ವಿಶ್ವವಾಣಿ

ಟೀ ಮಾರುವ ಕಾಯಕದಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದ ವೀರ

ದೆಹಲಿ: 2018ರ ಏಷ್ಯನ್ ಗೇಮ್ಸ್ ನ ಸೆಪಕ್​ ತಕ್ರವ್ ಸ್ಪರ್ಧೆಯಲ್ಲಿ ಕಂಚಿನ  ಪದಕ ಗೆದ್ದಿರುವ ಹರೀಶ್ ಕುಮಾರ್, ಇದೀಗ ಮತ್ತೆ ತಮ್ಮ ತಂದೆಯೊಂದಿಗೆ ಟೀ ಮಾರುವ ಕಾಯಕದಲ್ಲಿ ತೊಡಗಿದ್ದಾರೆ.

ಹರೀಶ್ ಕುಮಾರ್ ಅವರ ಕುಟುಂಬ ತೀವ್ರ ಬಡತನ ಎದುರಿಸುತ್ತಿದೆ. ಇವರ ತಂದೆ ದೆಹಲಿಯಲ್ಲಿ ಟೀ ಮಾರುತ್ತಿದ್ದು, ತಂದೆಗೆ ಸಹಾಯಕನಾಗಿ ಹರೀಶ್ ಕುಮಾರ್ ಕೆಲಸ ಮಾಡುತ್ತಿದ್ದಾರೆ. ‘ನಾವು ಮನೆಯಲ್ಲಿ ತುಂಬಾ ಜನ ವಾಸವಾಗಿದ್ದೇವೆ. ಆದರೆ ಆದಾಯ ಮೂಲ ಮಾತ್ರ ಕಡಿಮೆಯಿದೆ. ಹೀಗಾಗಿ ನನ್ನ ಕುಟುಂಬಕ್ಕಾಗಿ ನಾನು ಚಹಾ ಅಂಗಡಿಯಲ್ಲಿ ನನ್ನ ತಂದೆಗೆ ಸಹಾಯ ಮಾಡುತ್ತೇನೆ’ ಎಂದು ತಿಳಿಸಿದರು. ‘ನಾನು ನನ್ನ ಕ್ರೀಡೆಯ  ಅಭ್ಯಾಸಕ್ಕಾಗಿ  ಪ್ರತಿದಿನ ನಾಲ್ಕು ಗಂಟೆಗಳ 2 ರಿಂದ 6ಗಂಟೆಗಳವರೆಗೆ ಸಮಯ ಮೀಸಲಿಡುತ್ತೇನೆ. ನನ್ನ ಭವಿಷ್ಯಕ್ಕಾಗಿ ಮತ್ತು ನನ್ನ ಕುಟುಂಬವನ್ನು ಸಲಹಲು  ಉತ್ತಮ ಕೆಲಸವನ್ನು ಪಡೆಯಲು ಬಯಸುತ್ತೇನೆ. ಇನ್ನು ಹೆಚ್ಚು ಅಭ್ಯಾಸದಲ್ಲಿ ತೊಡಗಿ ದೇಶಕ್ಕೆ ಮತ್ತಷ್ಟು ಪದಕಗಳನ್ನು ತರುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮ ಮಕ್ಕಳನ್ನು ತುಂಬ ಕಷ್ಟದಲ್ಲಿ ಬೆಳೆಸಿದೆವು. ಪತಿ ಸಾಧಾರಣ ಆಟೋ ಡ್ರೈವರ್​. ಜತೆಗೆ ಟೀ ಅಂಗಡಿಯನ್ನೂ ನಡೆಸುತ್ತಾರೆ. ನನ್ನ ಮಗ ಹರೀಶ್​, ತಂದೆಗೆ ನೆರವಾಗುತ್ತಾನೆ. ಕ್ರೀಡಾಭ್ಯಾಸ ಮಾಡಲು ಸರ್ಕಾರ ನನ್ನ ಮಗನಿಗೆ ಆಹಾರ ಮತ್ತು ಆರ್ಥಿಕ ಸಹಾಯ ನೀಡುತ್ತಿದೆ. ಇದಕ್ಕಾಗಿ ನಾನು ಸರ್ಕಾರ ಮತ್ತು ಕೋಚ್​ ಹೇಮರಾಜ್​ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹರೀಶ್ ತಾಯಿ ಇಂದಿರಾ ಹೇಳಿದ್ದಾರೆ.

ಹರೀಶ್ ಸಹೋದರ ಕೂಡ ಸರಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ತನ್ನ ಸಹೋದರನಿಗೆ ಸರ್ಕಾರಿ ಕೆಲಸವನ್ನು ನೀಡುವಂತೆ  ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.