಟ ಬರಲಿ, ಮೊದಲ ಅಭಿನಂದನೆ ಬರಗೂರರದ್ದೇ! ಅಷ್ಟು ವಿಶಾಲ ಹೃದಯ ಅವರದು. ಯಾವುದೇ ಪಕ್ಷ, ಸಿದ್ಧಾಂತ ವ್ಯಕ್ತಿ ಇರಲಿ. ಅವರನ್ನು ಹರಸುವಷ್ಟು ಅವರು ಧಾರಾಳಿಗಳು. ಹೀಗಾಗಿ ಅವರಿಗೆ ಆಯಕಟ್ಟಿನ ಜಾಗ ಯಾವಾಗಲೂ ಮಂಜೂರು. ಅಂಥ ಜಾಗ ಇಲ್ಲದಿದ್ದರೂ ತಮ್ಮ ವಕೀಲಬಾಜಿಯಿಂದ ಎಂಥ ಕೆಲಸವನ್ನೂ ಮಾಡಿಸಿಕೊಂಡು ಬರುವಷ್ಟು ಚಾಣಾಕ್ಷರು. ಅಲ್ಲಿಗೆ ಬಂಡಾಯ ಎಲ್ಲಿ ಹೋಯಿತು?ವಿಧಾನಸೌಧದ ಮೂರನೇ ಮಹಡಿಯ ಗಂಧದ ಬಾಗಿಲು ತಟ್ಟಿ, ಅಲ್ಲಿ ಎದುರಿಗಿರುವ ಸಿಂಹಾಸನದ ಕಾಲ ಕೆಳಗೆ ಪವಡಿಸಿತು. ಹೀಗೆ ಇವರೆಲ್ಲರ ‘ದಿಗ್ವಿಜಯ’ ಯಾತ್ರೆ ಹೇಳುತ್ತ ಹೊರಟರೆ ಸಂಪುಟವೇ ಆಗುತ್ತದೆ. ಆದರೆ ಇದ್ಯಾವ ಪಂಥಗಳ ಹಂಗೇ ಇಲ್ಲದ ಜನಸಾಮಾನ್ಯ ತನ್ನ ಪಾಡಿಗೆ ತಾನಿರುತ್ತಾನೆ. ಅವರನ್ನು ತಾವು ರೊಚ್ಚಿಗೆಬ್ಬಿಸುತ್ತಿದ್ದೇವೆ , ಬಡಿದೆಬ್ಬಿಸುತ್ತಿದ್ದೇವೆ ಎಂದು ಇವರೆಲ್ಲ ಭ್ರಮಿಸುತ್ತಿದ್ದಾರೆ. ವಾಸ್ತವದಲ್ಲಿ ಅವನ ಬದುಕಿಗೆ ಈ ಅಂಗಡಿಯ ವ್ಯಾಪಾರವೇ ಬೇಕಿಲ್ಲ.

ಬಲಪಂಥ-ಎಡಪಂಥ ಎಂಬ ಅಂಗಡಿಯ ಸರಕು ಹೀಗೆ ತನ್ನ ಬೆಲೆ ಕಳೆದುಕೊಳ್ಳುತ್ತದೆ ಎಂಬುದಕ್ಕೆ ಹೆಸರಾಂತ ಕ್ರಾಂತಿಕಾರಿ ಕವಿ ಗದ್ದರ್‌ನೇ ಸಾಕ್ಷಿ. ಇಡೀ ಆಂಧ್ರ ಇವನ ಹೆಸರು ಹೇಳಿದರೆ ತಲ್ಲಣಿಸಿ ಹೋಗುತ್ತಿತ್ತು. ಹೆಗಲ ಮೇಲೊಂದು ಕಂಬಳಿ, ಕೈಯಲ್ಲೊಂದು ಕೋಲು, ಉದ್ದ ಜಟ ಪಂಚೆ! ಥೇಟ್ ಬೈರಾಗಿಯಂತೆಯೇ ಕಾಣುತ್ತಿದ್ದ ಗದ್ದರ್ ಆ ಕಾಲದಲ್ಲಿ ಕರ್ನಾಟಕದಲ್ಲೂ ಮನೆಮಾತಾದವನು. ಆಂಧ್ರದಲ್ಲಿದ್ದ ಫ್ಯೂಡಲಿಸಂ ವಿರುದ್ಧ ದನಿ ಎತ್ತಿದ ಛಾತಿವಂತ. ಅವನ ಸಂಕಲ್ಪವನ್ನು, ಸ್ಪಷ್ಟತೆಯನ್ನು, ವ್ಯಕ್ತಿತ್ವವನ್ನು ಪ್ರಶ್ನಿಸುವಂತೆಯೇ ಇಲ್ಲ. ತೀರ ಅಪರೂಪಕ್ಕೆ ಗದ್ದರ್‌ನಂಥವರು ಸಿಗುತ್ತಾರೆ. ಅವರೆಲ್ಲ ತಪಸ್ವಿಗಳು. ತಮ್ಮ ಸಂಕಲ್ಪ ಸಾಧನೆಯಾಗುತ್ತದೋ ಬಿಡುತ್ತದೋ ಅವರು ಹೋರಟವನ್ನಂತೂ ನಿಲ್ಲಿಸುವುದಿಲ್ಲ. ಹೀಗಾಗಿ ಅವರಲ್ಲಿ ಒಂದು ರೀತಿಯ ಪ್ರಭಾವಳಿ ಇರುತ್ತದೆ, ಜನ ಆಕರ್ಷಿತರಾಗುತ್ತಾರೆ. ಮೂಗ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ.ತಮ್ಮ ಆಂತರ್ಯದಲ್ಲಿ ಅಂಥದೊಂದು ಆಸೆ ಇದ್ದರೂ ನಮ್ಮ ಜಂಜಡದಲ್ಲಿ ಅಂಥ ಹುಚ್ಚು ಸಾಹಸಕ್ಕೆ ಹೋಗಲಾಗಿರುವುದಿಲ್ಲ. ಆದರೆ ಗದ್ದರ್‌ನಂಥವರು ಎಲ್ಲವನ್ನು ಬಿಟ್ಟ ಬೈರಾಗಿಯಂತೆ ಊರೂರು ಸುತ್ತುತ್ತಾರೆ. ಆದರೆ ಅದೇ ಗದ್ದರ್ ಇಂದು ಏನಾಗಿದ್ದಾರೆ? ರಾಜಕೀಯ ಪಕ್ಷವೊಂದರಲ್ಲಿ ಸೇರ್ಪಡೆಯಾಗುತ್ತಿದ್ದಾರೆ. ಜೀವನವಿಡೀ ಹೋರಾಡಿದ,ಕೊನೆಗೆ ಅರಸೊತ್ತಿಗೆಗೆ ಸಲಾಮು ಹೊಡೆದ. ಅಲ್ಲಿಗೆ ಗದ್ದರ್ ಎಂಬ ದಂತಕತೆ ಒಬ್ಬ ಸಾಮಾನ್ಯ ರಾಜಕಾರಣಿಯಾಗಿ ಇತಿಹಾಸ ಸೇರಿ ಹೋಗುತ್ತಾನೆ.

ಇದು ಪ್ರಜಾಪ್ರಭುತ್ವ. ಯಾರು ಬೇಕಾದರೂ ಪ್ರತಿನಿಧಿಯಾಗುವ ಸೊಬಗಿರುವ ವ್ಯವಸ್ಥೆ. ಆದರೆ ಈ ವ್ಯವಸ್ಥೆಯನ್ನೇ ಛೀತ್ಕರಿಸಿ ಬದುಕು ಕಟ್ಟಿಕೊಳ್ಳಲು ಹವಣಿಸಿದ್ದೀರಲ್ಲ! ಆ ಕನಸುಗಳು ಏನಾದವು? ಮನಸೊಳಗೆ ದ್ವಂದ್ವಗಳೇಕೆ? ಬಂಡಾಯದ, ವಿಚಾರವಾದದ ಅಂಗಿ ಬಿಚ್ಚಿ ಬೆತ್ತಲಾಗಿಬಿಡಿ! ಯಾರೂ ಏನೂ ಹೇಳುವುದಿಲ್ಲ. ಅಟ್ ಲೀಸ್ಟ್‌ ಜನಸಾಮಾನ್ಯರಂತೆ ಬದುಕುವ ಸ್ವಾತಂತ್ರ್ಯವಾದರೂ ನಿಮಗಿರುತ್ತದೆ. ಹೀಗೆ ಎಡಬಿಡಂಗಿ ಜೀವನ ಮಾಡಿಕೊಂಡು ಅತ್ತ ಸಮಾಜವಾದಿಯೂ ಆಗದೇ ಇತ್ತ ನಮ್ಮ ಹಾಗೆ ಬದುಕಲೂ ಸಾಧ್ಯವಾಗದೇ ವಿಲಿವಿಲಿ ಒದ್ದಾಡುತ್ತೀರೇಕೆ?

ಗೌರಿ ವಿಷಯದಲ್ಲಾಗಿದ್ದೂ ಇದೇ! ಆಕೆ ತನಗರಿವಿಲ್ಲದೇ ತಂದೆಯ ಹೆಜ್ಜೆ ತುಳಿಯಲು ಶಪಥ ಮಾಡಿದಳು. ಅಪ್ಪನ ಪತ್ರಿಕೆ ತನ್ನದೇ ಆಸ್ತಿ ಎಂದು ತಮ್ಮನ ಜತೆ ಹೊಡೆದಾಡಿದಳು. ಕೊನೆಗೆ ಹೇಗೋ ಶೀರ್ಷಿಕೆ ಗಿಟ್ಟಿಸಿಕೊಂಡಳಾದರೂ ಅದರಂತೆ ಬದುಕು ಸಾಧ್ಯವೇ ಆಗಲಿಲ್ಲ. ನೀವು ಏನೇ ಹೇಳಿ, ಲಂಕೇಶರು ಒಬ್ಬ ಕಥೆಗಾರರಾಗಿ ಸಾಧಿಸಿದವರು. ಪತ್ರಿಕಾ ಸ್ವಾತಂತ್ರ್ಯದ ಎಲ್ಲೆಯನ್ನು ವಿಸ್ತರಿಸಿದವರು. ನಂತರ ಸ್ಪಷ್ಟ ಚಿಂತನಾ ಶೈಲಿಯೊಂದಿಗೆ ಪಟಾಲಂ ಬೆಳೆಸಿಕೊಂಡವರು. ಇಂದು ಎಡಬಿಡಂಗಿಗಳಂತೆ ಆಡುತ್ತಿರುವ ಸೋಗಲಾಡಿಗಳೆಲ್ಲ ಅವರ ಸಂತಾನವೇ! ಆದರೆ ದುರಂತವೆಂದರೆ ಇವೆಲ್ಲಾ ಸತ್ವ ಕಳೆದುಕೊಂಡು ಕಲಬೆರಕೆಯಾಗಿ ಹೋಗಿವೆ. ಹಾಗೆ ಲಂಕೇಶ್ ನಂತರ ಆ ಅರಸೊತ್ತಿಗೆಗೆ ಬಂದ ಗೌರಿ ಕುಸ್ತಿಗೆ ಮುನ್ನ ಮಾಡಿಕೊಳ್ಳಬೇಕಾದ ತಾಲೀಮು ಮಾಡಿಕೊಳ್ಳಲಿಲ್ಲ. ತನ್ನದೇ ಆದ ಒಂದು ಪ್ರಖರವಾದ ಸಮೂಹ ಕಟ್ಟಿಕೊಳ್ಳಲಿಲ್ಲ. ಆಕೆ ಎಷ್ಟರ ಮಟ್ಟಿಗೆ ಎಂದರೆ ಹುಬ್ಬಳ್ಳಿಯ ಪ್ರಹ್ಲಾದ್ ಜೋಶಿ ಮಾನನಷ್ಟ ಮೊಕದ್ದಮೆ ಸಂದರ್ಭದಲ್ಲಿ ತನ್ನ ಮೇಲೆ ಕೇಸು ಫಿಟ್ ಆದಾಗ ಒಂಟಿಯಾಗಿ ಬಿಕ್ಕಿ ಬಿಕ್ಕಿ ಅತ್ತವಳು. ಜಾಮೀನು ಕೊಡಲು ಜನರಿರಲಿಲ್ಲ. ಸಂತೈಸಲು ಸ್ನೇಹಿತರಿರಲಿಲ್ಲ. ಇಂಥ ಹತಾಶ ಸ್ಥಿತಿಯಲ್ಲಿದ್ದಾಗ ಅವಳಿಗೆ ಸಾತ್ ಕೊಟ್ಟಿದ್ದು, ಅದೇ ಗುಂಡು ಮತ್ತು ಸಿಗರೇಟು.

ಆಡಳಿತಸ್ಥರ ಮುಂದೆ ಕೈ ಚಾಚಬಾರದೆಂದು ಲಂಕೇಶ್ ಪಣ ತೊಟ್ಟಿದ್ದರು. ಹಾಗೆ ಸಹಾಯ ಪಡೆದರೆ ತನ್ನ ಲೇಖನಿ ಮೊಂಡಾಗಿ ಹೋಗುತ್ತದೆ ಎಂಬ ಬಿಗುವು. ಹಾಗೆಯೇ ಬಾಳಿದರು, ಬದುಕಿದರು. ಆದರೆ ಅದೇ ಹೆಸರಿನ ನೆರಳಿನಲ್ಲಿ ಬದುಕಿದ ಗೌರಿ ಕಂಡವರೆದುರೆಲ್ಲ ಜಾಹೀರಾತಿನ ಭಿಕ್ಷೆ ಬೇಡತೊಡಗಿದ್ದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಎರಡೆರಡು ಬಾರಿ ಸ್ಪಷ್ಟ ಪಡಿಸಿದ್ದಾರೆ. ಪತ್ರಿಕೆ ಮಾಡುವವರು ಜಾಹೀರಾತು ಪಡೆಯಬಾರದೆಂಬುದು ನನ್ನ ಮಾತಿನ ಒಳ ಅರ್ಥವಲ್ಲ. ಯಾವಾಗ ನೀವು ವ್ಯವಸ್ಥೆಯ ವಿರುದ್ಧ ಹೋರಾಡಬೇಕೆಂದು ಪಣ ತೊಡುತ್ತೀರೋ ಆಗ ರಾಜೀ ಮನೋಭಾವ ಬೆಳೆಸಿಕೊಳ್ಳಬಾರದು.

ಹಿಂದೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವಾಗ ತಾನು ರಾಜಕಾರಣಿಗಳನ್ನು ಕರೆಯುವುದಿಲ್ಲ ಎಂದು ಹಠ ಹಿಡಿದಿದ್ದರು ಚಂಪಾ. ಅಲ್ಲಾರೀ ಅವರೆದುರು ಸಲಾಮು ಹೊಡೆದು ಅನುದಾನ ಪಡೆದಿರುತ್ತೀರಿ. ಅವರನ್ನೇ ಕರೆಯುವುದಿಲ್ಲವೆಂದರೆ ಹೇಗೆ? ಸಾಹಿತ್ಯ ಸಮಾರಂಭಗಳು ರಾಜಕೀಕರಣಗೊಳ್ಳಬಾರದೆಂಬ ಅವರ ನಿಲುವನ್ನು ಒಪ್ಪೋಣ. ಆದರೆ ನೀವು ರಾಜಕೀಯ ವ್ಯವಸ್ಥೆಯೊಳಗಿದ್ದು ಅದರಿಂದ ಹೊರತಾಗಿರುವ ಹುಚ್ಚು ಯತ್ನವೇಕೆ? ಭಾರತದ ಬ್ಯೂಟಿ ಇರುವುದೇ ಅಲ್ಲಿ! ದೇವರು ಒಬ್ಬನೇ ಎಂದ ಶಂಕರಚಾರ್ಯರನ್ನು ಈ ನೆಲ ಒಪ್ಪಿಕೊಂಡಿದ್ದೆ. ದೇವರು ಒಬ್ಬರಲ್ಲ, ಇಬ್ಬರು ಎಂದ ಮಧ್ವರನ್ನು ಒಪ್ಪಿಕೊಂಡಿದೆ. ಅದಾದ ನಂತರ ಇಬ್ಬರಲ್ಲ; ಮೂವರು ಎಂದ ರಾಮಾನುಜರನ್ನೂ ಅರಗಿಸಿಕೊಂಡಿದೆ. ಅವರಿಗೆ ಅವರವರದೇ ಆದ ಅನುಯಾಯಿಗಳೂ ಇದ್ದಾರೆ.

ಇಂಥ ದೇಶದಲ್ಲಿ ಎಡಪಂಥ-ಬಲಪಂಥ ಎಂದು ಹೋರಾಡಿದರೆ ಬೇಡ ಅನ್ನುವವರ್ಯಾರು? ಆದರೆ ಎಡ ಎಂದು ಹೇಳಿಕೊಳ್ಳುತ್ತ ಎಡಬಿಡಂಗಿಯಂತೆ ಆಡಿದಾಗ ಉಳಿದವರು ಪಕಪಕನೇ ನಗುತ್ತಾರೆ.  ಈಗ ಗೌರಿ ಪ್ರಕರಣದಲ್ಲಿ ನಡೆಯುತ್ತಿರುವುದೂ ಅದೇ! ತನ್ನ ಎಡಪಂಥದ ಬೇಳೆ ಬೇಯಿಸಿಕೊಳ್ಳಲು ಬಲಪಂಥೀಯರ ತೆಗಳಿಕೊಂಡು ಚಳವಳಿಯ ಜೀರ್ಣೋದ್ಧಾರಕ್ಕೆ ಹೋರಾಡಿದ್ದಾರಲ್ಲಾ.. ಇವರನ್ನು ನೋಡಿ ‘ನಡು’ಪಂಥೀಯ ಬಿದ್ದು ಬಿದ್ದು ನಗುತ್ತಿದ್ದಾನೆ.

-ರವೀಂದ್ರ ಜೋಶಿ

One thought on “ಗದ್ದರ್‌ನೇ ಗದ್ದುಗೆ ಬೇಕೆಂದ ಮೇಲೆ ಇವರದ್ಯಾವ ಗದ್ದಲ ಸ್ವಾಮಿ?

  1. Nice Article, at the end u hv told some nonsense about our Vedanthik Philosophy, Shankaracharya dint tell one god concept, its there in our Upanishads only, what he argued is souls ( All Jeevas) and Supreme Soul (Paramatma) are one and the same, but Sriman Madhwacharya ru cleared with all the shastric proof that both are different and Souls have to get swarupa jnana with the help to Devotion towards Paramathma to get liberated from material life and attain moksha.

Leave a Reply

Your email address will not be published. Required fields are marked *

1 × one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top