About Us Advertise with us Be a Reporter E-Paper

Breaking Newsದೇಶಪ್ರಚಲಿತ

ಸಲಿಂಗ ಕಾಮ ಅಪರಾಧ: ಸುಪ್ರೀಂ ಕೋರ್ಟ್‌ನಿಂದ ನಾಳೆ ತೀರ್ಪು

ದೆಹಲಿ: ಸಲಿಂಗ ಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377ರ ಸಾಂವಿಧಾನಿಕ ಮಾನ್ಯತೆ ಕುರಿತು ಸುದೀರ್ಘ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನಾಳೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಇಬ್ಬರು ವಯಸ್ಕರು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆಯನ್ನು ಅಪರಾಧವಲ್ಲವೆಂದು ಘೋಷಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ವಿಶೇಷ ಸಾಂವಿಧಾನಿಕ ಪೀಠ, ಜುಲೈ 17 ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.
ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಯಾರಾದರೂ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧವಾಗಿದ್ದು, ಅಂಥ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳ ಜೈಲು ಹಾಗೂ ದಂಡ ವಿಧಿಸಬಹುದು ಎಂದು ಈ ಸೆಕ್ಷನ್ ಹೇಳುತ್ತದೆ.

ಸೆಕ್ಷನ್ 377ರ ರದ್ದತಿ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡುವುದಾಗಿ ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. ಆದರೆ, ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ಗೊಂದಲ ಉಂಟಾಗಬಹುದು ಎಂಬ ಕಳವಳ ಸರಕಾರದ್ದಾಗಿತ್ತು.

ಈ ಹಿಂದೆ ಅಂದರೆ 2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗ ಕಾಮವು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಆದರೆ, 2014ರಲ್ಲಿ ಸುಪ್ರೀಂ ಕೋರ್ಟ್ ದೆಹಲ್ಲಿ ಹೈಕೋರ್ಟ್ ತೀರ್ಪನ್ನು ವಜಾ ಮಾಡಿ, ಸಲಿಂಗ ಕಾಮವನ್ನು ಅಪರಾಧವೆಂದು ಘೋಷಿಸಿತ್ತು. ನಂತರ, ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಐವರು ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ತೀರ್ಪು ಗುರುವಾರ ಪ್ರಕಟವಾಗಲಿದೆ.

Tags

Related Articles

Leave a Reply

Your email address will not be published. Required fields are marked *

Language
Close