About Us Advertise with us Be a Reporter E-Paper

ವಿರಾಮ

ರಹಸ್ಯ ಕಟ್ಟಡದಲ್ಲಿ ರಜತ್

* ಅಶೋಕ ವಿ ಬಳ್ಳಾ, ಸೂಳೇಬಾವಿ

ಊರಾಚೆಯ ಒಂಟಿ ಮನೆ. ಜೇಡರ ಬಲೆಗಳು ಮೂಲೆಮೂಲೆಯಲ್ಲಿ ನಿರ್ಮಾಣವಾಗಿದ್ದವು. ಎತ್ತಿ ನೋಡಿದರೆ ಬಾವಲಿಗಳು ಜೋತು ಬಿದ್ದಿದ್ದವು. ಊರಿನವರಿಗೆಲ್ಲಾ ಅದೊಂದು ರಹಸ್ಯ ಕಟ್ಟಡ ಎನಿಸಿತ್ತು.

ಎಂಟು ವರ್ಷದ ಬಾಲಕ ರಜತ್ ಅದರತ್ತ ಆಕರ್ಷಿತನಾದ. ಒಂದು ಸಂಜೆ ಎಲ್ಲರ ಕಣ್ತಪ್ಪಿಸಿ ಆ ಕಟ್ಟಡದ ಒಳನಡೆದ. ಅವನ ಪ್ರವೇಶದಿಂದ ಆ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಹೊಸ ಸಂಚಲನ ಉಂಟಾಯಿತು. ಜೇಡರ ಬಲೆಯನ್ನು ಸೀಳಿ ಮುನ್ನುಗ್ಗಿದ ರಜತ್‌ನಿಗೆ ಎದುರು ಗೋಡೆಯ ಮಧ್ಯದಲ್ಲಿ ವೃತ್ತಾಕಾರದ ಬಾಗಿಲು ಕಾಣಿಸಿತು. ಅದನ್ನು ಮುಂದೆ ತಳ್ಳಿದ. ಆದರೆ ತೆರೆಯಲಿಲ್ಲ. ತಿರುಗಿಸಿದ. ಅಲುಗಾಡಲೂ ಅದರ ಕೆಳಗಡೆ 1, 4, 2, 0, ಹೀಗೆ ನಾಲ್ಕು ಅಂಕಿಗಳಿದ್ದವು.

Boy in a rocket cartoon illustration

ಎಡಗಡೆಯಿಂದ ಒಂದೊಂದೇ ಅಂಕಿಗಳನ್ನು ಒತ್ತಿದ. ಮೇಲೆ ಕೆಂಪು ಬಣ್ಣದ ದೀಪ ಹೊತ್ತಿತು. ರಜತ್ ಕೆಂಪು ಬಣ್ಣ ಅಪಾಯದ ಸಂಕೇತ ಎಂದು ತಿಳಿದು ಹಿಂದೆ ಬರುವ ಆಲೋಚನೆ ಮಾಡಿದ. ಅವನ ಒಳಮನಸ್ಸು ಕೆಂಪು ನಿಲ್ಲುವ ಸೂಚನೆಯೂ ಇರಬಹುದು ಎಂದಿತು. ಒಂದು ಕ್ಷಣ ಅಲ್ಲೇ ನಿಂತನು. ದೀಪ ಆರಿತು. ಮತ್ತೊಮ್ಮೆ ಅಂಕಿಗಳನ್ನು ಒತ್ತಿದ. ಹಳದಿ ದೀಪ ಹೊತ್ತಿತು. ರಜತ್ ಮತ್ತೊಮ್ಮೆ ಅಂಕಿಗಳನ್ನು ಒತ್ತಿದಾಗ ಹಸಿರು ದೀಪ ಉರಿದೇ ಬಿಟ್ಟಿತು. ಆದರೆ, ಬಾಗಿಲು ಮಾತ್ರ ತೆರೆಯಲಿಲ್ಲ. ರಜತ್‌ನಿಗೆ ನಿರಾಸೆಯಾಯಿತು.

ನಿಗೂಢ, ವಿಸ್ಮಯದ ವಿಷಯಗಳಲ್ಲಿ ಹುಟ್ಟುತ್ತಲೇ ವಿಪರೀತ ಆಸಕ್ತಿಯಿದ್ದದ್ದರಿಂದ ರಜತ್‌ನಿಗೆ ಸಮಾಧಾನವಾಗಲಿಲ್ಲ. ಈ ಬಾರಿ ಅವನು ಬಲದಿಂದ ಎಡಕ್ಕೆ ಅಂಕಿಗಳನ್ನು ಒತ್ತಿದ. ಮೊದಲಿನಂತೆಯೇ ಕೆಂಪು, ಹಳದಿ, ಹಸಿರು ದೀಪಗಳು ಉರಿದವು. ಬಾಗಿಲು ತೆರೆಯಿತು. ಖುಷಿಯಿಂದ ಒಳಹೊಕ್ಕ. ಬಾಗಿಲು ಮುಚ್ಚಿಕೊಂಡಿತು. ಒಳಗಡೆ ವಿದ್ಯುತ್ ದೀಪಗಳು. ಬೆಳ್ಳಿ-ಬಂಗಾರ, ವಜ್ರ-ವೈಡೂರ್ಯಗಳು ತುಂಬಿತ್ತು. ಬಂಗಾರದ ನಾಣ್ಯಗಳ ಚೀಲಗಳು ಬಿದ್ದಿದ್ದವು.

ಅವನ್ನೆಲ್ಲ ದಾಟಿಕೊಂಡು ಮುಂದೆ ಸಾಗಿದ. ಬಗೆ ಬಗೆ ತಿಂಡಿ ತಿನಿಸುಗಳು ಕೈಮಾಡಿ ಕರೆದವು. ಹೊಟ್ಟೆ ತುಂಬ ಸವಿದ. ಒಳಗಡೆಯ ಹೊಸ ಜಗತ್ತು ಅವನನ್ನು ಉಲ್ಲಸಿತಗೊಳಿಸಿತ್ತು. ಎಂದೂ ಕಂಡಿರದ ಈ ಸಂಪತ್ತು, ಸಂಭ್ರಮ ಮನಸ್ಸನ್ನು ಕುಣಿದಾಡುವಂತೆ ಮಾಡಿತ್ತು. ಆ ಖುಷಿಯಲ್ಲಿಯೆ ಮುಂದೆ ಸಾಗಿದ. ಅಲ್ಲೊಂದು ಪುಟ್ಟ ಮನೆ. ಅಂಗಳದಲ್ಲಿ ಇಬ್ಬರು ಮಕ್ಕಳು ಆಟ ಆಡುತ್ತಿದ್ದರು. ರಜತ್ ಅವರ ಹತ್ತಿರ ಹೋಗಿ ‘ನಾನೂ ಆಟಕ್ಕೆ ಬರಲೆ?’ ಎಂದ. ಅವರು ಇವನನ್ನು ಕಂಡರು. ‘ಯಾರು ನೀನು?’ ಎಂದರು. ‘ನಾನು ರಜತ್’ ಎಂದ. ರಜತ್ ಎಂಬ ಹೆಸರು ಕೇಳಿದಾಕ್ಷಣ ಆ ಹುಡುಗರು ಇವನ ಹತ್ತಿರ ಓಡಿ ಬಂದು ಅವನ ಅಂಗಿ ಮೇಲೆತ್ತಿ ಬೆನ್ನಿನ ಮೇಲಿನ ಗುರುತು ನೋಡಿದರು. ರಜತ್‌ನಿಗೆ ಆಶ್ಚರ್ಯವಾಯಿತು.

‘ಏನು ಹುಡುಕುತ್ತಿದ್ದೀರಿ?’ ಎಂದ. ಆ ಮಕ್ಕಳು ‘ನಿನ್ನ ಅಂಗೈ ತೋರಿಸು’ ಎಂದರು. ಆ ಕೈಯ ಮೇಲಿನ ರೇಖೆಯಿಂದ ರಜತ್‌ನನ್ನು ಗುರುತಿಸಿದ ಆ ಹುಡುಗರು ತಮ್ಮ ಗೆಳೆಯ ಮತ್ತೊಂದು ಲೋಕದಲ್ಲಿ ಪುನರ್ಜನ್ಮ ಪಡೆದಿದ್ದಾನೆ ಹರ್ಷ ಪಟ್ಟರು. ತಮ್ಮ ಹಳೆಯ ಜನ್ಮದ ಕಥೆಯನ್ನು ರಜತ್‌ನಿಗೆ ಹೇಳಿದರು. ಆದರೆ, ಅದಾವುದೂ ರಜತ್‌ನಿಗೆ ನೆನಪಾಗಲಿಲ್ಲ. ಅವನಿಗೆ ತನ್ನ ತಂದೆ-ತಾಯಿಗಳ ನೆನಪಾಯಿತು. ಮರಳಿ ಮನೆಗೆ ಹೋಗಬೇಕೆನಿಸಿತು. ಹೇಗೆ ಹೋಗಬೇಕೆಂದು ಮಾತ್ರ ತಿಳಿಯಲಿಲ್ಲ. ಆ ಮಕ್ಕಳು ‘ಹೆದರಬೇಡ ಗೆಳೆಯ, ನೀನು ಸಂತೋಷವಾಗಿ ಇಲ್ಲಿರುವುದಾದರೆ ಇರು, ಇಲ್ಲವಾದರೆ, ನಾವೇ ನಿನ್ನನ್ನು ನಿಮ್ಮ ಮನೆಗೆ ಕಳಿಸುತ್ತೇವೆ’ ಎಂದರು.

ಆಗ ರಜತ್ ‘ನಾನು ನನ್ನ ಮನೆಗೆ ಹೋಗುತ್ತೇನೆ, ನಿಮ್ಮ ನೆನಪಾದಾಗಲೆಲ್ಲ ಮತ್ತೆ ಬರುತ್ತಿರುತ್ತೇನೆ. ಈಗ ಮರಳಿ ಮನೆಗೆ ಹೋಗುವ ಮಾರ್ಗ ಹೇಳಿ’ ಎಂದ. ಆ ಮಕ್ಕಳು ‘ಆಗಲಿ, ನಿನ್ನಿಷ್ಟದಂತೆಯೇ ಆಗಲಿ. ಇನ್ನೊಮ್ಮೆ ನೀನು ಇಲ್ಲಿಗೆ ಬರುವಾಗ ನಿನ್ನ ಬೆನ್ನ ಮೇಲಿನ ಮಚ್ಚೆಯನ್ನು ಮುಟ್ಟಿ ಅಂಗೈ ಮೇಲಿನ ವೈ ಆಕಾರದ ರೇಖೆಯ ಮೇಲೆ ಬೆರಳಿಟ್ಟರೆ ಸಾಕು. ನೀನು ನಮ್ಮ ಲೋಕಕ್ಕೆ ಬಂದು ಬಿಡುತ್ತಿ. ಆದರೆ, ಎಚ್ಚರಿಕೆ, ಕೆಟ್ಟ ಉದ್ದೇಶಕ್ಕೆ ಈ ತಂತ್ರ ಬಳಸಿದರೆ ತೊಂದರೆ ಆದೀತು’ ಎಂದು ಎಚ್ಚರಿಸಿದರು. ಆ ಮಕ್ಕಳು ರಜತನ ಕಣ್ಣು ಮುಚ್ಚಿಸಿ ಸುತ್ತು ಬಲದಿಂದ ಎಡಕ್ಕೆ ತಿರುಗಿಸಿದರು. ರಜತ್ ಕಣ್ಣು ಬಿಟ್ಟಾಗ ಮನೆಯ ಅಂಗಳದಲ್ಲಿದ್ದ.

Tags

Related Articles

Leave a Reply

Your email address will not be published. Required fields are marked *

Language
Close