About Us Advertise with us Be a Reporter E-Paper

ಅಂಕಣಗಳು

ಸರ್ವಋತು ಸ್ಮಶಾನ ಭಾಗ್ಯವೂ ಒಂದು ಬೇಕಲ್ಲ?!

- ಭಾಸ್ಕರ್ ಕೊತ್ತತ್ತಿ

‘ನದಿಯಲ್ಲಿ ಈಜಿಕೊಂಡು ಸಾಗಿಸಿ ಸುಸ್ತಾದ ಗ್ರಾಮಸ್ಥರು’, ‘ಶವಸಂಸ್ಕಾರಕ್ಕೆ ಜಾಗವಿಲ್ಲದೆ ರಸ್ತೆಯಲ್ಲೇ ಮೃತದೇಹ ಸುಟ್ಟ ಗ್ರಾಮಸ್ಥರು’…ಇಂತಹ ಸುದ್ದಿಗಳು ಇಂದು ಹಳ್ಳಿಗಳಲ್ಲಿ ಹೆಚ್ಚಾಗಿ ಕೇಳಿಸುತ್ತಿವೆ. ಹುಟ್ಟನ್ನು ಬರಮಾಡಿಕೊಳ್ಳಲು ಹೆರಿಗೆಗಾಗಿ ಆಸ್ಪತ್ರೆಗಳು, ಸುಸರ್ಜಿತ ನರ್ಸಿಂಗ್ ಹೋಂಗಳು 24್ಡ7 ಸಿದ್ಧವಾಗಿವೆ. ಆದರೆ ಹುಟ್ಟಿಗಿರುವ ಈ ಸೌಲಭ್ಯಗಳು ಮನುಷ್ಯರ ಸಾವಿಗೂ ಇರಬೇಕಲ್ಲವೇ?

ಸಾಂಧರ್ಭಿಕ ಚಿತ್ರ

ಅಕಸ್ಮಾತ್ತಾಗಿ ನಾನು ನೋಡಿದ ಶವ ಸಂಸ್ಕಾರದ ಮೆರವಣಿಗೆ ಬಹಳ ವಿಷಾದ ಹುಟ್ಟಿಸಿತು…ಕಡ್ಲೆಪುರಿಯೊಂದಿಗೆ ಒಂದು ಎರಡು ರೂಪಾಯಿಗಳ ನಾಣ್ಯವನ್ನು ಎಸೆಯುತ್ತಿದ್ದರು. ಹೆಣದಿಂದ ಜಾರುತ್ತಿದ್ದ ಪುಡಿಗಾಸನ್ನು ಆರೇಳು ವರ್ಷದ ಬಗ್ಗಿ ಎತ್ತಿಕೊಳ್ಳುತ್ತಾ ಕೈಯಲ್ಲಿ ಜೋಡಿಸಿಕೊಳ್ಳುತ್ತಿತ್ತು. ಸತ್ತಿರುವುದು ನಮ್ಮಪ್ಪ, ಬೆಂಕಿ ಇಡಲು ಮಂದಿ ಹೆಗಲುಕೊಟ್ಟು ಹೊತ್ತೊಯ್ಯುತ್ತಿರುವುದು ಅಪ್ಪನ ಹೆಣ ಎನ್ನುವುದನ್ನು ಅರಿಯದೆ ಖುಷಿಯಲ್ಲಿ ಹಣವನ್ನು ಮುಷ್ಟಿಯಲ್ಲಿ ಬಚ್ಚಿಡುತ್ತಿತ್ತು. ಐವತ್ತು ಅರವತ್ತು ಮೀಟರ್ ಸಾಗುತ್ತಿದ್ದಂತೆ ಕಡ್ಲೆಪುರಿಯಲ್ಲಿ ನಾಣ್ಯ ಬೆರೆಸಿ ಎಸೆಯುವುದೂ ಪುನರಾವರ್ತಿತವಾಗುತ್ತಿತ್ತು. ಅದು ಎರಡು ಮೂರು ಮೈಲಿ ದೂರದ ಅಂತಿಮ ಪಯಣ. ಮಗುವಿಗೇನೋ ಕಾಸಿನ ಖುಷಿ; ಹೆಣ ಹೊರುತ್ತಿದ್ದವರ ಪಾಡು ಮಾತ್ರ ಯಾರಿಗೂ ಬೇಡ ಎಂಬಂತಾಗಿತ್ತು.

‘ಹೆಣಭಾರ’ಎನ್ನುವುದು ಬರೀ ಲೋಕರೂಢಿಯ ಮಾತಲ್ಲ ನಿಜ. ಹತ್ತಾರು ಹೆಜ್ಜೆ ಸಾಗುತ್ತಿದ್ದಂತೆ ಒಬ್ಬರಿಂದ ಮತ್ತೊಬ್ಬರು ಹೆಗಲು ಬದಲಾಯಿಸಿಕೊಳ್ಳುವುದನ್ನು ನೋಡುತ್ತೇವೆ. ಚಟ್ಟಕ್ಕೂ, ಹೆಣಕ್ಕೂ ಶೃಂಗರಿಸಿದ ಹೂರಾಶಿಯೊಂದಿಗೆ ಹೆಣದ ಭಾರವೂ ಸೇರಿ ಹೊರುತ್ತಿದ್ದ ವ್ಯಕ್ತಿಗಳು ಕಣ್ಣು ಬಾಯಿ ಬಿಡುತ್ತಿದ್ದರು. ಒಂದಷ್ಟು ದೂರವಾದರೆ ಒಬ್ಬರಿಗೊಬ್ಬರು ಹೆಗಲು ನೀಡುತ್ತಾ ಸಾಗಬಹುದು. ಕಿ ಮೀ ದೂರವಾದರೆ ಹೊರುವವರ ಪರಿಸ್ಥಿತಿ ಹೇಳುವುದೇ ಬೇಡ. ಅದರಲ್ಲೂ ನಾಲ್ಕು ಮಂದಿಯೂ ಒಂದೇ ಎತ್ತರದವರಾಗಿದ್ದರೆ ಸರಿ, ಇಲ್ಲದಿದ್ದರೆ ಹೆಣದ ಭಾರವೆಲ್ಲ ಎತ್ತರದ ಒಬ್ಬನೇ ವ್ಯಕ್ತಿಯ ಮೇಲೆ. ಅದಂತೂ ನರಕಯಾತನೆ. ನೋವಿನಿಂದ ಹೆಣದ ಮಾತು ಹಾಗಿರಲಿ, ದೂರದ ಸ್ಮಶಾನಕ್ಕೆ ಅದನ್ನು ಸಾಗಿಸುತ್ತಿದ್ದವರೇ ಹೆಣವಾಗುತ್ತಿದ್ದರು.

‘ಸತ್ತಾಗ ಹೆಗಲು ಕೊಡಲು ನಾಲ್ಕು ಜನವನ್ನಾದರೂ ಸಂಪಾದಿಸಬೇಕು’ ಎನ್ನುವ ಹಿರಿಯರ ಮಾತು ಕೇಳುತ್ತಾ ಬೆಳೆದಿದ್ದೇವೆ ನಿಜ. ಅಂತಃಕರಣ, ಇನ್ನೊಬ್ಬರಿಗೆ ಮಿಡಿಯುವ ಸ್ವಭಾವ ಸ್ವಲ್ಪ ಹೆಚ್ಚೇ ಇರುವ ಹಳ್ಳಿಗಳಲ್ಲಿ ಜನರು ಅಂತಿಮ ಯಾತ್ರೆಗೆ ಹೆಗಲು ಕೊಡುತ್ತಾರೆ, ಹೆಗಲು ಬದಲಾಯಿಸಿಕೊಂಡು ಹೇಗೋ ಕೊಂಡೊಯ್ಯುತ್ತಾರೇನೋ ಸರಿ, ಆದರೆ ದಫನ್ ಮಾಡುವ ಹೊಲ ಗದ್ದೆಯು ಮೈಲಿಗಳ ದೂರದಲ್ಲಿ ಇದ್ದರೆ? ಎಲ್ಲರ ಸಹನೆಯ ಎದುರಾಗುತ್ತದೆ. ಮೊದಮೊದಲು ಒಂದಷ್ಟು ಜನ ಮುಂದಾದರೂ ಬರಬರುತ್ತಾ ಸಾಕಷ್ಟು ಮಂದಿ ಇಲ್ಲವಾಗಿ ಕೊನೆಯಲ್ಲಿ ಉಳಿಯುವವರಿಗೆ ಯಮ ಯಾತನೆ ಹಳ್ಳಿಗಳಲ್ಲಿ ಸಾಮಾನ್ಯ ಎಂದಾಗಿಬಿಟ್ಟಿದೆ. ಆದರೆ ನಗರಗಳಲ್ಲಿ ಹೆಣ ಹೊರುವ ಪದ್ಧತಿಯೇ ಇತ್ತೀಚೆಗೆ ಮರೆಯಾಗುತ್ತಿದೆ. ಮನೆಯ ಮುಂದೆ ನಿಲ್ಲುವ ಟೆಂಪೊದಲ್ಲಿ, ಇಲ್ಲವೇ ಕಾರ್ಪೊರೇಷನ್‌ನ ಶವ ಸಾಗಿಸುವ ವಾಹನ (ಮುಕ್ತಿ ವಾಹನ)ದಲ್ಲಿ ಹಾಕಿಕೊಂಡು ಹಿಂದೆ ಹತ್ತಾರು ಕಾರು, ಸ್ಕೂಟರ್‌ಗಳಲ್ಲಿ ಹಿಂಬಾಲಿಸುತ್ತಾ ಸ್ಮಶಾನ ತಲುಪುವುದನ್ನು ನೋಡುತ್ತಿದ್ದೇವೆ.

ಆದರೆ ಹಳ್ಳಿಗಳಲ್ಲಿ ‘ಹೆಣಗಾಟ’ ನಾನಾ ತರಹದ್ದು. ಬಿದಿರು ಚಟ್ಟ ಕಟ್ಟುವರಿಲ್ಲದೆ ರೆಡಿಮೇಡ್ ಕಬ್ಬಿಣದ ಚಟ್ಟಗಳು ಈಗ ಗ್ರಾಮಗಳಲ್ಲಿ ಸಿಗುತ್ತವೆ! ಅನಿವಾರ್ಯ ಪರಿಸ್ಥಿತಿಯಲ್ಲಿ ಬದಲಾವಣೆ ಒಪ್ಪಿಕೊಳ್ಳಲೇಬೇಕು. ಆದರೂ ಎಲ್ಲದಕ್ಕೂ ಸುಲಭ ಪರ್ಯಾಯಗಳಿಲ್ಲ. ಹೆಣಕ್ಕೇನೋ ವಾಹನ ಬಳಸಬಹುದು, ಆದರೆ ಸ್ಮಶಾನಕ್ಕೆ ಯಾವ ಬದಲಿ ವ್ಯವಸ್ಥೆಯಿದೆ?

ವೃದ್ಧಾಪ್ಯ-ಕಾಯಿಲೆಗಳಲ್ಲಿ ದಿನಕಳೆಯುವ ಮಂದಿಗೆ ಸಾವು ಕಣ್ಮುಂದೆ ಇದ್ದರೆ, ಸ್ಮಶಾನದ ಭಯ ಕಣ್ಣಲ್ಲಿದೆ. ಹೋದವರೆಲ್ಲ ಒಳ್ಳೆಯವರು, ಹರಸುವ ಹಿರಿಯರು, ಸತ್ತವರು ದೇವರೆನ್ನುತ್ತಾ ಹೆಣಕ್ಕೆ ಕೈಮುಗಿಯುತ್ತೇವೆ. ಆದರೆ ಹಳ್ಳಿಗಳಲ್ಲಿ ಸ್ಮಶಾನಗಳು ಬಹುದೂರ ನಿರ್ಮಿತವಾಗಿದ್ದು ಕಿಮೀಗಟ್ಟಲೆ ಹೆಣ ಸಾಗಿಸುವುದು ಸಾಧಾರಣವಾಗಿ ಎಲ್ಲ ಗ್ರಾಮಗಳಲ್ಲಿ ಅನೇಕ ಜಾತಿಗಳವರ, ಒಂದೆರಡು ಅನ್ಯಧರ್ಮಗಳ ಕುಟುಂಬಗಳಿರುತ್ತವೆ. ಎಲ್ಲಾ ಕುಟುಂಬಕ್ಕೆ ಹೊಲಗದ್ದೆಗಳು ಇರುವುದಿಲ್ಲ. ಕುಂಬಾರ, ವಿಶ್ವಕರ್ಮ, ನಾಯಕ, ಮಡಿವಾಳರಂತಹ ಕಸುಬು ನಾಮಾಂಕಿತ ಕುಟುಂಬಗಳಿಗೆ ವ್ಯವಸಾಯದ ಭೂಮಿ ಸಾಮಾನ್ಯವಾಗಿ ಮರೀಚಿಕೆ. ವಲಸಿಗರು, ಕೂಲಿ ಮಾಡುವವರು, ವ್ಯಾಪಾರ ಅರಸಿ ಬಂದವರು, ನಿರ್ಗತಿಕರಿಗೆ ಹೊಲ ಗದ್ದೆ ಎಲ್ಲಿರುತ್ತದೆ? ಅಕಸ್ಮಾತ್ ಇದ್ದರೂ ಊರ ಮಗ್ಗುಲಲ್ಲಿ ಇರುವುದಿಲ್ಲ. ಇಂಥವರು ಸತ್ತರೆ ಎಲ್ಲಿ ಸುಡುವುದು? ಶವ ಹೂಳಲು ಜಾಗವಿಲ್ಲ. ಯಾರಾದರೂ ಸತ್ತರೆ, ಸತ್ತವರಿಗೆ ಅಳುವುದು ಅಂತ್ಯಸಂಸ್ಕಾರ ಎಲ್ಲಿ ನಡೆಸುವುದು ಎಂದು ದುಃಖಿಸುವ ಶೋಚನೀಯ ಸ್ಥಿತಿ ಜನರದಾಗಿದೆ.

ಮಳೆಗಾಲದಲ್ಲಿ ಇನ್ನೂ ಒಂದಷ್ಟು ತೊಂದರೆಗಳು ಸೇರಿಕೊಳ್ಳುತ್ತವೆ! ಜಿಟಿಜಿಟಿ ಮಳೆ ಇದ್ದರೆ ದಹನ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಗುಂಡಿ ತೋಡಿದರೆ ನೀರು, ಬೆಂಕಿ ಇಟ್ಟರೆ ಮಳೆ ಬಿದ್ದು ಎಲ್ಲಿ ದೇಹ ಬೇಯದೇ ಚಿತೆ ಆರುವುದೋ ಎಂಬ ಚಿಂತೆ. ನೀರಾವರಿ ಪ್ರದೇಶಗಳಲ್ಲಿ ಬಡವರು ಸತ್ತರೆ ಸುಡಲು ಸ್ಮಶಾನವೇ ಇಲ್ಲ! ಹಳ್ಳದ ಮಗ್ಗುಲಲ್ಲಿ, ಕೆರೆಯ ಏರಿಯಲ್ಲಿ, ರಸ್ತೆಯ ಪಕ್ಕದಲ್ಲಿ, ಖರಾಬು ಭೂಮಿಯಲ್ಲಿ, ಇಲ್ಲಾ ಹೂತಿದ್ದ ಜಾಗದಲ್ಲಿಯೇ ಮತ್ತೆ ಮತ್ತೆ ಗುಂಡಿ ತೋಡಿ ಸಂಸ್ಕಾರ ಮಾಡುತ್ತಿರುವುದು ಸಾಮಾನ್ಯವಾಗಿದೆ. ತುಂಡು ಭೂಮಿಯೂ ಇಲ್ಲದ ಬಡ ಕುಟುಂಬಗಳಲ್ಲಿ ಯಾರಾದರೂ ಸತ್ತರೆ ಶವಸಂಸ್ಕಾರಕ್ಕೆ ಕಂಡವರನ್ನು ಬೇಡುತ್ತಾ, ಭಿಕ್ಷುಕರಂತೆ ಹಲ್ಲುಗಿಂಜುವ ಪರಿಸ್ಥಿತಿ ಏರ್ಪಟ್ಟಿದೆ. ಶವ ಸಂಸ್ಕಾರಕ್ಕೆ ಇಷ್ಟೊಂದು ಕಷ್ಟವಾಗುತ್ತಿರುವುದಂತೂ ಸಮಸ್ಯೆ ಉಲ್ಬಣಗೊಂಡಿರುವುದರ ದ್ಯೋತಕ.

ಹಳ್ಳಿಗಳಲ್ಲಿ ಎಲ್ಲರೂ ಜಮೀನು ಉಳ್ಳವರಿಲ್ಲ, ಇದ್ದರೂ ಅದು ಹತ್ತಿರ ಇರುವುದಿಲ್ಲ. ಭೂಮಿ ಇರುವವರು ಎಲ್ಲರ ಸಾವಿಗೂ ಜಾಗ ನೀಡಿ ತಮ್ಮ ಜಮೀನನ್ನು ಸ್ಮಶಾನ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಮಾಡಬೇಕು? ಕೆರೆ ಅಂಚು, ಕಾಲುವೆ ಪಕ್ಕ, ರಸ್ತೆ ಬದಿಗಳಲ್ಲಿ ಶವಗಳಿಗೆ ಬೆಂಕಿ ಇಟ್ಟು ಜನ ಮುಕ್ತರಾಗುತ್ತಿದ್ದಾರೆ.

ಪುರಾತನ ಕಾಲದಿಂದಲೂ ಸ್ಮಶಾನಕ್ಕಾಗಿ ನಿರ್ದಿಷ್ಟ ಜಾಗವನ್ನು ಮೀಸಲಿಟ್ಟು ಅದಕೊಬ್ಬ ಕಾವಲುಗಾರನನ್ನು ನೇಮಿಸಿದ್ದನ್ನು (ಸತ್ಯ ಹರಿಶ್ಚಂದ್ರನ ಕಥೆ) ಕೇಳಿದ್ದೇವೆ. ಪುರಾತನ ಪ್ರದೇಶದ ಉತ್ಖನನಗಳಲ್ಲಿ ಸಮಾಧಿಗಳನ್ನು ಕಂಡಿದ್ದೇವೆ. ಹರಪ್ಪಾ- ಮೊಹೆಂಜೊದಾರೋ ನಾಗರಿಕತೆಗಳಲ್ಲಿ, ಈಜಿಪ್‌ಟ್ನ ಪಿರಮಿಡ್‌ಗಳಲ್ಲಿ ಸಮಾಧಿ-ಸ್ಮಶಾನಗಳ ಇತಿಹಾಸಗಳು ಇವೆ. ರಾಜರ ಆಳ್ವಿಕೆಯಲ್ಲಿಯೂ ಜನರಿಗೆ ಪೂರೈಸಬೇಕಾದ ಮೂಲಭೂತ ಅತ್ಯಗತ್ಯಗಳಲ್ಲಿ ಸ್ಮಶಾನವೂ ಇದ್ದವು. ಆ ದಿನಗಳಲ್ಲಿ ಇದ್ದ ಈಗ ಯಾಕಿಲ್ಲ ಅನ್ನುವುದೇ ಯಕ್ಷಪ್ರಶ್ನೆ.

ಕಂದಾಯ ಇಲಾಖೆ ಮೇಲಿನ ಚರ್ಚೆ ವೇಳೆ ಗ್ರಾಮಕ್ಕೊಂದು ಸ್ಮಶಾನ ಇದ್ದರೆ ಸಾಕು. ಜಾತಿ, ಧರ್ಮಕ್ಕೆ ಪ್ರತ್ಯೇಕ ಸ್ಮಶಾನ ಬೇಡ ಎಂದು ದಿವಂಗತ ಪುಟ್ಟಣ್ಣಯ್ಯ ಸಲಹೆ ನೀಡಿರುವುದನ್ನು ಇಲ್ಲಿ ಸ್ಮರಿಸಬೇಕು. ದಲಿತರಿಗೆ ಮಾತ್ರ ಸ್ಮಶಾನ ಎನ್ನುವುದಾದರೆ, ನೂರಾರು ಜಾತಿಗಳಿಗೂ ಒಂದೊಂದು ನಿರ್ದಿಷ್ಟ ಸ್ಮಶಾನ ಸಿಕ್ಕರೆ…ಆಗ ಊರು ಊರಾಗುವುದಿಲ್ಲ , ಸ್ಮಶಾನದ ನಡುವೆ ಗ್ರಾಮ ಎಂಬಂತಾಗುತ್ತದೆ. ದಲಿತರಿಗೆ ಒಂದು ದೇವಸ್ಥಾನ, ಅವರಿಗೇ ಬೇರೆ ಬಾವಿ ಎನ್ನುತ್ತ ಸಮಾಜದಿಂದ ಬೇರ್ಪಡಿಸುವ ಹುನ್ನಾರದ ಬದಲು ಸಾರ್ವತ್ರಿಕವಾಗಿ ಎಲ್ಲ ಜಾತಿಯವರು ಒಂದೇ ಸ್ಮಶಾನವನ್ನು ಉಪಯೋಗಿಸುವಂತೆ ಪ್ರೇರೇಪಿಸುವುದು ಸೂಕ್ತವಲ್ಲವೇ? ಮೊದಮೊದಲು ಇರುಸುಮುರುಸು ತರಬಹುದು, ತದನಂತರ ಹೊಂದಾಣಿಕೆ ಮಾಡಿಕೊಂಡು ಎಲ್ಲರೂ ಬೆರೆಯಲು ಸಾಧ್ಯವಾಗುತ್ತದೆ. ಹಳ್ಳಿಗಳಲ್ಲಿ ಬೇರೆ ಧರ್ಮದ ಜನಾಂಗ ಇರುವುದು ಅಪರೂಪ, ಇದ್ದರೂ ಬೆರಳೆಣಿಕೆಯಷ್ಟು. ಆದುದರಿಂದ ‘ಒಂದು ಹಳ್ಳಿಗೆ ಒಂದು ಸ್ಮಶಾನ’ ಎಂದು ಯೋಜಿಸಿದರೆ ಸಾಕು. ಎಲ್ಲರೂ ಆ ಜಾಗದಲ್ಲಾದರೂ ಜಾತಿ ಭೇದವಿಲ್ಲದೆ ಐಕ್ಯಮತ್ಯದಿಂದಿರಲಿ.

ಮನೆಯ ಮುಂದೆಯೇ ಶವ ಸುಡುವ ವಾಹನ ನಿಂತು, ಮಾಡಿ ದೇಹದ ಒಂದಷ್ಟು ಬೂದಿಯನ್ನು ನೀಡಿ ಹೋಗುವ ಸಂಚಾರಿ ಬಾಡಿ ಬರ್ನರ್ ವ್ಯವಸ್ಥೆಯೂ ಮುಂದಿನ ದಿನಗಳಲ್ಲಿ ಬರಬಹುದೇನೊ! ಆದರೆ ಅಲ್ಲಿಯವರೆಗಾದರೂ ಊರ ಮಗ್ಗಲಲ್ಲಿ ಒಂದೆರಡು ಕುಂಟೆ ಜಾಗ ಕಲ್ಪಿಸಿ, ಒಂದು ಕಟ್ಟೆ ಕಟ್ಟಿಸಿ ನೆರಳು ಮಾಡಿಕೊಟ್ಟರೆ ಹೆಣ ಸುಡಲು ನೆರವಾಗುತ್ತದೆ, ಗತಿಸಿದ ಜೀವಗಳ ಆತ್ಮಕ್ಕೂ ಮುಕ್ತಿ ಸಿಕ್ಕುತ್ತದೆ.

ಸಾಯುವ ಭಯ ಇಲ್ಲದಿದ್ದರೂ ರುದ್ರಭೂಮಿ ಕೊರತೆಯ ರುದ್ರನರ್ತನ ಎಲ್ಲಾ ಹಳ್ಳಿಗಳಲ್ಲಿ ಕಾಣುತ್ತಿದೆ. ಊರಿಗೆ ಹತ್ತಾರು ಎಕರೆಗಳಷ್ಟು ಮೀಸಲಿಡುವ ಸ್ಮಶಾನವನ್ನು ಯಾರೂ ಐದು ಹತ್ತು ಗುಂಟೆಗಳಷ್ಟು ಜಾಗ ನೀಡಿ ಮಧ್ಯದಲ್ಲಿ ಒಂದಷ್ಟಗಲದ ಷೆಡ್ ಕಟ್ಟಿ ಹೆಣ ಸುಡುವ ವ್ಯವಸ್ಥೆ ಮಾಡಿದರೂ ಸಾಕು, ಚಳಿ, ಮಳೆಗಾಲವೆನ್ನದೆ ‘ಸರ್ವಋತು ಸ್ಮಶಾನ ಭಾಗ್ಯ’ದಲ್ಲಿ ನಿಶ್ಚಿಂತೆಯಿಂದ ಮರೆಯಾಗಬಹುದು.

Tags

Related Articles

Leave a Reply

Your email address will not be published. Required fields are marked *

Language
Close