ಹೊಂಡ ಗುಂಡಿಗಳಿಗೆ ಬಿದ್ದು ವಜ್ರಕಾಯರಾಗಿದ್ದೇವೆ

Posted In : ಸಂಗಮ, ಸಂಪುಟ

ರಾಜ ಪಟ್ಟಕ್ಕೇರುವಾಗ ಕುಲಪುರೋಹಿತರು ಆಶೀರ್ವಚನ ನೀಡುತ್ತಾರೆ. ರಾಜಾ ನಿನ್ನ ಆಡಳಿತದಲ್ಲಿ ರಾಜ್ಯ ಸುಭೀಕ್ಷವಾಗಲಿ, ಮಳೆ ಬೆಳೆ ಚೆನ್ನಾಗಿ ಆಗಲಿ, ನಿನ್ನ ಖಜಾನೆ ಮುತ್ತು ರತ್ನಗಳಿಂದ ತುಂಬಿ ತುಳುಕಲಿ, ಹಸುಕರುಗಳು ಮೈದುಂಬಲಿ, ನಿನ್ನ ಪ್ರಜೆಗಳೆಲ್ಲ ವಜ್ರಕಾಯರಾಗಲಿ ಎಂದು. ಮಾನ್ಯ ಮುಖ್ಯಮಂತ್ರಿಗಳೇ, ತಮಗೆ ಅಶೀರ್ವಚನ ನೀಡಿದ ಕುಲಪುರೋಹಿತರು ಯಾರೋ ಗೊತ್ತಿಲ್ಲ. ಆದರೆ ಅವರು ಮಾಡಿದ ಆಶೀರ್ವಚನದಲ್ಲಿ ಒಂದಂತೂ ನಿಜವಾಗಿದೆ. ನಾವೆಲ್ಲ ವಜ್ರಕಾಯರಾಗಿದ್ದೇವೆ! ಹೌದು. ಹೊಂಡ, ಗುಂಡಿ, ಬಾವಿ ಕೆರೆಗಳಂತಾಗಿರುವ ರಸ್ತೆಗಳಲ್ಲಿ ಸಂಚರಿಸಿ, ಸಂಚರಿಸಿ ನಾವಂತೂ ಅಕ್ಷರಶಃ ವಜ್ರದೇಹಿಗಳಾಗಿದ್ದೇವೆ. ಇನ್ನು ನಮ್ಮ ಯಾವ ಪ್ರಪಾತಗಳೂ ಬಾಧಿಸಲಾರವು. ಪ್ರಹ್ಲಾದನನ್ನು ರಾಜಭಟರು ಎತ್ತಿ ಎತ್ತಿ ಪ್ರಪಾತಕ್ಕೆ ಎಸೆದರೂ ನಾರಾಯಣನ ಸ್ಮರಣೆ ಮಾಡಿ ಬದುಕಿ ಬಂದನಂತೆ. ನಮ್ಮನ್ನೂ ಸಕಲ ಅಧಿಕಾರಿ ಗಣಂಗಳು ಸೇರಿ ಬೆಂಗಳೂರಿನ ಒಂದೊಂದು ರಸ್ತೆಯ ಗುಂಡಿಗಳಲ್ಲೂ ಎಸೆದು, ಕಿತ್ತು ಹೋದ ಫುಟ್‌ಪಾತ್ ರಾಡಿಗಳಲ್ಲಿ ನಡೆಸಿ, ಮಾರುದ್ದ ನೀರು ತುಂಬಿದ ಹೊಂಡ ಹಾರಿಸಿದರೂ ನಾವು ಅಮೃತಕುಡಿದವರಂತೆ ಬದುಕಿಯೇ ಇದ್ದೇವೆ.

ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿಗೆ ಅಪರೂಪವಾಗಿದ್ದ ಮಳೆ 24 ದಿನಗಳಿಂದ ಪ್ರೀತಿಯ ಸಿಂಚನವನ್ನೇ ಸುರಿಸುತ್ತಿದೆ. ಒಳನಾಡುಗಳಲ್ಲಿ ಬರವಿದ್ದರೂ ಮಳೆರಾಯನಿಗೂ ಯಾಕೋ ರಾಜಧಾನಿಯೇ ಪ್ರೀತಿ. ರಾತ್ರಿಯಾದರೆ ಸಾಕು ವಿಪರೀತ ಪಿರಿಪಿರಿ. ಸಂಜೆ ಆಫೀಸಿನಿಂದ ಮನೆ ಸೇರುವವರ ಪಾಲಿಗೆ ಮಾತ್ರ ಇದು ಜನ್ಮಾಂತರಗಳ ಶಾಪ. ಕಾರಣ ಮೊಡವೆ ತುಂಬಿದ ಕೆನ್ನೆೆಯಂತಾದ ರಸ್ತೆಗಳು. ಗುಂಡಿಯೊಳಗೆ ರಸ್ತೆಗಳೋ, ರಸ್ತೆಗಳೊಳಗೆ ಗುಂಡಿಗಳೋ ಅರಿಯದ ಸ್ಥಿತಿ. ಇದರ ಜತೆಗೆ ಮೆಟ್ರೊ ಕಾಮಗಾರಿಗೆ ತೋಡಿದ ಹೊಂಡಗಳು, ಬೆಂಕಿ ಬಿದ್ದ ಮೇಲೆ ಬಾವಿ ತೋಡಿದರು ಎಂಬ ಗಾದೆಯ ಮುಖಕ್ಕೇ ಹೊಡೆಯುವಂತೆ, ಮಳೆ ಬಿದ್ದ ಮೇಲೆ ಹೂಳೆತ್ತಿಸಿಕೊಳ್ಳುತ್ತಿರುವ ಕಾಲುವೆಗಳು. ಪಾದಚಾರಿಗಳ ಕತೆಯಂತೂ ಬೆಲ್ಲ ಕೊಟ್ಟರೂ ಬೇಡ. ಇನ್ನು ವಾಹನ ಸವಾರರು ಎಲ್ಲಾದರೂ ಸರಿಯಾದ ರಸ್ತೆ ಸಿಕ್ಕರೂ ಹೊಂಡ ಹುಡುಕಿಕೊಂಡು ಹೋಗುವಷ್ಟು ಭ್ರಮಿಸಿ ಹೋಗಿದ್ದಾರೆ.

ಯಾಕೆ ಮುಖ್ಯಮಂತ್ರಿಗಳೇ, ನಾವು ಎರಡನೇ ದರ್ಜೆ ನಾಗರಿಕರೆ? ನಾವ್ಯಾವ ಪಾಪ ಮಾಡಿ ಬೆಂಗಳೂರಿನಲ್ಲಿ ಬದುಕುತ್ತಿದ್ದೇವೆ? ನಮಗೆ ಹೊಂಡಗಳಿಲ್ಲದ ರಸ್ತೆಯಲ್ಲಿ ಸಂಚರಿಸುವ ಹಕ್ಕಿಲ್ಲವೆ? ನಾವೇನು ತೀರಾ ಹೇಮಾಮಾಲಿನಿ ಕೆನ್ನೆಯಂಥ ರಸ್ತೆ ಕೇಳುತ್ತಿಲ್ಲ. ಏಕೆಂದರೆ ನಮಗೂ ಹೊಂಡಗುಂಡಿ ಅದೆಷ್ಟು ರೂಢಿಯಾಗಿದೆ ಎಂದರೆ, ಏರ್‌ಪೋರ್ಟ್ ರೋಡಿನಲ್ಲಿ ಹೋದರೆ ಕುಲುಕಾಟವೇ ಇಲ್ಲದೆ ಅದೇನೋ ಸೋಮಾರಿತನ ಆವರಿಸಿಕೊಂಡು ಬಿಡುತ್ತದೆ. ಈಗ ಏರ್‌ಪೋರ್ಟ್ ರಸ್ತೆಯೂ ಇಲಿ ಕಚ್ಚಿದ ಸೌತೆಕಾಯಿಯ ಮುಖ ಮಾಡಿಕೊಂಡಿರುತ್ತದೆ ಬಿಡಿ. ಆದರೆ ಕೇವಲ ಹತ್ತೇ ಹತ್ತು ಕಿಲೊಮೀಟರ್ ಹೋಗಲೂ ಮುಕ್ಕಾಲು ಗಂಟೆ ಬೇಕಾಗುತ್ತಿದೆ ಎಂದರೆ ನಾವು ಶಿಲಾಯುಗಕ್ಕೆ ವಾಪಸ್ ಹೋಗುತ್ತಿರುವೆವಾ ಎಂದು ಸಂಶಯವಾಗುತ್ತಿದೆ. ಒಂದೇ ಒಂದು ರಸ್ತೆಯಾದರೂ ಮಳೆಯ ಅಧ್ವಾನಕ್ಕೆ ಸಿಲುಕದೆ ಉಳಿದಿದೆಯಾ? ಕಾಮಗಾರಿಗೆ ತೋಡಲಾದ ಗುಂಡಿಗಳಿಂದ ಎದ್ದ ಮಣ್ಣನ್ನು ಮಳೆನೀರು ನಿಷ್ಕರುಣೆಯಿಂದ ತಂದು ಉಳಿದೆಡೆಯೂ ಹರಡಿದೆ. ಡಾಂಬರು ರಸ್ತೆೆಯ ಮೇಲೆ ಹರಡಿದ ಮಣ್ಣನ್ನು ನೋಡಿದಾಗ ಶಾಲೆಯಲ್ಲಿ ಓದಿದ ಪಾಠ ನೆನಪಾಗುತ್ತದೆ. ‘ಗಂಗಾ ನದಿಯು ಪ್ರವಾಹ ಬಂದಾಗ ಹಿಮಾಲಯದ ಫಲವತ್ತಾದ ಮೆಕ್ಕೆ ಮಣ್ಣನ್ನು ತಂದು ತಪ್ಪಲು ಪ್ರದೇಶದಲ್ಲಿ ಹರಡುತ್ತದೆ’ ಎನ್ನುವುದು. ಬೆಂಗಳೂರಿನ ರಸ್ತೆಗಳ ಮೇಲೆ ಪ್ರವಾಹದಿಂದ ಉಕ್ಕಿ ಹರಿಯುವುದು ನರಕದ ವೈತರಣಿ ನದಿ ಎಂದು ಬಿಡಿಸಿ ಹೇಳಬೇಕಾಗಿಲ್ಲ. ವೈತರಣಿ ನದಿ ರಸ್ತೆ ಮೇಲೆ ಅದೇನೇನು ಹರವಿ ಹೋಗುತ್ತದೆ ಎಂದು ಎಲ್ಲರೂ ನೋಡಿಯಾಗಿದೆ.

ಹತ್ತೇ ಹತ್ತು ವರ್ಷಗಳ ಹಿಂದೆ ಬೆಂಗಳೂರು ಎಷ್ಟೋ ಪಾಲು ಚೆನ್ನಾಗಿತ್ತು. ಆಗಿನ ಸರಕಾರ ಯಾವುದಿತ್ತೋ ಅದೆಲ್ಲ ಲೆಕ್ಕವಿಲ್ಲ ನಮಗೆ. ಆದರೆ ಈ ವರ್ಷ ಜನರ ಪಡಿಪಾಟಲು ನೋಡಿದರೆ, ಬೆಂಗಳೂರು ಮಳೆಯೇ ಬರದೆ ಬರಡಾಗಿ ಹೋಗಲಿ ಎಂಬಷ್ಟು ಹತಾಶೆಯಾಗಿದೆ. ಹೌದು. ಮಳೆ ಬಂದರೆ ತಾನೆ ಇದೆಲ್ಲ ಅವಾಂತರ? ದಿನ ಬೆಳಗಾದರೆ ಮನೆಯೊಳಗೆ ನುಗ್ಗಿದ ನೀರು, ಉಕ್ಕಿ ಹರಿದ ರಾಜಕಾಲುವೆ, ಕಿತ್ತು ಹೋದ ರಸ್ತೆಯಿಂದ ಅಪಘಾತ, ಇವೆಲ್ಲ ಸುದ್ದಿಗಳು?ಅದಕ್ಕೇ ಮಳೆಯೇ ಬರದಿರಲಿ ಇನ್ನು ಮುಂದೆ ಎನ್ನುವಷ್ಟು ಕೋಪ ಬರುತ್ತಿರುವುದು ಸುಳ್ಳಲ್ಲ. ಯಾಕೆ ಸಾಹೇಬರೇ? ಕೇವಲ 15, 20 ದಿನದ ಮಳೆಯನ್ನೂ ತಡೆಯುವಂತಿಲ್ಲವೆ ನಮ್ಮ ರಸ್ತೆಗಳು? ಅಷ್ಟು ಕಳಪೆಯಾಗಿವೆಯೆ ಸರಕಾರದ ಕಾಮಗಾರಿ? ‘ಇಲ್ಲ ನಾವು ಚೆನ್ನಾಗೇ ಮಾಡಿದ್ದೆವು, ಮಳೆ ಬಂದು ಹಾಳಾಯಿತು’ ಎಂದು ಯಾರ ಮೂಗಿಗೆ ತುಪ್ಪ ಸವರುತ್ತಿದ್ದೀರಿ? ಇವತ್ತು ಜನ ಹತ್ತಾರು ದೇಶ ಓಡಾಡಿ ಬರುತ್ತಾರೆ.

ಇಂಗ್ಲೆಂಡ್, ಸ್ವಿಡ್ಜರ್‌ಲೆಂಡ್‌ನಂಥ ವರ್ಷವಿಡೀ ಮಳೆ ಸುರಿವ ಊರಿಗೂ ಹೋಗಿ ಬರುತ್ತಾರೆ. ಅಲ್ಲೆಲ್ಲ ರಸ್ತೆಗಳು ಹೀಗೆಯೇ ಇವೆಯೆ ಸ್ವಾಮಿ? ಅವರಿಗಾಗಿದ್ದು ನಮಗ್ಯಾಕೆ ಆಗುವುದಿಲ್ಲ? ಇಂಥ ಪ್ರಶ್ನೆ ಕೇಳಿದರೆ ನಿಮ್ಮ ಬಳಿ ಹತ್ತಾರು ಕಾರಣಗಳು ಸಿಗುತ್ತವೆ ಎಂದು ಗೊತ್ತು. ಜನಸಂಖ್ಯೆ, ವಾಹನಗಳ ಒತ್ತಡ, ಜನರ ಅಶಿಸ್ತು ಎಂದು ನೇರವಾಗಿ ಜನರೆಡೆಗೇ ಬೆರಳು ತೋರುತ್ತೀರಾ. ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಡಿ ಎಂದು ಜನರು ಹೇಳಿದ್ದರಾ? ಅಥವಾ ಎಲ್ಲ ಕಾಮಗಾರಿಗಳನ್ನೂ ನೂರೆಂಟು ಕಾರಣ ನೀಡಿ ನಿಧಾನವಾಗಿಸಿ ಎಂದಿದ್ದಾರಾ? ಅಥವಾ ಜನರು ರಸ್ತೆ ಟ್ಯಾಕ್ಸ್‌ ಕಟ್ಟುತ್ತಿಲ್ಲವಾ? ಸಮಸ್ಯೆಗಳು ಇಲ್ಲದಾಗ ಇದು ನಮ್ಮ ಸಾಧನೆ ಎಂದು ಬೀಗುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ಇವತ್ತು ಬೆಂಗಳೂರಿನ ರಸ್ತೆಗಳಂತೂ ಶೇ. 70ರಷ್ಟು ಹಾಳಾಗಿವೆ. ಜನರ ಬದುಕು ಮೂರಾಬಟ್ಟೆಯಾಗಿದೆ. ಈಗ ನೀಡಬಹುದಲ್ಲ ‘ರಸ್ತೆಭಾಗ್ಯ’ ಯೋಜನೆ?

ರಸ್ತೆಗಳು ಸರಿಯಿಲ್ಲ. ನಡೆದೇ ಹೋಗುತ್ತೇನೆ ಎಂದರೆ ಫುಟ್‌ಪಾತ್‌ಗಳಾದರೂ ಒಂದು ಅಂಗಾಕಾರದಿಂದ ಇವೆಯೆ? ಹಾರದೆ, ಹೈ ಜಂಪ್ ಮಾಡದೇ ಸರಾಗವಾಗಿ ಒಂದರ್ಧ ಕಿಲೋಮೀಟರ್ ನಡೆದು ಹೋಗುವಂಥ ಫುಟ್‌ಪಾತ್ ಗೂಗಲ್ ಹಾಕಿದರೂ ಸಿಗುತ್ತಿಲ್ಲ. ಹಾಗಾದರೆ ನಾವೇನು ಹಾರಿಕೊಂಡು ಹೋಗಬೇಕೆ? ಇನ್ನು ಸ್ವಚ್ಚತೆ, ಹೈಜೀನ್ ಎಂಬ ಪದಗಳನ್ನಂತೂ ಕಲಿತೇ ಇಲ್ಲ ಎಂಬಷ್ಟು ಮರೆತುಬಿಡಬೇಕಿದೆ. ಮೆಜೆಸ್ಟಿಕ್ ಸುತ್ತಮುತ್ತ, ಮಾರ್ಕೆಟ್, ಕೋರಮಂಗಲ, ಇಂದಿರಾನಗರ, ನಾಯಂಡನಹಳ್ಳಿ, ಮೈಸೂರು ರಸ್ತೆ, ಕತ್ರಿಗುಪ್ಪೆ, ಶಾಂತಿನಗರ, ಈಜಿಪುರ, ಮಡಿವಾಳ, ಬಿ. ಟಿ. ಎಮ್ ಲೇ ಔಟ್, ಅತ್ತ ಹೆಬ್ಬಾಳ, ನಾಗವಾರ ಓಹ್ ! ಇವೆಲ್ಲ ಮಳೆ ಸೃಷ್ಟಿಸಿದ ಹೊಸ ನರಕ ಎಂದರೆ ಖಂಡಿತಾ ತಪ್ಪಾಗುತ್ತದೆ. ಕಾರಣ ಇದು ನಮ್ಮದೇ ಘನವೆತ್ತ ಅಧಿಕಾರಿಗಳ ಕೊಡುಗೆ. ಒಂದು ಅಧ್ಯಯನದ ಪ್ರಕಾರ ಬೆಂಗಳೂರಿನ ರಸ್ತೆಗಳು ಸಂಚರಿಸಲು ಸಂಪೂರ್ಣ ಅಯೋಗ್ಯ. ಇದೊಂಥರಾ ಹೇಗಿದೆ ಎಂದರೆ ಒಂದು ಕಾಲದ ಪವಿತ್ರ ಗಂಗಾನದಿ ಈಗ ಅತ್ಯಂತ ವಿಷಕಾರಿ ನದಿ ಎಂದ ಹಾಗೆಯೇ, ಗಾರ್ಡನ್ ಸಿಟಿ ಹೋಗಿ ಗಾರ್ಬೇಜ್ ಸಿಟಿಯಾದ ಹೊಸ್ತಿಲಲ್ಲೇ ಬಿಬಿಎಂಪಿಯನ್ನು ಮರ್ಡರಿಂಗ್ ಕಂಪನಿ ಎಂದೂ ಹೇಳಬೇಕಾಗಿದೆ. ಕಚೇರಿಗೆ ಹೋದವರು ಮನೆಗೆ ಬಂದು ತಲುಪಿದ ಮೇಲೆಯೇ ಖರೆ. ಏಕೆಂದರೆ ಹೊಂಡಗಳು ದಿನಕಳೆದಂತೆ ಆಳವಾಗುತ್ತಿವೆ. ಬಾವಿಗಳಾಗುತ್ತಿವೆ. ಬೈಕ್ ಸವಾರರಂತೂ ಜೀವ ಕೈಲಿ ಹಿಡಿದೇ ಸಂಚರಿಸುತ್ತಿದ್ದಾರೆ.

ದ್ವಿಚಕ್ರವಾಹನ ಸವಾರರ ಗೋಳು ಹೇಳತೀರದ್ದು. ಪಕ್ಕದ ಗಾಡಿಗಳಿಂದ ಸಿಡಿಯುವ ಅರಲು ನೀರಿನಿಂದ ತಪ್ಪಿಸಿಕೊಳ್ಳುತ್ತ, ದಿನ ದಿನವೂ ಹೊಸದಾಗಿ ನಿರ್ಮಾಣವಾಗುವ ಗುಂಡಿಗಳಿಗೆ ಧುಮುಕುತ್ತ, ತಲೆ ಮೇಲೆ ಸುರಿಯುವ ಮಳೆಯಲ್ಲಿ ಸರ್ಕಸ್ ಮಾಡುತ್ತ ಸಾಗುವ ಇವರ ಸ್ಥಿತಿ ವರ್ಣಿಸಲು ಪದಗಳಿಲ್ಲ. 2016ರಲ್ಲಿ ರಾಜ್ಯದ 16,217 ದ್ವಿಚಕ್ರವಾಹನ ಸವಾರರು ಸಾವಿಗೀಡಾಗಿದ್ದಾರೆ. ರಾಜಧಾನಿಯ ರಸ್ತೆಗಳನ್ನು ತ್ವರಿತದಲ್ಲಿ ಸರಿಪಡಿಸದಿದ್ದರೆ ಇವುಗಳ ಸಂಖ್ಯೆಯಲ್ಲಿ ಏರಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಅಲ್ಲದೇ ಶೀಘ್ರದಲ್ಲೇ ಕಾರುಗಳೂ ರಸ್ತೆಯಲ್ಲೇ ಮುಳುಗಿ ಮಂಗಮಾಯವಾಗುವ ದೃಶ್ಯ ಟಿವಿ ಚಾನಲ್‌ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆದಲ್ಲಿ ಅಚ್ಚರಿಯೇನಿಲ್ಲ.

ಕಳೆದ ವರ್ಷದ ರಸ್ತೆ ಸರ್ವೆ ಪ್ರಕಾರ ಕರ್ನಾಟಕ ರಾಜ್ಯ, ರಸ್ತೆ ಅಪಘಾತದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಇದಕ್ಕೆ ಮುಖ್ಯ ಕಾರಣ ಹಾಳಾದ ರಸ್ತೆಗಳು. ದಿನವೊಂದಕ್ಕೆ ರಾಜ್ಯದಲ್ಲಿ 30 ಜೀವಗಳು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ. ಈಗಂತೂ ಮಳೆ ಬಂದು ಅದರ ಸಂಖ್ಯೆಯಲ್ಲಿ ಯದ್ವಾತದ್ವಾ ಏರಿಕೆಯಾಗಲಿದೆ. ಇದಕ್ಕೆಲ್ಲ ಅಲ್ಲೆಲ್ಲೋ ಆದ ವಾಯುಭಾರ ಕುಸಿತ ಕಾರಣವೇ? ಅಥವಾ ಕಾಟಾಚಾರಕ್ಕೆ ಮಾಡಲಾದ ರಸ್ತೆಗಳಾ? ವಾಹನ ಅಪಘಾತದಿಂದ ಉಂಟಾಗುವ ಸಾವಿನಲ್ಲಿ ನಮ್ಮ ರಾಜ್ಯ 4ನೇ ಸ್ಥಾನ ಪಡೆದು ಬೀಗುತ್ತಿದೆ. 2015ರಲ್ಲಿ 10,856ರಷ್ಟಿದ್ದ ರಸ್ತೆ ಅಪಘಾತದ ಸಾವು, 2016ರ ಹೊತ್ತಿಗೆ 11,133ಕ್ಕೆ ಏರಿದೆ. ಇವು ಒಟ್ಟಾರೆ ಅಂಕಿ ಅಂಶಗಳು. ಸುಮ್ಮನೇ ಬೆಂಗಳೂರಿನ ಮೆಟ್ರೊ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಹೋಗಿ ಬಂದರೆ ಸಾಕು, ನರಕದ ವಿಳಾಸ ಉಚಿತವಾಗಿ ಸಿಗುತ್ತದೆ. ಏಕೆಂದರೆ ಅಲ್ಲಿ ರಸ್ತೆಗಳೇ ಇಲ್ಲ. ಮೆಟ್ರೊಕ್ಕಾಗಿ ಒಂದಷ್ಟು ಅಗೆದಿರುತ್ತಾರೆ. ಅದೂ ಎಂತೆಂಥ ಗುಂಡಿಗಳು! ಆರಾಮಾಗಿ ಆಟೊ, ಕಾರುಗಳು ಮುಳುಗಿಬಿಡಬಹುದು.ಅಲ್ಲಿ ಯಾವುದೇ ಸುರಕ್ಷಾ ಕ್ರಮಗಳಿರುವುದಿಲ್ಲ. ಇನ್ನು ರಸ್ತೆ ಎಂದು ಹೇಳಲಾಗುವ ಹಳ್ಳದಂಥ ಜಾಗ ಪಕ್ಕದಲ್ಲಿ! ಅಲ್ಲೇ ದಿನವಿಡೀ ಗಿಜಿಗುಡುತ್ತವೆ ವಾಹನಗಳು.

ದೇಶದಲ್ಲಿ ನಡೆಯುವ ಶೇ. 87.8 ವಾಹನ ಅಪಘಾತಗಳಲ್ಲಿ ಕರ್ನಾಟಕದ ಪಾಲು ಶೇ. 11ರಷ್ಟು. ಬೆಂಗಳೂರು ರಸ್ತೆ ಅಪಘಾತದ ಸಾವಿನಲ್ಲಿ ದೇಶದ ಐದು ಮಹಾನಗರಗಳಲ್ಲಿ ಮೂರನೇ ಸ್ಥಾನ ಗಳಿಸಿದರೂ ಇದುವರೆಗೂ ಸರಕಾರವಾಗಲೀ, ಬಿಬಿಎಂಪಿಯಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆ ಬಂದ್ರೆ ಎಲ್ಲಿಂದ ರೋಡ್ ಸರಿ ಮಾಡಕ್ಕಾಗತ್ತೆ? ಅಕ್ಟೋಬರ್ ಒಳಗೆ ನಗರದ ಎಲ್ಲ ಗುಂಡಿಗಳೂ ಮುಚ್ಚಿರಬೇಕು ಎಂದು ಆದೇಶ ನೀಡಿದ್ದೇನೆ ಎನ್ನುತ್ತಾರೆ ಮೇಯರ್ ಪದ್ಮಾವತಿ. ಆದರೆ ಈ ಮಳೆ ಇನ್ನೊಂದು ವಾರ ಮುಂದುವರೆದರೆ ಗುಂಡಿ ಮುಚ್ಚುವುದಲ್ಲ, ‘ಹಳ್ಳಕೊಳ್ಳದ ನಡುವೆ ರಸ್ತೆ ನಿರ್ಮಿಸುತ್ತೇವೆ’ಎಂದು ಹೇಳಿಕೆ ನೀಡಬೇಕಾಗಬಹುದು. ಅಷ್ಟರೊಳಗೆ ಇನ್ನೆಷ್ಟು ಜೀವಗಳ ಬಲಿ ಬೇಕೊ ಇಲ್ಲಿನ ರಸ್ತೆಗಳಿಗೆ.

ಬೇಸಿಗೆ ಬಂದರೆ ಬೆಂಗಳೂರು ಬೆಂದಕಾಳಾಗುತ್ತದೆ. ಮಳೆ ಬಂದರೆ ಅವಾಂತರಗಳ ತವರೂರಾಗುತ್ತಿದೆ. ಏರುತ್ತಿರುವ ಜನಸಂಖ್ಯೆ, ಪರರಾಜ್ಯದವರ ವಿಪರೀತ ವಲಸೆ, ಅದಕ್ಕೆ ತಕ್ಕಂಥ ಮೂಲಭೂತ ಸೌಕರ್ಯಗಳಿಲ್ಲದಿರುವುದು, ಮುಂಗಾರಿಗೆ ಪೂರ್ವತಯಾರಿಗಳಿಲ್ಲದಿರುವುದು, ರಸ್ತೆ, ಫುಟ್‌ಪಾತ್, ಪ್ಲೈ ಓವರ್ ಕಾಮಗಾರಿಗಳಲ್ಲಿ ಭ್ರಷ್ಟಾಚಾರ, ಇಲಾಖೆ ಇಲಾಖೆಗಳ ನಡುವೆ ಸಮನ್ವಯದ ಕೊರತೆ, ಇವೆಲ್ಲ ಬೆಂಗಳೂರನ್ನು ಕೆಡಿಸಿಕೂರಿಸಿವೆ. ಟ್ರಾಫಿಕ್, ಕೆಟ್ಟ ರಸ್ತೆಗಳು, ರಸ್ತೆ ತುಂಬ ಬಿದ್ದಿರುವ ಕಸಗಳು, ಪದೇಪದೇ ಕೇಬಲ್ ವಾಯರ್‌ಗೋಸ್ಕರ ಅಗೆತ ಇದೆಲ್ಲದರಿಂದ ಬೇಸತ್ತು ಎಷ್ಟೋ ಜನ ತಮ್ಮ ಊರಿಗೆ ಮರಳುತ್ತಿದ್ದಾರೆ ಹಾಗೂ ಮರಳುವ ಯೋಚನೆ ಮಾಡುತ್ತಿದ್ದಾರೆ. ಇದಕ್ಕೊಂದು ಉದಾರಣೆಯೆಂದರೆ ಜುಲೈವರೆಗೆ ಸುಮಾರು 18,978 ಸರಕಾರಿ ಸಾರಿಗೆ ನೌಕರರು ಹಾಗೂ ವಾಹನ ಚಾಲಕರು ತಮ್ಮ ಊರುಗಳಿಗೆ ಟ್ರಾನ್ಸಫರ್ ಕೇಳಿರುವುದು. ಟ್ರಾಫಿಕ್ ಒತ್ತಡ, ಕೆಟ್ಟ ರೋಡುಗಳು, ದಿನವಿಡೀ ಡ್ರೈವಿಂಗ್‌ನಿಂದ ಬೇಸತ್ತ ಎಷ್ಟೋ ಬಸ್ ಚಾಲಕರು ಬೆಂಗಳೂರನ್ನೇ ಬಿಡುವ ಯೋಚನೆಯಲ್ಲಿದ್ದಾರೆ. ಬಿಬಿಎಂಪಿಯ 10,217 ಚಾಲಕರು ಬೆಂಗಳೂರು ಜೀವನದಿಂದ ಬೇಸತ್ತು ತಮ್ಮ ಊರಿನ ಡಿಪೋಗಳಿಗೆ ವರ್ಗ ಮಾಡಿಕೊಡುವಂತೆ ಇಲಾಖೆಗೆ ಅರ್ಜಿ ಗುಜರಾಯಿಸಿ ಕುಳಿತಿದ್ದಾರೆ.

ಇದು ಕೇವಲ ಒಂದು ವರ್ಗದ ಚಿತ್ರಣ. ಇಂಥ ಅದೆಷ್ಟು ಮಂದಿ ಬೆಂಗಳೂರಿನ ಸಹವಾಸವೇ ಸಾಕೆಂದು ಯೋಚಿಸುತ್ತಿರಬೇಕು ! ಮುಖ್ಯಮಂತ್ರಿಗಳೇ ನಾವೆಷ್ಟೇ ವಜ್ರಕಾಯರಾದರೂ ನಮ್ಮ ಸಾಮರ್ಥ್ಯಕ್ಕೂ ಒಂದು ಮಿತಿಯಿದೆ. ಇವತ್ತು ಬೆಂಗಳೂರು ಬೃಹನ್ನಗರಪಾಲಿಕೆಯಾಗಿದ್ದು ಕೇವಲ ಬೆಂಗಳೂರಿಗರಿಂದ ಅಷ್ಟೇ ಅಲ್ಲ ,ಎಂಬುದು ನಿಮಗೂ ಗೊತ್ತು. ಯಾರು ಹೋದರೂ ಬೆಂಗಳೂರು ನಡೆಯುತ್ತದೆ ಎಂಬುದು ನಮಗೂ ಗೊತ್ತು. ಆದರೆ ಇಷ್ಟು ಕೆಟ್ಟ ಮೂಲಭೂತ ಸೌಕರ್ಯಗಳೊಂದಿಗೆ ಬದುಕಬೇಕಾದ ಅನಿವಾರ್ಯತೆ ಇಲ್ಯಾರಿಗೂ ಇಲ್ಲ. ಕಾರಣ ಇಲ್ಲಿನ ಪ್ರತಿಯೊಬ್ಬ ನಾಗರಿಕನೂ ಉತ್ತಮ ವ್ಯವಸ್ಥೆಗಳಿಗೆ ಅರ್ಹ. ಅದನ್ನು ಒದಗಿಸದ ನೀವುಗಳು ಜನರಿಂದ ಉಗಿಸಿಕೊಳ್ಳಲೂ ಸದಾ, ಸರ್ವದಾ ಸಂಪೂರ್ಣ ಅರ್ಹ.

-ಗೀರ್ವಾಣಿ

One thought on “ಹೊಂಡ ಗುಂಡಿಗಳಿಗೆ ಬಿದ್ದು ವಜ್ರಕಾಯರಾಗಿದ್ದೇವೆ

Leave a Reply

Your email address will not be published. Required fields are marked *

nine + four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top