ವಿಶ್ವವಾಣಿ

ಎಲ್ಲಿ ನಿನ್ನ ಗಂಡ, ಅವನನ್ನು ಅಟ್ಟಾಡಿಸಿ ಸಾಯಿಸ್ತೀನಿ ಅಂತ ಧಮಕಿ ಹಾಕಿದ್ದರು ಶೀರೂರು ಶ್ರೀಗಳು!

ಶೀರೂರು ಲಕ್ಷ್ಮೀವರ ತೀರ್ಥರು ತನ್ನ ಎಂಟನೇ ವಯಸ್ಸಿನಲ್ಲಿ ಪೀಠವೇರಿದ ಯತಿ. ಮೂರು ಪರ್ಯಾಯವನ್ನು ನಿರ್ವಹಿಸಿದವರು. ಐದು ದಶಕಗಳಿಗೂ ಹೆಚ್ಚು ಕಾಲ ಶೀರೂರು ಮಠದ ಪೀಠವನ್ನ ಆಳಿದವರು.  ಮೂಲ ಹೆಸರು ಹರೀಶ್ ಆಚಾರ್ಯ. ಉಡುಪಿ ಜಿಲ್ಲೆ ಹೆಬ್ರಿ ಬಳಿಯ ಮಡಾಮಕ್ಕಿ ಮೂಲದ ಶೀರೂರು ಅವರ ಹುಟ್ಟೂರು. ಶೀರೂರು ಮಠ ಪರಂಪರೆಯ 30ನೇ ಯತಿ. ಹಾಗೇ ಅಷ್ಟಮಠಗಳ ಪರಂಪರೆಗೆ ಆಧುನಿಕತೆಯ, ಹೊಸ ಪರಿ, ಭಾಷೆ, ಪರಂಪರೆಯನ್ನ (ಕಾಣಿಯೂರು ಹಿರಿಯರನ್ನ ಹೊರತುಪಡಿಸಿ), ಲೌಕಿಕತೆಯ ಲೇಪನವನ್ನ ಮೆತ್ತಿದ, ಮೆತ್ತನೆಯ ಹಾಸಿಗೆಯ, ಮಠದ ಒಳಗೂ ಸಾಂಸಾರಿಕ ಅಭೀಕ್ಷೆಯನ್ನ ನೆಲೆಗೊಳಿಸಿದ ಕ್ರಾಂತಿಕಾರಿ ಸ್ವಾಮಿ. ಸಮಾಜ, ಸಮೂಹ, ದೇವರು, ಧರ್ಮ, ಶಾಸ್ತ್ರ, ಕೈಂಕರ್ಯ, ವಿಧಿ-ವಿಧಾನ, ಕಟ್ಟಳೆ,  ಸಾತ್ವಿಕತೆ ಎಲ್ಲವನ್ನೂ ಗಾಳಿಗೆ ತೂರಿ ರಥಬೀದಿಯಲ್ಲಿ ಕತ್ತಿಕಾಳಗ, ಮುಷ್ಠಿಯುದ್ಧ, ‘ಬೋ….ಮಗ’ ‘ಸೂ…ಮಗ’ ಪ್ರಯೋಗಿಸಿ ಅಷ್ಟ ಮಠದೊಳಗೆ ರಗಡ್ ಸ್ವಾಮಿ, ರೆಬೆಲ್ ಸ್ಟಾರ್, ರೌಡಿ ರಂಗಣ್ಣ ಇತ್ಯಾದಿ ಬಿರುದುಗಳನ್ನ ವೀರೋಚಿತವಾಗಿ ಪಡಕೊಂಡವರು. ಉಡುಪಿ, ದಕ್ಷಿಣಕನ್ನಡದ ಪರಿಸರದಲ್ಲಿ ತೊಡೆತಟ್ಟಿ ತನ್ನ ಮೂಗಿನ ನೇರಕ್ಕೆ ಬದುಕಿದ ಭಂಡ, ಭಯಂಕರ ಪೀಠಾಧಿಪತಿ ಅಂದರೆ ಶೀರೂರು ಸ್ವಾಮೀಜಿ. ಆ ದೃಷ್ಟಿಯಲ್ಲಿ ಅವರ ಭಾವ, ಬದುಕು, ಇತಿಹಾಸವೇ. ಪೇಜಾವರರ ಮೂಲಕ ಶಿಷ್ಯತ್ವ. ಆದರೆ ಪೇಜಾವರರಿಗೆ ಉದ್ದಕ್ಕೂ ಮಗ್ಗುಲ  ಬದುಕಿದವರು. ಆಸ್ತಿ ಜಗಳಕ್ಕೆ ಮಧ್ಯೆ ಪ್ರವೇಶ, ಬೀದಿ ಜಗಳಕ್ಕೆ ಮಧ್ಯ ಪ್ರವೇಶ. ಕೊನೆಗೆ ಶೀರೂರು ಮಠದ ಒಳಗೇ ಮದ್ಯ, ಹೆಣ್ಣು ರಾಸಲೀಲಾಮೃತದ ಮಸ್ತಕಾಭಿಷೇಕ. ಮಠದಲ್ಲೇ ಅಧಿಕೃತ ಸಂಸಾರ, ಮಾಣಿ, ಉಪನಯನ. ಆ ಮಾಣಿ ಮಠದ ಹೊರಗೆ ನಿಂತಾಗ, ಯಾರಾದರೂ ನಿನ್ನಪ್ಪ ಯಾರು? ಅಂತ ಕುಚೋದ್ಯ ಮಾಡಿದರೆ – ಅರ್ಧಗಂಟೆಯ ಒಳಗೆ ಸ್ವಾಮೀಜಿಗಳಿಂದ ಬುಲಾವ್. ರಪ ರಪ ರಪ ಅಂತ ಕಣ್ಣು ಮೂಗು, ಮರ್ಮಾಂಗ ಅಂತ ನೋಡದೆ ಸ್ವತಃ ಶೀರೂರರಿಂದ  ಅದೂ ಮಡಿಯಲ್ಲಿ! ಕೊನೆಗೆ ಅವರಿಂದಲೇ ‘ಅಪ್ಪ ಯಾರು ಅಂತ ಈಗ ತಿಳಿತಲ್ಲಾ…ಹೊರಡು’ ಎಂಬ ತೀರ್ಪು. ಹೀಗೆ ಬಿಂದಾಸ್ ಆಗಿ ಬದುಕಿದ್ದ ಶೀರೂರು ಸ್ವಾಮೀಜಿಗಳಿಗೂ ನನಗೂ ಒಂದು ವ್ಯಕ್ತಿಗತ ಹೋರಾಟ, ಕಾದಾಟದ ಸಣ್ಣ ನೆನಪಿನ ಇತಿಹಾಸವೂ ಇದೆ.

ಕುದಿಮಠದ ಕರಾಳ ನೆನಪು…

1998ರ ಸಮಯ. ಆಗಷ್ಟೇ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಮೆರಿಕಕ್ಕೆ ಹೋಗಿ ಬಂದಿದ್ದರು. ಅಷ್ಟ ಮಠಗಳು ಕುದಿಕುಂಡಗಳಾಗಿದ್ದವು. ‘ಸಮುದ್ರೋಲ್ಲಂಘನ ನಿಷೇಧ’ ಅನ್ನುವ ಲಾಗಾಯ್ತಿನ ಶಾಸ್ತ್ರದ  ಪುತ್ತಿಗೆ ಶ್ರೀಗಳನ್ನ ಶ್ರೀಕೃಷ್ಣನ ಪೂಜಾ ಕೈಂಕರ್ಯ ಅಂದರೆ ಪರ್ಯಾಯ ಪೀಠಾರೋಹಣದಿಂದ ಹೊರಗಿಡುವ, ಬಹಿಷ್ಕಾರ ಹಾಕುವ ತಂತ್ರ-ಕುತಂತ್ರ ನಡೆದಿತ್ತು. ಆ ‘ಬಹಿಷ್ಕಾರ’ದ ಸಂಪೂರ್ಣ ಸೂತ್ರಗಾರಿಕೆ, ಮುಂದಾಳತ್ವ ಶೀರೂರು ಸ್ವಾಮೀಜಿಗಳದ್ದು. ಅಷ್ಟಮಠಗಳಲ್ಲಿ ಕಾಣಿಯೂರು ಮಠ, (ಹಿರಿಯರು) ಶೀರೂರು ಮಠ ಒಂದು ರೀತಿ ಅನುಷ್ಠಾನ, ಅನುಚಾರಿಕೆಗಳಲ್ಲಿ ಅಡ್ಡಪಂಕ್ತಿ. ಅವರು ಮಠವನ್ನು ‘ಮನೆ’ ಮಾಡಿಕೊಂಡು ಭವಸಾಗರವನ್ನ ‘ಸಂಸಾರ’ದ ಹುಟ್ಟು ಬಳಸಿ ದಾಟಲು ಹೊರಟವರು. ಕಾಣಿಯೂರು ಹಿರಿಯರು ಮಠದ ರಾಜಕೀಯದಲ್ಲಿ ನೇರವಾಗಿ ಭಾಗವಹಿಸಿದವರಲ್ಲ. ಅವರದ್ದೇ ಆದ  ದರ್ಪ, ದೌಲತ್ತುಗಳಲ್ಲಿ ಬದುಕಿ ಹೋದವರು. ಹತ್ತಿಪ್ಪತ್ತು ಬೆಕ್ಕುಗಳನ್ನ ಸಾಕಿಕೊಂಡಿದ್ದ ಅವರು, ಪ್ರತೀ ದಿನ ಸಂಜೆ ಅವುಗಳಿಗೆ ಸ್ವತಃ ಮಠದ ಬಾಗಿಲಿನಲ್ಲಿ ಕುಳಿತು ಮೀನೂಟ ಬಡಿಸುತ್ತಿದ್ದರು! ಹಿರಿಯರಿಗೆ ಕಿರಿಯ ಸ್ವಾಮೀಜಿ ಬಂದ ನಂತರ ಕಾಣಿಯೂರು ಮಠದ ಚಿತ್ರ, ಚಹರೆ ಬದಲಾಗಿದೆ. ಆದರೆ ಶೀರೂರು ಸ್ವಾಮೀಜಿ ಅಷ್ಟಮಠದ ಒಳರಾಜಕೀಯದ ಕೇಂದ್ರ ಬಿಂದು. ಶೀರೂರು ಸ್ವಾಮೀಜಿಗಳನ್ನ ಈಚೆಗೆ ಬಹಿಷ್ಕಾರ ಹಾಕಲು ಏಳೂ ಮಠಗಳು ಒಟ್ಟಾಗಿ ಹೊರಟ ವಿದ್ಯಮಾನ ನಡೆದರೂ ಅದರ ಗರ್ಭದಲ್ಲಿ ಈ  ಮಠಗಳು ಅಲ್ಲಿನ ತಂತ್ರ, ಕುತಂತ್ರ, ಕುಯುಕ್ತಿ, ಹೊಡಿಬಡಿ ಕಾಳಗ ಕೈಂಕರ್ಯಕ್ಕೆ ಶೀರೂರು ಸ್ವಾಮೀಜಿಗಳನ್ನೇ ಮುಂದುಬಿಡುತ್ತಿದ್ದರು. ಕೊನೆಕೊನೆಗೆ ಅವರ ಅಥರ್ವಣ, ಅನಾಚಾರ, ಬೇಲಿ ಹಾರುವಿಕೆಗಳನ್ನ ಸಹಿಸದೇ ಅವರ ವಿರುದ್ಧ ಸೆಟೆದೆದ್ದವು ಸಪ್ತಮಠಕೂಟಗಳು.

11 ಜನವರಿ, 1998ರ ‘ತರಂಗ’ ಸಂಚಿಕೆಯ ಮುಖಪುಟದಲ್ಲಿ ‘ಪುತ್ತಿಗೆ ಶ್ರೀಗಳ ವಿದೇಶ ಪ್ರವಾಸ, ಒಳಗೊಳಗೇ ಕುದಿಯುವ ಅಷ್ಟಮಠಗಳು’ ಅಗ್ರಲೇಖನ ಬರೆದಿದ್ದೆ. ಎಂಟೂ ಮಠಗಳ ಸ್ವಾಮೀಜಿಗಳನ್ನ ಸಂದರ್ಶನ ಮಾಡಿ, ಶಾಸ್ತ್ರ, ಸಂಪ್ರದಾಯ, ಸಂನ್ಯಾಸ ಪರಂಪರೆ ಎಲ್ಲಾ ಮಗ್ಗುಲುಗಳನ್ನೂ ಪರಾಮರ್ಶಿಸಿ  ಸುದೀರ್ಘ ಲೇಖನ ಅದಾಗಿತ್ತು. ಪ್ರಧಾನ ಸಂಪಾದಕ ರಾಗಿದ್ದ ಸಂತೋಷ್ ಕುಮಾರ್ ಗುಲ್ವಾಡಿ, ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಸಂಧ್ಯಾ ಪೈ ಅವರೊಂದಿಗೆ ಚರ್ಚಿಸಿ ಬರೆದ ಬರಹ ಅದು. ನಮ್ಮಲ್ಲಿ ಪ್ರಿಂಟ್ ಆಗುವಾಗಲೇ ನನ್ನ ಬರಹವನ್ನ ಯಾರೋ ಮಠದ ಹಿತೈಷಿಗಳು ಓದಿದ್ದಾರೆ. ಮಠಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಮರುದಿನ ಸಂಚಿಕೆ ಮಾರುಕಟ್ಟೆಗೆ ಹೋಗ ಬೇಕು. ಆಗ ‘ತರಂಗ’ದ ಪ್ರಸಾರ ಒಂದು ಲಕ್ಷದ ಮೂವತ್ತ ಎರಡು ಸಾವಿರ. ಪ್ರಿಂಟ್ ಆದ ಪ್ರತಿಗಳು ರಾಜ್ಯಾದ್ಯಂತ ಮಾರುಕಟ್ಟೆಗೆ ಹೋಗಲು  ವಾಹನ ಏರಿ ಕುಳಿತಿವೆ. ಹೆಚ್ಚು ಕಮ್ಮಿ ಸಾವಿರದ ಮೇಲೆ ಜನ ಪ್ರೆಸ್‌ಗೆ ಮುತ್ತಿಗೆ ಹಾಕಿದರು. ಗೇಟಿನ ಹೊರಗಡೆ ಪ್ರತಿಭಟನೆ ನಡೆದವು. ಟೈಯರಿಗೆ ಬೆಂಕಿ ಹಾಕಿ ಉಡುಪಿ ರಥಬೀದಿಯಲ್ಲಿ ದಾಂದಲೆ ಆರಂಭಿಸಿದರು. ಪೈಗಳ ಮನೆಗೆ ಫೋನಿನ ಸುರಿಮಳೆ ಆದವು. ‘ಮಠದ ವಿರುದ್ಧ ಲೇಖನ ಬರೆದ ಆ ಬೋ…ಮಗ ಬಿ. ಗಣಪತಿಯನ್ನ ನಮಗೆ ಒಪ್ಪಿಸಿ. ಇಲ್ಲವಾದರೆ ‘ತರಂಗ’ದ ಹೆಸರಿನಲ್ಲಿ ರಾಜ್ಯಾದ್ಯಂತ ಗಲಾಟೆ ಮಾಡ್ತೇವೆ. ಉಡುಪಿ, ದಕ್ಷಿಣಕನ್ನಡದಲ್ಲಿ ರಕ್ತಪಾತ ಮಾಡುತ್ತೇವೆ…’ ಎಂದು ನೇರ  ಪಂಥಾಹ್ವಾನ, ಧಮಕಿ ಹಾಕಿದ್ದು ಬೇರಾರು ಅಲ್ಲ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ.!

ಅದೇ ಹೊತ್ತಿಗೆ ನನ್ನ ಹುಡ್ಕೋ ಕಾಲನಿ ಮನೆಗೆ ಸ್ವತಃ ಸ್ವಾಮೀಜಿ ಫೋನಾಯಿಸಿ, ‘ಎಲ್ಲಿ ನಿನ್ನ ಗಂಡ ಬೋ…ಮಗ. ಅವನನ್ನ ಅಟ್ಟಾಡಿಸಿ ಹೊಡೆದು ಸಾಯಿಸ್ತೀನಿ’ ಎಂಬ ಆವಾಜು. ನಾನು ಆಗ ‘ತರಂಗ’ದ ಇನ್ನೊಂದು ವಿಶೇಷ ಲೇಖನಕ್ಕೆ ಸಿರ್ಸಿಯ ಮಾರಿಕಾಂಬಾ ದೇವಸ್ಥಾನದಲ್ಲಿದ್ದೆ. ಬೆಳಗು ಜಾವದಿಂದಲೇ ನನ್ನ ಮನೆಯ ಸುತ್ತ ಜೀಪು, ಬೈಕುಗಳಲ್ಲಿ ರೌಡಿಗಳ ರೌಂಡಪ್. ಮನೆಬಾಗಿಲು ಬಡಿಯುವಿಕೆ.  ಮೇಲೆ ಫೋನು, ಅವಾಚ್ಯ ಶಬ್ದಗಳಿಂದ ಬಯ್ಯುವಿಕೆ. ಬೆದರಿಕೆ ಹಾಕುವಿಕೆ ನಡೆದಿತ್ತು. ಈ ಘಟನೆ ನಡೆಯುತ್ತಿದ್ದಂತೆ ಸಂಧ್ಯಾ ಪೈ ಅವರು ತಕ್ಷಣ ನನಗೆ ಫೋನ್ ಮಾಡಿ ‘ನೀವು ಎರಡು ಮೂರು ದಿನ ಊರಿಗೆ ಬರುವುದು ಬೇಡ. ಇಲ್ಲಿ ನಾವು ನಿಭಾಯಿಸುತ್ತೇವೆ. ಭಯ ಬೇಡ. ನೀವೀಗ ಬಂದರೆ ಜೀವಕ್ಕೇ ಅಪಾಯ ಇದೆ’ ಎಂದರು. ಮನೆಯವರನ್ನ ಅವರೇ ಅಜ್ಞಾತ ಸ್ಥಳಕ್ಕೆ ಶಿಫ್‌ಟ್ ಮಾಡಿಸಿದರು. ಪೈಗಳ ಎದುರು ಸಂಧಾನ ಪ್ರಕ್ರಿಯೆ ನಡೆದು, ನಾವು ಸಂಚಿಕೆ  ಸರಿಯಾಗಿದೆ. ಸ್ಪಷ್ಟವೂ ಆಗಿದೆ. ಅಷ್ಟ ಮಠಾಧೀಶರ ಸಂದರ್ಶನದ ಧ್ವನಿಮುದ್ರಿಕೆ ಇದೆ. ಆದರೆ ಪತ್ರಿಕೆ ಹೆಸರಿನಲ್ಲಿ ಗಲಾಟೆ, ದೊಂಬಿ ನಡೆಯುತ್ತದೆ ಅಂತ ಆದರೆ ಸಂಚಿಕೆ ವಾಪಸ್ ಪಡೆಯುತ್ತೇವೆ’ ಎಂದರು ಪೈಗಳು. ಎಲ್ಲಾ ಸಂಚಿಕೆಗಳನ್ನೂ ಹಿಂಪಡೆದು, ತಕ್ಷಣ ಹೊಸ ಮುಖಪುಟ ಮಾಡಿ ಮಾರುಕಟ್ಟೆಗೆ ಕಳುಹಿಸಲಾಯಿತು. ಸುಮಾರು 15ರಿಂದ 20 ದಿನಗಳ ಕಾಲ ಭೂಗತನಾಗಿದ್ದ ನಾನು ನಂತರ ಪೊಲೀಸ್ ಪ್ರೊಟೆಕ್ಷನ್ ಪಡೆದು ವೃತ್ತಿ ಜೀವನ ನಿಭಾಯಿಸಲು ಆರಂಭಿಸಿದೆ.

ಈ ಮಧ್ಯೆ ಒಂದು ದಿನ  ಎಂದೇ ಖ್ಯಾತಿ ಹೊಂದಿದ್ದ ಮುಂಬೈ ಭೂಗತ ಚಟುವಟಿಕೆಯ ಮುಖ್ಯ ಹೆಸರು ಸಾಧು ಶೆಟ್ಟರಿಂದ ನನಗೆ ಫೋನ್. ‘ಗಣಪತಿಯವರೇ, ನಾನು ಸಾಧು. ನನ್ನಿಂದ ನಿಮಗೆ ಬೆದರಿಕೆ ಆಗಲಿ, ಜೀವಾಪಾಯವಾಗಲೀ ಇಲ್ಲ. ನಿಮ್ಮ ಬಗ್ಗೆ ನನಗೆ ಗೌರವವಿದೆ. ಆದರೆ ಶೀರೂರು ಶ್ರೀಗಳ ಒತ್ತಡವಿದೆ ನನ್ನ ಮೇಲೆ. ನಾನಾಗಲೀ, ನಮ್ಮ ಹುಡುಗರಾಗಲೀ ಏನೂ ಮಾಡುವುದಿಲ್ಲ. ಆದರೆ ನನ್ನ ಹೆಸರಿನಲ್ಲಿ ಇನ್ನಾರಾದರೂ ತಮಗೆ ಜೀವಾಪಾಯ ತಂದೊಡ್ಡಬಹುದು. ಜಾಗ್ರತೆ ಮಾಡಿ’ ಅಂತ ಹೇಳಿದರು. ನಾನು ಆಗಲೇ  ರಕ್ಷಣೆ ಕೋರಿದ್ದು.

ನನಗೆ ಅನ್ನ, ಆಶ್ರಯ, ಮತ್ತು ವೃತ್ತಿಯ ಅನುಪಮ ದಿನಗಳನ್ನು ನೀಡಿದ ಪೈ ಬಂಧುಗಳು, ಮುಖ್ಯವಾಗಿ ಸಂಧ್ಯಾ ಪೈ, ಗೌತಮ್ ಪೈ, ಸತೀಶ್ ಪೈಗಳು ನನ್ನನ್ನು ರಕ್ಷಿಸಿದರು. ಧೀಮಂತವಾಗಿ ವೃತ್ತಿ ನಿಭಾಯಿಸುವಂತೆ ಮುಂದೆ ಮಾಡಿದರು. ಆದರೆ ಪುತ್ತಿಗೆ ಶ್ರೀಗಳ ವಿದೇಶ ಪ್ರವಾಸದ ಆ ಸಂಚಿಕೆಯಿಂದ ಸುಮಾರು ನಾಲ್ಕೈದು ವರ್ಷಗಳ ಕಾಲ ಶೀರೂರು ಶ್ರೀ ನನ್ನ ಮುಗಿಸಲು ಹೊಂಚುಹಾಕಿದ್ದು ಮಾತ್ರ ವೃತ್ತಿಜೀವನದ ಕರಾಳ ಅಧ್ಯಾಯ.

ಸಾರ್ವಜನಿಕ ಜೀವನದಲ್ಲಿ ಅವರು  ಬದುಕಿದವರು. ಅವರ ಬೀಡಾಡಿತನ ಮಠ ವ್ಯವಸ್ಥೆಗೆ ಆತಂಕಕಾರಿ ಆಗಿದ್ದಾಗಲೂ ಮಠಕ್ಕೆ ಹೊರಗಿನಿಂದ ಶತ್ರು ಕಾಟ ಎದುರಾದಾಗಲೆಲ್ಲ ಗುರಾಣಿಯಂತೆ ಎದುರು ನಿಂತವರು. ಬಡ ವಿದ್ಯಾರ್ಥಿಗಳಿಗೆ ಬೆಂಗಾವಲಾದವರು. ಉಡುಪಿಗೆ ಬರುವ ಅನಾಥ ಯಾತ್ರಿಕರಿಗೆ ಆಪತ್ ಬಂಧುವಾದವರು. ಒಮ್ಮೆ ಉಡುಪಿ ಪರಿಸರದಲ್ಲಿ ನೀರಿನ ಅಭಾವ ಕಂಡಾಗ ಸ್ವತಃ ತಾವೇ ಎದುರು ನಿಂತು ಭಗೀರಥರಾದವರು. ಶೀರೂರು ಅಲಂಕಾರ ಪ್ರಿಯ. ಉಡುಪಿಯ ಶ್ರೀಕೃಷ್ಣನಿಗೆ ನೂರಾರು ಅಲಂಕಾರ ಮಾಡಿ ವಿಶ್ವವಿಖ್ಯಾತಿ ಗಳಿಸಿದವರು. ವಾದ್ಯ ನುಡಿಸುತ್ತಿದ್ದರು. ಶಾಲಾಮಕ್ಕಳ ಅಥವಾ  ಕಲಾವಿದರ ಮನೋರಂಜನಾ ಕಾರ್ಯಕ್ರಮದಲ್ಲಿ ಎರಡೂ ಕಾಲುಗಳನ್ನು ಅಲ್ಲಾಡಿಸುತ್ತಾ, ತೆರೆದ ಬಾಯನ್ನು ತೆರೆದೇ ಜೊಲ್ಲು ಸುರಿಸುತ್ತಾ ವೇದಿಕೆಯ ಎದುರೇ ಕುಳಿತರೆಂದರೆ ಇಹವನ್ನೇ ಮರೆಯುತ್ತಿದ್ದರು.

ಶೀರೂರು ಸ್ವಾಮೀಜಿ ಸಾವು ಅವರ ಭಕ್ತಾದಿಗಳ ಪ್ರಕಾರ ಸಂಶಯಾಸ್ಪದ. ಕೊಲೆ ಸಂಚು. ವಿಷಪ್ರಾಶನ. ಈಚಿನ ಮಠ ವಿವಾದಕ್ಕೆ ಆದ ಬಲಿ. ಅದು ಈಗ ನಿಗೂಢ. ತನಿಖೆಗೊಂದು ಆಹಾರ. ವರ್ತಮಾನದಲ್ಲಿ ‘ಸ್ವಾಮೀಜಿ’ ಅನ್ನುವ ಪದ ಭಯ, ಭಕ್ತಿ, ಪೂಜ್ಯತೆ, ವಿನೀತತೆ, ಪ್ರಾಂಜಲತೆ, ಸರಳ, ಸಭ್ಯ, ಶುದ್ಧ ಮುಂತಾದ  ಭಾವತೀವ್ರತೆಯ ಮೂಸೆಯಿಂದ ಹೊರಬಿದ್ದಿದೆ. ಆ ಪದ ಲೌಕಿಕದ ಪದಾರ್ಥವಾಗಿದೆ. ‘ಸ್ವಾಮೀಜಿ’, ಮಠ, ಮಂದಿರ, ಧಾರ್ಮಿಕತೆ, ಆಚಾರ, ವಿಚಾರ, ಆದರ್ಶ, ಆದರಣೀಯ, ಗುರು ಇತ್ಯಾದಿ ಚೌಕಟ್ಟಿನಿಂದ ಆಚೆ ನಿಂತು ಅದು ಸಾಮಾನ್ಯರ ನಾಲಿಗೆಯ ತಾಂಬೂಲವಾಗಿದೆ. ಜಾತಿ, ಮತ, ಪಂಥಗಳಿಗೆ ‘ಸ್ವಾಮೀಜಿ’ ಸೀಮಿತಗೊಂಡು ಆಶೀರ್ವಾದವೂ ಬ್ರಾಹ್ಮಣ, ಲಿಂಗಾಯತ, ಗೌಡ ಹೀಗೆ ಜಾತಿ ಲೆಕ್ಕಾಚಾರದ ಗೊಡವೆಯಲ್ಲಿ ವಿಂಗಡಿಸಲ್ಪಟ್ಟಿದೆ. ಖಾವಿಧಾರಿ, ಸರ್ವಸಂಘ ಪರಿತ್ಯಾಗಿ, ‘ಲೋಕಾ ಸಮಸ್ತಾ ಸುಖಿನೋಭವಂತು’ ಎಂಬಿತ್ಯಾದಿ ಧ್ಯೇಯವಾಕ್ಯದೊಂದಿಗೆ ವಿಶ್ವಕಲ್ಯಾಣದ ಸ್ವಾಮೀಜಿ ಪರಂಪರೆ  ವಿಧಾನಸೌಧದ ಎದುರು ನಮ್ಮವರನ್ನ ಮಂತ್ರಿ, ಮುಖ್ಯಮಂತ್ರಿ ಮಾಡಿ ಅನ್ನಲು ಪಡೆಕಟ್ಟಿ ಧರಣಿ, ಪ್ರತಿಭಟನೆ ನಡೆಸುವ ಹಂತಕ್ಕೆ ಬಂದು ನಿಂತಿದೆ. ಮಠಗಳು ವಿಧಾನಸೌಧದ ರಾಜಕೀಯವನ್ನೂ ಮೀರಿಸುವ ಹಂತಕ್ಕೆ, ಪೈಪೋಟಿಗೆ ಇಳಿದಿವೆ. ಹಾಗಾಗಿ ಅವರ ಆಗಮನ, ನಿರ್ಗಮನ ಎರಡೂ ಸುಖವನ್ನೂ ದುಃಖವನ್ನೂ ತಾರದು ಇಂದು. ಶೀರೂರು ಸ್ವಾಮೀಜಿಯಂತವರ ಸಾವು ಒಂದಿಷ್ಟು ವಿಕ್ಷಿಪ್ತ ನಿನ್ನೆಯನ್ನ ನೆನಪಿಸಿಕೊಳ್ಳುವಂತೆ, ಆ ಮೂಲಕ ಸ್ವಾಮೀಜಿಯೊಬ್ಬ ಹೀಗೂ ಬದುಕಲು ಸಾಧ್ಯವಿತ್ತೇ ಅನ್ನುವ ವಿಸ್ಮಯಕ್ಕೂ, ಹೇವರಿಕೆಗೂ ಕಾರಣವಾಗುವಂತೆ ಮಾಡಿದೆ.

ಈಚೆಗೆ  ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧೆಗೆ ಮುಂದಾಗಿದ್ದರು. ನಾಮಿನೇಷನ್‌ಗೆ ಹೋದಾಗ ಉಸಿರಾಟದ ಸಮಸ್ಯೆಯಾಗಿ ಕುಸಿದಿದ್ದರು. ನಂತರ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಚುನಾವಣೆ, ಅನಾರೋಗ್ಯದ ಕಾರಣದಿಂದ ದ್ವಂದ್ವ ಮಠ ಅದಮಾರು ಮಠಕ್ಕೆ ಪಟ್ಟದ ದೇವರಾದ ಅನ್ನ ವಿಠ್ಠಲನನ್ನು ಕೊಟ್ಟಿದ್ದರು. ಅದಮಾರು ಸ್ವಾಮೀಜಿ ಪರ್ಯಾಯ ಮಠ ಪಲಿಮಾರಿಗೆ ನಿತ್ಯ ಪೂಜೆಗೆ ವರ್ಗಾಯಿಸಿದ್ದರು. ನಂತರ ‘ನನ್ನ ಪಟ್ಟದ ದೇವರನ್ನು ನನಗೆ ಹಿಂದಿರುಗಿಸಿ’ ಎಂದು ಶೀರೂರು ಸ್ವಾಮೀಜಿ ಕೇಳಿದ್ದಕ್ಕೆ ಏಳೂ ಮಠದ ಸ್ವಾಮೀಜಿಗಳೂ ಸೇರಿ ‘ಶಿಷ್ಯನನ್ನ  ಪಟ್ಟದ ದೇವರನ್ನು ಹಿಂಪಡೆಯಿರಿ. ನೀವು ವಿಠ್ಠಲನನ್ನೂ, ಶ್ರೀ ಕೃಷ್ಣನನ್ನೂ ಪೂಜಿಸುವಂತಿಲ್ಲ’ ಎಂದು ಪಟ್ಟು ಹಿಡಿದ ಪೆಟ್ಟಿಗೆ ವಿವಾದ ಭುಗಿಲೆದ್ದಿತ್ತು. ‘ನನಗೊಬ್ಬನಿಗೇ ಅಲ್ಲ, ಅಷ್ಟ ಮಠದ ಉಳಿದ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ’ ಎಂಬ ಬಾಂಬನ್ನು ಸಿಡಿಸಿದ ಶೀರೂರು, ನಂತರ ಪಟ್ಟದ ವಿಠ್ಠಲನಿಗಾಗಿ ಕೋರ್ಟ್ ಮೆಟ್ಟಿಲು ಏರಿದ್ದರು. ಕ್ರಿಮಿನಲ್ ಕೇಸ್ ಹಾಕಲೂ ಮುಂದಾಗಿದ್ದರು. ಇದನ್ನು ಅಷ್ಟಮಠದ ಉಳಿದ ಯತಿಗಳು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಸ್ವೀಕರಿಸಿದ್ದರು. ಆದರೂ ಶೀರೂರು ಸ್ವಾಮೀಜಿಗಳ ಬಂಢತನದ ವಿಶ್ವರೂಪದರ್ಶನದ ಅನುಭವವಿದ್ದ ಉಳಿದ  ಮಠದ ಮಾನ ಬೀದಿಗೆ ಬರುವ ಆತಂಕಕ್ಕೂ ಒಳಗಾಗಿದ್ದು ಗುಟ್ಟೇನಲ್ಲ. ಅಷ್ಟರಲ್ಲೇ ಫುಡ್ ಪಾಯ್ಸನ್ ಆಗಿ ಆಸ್ಪತ್ರೆ, ಅಸ್ತಂಗತ. ಮಠದ ಒಳವಿವಾದದ ಜ್ವಾಲೆಯ ಪ್ರಖರತೆಯ ಅರಿವಿದ್ದ ಯಾರೂ ಶೀರೂರು ಶ್ರೀಗಳ ಫುಡ್ ಪಾಯ್ಸನ್‌ನ್ನು ಸಹಜ ಆಹಾರ ಪ್ರಕ್ರಿಯೆಯ ಅಚಾನಕ್ ಘಟನೆ ಎಂದು ನಂಬುತ್ತಿಲ್ಲ. ತನಿಖೆ ಆಗಬೇಕು. ವಿಷಪ್ರಾಷನವಾಗಿದ್ದರೆ ಅದು ಅಕ್ಷಮ್ಯ. ಬೀಡಿ, ಸಿಗರೇಟು, ಮದ್ಯ, ಅವರ ನಿತ್ಯನಿರಂತರ ಹವ್ಯಾಸ. ಹೆಣ್ಣು ಅವರ ವ್ಯಾಮೋಹದ ರಂಗಮಂಚ. ಕತ್ತಿ, ಮಚ್ಚು, ಚೂರಿ, ರಾಜಕೀಯ  ಆಸಕ್ತ ಕ್ಷೇತ್ರ. ಹಾಗಂತ ಇವರು ಧರ್ಮ ರಾಜಕೀಯದಲ್ಲಿ ಇರಲಿಲ್ಲ. ಮಠದ ರಾಜಕೀಯದ ಸಕ್ರಿಯ ರಾಜಕಾರಣಿ, ಪುಢಾರಿ.

‘ಸತ್ತ ಎಮ್ಮೆಗೆ ಹತ್ತು ಸೇರು ತುಪ್ಪ’ ಎಂದೇ ಯಾರೇ ಪ್ರಮುಖರು ತೀರಿಕೊಂಡಾಗ ಅವರನ್ನು ಹೊಗಳಿ ಇದ್ದದ್ದೂ, ಇಲ್ಲದ್ದೂ ಸೇರಿಸಿ ಇಂದ್ರ ಚಂದ್ರ ಮತ್ತು ಸ್ವರ್ಗಾರೋಹಣ ಎಂದೇ ಹೇಳುವ, ಬರೆಯುವ, ಬಿತ್ತರಿಸುವ ಸಂಪ್ರದಾಯದಲ್ಲಿ ನನ್ನ ಈ ‘ಶ್ರದ್ಧಾಂಜಲಿ ಮಾತು’ ಕೆಲವರಿಗೆ ಇಲ್ಲಾ ಹಲವರಿಗೆ ಅಪಥ್ಯ ಆಗಬಹುದು. ಇರುವಾಗಲಂತೂ ಹೇಳಲಾಗಲಿಲ್ಲ. ಕನಿಷ್ಠ ಸತ್ತಾಗಲಾದರೂ ಒಂದು  ಗೀತೆ, ಶ್ಲೋಕ…, ತಪ್ಪೇ?