ವಿಶ್ವವಾಣಿ

ಧಾರ್ಮಿಕ ಮುಖಂಡರೇ, ಸ್ವಾಮಿಗಳೇ ಇಲ್ಲಿ ಕೊಂಚ ಗಮನ ಕೊಡಿ!

ಸೋಮವಾರದ ಶಿವಾನುಭವ ಗೋಷ್ಠಿಯಲ್ಲಿ, ಸ್ವಾಮೀಜಿಗಳೊಬ್ಬರು ತಮ್ಮ ಮಠದ ಆವರಣದ ಭಕ್ತರೆದರು ತಮ್ಮ ಆಶೀರ್ವಚನ ನೀಡುತ್ತಾ, ಒಂದು ಜಾತಿ ವರ್ಗದವರನ್ನು ಆ ಜಾತಿ, ಧರ್ಮದವರ ಬಗ್ಗೆ ಕೀಳು ಭಾವನೆ ಮೂಡುವಂತೆ ಆಶೀರ್ವಚನ ನೀಡುತ್ತಿದ್ದರು. ಈ ಸಮಯದಲ್ಲಿ ಅಲ್ಲಿದ್ದ ಕೋಮುಸೌಹಾರ್ದ ಭಕ್ತನ ಮನಸ್ಸಿನಲ್ಲಿ ‘ಸ್ವಾಮಿಗಳು ತಮ್ಮ ಧಾರ್ಮಿಕ ಸಂಸ್ಥೆಯನ್ನು ದುರು ಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ?’ ಎಂಬ ಅನುಮಾನ ಮೂಡಿತು. ಅದೇ ರೀತಿ, ಇನ್ನೊಮ್ಮೆ ಒಬ್ಬ ಸ್ವಾಮಿಗಳು ತಮ್ಮ ಧಾರ್ಮಿಕ ಕೇಂದ್ರದಲ್ಲಿ, ‘ನೋಡಿ ಈ ಚುನಾವಣೆಯಲ್ಲಿ ನಮ್ಮ ಧರ್ಮದ ಹೋರಾಟಕ್ಕೆ ಬೆಂಬಲ ನೀಡಿದ ಇಂಥ ರಾಜಕೀಯ ಪಕ್ಷಕ್ಕೆ ಮತ ನೀಡಿ’ ಎಂದು ಹೇಳುವ ಅಥವಾ ರಾಜಕೀಯ ಪಕ್ಷ ನಮ್ಮ ವಿರುದ್ಧವಿದೆ, ಇದಕ್ಕೆ ಮತ ನೀಡಬೇಡಿ’ ಎಂದು ಹೇಳುತ್ತಿರುವಾಗ, ಒಂದು ರಾಜಕೀಯ ಪಕ್ಷದ ಕಾರ್ಯಕರ್ತನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ, ಈ ಗುರುಗಳು ತಮ್ಮ ಸ್ಥಾನ ಹಾಗೂ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ? ಈ ರೀತಿಯಾಗಿ ತಮ್ಮ ಪ್ರಭಾವದ ದುರುಪಯೋಗ ಕ್ಕೆ ಯಾವುದೇ ಕಾನೂನು ಕ್ರಮವಿಲ್ಲವೇ? ಎಂಬುದಕ್ಕೆ ಉತ್ತರ, ‘ಧಾರ್ಮಿಕ ಸಂಸ್ಥೆಗಳ ದುರೂಪಯೋಗ ತಡೆ ಕಾನೂನು, 1988.’

1980ರ ದಶಕದಲ್ಲಿ ಪಂಜಾಬ್ ರಾಜ್ಯದಲ್ಲಿದ್ದ ಉಗ್ರಗಾಮಿ ಸಂಘಟನೆಗಳು, ತಮ್ಮ ಅಡಗು ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಾಲಯಗಳಾಗಿ ತಮ್ಮ ಧಾರ್ಮಿಕ ಕೇಂದ್ರಗಳನ್ನು ದುರುಪಯೋಗಪಡಿಸಿಕೊಂಡದ್ದನ್ನು ಕಂಡ ಅಂದಿನ ಕೇಂದ್ರ ಸರಕಾರ, ‘ಆಪರೇಶನ್ ಬ್ಲೂ ಸ್ಟಾರ್’ ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ಮಾಡಿದ್ದು, ತದನಂತರ ಇಂದಿರಾ ಗಾಂಧಿಯವರನ್ನು ನಾವು ಕಳೆದು ಕೊಂಡಿದ್ದು ಈಗ ಇತಿಹಾಸ. ಆಮೇಲೆ ಬಂದ ರಾಜೀವ ಗಾಂಧಿ ನೇತೃತ್ವದ ಸರಕಾರ ಒಂದು ವಿಶೇಷ ಕಾನೂನನ್ನು ಜಾರಿಗೆ ತಂದಿತು, ಅದುವೇ ‘ಧಾರ್ಮಿಕ ಸಂಸ್ಥೆಗಳ ದುರೂಪಯೋಗ ತಡೆ ಅಧಿನಿಯಮ 1988’. ಈ ಅಧಿನಿಯಮ, ಮೇ 26, 1988ರಿಂದ

ಈ ಕಾನೂನಿನ ವಿಶೇಷವೇನು? ಎಂದು ನೀವು ಕೇಳಬಹುದು. ಈ ಕಾನೂನನ್ನು ಸ್ಥೂಲವಾಗಿ ಗಮನಿಸಿದಂತೆ ನಿಮಗೇ ಅರ್ಥವಾಗುತ್ತಾ ಹೋಗುತ್ತದೆ.

ಈ ಕಾನೂನಿನಲ್ಲಿ ಧಾರ್ಮಿಕ ಸಂಸ್ಥೆ ಎಂದರೆ ಯಾವುದು? ಎಂದು ನೋಡಿದಾಗಕಲಂ 2 (ಜಿ) ಅನ್ವಯ, ಯಾವುದೇ ಸ್ಥಳವನ್ನು ಸಾರ್ವಜನಿಕ ಪೂಜೆಗೆ ಯಾವುದೇ ಹೆಸರಿನಲ್ಲಿ ಬಳಸಿಕೊಂಡರೂ ಸಹ, ಅದನ್ನು ಈ ಅಧಿನಿಯಮದಡಿ ‘ಧಾರ್ಮಿಕ ಸಂಸ್ಥೆ’ ಎಂದು ಕರೆಯಲಾಗುವುದು. ಭಾರತದಲ್ಲಿನ ಯಾವುದೇ ಧಾರ್ಮಿಕ ಸಂಸ್ಥೆ, ಅದು ಮಂದಿರ, ಮಠ, ಮಸೀದಿ, ಚರ್ಚ, ದರ್ಗಾದಂತಹ ಇನ್ನಾವುದೇ ಧಾರ್ಮಿಕ ಕೇಂದ ಅಥವಾ ಸಂಸ್ಥೆಯಾಗಿರಬಹುದು ಅಥವಾ ಈ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಯಾವುದೇ ಸ್ವತ್ತುಗಳಾಗಿರಬಹುದು, ಅಂದರೆ ಆಯಾ ಸಂಸ್ಥೆಗಳು ಹೊಂದಿರುವ, ಮಠ, ಆವರಣ, ಕಲ್ಯಾಣ ಮಂಟಪ, ಶಾದಿ ಮಹಲ್, ಸಭಾಗೃಹಗಳು, ಶಾಲೆ, ಕಾಲೇಜುಗಳು, ಇತರೇ ಯಾವುದೇ ಸ್ವತ್ತುಗಳು ಧಾರ್ಮಿಕ ಸಂಸ್ಥೆಯ ಅಥವಾ ಮ್ಯಾನೇಜರ್ ಅಂದರೆ ಸ್ವಾಮಿಗಳ ಹಿಡಿತ ಅಥವಾ ಹತೋಟಿಯಲ್ಲಿರುವ ಯಾವುದೇ ಸ್ವತ್ತುಗಳನ್ನು ಈ ಅಧಿನಿಯಮದಲ್ಲಿ ಉಲ್ಲೇಖಿಸಿದ ಕೃತ್ಯಗಳಿಗೆ ಬಳಸಿಕೊಂಡರೆ, ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಹಾಗಾದರೆ ಅಧಿನಿಯಮದಲ್ಲಿ ಹೇಳಿದ ನಿಷೇಧಿತ ಕೃತ್ಯಗಳು ಯಾವುವು? ಎಂದು ನೋಡಲು ನಾವು ಕಲಂ 3 ನ್ನು ಗಮನಿಸಿಬೇಕು.3.. No religious institution or manager thereof shall use or allow the use of any premises belonging to, or under the control of, the institution- 

(a) for the promotion or propagation of any political activity. Or
(b) for the harbouring of any person accused or convicted of an offence under any law for the time being in force; or
(c) for the storing of any arms or ammunition. Or (d) for keeping any goods or articles in contravention of any law for the time being in force. Or
(e) for erecting or putting up of any construction or fortification, including basements, bunkers, towers or walls without a valid licence or permission under any law for the time being in force; or
(f) for the carrying on of any unlawful or subversive act prohibited under any law for the time being in force or in contravention of any order made by any court. Or
(g) for the doing of any act which promotes or attempts to promote disharmony or feelings of enmity, hatred or ill-will between different religious, racial, language or regional groups or castes or communities.
(h) for the carrying on of any activity prejudicial to the sovereignty, unity and integrity of India. or (i) for the doing of any act in contravention of the provisions of the Prevention of Insults to National Honour Act, 1971.

ಮೇಲಿನ ಉಪಬಂಧಗಳನ್ನು ಓದುತ್ತಾ ಹೋದಂತೆ, ಈಗಿನ ಪ್ರಚಾರ ಪ್ರಿಯ ಹಾಗೂ ಸದಾ ಸುದ್ದಿಯಲ್ಲಿರಲು ಬಯಸುವ ಧಾರ್ಮಿಕ ಮೇಲೆ ಸುಮಾರು ಪ್ರಕರಣಗಳು ದಾಖಲಾಗಿ, ದೇವರು ದಿಂಡರುಗಳ ಪೂಜೆ ಬಿಟ್ಟು ದಿನವೂ ನ್ಯಾಯಾಲಯದಲ್ಲಿಯೇ ಇರಬೇಕಾದಂಥಹ ಪರಿಸ್ಥಿತಿಯಾುತ್ತಿತ್ತು ಎಂದರೆ ಅತಿಶಯೋಕ್ತಿಯೇನಲ್ಲ. ಧಾರ್ಮಿಕ ಮುಖಂಡರು ನೀಡುವ ಫತ್ವಾ, ಇಂಥದೇ ಪಕ್ಷಕ್ಕೆ ವ್ಯಕ್ತಿಗೆ ಮತ ಹಾಕಿ ಅಥವಾ ಹಾಕಬೇಡಿ ಎಂದು ಹೇಳುವುದು ಕೂಡಾ ಈ ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಬರುತ್ತದೆ.

ಕಲಂ 3 ರಲ್ಲಿರುವ ಇನ್ನೊಂದು ಪ್ರಮುಖ ನಿಷೇಧಿತ ಕೃತ್ಯವೆಂದರೆ ಅದು, ಬೇರೆಬೇರೆ ಧರ್ಮಗಳ ಬಗ್ಗೆ ನಿಂದನೆ ಮಾಡುವುದು, ಜಾತಿ, ಮತ, ಭಾಷೆ ಇತ್ಯಾದಿ ಮೇಲೆ ವೈರತ್ವವನ್ನುಂಟುಮಾಡುವುದು, ಹೇಳಿಕೆ ನೀಡುವುದು, ಏಕತೆಗೆ ಭಂಗವನ್ನುಂಟು ಮಾಡುವುದು ಅಥವಾ ಈ ರೀತಿಯಾಗಿ ಪರಿಣಾಮ ಉಂಟಾಗುವಂತೆ ಪ್ರಯತ್ನಪಡುವುದು ಕೂಡಾ ಅಪರಾಧಿಕ ಕೃತ್ಯವೆಂದು ಪರಿಗಣಿಸಲಾಗುವುದು. ಉದಾಹರಣೆಗೆ ಇತ್ತೀಚೆಗೆ ಒಬ್ಬ ಸ್ವಾಮಿಗಳು ತಮ್ಮ ಪ್ರವಚನದಲ್ಲಿ ‘ಈ ದೇಶ ಹಾಳಾಗಿದ್ದು ತುಪ್ಪ ತಿನ್ನುವವರಿಂದ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು. ಆ ಸ್ವಾಮಿಗಳು ಹೇಳಿದ ಸಂಗತಿ ನಿಜವೋ? ಸುಳ್ಳೋ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಈ ಅಧಿನಿಮದ ವ್ಯಾಪ್ತಿಯಡಿ ಬರದು.

ಮದರಸಾಗಳಲ್ಲಿ, ಚರ್ಚ್‌ಗಳಲ್ಲಿ ರಾಷ್ಟ್ರಗೀತೆಯನ್ನು ಅಥವಾ ರಾಷ್ಟ್ರಕ್ಕೆ ಅಗೌರವವನ್ನುಂಟುಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆಂದು, ನಾವು ಅನೇಕ ಮಾಧ್ಯಮಗಳಲ್ಲಿ ನೋಡಿದ್ದೇವೆ ಹಾಗು ಓದಿದ್ದೇವೆ, ಒಂದು ವೇಳೆ ಈ ರೀತಿಯ ಕೃತ್ಯವೆಸಗಿದ್ದೇ ಆದಲ್ಲಿ ಅಂಥ ಕೃತ್ಯ ಕೂಡಾ ಈ ಅಧಿನಿಯಮದಡಿ ಶಿಕ್ಷಾರ್ಹ ಅಪರಾಧವಾಗುತ್ತದೆ.

ಅದೇ ರೀತಿ, ಈ ಧಾರ್ಮಿಕ ಸಂಸ್ಥೆಗಳ ಬಳಿ ಇರುವ ಯಾವುದೇ ಹಣವನ್ನು ಒಂದು ವೇಳೆ ರಾಜಕೀಯ ಚಟುವಟಿಕೆಗೆ ಅಥವಾ ಯಾವುದೇ ಅಪರಾಧಿಕ ಕೃತ್ಯವೆಸಗಲು ಉಪಯೋಗಿಸಿದರೂ ಸಹ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಬಹುದು. ಇದರ ಜೊತೆ ಧಾರ್ಮಿಕ ಸಮ್ಮೇಳನ, ಮೆರವಣಿಗೆ, ಇತ್ಯಾದಿಗಳನ್ನು ಹಮ್ಮಿಕೊಂಡು ನಂತರ ಅವುಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವಂತೆ ಅನುಮತಿಸಿದರೆ, ಅವಕಾಶ ಮಾಡಿಕೊಟ್ಟರೆ ಇದನ್ನೂ ಈ ಅಧಿನಿಮದಡಿ ಅಪರಾಧವಾಗುತ್ತದೆ.ಈ ಅಧಿನಿಯಮದಡಿ, ಅಪರಾಧವೆಸಗಿದ ವ್ಯಕ್ತಿಗೆ, ಧಾರ್ಮಿಕ ಸಂಸ್ಥೆಯ ಮ್ಯಾನೇಜರ್, ಮುಖಂಡನಿಗೆ ಇವರಿಗೆ ಕಲಂ 7 ರಡಿ 5 ವರ್ಷಗಳವರೆಗೆ ವಿಸ್ತರಿಸಬಹುದಾದ ಸಜೆ ಹಾಗೂ ದಂಡ ವಿಧಿಸುವ ಅವಕಾಶವಿದೆ. ಇನ್ನೊಂದು ಕುತೂಹಲಕಾರಿ ಅಂಶವೆಂದರೆ, ಈ ಅಧಿನಿಯಮದಡಿ ಅಪರಾಧ ಮಾಡಿದ್ದಾರೆಂದು ಆಪಾದಿಸಿ ಪೊಲೀಸ್ ಅಧಿಕಾರಿಗಳು ದೋಷಾರೋಪಣ ವರದಿ ಸಲ್ಲಿಸಿದ ನಂತರ ಅಪರಾಧವು ಮೇಲ್ನೋಟಕ್ಕೆ ಸಾಬೀತಾಗುವಂತೆ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟಲ್ಲಿ, ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥವಾಗುವವರೆಗೂ ಆ ಧಾರ್ಮಿಕ ಸಂಸ್ಥೆಯ ಮ್ಯಾನೇಜರ್ ಹುದ್ದೆಯಿಂದ ಕೆಳಗಿಳಿಯಬೇಕೆನ್ನುವುದು. ಈ ಹಿನ್ನೆಲೆಯಲ್ಲಿ ಮಠಾಧೀಶರಾಗಿ, ಕಾವಿಯಲ್ಲಿ ಖಾದಿ ವಾಸನೆಯನ್ನು ಹೊಂದಿದ ಧಾರ್ಮಿಕ ಗುರುಗಳು ಪೀಠ ತ್ಯಾಗ ಮಾಡಿ ಪೂರ್ಣ ಪ್ರಮಾಣದ ರಾಜಕೀಯದಲ್ಲಿ ತೊಡಗಬಹುದು!

ದೇವರ ನಂತರ ನಾವೆಲ್ಲ ಪೂಜ್ಯ ಭಾವನೆಯಿಂದ ನೋಡುವುದೆಂದರೆ ನಮ್ಮ ನಮ್ಮ ಧರ್ಮದ ಮುಖಂಡರುಗಳು. ಅವರು ನಮ್ಮಲ್ಲಿ ಧರ್ಮ ಜಾಗೃತಿಯನ್ನುಂಟು ಮಾಡಿ ಅಧ್ಯಾತ್ಮದತ್ತ ಸೆಳೆದು, ಜೀವನದಲ್ಲಿ ಕಾಣುವಂತೆ ತಮ್ಮ ನಡೆ ನುಡಿಗಳಿಂದ ನಮಗೆ ಮಾದರಿಯಾಗಿಬೇಕು. ಇದನ್ನೇ ಅರಿತು ಅಣ್ಣ ಬಸವಣ್ಣ ಹೇಳಿದ್ದಿರಬೇಕು, ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದೆನ್ನಬೇಕು’ ಎಂದು.

ಇಲ್ಲಿಯವರೆಗೂ ಈ ಅಧಿನಿಯಮ ಅಜ್ಞಾತವಾಸದಲ್ಲಿತ್ತು, ಇನ್ನಾದರೂ ಕಾನೂನು ಪರಿಪಾಲಕರು ಈ ಅಧಿನಿಯಮದ ಬಗ್ಗೆ ಗಮನ ಹರಿಸಿ ಈ ಕಾನೂನಿನ ಸದಾಶಯವನ್ನು ಸಾರ್ಥಕಗೊಳಿಸುವರೇ?