About Us Advertise with us Be a Reporter E-Paper

ವಿರಾಮ

ಮಳೆಯೆ, ಬಿರುಸಾಗಿ ಬಾರದಿರು…

- ಗೊರೂರು ಶಿವೇಶ್, 9480798674

ಊರಿನ ಬೀದಿಗಳು ಅಕ್ಷರಶಃ ಕೆಸರುಗದ್ದೆಗಳಾಗುತ್ತಿದ್ದವು. ಆ ಕೆಸರನ್ನು ದಾಟಲು ಹಾಕಿರುತ್ತಿದ್ದ ಕಲ್ಲುಗಳು, ಅವುಗಳ ಮೇಲೆ ಸರ್ಕಸ್‌ನ ತಂತಿಯ ಮೇಲಿನಂತಹ ನಮ್ಮ ನಡಿಗೆ! ಮನೆಯ ಸುತ್ತ ಆವರಿಸಿರುತ್ತಿದ್ದ ಹಾವಸೆಯಿಂದಾಗಿ ಜಾರಿ ಬಿದ್ದ ಜಾಣರಾಗುತ್ತ, ಎದ್ದು ಬಯ್ಯುತ್ತಲೋ, ಗೊಣಗುತ್ತಲೊ, ಇಲ್ಲ ನಾಚಿಕೆಯಿಂದ ತಲೆ ತಗ್ಗಿಸುತ್ತಲೋ ಹೋಗುವುದು ರೂಢಿಯಾಗಿತ್ತು

ಬಾ ಮಳೆಯೆ ಬಾ,
ಅಷ್ಟು ಬಿರುಸಾಗಿ ಬಾರದಿರು,
ನನ್ನ ನಲ್ಲೆ ಬರಲಾರದಂತೆ.
ಅವಳಿಲ್ಲಿ ಬಂದೊಡನೆ,
ಬಿಡದೆ ಬಿರುಸಾಗಿ ಸುರಿ,
ಹಿಂತಿರುಗಿ ಹೋಗದಂತೆ
ತುಂಟ ಕವಿ ಎಂದು ಹೆಸರಾದ ಬಿ.ಎಲ್ ಲಕ್ಷ್ಮಣ್ ರಾವ್‌ರವರ ಒಂದು ಕವಿತೆಯ ಶೇಕ್‌ಸ್ಪಿಯರ್‌ನ ‘ರೋಮಿಯೋ ಜೂಲಿಯಟ್’ನಲ್ಲಿ ಬರುವ ಜೂಲಿಯಟ್‌ಳ ಸ್ವಗತದ ಸಾಲುಗಳಾದ ‘ಕಮ್ ನೈಟ್, ಕಮ್ ರೋಮಿಯೋ’ವನ್ನು ನೆನಪಿಸುವ ಈ ಕವಿತೆಯ ಮುಂದಿನ ಸಾಲುಗಳಂತೆ ‘ಒಮ್ಮೆ ಬಾರೋ. . ಒಮ್ಮೆ ಬಾರೋ. . ಎಲ್ಲೆ ನೀನಿದ್ದರೂ, ಸುರಿ ಮಳೆ ಸುರಿಯುವ ಸೂಚನೆ ಶುರುವಾಗಿದೆ.’

ನಮ್ಮೂರು ವರ್ಷದ ಉಳಿದೆಲ್ಲಾ ತಿಂಗಳುಗಳು ಆಹ್ಲಾದಕರವಾಗಿದ್ದರೂ ಮಳೆಗಾಲವೆಂದರೆ ರೇಜಿಗೆ. ಜೂನ್‌ನಿಂದ ಆರಂಭವಾಗಿ ಸೆಪ್ಟಂಬರ್‌ವರೆಗೆ ಸಾಗುವ ಜಿಟಿಜಿಟಿ ಮಳೆ. ಯಗಚಿ, ಹೇಮಾವತಿ ನದಿಗಳ ಸಂಗಮವಾಗಿ ಮುಂದೆ ಹರಿಯುವಾಗ ಸಿಗುವ ಊರೇ ನಮ್ಮೂರು. ಅದಕ್ಕೆ ಅಣೆಕಟ್ಟು ಕಟ್ಟಿದ ನಂತರ ಅಣೆಕಟ್ಟಿನ ಬಾಗಿಲುಗಳಲ್ಲಿ ರಭಸದಿಂದ ನೀರು ಧುಮ್ಮುಕ್ಕುತ್ತಿದ್ದಾಗ ಸಿಡಿಯುವ ನೀರಿನ ತುಂತುರು, ಅದರ ಜೊತೆಗೆ ಸೋನೆ ಮಳೆ ನಮ್ಮೂರನ್ನು ಸಂಪೂರ್ಣವಾಗಿ ತೊಯ್ಯುವಂತೆ ಮಾಡುತ್ತಿತ್ತು. ಅಣೆಕಟ್ಟಿಗೆ ಮೊದಲು ಎದುರಾಗುತ್ತಿದ್ದ ಗದ್ದೆಗಳು ನಮ್ಮದ್ದಾದರಿಂದ, ಬತ್ತಕ್ಕೆ ಅಗೆ ಹಾಕುತ್ತಿದ್ದ ಸಮಯದಲ್ಲಿ ನಾವೆಲ್ಲಾ ನೆನೆದು ತೊಪ್ಪಯಾಗಿ ಹೋದರೆ, ಅತ್ತ ಊರಿನ ಬೀದಿಗಳು ಅಕ್ಷರಶಃ ಕೆಸರುಗದ್ದೆಗಳಾಗುತ್ತಿದ್ದವು. ಆ ಕೆಸರನ್ನು ದಾಟಲು ಹಾಕಿರುತ್ತಿದ್ದ ಕಲ್ಲುಗಳು, ಇಟ್ಟಿಗೆಗಳು ಅವುಗಳ ಮೇಲೆ ಸರ್ಕಸ್‌ನ ಮೇಲಿನಂತಹ ನಮ್ಮ ನಡಿಗೆ! ಮನೆಯ ಸುತ್ತ ಆವರಿಸಿರುತ್ತಿದ್ದ ಹಾವಸೆಯಿಂದಾಗಿ ಜಾರಿ ಬಿದ್ದ ಜಾಣರಾಗುತ್ತ, ಎದ್ದು ಬಯ್ಯುತ್ತಲೋ, ಗೊಣಗುತ್ತಲೊ, ಇಲ್ಲ ನಾಚಿಕೆಯಿಂದ ತಲೆ ತಗ್ಗಿಸುತ್ತಲೋ ಹೋಗುವುದು ರೂಢಿಯಾಗಿತ್ತು. ಊರೊಳಿಗಿನ ಕೆಲವು ಮನೆಗಳಲ್ಲಿ ನೀರು ಜಿನುಗಿ ಸೊಳ್ಳೆಗಳ ಆವಾಸ ಸ್ಥಾನವಾಗಿರುತ್ತಿತ್ತು. ಗೂರಲು ರೋಗಿಗಳಂತೂ ಪ್ರಾಣಾಂತಕ ಸ್ಥಿತಿ ತಲುಪಿ ಈಗಲೋ ಆಗಲೋ ಎನ್ನುವಂತಾಗಿರುತ್ತಿದ್ದರು. ಅವರು ಬಿಡುತ್ತಿದ್ದ ಏದುಸಿರು ಹೊರಗಿನ ಮಳೆಯ ಸದ್ದಿಗೆ ಪೈಪೋಟಿ ಒಡ್ಡುವಂತಿರುತ್ತಿತ್ತು. ಪ್ರಕೃತ್ತಿ ಒಡ್ಡುತ್ತಿದ್ದ ಇಂತಹ ಸವಾಲುಗಳನ್ನು ನಮ್ಮೂರಿನವರು ಸಮರ್ಥವಾಗಿ ಗೋಣಿಚೀಲ, ಗೊರಗುಗಳ ಮೊರೆಹೋಗುತ್ತಿದ್ದರು.

ಹಟ್ಟಿಗಿಟ್ಟಿದ್ದವರು ಪರಂಧಾಮಕ್ಕೆ ಮಳೆ ಮತ್ತು ಶೀತಗಾಳಿಯಿಂದಾಗಿ ಇದೇ ಸಮಯ ಹಟ್ಟಿಗಿಟ್ಟಿದ್ದವರು ಪರಂಧಾಮಗಯ್ಯುತ್ತಿದ್ದರು. ಅದೆಂತಹ ದುರ್ಬರ ಸ್ಥಿತಿ ಎಂದರೆ ಶವವನ್ನು ಹೊತ್ತೊಯ್ಯುವವರು ಹಳ್ಳದಿಣ್ಣೆಯ ಮೇಲೆ ಕಾಲು ಜಾರುತ್ತ, ಚಪ್ಪಲಿಗಳು ಕೆಸರಿನಲ್ಲಿ ಹೂತು ಹಾಗೂ ಹೀಗೂ ಮಸಣ ತಲುಪಿದರೆ ಶವ ಹೂಳಲು ಎಂದು ತೆಗೆದ ಗುಂಡಿಗಳು ನೀರು ತುಂಬಿ ಹೋಗಿರುತ್ತಿದ್ದವು. ಆ ನೀರನ್ನು ತೆಗೆದು ಶವಸಂಸ್ಕಾರ ಮುಗಿಸುವಷ್ಟರಲ್ಲಿ ಇದ್ದಬದ್ದವರಲ್ಲಾ ಹೈರಾಣವಾಗಿರುತ್ತಿದ್ದರು. ಜನಪದರು ಇಂತೆಲ್ಲಾ ಸಂಕಷ್ಟಗಳನ್ನು ಎದುರಿಸಿದ್ದರಿಂದಲೇ ‘ ಕತ್ತಲಲ್ಲಿ . . ಬೋರೆಂಬ ಮಳೆ ಸುರಿದು. . ಇಷ್ಟು ದಿನ ತನುವೊಳಗಿದ್ದು. . ಹೋಗುವಾಗ ಒಂದು ಮಾತು ಹೇಳದೆಲೆ ಹೋದಲೆ ಎಲೆ ಹಂಸೆ’ ಎಂದು ಪ್ರಾಣಪಕ್ಷಿಯನ್ನು ಕುರಿತು ಹಾಡಿದ್ದು.

ಆಷಾಡದ ಮಳೆ ಅಟ್ಟಾಡಿಸಿಕೊಂಡು ಹೊಡೆಯುವಾಗ ಹಾಳಾದ್ ಜೀವ ಹೆಣ್ಣಾಗಾದ್ರು ಹುಟ್ಬಾರ್ದಿತ್ತಾ ಎನ್ನುವ ಗಾದೆ ಹೊಲ ಗದ್ದೆಗಳಲ್ಲಿ ಮಳೆಯನ್ನೆದುರಿಸಿ ಹೋರಾಟ ಮಾಡುತ್ತಿದ್ದವರ ಗಾಥೆಯನ್ನು ಹೇಳುತ್ತದೆ. ಗಡಗಡ ನಡುಗುವ ಮೈಯಿಗೆ ಕಾಫಿ ಕುಡಿಯುವ ಆಸೆ. ಆದರೆ ಈ ಮಳೆಗೆ ಮೇಯಲು ಹೋಗಲಾರದೆ ಒಳಗಿನ ಕೊಟ್ಟಿಗೆಯಲ್ಲಿಯೇ ನಿಂತು ಶೀತಗಾಳಿಗೆ ಹಸುಗಳು ಸರಿಯಾಗಿ ಹಾಲು ನೀಡದ ಕಾರಣಕ್ಕಾಗಿ ಹಾಲಿನ ಕೊರತೆ ಎಲ್ಲರ ಮನೆಯಲ್ಲೂ. ಆದರೆ ಅದಕ್ಕೂ ಜಗ್ಗದೆ ಬರಗಾಫಿಯನ್ನು ಕುಡಿದು ಹೆಂಗಸರ ಜೊತೆಗೆ ಗಂಡಸರು ಚಳಿನಿವಾರಿಸಿಕೊಂಡರೆ ಉಳಿದವರಿಗೆ ಹೆಂಡ, ಸರಾಯಿ ಗಡಂಗಿನಂಗಡಿಯ ಕಡೆ ಸೆಳೆತ.

ಆಗಿನ ನಮ್ಮೂರಿನ ಮನರಂಜನೆಯ ಮಾಧ್ಯಮವಾಗಿದ್ದ ಟೆಂಟು ಸಿನಿಮಾದವರಿಗೂ ಇದು ಸಂಕಷ್ಟ ಕಾಲ. ನಾಲ್ಕು ತಿಂಗಳ ಕಾಲ ನಡೆದಷ್ಟು ನಡೆಯಲಿ ಎಂಬಂತೆ ಬೆಂಗಳೂರು, ಹಾಸನಗಳಲ್ಲಿ ಒಂದು ವಾರ ಕೂಡ ಸೂಪರ್ ಫ್ಲಾಪಾದ ಸಿನಿಮಾಗಳು ಸಾಲುಸಾಲಾಗಿ ಬರುತ್ತಿದ್ದವು. ಇದರ ಜೊತೆಗೆ ತಮಿಳು, ತೆಲುಗಿನ ಜೇಮ್‌ಸ್ ಬಾಂಡ್, ಸೇಡು ತೀರಿಸಿಕೊಳ್ಳುವ ಭಯಂಕರ ಹೊಡೆದಾಟದ ಸಿನಿಮಾಗಳು ಇದೇ ಸಮಯದಲ್ಲಿ ಬರುತ್ತಿದ್ದವು. ಹೊಡೆದಾಟ ಬಡಿದಾಟದ ಆಕರ್ಷಣೆಗೆ ಸಿಲುಕಿದ ನಾವು, ಗುಡಾರದ ನೀರು ಸೋರದ ಬಳಿ ಕುಳಿತು ಸಿನಿಮಾ ನೋಡಲು ಸಾಹಸ ಮಾಡುತ್ತಿದ್ದೆವು. ಕೆಲ ಸಿನಿ ಪ್ರೇಮಿಗಳು ಛತ್ರಿ ಹಿಡಿದು ಚಿತ್ರ ನೋಡುವ ಸಾಹಸಕ್ಕೆ ಬಿದ್ದು ಹಿಂದಿನವರು ಗುರಾಯಿಸಿ ಅತ್ತ ಕಳುಹಿಸುತ್ತಿದ್ದರಿಂದ ಟವಲ್‌ಗಳನ್ನು ತಲೆಗೇರಿಸಿ ಸಿನಿಮಾ ಸಾಹಸವನ್ನು ಮುಂದುವರಿಸುತ್ತಿದ್ದರು.

ನಾಟಕದವರ ನಾಯಿಪಾಡು
ಇನ್ನೂ ನಾಟಕದವರ ಪಾಡಂತು ನಾಯಿಪಾಡು. ಜನ ಬರದೆ ಕಲೆಕ್ಷನ್ ಆಗದೆ ನಮ್ಮ ಶಾಲೆಗಳ ಬಳಿ ಬಂದು ಬೆನಿಫಿಟ್ ಶೋ ಮಾಡುವುದಾಗಿ ತಿಳಿಸಿ ನಮ್ಮಿಂದ ಐದು, ಹತ್ತು ರೂಗಳನ್ನು ಪಡೆದು ನಾಟಕದ ಒಂದೆರಡು ದೃಶ್ಯಗಳನ್ನು ಅಭಿನಯಿಸಿದ ಶಾಸ್ತ್ರ ಮಾಡಿ, ಜೀವನ ಸಾಗಿಸಲು ಮುಂದಿನೂರಿಗೆ ಪಯಣಿಸುತ್ತಿದ್ದರು. ರಂಗನಾಯಕಿ ಸಿನಿಮಾದಲ್ಲಿ ನಾಯಕಿ ಇಂಥದ್ದೇ ಮಳೆಯನ್ನು ನೋಡುತ್ತಾ ನಾಟಕ ಕಂಪನಿಗಳ ಕುರಿತಾಗಿ ಹೇಳುತ್ತಿದ್ದ ಸ್ವಗತದ ಮಾತುಗಳು ತಟ್ಟನೆ ಈ ನೆನೆಯುವಂತೆ ಮಾಡುತ್ತಿತ್ತು. ನಮ್ಮೂರಿನ ಹವ್ಯಾಸಿ ಕಲಾವಿದರು ಆಗಸ್‌ಟ್ 15ರ ಸಂದರ್ಭಕ್ಕೆಂದು ‘ಸುಳಿಯಲ್ಲಿ ಸಿಕ್ಕವರು’ ಎಂಬ ಸಸ್ಪೆನ್‌ಸ್ ಭರಿತ ನಾಟಕವನ್ನು ಇಂಥದ್ದೇ ಮಳೆಗಾಲದಲ್ಲಿ ಆಡಿ, ಸಿಡಿಲು ಗುಡುಗಿನ ಎಫೆಕ್‌ಟ್ಗಾಗಿ ಆಗ ಚಾಲ್ತಿಯಲ್ಲಿದ್ದ ಟೇಪ್ ರೇಕಾರ್ಡ್‌ಗಳಲ್ಲಿ ಭೀಕರ ಸದ್ದುಗಳನ್ನು ರೆಕಾರ್ಡ್ ಮಾಡಿ ಚಾಲನೆ ಮಾಡಿದ್ದಲ್ಲ,ೆ ಲೈಟುಗಳನ್ನು ಆನ್ ಆಫ್ ಮಾಡಲು ಹೋಗಿ, ಮಧ್ಯದಲ್ಲಿ ಕರೆಂಟು ಕೈಕೊಟ್ಟು ನೋಡುಗರ ಎದೆನಡುಗಿಸಿದ್ದು ಉಂಟು.

ಮಲೆನಾಡನ್ನು ಮಲೆನಾಡು ಎಂದು ಕರೆಯಲು ಕಾರಣವೇನು? ಎಂಬ ಪ್ರಶ್ನೆಗೆ ಬೆಟ್ಟಕಾಡುಗಳ ಎಂಬ ಉತ್ತರವನ್ನು ಒಪ್ಪದ ನಮ್ಮ ಮಾಸ್ತರರು ‘ಸರಿಯಾಗಿ ಹೇಳಬೇಕೆಂದರೆ ಅದು ಮಳೆನಾಡು. ಮಳೆ ಹೆಚ್ಚು ಬೀಳುವುದರಿಂದ ಆ ಹೆಸರು ಬಂದಿದೆ’ ಎಂದು ತಿಳಿಸಿ ಆಗ ಹಳೆಗನ್ನಡದ ಲಕ್ಷಣಗಳಲ್ಲಿ ವ-ಮ, ಹ-ಪ ಭೇದದ ಜೊತೆಗೆ ಲ-ಳ ಭೇದವನ್ನು ಬೆಸೆದಿದ್ದರು. ಇದರ ಜೊತೆಗೆ ಕುವೆಂಪುರವರ ‘ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ’ ಸಾಲುಗಳನ್ನು ಹೇಳಿದ್ದಲ್ಲದೆ, ‘ನಮ್ಮ ಮನೆ’ ಕವಿತೆಯ ‘ಮೊದಲ ಮಿಂಚು ಹೊಳೆದ ಮನೆ, ಮೊದಲ ಗುಡುಗು ಕೇಳ್ದ ಮನೆ, ಮೊದಲ ಮಳೆಯು ಕರೆದು ಹೆಂಚ ಸದ್ದು ಹರಿದು, ಮಾಡಿನಿಂದ ನೀರು ಸುರಿದು ಬೆರಗನಿತ್ತ ನಮ್ಮ ಮನೆ’ ಸಾಲುಗಳನ್ನು ಅಭಿನಯ ಪೂರ್ವಕವಾಗಿ ಹಾಡಿ ತೋರಿಸಿದ್ದರು.

ಈಗ ಅಂತಹ ಮಳೆ ಕಾಣದಾಗಿದೆ. ಕೆಲವು ಊರುಗಳಲ್ಲಿ ಭರಪೂರ ಮಳೆ ಅಂತೆ. ಆದರೆ ನಮ್ಮೂರಿನಲ್ಲಿ ಆಗೊಮ್ಮೆ ಈಗೊಮ್ಮೆ ಒಂದೆರೆಡು ದಿನ ಹನಿಯುವ ಉರುಬಿನಂಥ, ನಮ್ಮೂರಿನವರು ಹೇಳುತ್ತಿದ್ದ ಪಂಚೆ ನೆನೆಯುವ ಮಳೆಯನ್ನೇ ‘ಅದ್ಭುತ ಮಳೆ’ ಎಂದು ಕರೆಯುತ್ತಾ ಹಳೆಯ ಮಳೆಯನ್ನು ನೆನೆಯಬೇಕಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close