About Us Advertise with us Be a Reporter E-Paper

ವಿವಾಹ್

ಒಲವ ಧಾರೆ ಹರಿಸಿದವಳ ಹುಡುಕುತ್ತಾ..

- ಸಚಿನ್ ಕೃಷ್ಣ

ಯಾಕೋ ಗೊತ್ತಿಲ್ಲ. ಕೆಲವೊಮ್ಮೆ ನಿನ್ನ ನಾನು ಕಳೆದುಕೊಂಡು ಬಿಟ್ಟೆನೇನೋ ಎಂಬ ಭಯ ಕಾಡುತ್ತದೆ. ಕಾರಣವಿಲ್ಲದೆ ಬಹು ದೂರ ಸಾಗುತ್ತಿರುವ ನೀ ಮತ್ತೆ ಹತ್ತಿರ ಬರಬೇಕೆಂದಿದ್ದರೂ ಬರಲಾರದೆ ನನ್ನನ್ನೇ ವಂಚಿಸಿಕೊಳ್ಳುತ್ತಿರುವ ನನ್ನ ಮೇಲೆ ನನಗೆ ಬೇಸರ ಕೂಡ. ನನಗೆ ನಾನೆಂದೂ ಮೋಸ ಮಾಡಿಕೊಂಡವನಲ್ಲ. ನನಗೆ ಬೇಕಿರುವ ನನ್ನದು ಎಂದಾದ ಎಲ್ಲವನ್ನು ಮತ್ತು ಅಗತ್ಯವಿರುವ ಎಲ್ಲರ ಪ್ರೀತಿಯನ್ನು ಬಾಚಿ -ಬಳಿದುಕೊಳ್ಳಬಲ್ಲ ಮಹಾನ್ ಸ್ವಾರ್ಥಿ ನಾನು. ಆದರೂ, ನಿನ್ನೊಬ್ಬಳ ಒಲವಲ್ಲಿ ಮಾತ್ರ ಆ ಮಟ್ಟಿನ ನಿಷ್ಠೂರತೆ, ಸ್ವಾರ್ಥ ಮನೋಭಾವನೆ ಸಾಧ್ಯವಾಗುತ್ತಿಲ್ಲವಲ್ಲ. ಅದೇನು ಮೋಡಿ ಮಾಡಿದ್ದಿ ನೀ ನನಗೆ.

ನಿನ್ನ ಹೆಗಲ ಮೇಲೆ ತಲೆಯೊರಗಿಸಿ ಜಗತ್ತಿನ ಪರಿವಿಲ್ಲದೇ ನಿದ್ರಿಸುವುದು ಒಂದು ಬಗೆಯ ಆಹ್ಲಾದ ನನಗೆ. ಬದುಕಿನ ದೊಡ್ಡ ಸಂಭ್ರಮ. ನಾನೇನು ಅಲ್ಲದೆ ಇರಬಹುದು ಆದರೂ ನಂಗೆ ನೀನೆಂದರೆ ಒಂದು ವಿಶಿಷ್ಟವಾದ ಮಧುರ ಭಾವ. ‘ನಿನ್ನ ನೋಡಲೆಂತೋ ಮಾತನಾಡಲೆಂತೋ ಅಹಾ ಒಂಥರಾ ಥರಾ..’ ಎಂದು ಗುನುಗುತ್ತಾ ಭಾವಯಾನದಲ್ಲಿ ವಿಹರಿಸುತ್ತಿರುವ ನನ್ನೀ ಪ್ರೀತಿಯ ನಿನ್ನಲ್ಲಿ ನಿವೇದಿಸುವ ಬಯಕೆಯೇನಿಲ್ಲ. ಹಾಗಂತ, ನಿನ್ನ ಸಾಂಗತ್ಯವೇ ಇಲ್ಲದೆ ಬದುಕಿ ಬಿಡುತ್ತೇನೆಂಬ ಮೊಂಡುತನವೂ ಇಲ್ಲ. ನನ್ನೊಳಗಿನ ದಣಿವಿನ ಭಾವವನ್ನು ತೀರಿಸುವ ತೋಳು ಬೇಕಿದ್ದರೂ, ನಿನ್ನಲ್ಲಿ ಬೇಡಲು ನನ್ನಲಿನ ಅಹಂ ಹಿಂಜರಿಯುತ್ತಿರಬೇಕು.

ಆದರೆ ನನ್ನೊಳಗಿನ ನೀ ಎಂದರೆ ಇಂದಿಗೂ, ಕಲ್ಪನೆಯೂ ಇಲ್ಲದ ದಾರಿಯಲ್ಲಿ ಕಿರು ಬೆರಳ ಹಿಡಿದು ಸುಮ್ಮನೆ ಅದೆಷ್ಟೋ ದೂರ ನಡೆಸಿದ ನಿನ್ನನ್ನೊಮ್ಮೆ ಬಿಗಿದಪ್ಪಬೇಕೆಂಬ ಬಯಕೆ ಚಿಗುರೊಡೆದು ಹೆಮ್ಮರವಾಗಿ ನಿಂತಿರುವುದಂತೂ ಖರೆ. ನನ್ನೊಲವಿನ ದಾಹ ಸಾಗರದಷ್ಟು ವಿಶಾಲವಾದದ್ದು. ಅಷ್ಟು ಸುಲಭಕ್ಕೆ ಇಂಗುವುದಿಲ್ಲ ಅದು. ಹಾಗೆಯೇ, ಇನ್ನೊಂದು ಕಡೆ ಸಮುದ್ರದಷ್ಟು ವಿಶಾಲವಾದ ಪ್ರೀತಿಗೆ ಪರಿತಪಿಸಿದರೆ ಎಲ್ಲಿ ಪುಟ್ಟ ಕೊಳದ ನೀರಿನಷ್ಟು ಪ್ರೀತಿಯೂ ಇಲ್ಲದಂತಾಗಿ ಬಿಟ್ಟೀತು ಎಂಬ ದಿಗಿಲು ನನ್ನಲ್ಲಿ. ಅದಕ್ಕೆ ಎಂದಿಗೂ ನಿನ್ನ ಸಮುದ್ರವಾಗು, ಸಾಗರದಂಥ ಪ್ರೀತಿ ನೀಡು ಕೇಳಲಿಲ್ಲ.

ಕೇಳುವುದೂ ಇಲ್ಲ. ಗೊತ್ತು, ಸಮುದ್ರ ಎಂದೂ, ಯಾರ ದಾಹವನ್ನೂ ತಣಿಸದು ಎಂದು. ಅದೂ ಆಗಸದಷ್ಟು ವಿಸ್ತಾರವಾಗಿಹ ಈ ಪರಿಯ ದಾಹವನ್ನು. ಕೊಳವಾಗು, ಕೊಳದ ನೀರಿನಷ್ಟೇ ಪ್ರೀತಿಯನ್ನಾದರೂ ನೀಡು ಎಂದರೆ ಅದಕ್ಕೂ ಒಪ್ಪದ ನಿನ್ನೀ ಉತ್ತರದ ಮೇಲೆ ಯಾಕೋ ಹುಸಿ ಮುನಿಸು ನನಗೆ. ನನ್ನ ಎದುರಿಗಿದ್ದರೂ ಐಸ್ ಪೈಸ್ ಆಡುತ್ತ, ಕಣ್ಣಿಗೆ ಬೀಳದ ನಿನ್ನ ಬರುವಿಕೆಯ ಕನಸನ್ನೇ ಸದಾ ನೆನೆದು ಕಿರು ನಗು ಬೀರುವಂತಾಗಿದೆ. ಕನಸಿನಲ್ಲಿ ಸಂತೈಸಿದವಳು, ಒಲವ ಹರಿಸಿ ಮುದ್ದಾಡಿದವಳು ಕಣ್ಣೆದುರಿಗೆಂದು ಬರುವೆ ಹೇಳಮ್ಮ…

Tags

Related Articles

Leave a Reply

Your email address will not be published. Required fields are marked *

Language
Close