Vishwavani Editorial: ಕಾರ್ಮೋಡದಂಚಿನ ಬೆಳ್ಳಿಕಿರಣ
‘ಟೇಕನ್ ಫಾರ್ ಗ್ರಾಂಟೆಡ್’ ಎನ್ನುವ ರೀತಿಯಲ್ಲಿ ಪ್ರೇಕ್ಷಕರನ್ನು ಹಗುರವಾಗಿ ಪರಿಗಣಿಸದೆ, ಚಿತ್ರ ನಿರ್ಮಾಣ ಎಂಬ ಕುಸುರಿ ಕೆಲಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡು ಉತ್ತಮ ಚಲನಚಿತ್ರವನ್ನು ಕಟ್ಟಿಕೊಟ್ಟರೆ, ಯಾವ ‘ಸ್ಟಾರ್-ಕಾಸ್ಟ್’ ಇಲ್ಲದಿದ್ದರೂ ಪ್ರೇಕ್ಷಕರು ಆ ಚಿತ್ರವನ್ನು ಹಿಡಿದೆತ್ತಿ ಗೆಲ್ಲಿಸುತ್ತಾರೆ ಎಂಬುದಕ್ಕೆ ‘ಸು ಫ್ರಮ್ ಸೋ’ ಚಿತ್ರವೇ ಸಾಕ್ಷಿ.


ಪದ್ಮಭೂಷಣ ಡಾ.ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್‌ಸ್ಟಾರ್ ಅಂಬರೀಶ್ ಮುಂತಾದ ಘಟಾನುಘಟಿಗಳು ಅಸ್ತಂಗತರಾದಾಗಿನಿಂದ ಕನ್ನಡ ಚಲನಚಿತ್ರೋದ್ಯಮಕ್ಕೆ ಮಂಕು ಬಡಿದಂತಾಗಿದೆ; ‘ನಾಯಕನಾರೋ ನಡೆಸುವನೆಲ್ಲೋ’ ಎಂಬಂತಾಗಿದೆ" ಎಂಬ ಅಳಲು ಬಹಳ ವರ್ಷಗಳಿಂದ ಕೇಳಿಬರುತ್ತಿರುವುದು ನಿಮಗೆ ಗೊತ್ತಿರುವಂಥದ್ದೇ.
ಇವರೆಲ್ಲಾ ಇದ್ದಾಗ, ಚಿತ್ರೋದ್ಯಮದೊಳಗಿನ ಸಣ್ಣ ಪುಟ್ಟ ಅಸಮಾಧಾನಗಳು/ಸಮಸ್ಯೆಗಳು ಅಲ್ಲಲ್ಲೇ ಇವರ ಸಮ್ಮುಖದಲ್ಲೇ ನಿವಾರಣೆಯಾಗಿಬಿಡುತ್ತಿದ್ದವೇ ಹೊರತು, ಈಗಿನಂತೆ ‘ಹಾದಿರಂಪ-ಬೀದಿರಂಪ’ದ ಸ್ವರೂಪವನ್ನು ಪಡೆಯುತ್ತಿರಲಿಲ್ಲ ಎಂಬುದು ಉದ್ಯಮದ ಬಹುತೇಕರ ಅಭಿಪ್ರಾಯ.
ಒಂದು ಮಟ್ಟಿಗೆ ಇದು ನಿಜ ಕೂಡ. ಮತ್ತೊಂದೆಡೆ, ಪ್ರೇಕ್ಷಕರನ್ನು ಚಿತ್ರಮಂದಿರಗಳೆಡೆಗೆ ಸೆಳೆಯ ಬಲ್ಲಂಥ ಚಿತ್ರಗಳು ಈಗ ಬರುತ್ತಿಲ್ಲ, ಅಂಥ ‘ಜಾದೂ’ ಕಣ್ಮರೆಯಾಗಿದೆ ಎಂಬ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿದ್ದುದುಂಟು. ‘ಕೆಜಿಎಫ್’, ‘ಕಾಂತಾರ’ ಮುಂತಾದ ಚಿತ್ರಗಳು ಬಂದು ಹೋದ ನಂತರ, ಅಂಥದೊಂದು ಸಂಭ್ರಮ-ಸಡಗರಗಳು ಗಾಂಧಿನಗರದಿಂದ ಮಾಯವಾಗಿದ್ದವು.
ಇದನ್ನೂ ಓದಿ:Vishwavani Editorial: ಇದು ಹತಾಶೆಯ ಪರಮಾವಧಿ
ಆದರೆ ಕೆಲ ದಿನದ ಹಿಂದೆ ಬಿಡುಗಡೆಯಾಗಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ರಂಜಿಸುತ್ತಿರುವ ‘ಸು ಫ್ರಮ್ ಸೋ’ ಚಲನಚಿತ್ರವು ಕಾರ್ಮೋಡದಂಚಿನ ಬೆಳ್ಳಿಕಿರಣವಾಗಿ ಹೊಳೆಯುತ್ತಿದೆ ಎನ್ನಲಡ್ಡಿ ಯಿಲ್ಲ. ‘ಟೇಕನ್ ಫಾರ್ ಗ್ರಾಂಟೆಡ್’ ಎನ್ನುವ ರೀತಿಯಲ್ಲಿ ಪ್ರೇಕ್ಷಕರನ್ನು ಹಗುರವಾಗಿ ಪರಿಗಣಿಸದೆ, ಚಿತ್ರನಿರ್ಮಾಣ ಎಂಬ ಕುಸುರಿ ಕೆಲಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡು ಉತ್ತಮ ಚಲನಚಿತ್ರ ವನ್ನು ಕಟ್ಟಿಕೊಟ್ಟರೆ, ಯಾವ ‘ಸ್ಟಾರ್-ಕಾಸ್ಟ್’ ಇಲ್ಲದಿದ್ದರೂ ಪ್ರೇಕ್ಷಕರು ಆ ಚಿತ್ರವನ್ನು ಹಿಡಿದೆತ್ತಿ ಗೆಲ್ಲಿಸುತ್ತಾರೆ ಎಂಬುದಕ್ಕೆ ‘ಸು ಫ್ರಮ್ ಸೋ’ ಚಿತ್ರವೇ ಸಾಕ್ಷಿ.
ಕಾರಣ ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ ಮತ್ತು ಒಂದಿಬ್ಬರನ್ನು ಹೊರತುಪಡಿಸಿದರೆ ಇದರಲ್ಲಿರು ವುದು ಹೊಸಮುಖಗಳೇ. ಒಂದು ಗಟ್ಟಿಕಥೆಯನ್ನು ಆರಿಸಿಕೊಂಡು, ಅದರ ಸುತ್ತ ಸಮರ್ಥನೀಯ ಚಿತ್ರಕಥೆಯನ್ನು ಹೆಣೆದು, ಕಲಾವಿದರ ಕುಸುರಿ ಕೆಲಸದೊಂದಿಗೆ ಬೆಳ್ಳಿತೆರೆಯಲ್ಲಿ ಬಿಂಬಿಸಿದರೆ, ಜನರು ಅದನ್ನು ಒಪ್ಪುತ್ತಾರೆ, ಅಪ್ಪುತ್ತಾರೆ ಎಂಬುದಕ್ಕೆ ಈ ಚಿತ್ರದ ಯಶಸ್ಸೇ ಸಾಕ್ಷಿ. ನಮ್ಮ ಚಿತ್ರೋದ್ಯಮಿಗಳು ಈ ಸಾಧನೆಯನ್ನು ಮೇಲ್ಪಂಕ್ತಿಯಾಗಿ ಪರಿಗಣಿಸಲಿ.