About Us Advertise with us Be a Reporter E-Paper

ಗುರು

ಶನಿ ಶಿಂಗಣಾಪುರದಲ್ಲಿ ಶನಿದೇವನಿಗೆ ಬಯಲೇ ಆಲಯ

* ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯಲ್ಲಿರುವ ಶಿಂಗಣಾಪುರ ಗ್ರಾಮದಲ್ಲಿ, ಅಚ್ಚರಿಯ ವಿಷಯವೆಂದರೆ, ಗ್ರಾಮದ ರಕ್ಷಣೆಗೆ ಶನಿದೇವನಿದ್ದಾನೆ, ಆದರೆ ಆತನಿಗೆ ಆಲಯವಿಲ್ಲ. ಬಹುಪಾಲು ಮನೆಗಳಿಗೆ ಬಾಗಿಲಿನ ಚೌಕಟ್ಟುಗಳಿವೆಯಾದರೂ ಬಾಗಿಲುಗಳೇ ಇಲ್ಲ. ಬಾಗಿಲುಗಳಿರುವ ಮನೆಗಳಿಗೂ ಇಲ್ಲಿಯ ಜನರು ಬೀಗ ಹಾಕುವ ಗೋಜಿಗೆ ಹೋಗುವದಿಲ್ಲ. ಕ್ಷೇತ್ರಪಾಲ ಶನಿ ಮಹಾತ್ಮನಿಗೆ, ಗ್ರಾಮದ ಸುರಕ್ಷತೆಯ ಜವಾಬ್ದಾರಿಯನ್ನು ವಹಿಸಿ ಇಲ್ಲಿಯ ಜನತೆ ನಿರಾಳವಾಗಿಬಿಟ್ಟಿದ್ದಾರೆ. ಚಳಿ, ಗಾಳಿಗಳಿಂದ ಪಡೆಯಲು ಮಾತ್ರ ಮನೆಯ ಪ್ರವೇಶ ದ್ವಾರಕ್ಕೆ, ಪರದೆಗಳನ್ನು ಬಳಸುತ್ತಾರೆ. ಗ್ರಾಮಸ್ಥರಿಗೆ, ನಗ ನಾಣ್ಯಗಳನ್ನು ಸುರಕ್ಷಿತವಾಗಿರಿಸಲು ಧಾನ್ಯಗಳನ್ನು ತುಂಬಿರಿಸಲು ಬಳಸುವ ಬೀಗವಿಲ್ಲದ ಡಬ್ಬಗಳೇ ಸೇಫ್ ಲಾಕರ್.

ಶನಿ ಶಿಂಗಣಾಪುರದಲ್ಲಿರುವ ಶನಿದೇವನ ಶಿಲಾಮೂರ್ತಿಯ ಪ್ರವೇಶ ದ್ವಾರದ ಬಳಿ, ಗರ್ಭಗಿರಿ ಪರ್ವತ ಶ್ರೇಣಿಯಲ್ಲಿ ಉಗಮಗೊಂಡ, ಪಾನಸನಾಲಾ ಎಂಬ ಚಿಕ್ಕದಾದ ಕಾಲುವೆಯಿದೆ. ವಿಶಾಲವಾದ ಪ್ರದೇಶದಲ್ಲಿ, ಸುಮಾರು 17ಅಡಿ ಉದ್ದಗಲವಾಗಿರುವ ಕಟ್ಟೆಯ ಮಧ್ಯೆ, ಲೋಕಪಾಲ ಶನಿ ಭಗವಾನ್, ಶಿಲಾರೂಪದಲ್ಲಿ ವಿರಾಜಮಾನನಾಗಿದ್ದಾನೆ. ಕಟ್ಟೆಯ ಬಲಭಾಗದಲ್ಲಿ ಶನಿದೇವನಿಗೆ ಅಭಿಷೇಕಕ್ಕೆ ಸಮರ್ಪಿಸಲು ಟ್ಯಾಂಕ್‌ವೊಂದನ್ನು ನಿರ್ಮಿಸಲಾಗಿದೆ. ಈ ಕ್ಷೇತ್ರದ ವಿಶೇಷತೆಯೆಂದರೆ, ಶನಿ ಮಹಾದೇವ ಸೌಮ್ಯ ಹಾಗೂ ಮೃದು ರೂಪ ಧರಿಸಿ, ಶರಣಾಗತ ಭಕ್ತರನ್ನು ಪೊರೆಯುತ್ತಿದ್ದಾನೆ. ಮೇಲ್ಛಾವಣೆಯಿಲ್ಲದ, ಸುಮಾರು ಐದುವರೆ ಅಡಿ ಎತ್ತರದ ಶನಿದೇವನ ಮೂರ್ತಿಯ ಶಿರೋಭಾಗ ತ್ರಿಕೋನಾಕಾರವಾಗಿದೆ. ಕಟ್ಟೆಯ ಸುತ್ತಲೂ ಉಕ್ಕಿನ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಶಿಲಾಮೂರ್ತಿಗೆ ಅವಯವ, ಹಾಗೂ ಯಾವುದೇ ವಾಹನಗಳು ಕಂಡುಬರುವುದಿಲ್ಲ ದೇವರ ಕಟ್ಟೆಯಿಂದ ಸ್ವಲ್ಪ ದೂರದಲ್ಲಿ ಬೇವಿನ ಮರವಿದೆ. ತನಗಾಗಿ ಮಂದಿರದ ನಿರ್ಮಾಣ ಬೇಡವೆನ್ನುವ ಶನಿ ಮಹಾತ್ಮ, ಸುತ್ತಮುತ್ತಲಿನ ನೆರಳನ್ನೂ ಸಹ ನಿರಾಕರಿಸುತ್ತಾನ್ನೆಲಾಗಿದೆ. ಶನಿದೇವನ ಮೂರ್ತಿಯ ಕಟ್ಟೆಗೆ ಬೇವಿನ ಮರದ ಕೊಂಬೆಗಳು ತಗುಲಿದರೆ, ಸಾಕು, ಸುಟ್ಟುಹೋಗುತ್ತವೆಂದು ಹೇಳಲಾಗುತ್ತದೆ. ಶಿಲಾಮೂರ್ತಿಯ ಬಳಿ ತ್ರಿಶೂಲ, ಮುಂಭಾಗದಲ್ಲಿ, ಈಶ್ವರ ಹಾಗೂ ಆಂಜನೇಯನ ಮೂರ್ತಿಗಳಿವೆ.

ಐತಿಹಾಸಿಕ ಹಿನ್ನೆಲೆ:
ಸುಮಾರು ಮೂರು ಶತಮಾನಗಳ ಹಿಂದೆ, ಜೋರಾಗಿ ಮಳೆ ಸುರಿದು ಪಾನಸನಾಲಾ ಕಾಲುವೆ, ಉಕ್ಕಿ ಹರಿಯಲಾರಂಭಿಸಿತಂತೆ. ಜನಜೀವನವನ್ನೇ ಅಸ್ತವಸ್ತ್ಯವಾಗಿಸಿದ ಮಹಾಮಳೆಯ ಆರ್ಭಟ ಕಡಿಮೆಯಾದ ಮೇಲೆ, ದನಗಾಯಿಯೊಬ್ಬನಿಗೆ, ಪಾನಸನಾಲಾ ಕಾಲುವೆಯ ಬಳಿ, ಬೋರೆಹಣ್ಣಿನ ಗಿಡಕ್ಕೆ ಒರಗಿದ ಕರಿಕಲ್ಲಿನ ಶಿಲೆಯೊಂದು ಹಿಂದೆಂದೂ ಕಾಣದ ಆ ಶಿಲೆಯನ್ನು ತನ್ನ ಸಹಚರರೊಂದಿಗೆ ಸೇರಿ ತನ್ನ ಬಳಿಯಿದ್ದ ಕಟ್ಟಿಗೆಯ ಸಹಾಯದಿಂದ ಕದಲಿಸಲು ಪ್ರಯತ್ನಿಸಿದನಂತೆ. ಕಟ್ಟಿಗೆ ಚುಚ್ಚಿದ ಸ್ಥಳದಲ್ಲೆಲ್ಲಾ ಶಿಲೆಯಿಂದ ರಕ್ತ ಸುರಿಯಲಾರಂಭಿಸಿತಂತೆ. ರಕ್ತಸ್ರಾವವನ್ನು ಕಂಡ ದನಗಾಯಿ ಮಕ್ಕಳು ಭೂತಚೇಷ್ಟೆಯಿರಬಹುದೆಂದು ಭಯಗೊಂಡು, ನಡೆದ ಸಂಗತಿಗಳನ್ನು ಗ್ರಾಮಸ್ಥರಿಗೆ ತಿಳಿಯಪಡಿಸಿದರಂತೆ. ವಿಚಿತ್ರ ಆಕಾರ ಹಾಗೂ ದಿವ್ಯಶಕ್ತಿಯುಳ್ಳ ಚಮತ್ಕಾರಿಕ ಶಿಲೆಯನ್ನು ಆ ಸ್ಥಳದಿಂದ ಕದಲಿಸಲು ಗ್ರಾಮಸ್ಥರಿಂದಲೂ ಸಾಧ್ಯವಾಗಲಿಲ್ಲವಂತೆ. ಅದೇ ದಿನ ತನ್ನ ಶಿಂಗಣಾಪುರ ನಿವಾಸಿಯಾದ ಭಕ್ತನೊಬ್ಬನ ಸ್ವಪ್ನದಲ್ಲಿ ಶನಿದೇವ ಕಾಣಿಸಿಕೊಂಡು, ರೂಪದಲ್ಲಿರುವ ತನ್ನ ಪ್ರತಿಮೆಯನ್ನು ಶಿಂಗಣಾಪುರದ ನಿವಾಸಿಗಳು ಹಾಗೂ ಸಂಬಂಧದಲ್ಲಿ ಸೋದರಮಾವ ಹಾಗೂ ಸೋದರಳಿಯರೆನಿಸಿದವರು ಜತೆಗೂಡಿ ಕದಲಿಸಿ, ಪ್ರತಿಷ್ಟಾಪಿಸಬೇಕೆಂದು ಆದೇಶಿಸಿದನಂತೆ. ಮಹಿಮಾ ಪುರುಷ ಶನಿದೇವ ಶಿಲಾರೂಪದಲ್ಲಿ ತಮ್ಮ ಊರಿನಲ್ಲಿ ಅವತರಿಸಿದ ವಿಷಯ ತಿಳಿದ ಗ್ರಾಮಸ್ಥರು, ಹರ್ಷಿತರಾದರಂತೆ. ಅಚ್ಚರಿಯ ವಿಷಯವೆಂದರೆ, ಶಿಲೆಯಿಂದ ರಕ್ತಸ್ರಾವ ಪೂರ್ತಿಯಾಗಿ ನಿಂತು ಹೋಯಿತಂತೆ. ಶನಿದೇವನು ಸೂಚಿಸಿದ ಸ್ಥಳದಲ್ಲಿ ಎತ್ತಿನಬಂಡಿಯಲ್ಲಿ ಮಂಗಳವಾದ್ಯ, ಜಯಕಾರಗಳೊಂದಿಗೆ ಶನಿಮಹಾದೇವನ ಮೂರ್ತಿಯನ್ನು ಪ್ರತಿಷ್ಟಾಪಿಸಿದರಂತೆ. ಶನಿ ಭಗವಾನ್‌ನ ಆದೇಶದಂತೆ. ಆಲಯವನ್ನು ನಿರ್ಮಿಸಲಾಗಿಲ್ಲ.

ಪೂಜಾ ವಿವರ
ಸ್ವಯಂಭೂ ಭಗವಾನ್‌ನಿಗೆ ಕೇವಲ ಬೋರೆಗಿಡದ ಕಂಟೆಯಿಂದ ಅಲಂಕರಿಸಲಾಗುತ್ತದೆ. ಅರ್ಚಕರು ತಿಳಿಸುವಂತೆ, ಬೆಳಗಿನ ನಾಲ್ಕು ಗಂಟೆಗೆ, ಕಾಕಡಾರತಿ, ಶುಧ್ಧೋದಕ, ಪಂಚಾಮೃತ ಅಭಿಷೇಕಗಳಿಂದ ಶನಿದೇವನ ಪೂಜಾ ವಿಧಿಗಳು ಆರಂಭಗೊಳ್ಳುತ್ತವೆ. ನಂತರ ತೈಲಾಭಿಷೇಕ, ಸುಗಂಧ ದ್ರವ್ಯಗಳಿಂದ ಅಭಿಷೇಕಗಳನ್ನು ಸಲ್ಲಿಸಲಾಗುತ್ತದೆ. ಶ್ರೀ ಗಣೇಶನಿಗೆ ನಂತರ ಶನಿದೇವನಿಗೆ ಆರತಿಗಳನು ಸಲ್ಲಿಸಲಾಗುತ್ತದೆ. ಶನಿದೇವನಿಗೆ ವಿಶೇಷವಾಗಿ ಕಿಚಡಿ ಹಾಗೂ ಸಿಹಿ ಪದಾರ್ಥಗಳನ್ನು ನೈವೇದ್ಯ ರೂಪದಲ್ಲಿ ಸಲ್ಲಿಸಲಾಗುತ್ತದೆ. ಜಾಗೃತ ದೇವತೆಯೆನಿಸಿದ ಶನಿ ಮಹಾದೇವನ ಎದುರು ದಿನದ 24ಗಂಟೆಗಳ ಸಮಯವೂ ಅಖಂಡ ಜ್ಯೋತಿ ಶನಿ ಅಮವಾಸ್ಯೆಯ ದಿನ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ವೈಶಾಖ ಅಮವಾಸ್ಯೆಯ ದಿನ ಆಚರಿಸಲಾಗುವ ಶನಿ ಜಯಂತಿಯ ಉತ್ಸವದ ಸಮಯದಲ್ಲಿ, ಧರ್ಮ ಧ್ವಜಾರೋಹಣ, ಜನ್ಮಾರತಿ, ರಥೋತ್ಸವ, ಶನಿಯಾಗ, ಪ್ರವಚನ, ಕೀರ್ತನೆಗಳನ್ನು ಸಲ್ಲಿಸಿಲಾಗುತ್ತದೆ. ಮಹರ್ಷಿಗಳಾದ ಭ್ರಗು, ಅಗಸ್ತ್ಯ ಮುಂತಾದವರು ಈ ಸ್ಥಳದಲ್ಲಿ ತಪಸ್ಸು ಕೈಗೊಂಡಿರುವದಾಗಿ ಪೌರಾಣಿಕ ಹಿನ್ನೆಲೆಯಿದೆ. ಪ್ರತಿ ನಿತ್ಯ ಈ ಕ್ಷೇತ್ರಕ್ಕೆ, ಸುಮಾರು 30,000ಕ್ಕೂ ಮಿಕ್ಕು ಹಾಗೂ ಶನಿವಾರದಂದು ಸುಮಾರು 50,000ಕ್ಕೂ ಮಿಕ್ಕು ಭಕ್ತಾದಿಗಳು ಆಗಮಿಸಿ, ಶನಿದೇವನ ಕೃಪೆಗೆ ಪಾತ್ರರಾಗುತ್ತಾರೆ. ಯಾತ್ರಿಕರು ಕಾಶಿಯಿಂದ ಪವಿತ್ರ ಜಲ ತಂದು ಶನಿದೇವನಿಗೆ ಅಭಿಷೇಕ ಮಾಡುತ್ತಾರೆ. ಖ್ಯಾತ ಗಾಯಕಿ, ಅನುರಾಧಾ ಪೌಡವಾಲ್ ಅವರ ಧ್ವನಿಯಲ್ಲಿ ದಿ.ಗುಲ್ಸನ್ ಕುಮಾರ್ ಅವರು ಶನಿ ಶಿಂಗಣಾಪುರದಲ್ಲಿ ನೆಲೆಸಿರುವ ಶನಿದೇವನ ಕ್ಯಾಸೆಟ್ ಬಿಡುಗಡೆ ಮಾಡಿದ ನಂತರ, ಈ ಗ್ರಾಮಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.

ಹೋಗುವುದು ಹೇಗೆ?
ಹತ್ತಿರದ ವಿಮಾನ ನಿಲ್ದಾಣವಾದ ಔರಂಗಾಬದ್ ಸುಮಾರು 90ಕಿಮೀ ದೂರದಲ್ಲಿದೆ. ಹತ್ತಿರದ ರೈಲು ನಿಲ್ದಾಣವಾದ ಅಹಮದ್ ನಗರ್ ಸುಮಾರು 35ಕಿಮೀ ಅಹಮದ್ ನಗರದಿಂದ ಬಸ್ ಇಲ್ಲವೇ ಟ್ಯಾಕ್ಸಿಗಳ ಮೂಲಕ ಶನಿ ಸಿಂಗಣಾಪೂರ ತಲುಪಬಹುದು.

Tags

Related Articles

Leave a Reply

Your email address will not be published. Required fields are marked *

Language
Close