About Us Advertise with us Be a Reporter E-Paper

ಅಂಕಣಗಳು

ಗೊರಿಲ್ಲಾಗಳಿಗಾಗಿ ಆಕೆ ತನ್ನ ಜೀವನ ಮುಡಿಪಾಗಿಟ್ಟಳು!

‘ಅದ್ಯಾಕೋ ಗೊತ್ತಿಲ್ಲ, ಗೊರಿಲ್ಲಾ ಚಿತ್ರ ನೋಡುತ್ತಿದ್ದಂತೆ ನಿಮ್ಮ ನೆನಪಾಯಿತು. ತಕ್ಷಣ ಆ ಪುಸ್ತಕ ಖರೀದಿಸಿ ನಿಮಗೆ ಕೊಡಬೇಕೆನಿಸಿತು’ ಎಂದರು ಸ್ನೇಹಿತ ರವೀಶ್ ಜಾದವ್. ಹದಿನೈದು ದಿನಗಳ ಹಿಂದೆ ಅವರು ಕೀನ್ಯಾ ರಾಜಧಾನಿ ನೈರೋಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪುಸ್ತಕದಂಗಡಿಯಲ್ಲಿ ಗೊರಿಲ್ಲಾಗಳಿಗಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟ ಡಯಾನಾ ಫಾಸ್ಸಿ ಎಂಬ ಮಹಿಳೆಯ ಕುರಿತ ಪುಸ್ತಕ ನೋಡಿ, ನನ್ನನ್ನು ನೆನಪಿಸಿಕೊಂಡು ಅದನ್ನು ಉಡುಗೊರೆಯಾಗಿ ಕಳಿಸಿಕೊಟ್ಟಿದ್ದರು. ನನಗೆ ಡಯಾನಾ  ಅಪರಿಚಿತಳಲ್ಲ. ನಾನು ಮೊದಲ ಬಾರಿಗೆ ರವಾಂಡಕ್ಕೆ ಹೋದಾಗ ಆಕೆ ಬರೆದ ಎಟ್ಟಜ್ಝ್ಝಿ ಜ್ಞಿ ಠಿಛಿ ಜಿಠಿ ಎಂಬ ಪುಸ್ತಕ ಓದಿದ್ದೆ. ಆನಂತರ ಅವಳ ಜೀವನ ಕುರಿತ ಸಾಕ್ಷ್ಯಚಿತ್ರಗಳನ್ನು ನೋಡಿದ್ದೆ. ಗೊರಿಲ್ಲಾ ಎಂಬ ಪ್ರಾಣಿಗಳ ಬಗ್ಗೆ ಬದುಕನ್ನು ಒತ್ತೆ ಇಟ್ಟವರ ಸಾಲಿನಲ್ಲಿ ಆಕೆ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾಳೆ. ಆಕೆಯ ಬದುಕಿನ ಬಗ್ಗೆ ಓದುತ್ತಾ ಹೋದಂತೆಲ್ಲ ಈ ಜಗತ್ತಿನಲ್ಲಿ ಎಂಥೆಂಥವರು ಒಂದು ್ಚ್ಠಛಿ ಗಾಗಿ ಅದೆಂಥ ಹೋರಾಟ ಮಾಡಿ, ಜೀವನವನ್ನೇ ಅದಕ್ಕಾಗಿ ಧಾರೆಯೆರೆದಿದ್ದಾರಲ್ಲ  ಅಚ್ಚರಿಯಾಗುತ್ತದೆ. ಗೊರಿಲ್ಲಾಗಳಿಗಾಗಿ ಬದುಕನ್ನೇ, ಪ್ರಾಣವನ್ನೇ ಮುಡಿಪಾಗಿಡುವುದೆಂದರೆ ಸಾಮಾನ್ಯವೇ? ರವೀಶ್ ನೀಡಿದ ಪುಸ್ತಕವನ್ನು ಓದುತ್ತಿದ್ದರೆ ಮನಸ್ಸು ಭಾರವಾಗುತ್ತಿತ್ತು.

ಫಾಸ್ಸಿ ಹುಟ್ಟಿದ್ದು 1932ರಲ್ಲಿ. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ. ಆರು ವರ್ಷದ ಹಸುಗೂಸಾಗಿದ್ದಾಗ ತಂದೆ-ತಾಯಿ ವಿಚ್ಛೇದನ ಪಡೆದು  ಬೇರೆ ಬೇರೆಯಾದರು. ಒಂದು ವರ್ಷದ ಬಳಿಕ ತಾಯಿ ಮತ್ತೊಂದು ಮದುವೆಯಾದಳು. ಅವಳ ಮಲತಂದೆ ಮಹಾ ಕಠೋರ ವ್ಯಕ್ತಿ. ಫಾಸ್ಸಿ ಮನೆಗೆಲಸ ಮಾಡಿ ತನ್ನ ಸಂಪಾದನೆ ಮಾಡಿಕೊಳ್ಳಬೇಕಿತ್ತು. ಫಾಸ್ಸಿ ವೆಟರ್ನರಿ ಕೋರ್ಸ್ ಓದಬೇಕೆಂದು ಬಯಸಿದಳು. ಆದರೆ ಆ  ಅವಳ ತಲೆಗೆ ಹತ್ತಲಿಲ್ಲ. ಅದನ್ನು ಬಿಟ್ಟು ಆಕ್ಯುಪೇಶನಲ್ ಥೆರಪಿಯಲ್ಲಿ ಡಿಗ್ರಿ ಮಾಡಿದಳು. ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು. ಅಲ್ಲಿನ ಸರ್ವೆಂಟ್ ಕ್ವಾರ್ಟರ್‌ಸ್ನಲ್ಲಿ ವಾಸ್ತವ್ಯ. ಅದೇ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿದ್ದ  ಡಾ. ಮೈಕೆಲ್ ಡ್ರೊ ಅವರೊಂದಿಗೆ ಆತ್ಮೀಯ ಸಂಬಂಧವಿತ್ತು. ಆ ವೈದ್ಯರ ಪತ್ನಿಯಿಂದ ಎಂಟು ಸಾವಿರ ಡಾಲರ್ ಸಾಲ ಪಡೆದು ಏಳು ವಾರ, ಆಫ್ರಿಕಾ ಪ್ರವಾಸಕ್ಕೆ ಹೋಗಲು ನಿರ್ಧರಿಸಿದಳು.

ಈ ಪ್ರವಾಸ ತನ್ನ ಬದುಕನ್ನೇ ಬದಲಿಸಬಹುದೆಂದು ಅವಳು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ.  ರಾಜಧಾನಿ ನೈರೋಬಿಯಲ್ಲಿ  ಫಾಸ್ಸಿ, ನಟ ವಿಲಿಯಮ್‌ಸ್ ಹಾಲ್ಡೇನ್ನನ್ನು ಭೇಟಿಯಾದಳು. ಆತ ಫಾಸ್ಸಿಗೆ, ವನ್ಯಪ್ರಾಣಿ ತಜ್ಞ ಅಲೆಗ್ಸಾಂಡರ್, ಪಳೆಯುಳಿಕೆ ಪರಿಣತ ಲೂಯಿಸ್ ಲೀಕಿ, ವನ್ಯಪ್ರಾಣಿ ಛಾಯಾಗ್ರಾಹಕರಾದ ಅಲನ್ ಮತ್ತು ಜೋ ಆನ್ ರೂಬ್ ಅವರನ್ನು ಪರಿಚಯಿಸಿದರು. ಇವರು ತೆಗೆದ ಮೌಂಟನ್ ಗೊರಿಲ್ಲಾಗಳ ಚಿತ್ರ ಫಾಸ್ಸಿಯ ಮನದಲ್ಲಿ ಹೊಸ ಮಾರ್ಗವನ್ನೇ ತೆರೆಸಿತು. ಅಲ್ಲಿಯ ತನಕ ಅವಳು ಗೊರಿಲ್ಲಾಗಳ ಬಗ್ಗೆ ತಿಳಿದಿರಲಿಲ್ಲ.

ಫಾಸ್ಸಿಯ ಈ ಆಸಕ್ತಿಯನ್ನು ಗ್ರಹಿಸಿದ ಲೂಯಿಸ್ ಲೀಕಿ, ‘ಗೊರಿಲ್ಲಾಗಳ ಬಗ್ಗೆ  ಅಧ್ಯಯನದ ಅಗತ್ಯವಿದೆ. ಈ ಪ್ರಾಣಿ ಕೇವಲ ರವಾಂಡ, ಉಗಾಂಡದ ಕಾಡಿನಲ್ಲಿ ಮಾತ್ರ ಇರುವುದರಿಂದ ಹಾಗೂ ಅವುಗಳ ಸಂಖ್ಯೆ ಆರು ನೂರಕ್ಕಿಂತ ಕಡಿಮೆಯಿರುವುದರಿಂದ ಅವುಗಳನ್ನು ಶಾಸ್ತ್ರೀಯವಾಗಿ ಅರಿಯುವ ಅಗತ್ಯವಿದೆ. ನಿನಗೆ ಆಸಕ್ತಿಯಿದ್ದರೆ ನಾನು ಸಹಾಯ ಮಾಡಬಲ್ಲೆ’ ಎಂಬ ಹುಳು ಬಿಟ್ಟ. ಫಾಸ್ಸಿ ಗೊರಿಲ್ಲಾಗಳನ್ನು ನೋಡದಿದ್ದರೂ, ಪ್ರೀತಿಪಾಶಕ್ಕೆ ಬಿದ್ದಂಥವಳಾದಳು. ಆದರೆ ಗೊರಿಲ್ಲಾಗಳ ಅಧ್ಯಯನದ ಮಹತ್ವವನ್ನು ತಲೆಯೊಳಗೆ ಇಳಿಯಬಿಟ್ಟವನು ಛಿ ಞ್ಞ ಡಿಟ ಜಟಠಿ ಛಿಛ್ಞಿ ಡಿಜಿಠಿ ಎಟ ಕೃತಿಯ ಲೇಖಕ ಹಾಗೂ  ದೀಕ್ಷೆ ಪಡೆದ ಫಾದರ್ ರೇಮಂಡ್.

ಈ ಮಧ್ಯೆ ಶ್ರೀಮಂತ ಉದ್ಯಮಿಯೊಬ್ಬ ಫಾಸ್ಸಿಯನ್ನು ಮದುವೆಯಾಗುತ್ತೇನೆಂದು ಅವಳ ಹಿಂದೆ ಬಿದ್ದ. ಆದರೆ ಫಾಸ್ಸಿ ಆಗಲೇ ಗೊರಿಲ್ಲಾಗಳ ಹಿಂದೆ ಬಿದ್ದಿದ್ದಳು. ಮುಲಾಜಿಲ್ಲದೇ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದಳು. ಆಫ್ರಿಕಾದ ಕಾಡು ಕೈ ಹಿಡಿದು ಕರೆಯುತ್ತಿತ್ತು.

ಎಲ್ಲಿಯ ಅಮೆರಿಕ, ಅದೆಲ್ಲಿಯ ರವಾಂಡ, ಅದ್ಯಾವ ಗೊಂಡಾರಣ್ಯ, ಯಾವ ಸೀಮೆಯ ಗೊರಿಲ್ಲಾ.. ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ ತನ್ನ ಹುಟ್ಟಿದ ಊರು, ಹುಟ್ಟಿಸಿದ ತಂದೆ-ತಾಯಿ, ಬಂಧುಗಳು, ಸ್ನೇಹಿತರನ್ನೆಲ್ಲ ಬಿಟ್ಟು  ವರ್ಷ ಏಕಾಂಗಿಯಾಗಿ ಕಾಡು ಗೊರಿಲ್ಲಾಗಳ ಜತೆ ಕಳೆಯುವುದಿದೆಯಲ್ಲ, ಅದು ಅಸಾಮಾನ್ಯವೇ ಸರಿ. ಅದ್ಯಾವ ಜನ್ಮದ ಬಂಧ, ಸಂಬಂಧ, ಅನುಬಂಧವಿರಬಹುದು? ಕೆಲವರಿಗೆ ಸತತ ಎರಡು ದಿನ ಹೆಂಡತಿ ಜತೆಗಿದ್ದರೆ ತಲೆ ಚಿಟ್ಟುಹಿಡಿದುಬಿಡಬಹುದು. ಆದರೆ ಎರಡು ದಶಕಗಳ ಕಾಲ ಆ ಗೊರಿಲ್ಲಾ ಎಂಬ ಕಾಡುಪ್ರಾಣಿಯ ಜತೆ ಕಳೆಯುವುದೆಂದರೆ? ಒಮ್ಮೆ ಊಹಿಸಿ ನೋಡಿ, ಸಾಧ್ಯವೇ ಇಲ್ಲ.

ಹೆತ್ತು ಹೊತ್ತವರು, ಒಡನಾಡಿಗಳನ್ನೆಲ್ಲ ಬಿಟ್ಟು ಗೊತ್ತು, ಗುರಿಯಿಲ್ಲದ, ಭಾಷೆ ತಿಳಿಯದ ದೇಶಕ್ಕೆ ಬಂದು, ಕಾಡನ್ನೇ ತನ್ನ  ಗೊರಿಲ್ಲಾಗಳನ್ನೇ ತನ್ನ ಮಕ್ಕಳೆಂದು ಭಾವಿಸಿ, ಅವುಗಳ ಜತೆ ಕಳೆಯುವುದೇ ಭವಿಷ್ಯ, ಬದುಕಿನ ಉದ್ದೇಶವೆಂದು ತೀರ್ಮಾನಿಸಿ, ಅದೇ ಜೀವನದ ಸಾರ್ಥಕತೆಯೆಂದು ನಿರ್ಧರಿಸಿದ ಆ ಏಕಾಂಗಿ ಹೆಣ್ಣು ಮಗಳು ಡಯಾನಾ ಫಾಸ್ಸಿ ಗಿಟ್ಟಿಸಿಕೊಂಡ ಪ್ರೇರಣೆಯಾದರೂ ಯಾವುದು? ಈಗಲೂ ಆಫ್ರಿಕಾ ಖಂಡ, ಅದರಲ್ಲೂ ರವಾಂಡ ಅಂದರೆ ಹಿಂದೇಟು ಹಾಕುವವರೇ ಹೆಚ್ಚು ಆದರೆ ಇಂದಿಗೆ ನಲವತ್ತೆಂಟು ವರ್ಷಗಳ ಹಿಂದೆ, ಗೊರಿಲ್ಲಾ ಎಂಬ ‘ಕೋತಿ ಮುಂಡೇವು’ಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ ತೆರಳಿದಳಲ್ಲ, ಅವಳಲ್ಲಿ ಅದೆಂಥ ಚೇತನ

ಅಲ್ಲಿತನಕ ಯಾವ ಹೆಣ್ಣು ಮಗಳೂ ರವಾಂಡದ ಆ ಗೊಂಡಾರಣ್ಯದೊಳಗೆ ಕಾಲಿಡುವ ಧೈರ್ಯ ಮಾಡಿರಲಿಲ್ಲ. ಕಾಂಗೋ, ಉಗಾಂಡ ಹಾಗೂ ರವಾಂಡ- ಈ ಮೂರೂ ದೇಶಗಳ ಗಡಿಯನ್ನು ಹೊದ್ದಿರುವ ವಿರುಂಗ ಜ್ವಾಲಾಮುಖಿ ಕಣಿವೆ ಕಾಡುಗಳಲ್ಲಿ ಕಾಲಿಡಲು ಎಂಟೆದೆ ಬೇಕು. ಅಂಥ ಭಯಂಕರ ಕಾಡದು. ಒಂದೊಂದು ಮರಕ್ಕೆ ನೂರು-ಇನ್ನೂರೈವತ್ತು ವರ್ಷ ವಯಸ್ಸು. ಒಂದೆರಡು ಫರ್ಲಾಂಗು ವಿಸ್ತೀರ್ಣವನ್ನು ಆಕ್ರಮಿಸಿಕೊಂಡ ಸೈತಾನನಂಥ ಮರಗಳು.

ಅಂಥ ಅರಣ್ಯದೊಳಗೆ ಫಾಸ್ಸಿ ಜೀವವನ್ನು ಎದೆಗವಚಿಕೊಂಡು, ಕಾಡುಗಳ್ಳರ ನೆರವಿನಿಂದ ಬಚಾವ್ ಆಗಿ,  ಒಬ್ಬಳೇ ಗೊರಿಲ್ಲಾಗಳ ಗುಂಗು ಹಿಡಿಸಿಕೊಂಡು ಅಲೆಯುತ್ತಿದ್ದಳು. ಒಮ್ಮೆ ಕಾಡೊಳಗೆ ಕಾಲಿಟ್ಟ ನಂತರ ಬರುವ ಖಾತ್ರಿ ಇಲ್ಲ. ಕಾಡಿನೊಳಗೆ ಏನು ಬೇಕಾದರೂ ಆಗಬಹುದು. ಏನಾದರೂ ಆದರೆ ಯಾರೂ ಬರುವುದಿಲ್ಲ. ಅಷ್ಟಕ್ಕೂ ಒಂದು ಹೆಣ ತಾನೆ? ಅದೂ ಅಪರಿಚಿತ ಹೆಣ್ಣಿನದು! ಕಾರಣ ಆಗ ಡಯಾನಾ ಫಾಸ್ಸಿ ಅಂದ್ರೆ ಯಾರಿಗೆ ಗೊತ್ತಿತ್ತು? ಅವಳ ಹೆತ್ತವರು ಸಹ ಅವಳ ಆಸೆ ಬಿಟ್ಟು ರವಾಂಡಕ್ಕೆ ಕಳಿಸಿದ್ದರು.

ಗೊರಿಲ್ಲಾಗಳ ಜೀವನವನ್ನು ಅಧ್ಯಯನ ಮಾಡಬೇಕು, ಅವುಗಳೊಂದಿಗೇ ಬದುಕಿ ಅವುಗಳನ್ನು  ಮಾಡಿಕೊಳ್ಳಬೇಕು, ಅಳಿವಿನ ಅಂಚಿನಲ್ಲಿರುವ ಗೊರಿಲ್ಲಾಗಳ ಸಂತತಿಯನ್ನು ಸಂರಕ್ಷಿಸಬೇಕು, ಈ ಕುರಿತು ವಿಶ್ವದಾದ್ಯಂತ ಅರಿವು ಮೂಡಿಸಬೇಕು. ಅದೇ ತನ್ನ ಜೀವನಧರ್ಮವಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕಾಡಿಗಿಳಿದ ಫಾಸ್ಸಿ, ತನ್ನ ಇಚ್ಛೆ ಈಡೇರುವ ತನಕ ಅಲ್ಲಿಂದ ಹೊರಬರಲೇ ಇಲ್ಲ. ಗೊರಿಲ್ಲಾಗಳೇ ಜೀವನ, ಅವುಗಳೇ ಸಂಸಾರ! ಅದೆಂಥ ಶ್ರದ್ಧೆಯಿದ್ದಿರಬಹುದು?

ನಾವು ರವಾಂಡದ ಕಾಡುಗಳಲ್ಲಿ ಗೊರಿಲ್ಲಾ ಚಾರಣಕ್ಕೆ ಹೋಗುವಾಗ, ಅಲ್ಲಿನ ಗೈಡ್, ಫಾಸ್ಸಿ ಬಗ್ಗೆ ಹಲವಾರು ಕತೆಗಳನ್ನು ಹೇಳಿದ್ದ. ಗೊರಿಲ್ಲಾಗಳಂತೆ  ಫಾಸ್ಸಿಯ ಬಗೆಗೂ ಅಗಾಧ ಕುತೂಹಲವನ್ನು  ಇಂದು ವಿರುಂಗ ಅರಣ್ಯ ಪ್ರದೇಶದಲ್ಲಿ ಗೊರಿಲ್ಲಾಗಳಿದ್ದರೆ, ಅದಕ್ಕೆ ಅವಳೇ ಕಾರಣ ಎಂದು ಅಭಿಮಾನದಿಂದ ಮಾತಾಡಿದ್ದ. ಎಷ್ಟೋ ರಾತ್ರಿ ಕಾಡಿನಿಂದ ವಾಪಸ್ ಬರಲಾಗದೇ ಗೊರಿಲ್ಲಾಗಳ ಜತೆಯೇ ಕಳೆದ ಫಾಸ್ಸಿಯ ಧೈರ್ಯ, ಛಲದ ಬಣ್ಣನೆ ಮಾಡಿದ್ದ. ಆಕೆ ಗೊರಿಲ್ಲಾಗಳ ಬಗ್ಗೆ ಅದೆಂಥ ಗುಂಗನ್ನು ಹಚ್ಚಿಕೊಂಡಿದ್ದಳೆಂದರೆ, ನೀರು, ಆಹಾರ ಪೊಟ್ಟಣವನ್ನು ಕಟ್ಟಿಕೊಂಡು ಕಾಡಿಗಿಳಿದರೆ ಮೂರ್ನಾಲ್ಕು ದಿನಗಳಾದರೂ ವಾಪಸ್ ಬರುತ್ತಿರಲಿಲ್ಲ. ಅವಳ ಜತೆಯಲ್ಲಿ ಯಾರಾದರೂ ಇದ್ದರೆ ಸರಿ, ಇಲ್ಲದಿದ್ದರೂ ಬೇಸರವಿಲ್ಲ. ಹೆಗಲಿಗೆ ಬ್ಯಾಗು, ಕೈಯಲ್ಲಿ  ಹಿಡಿದು ಒಬ್ಬಳೇ ಹೊರಟುಬಿಡುತ್ತಿದ್ದಳು.

‘ಸಾರ್, ನನಗೆ ಆಕೆಯೇ ಸ್ಫೂರ್ತಿ. ಅವಳ ಜತೆಗೆ ಕೆಲ ದಿನ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಅವಳು ಬಿಟ್ಟುಹೋದ ಆದರ್ಶವನ್ನು ಕಾಪಾಡಲು ನಾನು ಗೊರಿಲ್ಲಾಗಳ ಗೈಡ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಪಾಲಿಗೆ ಆಕೆಯೇ ದೇವರು, ಆದರ್ಶ, ಅವಳೇ ರೋಲ್ ಮಾಡೆಲ್’ ಎಂದು ಗೈಡ್ ಹೇಳಿದಾಗ, ಫಾಸ್ಸಿಯ ವ್ಯಕ್ತಿತ್ವ ಹೀಗಿರಬಹುದೆಂದು ಮನಸ್ಸಿನಲ್ಲಿ ಆಕೆಯ ಚಿತ್ರ ಬಿಡಿಸುತ್ತಿದ್ದೆ.

1966ರಲ್ಲಿ ಫಾಸ್ಸಿ ಕಾಂಗೋದ ಕಾಡಿಗೆ ಗೊರಿಲ್ಲಾಗಳನ್ನು  ಬಂದಳು. ಆಗ ಆ ದೇಶದಲ್ಲಿ ಆಂತರಿಕ ಕ್ಷೋಭೆಯಿಂದ ಜನಜೀವನ ಕಲ್ಲವಿಲಗೊಂಡಿತ್ತು. ಗೊರಿಲ್ಲಾಗಳನ್ನು ಕೊಂದು ಮಾರುವವರು, ಅಪಹರಣಕಾರರು ಫಾಸ್ಸಿಯ ಮೇಲೆ ಹಲ್ಲೆಗೆ ಪ್ರಯತ್ನಿಸಿದರು. ಆಗ ಆಕೆ ಸ್ವಲ್ಪವೂ ಧೃತಿಗೆಡಲಿಲ್ಲ. ಬೇರೆಯವರಾಗಿದ್ದರೆ ಆ ಗೊರಿಲ್ಲಾಗಳ ಸಹವಾಸವೇ ಸಾಕು ಎಂದು ಸ್ವದೇಶಕ್ಕೆ ಮರಳುತ್ತಿದ್ದರೇನೋ?

ಆದರೆ ಫಾಸ್ಸಿ ಅಲ್ಲಿಂದ ಕಾಡಿನ ಮೂಲಕ ರವಾಂಡಕ್ಕೆ ಬಂದಳು. ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರದಲ್ಲಿ ಗೊರಿಲ್ಲಾ ಸಂಶೋಧನಾ ಕೇಂದ್ರವನ್ನು ಒಂದು ಪುಟ್ಟ ಗುಡಿಸಿಲಿನಲ್ಲಿ ಸ್ಥಾಪಿಸಿ ಕೆಲಸ  ಮಾಡಿಬಿಟ್ಟಳು. ಆರಂಭದಲ್ಲಿ ಸ್ಥಳೀಯ ಆದಿವಾಸಿಗಳು ಆಕೆಗೆ ಇನ್ನಿಲ್ಲದ ಕಿರುಕುಳ ಕೊಟ್ಟರು. ಗೊರಿಲ್ಲಾಗಳ ಬಗ್ಗೆ ಅಧ್ಯಯನ ಮಾಡುವುದರಿಂದ ಆಕೆಗೇನು ಪ್ರಯೋಜನ, ಇದರಲ್ಲಿ ಏನೋ ಇರಬೇಕು ಎಂದು ಸಂದೇಹ ವ್ಯಕ್ತಪಡಿಸಿದರು. ಆದರೆ ಫಾಸ್ಸಿ ಅವರೆಲ್ಲರನ್ನೂ ತನ್ನ ಕೆಲಸದಲ್ಲಿ ತೊಡಗಿಸಿಕೊಂಡು ವಿಶ್ವಾಸ ಮೂಡಿಸಿದಳು.

ಎಂಟು ವರ್ಷ ಗೊರಿಲ್ಲಾಗಳ ಸಹವಾಸದಲ್ಲಿ ಕಳೆದಳು. ಕಾಡಿನಲ್ಲಿರುವ  ಎಲ್ಲ ಗೊರಿಲ್ಲಾಗಳನ್ನು ಅವಳು ಪರಿಚಯ ಮಾಡಿಕೊಂಡಿದ್ದಳು. ಮೊಟ್ಟ ಮೊದಲ ಬಾರಿಗೆ ಗೊರಿಲ್ಲಾಗಳ ಗಣತಿ ಕಾರ್ಯವನ್ನು ವೈಜ್ಞಾನಿಕವಾಗಿ ಮಾಡಿದಳು. ಅಲ್ಲಿವರೆಗೆ ಗೊರಿಲ್ಲಾಗಳಲ್ಲಿರುವ  ಪ್ರಭೇದಗಳ ಬಗೆಗೆ ಹೆಚ್ಚು ಮಾಹಿತಿ ಇರಲಿಲ್ಲ.

ಇದೇ ಸಂದರ್ಭದಲ್ಲಿ ಫಾಸ್ಸಿಗೆ ಬಾಬ್ ಕ್ಯಾಂಪ್ಬೆಲ್ ಎಂಬ ಫೋಟೊಗ್ರಾಫರ್‌ನ ಪರಿಚಯವಾಯಿತು. ಆತ ನ್ಯಾಷನಲ್ ಜಿಯಾಗ್ರಾಫಿಕ್ ಮ್ಯಾಗಜಿನ್‌ಗೆ ಕೆಲಸ ಮಾಡುತ್ತಿದ್ದ. ಆತ ತೆಗೆದ ಫೋಟೊಗಳು ಗೊರಿಲ್ಲಾಗಳ ಬಗೆಗೆ ಜಾಗತಿಕ ಕುತೂಹಲ ಮೂಡಿಸಿದವು. ಕ್ಯಾಂಪ್ಬೆಲ್ ಬಹಳ ನಾಚಿಕೆ ಸ್ವಭಾವದವ. ಆತನಿಗೆ ಮಹಾ ಗಂಡುಬೀರಿ ಫಾಸ್ಸಿ ಜತೆಗೆ ಪ್ರೇಮಾಂಕುರವಾಯಿತು. ಅವರಿಬ್ಬರ  ನಡುವೆ ಇದ್ದ ಸಾಮಾನ್ಯ ಸಂಗತಿಯೆಂದರೆ ಗೊರಿಲ್ಲಾ! ಕ್ಯಾಂಪ್ಬೆಲ್‌ಗೆ ಮದುವೆಯಾಗಿತ್ತು. ಆದರೆ ಫಾಸ್ಸಿಯ ಗೊರಿಲ್ಲಾ ಪ್ರೇಮ  ಆತ ಆಕೆಯ ಪ್ರೇಮಿಯಾಗಿದ್ದ. ಅವರಿಬ್ಬರೂ ಮದುವೆಯಾಗಲು ಒಂದು ಸಂದರ್ಭದಲ್ಲಿ ನಿರ್ಧರಿಸಿದರು. ಆದರೆ ‘ನಿನಗಿಂತ ನನಗೆ ಗೊರಿಲ್ಲಾಗಳೇ ಮುಖ್ಯ’ ಎಂದು ಫಾಸ್ಸಿಯೇ ಮದುವೆಯನ್ನು ಮುರಿದಳು.

ಈ ಮಧ್ಯೆ ಆಕೆ ಕ್ಯಾಂಪ್ಬೆಲ್‌ನಿಂದ ಗರ್ಭವತಿಯಾದಳು. ಮಗುವಾದರೆ ಗೊರಿಲ್ಲಾಗಳ ಕುರಿತಾದ ಅಧ್ಯಯನ ಹಳ್ಳ ಹಿಡಿಯಬಹುದೆಂದು ಅಬಾರ್ಶನ್ ಮಾಡಿಸಿಕೊಂಡಳು. ತನಗೆ ತಾಯಿಯಾಗುವುದಕ್ಕಿಂತ, ಮಗುವನ್ನು ಪಡೆಯುವುದಕ್ಕಿಂತ ಗೊರಿಲ್ಲಾಗಳೇ ಮುಖ್ಯ ಎಂದು ಕ್ಯಾಂಪ್ಟೆಲ್ ಜತೆ ಜಗಳ ತೆಗೆದಳು. ಎರಡನೆ ಸಲ ಗರ್ಭಿಣಿಯಾದಾಗಲೂ ಕ್ಯಾಂಪ್ಬೆಲ್ ಪರಿಪರಿಯಾಗಿ ಬೇಡಿಕೊಂಡ. ಆದರೆ ಫಾಸ್ಸಿ  ಪುನಃ ಅಬಾರ್ಶನ್ ಮಾಡಿಸಿಕೊಂಡಳು. ಇದರಿಂದ ಇಬ್ಬರೂ ಶಾಶ್ವತವಾಗಿ ದೂರವಾದರು. ಇದರಿಂದ ಆಕೆ ವಿಚಲಿತಳಾದಳು. ಏಕಾಂಗಿತನ ಕಾಡಲಾರಂಭಿಸಿತು. ಆದರೆ ಗೊರಿಲ್ಲಾಗಳಿಗಾಗಿಯೇ ಕುಡಿತವನ್ನು ಬಿಟ್ಟಳು.

ಗೊರಿಲ್ಲಾಗಳ ಬಗ್ಗೆ ಮೂರು ಅಧ್ಯಯನದ ವರದಿಯನ್ನು ಸಲ್ಲಿಸುವುದಕ್ಕಾಗಿ ಆಗಾಗ ಲೂಯಿಸ್ ಲೀಕಿಯನ್ನು ಭೇಟಿ ಮಾಡುತ್ತಿದ್ದಳು. ಸಾಮೀಪ್ಯ ಬಹು ಬೇಗ ಪ್ರೇಮಕ್ಕೆ ತಿರುಗಿತು. ಆದರೆ ಗೊರಿಲ್ಲಾಗಳನ್ನು ನೆನೆದು, ತನ್ನ ಅಧ್ಯಯನ ಹದ ತಪ್ಪಬಹುದು, ಏಕಾಗ್ರತೆಗೆ ಕುಂದು ಬರಬಹುದೆಂದು ತನ್ನ ಮಾರ್ಗದರ್ಶಕನ ಪ್ರೀತಿಯನ್ನು ತಿರಸ್ಕರಿಸಿದಳು.

ಈ ನಡುವೆ ತನ್ನ  ತೀವ್ರವಾಗಿ ಪ್ರೀತಿಸುತ್ತಿದ್ದ ‘ಡಿಜಿಟ್’ ಎಂದು ಹೆಸರಿಟ್ಟಿದ್ದ ಗೊರಿಲ್ಲಾವನ್ನು ಕಾಡುಗಳ್ಳರು ಕೊಂದು ಹಾಕಿದರು. ಈ ಸುದ್ದಿಯನ್ನು ಪ್ರಸಿದ್ಧ ಬಾನುಲಿ ಪತ್ರಕರ್ತ ವಾಲ್ಟರ್ ಕ್ರಾಂಕೈಟ್ ಸವಿವರವಾಗಿ ವರದಿ ಮಾಡಿದ. ಇದು ಸಹಜವಾಗಿ ಜಾಗತಿಕ ಮಹತ್ವವನ್ನು ಪಡೆಯಿತು. ಫಾಸ್ಸಿಯ ಗೊರಿಲ್ಲಾ ಹುಚ್ಚು ಜಗತ್ತಿಗೆ ಗೊತ್ತಾಗಿದ್ದೇ ಆಗ.

ಇದಾದ ನಂತರ ಗೊರಿಲ್ಲಾಗಳ ಕುರಿತು ಉಪನ್ಯಾಸ ನೀಡುವಂತೆ ಫಾಸ್ಸಿಗೆ ಆಹ್ವಾನಗಳು ಬರಲಾರಂಭಿಸಿದವು. ತನ್ನ ಸಂಶೋಧನಾ ಕೇಂದ್ರ ಹಾಗೂ ಗೊರಿಲ್ಲಾಗಳ ಸಂರಕ್ಷಣೆಗಾಗಿ ಆಕೆ ಹಣವನ್ನು ಸಂಗ್ರಹಿಸಲಾರಂಭಿಸಿದಳು. ಆಕೆ  ಮಾಡುತ್ತಾ ಗೊರಿಲ್ಲಾಗಳ ಬಗ್ಗೆ ತಿಳಿವಳಿಕೆ, ಜಾಗೃತಿ ಮೂಡಿಸುತ್ತಿದ್ದರೆ, ಇತ್ತ ಆಕೆಯ ಸಹಾಯಕರು ಸಂಶೋಧನಾ ಕೇಂದ್ರದಲ್ಲಿ ಒಟ್ಟಾಗಿದ್ದ ಹಣವನ್ನು ಎತ್ತಿಕೊಂಡು ಓಡಿಹೋದರು.

ಗೊರಿಲ್ಲಾಗಳ ಬಗ್ಗೆ ಭಾಷಣ ಬಿಗಿದರೆ ಹಣ ಸಿಗುತ್ತಿತ್ತು. ಆದರೆ ಗೊರಿಲ್ಲಾಗಳನ್ನುಬಿಟ್ಟು ಬಹಳ ಕಾಲ ಉಳಿದರೆ ಅವಳು ಹುಚ್ಚಿಯಂತೆ ಆಡುತ್ತಿದ್ದಳು. ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷ ಅವಧಿಗೆ ಪ್ರೊಫೆಸರ್‌ಗಿರಿ ಸಿಕ್ಕಿತ್ತು. ಆದರೆ ಅಷ್ಟು ದಿನ ಗೊರಿಲ್ಲಾಗಳನ್ನು ಬಿಟ್ಟಿರುವುದಾದರೂ ಹೇಗೆ ಎಂದು ಅದನ್ನು ಬಿಟ್ಟು ಬಂದಳು. ಗೊರಿಲ್ಲಾಗಳ ಬಗ್ಗೆ  ನೀಡಿದರೆ ಹಣ ಸಿಗುತ್ತದೆಂದು ಗೊರಿಲ್ಲಾಗಳನ್ನು ಬಿಟ್ಟಿರಲು ಸಾಧ್ಯವಾಗುತ್ತಿರಲಿಲ್ಲ.

ಈ ದ್ವಂದ್ವ, ವೈರುಧ್ಯ ಅವಳನ್ನು ಕಿತ್ತು ತಿನ್ನುತ್ತಿದ್ದವು. ಗೊರಿಲ್ಲಾಗಳನ್ನು ತುಚ್ಛವಾಗಿ ಕಂಡರೆ, ಅವುಗಳನ್ನು ಸಾಯಿಸಲು ಹುನ್ನಾರ ಹಾಕಿದವರನ್ನು ಕಂಡರೆ, ಕೆಂಡಾಮಂಡಲವಾಗುತ್ತಿದ್ದಳು. ಹೊಡೆದಾಟಕ್ಕೆ ನಿಲ್ಲುತ್ತಿದ್ದಳು. ಇಂಥ ಹಲವು ಘಟನೆಗಳು ಜರುಗಿದವು.

ಈ ಎಲ್ಲವುಗಳ ಪರಿಣಾಮವಾಗಿ ಆಕೆ ಜರ್ಝರಿತಳಾದಳು. ‘ಗೊರಿಲ್ಲಾ ಹಾಗೂ ವೈಯಕ್ತಿಕ ಬದುಕು’ ಎಂಬ ಪ್ರಶ್ನೆ ಬಂದಾಗ ಆಕೆ ಮೊದಲನೆಯದನ್ನೇ ಆಯ್ದುಕೊಂಡಳು. ಇದರಿಂದ ಅವಳು ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾದಳು.

ಫಾಸ್ಸಿಯ ಪ್ರಯತ್ನದಿಂದಾಗಿ  ಸಂರಕ್ಷಣೆ ಜಾಗತಿಕ ಮಹತ್ವವನ್ನು ಪಡೆಯಿತು. ಇದರಿಂದ ಗೊರಿಲ್ಲಾ ಹಂತಕರಿಗೆ ಫಾಸ್ಸಿ ಬಿಸಿ ತುಪ್ಪವಾದಳು. 1985, ಡಿ. 25ರಂದು ಫಾಸ್ಸಿ ತನ್ನ ಡೇರೆಯಲ್ಲಿ ನಿಗೂಢವಾಗಿ ಕೊಲೆಯಾದಳು. ತಾನು ಕೊಲೆಯಾಗುತ್ತೇನೆಂದು ಆಕೆಗೆ ಗೊತ್ತಿತ್ತು. ‘ನಾನು ಸತ್ತರೂ ಪರವಾಗಿಲ್ಲ, ಈ ಗೊರಿಲ್ಲಾಗಳ ಸಂತತಿ ಬದುಕಿಕೊಳ್ಳಲಿ’ ಎಂದು ಫಾಸ್ಸಿ ಬರೆದಿಟ್ಟಿದ್ದಳು.

‘ಇಂದು ಗೊರಿಲ್ಲಾಗಳು ಉಳಿದುಕೊಂಡಿದ್ದರೆ ಅದಕ್ಕೆ ಫಾಸ್ಸಿಯೇ ಕಾರಣ’ ಅಂದಿದ್ದ ನಮ್ಮ ಗೈಡ್. ಆಕೆಗೆ ಮನದಲ್ಲಿ ನಮಿಸಿದೆ.

ಮೊನ್ನೆ ರವಾಂಡಕ್ಕೆ ಹೋದಾಗ ಎಲ್ಲೆಲ್ಲೂ ಗೊರಿಲ್ಲಾ  ಕಣ್ಣಿಗೆ ರಾಚುತ್ತಿದ್ದವು. ರವಾಂಡ ಪ್ರವಾಸೋದ್ಯಮ, ದೇಶ ನಿಂತಿರುವುದೇ ಗೊರಿಲ್ಲಾಗಳಿಂದ. ರವಾಂಡಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು ಈ ವಾನರರೇ ಬೇಕು.

ಆದರೆ ಎಲ್ಲೂ ಡಯಾನಾ ಫಾಸ್ಸಿ ಕಾಣಲಿಲ್ಲ! ಅವಳ ಹೆಸರೂ. ಬಹುಶಃ ಗೊರಿಲ್ಲಾಗಳಲ್ಲೇ ಅವಳು ಅವಿತಿರಬಹುದು!

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close