About Us Advertise with us Be a Reporter E-Paper

ಅಂಕಣಗಳು

ಬಾಲಸನ್ಯಾಸಕ್ಕಿದು ಕಾಲವಲ್ಲ!

ರೋಹಿತ್ ಚಕ್ರತೀರ್ಥ

ಒಂದು ಕಲ್ಲು ಕೆರೆಯಲ್ಲಿ ದೊಪ್ಪನೆ ಬಿದ್ದಾಗ ಕಲ್ಲೇನೋ ನೀರಲ್ಲಿ ಮುಳುಗುತ್ತದೆ. ಆದರೆ ಅದೆಬ್ಬಿಸಿದ ತರಂಗಗಳು ಕೆಲ ಕಾಲ ಕೆರೆಯನ್ನು ಪ್ರಕ್ಷುಬ್ಧ ಸ್ಥಿತಿಯಲ್ಲಿಡುತ್ತವೆ. ಪ್ರಶಾಂತವಾಗಿದೆ ಎನ್ನಿಸುವ ಕೊಳದಲ್ಲಿ ಕೂಡ ಅಂಥದೊಂದು ಪ್ರಕ್ಷುಬ್ಧತೆ, ಮರದೊಳಗಣ ಬೆಂಕಿಯಂತೆ, ಸದ್ದಿಲ್ಲದೆ ಅಡಗಿರುತ್ತದೆ ಎಂಬುದನ್ನು ತೋರಿಸಲು ಕಲ್ಲು ರಭಸದಿಂದ ಬೀಳುವುದು ಅನಿವಾರ್ಯ. ಉಡುಪಿಯ ಅಷ್ಟಮಠಗಳಲ್ಲೊಂದಾದ ಶೀರೂರು ಮಠದ ಮುಖ್ಯಸ್ಥರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥರು ಮೊನ್ನೆ (ಜುಲೈ 19) ತೀರಿಕೊಂಡಾಗ ಅಂಥದ್ದೇ ಒಂದು ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಯಿತು. ಬಹುಶಃ ಮೂರು ತಿಂಗಳ ಹಿಂದೆ ಚುನಾವಣೆಗೆ ನಿಲ್ಲುವ ಪ್ರಸ್ತಾಪ ಮುಂದಿಟ್ಟು ಸುದ್ದಿ ಮಾಡದೇ ಹೋಗಿದ್ದರೆ ಲಕ್ಷ್ಮೀವರರ ಮರಣ ಈಗಿನಂತೆ ದೊಡ್ಡ ಸುದ್ದಿ ಮಾಡುತ್ತಿತ್ತೇ? ಅನುಮಾನ. ಸ್ವಾಮೀಜಿ ಕರ್ನಾಟಕದ ಅಸೆಂಬ್ಲಿ ಚುನಾವಣೆಯ ವೇಳೆ ತಾನು ಉಡುಪಿ ಮತಕ್ಷೇತ್ರದಿಂದ ಸ್ಪರ್ಧೆಗೆ ನಿಲ್ಲುತ್ತೇನೆಂದು ಹೇಳುವ ಮೂಲಕ ಸುದ್ದಿ ಮಾಡಿದರು. ಅಷ್ಟೇ ಆಗಿದ್ದರೆ ಪರವಾಯಿಲ್ಲ; ಆದರೆ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಣೆ ಮಾಡುವ ಸಂದರ್ಭದಲ್ಲಿ ಸುದ್ದಿವಾಹಿನಿಗಳಿಗೆ ಪುಷ್ಕಳ ಭೋಜನವಾಗುವಂಥ ಮಸಾಲೆಸುದ್ದಿಗಳನ್ನೂ ಹರಿಯಬಿಟ್ಟರು. ತಾನು ಸಂನ್ಯಾಸ ಸ್ವೀಕರಿಸಿದಾಗ ಎಳೆಹುಡುಗನಾಗಿದ್ದೆ. ಏನೊಂದೂ ಅರಿಯದ ವಯಸ್ಸಿನಲ್ಲಿ ಸಂನ್ಯಾಸದೀಕ್ಷೆ ಪಡೆದು ಮಠದ ಯತಿಯಾದೆ. ತಾರುಣ್ಯದ ದಿನಗಳಲ್ಲಿ ತನಗೂ ಮಾನವಸಹಜವಾದ ಕಾಮವಾಂಛೆ ಬಂದು ಸ್ತ್ರೀಸಂಗ ಮಾಡಿದೆ, ಮಕ್ಕಳನ್ನೂ ಪಡೆದೆ – ಎಂದು ಸ್ವಾಮೀಜಿ ಹೇಳಿಕೊಂಡದ್ದು ದೊಡ್ಡ ಸುದ್ದಿಯಾಯಿತು. ಮಠದ ಸ್ವಾಮಿಗಳು ಚುನಾವಣೆಗೆ ನಿಲ್ಲುತ್ತಾರಂತೆ ಎಂಬ ಸುದ್ದಿ ಹಿನ್ನೆಲೆಗೆ ಸರಿದು ಅವರ ಬದುಕಿನ ಸ್ಫೋಟಕ ವಿವರಗಳೇ ಪತ್ರಿಕೆಗಳ ಪುಟಗಳಲ್ಲಿ ರಾರಾಜಿಸಿದವು.

ಶೀರೂರು ಸ್ವಾಮಿಗಳದ್ದು ಸಂಸ್ಕಾರದ ನಾರಣಪ್ಪನಂತೆ ಕಲರ್‌ಫುಲ್ ಎಂಬುದು ಉಡುಪಿಯ ಪರಿಸರದಲ್ಲಿರುವ ಜನರಿಗೆ ತಿಳಿಯದ ಸಂಗತಿಯೇನಲ್ಲ. ಏಳು ಮಠಾಧೀಶರುಗಳ ದಾರಿ ಒಂದಾದರೆ ಶೀರೂರಿನವರದ್ದೇ ಒಂದು ದಾರಿ. ಇದ್ದದ್ದನ್ನು ಇದ್ದಂತೆ ಹೇಳುವ, ಸರಿ ಅನ್ನಿಸಿದ್ದನ್ನು ಯಾವ ದೊಣೆನಾಯ್ಕನ ಅಪ್ಪಣೆಗೂ ಕಾಯದೆ ಮಾಡಿಬಿಡುವ, ಮಾತಿಗೆ ಮಾತು – ಪೆಟ್ಟಿಗೆ ಪೆಟ್ಟು ಎಂದು ಎಂಥ ಪಂಥಾಹ್ವಾನವನ್ನೂ ಸ್ವೀಕರಿಸಿ ಎದೆ ತಟ್ಟಿ ನಿಲ್ಲುವ ರಗಡು ವ್ಯಕ್ತಿತ್ವ ಅವರದ್ದು ಎಂಬುದು ಅವರ ಸಂಪರ್ಕಕ್ಕೆ ಬಂದವರಿಗೆಲ್ಲ ಗೊತ್ತಿದೆ. ಮಠದೊಳಗೆ ಅಕ್ವೇರಿಯಂ ಇಡಬಾರದು ಎಂದು ಬೇರೆ ಸ್ವಾಮೀಜಿಗಳು ಭಗವಂತನ ಮೊದಲ ಅವತಾರವೇ ಮತ್ಸ್ಯಾವತಾರ ಅಲ್ಲವೇ ಎಂದು ಪ್ರಶ್ನಿಸಿ, ಪ್ರಶ್ನಿಸಿದವರ ಬಾಯಿ ಮುಚ್ಚಿಸಿದ್ದ ಸ್ವಾಮೀಜಿ ಲಕ್ಷ್ಮೀವರರು – ಎಂಬ ಒಂದೇ ಉದಾಹರಣೆ ಸಾಕು, ಅವರ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಲು. ಅಂಥ ಸ್ವಾಮೀಜಿಯ ಅಕಾಲಮರಣದ ಈ ಸಂದರ್ಭದಲ್ಲಿ, ಅವರು ತನ್ನ ಕೊನೆಗಾಲದಲ್ಲಿ ಹೇಳಿದ ಬಾಲಸಂನ್ಯಾಸದ ವಿಷಯವನ್ನು ನಾವು ಚರ್ಚೆಗೆತ್ತಿಕೊಳ್ಳುವುದು ಉಚಿತ ಎನ್ನಿಸುತ್ತದೆ. ಬಾಲ್ಯ ಸಂನ್ಯಾಸ ಬೇಕೆ? ಅದಕ್ಕೆ ಶಾಸ್ತ್ರದ ಒಪ್ಪಿಗೆ ಇದೆಯೇ? 1ರಿಂದ 100ರವರೆಗಿನ ಸಂಖ್ಯೆಗಳನ್ನು ಎಣಿಸುವುದನ್ನು ಕಲಿಯುವುದಕ್ಕೆ ಮುನ್ನವೇ ಗಾಯತ್ರಿ ಮಾಡಬೇಕಾದ ಸಂನ್ಯಾಸಕ್ಕೆ ಎಳೆತರುವುದು ಆ ಎಳೆಪ್ರಾಯದ ಹುಡುಗರಿಗೆ ಕೊಡುವ ಶಿಕ್ಷೆ ಅಲ್ಲವೆ? ಯಾರ್ಯಾರದೋ ಒತ್ತಾಯಕ್ಕೆ ಎರವಾಗಿ ಕೇಶಮುಂಡನ ಮಾಡಿಸಿಕೊಂಡು ದಂಡ ಹಿಡಿದು ಯತಿಯಾದಾತನಿಗೆ ಆ ಯತಿಧರ್ಮದಲ್ಲಿ ಮತಿ ನಿಲ್ಲದಿದ್ದರೆ? ವಯೋಸಹಜ ಬಯಕೆಗಳು ಹುಟ್ಟಿದರೆ? ಕಾವಿ ಕಳಚಿ ಪ್ಯಾಂಟು-ಶರ್ಟು ತೊಡಬೇಕೆನಿಸಿದರೆ? ತನಗೂ ಎಲ್ಲರಂತೆ ಮಡದಿ-ಮಕ್ಕಳು-ಸಂಸಾರ ಬೇಕೆನಿಸಿದರೆ? ಅಥವಾ ಯಾವೊಂದು ವಾಂಛೆಗಳನ್ನೂ ಪ್ರಕಟಪಡಿಸದ ಸಂನ್ಯಾಸಿಗಳಿಗೂ ಒಳಗಿಂದೊಳಗೆ ಸುಪ್ತ ಬಯಕೆಗಳು ಇರುವುದಿಲ್ಲವೆ? ಜೀವಮಾನವೆಲ್ಲ ಯತಿಯಾಗಿ ಬದುಕು ತೇದವರು ನಿಜಕ್ಕೂ ವಿರಾಗಮೂರ್ತಿಗಳೇ ಆಗಿದ್ದರೆಂದು ಧರ್ಮ-ಮೋಕ್ಷಗಳು ಒಂದೆಡೆ, ಅರ್ಥ-ಕಾಮಗಳು ಇನ್ನೊಂದೆಡೆ ನಿಂತು ಹಗ್ಗಜಗ್ಗಾಟವಾಡಿದರೆ ಹುಲುಮಾನವ ಯಾವ ಕಡೆ ತುಯ್ಯಬೇಕು? ಈ ಎಲ್ಲ ಪ್ರಶ್ನೆಗಳ ಪಾತ್ರೆಗಳಲ್ಲಿ ಸಂನ್ಯಾಸದ ಶಾಟಿಯನ್ನು ಅದ್ದಿ ನಾವೀಗ ಲಿಟ್ಮಸ್ ಟೆಸ್‌ಟ್ ಮಾಡಬೇಕಾಗಿದೆ.

ಉಡುಪಿಗೂ ವಿವಾದಗಳಿಗೂ ಅವಿನಾಭಾವ ನಂಟು!

ಇದೀಗ, ಬಾಲಸಂನ್ಯಾಸ ಸಾಧುವೇ? ಮಧ್ವಾಚಾರ್ಯರಿಂದ ಸ್ಥಾಪನೆಯಾದ ಉಳಿದ ಮಠಗಳಲ್ಲಿ ವಯಸ್ಕರನ್ನು ಯತಿಗಳಾಗಿ ಸ್ವೀಕರಿಸುವ ಸಂಪ್ರದಾಯ ಇರುವಾಗ ಉಡುಪಿಯಲ್ಲೇಕೆ ಬಾಲಸಂನ್ಯಾಸಿಗಳಿಗೆ ದೀಕ್ಷೆ? ಎಂಬ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಹುಟ್ಟಿದೆ ಎನ್ನುವುದಕ್ಕಿಂತ ಮಾಧ್ಯಮಗಳು ಹುಟ್ಟಿಸಿದವು ಎನ್ನಬಹುದೇನೋ. ಈ ವಿಷಯವನ್ನು ಸಮಗ್ರವಾಗಿ ಗ್ರಹಿಸಬೇಕಾದರೆ ಉಡುಪಿಯ ಯತಿಪರಂಪರೆ ಹೇಗೆ ಬೆಳೆದುಬಂತು ಎಂಬುದನ್ನು ನೋಡಬೇಕಾಗುತ್ತದೆ.
ಮಲ್ಪೆಯ ಕಡಲಿನಲ್ಲಿ ಸಿಕ್ಕಿದ ಶ್ರೀಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಆ ದೇವರ ಪೂಜೆಗೆಂದು ತನ್ನ ಶಿಷ್ಯರಲ್ಲಿ ಎಂಟು ಮಂದಿಯನ್ನು (ಹೃಷಿಕೇಶತೀರ್ಥ, ನರಹರಿತೀರ್ಥ, ಜನಾರ್ದನತೀರ್ಥ, ಉಪೇಂದ್ರತೀರ್ಥ, ವಾಮನತೀರ್ಥ, ವಿಷ್ಣುತೀರ್ಥ, ರಾಮತೀರ್ಥ, ಅಧೋಕ್ಷಜತೀರ್ಥ) ನಿಯೋಜಿಸಿದರು. ಆ ಕಾಲದಲ್ಲಿ ಆಚಾರ್ಯ ಮಧ್ವರಿಗೆ ಬಹು ದೊಡ್ಡ ಶಿಷ್ಯ ಬಳಗ ಇತ್ತು. ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಆವರಣದಲ್ಲಿ ತಮ್ಮ ಪಾಠಪ್ರವಚನ ನಡೆಸುತ್ತಿದ್ದರು. ಕೃಷ್ಣನ ಪೂಜೆ ಮಾಡುವುದಕ್ಕೆಂದು ಅವರು ಶಿಷ್ಯರನ್ನು ಆರಿಸಬೇಕಾದರೆ, ಇರುವವರಲ್ಲಿ ಅತ್ಯುತ್ತಮರಾದವರನ್ನೇ ಆರಿಸಿದ್ದರೆಂಬುದನ್ನು ಯಾವ ಶಂಕೆಗೆ ಎಡೆಯಿಲ್ಲದಂತೆ ಊಹಿಸಬಹುದು. ಹಾಗಿದ್ದಾಗ, ಅವರಲ್ಲಿ ಯಾರೂ ಆರೇಳು ವರ್ಷಗಳ ಎಳೆ ಹುಡುಗರು ಇದ್ದಿರಲಾರರು. ಎಲ್ಲರೂ ಬಹುಶಃ 15ರಿಂದ 25 ವರ್ಷ ವಯಸ್ಸಿನ ಯುವಕರೇ ಆಗಿದ್ದರೆಂದು ಊಹಿಸಬಹುದು (ಅವರಲ್ಲಿ ಹೆಚ್ಚಿನವರು ಮಧ್ವರ ಡಿಕ್ಟೇಶನ್‌ಗಳನ್ನು ತಾಳೆಗರಿಗಳಲ್ಲಿ ಬರೆದಿಡುತ್ತಿದ್ದರು. ಸ್ವಂತವಾಗಿ ತಾವೇ ವೇದ-ಬ್ರಹ್ಮಸೂತ್ರಗಳ ಅರ್ಥವಿವರಣೆ ಮಾಡಬಲ್ಲವರಾಗಿದ್ದರು). ಈ ಎಂಟು ಶಿಷ್ಯರು ಕಾಲಕ್ರಮೇಣ (ಮಧ್ವರು ತೆರಳಿದ ಬಹುಕಾಲದ ನಂತರ) ಮಠಗಳನ್ನು ಕಟ್ಟಿಕೊಂಡರು (ಬಹುತೇಕರು ತಪ್ಪಾಗಿ ಊಹಿಸಿರುವಂತೆ – ಮಧ್ವರು ತಮ್ಮ ಜೀವಿತಕಾಲದಲ್ಲಿ ಯಾವುದೇ ಮಠ ಕಟ್ಟಲಿಲ್ಲ; ತಮ್ಮ ಶಿಷ್ಯರಿಗೆ ಕಟ್ಟಿಕೊಡಲೂ ಇಲ್ಲ! ಉಡುಪಿಯಲ್ಲಿ ಅಷ್ಟಮಠಗಳ ಕಟ್ಟುವಿಕೆಯ ಕೆಲಸ ಶುರುವಾಗಿದ್ದು ಮಧ್ವರ ನಂತರ. ಪೂರ್ಣಗೊಂಡದ್ದು ವಾದಿರಾಜರ ಕಾಲದಲ್ಲಿ). ಮಧ್ವರ ಶಿಷ್ಯರು ಕಟ್ಟಿಕೊಂಡ ಈ ಮಠಗಳಿಗೆ ಉಡುಪಿಯ ಯಾವ್ಯಾವ ಊರುಗಳಿಂದ ಹೆಚ್ಚಿನ ದತ್ತಿ, ದೇಣಿಗೆಗಳು ಬಂದವೋ ಆಯಾ ಊರುಗಳ ಹೆಸರುಗಳೇ ಮಠಗಳಿಗೆ ಅಂಟಿಕೊಂಡವು. ಹಾಗಾಗಿ, ಪಲಿಮಾರು, ಅದಮಾರು, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು, ಪೇಜಾವರ – ಇವಿಷ್ಟೂ ಉಡುಪಿಯ ಎಂಟು ಮಠಗಳಿಗೆ ಉಂಬಳಿ ಕೊಟ್ಟ ಊರುಗಳ ಹೆಸರುಗಳೇ ವಿನಾ ಯಾವುದೇ ಯತಿಗಳ ಹೆಸರುಗಳಲ್ಲ ಎಂಬುದನ್ನು ಗಮನಿಸಬೇಕು.

ಈ ಎಂಟು ಮಠಗಳ ಪರಂಪರೆಯಲ್ಲಿ ಮುಂದೆ ಯತಿಗಳಾಗಿ ಬಂದವರು, ತಮ್ಮದೇ ಶಿಷ್ಯವರ್ಗವನ್ನು ಹೊಂದಿದ್ದು, ಆ ಶಿಷ್ಯರಲ್ಲಿ ಉತ್ತಮನಾದ ಒಬ್ಬನಿಗೆ ಯತಿ ಪಟ್ಟವನ್ನು ಕೊಡುವ ಕ್ರಮ ಪ್ರಾರಂಭವಾಯಿತು. ಯಾವುದೋ ಕಾಲಘಟ್ಟದಲ್ಲಿ, ಎಲ್ಲ ಶಾಸ್ತ್ರಾಧ್ಯಯನ ಪೂರೈಸಿದ ಶಿಷ್ಯರನ್ನು ಯತಿಗಳಾಗಿ ಕೂರಿಸುವ ಪದ್ಧತಿ ಕೈಬಿಟ್ಟುಹೋಗಿ ಸಣ್ಣ ಹುಡುಗರನ್ನು ತಂದು ಕೂರಿಸುವ ಪದ್ಧತಿ ಪ್ರಾರಂಭವಾಯಿತು. ಯತಿ ಆಗಬೇಕಾದವನು ಶಾಸ್ತ್ರಗಳ ಅಧ್ಯಯನ ಮಾಡಿರಬೇಕು ಅನ್ನುವುದಕ್ಕಿಂತಲೂ ಮಠ ಎಂಬ ವ್ಯವಸ್ಥೆಗೆ ಆತನೊಬ್ಬ ಸಂಕೇತಮಾತ್ರ ಮುಖ್ಯಸ್ಥನಾಗಿರಬೇಕು ಎಂಬ ಸ್ಥಿತ್ಯಂತರ ಯಾವಾಗ ಆಯಿತೋ ಆಗ ನಡೆದ ಪವಾಡ ಇದು. ಆ ಸ್ಥಿತ್ಯಂತರ ಯಾಕಾಗಿರಬಹುದು ಎಂಬುದು ಮಠಗಳ ಆಡಳಿತವನ್ನೂ ಆಡಳಿತಗಾರರನ್ನೂ ಹತ್ತಿರದಿಂದ ನೋಡಿದವರಿಗೆ ಅರ್ಥವಾಗುತ್ತದೆ. ಪಾರಲೌಕಿಕಕ್ಕಿಂತ ಲೌಕಿಕದಲ್ಲಿ ಆಸಕ್ತರಾದ ಹುಲುಮಾನವರು ಮಾಡಿಕೊಂಡ ಈ ಎಲ್ಲ ಬದಲಾವಣೆಗಳಿಗೆ ಯಾವುದೋ ಕಾಲದಲ್ಲಿ ಆಗಿಹೋದ ಮಧ್ವಾಚಾರ್ಯರಂಥ ಸಂತರನ್ನು ಪ್ರಯೋಜನವಿಲ್ಲ.

ಬಾಲಸನ್ಯಾಸ ಉಡುಪಿಯಲ್ಲೇಕೆ?

ಉಡುಪಿಯ ಅಷ್ಟಮಠಗಳಲ್ಲಿ ಬಾಲಸಂನ್ಯಾಸ ಸ್ವೀಕಾರದ ಹೊಸ ಪರಂಪರೆ ಪ್ರಾರಂಭವಾಯಿತು. ಆದರೆ ಬಾಲರನ್ನೇ ಸಂನ್ಯಾಸಿಗಳಾಗಿ ಸ್ವೀಕರಿಸಬೇಕು ಎಂದು ಉಡುಪಿಯ ಮಠಗಳ ಸಂವಿಧಾನದಲ್ಲೆಲ್ಲೂ ಬರೆದಿಲ್ಲ. ಮಧ್ವರಂತೂ ಸುತಾರಾಂ ಹಾಗೆ ಹೇಳಿಲ್ಲ. ಮಧ್ವರ ನೇರಶಿಷ್ಯರು ಹಾಗೂ ಆ ಶಿಷ್ಯರ ಶಿಷ್ಯರು ಮುಂದೆ ಉಡುಪಿಯಿಂದ ಹೊರಗೆ ಹಲವು ಕಡೆಗಳಲ್ಲಿ ಮಠಸ್ಥಾಪನೆ ಮಾಡಿದರು. ಮಧ್ವರ ಗುರುಗಳಾದ ಅಚ್ಯುತಪ್ರಜ್ಞರ ಮೂಲಮಠ ಬಾರ್ಕೂರಿನ ಸಮೀಪದ ಭಂಡಾರಕೇರಿ ಎಂಬಲ್ಲಿತ್ತು ಎನ್ನುತ್ತಾರೆ. ಅಚ್ಯುತಪ್ರಜ್ಞರ ಶಿಷ್ಯರಿಂದ ಭಂಡಾರಕೇರಿ ಮತ್ತು ಭೀಮನ ಕಟ್ಟೆ ಎಂಬಲ್ಲಿ ಎರಡು ಮಠಗಳು ಸ್ಥಾಪನೆಯಾದವು. ಸೋದೆ ಮಠದ ಮೂಲಯತಿಗಳಾದ ವಿಷ್ಣುತೀರ್ಥರ ಶಿಷ್ಯರಿಂದ ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಮಠ ಸ್ಥಾಪನೆಗೊಂಡಿತು. ಆಚಾರ್ಯರ ನೇರ ಶಿಷ್ಯರಾದ ಪದ್ಮನಾಭತೀರ್ಥರು, ನರಹರಿತೀರ್ಥರು, ಮಾಧವತೀರ್ಥರು ಮತ್ತು ಅಕ್ಷೋಭ್ಯತೀರ್ಥರು ಉತ್ತರಾದಿ ಮಠ, ಸೋಸಲೆ ವ್ಯಾಸರಾಯ ಮಠ, ಕುಂದಾಪುರದ ವ್ಯಾಸರಾಯ ಮಠ ಮತ್ತು ಮಂತ್ರಾಲಯದ ರಾಘವೇಂದ್ರ ಮಠಗಳನ್ನು ಸ್ಥಾಪಿಸಿ ಅಲ್ಲಿನ ಪೀಠಾಧಿಪತಿಗಳಾದರು. ಪದ್ಮನಾಭತೀರ್ಥರ ಶಿಷ್ಯಪರಂಪರೆ ಮುಂದುವರಿದು ಮುಳಬಾಗಿಲಿನಲ್ಲಿ ಇನ್ನೊಂದು ಮಠವನ್ನು ಸ್ಥಾಪಿಸಿತು. ಹಾಗೆಯೇ ಅಕ್ಷೋಭ್ಯತೀರ್ಥರ ಶಿಷ್ಯರು ಮುಂದೆ ಮತ್ತು ಬಾಳೆಗಾರು ಊರುಗಳಲ್ಲಿ ಮಾಧ್ವ ಮಠಗಳನ್ನು ಸ್ಥಾಪಿಸಿದರು. ಮಾಧವತೀರ್ಥರ ಶಿಷ್ಯರು ಮಜ್ಜಿಗೆಹಳ್ಳಿಯಲ್ಲಿ ಮಠ ಸ್ಥಾಪನೆ ಮಾಡಿದರು.

ಈ ಮಠಗಳಲ್ಲಿ ಕೆಲವು ಕಡೆಗಳಲ್ಲಿ, ಸಂಸಾರಿಗಳಾಗಿ ಜೀವನ ನಡೆಸಿ ವಿರಕ್ತರಾದವರನ್ನು ಯತಿಗಳಾಗಿ ಸ್ವೀಕರಿಸುವ ಪದ್ಧತಿ ಇದೆ. ಪ್ರಸಿದ್ಧ ಉದಾಹರಣೆ ಎಂದರೆ ಮಂತ್ರಾಲಯ. ಇದು ಮಾಧ್ವಪರಂಪರೆಗೆ ಸೇರಿದ ಮಠ. ಆದರೆ, ಇಲ್ಲಿ ಉಡುಪಿಯಲ್ಲಿ ನಡೆಯುವುದಕ್ಕೆ ವ್ಯತಿರಿಕ್ತ ಎಂಬಂತೆ, ಸಂಸಾರಿಗಳಾಗಿ ಹಲವು ವರ್ಷ ಬಾಳಿದ, ಹಲವು ಮಕ್ಕಳಿರುವ ವ್ಯಕ್ತಿಗಳನ್ನು ಯತಿಗಳಾಗಿ ಆರಿಸುವ ಕ್ರಮ ಇದೆ. ಬಾಲಸಂನ್ಯಾಸದ ಕ್ರಮ ಉಡುಪಿಗೇಕೆ ಬಂತು? ಪರ್ಯಾಯವೂ ಅದಕ್ಕೊಂದು ಕಾರಣವಿದ್ದೀತು. ಅಂದರೆ, ಉಳಿದ ಮಾಧ್ವಮಠಗಳಲ್ಲಿ ಪರ್ಯಾಯದ ಪದ್ಧತಿ ಇಲ್ಲ. ಆದರೆ ಉಡುಪಿಯಲ್ಲಿದೆ. ಒಮ್ಮೆ ಪರ್ಯಾಯ ನಡೆಸಿದ ಮಠಕ್ಕೆ ಮತ್ತೊಮ್ಮೆ ಆ ಅವಕಾಶ ಬರಬೇಕಾದರೆ 14 ವರ್ಷ ಕಾಯಬೇಕು. ಒಂದೆರಡು ಪರ್ಯಾಯ ನಡೆಸುವ ಅವಕಾಶ ಸಿಗಲಿ ಎಂಬ ಆಶಯದಿಂದ ಅಲ್ಲಿ ಚಿಕ್ಕವರನ್ನು ಪೀಠದಲ್ಲಿ ಕೂರಿಸುವ ಪದ್ಧತಿ ಬಂದಿರಲೂಬಹುದು. ಒಟ್ಟಲ್ಲಿ ಏನೇ ಇರಲಿ, ಉಡುಪಿಯ ಮತ್ತು ಹೊರಗಿನ ಮಾಧ್ವಮಠಗಳಲ್ಲಿ ಬಾಲಸಂನ್ಯಾಸತ್ವದ ಪದ್ಧತಿ ಇರಬೇಕು ಇರಬಾರದು ಎಂದಾಗಲೀ ಯಾರೂ ಎಲ್ಲೂ ಬರೆದಿಟ್ಟಿಲ್ಲ ಎಂಬುದಂತೂ ಸ್ಪಷ್ಟ.

ಸನ್ಯಾಸಿಯಾದರೆ ಚಾಕೊಲೇಟ್ ಉಡುಗೊರೆ!

ಈ ಸ್ಪಷ್ಟತೆಯನ್ನು ಮನಸ್ಸಲ್ಲಿಟ್ಟುಕೊಂಡು ನಾವು ಬಾಲ್ಯ ಸಂನ್ಯಾಸದ ಸಮಸ್ಯೆಗಳನ್ನು ನೋಡಬೇಕಾಗಿದೆ. ಆಗಲೇ ಹೇಳಿದಂತೆ ಈ ಪದ್ಧತಿಯು ಸಂಪ್ರದಾಯ ಎಂಬ ಕಾರಣಕ್ಕಿಂತಲೂ ಆಸ್ತಿ-ಪಾಸ್ತಿ ತಮ್ಮ ಕೈಯಲ್ಲಿರಬೇಕು ಎಂಬ ದುರುದ್ದೇಶದಿಂದ ನಡೆದಿರುವ ಪ್ರಸಂಗಗಳೇ ಹೆಚ್ಚು. ಜಡಭರತರ ಸತ್ತವರ ನೆರಳು ನಾಟಕ ಓದಿದವರಿಗೆ ಮಠಗಳೊಳಗಿನ ರಾಜಕೀಯದ ಪರಿಚಯ ಅಲ್ಪಸ್ವಲ್ಪವಾದರೂ ಆಗಿದ್ದೀತು. ವಾಸ್ತವವು ಸಿನೆಮಾಗಿಂತ ಹೆಚ್ಚು ವರ್ಣಮಯವಾಗಿರುತ್ತದೆ ಎಂಬ ಮಾತಿನಂತೆಯೇ, ನಾಟಕದ ಘಟನಾವಳಿಗಿಂತಲೂ ಮಠಗಳೊಳಗೆ ನಡೆಯುವ ನಾಟಕಗಳು ಹೆಚ್ಚು ಹೇಯವಾಗಿರುತ್ತವೆ. ಅಂಥ ಎಲ್ಲ ಹೇಯಕೃತ್ಯಗಳ ನಾಟಕದ ಒಂದು ಭಾಗವೇ ಬಾಲ್ಯ ಸಂನ್ಯಾಸ. ಮಠಗಳೊಳಗಿನ ರಾಜಕೀಯಕ್ಕೆ ಪುಟ್ಟ ಹುಡುಗರು ಬಲಿಪಶುಗಳಾಗಿ ಯತಿಗಳಾಗುತ್ತಾರೆಂಬುದು ಸಮಸ್ಯೆಯ ಒಂದು ಮುಖ. ಇನ್ನು ಕೆಲವೊಮ್ಮೆ ಮಠದ ಸ್ವಾಮಿಗಳೇ – ಯಾವ ದುರುದ್ದೇಶವೂ ಇಲ್ಲದೆ – ಬಾಲಕನೊಬ್ಬನನ್ನು ಹಿಡಿದು ಸಂನ್ಯಾಸದ ದೀಕ್ಷೆ ಕೊಟ್ಟು ಪೀಠದಲ್ಲಿ ಕುಳ್ಳಿರಿಸುವುದೂ ಉಂಟು. ಸಂನ್ಯಾಸಿಗಳಿಗೆ ಲೌಕಿಕ ಜ್ಞಾನ ಕಡಿಮೆ ಎಂಬುದು ಇದಕ್ಕೆ ಒಂದು ಕಾರಣವಾದರೆ, ಲೋಕದ ಎಲ್ಲರಿಗೂ ವೇದ-ವೇದಾಂತಗಳಲ್ಲಿ ಆಸಕ್ತಿ ಇರುತ್ತದೆ ಎಂದು ಅವರು ಮುಗ್ಧವಾಗಿ ಭಾವಿಸುವುದು ಎರಡನೆ ಕಾರಣ. ಅವರೇನೋ ಸ್ವಾಮಿ ಮಾಡಿದರು, ಆದರೆ ಸ್ವಾಮಿಯಾಗಿ ಕಾವಿ ತೊಟ್ಟವನಿಗೆ ಪ್ರತಿಭಟಿಸಲು ಅವಕಾಶವಾದರೂ ಇರುತ್ತದೆಯೇ? ಸುತ್ತ ನಿಂತ ಬಂಧುಬಳಗ ಆತನನ್ನು ಅತ್ತಿತ್ತ ಮಿಸುಕಾಡದಂತೆ ಮಾಡಿಬಿಡುತ್ತದೆ.
ಸಂನ್ಯಾಸಿಯಾದ ಆ ಹುಡುಗ ಶ್ರಾದ್ಧದ ಅರ್ಥವೂ ತಿಳಿಯದ ಕಾಲದಲ್ಲಿ ಆತ್ಮಶ್ರಾದ್ಧ ಮಾಡಿಕೊಳ್ಳುತ್ತಾನೆ. ವಿರಜಾ ಹೋಮಕ್ಕೆ ಸಾಕ್ಷಿಯಾಗುತ್ತಾನೆ. ವಿಧಿಪೂರ್ವಕವಾಗಿ ಮೈ ಮೇಲಿನ ಸಮಸ್ತ ಒಡವೆ-ವಸ್ತ್ರಗಳನ್ನು ಆತ ತ್ಯಾಗ ಮಾಡಬೇಕಾಗುತ್ತದೆ. ಅದುವರೆಗೆ ಉಳಿಸಿಕೊಂಡಿದ್ದ ಕ್ರಾಪು ಎಂಬ ಕೇಶಕೇತನವನ್ನು ಮುಂಡನಕ್ಕೊಪ್ಪಿಸಬೇಕಾಗುತ್ತದೆ. ತಲೆ ಬೋಳಿಸಿ ಅಲ್ಲಿಲ್ಲಿ ಕೂದಲು ಉಳಿದರೆ ಅದನ್ನೂ ನಾಪಿತ ಯಾವ ಕರುಣೆಯಿಲ್ಲದೆ ಕಿತ್ತು ತೆಗೆದುಬಿಡುತ್ತಾನೆ. ಮಂತ್ರಪೂರ್ವಕ ಅಭಿಷೇಚನ ಮಾಡಿ, ದಂಡ ಕಮಂಡಲು ಕೈಗಿಟ್ಟು ಕಾವಿಶಾಟಿ ಸುತ್ತಿದರೆ ಮಠಕ್ಕೊಂದು ಹೊಸ ವಟು ಸಿದ್ಧ! ಗುರುಗಳು ಪ್ರಣವಮಂತ್ರ ಉಪದೇಶಿಸುತ್ತಾರೆ. ಹಳೆಯ ಹೆಸರನ್ನು ಅಳಿಸಿ ಅಲ್ಲೊಂದು ಉದ್ದನೆ ಹೆಸರನ್ನು ಕೊರೆಸುತ್ತಾರೆ. ಚೋಟುದ್ದದ ಆ ವಟುವಿಗೆ ತನ್ನ ಆ ಹೊಸ ಹೆಸರನ್ನು ನೆನಪಿಟ್ಟುಕೊಳ್ಳಲಿಕ್ಕೇ ಒಂದೆರಡು ದಿನಗಳ ಕಂಠಪಾಠ ಬೇಕು! ತನ್ನ ತಂದೆಯೇ ಕೈ ಮುಗಿದು ಕಾಲಿಗೆ ಬಿದ್ದಾಗ, ದೊಡ್ಡವರೆಂದು ತಾನು ಬಗೆದರವೆಲ್ಲ ಈಗ ಸ್ವಾಮೀ ಎಂದು ಕಾಲಿಗೆರಗಿದಾಗ ಆ ಹುಡುಗನಿಗೆ ಭಯ, ರೋಮಾಂಚನ! ಧುತ್ತನೆ ಸಂಭವಿಸಿಬಿಡುವ ಈ ಸ್ಥಾನಪಲ್ಲಟದಿಂದ ಆ ಹುಡುಗನ ಮನಸ್ಸಿನಲ್ಲಿ ಏಳುವ ಗೊಂದಲ-ಗೋಜಲಿನ ತೆರೆಗಳನ್ನು ವರ್ಣಿಸುವುದು ಹೇಗೆ!

ಎಲ್ಲವೂ ನಿದ್ದೆಯಲ್ಲಿ ಕಂಡ ಕನಸಿನಂತೆ ನಡೆದು ಮೂರ್ನಾಲ್ಕು ದಿನಗಳಾಗುವ ಹೊತ್ತಿಗೆ ಅವನ ಬದುಕು ಹೊಚ್ಚ ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತದೆ. ಉಷಃಕಾಲದಲ್ಲಿ ಏಳು, ತಣ್ಣೀರಿನಲ್ಲಿ ಮುಳುಗು ಹಾಕು, ಸಾವಿರಾರು ಸಲ ಹೇಳು, ಸಂಸ್ಕೃತ ಕಲಿ, ವೇದಾದ್ಯಯನ ಮಾಡು, ಶ್ಲೋಕಗಳನ್ನು ಉರುಹೊಡೆ, ಪೂಜೆಪುನಸ್ಕಾರಗಳನ್ನು ಚಾಚೂ ತಪ್ಪದೆ ನೆರವೇರಿಸು. ಬೆಳಗ್ಗಿನ ಉಪಾಹಾರ ಇಲ್ಲ, ರಾತ್ರಿ ಹಾಸಿಗೆಯ ಸೌಭಾಗ್ಯವಿಲ್ಲ, ಮದುವೆ – ಮಕ್ಕಳ ಕನಸು ಕಾಣುವಂತಿಲ್ಲ. ಹ್ಞಾ! ಏಕಾದಶಿ ಉಪವಾಸ ಬಿಡಬೇಡ ಮತ್ತೆ! ನೂರೊಂದು ಕಟ್ಟುಪಾಡು, ನೂರೆಂಟು ಬೇಲಿ. ಮಾಣಿ ಬೇಲಿ ಹಾರದಂತೆ ನೋಡಿಕೊಳ್ಳಲು ನೂರಾರು ಪಹರೆಗಣ್ಣುಗಳು. ಯೋಗೀಂದ್ರನಾಗಿದ್ದ ಹುಡುಗ ಶ್ರೀ ಶ್ರೀ ವಿದ್ಯಾಭೂಷಣ ತೀರ್ಥ ಶ್ರೀಪಾದಂಗಳಾಗಿ ಕುಕ್ಕೆಯಲ್ಲಿ ಸಂನ್ಯಾಸ ಸ್ವೀಕರಿಸಿದಾಗ ಚಾಕೊಲೇಟ್ ಪೊಟ್ಟಣವನ್ನು ಉಡುಗೊರೆಯಾಗಿ ಕಳಿಸಿಕೊಟ್ಟಿದ್ದರಂತೆ! ಯತಿಜೀವನ ನೋಡಿ – ನುಂಗುವಂತಿಲ್ಲ, ಉಗುಳುವಂತಿಲ್ಲ!

ಬಾಲ್ಯ ಸನ್ಯಾಸ ಅಶಾಸ್ತ್ರೀಯ

ವಿದ್ಯಾಭೂಷಣರು ತಮ್ಮ ಇಚ್ಛೆಗೆ ವಿರುದ್ಧವಾಗಿ ಸಂನ್ಯಾಸ ಧರ್ಮವನ್ನು ಸ್ವೀಕರಿಸಬೇಕಾಯಿತು. ಕಾಲೇಜು ಓದಿ ಎಲ್ಲಾದರೂ ಒಳ್ಳೆಯ ಉದ್ಯೋಗ ಹಿಡಿಯಬೇಕೆಂದು ಕನಸುತ್ತಿದ್ದ ಹುಡುಗನನ್ನು ಅಚಾನಕ್ಕಾಗಿ ಮಠದ ಅಡಕತ್ತರಿಯಲ್ಲಿ ನಿಲ್ಲಿಸಿ ಸ್ವಾಮಿಯಾಗಲು ಒಪ್ಪಿಕೋ ಎಂದು ಆಜ್ಞೆಯಂಥ ವಿನಂತಿಯನ್ನು ಸಲ್ಲಿಸಲಾಯಿತು. ವಿದ್ಯಾಭೂಷಣರ ಮಾತುಗಳಲ್ಲೇ ಹೇಳುವುದಾದರೆ – ಹಿರಿಯ ಸ್ವಾಮಿಗಳ ಸಿಂಹಾಸನಕ್ಕೆ ನನ್ನನ್ನು ಕರೆಸಿಕೊಂಡರು. ಮಠದ ಮುಖಂಡರೆಲ್ಲ ಅವರೆದುರು, ವಿನೀತರಾಗಿ ನಿಂತಿದ್ದರು. ನಾನು ಸಂನ್ಯಾಸಾಶ್ರಮವನ್ನು ಸ್ವೀಕರಿಸಬೇಕೆಂದು ಅಲ್ಲಿ ತಿಳಿಸಲಾಯಿತು. ಆಗದು ಅದು ನನಗೆ ಇಷ್ಟವಿಲ್ಲದ್ದು, ನನಗೆ ಭಯವಾಗುತ್ತಿದೆ – ಬೇಡವೆಂದೆ. ಇಲ್ಲ, ಭಯ ಯಾಕೆ? ನಾವೆಲ್ಲ ಇದ್ದೇವಲ್ಲಾ? ಎಲ್ಲ ಸರಿಯಾಗುತ್ತದೆ, ಒಪ್ಪಿಕೋ ಎಂದು ಎಲ್ಲರೂ ಮತ್ತೆ ಮತ್ತೆ ಸಮಾಧಾನ ಪಡಿಸಿದರು! ಮೌನವಾಗಿದ್ದೆ. ಭೂಮಿ ಅಲ್ಲೇ ಬಾಯಿ ಬಿರಿದುಕೊಳ್ಳಬಾರದೇ ಎಂದು ನನಗಾಗ ಅನ್ನಿಸಿರಬಹುದೇನೋ. ಮತ್ತಷ್ಟು ಮೌನದ ನಂತರ ನಾನು ಗುರುಗಳಿಗೆ ನಮಸ್ಕರಿಸಿದೆ. ಪದ್ಧತಿಯಂತೆ ಅವರು ಸಂನ್ಯಾಸಾಶ್ರಮಕ್ಕೆ ಒಪ್ಪಿಗೆಯ, ಆಶೀರ್ವಾದದ ಫಲ ನೀಡಿದರು! – ಹೀಗೆ ಕನಸಿನಲ್ಲಿ ನಡೆದುಹೋದ ಘಟನೆಯಂತೆ ವಿದ್ಯಾಭೂಷಣರು ತನ್ನ ಲೌಕಿಕದ ಬಂಧಗಳನ್ನೆಲ್ಲ ಕಳಚಿಕೊಂಡು ಸಂನ್ಯಾಸಿಯಾದರು! ಯತಿಗಳಾದರು! ಅವರಿಗಾದರೋ ಆಗ ವಯಸ್ಸು 15 ದಾಟಿತ್ತು. ಆದರೆ ಏಳೆಂಟು ವರ್ಷ ವಯಸ್ಸಿನಲ್ಲಿ ಸಂನ್ಯಾಸಪಟ್ಟವೇರಿದ ಬಾಲಕರ ಮನಸ್ಥಿತಿ ಹೇಗಿದ್ದಿರಬೇಕು! ಅಂಥ ಮಕ್ಕಳಿಗೆ, ಏನು ನಡೆಯುತ್ತಿದೆಯೆಂದು ಅವರಿಗೇ ತಿಳಿಯದ ಆ ವಯಸ್ಸಿನಲ್ಲಿ, ಸಂನ್ಯಾಸದೀಕ್ಷೆ ಕೊಡುವುದು ಅದೆಂಥ ಕ್ರೂರತನ!

ಉಡುಪಿಯಲ್ಲಿ ಈಗ ಪರ್ಯಾಯ ನಡೆಸುತ್ತಿರುವ ಪಲಿಮಾರು ಸ್ವಾಮಿಗಳು ಹೇಳುತ್ತಾರೆ – ಬಾಲಸಂನ್ಯಾಸ ಎಂಬ ಪದ ವ್ಯವಹಾರದಲ್ಲಿ ಬಂದಿದೆಯೇ ಹೊರತು ಶಾಸ್ತ್ರಪ್ರಪಂಚದಲ್ಲಿ ಇಲ್ಲ. ಯದಹರೇವ ವಿರಜೇತ್ ತದಹರೇವ ಪ್ರವ್ರಜೇತ್…. ಯಾವ ದಿನ ಯಾವ ಹೊತ್ತು ವೈರಾಗ್ಯ ಸಂಪನ್ನನಾಗುವನೋ ಆ ದಿನದಂದೇ, ಆ ಹೊತ್ತಿನಲ್ಲೇ ಸಂನ್ಯಾಸವನ್ನು ಸ್ವೀಕರಿಸಬೇಕೆಂದು ಸಾರುತ್ತಿರುವ ಪ್ರಮಾಣದ ಪ್ರಕಾರ ಸಂನ್ಯಾಸ ಸ್ವೀಕಾರಕ್ಕೆ ವೈರಾಗ್ಯಸಂಪತ್ತಿ ಪ್ರಮಖ ಅರ್ಹತೆ. ಸಂಸಾರದ ಸಿಹಿ-ಕಹಿಗಳನ್ನೇ ಅರಿಯದ ಬಾಲ ವಿರಕ್ತನಾಗಿರುವುದಕ್ಕೇ ಸಾಧ್ಯವಿಲ್ಲವೆಂದ ಮೇಲೆ ಅಂತಹವನಿಗೆ ಸಂನ್ಯಾಸ ನೀಡುವುದು ಅಶಾಸ್ತ್ರೀಯ. ಆದುದರಿಂದ ಪ್ರೌಢ ವಯಸ್ಸಿಗೆ ಬಂದ ಮೇಲೆ ಸಂಸಾರದ ಇತಿಮಿತಿಗಳನ್ನು ಪರಿಶೀಲಿಸುವ ಸಾಮರ್ಥ್ಯ ಮೇಲೆಯೇ ಅಂತಹವನಿಗೆ ಸಂನ್ಯಾಸ ನೀಡಬೇಕು. ಅದುವರೆಗೆ ಆ ವ್ಯಕ್ತಿಯನ್ನು ತಮ್ಮ ಸಮೀಪದಲ್ಲಿಯೇ ಇರಿಸಿಕೊಂಡು ಅವನಿಗೆ ಸಂನ್ಯಾಸಾಶ್ರಮಕ್ಕೆ ಒಪ್ಪುವ ಆಚಾರ-ವಿಚಾರಗಳ ಬಗ್ಗೆ ಸಾಕಷ್ಟು ಶಿಕ್ಷಣ ನೀಡಬೇಕು.

ಸಂನ್ಯಾಸವೆಂಬ ಬಲವಂತದ ಮಾಘಸ್ನಾನ

ಸಂನ್ಯಾಸ ಸ್ವೀಕರಿಸುವುದು ಎಂದರೆ ತೊಟ್ಟ ಅಂಗಿ ಕಳಚಿ ಹೊಸತು ತೊಟ್ಟಂತಲ್ಲ. ಅದು ತೊಗಲನ್ನೇ ಬದಲಿಸುವಂಥ ಕೆಲಸ! ಯಾಕೆಂದರೆ ಒಮ್ಮೆ ಸಂನ್ಯಾಸ ಸ್ವೀಕರಿಸಿದ ಮೇಲೆ ಮತ್ತೆ ಲೌಕಿಕ ಜೀವನಕ್ಕೆ ಬರುವುದು ಅಸಾಧ್ಯವಲ್ಲವಾದರೂ ಕಷ್ಟದ ಕೆಲಸ. ಅದಕ್ಕೆಂದೇ ನಮ್ಮ ಪರಂಪರೆ ಸಂನ್ಯಾಸವೆಂಬ ಮನುಷ್ಯನ ಜೀವನದ ಅಂತಿಮ ಘಟ್ಟಕ್ಕೆ ಮೀಸಲಿಟ್ಟಿದೆ. ಬಾಲ್ಯ, ಗಾರ್ಹಸ್ಥ್ಯ, ವಾನಪ್ರಸ್ಥಗಳು ಕಳೆದ ಮೇಲೆ ಕೊನೆಯದಾಗಿ ಬರುವುದೇ ಸಂನ್ಯಾಸ. ಆದರೆ, ಬಾಲ್ಯದ ಬಳಿಕದ ಎರಡು ಆಶ್ರಮಗಳನ್ನು ಅನುಭವಿಸದೆ ನೇರ ಸಂನ್ಯಾಸಕ್ಕೆ ಪ್ರವೇಶ ಪಡೆಯುವುದಕ್ಕೂ ಅದೇ ಪರಂಪರೆಯಲ್ಲಿ ಅವಕಾಶವಿದೆ. ಆದರೆ ಹಾಗಾಗಬೇಕಾದರೆ ಮೊದಲು ವೈರಾಗ್ಯ ಹುಟ್ಟಿರಬೇಕು. ಅಧ್ಯಾತ್ಮದತ್ತ ಮನಸ್ಸು ತುಡಿಯುತ್ತಿರಬೇಕು. ಆದಿ ಶಂಕರರು 13-14ರ ವಯಸ್ಸಿನಲ್ಲೇ ಆ ಬಗೆಯ ವೈರಾಗ್ಯ ಸ್ಥಿತಿಯನ್ನು ತಲುಪಿದ್ದರು. ತಾಯಿಯ ಅಪ್ಪಣೆ ಪಡೆದು ಸಂನ್ಯಾಸದ ಬದುಕನ್ನು ಹೊಕ್ಕರು. 12ನೇ ವಯಸ್ಸಿನಲ್ಲಿ ಬದುಕಿನ ಎಲ್ಲ ಮೋಹ ಕಳೆದುಕೊಂಡು ವಿರಾಗಿಯಾಗಿ, ತಂದೆತಾಯಿಯರ ಅಪ್ಪಣೆ ಪಡೆದು ಸಂನ್ಯಾಸಿಯಾದರು.

ಅದಾದರೋ ಸಹಜ ಪಕ್ವತೆ. ಆದರೆ, ನಮ್ಮಲ್ಲಿ ಮಠವೆಂಬ ವ್ಯವಸ್ಥೆ ಸಮಾಜದಲ್ಲಿ ಬಲಿಷ್ಠವಾದಂತೆ ಬಲವಂತವಾಗಿ ಯಾರನ್ನಾದರೂ ಸಂನ್ಯಾಸತ್ವಕ್ಕೆ ನೂಕಿ ತಾವು ಸುಖ ಪಡೆವ ಪ್ರವೃತ್ತಿಯೂ ಹೆಚ್ಚಿತು. ಹಲಸಿಗೆ ಬಿಸಿ ದಂಡ ಹೊಡೆದು ಒಂದೇ ರಾತ್ರಿಯಲ್ಲಿ ಹಣ್ಣು ಮಾಡುವ ತಂತ್ರದಂತೆ ಇದೂ. ಇಂಥ ಕೃತ್ಯಕ್ಕೆ ಇಳಿದವರು ತಮ್ಮ ಸ್ವಂತ ಮಕ್ಕಳನ್ನೇ ಸಂನ್ಯಾಸಿಯ ಪಟ್ಟದಲ್ಲಿ ಕೂರಿಸಿ ತಾವು ಗಿಟ್ಟಿಸುವುದಕ್ಕೂ ಹೇಸಲಿಲ್ಲ. ಸಂನ್ಯಾಸಿಯಾಗಲು ತಾಯಿಯ ಅಪ್ಪಣೆ ಬೇಕೇ ಬೇಕು; ಆಕೆಯ ಅಪ್ಪಣೆ ಇಲ್ಲದೆ ಸ್ವತಃ ಆ ಬಾಲಕನೇ ಬಯಸಿದರೂ ಆತ ಸಂನ್ಯಾಸಿಯಾಗಲು ಸಾಧ್ಯವಿಲ್ಲ ಎನ್ನುತ್ತದೆ ಶಾಸ್ತ್ರ. ಅದಕ್ಕಾಗಿ, ತಾಯಿಯರನ್ನು ಬಲವಂತಪಡಿಸಿ ಮಕ್ಕಳ ಸಂನ್ಯಾಸಾಶ್ರಮ ಪ್ರವೇಶಕ್ಕೆ ಅವರಿಂದ ಅಪ್ಪಣೆ ಕೊಡಿಸಿದ ಪ್ರಕರಣಗಳೂ ನಡೆದವು. ಸ್ವಾಮಿಗಳಾದವರ ಹಿಂದಿನ ಕುಟುಂಬ ಸಂಬಂಧಿಕರನ್ನು ಪೂರ್ವಾಶ್ರಮದವರು ಎಂದು ಕರೆಯುತ್ತಾರೆ. ಎಷ್ಟೋ ಸಲ ಏನೇನೂ ತಿಳಿಯದ ಚಿಕ್ಕ ಹುಡುಗನನ್ನು ತಂದು ಪೀಠದಲ್ಲಿ ಕೂರಿಸುವ ನಾಟಕದಲ್ಲಿ ಈ ಪೂರ್ವಾಶ್ರಮದವರ ದೊಡ್ಡದಿರುತ್ತದೆ. ಉಡುಪಿ ಎಂದಲ್ಲ, ದೇಶದ ಬಹಳಷ್ಟು ಮಠಗಳ ಸಮಸ್ಯೆ ಇದು. ಮಠಗಳ ಸಂಪತ್ತು, ಅಧಿಕಾರ, ಸೌಲಭ್ಯ, ಮನ್ನಣೆಗಳು ತಮ್ಮತಮ್ಮಲ್ಲೇ ತಮ್ಮ ಕುಟುಂಬ ವರ್ಗದಲ್ಲೇ ಮುಂದುವರಿಯಲೆಂಬ ಕೆಟ್ಟ ಆಶಯವೇ ಬಾಲಸಂನ್ಯಾಸದ ಅನಿಷ್ಟಕ್ಕೂ ಮೂಲ. ಹಾಗಾಗಿ, ಹಿರಿಯ ಸ್ವಾಮಿಗಳ ಇಳಿಗಾಲದಲ್ಲಿ, ಅವರಿನ್ನೇನು ಕೊನೆಯುಸಿರು ಎಳೆಯುತ್ತಾರೆ ಎಂಬ ಸಂದರ್ಭದಲ್ಲಿ, ಯಾವ ಪೂರ್ವ ಶಿಕ್ಷಣವೂ ಇಲ್ಲದ, ತಕ್ಕ ಸಂಸ್ಕಾರ ಗಳಿಸದ, ಮಾನಸಿಕ ಸಿದ್ಧತೆ ಇರದ ಅಬೋಧ ಬಾಲನಿಗೆ ಸಂನ್ಯಾಸ ನೀಡಲಾಗುತ್ತದೆ! ಇದು ಕಹಿವಾಸ್ತವ.

ಪೀಠ ಬಿಟ್ಟವರು ಯಾರೆಲ್ಲ?

ತೀರಿಕೊಂಡ ಶೀರೂರು ಸ್ವಾಮಿಗಳು ಬಾಲ್ಯ ಸಂನ್ಯಾಸದ ಮೊದಲ ಬಲಿಪಶುಗಳಲ್ಲ. ಅವರಿಗಿಂತ ಹಿಂದೆ ಮೂರ್ನಾಲ್ಕು ಸಂದರ್ಭಗಳಲ್ಲಿ ಮಠಗಳಿಂದ ಸಂನ್ಯಾಸಿಗಳು ಹೊರನಡೆದದ್ದಿದೆ. ಪಲಿಮಾರು ಮಠದ ಯತಿಗಳಾಗಿದ್ದ ರಘುವಲ್ಲಭತೀರ್ಥರು 1969ರಲ್ಲಿ ಪೀಠತ್ಯಾಗ ಮಾಡಿದ್ದರು. ಮುಂದೆ ಶೀರೂರು ಮಠದ ಲಕ್ಷ್ಮೀಮನೋಜ್ಞತೀರ್ಥರು ಕೂಡ ಪೀಠತ್ಯಾಗ ಮಾಡಿದ್ದರು. ಹಾಡುವ ಸ್ವಾಮೀಜಿ ಎಂದೇ ಹೆಸರಾದ ಕುಕ್ಕೆಯ ಸುಬ್ರಹ್ಮಣ್ಯ ಮಠದ ವಿದ್ಯಾಭೂಷಣರು ಅದೊಂದು ದಿನ, ತಾನು ಸಂಸಾರಜೀವನ ನಡೆಸಲು ನಿಶ್ಚಯಿಸಿದ್ದೇನೆ ಎಂದು ಘೋಷಿಸಿ ಪೀಠ ತ್ಯಜಿಸಿ, ಕೆಲವೇ ದಿನಗಳಲ್ಲಿ ಈ ಮೂವರು ತೋರಿದ ಧೈರ್ಯವನ್ನು ಧೈರ್ಯವಂತ ಸ್ವಾಮಿ ಎಂದೇ ಹೆಸರು ಮಾಡಿದ್ದ ಲಕ್ಷ್ಮೀವರರು ಯಾಕೆ ತೋರಿಸಲಿಲ್ಲ ಎಂಬುದು ನಿಗೂಢ ಮತ್ತು ಅಚ್ಚರಿ. ಸಂನ್ಯಾಸಿಯಾಗುವುದಕ್ಕೆ ಯಾವ ಧೈರ್ಯ ಬೇಕೋ ಆ ಬಂಧನದಿಂದ ಹೊರಬಂದು ಸ್ವತಂತ್ರಗೊಳ್ಳುವುದಕ್ಕೂ ಒಂದು ಭಂಡ ಧೈರ್ಯ ಬೇಕು! ಉಡುಪಿಯಲ್ಲಾಗಲೀ ಕರ್ನಾಟಕದ ಬೇರೆ ಮಠಗಳಲ್ಲಾಗಲೀ ಹೀಗೆ ಧೈರ್ಯ ತೋರಿ ಹೊರಬಂದವರ ಸಂಖ್ಯೆ ಬೆರಳೆಣಿಕೆಯಷ್ಟೇ. ಸಾವಿರಾರು ವರ್ಷಗಳ ಮಠ ಪರಂಪರೆಯಲ್ಲಿ ಹೀಗೆ ಕೇವಲ ಕೆಲವೇ ಕೆಲವು ಮಂದಿ ಮಠವ್ಯವಸ್ಥೆಯನ್ನು ಧಿಕ್ಕರಿಸಿ ಕಳಚಿದ್ದಾರೆ ಎಂಬುದು ಮಠವ್ಯವಸ್ಥೆಯ ಸುಸ್ಥಿರತೆಯ ಲಕ್ಷಣವೋ ಯತಿಗಳ ಅಧೈರ್ಯದ ಸೂಚಕವೋ ತಿಳಿಯುವಂತಿಲ್ಲ!

ಸದ್ದಿಲ್ಲದೆ ಆಗಿರುವ ಪಲ್ಲಟ

ಕಾಲ ಬದಲಾಗಿದೆ. ಮಠಗಳ ವ್ಯವಸ್ಥೆಯೂ ಅಷ್ಟೋ ಇಷ್ಟೋ ಬದಲಾಗಿದೆ. ಯಾವುದೋ ಪುರಾತನ ಕಾಲದಲ್ಲಿ ಯಾರೋ ಮಾಡಿಟ್ಟ ಕಾನೂನುಗಳಿಗೆ ಈಗ ಮಾರ್ಪಾಟು ಬೇಕೆಂಬುದು ಮಠದೊಳಗಿನ ಯತಿಗಳಿಗೂ ಅನ್ನಿಸಿದೆ. ಇಂದು ಮಠಾಧೀಶರುಗಳು ವಿಮಾನ ಬಳಸುತ್ತಾರೆ, ಸಮುದ್ರೋಲ್ಲಂಘನವನ್ನೂ ಮಾಡುತ್ತಾರೆ. ಆಧುನಿಕ ತಂತ್ರಜ್ಞಾನ ಸಾಧನಗಳಾದ ಫೋನ್, ಟಿವಿ, ಕಂಪ್ಯೂಟರ್, ಇಂಟರ್ನೆಟ್ ಎಲ್ಲವನ್ನೂ ಲೀಲಾಜಾಲವಾಗಿ ಬಳಸುತ್ತಾರೆ. ಈ ಎಲ್ಲ ತಕ್ಕಂತೆ ಬಾಲಸಂನ್ಯಾಸದ ಪದ್ಧತಿ ಕೂಡ ಮಸುಕಾಗುತ್ತಿದೆ. ಮಠ ಎಂದರೆ ವೇದಾದ್ಯಯನ ಮಾಡುವ ವಟುಗಳ ಆಶ್ರಯತಾಣವೆಂಬ ಹಳೆಯ ಪರಿಕಲ್ಪನೆ ಹೋಗಿ, ಇಂದು ಮಠಗಳು ನೂರಾರು ಕೋಟಿ ರುಪಾಯಿಗಳ ವ್ಯವಹಾರ ನಿಭಾಯಿಸುವ ಬ್ಯುಸಿನೆಸ್ ಹಬ್‌ಗಳಾಗಿವೆ. ಮಠಗಳು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ನಿರ್ವಹಿಸತೊಡಗಿ ದಶಕಗಳೇ ಆಗಿವೆ. ಆದ್ದರಿಂದ ಇಂದಿನ ಸ್ವಾಮಿಗಳಿಗೆ ಕೇವಲ ಋಗ್ವೇದದ ಋಕ್ಕುಗಳು ತಿಳಿದಿದ್ದರೆ ಸಾಕಾಗುವುದಿಲ್ಲ; ನವನಾಗರೀಕತೆಯ ಪರಿಭಾಷೆಯನ್ನು ಅರ್ಥೈಸಿಕೊಳ್ಳುವ ಸ್ಮಾರ್ಟ್‌ನೆಸ್ ಕೂಡ ಬೇಕು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಈಗಿನ ಯತಿಗಳು ತಮ್ಮ ಆರಿಸುವಾಗ ಎಚ್ಚರಿಕೆ ವಹಿಸುತ್ತಿದ್ದಾರೆ. ಈಚೆಗೆ ನಡೆದಿರುವ ಸೋದೆ, ಅದಮಾರು ಮಠಗಳ ಮತ್ತು ಶೃಂಗೇರಿ ಮಠದ ಶಿಷ್ಯಸ್ವೀಕಾರದಲ್ಲಿ ಅಂಥ ಜಾಣ್ಮೆ ಎದ್ದುಕಾಣುತ್ತಿದೆ. ಹಿಂದೂ ಧರ್ಮದೊಳಗೆ ನಡೆದಿರುವ ಮುಖ್ಯ ಪಲ್ಲಟಗಳ ಸಾಲಿನಲ್ಲಿ, ಶಿಷ್ಯಸ್ವೀಕಾರದ ವಿಷಯದಲ್ಲಾಗಿರುವ ಈ ಮಹತ್ವದ ಪಲ್ಲಟವನ್ನೂ ನಾವು ಗಮನಿಸಬೇಕು.

ಕೊನೆಯದಾಗಿ ಒಂದು ಮಾತು. ಬಾಲ್ಯ ಸಂನ್ಯಾಸ ಕೆಟ್ಟದು, ಬದುಕಿನ ಎಲ್ಲ ಹಂತಗಳನ್ನು ನೋಡಿದ ವ್ಯಕ್ತಿಗೆ ಕೊಡುವ ಸಂನ್ಯಾಸ ದೀಕ್ಷೆಯೇ ಉತ್ತಮ ಎಂಬ ಸರಳ ನಿರ್ಣಯಕ್ಕೆ ನಾವು ಬರುವಂತಿಲ್ಲ. ಬಾಲ್ಯ ಪದ್ಧತಿಯ ಶ್ರೇಷ್ಠ ಫಲವಾಗಿ ನಮ್ಮ ನಡುವೆ ಸಿದ್ಧಗಂಗಾ ಶ್ರೀಗಳು, ವಿಶ್ವೇಶ ತೀರ್ಥರು, ದಲಾಯಿ ಲಾಮ ಇದ್ದಾರೆ ಎಂಬುದನ್ನು ಮರೆಯಬಾರದು.

Tags

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

3 Comments

 1. Very timely article. When Sri Vidyabhushana accepted Samsaara from Sanyyaasa, he gave away everything that the mutt had at that time. He left the mutt practically empty handed. Now, mutts have become extremely rich in finance. They own properties, wealth, gold etc and have become epicenters of community politics. If Sanyaasa means detachment from the commercial life and entering into spiritual life, the reverse journey is indeed tougher than tough decision; because the Yati has to leave his title, wealth, influence, and go out only with the good name he has earned, if any.

  With all this in between, do you think today’s mutts are really places of spirituality? or rather one more avenue of business…

 2. sir am not entirely sure about your statements,
  yes, i agree ‘BALA SANYASI’ isnt used any where in shastra but for we udupi ashta mathas i beleive Sri vadiraja Guru sarwabhoumaru of sode matha, who is next to the throne of ‘Vayu Padhavi’ and also the next “Madhwacharya” has said in a kannada sankeerthane composed by him, he while praying to Udupi krishna in his song says and i quote ” Bala sanyasigala Ninnanu Premadindhali Poojisalu”. He had referred this in his song is a more than conclusive proof for us to beleive that “Bala sanyasi” is udupi sampradaya,and nothing else can negate this.
  Lastly, the kind of in depth knowledge about shastra and udupi madhwa sampradaya needed to debate on this matter i dont think you have it, and half knowledge is venemous to the society which even you know with all due respect so i hope you refrain from commenting on these kind of topics in future .

 3. Dear Mr. Chakrathirtha,
  I enjoyed reading your above article, “ಬಾಲಸನ್ಯಾಸಕ್ಕಿದು ಕಾಲವಲ್ಲ!”, and I thank you.
  It is an interesting article about pros and cons of selection of inexperienced boys for the post of SanyaSharma at a very young age. It is true that the selection of candidates for this post should be based on merit. Also, a person who has the ability to perform this selfless job should be selected.
  Kind regards,
  Raj Bykadi

Leave a Reply

Your email address will not be published. Required fields are marked *

Language
Close