ಸದ್ಯದ ಕಾಲಘಟ್ಟದಲ್ಲಿ ಭಾರತ ವಿಶ್ವಗುರು ಆಗಬಲ್ಲದೇ?

Posted In : ಸಂಗಮ, ಸಂಪುಟ

-ಚಿತ್ತರಂಜನ್

ಒಂದು ರಾಷ್ಟ್ರ ಬಲಿಷ್ಠವಾಗಿ, ಶಕ್ತಿಯುತವಾಗಿ ರೂಪುಗೊಂಡು ಮುಂಚೂಣಿಯಲ್ಲಿ ನಿಲ್ಲಲು ರಾಷ್ಟ್ರದ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಸಂಪನ್ಮೂಲಗಳು ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರವನ್ನು ರೂಪಿಸುವ ಜನರ ವಿಚಾರಧಾರೆ, ಆಚಾರಗಳು ಸಂಪನ್ಮೂಲಗಳ ಹೆಚ್ಚಾಗಿರುತ್ತದೆ. ರಾಷ್ಟ್ರ ಎಂಬುದು ಬರೀ ಭೌಗೋಳಿಕ ಸೀಮೆಯಿಂದ ಪರಿವರ್ತಿತಗೊಂಡ ಭೂಮಿಯಷ್ಟೇ ಅಲ್ಲ. ಅದೊಂದು ಅಭಿಮಾನ ಪೂರ್ಣವಾಗಿ ದೇಶವನ್ನು ಪ್ರೀತಿಸುವ ಜನರ ಸಮೂಹ. ದೇಶದ ಉನ್ನತಿಗೆ ಸರಿಯಾದ ದಿಕ್ಕು ತೋರಿಸಲು ದೇಶದ ಪ್ರಜೆಗಳ ವಿಚಾರಧಾರೆಯಿಂದ ಮತ್ತು ಆ ವಿಚಾರವನ್ನು ಕೃತಿಗಿಳಿಸಿ ನಡೆಸಿಕೊಂಡು ಹೋಗುವ ಪ್ರಯತ್ನದಿಂದ ಮಾತ್ರ ಸಾಧ್ಯ.

ಪ್ರಸ್ತುತ ಜಗತ್ತಿನಲ್ಲಿ ಭಾರತ, ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡು ಸಾಗುತ್ತಿದೆ. ತನ್ನ ಪಥದ ಬಗ್ಗೆ ನಿರ್ದಿಷ್ಟವಾದ ಕಲ್ಪನೆಯಾಗಲಿ, ಸ್ಪಷ್ಟ ಇತ್ತೀಚಿನವರೆಗೆ ಇದ್ದಿರಲಿಲ್ಲ. ಬಡತನ, ಜನಸಂಖ್ಯಾ ಸ್ಫೋಟ, ಅನಕ್ಷರತೆ ಮುಂತಾದ ಪಿಡುಗುಗಳಿಂದ ತನ್ನ ದಾರಿಯನ್ನು ಕಂಡುಕೊಳ್ಳದೇ ಸಾಗುತ್ತಿದ್ದ ದೇಶಕ್ಕೆ ವಿಶ್ವ ಗುರು ಆಗಬೇಕೆನ್ನುವ ಧ್ಯೇಯೋದ್ದೇಶಗಳು ಸಾರ್ವಜನಿಕ ವಲಯದಲ್ಲಿ ಪ್ರಸ್ತಾಪಕ್ಕೆ ಬಂದದ್ದು ಇತ್ತೀಚೆಗೆ. ಭಾರತವು ವಿಶ್ವ ರಾಷ್ಟ್ರಗಳಲ್ಲಿ ಮುನ್ನೆಲೆಗೆ ಬಂದು ಗುರುವಾಗಿ ನಿಲ್ಲಲು ಸಾಧ್ಯವೇ?
ಜಗತ್ತಿನ ಹೆಸರಾಂತ ನಾಗರೀಕತೆಯ ಸಾಲಿನಲ್ಲಿ ಒಂದಾಗಿರುವ ಭಾರತದ ಸಿಂಧೂ ಬಯಲಿನ ನಾಗರೀಕತೆಯು ಪ್ರಾಚೀನ ಕಾಲದಿಂದಲೂ ವಿಶ್ವದ ಗಮನ ಸೆಳೆದಿದೆ.

ಸಿಂಧೂ ನದಿಯ ಕಣಿವೆಯಲ್ಲಿ ಉಗಮಿಸಿ, ಹಿಂದೂ ಹರಡಿರುವ ಭಾರತದ ಜನ ಜೀವನ, ಒಂದು ಆಕರ್ಷಣೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಒಂದು ಕಾಲಕ್ಕೆ ಔನ್ನತ್ಯವನ್ನು ಕಂಡಿತ್ತು. ಪ್ರಪಂಚದ ಇತರೆಡೆ ಅಕ್ಷರ ಜ್ಞಾನವೂ ಇಲ್ಲದ ಕಾಲದಲ್ಲಿ ವೇದ ಎಂಬ ಅಪಾರ ಜ್ಞಾನ ಭಂಡಾರ ಭಾರತದ ಸ್ವತ್ತಾಗಿತ್ತು. ಸ್ವಾಭಾವಿಕವಾಗಿ ಅಪಾರ ನೈಸರ್ಗಿಕ ಸಿರಿಯನ್ನು ಹೊಂದಿದ ದೇಶಕ್ಕೆ ಅತ್ಯುನ್ನತ ಜ್ಞಾನ, ಸಾಹಿತ್ಯ, ಅಧ್ಯಾತ್ಮಿಕತೆ ಬೆನ್ನೆಲುಬಾಗಿ ನಿಂತು ದೇಶವನ್ನು ಮುನ್ನಡೆಸಿತ್ತು. ವಿವಿಧ ಹಿನ್ನೆಲೆಯ ಜನರುಗಳನ್ನು ಒಳಗೊಂಡು, ಏಕಸೂತ್ರತೆಯಲ್ಲಿ ಬಂಧಿಸಿ, ಪ್ರಕೃತಿಯೊಡನೆ ಸಾಮ್ಯವನ್ನು ಸಾಧಿಸಿ, ವಿಶ್ವ ಸಾರುವ ಜೀವನಧರ್ಮ ಭಾರತದ ನೆಲದಿಂದ ಮೂಡಿಬಂದದ್ದು.

ಕಾಲಾಂತರದಲ್ಲಿ ಪರಕೀಯರ ದಾಳಿಗೊಳಗಾಗಿ, ಹಲವಾರು ವರ್ಷ ದಾಸ್ಯದಲ್ಲಿಯೇ ಇದ್ದದ್ದು ಭಾರತೀಯರ ದುರಂತ. ಈ ದುರಂತಕ್ಕೆ ಕಾರಣವಾದದ್ದು ಭಾರತೀಯರ ಒಳಜಗಳ ಹಾಗೂ ಏಕತೆಯ ಕೊರತೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ್ದ ಭಾರತೀಯ ಸಂಸ್ಕೃತಿಗೆ, ಆ ವಿವಿಧತೆಗಳನ್ನೇ ದೌರ್ಬಲ್ಯವನ್ನಾಗಿ ಮಾಡಿಕೊಂಡು, ಒಡಕು ಮೂಡಿಸುವುದನ್ನುತಡೆಯಲಾಗಲಿಲ್ಲ . ಭಾರತೀಯರಲ್ಲಿದ್ದ ಉದಾರತೆಯ ಮನೋಭಾವದಿಂದ ಪ್ರವೇಶ ಪಡೆದ ಅನ್ಯರು, ಭಾರತೀಯರಲ್ಲಿ ಕೀಳರಿಮೆ ಮೂಡಿಸಿ ಅಭಿಮಾನಶೂನ್ಯತೆಯನ್ನು ಬಿತ್ತಿ ಬೆಳೆಸಲು ಯತ್ನಿಸಿದರು. ಆದರೂ ಆ ಪೂರ್ಣವಾಗಿ ನಂದಿ ಹೋಗದೇ, ಕಿಡಿಯಾಗಿ ಉಳಿದು, ಧಗಧಗಿಸಿ, ಪ್ರಜ್ವಲಿಸಿ ಪರತಂತ್ರದ ಸಂಕೋಲೆಯನ್ನು ಕರಗಿಸಿ, ಪ್ರಜಾತಂತ್ರ ರಾಷ್ಟ್ರವಾಗಲು ಸಾಧ್ಯವಾಯಿತು.

ಸ್ವಾತಂತ್ರ್ಯಾ ನಂತರ ಭಾರತದ ಬೆಳವಣಿಗೆ ನಿರಾಶಾದಾಯಕವಲ್ಲದಿದ್ದರೂ, ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಜನನಾಯಕರು ಭಾರತದ ಬಗೆಗಿನ ದೂರ ದೃಷ್ಟಿಯುಳ್ಳ ಯೋಜನೆಗಳನ್ನು ರೂಪಿಸದೇ ಹೋದದ್ದು ಒಂದು ಕಾರಣ. ಆದರೆ ರೂಪಿಸಿದ ಯೋಜನೆಗಳನ್ನು ಸರಿಯಾದ ಕಾಲಕ್ಕೆ ಪೂರ್ಣಗೊಳಿಸದೇ ಇರುವಂತಹ ಪ್ರವೃತ್ತಿ ಇನ್ನೊಂದು ಕಾರಣ. ಇದರೊಂದಿಗೆ ಭ್ರಷ್ಟಾಚಾರಕ್ಕೆ ಇಂಬುಗೊಟ್ಟದ್ದು, ರಾಷ್ಟ್ರದ ಬೆಳವಣಿಗೆಗೆ ಭಾರಿ ಹಿನ್ನಡೆಯನ್ನುಂಟು ಮಾಡಿತು.

ಬಯಸದೇ ಯಾವುದೇ ಬದಲಾವಣೆ ಸಾಧ್ಯವಾಗುವುದಿಲ್ಲ. ಜನರು ಒಗ್ಗಟ್ಟಾಗಿ, ಒಕ್ಕೊರಲಿನಿಂದ ಪರಿವರ್ತನೆಯ ಕೂಗು ಹಾಕದಂತೆ ಮಾಡಲು ರಾಷ್ಟ್ರದ ಮುಂದಾಳುಗಳು ಹಿಡಿದ ದಾರಿಯಂತೂ ಹಿಂದಿನದೇ . ವೈಯಕ್ತಿಕವಾಗಿ ಅಥವಾ ಒಂದು ಗುಂಪಿಗಾಗುವ ಲಾಭವನ್ನು ಮನಗಂಡು, ದೇಶದ ಜನರ ನಡುವಿನ ಬಿರುಕನ್ನು ಇನ್ನಷ್ಟು ಹೆಚ್ಚಿಸುವ ತಂತ್ರಕ್ಕೆ ಕೈ ಹಾಕಿದರು. ಜಾತೀಯತೆ, ಕೋಮುವಾದ, ಭಾಷಾ ವೈಷಮ್ಯಗಳ ಆಯುಧಗಳನ್ನು ಬಳಸಿ ದೇಶದಾದ್ಯಂತ ಕಿಚ್ಚು ಹಚ್ಚಿದರು. ಅಭಿವೃದ್ಧಿ ಪಥದತ್ತ ಓಡದಂತೆ ಪ್ರಗತಿ ಎಂಬ ಅಶ್ವದ ಕಾಲುಗಳನ್ನು ಕತ್ತರಿಸಿದರು. ಸಾಂಸ್ಕೃತಿಕ , ಶೈಕ್ಷಣಿಕ ದಾಳಿಯಿಂದ ವ್ಯವಸ್ಥಿತವಾಗಿ ಭಾರತೀಯರ ದೇಶಾಭಿಮಾನ, ಸಮಷ್ಠಿ ಪ್ರಜ್ಞೆಯನ್ನು ಕುಂಠಿತಗೊಳಿಸುವ ಕೆಲಸ ನಡೆಯಿತು. ಧರ್ಮದ ಹಾದಿಯಿಂದ ಮಾತ್ರ ಸಂಪತ್ತನ್ನು ಗಳಿಸುವುದು, ಇಷ್ಟಕಾಮ್ಯಗಳನ್ನು ಪೂರೈಸುವುದು ಎಂಬ ವೇದೋಕ್ತ ಜೀವನಬೋಧೆಯನ್ನು ತ್ಯಜಿಸಿ, ಮರೆಮಾಡಿಸಿ, ದೇಶದ ಸಂಪತ್ತನ್ನು ಕೈಗೆ ಸಿಕ್ಕಷ್ಟು ಬಾಚಿ ಬಾಚಿ ತನಗೊಂದು, ತಮ್ಮವರಿಗೂ ಬೇಕೆಂದು ಕೊಳ್ಳೆಹೊಡೆದು ವೈಯಕ್ತಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳಲಾಯಿತು. ಜನರು ಎಚ್ಚರವಾಗಿರದೇ ಇದ್ದರೂ ಏನೂ ಮಾಡದ ಸ್ಥಿತಿಯಲ್ಲಿದ್ದು ಜನನಾಯಕರ ಕೈಗೊಂಬೆಯಾದರು.

ಇತ್ತೀಚಿನ ಕೆಲವರ್ಷಗಳಲ್ಲಿ ಬದಲಾವಣೆಯ ತಂಗಾಳಿ ಪ್ರಜೆಗಳೂ ‘ಎಷ್ಟಾದರೂ ಇಷ್ಟೇ’ ಎಂಬ ಮನೋಭಾವದಿಂದ ದೂರವಾಗಿ ತಮ್ಮಿಂದ ಪರಿವರ್ತನೆ ಸಾಧ್ಯ ಎಂಬ ಕಟು ಸತ್ಯ ಮನವರಿಕೆಯಾಗುತ್ತಿದೆ. ಆದರೆ ಹಿಂದೆಂದಿಗಿಂತಲೂ ತೀಕ್ಷ್ಣವಾಗಿ ಭಾರತೀಯರಲ್ಲಿ ಒಡಕು ಮೂಡಿಸುವ ಕೆಲಸ ನಡೆದಿದೆ. ಧರ್ಮ, ಪಂಗಡ, ಭಾಷೆ , ಜಾತಿ, ಮೇಲು-ಕೀಲುಗಳ ಭಿನ್ನತೆಯ ಕಿಡಿಯನ್ನು ದೊಡ್ಡದಾಗಿ ಮಾಡಿ ಜನತೆಯ ದಾರಿ ತಪ್ಪಿಸುವ ಕೆಲಸ ಅವ್ಯಾಹತವಾಗಿ ಸಾಗಿದೆ. ಜನರೂ ಈ ಕ್ಷುದ್ರ ಪ್ರಯತ್ನಕ್ಕೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಲಿಯಾಗುತ್ತಿದ್ದಾರೆ. ಏನಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲುವುದು, ಹೇಗಾದರೂ ಅಧಿಕಾರ ಗಳಿಸುವುದು, ಶತಾಯಗತಾಯ ಎಂಬಂತೆ ಅಧಿಕಾರ ಉಳಿಸಿಕೊಳ್ಳುವುದು ಜನನಾಯಕರಾದವರ ಆದ್ಯ ಕರ್ತವ್ಯವಾಗಿದೆ. ಈ ವಿಷವರ್ತುಲದಲ್ಲಿ ಜನನಾಯಕರು, ಜನರೂ ಪರಿಕ್ರಮಿಸುತ್ತಿದ್ದಾರೆ. ಎರಡು ಹೆಜ್ಜೆ ಪ್ರಗತಿಯ ಕಡೆಗೆ ಸಾಗುವ ದೇಶ, ಐದು ಹೆಜ್ಜೆ ಮತ್ತೆ ಹಿಂದಿಡುತ್ತಿರುವುದು ವಿಪರ್ಯಾಸ.

ಸಮಷ್ಠಿ ಪ್ರಜ್ಞೆ ಭಾರತೀಯ ಸಂಸ್ಕೃತಿಯ, ವಿಚಾರಧಾರೆಯ ಕೇಂದ್ರ ಬಿಂದು. ವೈಯಕ್ತಿಕ ನೆಲೆಯಲ್ಲಿ ಆರೋಗ್ಯ ಕಾಯ್ದುಕೊಳ್ಳುವ ಯೋಗ, ಆಯುರ್ವೇಧ , ಆತ್ಮೋನ್ನತಿಗಾಗಿ ಅಧ್ಯಾತ್ಮ ವಿದ್ಯೆ, ವಸುದೈವ ಕುಟುಂಬಕಂ ಎಂದು ವಿಶ್ವವನ್ನು ಜೋಡಿಸುವ ಭಾರತೀಯ ಕುಟುಂಬ ವಿಫುಲ ಸಾಹಿತ್ಯ, ಸಂಗೀತದ ಪರಂಪರೆ, ಪ್ರಕೃತಿಯೊಂದಿಗೆ ಸಂಭ್ರಮಿಸುವ ಹಬ್ಬ ಹರಿದಿನಗಳು- ಇವು ಭಾರತೀಯ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಬೇರುಗಳು. ಆಧುನಿಕ ವೈದ್ಯ ವಿಜ್ಞಾನ, ಉಪಗ್ರಹಗಳ ಉಡಾವಣೆ, ಪರಮಾಣು ಕ್ಷೇತ್ರ, ಗಣಕ ತಂತ್ರಜ್ಞಾನದಲ್ಲಿ ಸಾಧನೆ- ಇವುಗಳು ಪಾಶ್ಚಿಮಾತ್ಯ ವಿಚಾರಗಳ ಕೊಡುಕೊಳ್ಳುವಿಕೆಯಿಂದ ಸಾಧಿಸಿದ ಪ್ರಗತಿಗಳು. ಇವುಗಳನ್ನು ಕಾಯ್ದುಕೊಳ್ಳುವುದು, ಭಾರತವನ್ನು ಅಭಿಮಾನದಿಂದ ಪ್ರೀತಿಸಿ, ಗೌರವಿಸಿ, ನಮ್ಮೆಲ್ಲ ಕೆಲಸ ಕಾರ್ಯಗಳನ್ನು ಅದರ ಉನ್ನತಿಗಾಗಿ ಸಮರ್ಪಿಸುವುದು ನಮ್ಮ ಈಗಿನ ಅವಶ್ಯಕತೆ. ಭಾರತೀಯರಲ್ಲಿ ಸ್ವಭಾವತಃ ನೆಲೆಗೊಂಡ ಕಾರ್ಯ ನಿವೃತ್ತಿಯನ್ನು ಕಾರ್ಯ ಪ್ರವೃತ್ತರಾಗುವುದು ಈ ನಿಟ್ಟಿನಲ್ಲಿ ನಾವಿಡಬೇಕಾದ ಹೆಜ್ಜೆ. ಋಷಿ ವಾಕ್ಯದೊಡನೆ ವಿಜ್ಞಾನ ಕಲೆಯನ್ನು ಮೇಳೈಸಿ, ಏಕತೆಯನ್ನು ಸಾಧಿಸಿದರೆ ಭಾರತದ ಉನ್ನತಿ ಸಾಧ್ಯ. ಇದಲ್ಲದೇ ಭಾರತ ವಿಶ್ವಗುರು ಹೇಗಾದೀತು?

Leave a Reply

Your email address will not be published. Required fields are marked *

4 × 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top