About Us Advertise with us Be a Reporter E-Paper

ಅಂಕಣಗಳು

ಗ್ರಾಮೀಣ ಭಾಗದ ಬಡವರಿಗೂ ಗುಣಮಟ್ಟದ ಚಿಕಿತ್ಸೆ ಕೈಗೆಟುಕಲಿದೆ

ಸಂದರ್ಶನ: ಪ್ರಭಾಕರ ಟಿ.

ವೃತ್ತಿಯಲ್ಲಿ ವೈದ್ಯ, ವಾಣಿಜ್ಯೋದ್ಯಮಿ ಮತ್ತು ಕೃಷಿಕರಾಗಿದ್ದ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ್‌ರಿಗೆ ಸಮ್ಮಿಶ್ರ ಸರಕಾರದಲ್ಲಿ ಆಶ್ವರ್ಯಕರ ರೀತಿಯಲ್ಲಿ ಆರೋಗ್ಯ ಸಚಿವ ಪಟ್ಟ ದೊರೆತಿದೆ. ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿರುವ ಶಿವಾನಂದ ಪಾಟೀಲ್ ಅವರು ಆರೋಗ್ಯ ಇಲಾಖೆಯಲ್ಲಿ ಕೊರತೆಯಿರುವ ಸಿಬ್ಬಂದಿ ನೇಮಕ, ಸರಕಾರಗಳ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಸರ್ವರಿಗೂ ಉತ್ತಮ ಆರೋಗ್ಯ ಸೇವೆ ನೀಡುವ ಮಹತ್ವಾಕಾಂಕ್ಷೆ ಹೊಂದಿದ್ದು, ಕುರಿತು ವಿಶ್ವವಾಣಿಯೊಂದಿಗೆ ತಮ್ಮ ಕಾರ್ಯತಂತ್ರಗಳ ಮಾಹಿತಿ ಹಂಚಿಕೊಂಡಿದ್ದಾರೆ.

        ಆರೋಗ್ಯ ಕಾರ್ಡ್ ಕುರಿತು ಜನರಲ್ಲಿ ಸೃಷ್ಟಿಯಾಗಿರುವ ಗೊಂದಲದ ನಿವಾರಣೆಗೆ ಕ್ರಮಗಳೇನು?

ಸಾರ್ವತ್ರಿಕ ಆರೋಗ್ಯ ಸೇವೆಗಾಗಿ ರಾಜ್ಯ ಸರಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆಯಾದ ಆರೋಗ್ಯ ಕಾರ್ಡ್ ಕುರಿತು ಜನರಲ್ಲಿ ಗೊಂದಲಗಳು ಬೇಡ. ಆರೋಗ್ಯ ಕಾರ್ಡ್ ಇಲ್ಲದಿದ್ದರೂ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇವೆ ಪಡೆಯಬಹುದು. ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ,  ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಇಂದಿರಾ ಸುರಕ್ಷತಾ ಯೋಜನೆಗಳು ಈ ಯೋಜನೆಯಲ್ಲಿ ಸೇರ್ಪಡೆಗೊಂಡಿವೆ. ಬಿಪಿಎಲ್ ಕಾರ್ಡ್‌ದಾರರಿಗೆ ಆರೋಗ್ಯ ಕಾರ್ಡ್‌ನ ಅವಶ್ಯಕತೆ ಇಲ್ಲ. ಈ ಕುರಿತು ಸಾಮಾನ್ಯರು ಗೊಂದಲಕ್ಕೆ ಸಿಲುಕಬಾರದು. ತಾಲೂಕು ಆಸ್ಪತ್ರೆಗಳಲ್ಲೂ ಕಾರ್ಡ್ ನೋಂದಣಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ರಾಜ್ಯದ 62 ಲಕ್ಷ ಕುಟುಂಬಕ್ಕೆ ಆರೋಗ್ಯ ಸೇವೆ ಸಿಗಲಿದೆ.

ಆರೋಗ್ಯ ಕಾರ್ಡ್ ವಿತರಣೆ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆಯೆಲ್ಲಾ?

ಆರೋಗ್ಯ ಕರ್ನಾಟಕ ಯೋಜನೆಯಡಿ  ಕಾರ್ಡ್‌ಗಳನ್ನು ವಿತರಿಸುವಲ್ಲಿ ವಿಳಂಬವಾಗಿದೆ ಎಂಬ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಯೋಜನೆ ಜಾರಿಗೊಂಡ ಬಳಿಕ ಮಧ್ಯದಲ್ಲೇ ಬಂದ ಚುನಾವಣೆ, ನೀತಿ ಸಂಹಿತೆ ಜಾರಿ, ಹೊಸ ಸರಕಾರ ರಚನೆಯಿಂದಾಗಿ ಕಾರ್ಡ್ ವಿತರಣೆಯಲ್ಲಿ ತೊಡಕಾಗಿತ್ತು. ರಾಜ್ಯದ ಎಲ್ಲ ಕುಟುಂಬಗಳಿಗೆ 2019ರ ಮಾರ್ಚ್ ವೇಳೆಗೆ ಆರೋಗ್ಯ ಕಾರ್ಡ್‌ಗಳು ಕೈ ಸೇರಲಿವೆ. ಈಗಾಗಲೇ ರಾಜ್ಯದಲ್ಲಿ 10 ಪ್ರಮುಖ ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಾಗಲಿದೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಪಿಎಂಎಸ್‌ಎಸ್‌ವೈ  ವಿಕ್ಟೋರಿಯಾ ಕ್ಯಾಂಪಸ್ ಸೇರಿದಂತೆ ಇತರೆ ಪ್ರಮುಖ ಆಸ್ಪತ್ರೆಗಳಲ್ಲಿ ಸೇವೆ ಆರಂಭವಾಗಿದೆ. ಆರೋಗ್ಯ ಕಾರ್ಡ್ ಇಲ್ಲದ ಬಿಪಿಎಲ್ ಕಾರ್ಡ್ ಬಳಕೆದಾರರು ಸಹ ಆರೋಗ್ಯ ಕರ್ನಾಟಕದ ಸೇವೆಯನ್ನು ಪಡೆಯಬಹುದು.

ಆರೋಗ್ಯ ಕರ್ನಾಟಕ ಜತೆಗೆ ಆಯುಷ್ಮಾನ ಭಾರತ್ ವೀಲಿನ ಕಾರ್ಯಸಾಧುವೇ?

ಆರೋಗ್ಯ ಕರ್ನಾಟಕ ಯೋಜನೆಯಡಿ 2 ಲಕ್ಷ ರು.ವರೆಗೆ ವೈದ್ಯೋಪಚಾರವನ್ನು ಉಚಿತವಾಗಿ ಪಡೆಯಬಹುದು. ಕೇಂದ್ರ ಸರಕಾರ ಉದ್ದೇಶಿತ ಆಯುಷ್ಮಾನ ಭಾರತ್ ಯೋಜನೆಯನ್ನು ರಾಜ್ಯ ಸರಕಾರದ ಯೋಜನೆಯೊಂದಿಗೆ ವಿಲೀನ ಮಾಡಿಕೊಳ್ಳುವ ಪ್ರಸ್ತಾವನೆಯೂ ನಮ್ಮ ಮುಂದೆ  ಆಯುಷ್ಮಾನ್ ಭಾರತ್ ಯೋಜನೆಯಲ್ಲಿ 5 ಲಕ್ಷರು.ವರೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯೊಂದಿಗೆ ಆರೋಗ್ಯ ಕರ್ನಾಟಕ ವಿಲೀನಗೊಂಡರೆ 7 ಲಕ್ಷ ರು.ವರೆಗೆ ವ್ಯದ್ಯಕೀಯ ಸೇವೆ ಸಿಗಲಿದೆ. ಇದರಿಂದ ಶ್ರೀಸಾಮಾನ್ಯರಿಗೆ ಉತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗಲಿದೆ. ಗ್ರಾಮೀಣ ಭಾಗದ ಬಡವರಿಗೂ ಗುಣಮಟ್ಟದ ಚಿಕಿತ್ಸೆಗಳು ಕೈಗೆಟುಕಲಿವೆ.

   ರಾಜ್ಯದಲ್ಲಿ ವೈದ್ಯರ ಕೊರತೆ ನೀಗಿಸಲು ಕೈಗೊಂಡಿರುವ ಕ್ರಮಗಳೇನು?

ರಾಜ್ಯದಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಸರಕಾರ ಬದ್ಧವಾಗಿದೆ. ಈಗಾಗಲೇ 380 ನುರಿತ ವೈದ್ಯರನ್ನು ನೇಮಕ ಮಾಡಲಾಗಿದ್ದು,  180 ವೈದ್ಯರು ಈಗಾಗಲೇ ಸೇವೆ ಆರಂಭಿಸಿದ್ದಾರೆ. ಇದರ ಜತೆಗೆ ಅವಶ್ಯವಿರುವ ವೈದ್ಯರನ್ನು ಕೊರತೆ ನೀಗಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಡಿಎನ್‌ಬಿ ಕೋರ್ಸ್ ಮಾಡಿರುವ ವೈದ್ಯರ ನೇರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ವೈದ್ಯಕೀಯ ವಿಜ್ಞಾನದ ವಿವಿಧ ವಿಭಾಗಗಳ ತಜ್ಞ ವೈದ್ಯರನ್ನು ನೇರವಾಗಿ ನೇಮಕ ಮಾಡಿಕೊಳ್ಳುವ ಚಿಂತನೆ ಸರಕಾರದ ಮುಂದಿದೆ. ಎಲ್ಲೆಲ್ಲಿ ವೈದ್ಯರ ಕೊರತೆಯಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲಾವಾರು ಕೊರತೆಯಿರುವ ವೈದ್ಯಕೀಯ ಸಿಬ್ಬಂದಿಯ ಮಾಹಿತಿ ಕಲೆ ಹಾಕಲಾಗುತ್ತಿದೆ.  ಇರುವ ಕಡೆ ಮುಂದಿನ ದಿನಗಳಲ್ಲಿ ವೈದ್ಯರನ್ನು ಹಂತ ಹಂತವಾಗಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು.

 ನರ್ಸ್‌ಗಳ ನೇಮಕಾತಿ ನನೆಗುದಿಗೆ ಬಿದ್ದಿರುವುದೇಕೆ?

ರಾಜ್ಯದಲ್ಲಿ ಎರಡು ವರ್ಷಗಳಿಂದ ನರ್ಸ್‌ಗಳ ನೇಮಕಾತಿ ನನೆಗುದಿಗೆ ಬಿದ್ದಿತ್ತು. ಸದ್ಯ ಈ ಸಮಸ್ಯೆ ಸಚಿವ ಸಂಪುಟ ಸಭೆಯಲ್ಲಿ ಬಗೆ ಹರಿದಿದೆ. ಹೊಸದಾಗಿ 1,600 ನರ್ಸ್‌ಗಳ ನೇಮಕಾತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೂಡಲೇ ನರ್ಸ್‌ಗಳ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಲಾಗುವುದು. ರಾಜ್ಯವನ್ನು ಕಾಡುತ್ತಿರುವ ನರ್ಸ್ ಸೇರಿದಂತೆ ವೈದ್ಯಕೀಯ  ಕೊರತೆಯನ್ನು ಹಂತ ಹಂತವಾಗಿ ನಿವಾರಿಸಲುವ ಗುರಿ ನನ್ನ ಮುಂದಿದೆ.

  ಹೊಸ ಆಸ್ಪತ್ರೆಗಳನ್ನು ನಿರ್ಮಿಸಲು ಸರಕಾರ ನಿರುತ್ಸಾಹ ತಾಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆಯಲ್ಲ?

ಹೊಸ ಆಸ್ಪತ್ರೆಗಳನ್ನು ಆರಂಭಿಸಲು ಸರಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಇರುವ ಆಸ್ಪತ್ರೆಗಳಲ್ಲಿಯೇ ಸಿಬ್ಬಂದಿ ಕೊರತೆ ಇರುವಾಗ ಹೊಸ ಆಸ್ಪತ್ರೆಗಳನ್ನು ನಿರ್ಮಿಸುವುದರಲ್ಲಿ ಅರ್ಥವಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಅನುಷ್ಠಾನಗೊಳಿಸಿರುವ ಆರೋಗ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಈಗಿರುವ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲು  ಶಾಸಕರು ಒತ್ತಡ ತರುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ನೀಗಿಸುವುದು ಬಿಟ್ಟರೆ ಹೊಸದಾಗಿ ಆಸ್ಪತ್ರೆಗಳನ್ನು ನಿರ್ಮಿಸುವ ಉದ್ದೇಶ ಸದ್ಯಕ್ಕಿಲ್ಲ. ಅಗತ್ಯ ಇರುವ ಕಡೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಬದಲಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಪ್ಪಳ, ಗದಗ, ಮೈಸೂರು ಮತ್ತು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಮೈಸೂರಿನ ಪಿಕೆಟಿಬಿ ಆಸ್ಪತ್ರೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ  ಕಟ್ಟಡ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸದ್ಯದಲ್ಲಿ ಇವುಗಳಿಗೆ ಚಾಲನೆಯೂ ಸಿಗಲಿದೆ.

ಡೆಂಘೀ, ಮಲೇರಿಯಾದಂತಹ ಮಾರಣಾಂತಿಕ ರೋಗಗಳನ್ನು ನಿಯಂತ್ರಿಸಲು ಕೈಗೊಂಡಿರುವ ಅಗತ್ಯ ಕ್ರಮಗಳೇನು?

ರಾಜ್ಯದಲ್ಲಿ ಡೆಂಘೀ, ಮಲೇರಿಯಾ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಹೆಚ್ಚು ನಿಗಾ ವಹಿಸಲು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಇಂತಹ ಪ್ರಕರಣಗಳ ಕುರಿತು ತತ್‌ಕ್ಷಣ ಕ್ರಮ ಕೈಗೊಳ್ಳಲು ವಿಭಾಗೀಯ ಮಟ್ಟದಲ್ಲಿ ಆರೋಗ್ಯ ಜಂಟಿ ನಿರ್ದೇಶಕರನ್ನು ಮರು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ. ವಿಭಾಗೀಯ ಮಟ್ಟದಲ್ಲಿ  ಪ್ರಕರಣ ಕುರಿತು ಜಂಟಿ ನಿರ್ದೇಶಕರು ಹೆಚ್ಚು ನಿಗಾ ವಹಿಸಲಿದ್ದಾರೆ. ಇದರಿಂದ ಡೆಂಘೀ ಮತ್ತು ಮಲೇರಿಯಾದಂತದ ರೋಗಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಕಡಿವಾಣ ಹಾಕಲು ಸಾಧ್ಯವಾಗಲಿದೆ.

ಜನೌಷಧಾಲಯಗಳು ತೆರೆಯುವುದರಲ್ಲಿ ವಿಳಂಬವೇಕೆ?

ರಾಜ್ಯದ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಜನೌಷಧಾಲಯಗಳನ್ನು ತೆರೆಯಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದು ಪ್ರಗತಿಯಲ್ಲಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಈ ಕೇಂದ್ರಗಳಲ್ಲಿ ಎಲ್ಲ ರೀತಿಯ ಗುಳಿಗೆಗಳು ಔಷಧಿಗಳು ದೊರೆಯಲಿವೆ. ಯಾವುದೇ ಕಾರಣಕ್ಕೂ ಹೊರಗಿನ ಔಷಧಿಗಳನ್ನು ಕೊಳ್ಳುಲು ಬರೆದುಕೊಡಬಾರದು ಎಂದು  ಸೂಚನೆ ನೀಡಲಾಗಿದೆ. ಈ ಕೇಂದ್ರಗಳಲ್ಲಿ ಔಷಧಿಗಳು ಇಲ್ಲದಿದ್ದಾಗ ತುರ್ತಾಗಿ ವೈದ್ಯರು ಚೀಟಿ ಬರೆದುಕೊಡಲಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close