ಆರ್ ಎಸ್ ಎಸ್ ಮೇಲೆ ಗೌರಿ ಹತ್ಯೆಯ ಮಿಥ್ಯಾರೋಪ

Posted In : ಸಂಗಮ, ಸಂಪುಟ

ಆರ್‌ಎಸ್‌ಎಸ್ ವಿರುದ್ಧ ಮಿಥ್ಯಾರೋಪಗಳು ಕೇಳಿ ಬರುತ್ತಿರುವುದು ಹೊಸದಲ್ಲ. ಅಂತಹ ಆರೋಪ, ಟೀಕೆಗಳಿಂದ ಸಂಘದ ಬೆಳವಣಿಗೆಗೆ ತೊಡಕಾದದ್ದೂ ಇಲ್ಲ. ಕಾರಣ ಇಷ್ಟೆ, ಆ ಆರೋಪಗಳಲ್ಲಿ ಲವಲೇಶವೂ ಸತ್ಯಾíಶ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಸಕಾರಾತ್ಮಕ ಆಲೋಚನೆ ಮತ್ತು ರಚನಾತ್ಮಕ ಚಟುವಟಿಕೆಗಳಿಗೆ ಆರ್‌ಎಸ್‌ಎಸ್ ಆದ್ಯತೆ ನೀಡುತ್ತದೆಯೇ ಹೊರತು, ನಕಾರಾತ್ಮಕ ಆಲೋಚನೆ, ಪ್ರತೀಕಾರಾತ್ಮಕ ಚಟುವಟಿಕೆಗಳಿಗೆ ಅಲ್ಲ. ಇತ್ತೀಚೆಗೆ ನಡೆದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವ ಟೀಕೆ-ಟಿಪ್ಪಣಿಗಳು ಅದೇ ಮಿಥ್ಯಾರೋಪದ ಮುಂದುವರಿದ ಭಾಗವೇ ಹೊರತು ಮತ್ತೇನಲ್ಲ. ಹೀಗಾಗಿ ಅದರ ಪರಿಣಾಮವನ್ನು ಎಲ್ಲರೂ ಸಹಜವಾಗಿ ಊಹೆ ಮಾಡಬಹುದಾಗಿದೆ.

ಬ್ರಿಟಿಷರ ಕಾಲದಲ್ಲೇ ಆರಂಭ; ಆರ್‌ಎಸ್‌ಎಸ್ ಸಂಘಟನೆ ಈ ದೇಶದ ಪ್ರಜೆಗಳಲ್ಲಿ ರಾಷ್ಟ್ರೀಯತೆ, ಏಕತೆ ಭಾವನೆಯನ್ನು ಜಾಗೃತಿ ಮಾಡುತ್ತಿರುವುದನ್ನು ಬ್ರಿಟಿಷ್ ಆಡಳಿತ ವ್ಯವಸ್ಥೆ ಚೆನ್ನಾಗಿ ಅರಿತುಕೊಂಡಿತ್ತು. ಸಂಘ ಈ ದೇಶದಲ್ಲಿ ಅದ್ವಿತೀಯ ಸಂಘಟನೆಯಾಗಿ ಬೆಳೆಯುತ್ತದೆ ಎಂಬುದನ್ನು ಬ್ರಿಟಿಷ್ ಅಧಿಕಾರಿಗಳು ಮನಗಂಡಿದ್ದರು. ಹೀಗಾಗಿ ಬ್ರಿಟಿಷ್ ಆಡಳಿತ ವ್ಯವಸ್ಥೆ ಯಾವನೇ ಒಬ್ಬ ಸರ್ಕಾರಿ ನೌಕರ ಆರ್‌ಎಸ್‌ಎಸ್ ಚಟುವಟಿಕೆಯಲ್ಲಿ ಭಾಗವಹಿಸಕೂಡದೆಂದು ಸುತ್ತೋಲೆ ಹೊರಡಿಸಿತ್ತು. ಬ್ರಿಟಿಷ್ ಆಡಳಿತದ ಈ ನಿರ್ಧಾರವನ್ನು ಕಾನೂನಾತ್ಮಕವಾಗಿಯೇ ಎದುರಿಸಿ ಜಯ ಗಳಿಸಲಾಯಿತು. ಇದು ಸಂಘದ ಪಾಲಿಗೆ ಮೊದಲ ದೊಡ್ಡ ಪ್ರತಿರೋಧ ಮತ್ತು ಹೋರಾಡಿ ಪಡೆದುಕೊಂಡ ಜಯ ಎನ್ನಬಹುದು.

ಗಾಂಧಿ ಹತ್ಯೆ ಆರೋಪ ಎರಡನೇ ಸವಾಲು: 1948 ಜನೆವರಿ 30ರಂದು ಎಂ.ಕೆ. ಗಾಂಧಿ ಅವರ ಹತ್ಯೆ ನಡೆಯಿತು. ಗಾಂಧಿ ಹಂತಕ ಗೋಡ್ಸೆ ,ಸಂಘದ ಶಾಖೆಗೆ ಹೋದವನು ಎಂಬ ಕಾರಣಕ್ಕಾಗಿ ಗಾಂಧಿ ಹತ್ಯೆಯ ಹಿಂದೆ ಆರೆಸ್ಸೆಸ್ ಕೈವಾಡ ಇದೆ ಎಂಬ ತರ್ಕವನ್ನು ಮಾಡಲಾಯಿತು. ಆದರೆ ಜಸ್ಟಿಸ್ ಕಪೂರ್ ಕಮಿಷನ್,ಪಾಠಕ್ ಕಮಿಷನ್‌ಗಳು ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರ ಇಲ್ಲ ಎಂದು ವರದಿ ನೀಡಿದವು. ಬೇರೆ ಬೇರೆ ನ್ಯಾಯಪೀಠಗಳೂ ಇದನ್ನೇ ಹೇಳಿದವು. ತನಿಖೆ ಮುಗಿಯುವ ಪೂರ್ವದಲ್ಲಿ, ನ್ಯಾಯ ತೀರ್ಮಾನ ಹೊರಬರುವ ಪೂರ್ವದಲ್ಲಿ ಗಾಂಧಿ ಹತ್ಯೆ ಆರೋಪದ ಅಡಿಯಲ್ಲಿ ಆರೆಸ್ಸೆಸ್ ಎರಡನೇ ಸರಸಂಘ ಚಾಲಕ ಗುರೂಜಿ ಗೋಳವಲ್ಕರ್ ಅವರನ್ನು ನೆಹರೂ ಸರ್ಕಾರ ಆತುರಾತುರವಾಗಿ ಬಂಧಿಸಿತು. ಆಗಲೂ ಸಂಘದ ಸ್ವಯಂಸೇವಕರು ತಾಳ್ಮೆ ಕಳೆದುಕೊಳ್ಳಲಿಲ್ಲ. ಗಾಂಧಿ ಹತ್ಯೆಯ ನಂತರ ಆರೆಸ್ಸೆಸ್ ಕಾರ್ಯಕರ್ತರ ಮನೆ,ಅಂಗಡಿ-ಮುಂಗಟ್ಟುಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಧ್ವಂಸಗೊಳಿಸಿದರು. ಆಗಲೂ ಸ್ವಯಂಸೇವಕರು ತಾಳ್ಮೆ ವಹಿಸಬೇಕೆಂದು ಗೋಳವಲ್ಕರ್ ಅವರು ಕಿವಿಮಾತು ಹೇಳಿ ಪರಿಸ್ಥಿತಿ ನಿಯಂತ್ರಿಸಿದರು. ಅಂದು ಗೋಳವಲ್ಕರ್ ಹೇಳಿದ ಮಾತು- ‘ಬಿ ಕಾಮ್ ಅಟ್ ಆಲ್ ಕಾಸ್ಟ್‌’. ಈ ಘಟನೆಯನ್ನು ಅವಲೋಕಿಸಿದರೆ ಆರೆಸ್ಸೆಸ್‌ನ ಸಂಸ್ಕೃತಿ ಎಂಥದ್ದೆಂಬುದು ಎಲ್ಲರಿಗೂ ಮನವರಿಕೆ ಆಗಬಹುದು.

ಶ್ಯಾಮಾಪ್ರಸಾದ್ ಮುಖರ್ಜಿ ಅನುಮಾನಾಸ್ಪದ ಸಾವು: ಹಿಂದೂ ಮಹಾಸಭಾ ಮತ್ತು ಭಾರತೀಯ ಜನಸಂಘದ ಅಗ್ರಗಣ್ಯ ನೇತಾರರಾಗಿದ್ದ ಶ್ಯಾಮಾಪ್ರಸಾದ್ ಮುಖರ್ಜಿ ಅವರು ಕಾಶ್ಮೀರದ ಸ್ವಾಯತ್ತೆಯನ್ನು ಬಲವಾಗಿ ವಿರೋಧಿಸಿದ್ದರು. ಆ ಕಾರಣಕ್ಕಾಗಿ ಅವರು ಕಾಶ್ಮೀರದಲ್ಲಿ ನೆಹರೂ ಸರ್ಕಾರದ ವಿರುದ್ಧ ಜನ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕಾಶ್ಮೀರದ ಪ್ರವಾಸದಲ್ಲಿದ್ದ ಶ್ಯಾಮಾಪ್ರಸಾದ್ ಮುಖರ್ಜಿ ಅವರು 1953ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಈ ಸಾವಿನ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೈವಾಡ ಇರುವ ಗುಮಾನಿ ಎಲ್ಲ ದಿಕ್ಕುಗಳಿಂದಲೂ ಕೇಳಿ ಬಂತು. ಆದರೆ ಸಂಘ ಅಥವಾ ಸಂಘ ಪರಿವಾರದ ಪ್ರಮುಖರು ಮತ್ತು ಕಾರ್ಯಕರ್ತರು ತನಿಖೆಗೂ ಮುನ್ನ ಯಾರೊಬ್ಬರ ಮೇಲೂ ಗೂಬೆ ಕೂರಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಇದೇ ದೌರ್ಬಲ್ಯವೆಂದು ಭಾವಿಸಿದ ಅಂದಿನ ಸರ್ಕಾರಗಳು ಮುಖರ್ಜಿ ಸಾವಿನ ತನಿಖೆ ನಡೆಸಿ ಸತ್ಯಾಂಶವನ್ನು ಹೊರತರಲೇ ಇಲ್ಲ.

ಪಂಡಿತ್ ದೀನದಯಾಳ್ ಉಪಾಧ್ಯಾಯರ ಹತ್ಯೆ: ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಸಂಘದ ಜ್ಯೇಷ್ಠ ಕಾರ್ಯಕರ್ತ ಮತ್ತು ಜನಸಂಘದ ಸಂಸ್ಥಾಪಕ. ಜನಸಂಘದ ಸಂಘಟನೆಗಾಗಿ ಅವರು ದೇಶದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದರು. ಆ ವೇಳೆ ಫೆಬ್ರವರಿ 11-1968ರಂದು ಮುಘಲ್ ಸರಾಯ್ ರೈಲು ನಿಲ್ದಾಣದಲ್ಲಿ ಉಪಾಧ್ಯಾಯರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಆ ವೇಳೆ ಸಂಘ ಅಥವಾ ಜನಸಂಘದ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಲಿಲ್ಲ. ಯಾರೊಬ್ಬರ ಮೇಲೂ ಆನುಮಾನದ ಮೇಲೆ ಮಿಥ್ಯಾರೋಪ ಮಾಡಲಿಲ್ಲ. ಆಕ್ರಮಣವನ್ನು ಮಾಡಲಿಲ್ಲ. ಆ ವೇಳೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಉಪಾಧ್ಯಾಯರ ಹಂತಕರನ್ನು ಹಿಡಿಯುವ ಕಿಂಚಿತ್ ಪ್ರಯತ್ನವನ್ನೂ ಮಾಡಲಿಲ್ಲ.

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ: 1975ರಿಂದ 1977ರವರೆಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಎಲ್ಲರಿಗೂ ಗೊತ್ತೇ ಇದೆ. ದೇಶದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಕಸಿದುಕೊಂಡಿದ್ದು ಯಾರೂ ಮರೆಯುವ ಹಾಗಿಲ್ಲ. ಆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಯ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದು ಸಂಘ. ತುರ್ತು ಪರಿಸ್ಥಿತಿಯ ವಿರುದ್ಧ ಸಂಘ ನಡೆಸಿದ ಹೋರಾಟವನ್ನು ಮೇರುನಾಯಕ ಜಯಪ್ರಕಾಶ ನಾರಾಯಣ ಅವರು ಮೆಚ್ಚಿಕೊಂಡು ಮಾತನಾಡಿದ್ದರು. ಅದನ್ನು ಈಗ ಮತ್ತೊಮ್ಮೆ ನೆನಪಿಸಿಕೊಂಡರೆ ಒಳ್ಳೆಯದು. ಈಶಾನ್ಯ ಭಾರತದ ತ್ರಿಪುರಾದಲ್ಲಿ 1999 ಆಗಸ್ಟ್‌ 6ರಂದು ಆರೆಸ್ಸೆಸ್‌ನ ನಾಲ್ವರು ಸ್ವಯಂಸೇವಕರನ್ನು ಅಪಹರಣ ಮಾಡಲಾಯಿತು. ನಂತರ ಅವರು ಮೃತಪಟ್ಟಿದ್ದಾರೆಂದು ಸರ್ಕಾರ ಘೋಷಣೆ ಮಾಡಿತು. ಆದರೆ ಅಪರಾಧಿಗಳನ್ನು ಹಿಡಿಯುವ ಪ್ರಯತ್ನ ಆಗಲಿಲ್ಲ. ಆಗ ಸಂಘ ಕಾನೂನಿನ ಹೋರಾಟದ ಮಾರ್ಗವನ್ನು ಅನುಸರಿಸಿತು. ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು. ಆದರೆ ಸಂಘ ಪ್ರತೀಕಾರದ ಹಾದಿಯನ್ನು ಹಿಡಿಯಲು ಹೋಗಲಿಲ್ಲ.

ಕಳೆದ ಹತ್ತು ವರ್ಷಗಳಿಂದೀಚೆಗೆ ಹಿಂದೂ ಉಗ್ರವಾದವನ್ನು ಸಂಘ ಪೋಷಿಸುತ್ತಿದೆ ಎಂಬ ಹುಸಿ ಪ್ರಚಾರವನ್ನು ಕಾಂಗ್ರೆಸ್ ಮತ್ತು ಇತರ ಸ್ವಘೋಷಿತ ಸೆಕ್ಯುಲರ್ ನಾಯಕರು ನಡೆಸಿದರು. ಅಷ್ಟು ಮಾತ್ರವಲ್ಲ, ಹಿಂದು ಉಗ್ರವಾದದ ಆರೋಪವನ್ನು ಸ್ವತಃ ಸರಸಂಘಚಾಲಕರ ಮೇಲೂ ಹೊರಿಸಲಾಯಿತು. ಆಗಲೂ ಸಂಘದ ಪ್ರಮುಖರು ಮತ್ತು ಸ್ವಯಂಸೇವಕರು ತಾಳ್ಮೆ ಕಳೆದುಕೊಳ್ಳದೆ ಶಾಂತಿಯುತವಾಗಿ ಪ್ರತಿಭಟಿಸಿದರು. ಇದೊಂದು ಮಿಥ್ಯಾರೋಪ ಎಂಬುದನ್ನು ವಿವಿಧ ಹಂತಗಳಲ್ಲಿ ಕಾನೂನಾತ್ಮಕವಾಗಿ ಸಾಬೀತು ಮಾಡುವಲ್ಲಿ ಸಂಘದ ಸ್ವಯಂಸೇವಕರು ಸಫಲರಾದರು. ನಕ್ಸಲೀಯರಿಂದ ರಕ್ತಪಾತ ನಡೆದಾಗಲೂ… ಕೆಲ ವರ್ಷಗಳ ಹಿಂದೆ ಆಂಧ್ರದಲ್ಲಿ ಸಂಘ ಪರಿವಾರಕ್ಕೆ ಸೇರಿದ ಎಬಿವಿಪಿ ಸಂಘಟನೆಯ ಡಜನ್ ಕಾರ್ಯಕರ್ತರನ್ನು ನಕ್ಸಲೀಯರು ಬರ್ಬರವಾಗಿ ಹತ್ಯೆ ಮಾಡಿದರು. ಆಗಲೂ ಸಹ ಆರೆಸ್ಸೆಸ್ ಆದರ್ಶ ಮೈಗೂಡಿಸಿಕೊಂಡ ಎಬಿವಿಪಿ ಕಾರ್ಯಕರ್ತರು ಪ್ರತೀಕಾರದ ಹಾದಿಯನ್ನು ತುಳಿಯಲು ಹೋಗಲಿಲ್ಲ.

ರಾಹುಲ್ ಗಾಂಧಿ ಪ್ರಕರಣ ಗೊತ್ತೇ ಇದೆ; ತೀರಾ ಇತ್ತೀಚಿನ ಘಟನೆ ನೆನಪಿರಬಹುದು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂಘದ ಮೇಲೆ ಗಾಂಧಿ ಹತ್ಯೆಯ ಆರೋಪವನ್ನು ಮಾಡಿದಾಗಲೂ ರಾಹುಲ್ ಗಾಂಧಿಯವರನ್ನು ನ್ಯಾಯಾಲಯದ ಕಟಕಟೆಗೆ ಎಳೆಯಿತೇ ಹೊರತು ಹಿಂಸಾಚಾರಕ್ಕೆ ಎಡೆಮಾಡಿಕೊಡಲಿಲ್ಲ. ಇವು ಕೆಲವು ಪ್ರಮುಖ ಉದಾಹರಣೆಗಳು ಅಷ್ಟೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಉದ್ದಗಲಕ್ಕೂ ಕಾಂಗ್ರೆಸ್, ಮೂಲಭೂತವಾದಿ ಸಂಘಟನೆಗಳು, ನಕ್ಸಲೀಯರು, ಕಮ್ಯುನಿಸ್ಟ್‌ ಕ್ರೌರ್ಯಕ್ಕೆ ಹೀಗೆ ಬಿಡಿಬಿಡಿಯಾಗಿ ರಕ್ತತರ್ಪಣ ಗೈದ ಆರೆಸ್ಸೆಸ್ ಮತ್ತು ಪರಿವಾರದ ಕಾರ್ಯಕರ್ತರು,ಸ್ವಯಂಸೇವಕರ ಪ್ರಾಣಾರ್ಪಣೆಗಳಿಗೆ ಲೆಕ್ಕವೇ ಇಲ್ಲ. ಆದರೂ ಆರೆಸ್ಸೆಸ್ ದೇಶದಲ್ಲಿ ಅಶಾಂತಿ ಹರಡುತ್ತಿದೆ ಎಂದು ಹೇಳುತ್ತಲೇ ನಿಜವಾಗಿ ದೇಶದ ನೆಮ್ಮದಿಗೆ ಭಂಗ ತರುವ ನಕ್ಸಲರು ಮತ್ತು ಮೂಲಭೂತವಾದಿ ಸಂಘಟನೆಗಳೊಂದಿಗೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪರಿವಾರಕ್ಕೆ ಸೇರಿದ ಸೆಕ್ಯುಲರ್ ಸಂಘಟನೆಗಳು ಬಹಿರಂಗವಾಗಿ ಕೈಜೋಡಿಸುತ್ತಲೇ ಇದ್ದಾರೆ.

ಇದು ಒಂದು ಕಥೆಯಾದರೆ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ಒಮ್ಮೆ ತಿರುಗಿ ನೋಡಲೇಬೇಕು. ಸ್ವತಃ ಮಹಾತ್ಮ ಗಾಂಧಿ ಆರೆಸ್ಸೆಸ್ ಶಿಬಿರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂವಿಧಾನಶಿಲ್ಪಿ ಡಾ: ಬಾಬಾ ಸಾಹೇಬ ಅಂಬೇಡ್ಕರ್ ಸಂಘದ ಕೆಲಸವನ್ನು ಕಣ್ಣಾರೆ ಕಂಡು ಮೆಚ್ಚುಗೆ ಸೂಚಿಸಿದ್ದಾರೆ. ಅಂದಮೇಲೂ ಬೇಕಾ ಸಂಘ ಕಾರ್ಯಚಟುವಟಿಕೆ, ನೀತಿನಿರೂಪಣೆ, ಸಿದ್ಧಾಂತಕ್ಕೆ ಬೇರೆಯವರ ಸರ್ಟಿಫಿಕೇಟ್. ಈಗ ಹೇಳಬೇಕು ಯಾರು ಶಾಂತಿಪ್ರಿಯರು.ಯಾರು ಪ್ರಜಾಪ್ರಭುತ್ವ ವಾದಿಗಳು. ಹಿಂಸೆಗೆ ಬೆಂಬಲ ನೀಡುತ್ತಿರುವವರು ಯಾರು ಎಂದು.

-ಅರುಣ ಜೋಷಿ
ವಕೀಲರು

Leave a Reply

Your email address will not be published. Required fields are marked *

2 + two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top