About Us Advertise with us Be a Reporter E-Paper

ಅಂಕಣಗಳು

ಸಂಪುಟ ವಿಸ್ತರಣೆ ನೆಪದಲ್ಲಿ ಜನರ ಮರೆಯದಿರಿ

ಹಲವಾರು ವಿಘ್ನಗಳನ್ನು ಎದುರಿಸಿದ್ದ ರಾಜ್ಯ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆಗೆ ಮತ್ತೆ ಚಾಲನೆ ಸಿಕ್ಕಿದೆ. ಈ ಹಿಂದೆ ಸಂಪುಟ ವಿಸ್ತರಣೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರೀತಿಯಾದ ಭಿನ್ನಮತ ಸ್ಫೋಟಗೊಂಡಿತ್ತು. ಘಟಾನುಘಟಿ ಶಾಸಕರೆಲ್ಲಾ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪಕ್ಷದ ವಿರುದ್ಧವೇ ಸೆಡ್ಡು ಹೊಡೆದಿದ್ದರು. ಆದರೆ, ಆಸ್ಫೋಟವನ್ನು ತಣಿಸುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಸಹ ಯಶಸ್ವಿಯಾಗಿತ್ತು. ಇಷ್ಟೆಲ್ಲಾ ಆಗುವ ವೇಳೆಗೆ ವಿಧಾನಮಂಡಲ ಅಧಿವೇಶನ, ಆಷಾಡ ಬಂದಿದ್ದರಿಂದ ವಿಸ್ತರಣೆ ಪ್ರಕ್ರಿಯೆ ವಿಚಾರ ಮತ್ತು ವಿವಾದಗಳು ತಣ್ಣಗಾಗಿದ್ದವು. ಇದೀಗ ಆಷಾಡ ಮುಗಿದು ಶ್ರಾವಣ ಬಂದಿದೆ. ಬಹಿರಂಗವಾಗಿ ಯಾರೂ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡದಿದ್ದರೂ ತಮ್ಮದೇ ಮಟ್ಟದಲ್ಲಿ ಮಾಡುವುದನ್ನು ನಿಲ್ಲಿಸಿಲ್ಲ. ಸಮಯ ಸಿಕ್ಕಾಗಲೆಲ್ಲಾ ದೆಹಲಿಯ ಹೈಕಮಾಂಡ್ ಮತ್ತು ಅಲ್ಲಿರುವ ರಾಷ್ಟ್ರೀಯ ನಾಯಕರ ಮನೆ ಬಾಗಿಲು ತಟ್ಟಿ ಬರುತ್ತಿದ್ದಾರೆ. ಈ ಮಧ್ಯೆ, ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನವನ್ನು ತೆರೆ ಮರೆಯಲ್ಲಿ ಮಾಡುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹೀಗಾಗಿ ಸಮ್ಮಿಶ್ರ ಸರಕಾರದ ಎರಡೂ ಪಕ್ಷಗಳಿಗೆ ಸಂಪುಟ ವಿಸ್ತರಣೆಯನ್ನು ಮತ್ತೆ ಮುಂದೂಡಲು ಯಾವುದೇ ಕಾರಣಗಳು ಇಲ್ಲ. ಅನಿವಾರ್ಯವಾಗಿ ಭಿನ್ನಮತ ಮತ್ತೆ ಭುಗಿಲೇಳುವ ಮೊದಲೇ ಈಗ ವಿಸ್ತರಣೆ ಈ ಕಾರಣದಿಂದಲೇ ರಾಜ್ಯ ಕಾಂಗ್ರೆಸ್ ನಾಯಕರನ್ನು ಕರೆಯಿಸಿಕೊಂಡು ಮಾತನಾಡುತ್ತಿರುವ ಹೈಕಮಾಂಡಿನ ನಾಯಕರು ಯಾರಿಗೆ ಕೊಡಬೇಕು? ಯಾರಿಗೆ ಬೇಡ? ಎಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದೇನೇ ಇರಲಿ, ಸರಕಾರ ಬಂದ ಆರಂಭದ ಒಂದೂವರೆ ತಿಂಗಳ ಕಾಲ ರಾಜಕಾರಣಕ್ಕೆ ಕಾಲಹರಣ ಮಾಡಿದ್ದಾಯ್ತು. ಅದಾದ ನಂತರ ಇಲ್ಲಿರೆಗೆ ಒಂದು ಹಂತಕ್ಕೆ ಸುಗಮವಾಗಿ ಸಾಗುತ್ತಿದೆ. ಇಂತಹ ಸಂದರ್ಭದಲ್ಲೇ ರಾಜ್ಯದ ಅರ್ಧಭಾಗದಲ್ಲಿ ನೆರೆ, ಇನ್ನರ್ಧ ಭಾಗದಲ್ಲಿ ಬರ ತಾಂಡವವಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮತ್ತೆ ಸಂಪುಟ ವಿಸ್ತರಣೆ ವಿಚಾರದಲ್ಲಿ ಕಾಲಹರಣ ಮಾಡದೇ ನೆರೆ ಮತ್ತು ಬರ ಪೀಡಿತ ಭಾಗಗಳ ಜನರ ಕಣ್ಣೀರು ಒರೆಸುವ ಕೆಲಸಕ್ಕೆ ಆದ್ಯತೆ ನೀಡಬೇಕಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close