ನನ್ನ ಅವಧಿಯೊಳಗೆ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಿಯೇ ತೀರುತ್ತೇನೆ

Posted In : ಸಂಗಮ, ಸಂಪುಟ

ಇಂದು ಕನ್ನಡ ಭಾಷೆಯ ಸ್ಥಿತಿ ಡೋಲಾಯಮಾನವಾಗಿದೆ. ಇಲ್ಲಿಯೇ ಹುಟ್ಟಿ ಬೆಳೆದವರಿಗೂ ಕನ್ನಡ ಭಾಷೆ ಬಗ್ಗೆ ಪ್ರೀತಿ ಇಲ್ಲ. ಉದ್ಯೋಗಕ್ಕೆ ನಮ್ಮ ರಾಜ್ಯ ಬೇಕು, ಬೆಳೆಯಲು ಈ ಜಾಗ ಬೇಕು. ಆದರೆ, ಭಾಷೆ ಮಾತ್ರ ಬೇಡ ಎನ್ನುವ ಜನರೇ ರಾಜ್ಯದಲ್ಲಿ ತುಂಬಿರುವುದರಿಂದ ಕನ್ನಡ ಕಳೆದು ಹೋಗುತ್ತಿದೆ. ಇದಕ್ಕೆ ಎಂದಿಗೂ ಅವಕಾಶ ನೀಡಬಾರದು. ಇಲ್ಲಿ ಇರುವವರೆಗೂ ನಮ್ಮ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಇದಕ್ಕಾಗಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಲ್ಲ ಇಲಾಖೆಗಳಿಗೂ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ನನ್ನ ಅವಧಿಯೊಳಗೆ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಿಯೇ ತೀರುತ್ತೇನೆ. ಇದಕ್ಕೆ ಬರುವ ಎಲ್ಲ ಅಡ್ಡಿಗಳನ್ನು ಜಯಿಸಿ, ಕನ್ನಡ ಉಳಿವಿಗೆ ವರದಿ ಅನುಷ್ಠಾನ ಮಾಡುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ‘ವಿಶ್ವವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

* ರಾಜ್ಯದಲ್ಲಿರುವ ಬಹುತೇಕ ಇಲಾಖೆಗಳು ಕನ್ನಡ ಕಡೆಗಣಿಸುತ್ತಿವೆ, ಇದಕ್ಕೆ ನಿಮ್ಮ ಇಲಾಖೆಯಿಂದ ತೆಗೆದುಕೊಂಡ ಕ್ರಮವೇನು?
ನಾನು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ದಿನದಿಂದ ಈವರೆಗೂ ಒಂದು ದಿನವೂ ವ್ಯರ್ಥ ಮಾಡದೇ ಕೇಂದ್ರ ಹಾಗೂ ರಾಜ್ಯ ಸರಕಾರದ ಸ್ವಾಮ್ಯದಲ್ಲಿರುವ ಕಾರ್ಖಾನೆ, ಸಂಸ್ಥೆಗಳಿಗೆ ದಿಢೀರ್ ಭೇಟಿ ನೀಡಿ,ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ. 15 ಜಿಲ್ಲೆಗಳಲ್ಲಿ 17ಕ್ಕೂ ಹೆಚ್ಚು ಸರಕಾರಿ ಸಂಸ್ಥೆಗಳಿಗೆ ತೆರಳಿದ್ದೇನೆ. ಆದರೆ, ಕೇವಲ ಒಂದೋ ಎರಡೋ ಇಲಾಖೆಗಳು ಮಾತ್ರ ಕನ್ನಡ ಬಳಕೆಗೆ ಹೆಚ್ಚು ಆದ್ಯತೆ ನೀಡಿವೆ. ಅದೂ ಸಂಪೂರ್ಣವಾಗಿ ಯಾವ ಇಲಾಖೆಯೂ ಅಳವಡಿಸಿಕೊಂಡಿಲ್ಲ. ಆದರೂ, ಉಳಿದ ಇಲಾಖೆಗಳಿಗೆ ಹೋಲಿಸಿದರೆ ಕೆಲವು ತಕ್ಕಮಟ್ಟಿಗೆ ಕನ್ನಡಕ್ಕೆ ಪ್ರಾಧಾನ್ಯತೆ ನೀಡಿವೆ. ಮಿಕ್ಕೆಲ್ಲಾ ಇಲಾಖೆಗಳಲ್ಲಿ ಶೇ.90ರಷ್ಟು ಕನ್ನಡವನ್ನು ತಾತ್ಸಾರ ಮನೋಭಾವದಿಂದ ನೋಡಲಾಗಿದೆ.

ಸ್ಥಳೀಯರಿಗೆ ಆದ್ಯತೆ ನೀಡಿಲ್ಲ, ನಾಮಫಲಕಗಳೆಲ್ಲವೂ ಬಹುತೇಕ ಇಂಗ್ಲಿಷ್, ಹಿಂದಿಯಲ್ಲಿಯೇ ಬರೆಸಲಾಗಿದೆ. ಕನಿಷ್ಠ ಪಕ್ಷ ಮಾತನಾಡುವುದರಲ್ಲೂ ಕನ್ನಡ ಇಲ್ಲದೇ ಇರುವುದು ತುಂಬಾ ಬೇಸರ ತರಿಸುತ್ತದೆ. ನಮ್ಮಲ್ಲಿ ಕನ್ನಡದ ಬಗ್ಗೆ ಇಚ್ಛಾಶಕ್ತಿ ಕೊರತೆ ಇದೆ. ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಸಂಸತ್ ಭವನದಲ್ಲಿ ಹಿಂದಿಯಲ್ಲಿಯೇ ಮಾತನಾಡುತ್ತಾರೆ. ಇನ್ನು, ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಕನ್ನಡವೆಂದರೆ ಅಸಡ್ಡೆ. ನೌಕರರು ಕನ್ನಡ ಮಾತನಾಡಿದರೆ ಕೀಳರಿಮೆ ಎಂಬ ಮನೋಭಾವ ಬೆಳೆಸಿಕೊಂಡಿದ್ದಾರೆ. ಇದು ನಮ್ಮ ರಾಜ್ಯದ ಶೋಚನಾ ಸ್ಥಿತಿ. ಕೆಲ ಇಲಾಖೆಗಳ ವೆಬ್‌ಸೈಟ್ ಕನ್ನಡದಲ್ಲಿಯೇ ಇಲ್ಲದಿರುವುದು ಇನ್ನೂ ಬೇಸರದ ಸಂಗತಿ. ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್ ಬೇರೆ ಭಾಷೆಗಳಲ್ಲಿ ಲಭ್ಯ. ಆದರೆ ಕನ್ನಡದಲ್ಲಿಯೇ ಇಲ್ಲ. ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದೇನೆ.

* ಈವರೆಗೂ ಎಷ್ಟು ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸಿದ್ದೀರಿ?
ಮೊದಲೇ ಹೇಳಿದಂತೆ 17ಕ್ಕೂ ಹೆಚ್ಚು ಇಲಾಖೆಗಳನ್ನು ಪರಿಶೀಲನೆ ನಡೆಸಿದ್ದೇನೆ. ಬ್ಯಾಂಕ್‌ಗಳಿಗೂ ಭೇಟಿ ನೀಡಿದ್ದೇನೆ. ಆದರೆ, ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಕನ್ನಡವನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಟ್ಟಿವೆ. ಹೀಗಾಗಿ ಎಲ್ಲ ಬ್ಯಾಂಕ್‌ಗಳಿಗೆ ನೋಟಿಸ್ ನೀಡಿದ್ದೇನೆ. ಇನ್ನೊಂದು ತಿಂಗಳಲ್ಲಿ ತ್ರಿಭಾಷಾ ಸೂತ್ರದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಎಚ್ಚರಕೆ ನೀಡಿದ್ದೇನೆ. ಇಲ್ಲದಿದ್ದರೆ ದಂಡ ವಿಧಿಸಲು ಸರಕಾರಕ್ಕೆ ಶಿಫಾರಸು ಮಾಡುವುದಾಗಿಯೂ ಕಟ್ಟೆಚ್ಚರ ರವಾನಿಸಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಹಣಕಾಸು ಇಲಾಖೆಯಲ್ಲಿನ ಐಎಎಸ್ ಅಧಿಕಾರಿಯೊಬ್ಬರು ಕನ್ನಡದ ಬಗ್ಗೆ ಅಸಡ್ಡೆ ಮನೋಭಾವ ಹೊಂದಿದ್ದರು. ಇವರ ಇಲಾಖೆಗೆ ಭೇಟಿ ನೀಡಿದಾಗಲೂ ಸಹ ಕನ್ನಡ ಅಳವಡಿಕೆ ಸಾಧ್ಯವಿಲ್ಲ ಎಂಬಂತೆ ಉತ್ತರಿಸಿದ್ದರು. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಿದೆವು. ಅವರು ಸಹ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆ ಅಧಿಕಾರಿಯನ್ನು ಕೇಂದ್ರ ಸರಕಾರದ ಸೇವೆಗೆ ವರ್ಗಾಹಿಸುವ ಮೂಲಕ ಶಿಕ್ಷೆ ವಿಧಿಸಿದರು. ಇದು ನಮ್ಮ ಇಲಾಖೆಯ ಪರಿಶ್ರಮದಿಂದ ಸಾಧ್ಯವಾಯಿತು. ಯಾವುದೇ ಇಲಾಖೆ ಅಧಿಕಾರಿಗಳು ಕನ್ನಡ ಅನುಷ್ಠಾನ ಆಗುವುದಿಲ್ಲ ಎಂದು ಹೇಳಿದರೆ ಮೊದಲ ಬಾರಿಗೆ ನೋಟಿಸ್ ನೀಡುತ್ತೇವೆ, ಎರಡನೆ ಬಾರಿ ಎಚ್ಚರಿಕೆ, ಇದಕ್ಕೂ ಜಗ್ಗದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸುವಂತೆ ಸಿಎಂಗೆ ಶಿಫಾರಸು ಮಾಡುತ್ತೇವೆ. ನಮ್ಮ ಶಿಫಾರಸುಗಳನ್ನು ಸರಕಾರ ಗಂಭೀರವಾಗಿಯೇ ಪರಿಗಣಿಸುತ್ತಿದೆ. ಹೀಗಾಗಿ ಐಎಎಸ್, ಐಪಿಎಸ್ ಅಧಿಕಾರಿಗಳು ನಮ್ಮ ಪ್ರಾಧಿಕಾರವನ್ನು ಸಹ ಕ್ಷುಲ್ಲಕವಾಗಿ ತೆಗೆದುಕೊಳ್ಳಲು ಹೆದರುತ್ತಾರೆ.

* ತ್ರಿಭಾಷಾ ಸೂತ್ರ ಅನುಸರಿಸಬೇಕು ಎನ್ನುವ ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಅನುಷ್ಠಾನ ಮಾಡಲು ವಿಳಂಬವಾಗುತ್ತಿರಲು ಕಾರಣವೇನು? ಯಾವಾಗ ಜಾರಿಗೆ ತರುತ್ತೀರಿ?
ಸರೋಜಿನಿ ಮಹಿಷಿ ವರದಿ ನೀಡಿ 30 ವರ್ಷ ಮೀರಿದೆ. ಕಾಲ ಬದಲಾದಂತೆ ವರದಿಗಳು ಕೂಡ ಪರಿಷ್ಕೃತವಾಗುತ್ತಿರಬೇಕು. ಹಾಗೆಯೇ ಸರೋಜಿನಿ ಮಹಿಷಿ ವರದಿ ಪರಿಷ್ಕೃರಣೆಯಾಗಬೇಕಿತ್ತು. ಈಗ ಆ ಕೆಲಸವೂ ಆಗಿದೆ. ಮೂರು ತಿಂಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದ್ದೇವೆ. ಅವರು ಅಷ್ಟೇ ಆಸ್ಥೆಯಿಂದ ವರದಿ ಸ್ವೀಕರಿಸಿ, ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದಾರೆ. ನನ್ನ ಅಧ್ಯಕ್ಷ ಅವಧಿ ಪೂರ್ಣಗೊಳ್ಳುವ ಒಳಗಾಗಿ ಈ ವರದಿಯನ್ನು ಜಾರಿಗೆ ತರಲಿದ್ದೇನೆ. ಹಿಂದಿನ ಅಧ್ಯಕ್ಷರು ವರದಿ ಅನುಷ್ಠಾನಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಕಾರ್ಯಗತವಾಗುವಲ್ಲಿ ವಿಫಲರಾದರು. ಆದರೆ, ನಾನು ಹಾಗೆಯೇ ಅವಧಿ ಪೂರ್ಣಗೊಳಿಸುವುದಿಲ್ಲ. ಈ ವರದಿಯನ್ನು ಅನುಷ್ಠಾನ ಮಾಡಿಲಿದ್ದೇನೆ. ವರದಿ ಪರಿಷ್ಕರಣೆಗೆ ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳಲಾಯಿತು. ಕೆಲವರ ಅಭಿಪ್ರಾಯ ಸಂಗ್ರಹಿಸಿ, ಈಗಿನ ಕಾಲಕ್ಕೆ ತಕ್ಕಂತೆ ಸಿದ್ಧಪಡಿಸಲು ತಡವಾಯಿತು.

* ಸರೋಜಿನಿ ಮಹಿಷಿ ಪರಿಷ್ಕೃತ ವರದಿಯ ಪ್ರಮುಖ ಶಿಫಾರಸುಗಳು ಏನೇನು?
ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎನ್ನುವುದೇ ಈ ವರದಿಯ ಮೂಲ ಸಾರಾಂಶ. ಇತ್ತೀಚಿನ ದಿನಗಳಲ್ಲಿ ಕನ್ನಡದ ಬಗ್ಗೆ ಇರುವ ತಾತ್ಸಾರ ಮನೋಭಾವ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಕಂಪನಿ ಹಾಗೂ ಸಂಸ್ಥೆಗಳಲ್ಲಿ (ಖಾಸಗಿ ಹಾಗೂ ಸರಕಾರಿ) ಕನ್ನಡಕ್ಕೆ ಮೊದಲ ಪ್ರಾಧಾನ್ಯತೆ ನೀಡಬೇಕು. ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎನ್ನುವುದು. ಮತ್ತೊಂದು ಪ್ರಮುಖ ವಿಚಾರವೆಂದರೆ ಐಟಿ-ಬಿಟಿ ಹಾಗೂ ಖಾಸಗಿ ಕಂಪನಿಗಳೂ ಸಹ ಈ ವರದಿ ವ್ಯಾಪ್ತಿಗೆ ಬರಬೇಕು ಎಂಬ ವಿಚಾರ ಅಳವಡಿಸಲಾಗಿದೆ. ಸರೋಜಿನಿ ಮಹಿಷಿ ಅವರು ವರದಿ ನೀಡಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಐಟಿ ಕಂಪನಿಗಳೇ ಇರಲಿಲ್ಲ. ಹೀಗಾಗಿ ಈ ಕಂಪನಿಗಳನ್ನು ವರದಿಯಿಂದ ಹೊರಗಿಡಲಾಗಿತ್ತು. ಈಗ ಬೆಂಗಳೂರನ್ನು ಆಳುತ್ತಿರುವುದೇ ಐಟಿ ಕ್ಷೇತ್ರ. ಸರಕಾರಿ ಸಂಸ್ಥೆಗಳೊಂದಿಗೆ ಐಟಿಯಲ್ಲಿಯೂ ಸ್ತಳೀಯರಿಗೆ ಉದ್ಯೋಗ ಹಾಗೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದನ್ನು ಸೇರಿಸಲಾಗಿದೆ. ಐಟಿಯಲ್ಲಿ ಬಹುತೇಕ ಹೊರರಾಜ್ಯದವರೇ ಹೆಚ್ಚು ಉದ್ಯೋಗ ಪಡೆದುಕೊಂಡು, ಕನ್ನಡಿಗರಿಗೆ ಕೆಲಸವನ್ನೇ ನೀಡದೇ ಕಡಿಗಣಿಸಲಾಗುತ್ತಿದೆ. ಈ ಎಲ್ಲ ದೃಷ್ಠಿಯಿಂದ ಐಟಿ ಕ್ಷೇತ್ರವನ್ನೂ ಸೇರಿಸಿದ್ದೇವೆ. ವರದಿ ನೀಡಿ ಮೂರು ತಿಂಗಳಾಗಿದ್ದು, ಶೀಘ್ರವೇ ಜಾರಿಯಾಗುವ ಆಶಾಭಾವನೆ ಇದೆ.

* ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ಬಗ್ಗೆ ನೋಟಿಸ್ ಜಾರಿ ಮಾಡಿದಾಗ್ಯೂ, ಇನ್ನೂ ನಾಮಫಲಕಗಳು ಹಿಂದಿಯಲ್ಲಿಯೇ ರಾರಾಜಿಸುತ್ತಿವೆಯಲ್ಲ?
ಕೇಂದ್ರ ಹಾಗೂ ರಾಜ್ಯ ಸರಕಾರ ಸಹಭಾಗಿತ್ವದಲ್ಲಿ ನಮ್ಮ ಮೆಟ್ರೋ ನಿರ್ಮಿಸಿದ್ದರೂ, ನಮ್ಮ ಮೆಟ್ರೋ ಮೇಲೆ ರಾಜ್ಯಕ್ಕೆ ಹೆಚ್ಚು ಅಧಿಕಾರವಿರುವುದು. ಹೀಗಾಗಿ ಹಿಂದಿ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಗಮನ ಸೆಳೆಯಲು ಸಾಕಷ್ಟು ಹೋರಾಟ ನಡೆಸಿದೆವು. ಇದಕ್ಕೆ ರಾಜ್ಯದೆಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಹಿಂದಿ ಬಳಕೆ ಮಾಡುವುದಿಲ್ಲ ಎಂದು ಖಡಕ್ಕಾಗಿಯೇ ಉತ್ತರಿಸಿದರು. ಇದಕ್ಕೆ ಕೇಂದ್ರ ಸರಕಾರ ಕೂಡ ಸುಮ್ಮನೆ ಇರುವ ಮೂಲಕ ಸಮ್ಮತಿ ಸೂಚಿಸಿದಂತೆ ತೋರುತ್ತದೆ. ಹೀಗಾಗಿ ಬಹುತೇಕ ನಾಮಫಲಕಗಳನ್ನು ತೆರವು ಮಾಡಿದ್ದಾರೆ. ಆದರೆ, ಎಲ್ಲ ಫಲಕಗಳನ್ನು ತೆರವು ಮಾಡಲು ಕಾಲಾವಕಾಶ ಬೇಕಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ತೆಗೆಯುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಉದ್ಯೋಗದಲ್ಲೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುತ್ತೇವೆ ಎಂದಿದ್ದಾರೆ.

* ನಿಮ್ಮ ಹೋರಾಟಕ್ಕೆ ಸರಕಾರ ಸ್ಪಂದನೆ ಸಿಗುತ್ತಿದೆಯೇ?
ಕನ್ನಡ ಭಾಷೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್ಚು ಒಲವು ಇದೆ. ಹೀಗಾಗಿ ನನ್ನೆಲ್ಲಾ ಶಿಫಾರಸುಗಳಿಗೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇದೇ ಒಲವು ಇತರೆ ಸಚಿವರಿಗೂ ಇದ್ದರೆ ಇನ್ನೂ ಒಳ್ಳೆಯದು. ಏಕೆಂದರೆ ಅವರವರ ಇಲಾಖೆಗಳ ವ್ಯವಹಾರವನ್ನು ಕನ್ನಡದಲ್ಲಿಯೇ ಮಾಡಬೇಕು ಎಂದು ಸಂಬಂಧಪಟ್ಟ ಸಚಿವರು ಗಂಭೀರವಾಗಿ ಆದೇಶ ನೀಡಿದರೆ ಅಧಿಕಾರಿಗಳು ಪಾಲಿಸಲೇಬೇಕು. ಆಗ ನಮ್ಮ ಪ್ರಾಧಿಕಾರ ಎಲ್ಲ ಇಲಾಖೆಗೂ ಭೇಟಿ ನೀಡುವ ಪ್ರಮೇಯವೇ ಇರುವುದಿಲ್ಲ. ಖಾಸಗಿಯವರನ್ನು ದಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗಬಹುದು. ಮೊದಲು ಸರಕಾರದ ಸ್ವಾಮ್ಯದಲ್ಲಿರುವ ಸಂಸ್ಥೆಗಳು ಪಾಲಿಸಿದರೆ ಖಾಸಗಿಯವರನ್ನು ದಾರಿಗೆ ತರುವುದು ಸುಲಭದ ಕೆಲಸ.

* ನಿಮ್ಮ ಪ್ರಾಧಿಕಾರದ ಮುಂದಿನ ನಡೆ ಏನು?
ಅಧಿಕಾರ ವಹಿಸಿಕೊಂಡ ನಂತರ ಸಾಕಷ್ಟು ಇಲಾಖೆಗಳನ್ನು ಪರಿಶೀಲನೆ ನಡೆಸುತ್ತಾ ಬಂದಿದ್ದೇವೆ. ಮುಂದೆಯೂ ಈ ಕೆಲಸ ನಿಲ್ಲುವುದಿಲ್ಲ. ಆದರೆ, ನನ್ನ ಬಯಕೆ ಏನೆಂದರೆ ಎಲ್ಲ ಇಲಾಖೆಯನ್ನೂ ಕನ್ನಡಮಯ ಮಾಡಬೇಕು ಎನ್ನುವುದು. ಕೆಲವರು ಈ ಕೆಲಸ ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಸರಕಾರ ಮನಸ್ಸು ಮಾಡಿದರೆ ಖಂಡಿತ ಸಾಧ್ಯ. ಸರೋಜಿನಿ ಮಹಿಷಿ ವರದಿಯನ್ನು ಆದಷ್ಟು ಬೇಗ ಅನುಷ್ಠಾನ ಮಾಡಿದರೆ ಕಾನೂನಿನ ಬಲ ಸಿಗಲಿದೆ. ಕಾನೂನನ್ನು ಮುಂದಿಟ್ಟುಕೊಂಡು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳನ್ನು ದಾರಿಗೆ ತರಬಹುದು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಗಾಗ್ಗೆ ವರದಿ ಬಗ್ಗೆ ಜ್ಞಾಪಿಸುವ ಕೆಲಸ ಮಾಡುತ್ತಿದ್ದೇನೆ.  ದುರಾದೃಷ್ಟವೆಂದರೆ ನಮ್ಮ ರಾಜ್ಯದ ಜನರಿಗೆ ಕನ್ನಡದ ಬಗ್ಗೆ ಪ್ರೀತಿ ಇಲ್ಲದೇ ಇರುವುದು. ನಮ್ಮ ಭಾಷೆ ಎಂಬ ಒಲವು ಇದ್ದರೆ ಮಾತ್ರ ಕನ್ನಡ ಅನುಷ್ಠಾನ ಸಾಧ್ಯ. ಕಾನೂನು ಒಂದೆಡೆಯಾದರೆ, ನಮ್ಮ ಆಸಕ್ತಿಯೂ ಮುಖ್ಯ. ಈ ಎರಡೂ ಸಮಬಲವಿದ್ದರೆ ಕನ್ನಡಕ್ಕೆ ಯಾವ ಗಂಡಾಂತರವೂ ಇರುವುದಿಲ್ಲ.

-ರತ್ನ ಎಸ್. ಗೌಡ

 

Leave a Reply

Your email address will not be published. Required fields are marked *

15 + 17 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top