ದೇಶದ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಆಯ್ಕೆಯಾಗುವ ಸಾಧ್ಯತೆ ಇದೆ.
ಗೊಗೋಯ್ ಹೆಸರನ್ನು ಹಾಲಿ ಮುಖ್ಯನ್ಯಾಯಾಧೀಶ ದೀಪಕ್ ಮಿಶ್ರಾ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅಕ್ಟೋಬರ್ 2ರಂದು ಮಿಶ್ರಾ ನಿವೃತ್ತರಾಗಲಿದ್ದಾರೆ. ಸೇವಾ ಹಿರಿತನದ ಆಧಾರದ ಮೇಲೆ ಮುಂದಿನ ಸಾಲಿನಲ್ಲಿ ಗೊಗೋಯ್ ಇದ್ದಾರೆ.
ಈ ಕುರಿತಂತೆ ಹೆಸರು ಶಿಫಾರಸು ಮಾಡಲು ಕೋರಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಳೆದ ತಿಂಗಳು ಮಿಶ್ರಾಗೆ ಪತ್ರ ಬರೆದಿದ್ದರು. ಈ ಶಿಫಾರಸಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದಲ್ಲಿ ಅಕ್ಟೋಬರ್ 2ರಂದು ಗೊಗೋಯ್ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಳ್ಳಲಿದ್ದಾರೆ. ಮುಂದಿನ ವರ್ಷದ ನವೆಂಬರ್ 17ರ ತನಜ ಗೊಗೋಯ್ ಸೇವೆಯಲ್ಲಿರಲಿದ್ದಾರೆ.
ಈ ವರ್ಷಾರಂಭದಲ್ಲಿ ಸುದ್ಧಿಗೋಷ್ಠಿ ಕರೆದು ದೇಶವನ್ನೇ ಚಕಿತಗೊಳಿಸಿದ್ದ ನಾಲ್ವರು ನ್ಯಾಯಾಧೀಶರಲ್ಲಿ ಗೊಗೋಯ್ ಕೂಡ ಒಬ್ಬರಾಗಿದ್ದಾರೆ. ಜೆ ಚೇಲಮೇಶ್ವರ್, ರಂಜನ್ ಗೊಗೋಯ್, ಎಂ ಬಿ ಲೋಕೂರ್ ಹಾಗು ಕುರಿಯನ್ ಜೋಸೆಫ್ಪರಮೋಚ್ಛ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ಸೂಕ್ತವಾಗಿ ಹಂಚಿಕೆ ಮಾಡಲಾಗುತ್ತಿಲ್ಲ ಎಂದು ದೂರು ನೀಡಿದ್ದರು.
2001ರಲ್ಲಿ ಗೌಹಾಟಿ ಹೈಕೋರ್ಟ್ಗೆ ಆಯ್ಕೆಯಾಗಿದ್ದ ಗೊಗೋಯ್ ಬಳಿಕ ಫೆಬ್ರವರಿ 2011ರಲ್ಲಿ ಪಂಜಾಬ್ ಹಾಗು ಹರಿಯಾಣಾ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿದ್ದರು. ಏಪ್ರಿಲ್ 2012ರಲ್ಲಿ ಗೊಗೋಯ್ರನ್ನು ಸುಪ್ರೀಂ ಕೊರ್ಟ್ಗೆ ನೇಮಕ ಮಾಡಲಾಯಿತು.