About Us Advertise with us Be a Reporter E-Paper

ಅಂಕಣಗಳು

ದುಬೈಗೆ ಹೋದ ಶಾಪಿಂಗ್ ವೃತ್ತಾಂತ!

ಕೆಲವು ವರ್ಷಗಳ ಹಿಂದೆ, ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರು ದುಬೈಗೆ ಹೋಗಿದ್ದರಂತೆ. ಅವರನ್ನು ಅಲ್ಲಿ ನೆಲೆಸಿರುವ ಪ್ರಮುಖ ಬಿಜಿನೆಸ್‌ಮನ್ ಊಟಕ್ಕೆ ಆಹ್ವಾನಿಸಿದರಂತೆ. ಆ ಸಂದರ್ಭದಲ್ಲಿ ಈ ರಾಜಕಾರಣಿ ನನ್ನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿ’ ಎಂದು ವಿನಂತಿಸಿಕೊಂಡಾಗ ಆಯಿತು ಎಂದರಂತೆ. ಈ ರಾಜಕಾರಣಿಯ ಜತೆಗೆ ಶಾಪಿಂಗ್‌ಗೆ ಹೋದರೆ, ಎಲ್ಲ ಕಡೆಯೂ ಆಸಾಮಿ ಹಣವನ್ನೇ ಬಿಚ್ಚುತ್ತಿರಲಿಲ್ಲವಂತೆ. ಹಣ ಕೊಡುವ ಸಂದರ್ಭ ಬಂದಾಗ ಬಿಜಿನೆಸ್‌ಮನ್ ಮುಖ ನೋಡುತ್ತಿದ್ದರಂತೆ. ಐದಾರು ಲಕ್ಷ ರುಪಾಯಿ ಕೈಬಿಟ್ಟು ಹೋಗಿತ್ತು. ಆದರೂ ಈ ರಾಜಕಾರಣಿಯ ಶಾಪಿಂಗ್ ಮುಗಿಯುವ ಲಕ್ಷಣ ಕಾಣಲಿಲ್ಲವಂತೆ.

ಆ ಬಿಜಿನೆಸ್‌ಮನ್ ಬೇಸರಿಸಿಕೊಳ್ಳಲಿಲ್ಲ. ‘ಆಯಿತು’ ಎಂದರಂತೆ. ‘ಮತ್ತೇನು ಬೇಕು ನಿಮಗೆ, ಹೇಳಿ’ ಎಂದರಂತೆ. ‘ನನಗೆ ವಾಚ್ ಖರೀದಿಸಬೇಕು’ ಎಂದರಂತೆ. ಮುಂದಿನ ಸ್ಟಾಪ್ ವಾಚ್ ಅಂಗಡಿಯಲ್ಲಿ.

ಸರಿ, ನಿಮ್ಮ ಇಷ್ಟವಾದ ಬ್ರ್ಯಾಂಡ್ ಯಾವುದು?’ ಎಂದು ಕೇಳಿದರಂತೆ ಬಿಜಿನೆಸ್‌ಮನ್. ಆ ರಾಜಕಾರಣಿ ರೊಲೆಕ್‌ಸ್, ಕಾರ್ಟಿಯರ್, ಲಾಂಜೈನ್‌ಸ್, ರ್ಯಾಡೋ, ಹುಬ್ಲೋಹೀಗೆ ಯಾವುದಾದರೂ ದುಬಾರಿ ವಾಚ್‌ಗಳ ಹೇಳಬಹುದು ಎಂದು ಅಂದುಕೊಂಡಿದ್ದರಂತೆ. ಆದರೆ ಆ ಮಹಾಶಯ ‘ಟೈಟನ್, ಸೀಕೋ, ಟೈಮೆಕ್‌ಸ್’ ಎಂದರಂತೆ.

ಆ ರಾಜಕಾರಣಿ ಬಗ್ಗೆ ಇದ್ದಬಿದ್ದ ಚೂರುಪಾರು ಇಂಪ್ರೆಶನ್ ಸಹ ಹೊರಟುಹೋಯಿತಂತೆ. ಅಯ್ಯೋ ಇವರ ಲೆವಲ್ಲೇ ಇಷ್ಟು ಎಂದು ಸುಮ್ಮನಾಗಿ, ಅವರು ಕೇಳಿದ ವಾಚುಗಳನ್ನು ಪ್ಯಾಕ್ ಮಾಡುವಂತೆ ಹೇಳಿದರಂತೆ. ಆಗ ಬಿಜಿನೆಸ್‌ಮನ್ ತಲೆಯಲ್ಲಿ ಒಂದು ಯೋಚನೆ ಬಂತಂತೆ,- ‘ಈ ರಾಜಕಾರಣಿ ಊರಿಗೆ ಹೋಗಿ, ಈ ವಾಚುಗಳನ್ನು ತೋರಿಸಿ, ಇಂಥವರು ಕೊಟ್ಟಿದ್ದು ಅಂತ ಹೇಳಿಕೊಳ್ತಾರೆ. ಆಗ ನನ್ನ ಏನಾಗಬೇಕು?’

ಪ್ಯಾಕ್ ಮಾಡಿದ ಕಡಿಮೆ ಬೆಲೆಯ ಸೀಕೋ, ಟೈಮೆಕ್‌ಸ್, ಟೈಟನ್ ವಾಚುಗಳ ಬದಲಾಗಿ, ದುಬಾರಿ ಬೆಲೆಯ ‘ರ್ಯಾಡೋ’ ವಾಚ್ ಪ್ಯಾಕ್ ಮಾಡಿಸಿದರಂತೆ! ‘ನನ್ನ ಮರ್ಯಾದೆ ಉಳಿಸಿಕೊಳ್ಳಲು ಹಾಗೆ ಮಾಡಬೇಕಾಯ್ತು ಸ್ವಾಮಿ’ ಎಂದು ಜೋರಾಗಿ ನಕ್ಕರು.

ಅಲ್ಲಿಗೆ ಮುಗಿಯಿತಾ ಶಾಪಿಂಗ್?’ ಎಂದು ಕೇಳಿದೆ. ‘ಇಲ್ಲ.. ಇಲ್ಲ.. ಮುಂದೆ ಕೇಳಿ’ ಎಂದರು.

ನನಗೆ ಸೋಪುಗಳು ಬೇಕು’ ಅಂದರಂತೆ ಆ ರಾಜಕಾರಣಿ. ಯಾವುದು ಅಂತ ಕೇಳಿದರೆ, ‘ಲಕ್‌ಸ್ಸೋಪು’ ಎಂದಿತಂತೆ, ಆ ಆಸಾಮಿ. ‘ಹತ್ತು ಪ್ಯಾಕ್ ಮಾಡಿ’ ಎಂದರಂತೆ ಬಿಜಿನೆಸ್‌ಮನ್, ಆ ಭಾರದಿಂದ ಶಾಪಿಂಗ್ ಚಟವಾದರೂ ಕೊನೆಗೊಳ್ಳಲಿ ಎಂದು.

ಆ ರಾಜಕಾರಣಿ ಯಾರು ಎಂದು ಕೇಳಿದ್ದರೆ ಅವರು ಹೇಳುತ್ತಿದ್ದರೇನೋ, ನಾನು ಕೇಳಲಿಲ್ಲ. ಅವರು ಹೇಳಲಿಲ್ಲ. ಗೌಪ್ಯತೆ ಮೆರೆದಿದ್ದರು!

ಕಳ್ಳರ ಕೈಗೆ ರಾಜ್ಯ ಕೊಟ್ಟು..

ಮೊನ್ನೆ ದುಬೈಗೆ ಹೋದಾಗ ಉದ್ಯಮಿಯೊಬ್ಬರು ಸಿಕ್ಕಿದ್ದರು. ಅವರು ಲೋಕಾಭಿರಾಮ ಮಾತಾಡುತ್ತಾ, ಕರ್ನಾಟಕದ ರಾಜಕಾರಣಿಗಳ ಬಗ್ಗೆ ಪ್ರಸ್ತಾಪಿಸಿದರು. ‘ಈಗಿನ ರಾಜಕಾರಣ, ರಾಜಕಾರಣಿಗಳನ್ನು ನೋಡಿದರೆ, ಕರ್ನಾಟಕದ ಭವಿಷ್ಯದ ಬಗ್ಗೆ ಭಯವಾಗುತ್ತದೆ. ಜಗತ್ತಿನ ದೇಶಗಳೆಲ್ಲ ಓಡುತ್ತಿದ್ದರೆ, ಕರ್ನಾಟಕ ನಿಂತಲ್ಲೇ ನಿಂತಿರುವಂತೆ, ಒಮ್ಮೊಮ್ಮೆ ಹಿಂದಕ್ಕೆ ಓಡುತ್ತಿರುವಂತೆ ಅನಿಸುತ್ತದೆ. ರಾಜಕೀಯ ನಾಯಕರಾರಿಗೂ ದೂರದೃಷ್ಟಿಯೇ ಇಲ್ಲ. ಮುಂದಿನ ಹತ್ತುಹದಿನೈದು ವರ್ಷಗಳಲ್ಲಿ ಬೆಂಗಳೂರು ಹೇಗಿರಬೇಕು, ಹೇಗಿರಬಹುದು ಎಂಬ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಎಲ್ಲರೂ ಇಂದಿನದನ್ನಷ್ಟೇ ಯೋಚಿಸುತ್ತಿದ್ದಾರೆ. ಅದಕ್ಕಾಗಿಯೇ ಇಷ್ಟೊಂದು ಸಮಸ್ಯೆಗಳು. ಈ ಸಮಸ್ಯೆಗಳೆಲ್ಲ ಇಂದು ಹುಟ್ಟಿದ್ದಲ್ಲ. ಹದಿನೈದುಇಪ್ಪತ್ತು ವರ್ಷಗಳ ಹಿಂದೆಯೇ ಹುಟ್ಟಿದವು. ಈಗ ಪರಿಹರಿಸಲು ಆಗದಷ್ಟು ಬೃಹದಾಕಾರವಾಗಿ ಬೆಳೆದಿವೆ. ಈ ಸಮಸ್ಯೆಗಳಿಗೆ ಈಗಿನವೂ ಸೇರಿಕೊಂಡು ಮತ್ತಷ್ಟು ಹೈರಾಣಾಗಿಸಿವೆ. ದೂರದೃಷ್ಟಿ ಇಲ್ಲದ ಕೊರತೆಯೇ ಇದಕ್ಕೆ ಕಾರಣ. ಯಾರೇ ಬಂದರೂ ಪರಿಸ್ಥಿತಿ ಸುಧಾರಿಸದ ಸ್ಥಿತಿ ತಲುಪಿದ್ದೇವೆ. ಇದಕ್ಕೆ ಯಾರನ್ನು ದೂಷಿಸುವುದು? ಇಂಥ ಅಸಹಾಯಕ, ಅನಾಗರಿಕ ಸ್ಥಿತಿಯನ್ನು ಜಗತ್ತಿನ ಬೇರೆ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಕರ್ನಾಟಕದ ಬಗ್ಗೆ ಯೋಚಿಸಿದರೆ ಬಹಳ ಬೇಸರವಾಗುತ್ತದೆ’ ಎಂದರು.

ಅಲ್ಲಾ ಸಾರ್, ಅದು ಸಮಸ್ಯೆಯಾಯಿತು. ಎಲ್ಲೋ ಒಂದೆಡೆ ಪರಿಹಾರ ಇರಲೇಬೇಕಲ್ಲ. ಇದಕ್ಕೆ ಏನು ಮಾಡುವುದು?’ ಎಂದು ಕೇಳಿದೆ.

ಅದಕ್ಕೆ ಅವರು ಹೇಳಿದರು-‘ ನಮ್ಮ ದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳೋಣ ಎಂದು ಪ್ರಧಾನಿ ಇದು ಜನರ ಕರ್ತವ್ಯ ಅಲ್ಲವಾ? ಅವರು ಹೇಳಿದ ನಂತರವಾದರೂ ಜನ ಮಾಡಿದ್ದೇನು? ಇಡೀ ದೇಶವೇ ಗಬ್ಬುನಾರುತ್ತಿದೆ. ವಿದೇಶಿಯರು ಭಾರತವನ್ನು ನೋಡಿ ಎಷ್ಟು ಲಘುವಾಗಿ, ಕೆಟ್ಟದಾಗಿ ಮಾಡ್ತಾರೆ ಗೊತ್ತಾ? ಪ್ರಗತಿ, ಅಭಿವೃದ್ಧಿ ಮಾತು ಬಿಡಿ, ಕನಿಷ್ಠ ಸ್ವಚ್ಛವಾಗಿರಲು ನಮಗೇನಾಗಿದೆ? ಅದಕ್ಕಿಂತ ದುರಂತ ಅಂದ್ರೆ, ಪ್ರತಿಪಕ್ಷಗಳು ‘ಸ್ವಚ್ಛ ಭಾರತ’ ಯೋಜನೆ ವಿಫಲವಾಗಲಿ ಎಂದು ಆಶಿಸುತ್ತಿರುವುದು. ಇಂಥ ಮನಸ್ಥಿತಿಯಿರುವ ಜನರಿಂದ ದೇಶ ಉದ್ಧಾರವಾಗುವುದು ಸಾಧ್ಯವಾ? ಮೂಲತಃ ನಾನು ಆಶಾವಾದಿ. ಆದರೆ ಕರ್ನಾಟಕದ ಬಗ್ಗೆ ಮಟ್ಟಿಗೆ ನಾನು ಆ ಆಸೆಯನ್ನು ಬಿಟ್ಟಿದ್ದೇನೆ. ಕಾರಣ, ಕರ್ನಾಟಕವನ್ನು ಮುನ್ನಡೆಸುವ ಧೀಮಂತ, ಸಮರ್ಥ, ದಕ್ಷ, ಪ್ರಾಮಾಣಿಕ ನಾಯಕತ್ವ ಕಾಣುತ್ತಿಲ್ಲ. ಎಲ್ಲರೂ ಕಳ್ಳರೇ. ಕಳ್ಳರ ಕೈಗೆ ರಾಜ್ಯವನ್ನು ಕೊಟ್ಟು ಉದ್ಧಾರವಾಗಬೇಕು ಎಂದು ಹೇಗೆ ನಿರೀಕ್ಷಿಸುತ್ತೀರಿ?’

ಅವರ ಮಾತುಗಳನ್ನು ಅಲ್ಲಗಳೆಯಲಾಗಲಿಲ್ಲ. ‘ನಿಮ್ಮ ಗ್ರಹಿಕೆ ತಪ್ಪು’ ಎಂದು ಹೇಳುವ ಯಾವ ವಾದವಸ್ತುವೂ ನನ್ನಲ್ಲಿ ಇರಲಿಲ್ಲ. ಇಬ್ಬರೂ ಮೌನವಾಗಿ ತಲೆಯಾಡಿಸಿದೆವು.

ಚಲನಶೀಲತೆಯೇ ಜೀವಾಳ

ದುಬೈಗೆ ಹೋಗದೇ ಒಂದು ವರ್ಷವಾಗಿತ್ತು. ಈ ಒಂದು ವರ್ಷದಲ್ಲಿ ಎಷ್ಟೆಲ್ಲ ನೂರಾರು ಗಗನಚುಂಬಿ ಕಟ್ಟಡಗಳು ಎದ್ದು ನಿಂತಿವೆ. ಸಾವಿರಾರು ಅಪಾರ್ಟಮೆಂಟ್‌ಗಳು ತಲೆ ಎತ್ತಿವೆ. ಹೊಸ ಹೊಸ ಬಿಂಗಲಾಟಿಗಳಿಗಂತೂ ಕೊರತೆ ಇಲ್ಲ. ಚಿತ್ರವಿಚಿತ್ರ ಆಕಾರದ, ಗಾತ್ರದ, ಸ್ವರೂಪದ ಕಟ್ಟಡಗಳು ಕುತೂಹಲ ಹುಟ್ಟಿಸುತ್ತವೆ. ದುಬೈ ಫ್ರೇಮ್ ಮತ್ತೊಂದು ಹೊಸ ಸೇರ್ಪಡೆ. ಬುರ್ಜ್ ಖಲೀಫಾ ಸುತ್ತ ಸಾವಿರಾರು ಚಟುವಟಿಕೆ. ಅದು ಸೊರಗಿದ್ದೇ ಇಲ್ಲ. ಒಂದೊಂದು ಸಂದರ್ಭದಲ್ಲೂ ಬುರ್ಜ್ ಖಲೀಫಾ ಬಣ್ಣ, ಖದರು ಬದಲಿಸುತ್ತದೆ.

ದುಬೈನ ಮುಖ್ಯ ಗುಣವೆಂದರೆ ಚಲನಶೀಲತೆ. ಜಗತ್ತಿನಲ್ಲಿ ಯಾವುದೇ ಹೊಸ ಸಂಗತಿಗಳು ಅದು ಮೊದಲು ತನ್ನಲ್ಲಿಯೇ ಇರಬೇಕು, ಸ್ಥಾಪನೆಗೊಳ್ಳಬೇಕು ಎಂಬ ವಾಂಛೆ. ಅದಕ್ಕೆ ಪೂರಕವೆನಿಸುವ ಉತ್ಕೃಷ್ಟತೆ ಹಾಗೂ ಗುಣಮಟ್ಟಕ್ಕೆ ಪ್ರಾಧಾನ್ಯ. ಎಲ್ಲವೂ ವರ್ಲ್‌ಡ್ ಕ್ಲಾಸ್. ಅದಕ್ಕಿಂತ ಸ್ವಲ್ಪ ಕಡಿಮೆಯಾದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಅಂಥ ಮನಸ್ಥಿತಿ, ಸಂಸ್ಕೃತಿಯನ್ನು ಅಲ್ಲಿನ ಆಡಳಿತಗಾರರು ಜನರಲ್ಲಿ, ಜನಜೀವನದಲ್ಲಿ ತುಂಬಿದ್ದಾರೆ. ಶಿಸ್ತು, ಕ್ಲಾಸ್, ಸೌಂದರ್ಯ, ಗುಣಮಟ್ಟದ ಜತೆಗೆ ದುಬೈ ರಾಜಿಯಾಗುವುದೇ ಇಲ್ಲ.

ಜಗತ್ತಿನ ಯಾವ ದೇಶದ ಶ್ರೀಮಂತರು, ಗಣ್ಯರೇ ಇರಬಹುದು, ಅವರಿಗೆ ‘ದುಬೈ ಅಡ್ರೆಸ್’ ಬೇಕು. ದುಬೈಯಲ್ಲಿ ಅವರದ್ದೆನ್ನುವ ನಿವಾಸ ಇರಲೇಬೇಕು. ಕನಿಷ್ಠ ಒಂದು ಫ್ಲಾಟ್ ಆದರೂ ಇರಬೇಕು. ದುಬೈಯಲ್ಲಿ ಒಂದು ಅಡ್ರೆಸ್ ಇಲ್ಲದೇ ನೀವು ‘ಗ್ಲೋಬಲ್ ಗಣ್ಯ’ರಾಗಲು ಸಾಧ್ಯವಿಲ್ಲ ಎಂಬ ಭ್ರಮೆಯನ್ನು ಆ ನಗರ ಮೂಡಿಸಿದೆ. ಎಲ್ಲವೂ ಒಂದು ಶಿಸ್ತು, ಆದೇಶಕ್ಕೆ ಒಳಪಟ್ಟಂತೆ ಕಾಣುತ್ತದೆ. ಅಲ್ಲಿ ಗೊಂದಲ, ಏರುಪೇರು, ಬೇಕಾಬಿಟ್ಟಿ ಪದಗಳೇ ಇಲ್ಲ.

ಅಬುಧಾಬಿ ಹಾಗೂ ದುಬೈ ಎಂಬ ಎರಡು ನಗರಗಳು ಒಂದೂವರೆ ಗಂಟೆಯಷ್ಟು ದೂರದಲ್ಲಿದ್ದವು. ಇವೆರಡರ ನಡುವೆ ಮರುಭೂಮಿಯಿತ್ತು. ಈಗ ಆ ಎರಡೂ ನಗರಗಳೂ ಕೂಡಿಬಿಟ್ಟಿವೆ. ದುಬೈ ಮುಗಿದು, ಎಲ್ಲಿ ಅಬುಧಾಬಿ ಆರಂಭವಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಇನ್ನು ಶಾರ್ಜಾ ಹಾಗೂ ದುಬೈಯಂತೂ ಒಂದೇ ಆಗಿಬಿಟ್ಟಿವೆ. ಆ ಎರಡು ನಗರಗಳ ಮಧ್ಯೆ ಅಂತರವೇ ಇಲ್ಲ. ಒಂದರೊಳಗೊಂದು ಮಿಳಿತವಾಗಿದೆ.

ದುಬೈನಲ್ಲಿ ಸುಮಾರು ಮೂವತ್ತು ಲಕ್ಷ ಮಂದಿ ನೆಲೆಸಿದ್ದಾರೆ. 182 ದೇಶಗಳ ಪ್ರಜೆಗಳಿಗೆ ಈ ನಗರಿ ಆಶ್ರಯ ನೀಡಿದೆ. ದುಬೈಗೆ ಎಲ್ಲರೂ ಬೇಕು. ಎಲ್ಲರೂ ಇಷ್ಟಪಡುವ ಅನೇಕ ಸಂಗತಿಗಳು ಇಲ್ಲಿವೆ. ಮಧ್ಯರಾತ್ರಿ ಸರಕಾರಿ ಸಿಬ್ಬಂದಿಗೆ ಫೋನ್ ಮಾಡಿದರೆ, ಮುಖ ಕಿವುಚಿಕೊಳ್ಳುವುದಿಲ್ಲ. ಸಮಾಧಾನಪಡಿಸುವ ಉತ್ತರ ಹಾಗೂ ಕ್ರಿಯೆ ಅವರಿಂದ ನಿರೀಕ್ಷಿಸಬಹುದು.

ಇಂಥದೊಂದು ಕಾಯಕ ಸಂಸ್ಕೃತಿ ರೂಪಿಸಲು ಅಲ್ಲಿನ ರೂಲರ್‌ಗಳು ಎಷ್ಟು ಹೆಣಗಿರಬಹುದು? ನಿಜಕ್ಕೂ ಅಚ್ಚರಿಯಾಗುತ್ತದೆ.

ನಾನು ಶಾರ್ಜಾ ಚೇಂಬರ್ ಆಫ್ ಕಾಮರ್ಸ್‌ಗೆ ಹೋಗಿದ್ದೆ. ಆ ಕಟ್ಟಡ ಎಷ್ಟು ಸುಂದರವಾಗಿದೆಯೆಂದರೆ, ಅದು ನಮ್ಮ ವಿಧಾನಸೌಧಕ್ಕೆ ಪೈಪೋಟಿ ನೀಡುತ್ತದೆ. ಉದ್ದಿಮೆದಾರರನ್ನು ಹೇಗೆ ಆಕರ್ಷಿಸಬಹುದು ಎಂಬುದಕ್ಕೆ ಅದೊಂದು ಅದ್ಭುತ ನಿದರ್ಶನ. ಅಲ್ಲಿಗೆ ಭೇಟಿ ನೀಡಿದ ಯಾವುದೇ ಬಂಡವಾಳದಾರನಿಗೆ ತಾನೇಕೆ ಅಲ್ಲಿ ಹೂಡಿಕೆ ಮಾಡಬಾರದು ಎಂಬ ಆಸೆ ಹೋಗುವುದಿಲ್ಲ. ಉದ್ಯಮಿಗಳಿಗೆ ಬಂಡವಾಳ ಹೂಡಿಕೆಯನ್ನು ಅಷ್ಟು ಸುಲಭಗೊಳಿಸಿದ್ದಾರೆ.

ತೆರೆದ ಮನಸ್ಸಿನ ದುಬೈ ಕ್ರಿಯಾಶೀಲ ಕೇಂದ್ರ, ಅಗಣಿತ ಸಾಧ್ಯತೆಗಳ ಸಾಕಾರ ಕೇಂದ್ರ. ಅಲ್ಲಿ ಯಾರ ಕನಸುಗಳು ಬರಡಾಗಿ ಸಾಯುವುದಿಲ್ಲ. ಎಲ್ಲ ಕನಸುಗಳಿಗೂ ಜೀವ ತುಂಬುವ, ಪೊರೆಯುವ ಸಾಮರ್ಥ್ಯವಿದೆ. ಒಂದು ನಗರ ಎಲ್ಲರನ್ನೂ ಒಳಗೊಳ್ಳುವ ಪರಿ ಇದು.

ನಾನು ಪ್ರತಿಸಲ, ಅನೇಕರಂತೆ, ದುಬೈನಿಂದ ಬರುವಾಗ ಅದಮ್ಯ ಉತ್ಸಾಹ, ಅಪರಿಮಿತ ಪ್ರೇರಣೆಗಳಿಂದ ಭರ್ತಿಯಾಗುತ್ತೇನೆ. ಅದು ನಡೆಯುವವನ ಮುಂದೆ ದಾರಿ ಬಿಚ್ಚಿಕೊಳ್ಳುತ್ತಲೇ ಹೋಗುವ ನಗರ.

ಬಿಡದೀ ಮಾಯೆ!

ಕೆಲವೊಂದು ಸಂಗತಿಗಳು ಹಾಗೇ, ಬಡವನಿಂದ ಶ್ರೀಮಂತರವರೆಗೂ ಎಲ್ಲರನ್ನೂ ಕಾಡುತ್ತದೆ, ಆಕರ್ಷಿಸುತ್ತದೆ. ಅಂಥವು ಇಲ್ಲಿವೆ.

  • ಪಾನಿಪೂರಿ ತಿಂದ ಮೇಲೆ ಸುಮ್ಮನೆ ಹೋಗುವ ಜಾಯಮಾನ ಯಾರದ್ದೂ ಇಲ್ಲ. ಸುಕ್ಕಾ ಪೂರಿ ಕೊಡದಿದ್ದರೆ ಜಗಳವೇ ಆಗಿಬಿಡುತ್ತದೆ.
  • ಬೇಕರಿಗೆ, ಸ್ವೀಟ್ ಅಂಗಡಿಗೆ ಹೋದಾಗ ಯಾವುದಾದರೂ ಖಾದ್ಯಗಳನ್ನು ಖರೀದಿಸುವಾಗ, ಶ್ರೀಮಂತರಾಗಲೀ, ಬಡವರಾಗಲೀ ಕೇಳುವುದು ಒಂದೇ ಪ್ರಶ್ನೆ,- ‘ಸ್ಯಾಂಪಲ್ ಕೊಡ್ತಿಯೇನಪ್ಪಾ? ಚೆನ್ನಾಗಿದ್ರೆ ತಗೋತೀನಿ’
  • ಕುಳಿತು ತಿನ್ನುವ ಹೋಟೆಲ್‌ಗೆ ಹೋದಾಗ, ಊಟವಾದ ಬಿಲ್ ತಂದು ಕೊಡುವ ಕಪ್‌ನಲ್ಲಿ ಸೊಂಪು ಇರಲೇಬೇಕು. ಬಿಲ್ಲನ್ನಷ್ಟೇ ಇಟ್ಟರೆ, ಗ್ರಾಹಕರು ವೇಟರ್‌ನನ್ನು ಗುರಾಯಿಸುವ ಬಗೆ ನೋಡಬೇಕು. ಕಣ್ಣಲ್ಲೇ ಕೊಲ್ಲುತ್ತಿರುತ್ತಾರೆ!
  • ಯಾವುದೇ ದೊಡ್ಡ ಅರತಕ್ಷತೆ ಕಾರ್ಯಕ್ರಮಕ್ಕೆ ಹೋಗಿ, ಅಲ್ಲಿ ಮೊಸರನ್ನ ಇದ್ದೇ ಇರುತ್ತದೆ. ಮೊಸರನ್ನ ಹಾಕಿಸಿಕೊಂಡವರಿಗೆ ಮುಂದಿನದ್ದು ಹಾಕುವತನಕ ಪುರುಸೊತ್ತು ಇರುವುದಿಲ್ಲ. ‘ಸ್ವಲ್ಪ ಉಪ್ಪಿನಕಾಯಿ ಹಾಕ್ಬಿಡಿ!’ ಉಪ್ಪಿನಕಾಯಿ ಇಲ್ಲ ಎಂದ ಭಟ್ಟನ ಕತೆ ಹೇಳತೀರದು.
  • ಯಾವುದೇ ಜಾಲತಾಣ, ಮಳಿಗೆ, ಮಾರುಕಟ್ಟೆ ಎಲ್ಲೇ ಹೋಗಲಿ, ಇಂಗ್ಲಿಷ್‌ನಲ್ಲಿ ‘”FREE, FREE, FREE’ ’ ಅಕ್ಷರಗಳನ್ನು ನೋಡಿದ ಕೂಡಲೇ, ಏನಿರಬಹುದು ಎಂದು ನೋಡಿಯೇ ನೋಡುತ್ತಾರೆ. ಅಗಸನಿಂದ ಅರಸನವರೆಗೂ ಈ ಪದಪುಂಜ ಆಕರ್ಷಿಸುತ್ತದೆ.

ನಿಧನ ಸುದ್ದಿ

ಮುಲ್ಲಾ ನಸ್ರುದ್ದೀನ್‌ನ ಹೆಂಡತಿ ಬೆಳಗ್ಗೆ ಕಾಫಿ ಹೀರುತ್ತಾ ಪತ್ರಿಕೆ ಓದುತ್ತಿದ್ದಳು. ಒಳಪುಟ ತಿರುವಿದಾಗ ಅವಳ ಫೋಟೊ ಕಣ್ಣಿಗೆ ಬಿತ್ತು. ಕುತೂಹಲದಿಂದ ಕೆಳಗಿನ ಸುದ್ದಿ ಕಡೆ ಕಣ್ಣಾಡಿಸಿದರೆ ಅವಳ ನಿಧನದ ಸುದ್ದಿ!

ತಕ್ಷಣ ಮುಲ್ಲಾನಿಗೆ ಫೋನ್ ಮಾಡಿ, ‘ವಿಷಯ ಗೊತ್ತಾ? ಇಂದಿನ ಪೇಪರ್ ಓದಿದಿಯಾ? ನಾನು ಸತ್ತು ಹೋಗಿದ್ದೀನಂತೆ!’ ಅದಕ್ಕೆ ಮುಲ್ಲಾ ಹೇಳಿದ– ‘ಹೌದಾ? ಅದ್ಸರಿ ನೀನು ಎಲ್ಲಿಂದ ಫೋನ್ ಮಾಡ್ತಾ ಇದೀಯಾ ಮೊದಲು ಹೇಳು. ಆನಂತರ ನೀನು ಸತ್ತಿದ್ದೀಯಾ ಇಲ್ಲವಾ ಅಂತ ಹೇಳ್ತೇನೆ.’

ಅವನ ತಪ್ಪೇನಿದೆ?

ಅಪ್ಪನಿಗೆ ತನ್ನ ಮಗನ ಎರಡು ವರ್ತನೆ ಬಗ್ಗೆ ಅಪರಿಮಿತ ಅಸಮಾಧಾನವಿತ್ತು. ಹಂದಿ ಮಾಂಸ ಕಂಡರೆ ಸಾಕು ಮಗ ತಕ್ಷಣ ಬಾಯಿಬಿಡುತ್ತಿದ್ದ ಹಾಗೂ ಅಂದದ ಹುಡುಗಿಯರನ್ನು ಕಂಡರೆ ಚುಂಬಿಸುತ್ತಿದ್ದ.

ಮಗನಿಗೆ ಅಪ್ಪ ಹೇಳುವಷ್ಟು ಬುದ್ಧಿ ಹೇಳಿದ. ಮನಃಶಾಸ್ತ್ರಜ್ಞರಲ್ಲಿಗೆ ಕರೆದುಕೊಂಡು ಹೋದ. ಆದರೆ ಮಗನ ಬುದ್ಧಿ ನೆಟ್ಟಗಾಗಲಿಲ್ಲ.

ಬೇರೆ ದಾರಿ ಕಾಣದೇ ಧರ್ಮಗುರುವನ್ನು ಭೇಟಿ ಮಾಡಿ ಅವರ ಮುಂದೆ ಅಪ್ಪ ತನ್ನ ಮಗನ ವರ್ತನೆಯ ಬಗ್ಗೆ ಕಳವಳ ತೋಡಿಕೊಂಡ. ಸ್ವಾಮೀಜಿ ಮಗನನ್ನ ಕರೆದು ಗಟ್ಟಿ ದನಿಯಲ್ಲಿ, ‘ಏನಯ್ಯಾ? ಇದು ನಿಜವೇನಯ್ಯಾ? ಹಂದಿ ಮಾಂಸ ಕಂಡರೆ ಬಾಯಿ ಬಿಡುತ್ತೀಯಂತೆ, ಸುಂದರ ತರುಣಿಯರನ್ನು ಕಂಡ ತಕ್ಷಣ ತಬ್ಬಿ ಮುದ್ದಾಡುತ್ತೀಯಂತೆ, ನಿನಗೇನಾಗಿದೆ? ಎಂದು ಕೇಳಿದರು.

ಅದಕ್ಕೆ ಮಗ ಹೇಳಿದ– ‘ನಾನೇನು ಮಾಡಲಿ ಸ್ವಾಮೀಜಿ. ನಾನು ಸ್ವಲ್ಪ ಕ್ರೇಜಿ, ಹೀಗೆಲ್ಲ ಮಾಡುತ್ತೀನಿ.’

ಅದನ್ನು ಕೇಳುತ್ತಲೇ ಸ್ವಾಮೀಜಿ ತಂದೆಯನ್ನು ಕರೆದು ಹೇಳಿದರು,- ‘ನಿಮ್ಮ ಮಗ ಕರೆಕ್‌ಟ್ ಆಗಿದ್ದಾನೆ. ಅವನದೇನೂ ತಪ್ಪಿಲ್ಲ. ಹುಡುಗಿಯರನ್ನು ಕಚ್ಚಿ ಮಾಂಸವನ್ನು ಚುಂಬಿಸಿದ್ದರೆ ಯೋಚನೆ ಮಾಡಬೇಕಿತ್ತು.’

ಫಲಕ ಸಾಹಿತ್ಯ

ಅಲ್ಲಲ್ಲಿ ಕಂಡ ಕೆಲವು ಫಲಕಗಳ ಮೇಲೆ ಬರೆದ ಬರಹಗಳು

Touching wires causes instant death. Rs 500 penalty ನೀವು ಅನಕ್ಷರಸ್ಥರಾ? ಹಾಗಾದರೆ ನಮಗೆ ಬರೆಯಿರಿ. ನಾವು ನಿಮಗೆ ಸಹಾಯ ಮಾಡುತ್ತೇವೆ.   Bottomless pit ahead. 65 feet deep.  Offi ce closed, when it is closed no information available.  Please do not sit on the crocodile

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close