“ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕಾರಣದಿಂದಲೇ ಚಾಯ್ವಾಲಾ ಇಂದು ಪ್ರಧಾನಿಯಾಗಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತೊಂದು ವಿವಾದಾದ್ಮಕ ಹೇಳಿಕೆ ನೀಡಿದ್ದಾರೆ.
ನೆಹರು ಜನ್ಮದಿನದಂದು ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತರೂರರು, “ಯಾವುದೇ ಭಾರತೀಯನೂ ಸಹ ಅತ್ಯುನ್ನತ ಮಟ್ಟಕ್ಕೆ ಏರಲು ಅವಕಾಶ ಇರುವ ಮಟ್ಟಿಗಿನ ಸಂಸ್ಥೆಗಳನ್ನು ಹಾಗು ವ್ಯವಸ್ಥೆಗಳನ್ನು ನೆಹರೂ ತಂದ ಕಾರಣ ಇಂದು ಚಾಯ್ವಾಲಾರಂಥವರು ಪ್ರಧಾನ ಮಂತ್ರಿಯಾಗಿದ್ದಾರೆ” ಎಂದು ತಮ್ಮ ಪುಸ್ತಕ “ನೆಹರೂ, ದಿ ಇನ್ವೆಂಷನ್ ಆಫ್ ಇಂಡಿಯಾ” ಪುಸ್ತಕ ಮರುಬಿಡುಗಡೆ ಕಾರ್ಯಕ್ರಮದ ವೇಳೆ ಮಾತನಾಡಿದ್ದರೆ.
“ನಾವಿಂದು ಮಾಡುತ್ತಿರುವ ಪ್ರತಿಯೊಂದಕ್ಕೂ ವೇದಿಕೆ ನಿರ್ಮಾಣ ಮಾಡಿಕೊಟ್ಟ ಭಾರತದ ಶ್ರೇಷ್ಠ ಪುತ್ರನ ವಿರುದ್ಧ ಇಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಕಡೆಗಣಿಸುವ ಕೆಲಸ ನಡೆಯುತ್ತಿದೆ” ಎಂದು ತರೂರ್ ಇದೇ ಸಂದರ್ಭ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ತಮ್ಮ ನೆಹರೂ ಶ್ಲಾಘನೆ ಮುಂದುವರೆಸಿದ ತರೂರ್, “ಭಾರತ ಇಂದು ಮಂಗಳಯಾನದ ಕುರಿತು ಹೆಮ್ಮೆ ಪಡುತ್ತಿದೆ, ಆದರೆ ಇಸ್ರೋ ಹುಟ್ಟುಹಾಕಿದವರು ಯಾರು? ದೇಶದ ಬಡವರೂ ಸಹ ಆಗಸದೆತ್ತರದ ಕನಸು ಕಾಣಲು ಕಲಿಸಿಕೊಟ್ಟವರು ಯಾರು? ಅಸಂಖ್ಯ ಯುವಕರನ್ನು ಸಿಲಿಕಾನ್ ವ್ಯಾಲಿಗೆ ಕಳುಹಿಸಿದ ಐಐಟಿಗಳನ್ನು ಸ್ಥಾಪಿಸಿದವರು ಯಾರು? ಅಲ್ಲಿರುವ 40% ಸ್ಟಾರ್ಟ್ ಅಪ್ ಕಂಪನಿಗಳು ಇಂದು ಭಾರತೀಯರ ಕೈಯಲ್ಲಿ ಇವೆ ಎಂದರೆ ಅದಕ್ಕೆ ಕಾರಣ ಯಾರು?” ಎಂದು ಕೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಏಐಸಿಸಿ ವರಿಷ್ಠೆ ಸೋನಿಯಾ ಗಾಂಧಿ, “ನೆಹರೂರ ಅಪರೂಪದ ಇತಿಹಾಸವನ್ನು ಕಡೆಗಣಿಸುವ ಯತ್ನಗಳು ಇಂದು ಆಳುವ ವರ್ಗದಿಂದ ನಡೆಯುತ್ತಿವೆ” ಎಂದು ಹರಿಹಾಯ್ದಿದ್ದಾರೆ.