ತೆಗೆದು ಹಾಕಬೇಕಾದ ಹೇಳಿಕೆಗಳು

Posted In : ಕ್ಷಣಹೊತ್ತು ಅಣಿ ಮುತ್ತು

ಚೀನಾ ದೇಶದ ಈ ಜಾನಪದ ಕಲೆ ವಿನೋದಮಯವಾಗಿದೆ. ಅರ್ಥ ಪೂರ್ಣವಾಗಿದೆ. ಬಹಳ ಹಿಂದೆ ಅಲ್ಲಿನ ಹಳ್ಳಿಯೊಂದರಲ್ಲಿ ಹೊಸ ಅಸ್ಪತ್ರೆ ಪ್ರಾರಂಭವಾಯಿತಂತೆ. ಅಲ್ಲಿನ ವೈದ್ಯನೂ ಆಗಷ್ಟೇ ವೈದ್ಯನಾದವ. ಹೊಸ ಅಸ್ಪತ್ರೆ, ಹೊಸ ವೈದ್ಯ. ಹೆಚ್ಚು ಔಷಧಗಳಿರಲಿಲ್ಲ. ಹೇಗೋ ಏನೋ ಇರುವುದರಲ್ಲೇ ಆತ ಚಿಕಿತ್ಸೆ ನೀಡುತ್ತಿದ್ದ. ಹೊಸ ಬಗೆಯ ಕಾಯಿಲೆಯುಳ್ಳವರು ಬಂದರೆ ತನಗೆ ತೋಚಿದ ಔಷದ ಕೊಡುತ್ತಿದ್ದ. ಅವರಿಗೆ ವಾಸಿ ಆದರೆ ತನ್ನ ಖಾಸಾ ಪುಸ್ತಕದಲ್ಲಿ ಅದನ್ನು ಬರೆದಿಟ್ಟುಕೊಳ್ಳುತ್ತಿದ್ದ. ಮುಂದೆ ಅಂತಹವರು ಬಂದರೆ ಮತ್ತದೇ ಔಷಧ ಕೊಡಬಹುದೆನ್ನುವ ಯೋಜನೆ ಆತನದ್ದು. ಒಮ್ಮೆ ಊರಿನ ಚಮ್ಮಾರ ತೀವ್ರ ತಲೆನೋವೆಂದು ಬಂದ. ವೈದ್ಯ ತನ್ನ ಬಳಿಇದ್ದ ಔಷಧವನ್ನು ಕೊಟ್ಟ. ಆದರೆ ಚಮ್ಮಾರನ ತಲೆನೋವು ಕಡಿಮೆಯಾಗಲಿಲ್ಲ. ವೈದ್ಯ ಮತ್ತೊಂದು ಔಷಧವನ್ನು ಕೊಟ್ಟ. ಅದೂ ಕೆಲಸ ಮಾಡಲಿಲ್ಲ. ರೋಗಿಯ ಗೋಳು ಹೆಚ್ಚಾಯಿತು. ಆತನ ಬಂಧುಗಳೂ ವೈದ್ಯನಿಗೆ ಏನಾದರೂ ಮಾಡಿರೆಂದು ದುಂಬಾಲು ಬಿದ್ದರು. ವೈದ್ಯನಿಗೆ ಏನೂ ತೋಚಲಿಲ್ಲ. ಹಾಗೆಂದು ಹೇಳಿಬಿಟ್ಟರೆ ತನ್ನ ಹೆಸರು ಹಾಳಾಗುತ್ತದೆಂಬ ಚಿಂತೆ.

ಕೊನೆಗೆ ಗಂಭೀರ ದನಿಯಲ್ಲಿ ರೋಗಿಯ ಕಾಯಿಲೆಗೆ ಔಷಧವೇ ಇಲ್ಲ. ಆತನ ಕೊನೆಗಾಲ ಸಮೀಪಿಸಿದೆ. ಹೆಚ್ಚೆಂದರೆ ಇಂದು ರಾತ್ರಿ ಆತ ಉಳಿಯಬಹುದು ಎಂದು ಘೋಷಿಸಿಯೇಬಿಟ್ಟ. ಬಂಧುಗಳೆಲ್ಲಾ ಗೋಳಾಡಿದರು. ರೋಗಿಯೇ ಧೈರ್ಯ ತಂದುಕೊಂಡು ಅವರಿಗೆಲ್ಲಾ ಸಾಂತ್ವನ ಹೇಳಿದ. ತಾನು ಈ ರಾತ್ರಿಯೇ ಸಾಯುತ್ತೇನಾದ್ದರಿಂದ ತನಗಿಷ್ಟವಾದ ಮೀನಿನ ಅಡುಗೆ ಮಾಡಿ ಬಡಿಸಿ. ತಿಂದು ಸಾಯುತ್ತೇನೆಂದು ಕೇಳಿಕೊಂಡ. ಆತನಿಗೆ ಮೀನಿನ ಅಡುಗೆ ಮಾಡಿ ಬಡಿಸಿದರು. ಆತ ಇದು ಕೊನೆಯ ಊಟವೆಂದು ಹೇಳುತ್ತಾ ಹತ್ತು ಮೀನುಗಳನ್ನು ತಿಂದು ಮುಗಿಸಿದ. ಆನಂತರ ಹೊಟ್ಟೆ ಉಬ್ಬರಿಸಿಕೊಂಡಿದೆ ಎಂದು ಗೋಳಾಡತೊಡಗಿದ. ಆತನ ಸ್ಥಿತಿ ಇನ್ನೂ ಬಿಗಡಾಯಿಸಿತು. ರಾತ್ರಿಯೆಲ್ಲಾ ಆತ ನರಳುತ್ತಿದ್ದ. ವೈದ್ಯ ತನ್ನ ಮಾತು ನಿಜವಾಗಿಬಿಡುತ್ತದೇನೋ ಎಂಬ ಚಿಂತೆಯಲ್ಲಿದ್ದ. ಆದರೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ ವಿಷಯವೆಂದರೆ ಬೆಳಗ್ಗೆ ಚಮ್ಮಾರನ ಕಾಯಿಲೆ ಸಂಪೂರ್ಣ ವಾಸಿಯಾಗಿತ್ತು. ಆತ ಸಂತೋಷದಿಂದ ಮನೆಗೆ ಮರಳಿದ.

ವೈದ್ಯ ತನ್ನ ಪುಸ್ತಕದಲ್ಲಿ ಹತ್ತು ಮೀನು ತಿಂದರೆ ಎಂತಹ ತಲೆನೋವು ಇದ್ದರೂ ವಾಸಿಯಾಗುತ್ತದೆ ಎಂದು ಬರೆದ. ಕೆಲವು ದಿನಗಳ ನಂತರ ಆ ಊರಿನ ಸಿಂಪಿಗ ತೀವ್ರ ತಲೆನೋವೆಂದು ನರಳುತ್ತಾ ಬಂದ. ವೈದ್ಯನ ಬಳಿ ಎಂದಿನಂತೆ ಔಷಧಗಳು ಇರಲ್ಲಿ. ಆತ ಸಿಂಪಿಗನಿಗೆ ಹತ್ತು ಮೀನು ತಿಂದು ಮಲಗಲು ಹೇಳಿದ. ಆದರೆ ಮರುದಿನ ಸಿಂಪಿಗ ಸಾವನ್ನಪ್ಪಿದ್ದ. ವೈದ್ಯ ತನ್ನ ಪುಸ್ತಕದಲ್ಲಿ ಹತ್ತು ಮೀನು ತಿಂದರೆ ಚಮ್ಮಾರನ ತಲೆ ನೋವು ವಾಸಿಯಾಗುತ್ತದೆ. ಆದರೆ ಸಿಂಪಿಗರ ತಲೆನೋವು ವಾಸಿಯಾಗುವುದಿಲ್ಲ. ಅವರು ಸಾಯುತ್ತಾರೆ ಎಂದು ಬರೆದ. ಕೆಲವು ದಿನಗಳ ನಂತರ ವೈದ್ಯನ ಬಣ್ಣ ಬಯಲಾಗಿ ಆತನನ್ನು ಅಲ್ಲಿಂದ ಹೊರಗಟ್ಟಿದರಂತೆ. ಈ ಕತೆಯ ಸಂದೇಶ ಇಷ್ಟೇ! ನಾವು ಕೆಲವು ಹೇಳಿಕೆಗಳನ್ನು ಹಿಂದೆಮುಂದೆ ನೋಡದೆ ನಂಬಿಬಿಡುತ್ತೇವೆ. ಉದಾಹರಣೆಗೆ ಕಳ್ಳನನ್ನು ನಂಬಿದರೂ ಕುಳ್ಳನನ್ನು ನಂಬಬಾರದು ಎಂಬ ಅರ್ಥಹೀನ ಹೇಳಿಕೆ. ಲಾಲ್ ಬಹದ್ದೂರ್ ಶಾಸ್ತ್ರಿ , ಸಚಿನ್ ತೆಂಡೂಲ್ಕರ್ ಮುಂತಾದವರೆಲ್ಲಾ ಕುಳ್ಳರೇ ಅಲ್ಲವೇ? ಅವರ ಸಾಧನೆ ಯಾವ ಎತ್ತರದವರಿಗಿಂತ ಕಡಿಮೆ ಇದೆ ಹೇಳಿ! ಹಾಗೆಯೇ ರಾಜಕಾರಣಿಗಳೆಲ್ಲಾ ಭ್ರಷ್ಟರು, ಘಟ್ಟದ ಮೇಲಿನವರನ್ನು ನಂಬಬಾರದು, ವ್ಯಾಪಾರಿಗಳೆಲ್ಲ ನಯವಂಚಕರು, ಇತ್ಯಾದಿ. ನಿಮ್ಮ ಬಳಿಯೂ ಇಂತಹ ಬಾಲಿಶ ಹೇಳಿಕೆಗಳಿದ್ದರೆ ಅವನ್ನು ತೆಗೆದು ಬಿಸಾಡಬಹುದಲ್ಲವೇ?

Leave a Reply

Your email address will not be published. Required fields are marked *

6 + 10 =

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top