ವಿಶ್ವವಾಣಿ

ಇಂದಿನಿಂದ ಪತಿಗಾಗಿ ಹುಡುಕಾಟ ಶುರು..!

ನ್ಯೂಸ್ ಆ್ಯಂಕರ್ ಆಗಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಶೀತಲ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಹಿರಿತೆರೆಯಲ್ಲಿ ಅಲ್ಲಲ್ಲಿ ಕಂಡು ಮರೆಯಾಗುತ್ತಿದ್ದರು. ‘ಉಳಿದವರು ಕಂಡಂತೆ’, ‘ಕೆಂಡಸಂಪಿಗೆ’ ಮುಂತಾದ ಚಿತ್ರಗಳಲ್ಲಿ ಸಹಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶೀತಲ್, ‘ಪತಿಬೇಕು ಡಾಟ್ ಕಾಮ್’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗುತ್ತಿದ್ದಾರೆ.

ತನ್ನ ವಿಭಿನ್ನ ಟೈಟಲ್, ಟ್ರೇಲರ್ ಮತ್ತು ಹಾಡಿನಿಂದ ಸುದ್ದಿ ಮಾಡಿರುವ ‘ಪತಿ ಬೇಕು ಡಾಟ್ ಕಾಮ್’ ಚಿತ್ರ ಇಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ‘ಪತಿಬೇಕು ಡಾಟ್ ಕಾಮ್’ ಚಿತ್ರದ ಕಥೆ ಒಬ್ಬ ಮಧ್ಯಮ ವರ್ಗದ ಹುಡುಗಿಯ ಮೇಲೆ ನಿಂತಿದೆ. ಮಿಡಲ್ ಕ್ಲಾಸ್ ಮನೆಗಳಲ್ಲಿ ಹೆಣ್ಣುಮಕ್ಕಳ ಮದುವೆ ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇದೊಂದು ಫ್ಯಾಮಿಲಿ ಎಂಟರ್ಟೈನಿಂಗ್ ಸಿನಿಮಾವಾಗಿದ್ದು ಪ್ರತಿಯೊಬ್ಬ ಹೆಣ್ಣು ಮಗಳಿಗೆ ಕನೆಕ್ಟ್ ಆಗುತ್ತದೆ. ವಯಸ್ಸು 30 ದಾಟಿದರೂ ಮದುವೆ ಆಗಲಿಲ್ಲವೆಂದರೆ ಸಮಾಜ ಹೆಣ್ಣನ್ನು ಹೇಗೆ ನೋಡುತ್ತದೆ, ಗಂಡಿನ ಬಯಕೆಗಳನ್ನು ಕೇಳಿ-ನೋಡಿ ಆಕೆ ಹೇಗೆ ನೋವಿಗೀಡಾಗುತ್ತಾಳೆ ಎನ್ನುವುದನ್ನು ಚಿತ್ರದಲ್ಲಿ ಎತ್ತಿ ತೋರಿಸಲಾಗಿದೆ.

ಬೆಳಗಾಗುವ ಮುನ್ನ ಟಿಫನ್ ಬಾಕ್ಸ್ ಕಟ್ಟಿ ಗಾರ್ಮೆಂಟ್ಸ್ ಹೊರಡುವ, ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರು, ಮಾತು ಆಡದೇ ಸಮಾಜದಲ್ಲಿ ನಗುತ್ತಲೇ ಸಾಗುವ ಎಲ್ಲ ಹೆಣ್ಣುಮಕ್ಕಳಿಗೆ ಈ ಸಿನಿಮಾ ಖುಷಿ ನೀಡುತ್ತದೆ. ಈ ವಿಷಯ ಅನೇಕ ಕುಟುಂಬಗಳಿಗೆ ಹತ್ತಿರ ಆಗಲಿದೆ ಎನ್ನುವುದು ಚಿತ್ರತಂಡದ ವಿಶ್ವಾಸ.

ಸಮಸ್ಯೆಯಿಲ್ಲದ ಹೆಣ್ಣಿಲ್ಲ, ಅದುವೇ ನಮ್ಮ ಸಿನಿಮಾ

‘ಪ್ರಸ್ತುತ ಸಮಾಜದಲ್ಲಿ ಯಾವ ಹೆಣ್ಣು ಕೂಡ ನೋವಿಲ್ಲದೇ ಬದುಕುತ್ತಿದ್ದಾಳೆ ಎನ್ನಲಾಗುವುದಿಲ್ಲ. ಪ್ರತಿಯೊಬ್ಬ ಹೆಣ್ಣಿಗೂ ಒಂದಲ್ಲಾ ಒಂದು ರೀತಿಯಲ್ಲಿ ನೋವು ಬೆನ್ನತ್ತಿರುತ್ತದೆ. ಅದರಲ್ಲೂ ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಬಹಳಷ್ಟು ರೀತಿಯಲ್ಲಿ ಸಮಸ್ಯೆಗಳು ಸುತ್ತಿಕೊಂಡಿರುತ್ತವೆ. ಅಂತಹ ಸಮಸ್ಯೆ, ನೋವಿನಲ್ಲಿ ಒಂದನ್ನು ಹೆಕ್ಕಿ ಸಮಾಜದ ಮುಂದೆ ತೋರಿಸುವ ಪ್ರಯತ್ನ ನಮ್ಮ ಈ ‘ಪತಿಬೇಕು ಡಾಟ್ ಕಾಮ್’ ಸಿನಿಮಾ. ಇದು ಬಹಳಷ್ಟು ಕುಟುಂಬದ ಹೆಣ್ಣು ಮಕ್ಕಳಿಗೆ ಹೃದಯಸ್ಪರ್ಶಿ ಸಿನಿಮಾ ಆಗಲಿದೆ ಎನ್ನುವ ನಂಬಿಕೆ ಇದೆ. ಮದುವೆಗಾಗಿ ಗಂಡು ಹುಡುಕುವ ಪ್ರಸಂಗಗಳು ಇಂದಿನ ಯುವ ಜನಾಂಗಕ್ಕೆ ಹತ್ತಿರವಾಗಲಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕರಾದ ರಾಕೇಶ್.

ಮದುವೆಯೇ ಅಂತಿಮ ಎನ್ನುವ ಭಾವನೆಯವರು ನೋಡಲೇಬೇಕಾದ ಸಿನಿಮಾ

‘ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಮಾಡಿದ ಬಳಿಕ ಕೆಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೆ. ಆದರೆ ಇಷ್ಟು ಬೇಗ ಇಂತಹ ಅದ್ಭುತವಾದ ಮಹಿಳಾ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಲಭಿಸುತ್ತದೆ ಎಂದುಕೊಂಡಿರಲಿಲ್ಲ. ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ. ‘ಪತಿಬೇಕು ಡಾಟ್ ಕಾಮ್’ ಸಿನಿಮಾ ಟೈಟಲ್ ಕೇಳುಗರಿಗೆ ನಗು ತರುತ್ತದೆ. ಆದರೆ ಸಿನಿಮಾದಲ್ಲಿ ಒಂದು ಉತ್ತಮ ಸಂದೇಶ ಇದೆ. ಪ್ರತಿಯೊಂದು ಮನೆಯಲ್ಲೂ , ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬ ಅಂಶ ಪ್ರಮುಖವಾದದ್ದು. ಇದರ ಹಿನ್ನೆಲೆಯಲ್ಲಿ ಕಥೆ ಸಿದ್ಧವಾಗಿದ್ದು, ಮದುವೆಯೇ ಅಂತಿಮ ಎಂಬ ಭಾವನೆ ಹೊಂದಿರುವ ಯುವಕ ಅಥವಾ ಯುವತಿಯರು ನೋಡಲೇಬೇಕು.

ಅಂದ ಹಾಗೆ ಈ ಚಿತ್ರಕ್ಕೆ ಟೈಟಲ್ ಯಾವುದಿಡಬೇಕು ಎಂದು ಯೋಚಿಸಿತ್ತಿರುವಾಗ ‘ಪತಿಬೇಕು ಡಾಟ್ ಕಾಮ್’ ಟೈಟಲ್‌ನ್ನು ಸೂಚಿಸಿದ್ದು ನಾನೇ. ಅದೇ ಟೈಟಲ್‌ಗೆ ನಿರ್ದೇಶಕರು ಮರುಮಾತಿಲ್ಲದೆ ಒಪ್ಪಿಗೆ ನೀಡಿದರು. ಈ ಬಗ್ಗೆ ನನಗೆ ಖುಷಿ ಇದೆ. ನಮ್ಮ ಕಡೆಯಿಂದ ಸಂಪೂರ್ಣ ಪ್ರಯತ್ನದೊಂದಿಗೆ ಈ ಸಿನಿಮಾ ತಂದಿದ್ದೇವೆ. ಈಗ ಸಿನಿಮಾವನ್ನು ಜನರ ಕೈಗೆ ಕೊಡುತ್ತಿದ್ದೇವೆ. ಅಂತಿಮವಾಗಿ ಸಿನಿಮಾವನ್ನು ಗೆಲ್ಲಿಸುವುದು ಮತ್ತು ಸೋಲಿಸುವುದು ಎರಡೂ ಕನ್ನಡ ಜನರ ಕೈಯಲ್ಲೇ ಇದೆ’ ಎನ್ನುತ್ತಾರೆ ಚಿತ್ರದ ನಾಯಕಿಯಾಗಿರುವ ಶೀತಲ್ ಶೆಟ್ಟಿ.

‘ಜೈ ಮಾರುತಿ ಪಿಕ್ಚರ್ಸ್’ ಬ್ಯಾನರ್‌ನ ಅಡಿಯಲ್ಲಿ ಶ್ರೀನಿವಾಸ್, ರಾಕೇಶ್ ಹಾಗೂ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೀತಲ್ ಶೆಟ್ಟಿ ಅವರ ಹೆತ್ತವರ ಪಾತ್ರಗಳಲ್ಲಿ ಹರಿಣಿ ಕೃಷ್ಣ ಅಡಿಗ ಅಭಿನಯಿಸಿದ್ದಾರೆ. ರಾಕೇಶ್ ನಿದೇಶನದ ಜವಬ್ದಾರಿಯನ್ನು ಹೊತ್ತಿದ್ದು, ಯೋಗಿ ಕ್ಯಾಮರಾ ವರ್ಕ್ ಮಾಡಿದ್ದಾರೆ. ಕೌಶಿಕ್ ಶರ್ಮ ಸಂಗೀತ ಸಂಯೋಜಿಸಿದ್ದು, ಹರ್ಷವರ್ಧನ್ ಹಿನ್ನಲೆ ಸಂಗೀತ ನೀಡಿದ್ದಾರೆ. ವಿಜಯ್ ಕುಮಾರ್ ಸಂಕಲನ ಕೆಲಸ ನಿರ್ವಹಿಸಿದ್ದಾರೆ. ಈ ಹಿಂದೆ ಚಿತ್ರದ ಟ್ರೇಲರ್‌ನ್ನು ವೀಕ್ಷಿಸಿದ್ದ ನಟ ಸುದೀಪ್, ಶಿವರಾಜ್ ಕುಮಾರ್ ಮತ್ತು ನಟಿ ಏಮಿ ಜಾಕ್ಸನ್ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರಕ್ಕೆ ಶುಭ ಹಾರೈಸಿದ್ದರು. ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರ ಆಶೀರ್ವಾದದೊಂದಿಗೆ ಚಿತ್ರದ ‘ಆಡಿಸ್ತ್ಯ ದೇವರೆ ಕ್ಯಾಬರೆ…’ ಹಾಡನ್ನು ರಿಲೀಸ್ ಮಾಡಲಾಗಿತ್ತು. ಟ್ರೇಲರ್ ಮತ್ತು ಹಾಡು ಜನಮನ್ನಣೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇಂದು ರಾಜ್ಯದ 100ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ.