About Us Advertise with us Be a Reporter E-Paper

ಅಂಕಣಗಳು

ಜೀವನ ಮೌಲ್ಯ ವೃದ್ಧಿಗೆ ಬೇಕು ದೇಶಭಾಷೆ ಶಿಕ್ಷಣ

- ಟಿ. ದೇವಿದಾಸ್

ಒಂದು ನಿರ್ದಿಷ್ಟ ಅಧ್ಯಯನದೊಂದಿಗೆ ನಾಡಿನ ತಮ್ಮ ಭಾಷೆ, ಓದು, ಸಮುದಾಯವನ್ನು ನೋಡುವ, ಸ್ವೀಕರಿಸುವ, ಮನುಷ್ಯ ಸಂಬಂಧಗಳ ಗಹನತೆಯನ್ನು ಅರ್ಥೈಸಿಕೊಳ್ಳುವ, ಹಿರಿಯರನ್ನು ಗೌರವಿಸುವ, ಸಮುದಾಯ ಸ್ವೀಕರಿಸುವ ಬದುಕನ್ನು ಕಟ್ಟಿಕೊಳ್ಳುವ ಬಗೆಯನ್ನು ಕಲಿಸುವ ಮೌಲ್ಯಗಳನ್ನು ಕೊಡುವ ಶಿಕ್ಷಣ ವ್ಯವಸ್ಥೆ ಭಾರತದಂಥ ಬೃಹತ್ ರಾಷ್ಟ್ರಕ್ಕೆ ಬೇಕಾಗಿದೆ. ಹಿಂದೆಲ್ಲಾ ಖಾಸಗೀ ಶಾಲೆಗಳು ಇರಲಿಲ್ಲ.

ಈಗ ಎಲ್ಲೆಲ್ಲೂ ಅವೇ ತುಂಬಿಕೊಂಡಿವೆ. ಇಡಿಯ ಶಿಕ್ಷಣ ವ್ಯವಸ್ಥೆ ಅಪಮೌಲ್ಯವಾಗುತ್ತಿರುವುದಕ್ಕೆ ಇದು ಪ್ರಧಾನ ಕಾರಣವಾಗಿದೆ ಎನ್ನದೇ ವಿಧಿಯಿಲ್ಲ. ‘ನಾವು ಫೀಸು ಕಟ್ಟುತ್ತೇವೆ, ಅದರಿಂದಾಗಿ ನಿಮಗೆ ಸಂಬಳ ಎಂದು ಹೆತ್ತವರೇ ರಾಜಾರೋಷವಾಗಿ, ಸಾರಾಸಗಟಾಗಿ ಮಾತಾಡುವಾಗ ಮಕ್ಕಳು ಯಾವ ಗೌರವವನ್ನು ತಮ್ಮ ಶಿಕ್ಷಕರಿಗೆ ಕೊಡಲು ಸಾಧ್ಯ? ಶಾಲೆಯೊಂದರ ಆಂತರಿಕ ವ್ಯವಸ್ಥೆಗಳ ಬಗ್ಗೆ ಹೆತ್ತವರು ಮಕ್ಕಳ ಮುಂದೆ ಕ್ಷುಲ್ಲಕವಾಗಿ ಮಾತಾಡಿದರೆ, ಏಕವಚನದಲ್ಲಿ ತಮ್ಮ ಮಕ್ಕಳ ಶಿಕ್ಷಕರನ್ನು ಉಲ್ಲೇಖಿಸಿದರೆ ಆ ಮಕ್ಕಳ ಮನಸಲ್ಲಿ ಯಾವ ಭಾವನೆಗಳು ಬೆಳೆದೀತು ಎಂಬ ಸಾಮಾನ್ಯಪ್ರಜ್ಞೆಯೂ ದೊಡ್ಡವರಲ್ಲಿಲ್ಲ.

ಅಸಂಖ್ಯ ಪ್ರಮಾಣದಲ್ಲಿ ಖಾಸಗಿ ಸಂಸ್ಥೆಗಳು ಹುಟ್ಟಿಕೊಂಡಾಗಲೇ ಶಿಕ್ಷಣ ಒಂದು ದಂಧೆಯಾಗಿ, ತನ್ನ ಮೌಲ್ಯವನ್ನು ಕಳೆದುಕೊಂಡಿತು. ಸದುದ್ದೇಶ ಮತ್ತು ಸ್ಥಳೀಯ ಗಮನಿಸಿ ಖಾಸಗಿ ಶಾಲೆಗಳು ಹುಟ್ಟಿಕೊಂಡಿರುವುದಕ್ಕೂ, ದಂಧೆಯಾಗಿ ಹುಟ್ಟಿಕೊಂಡಿರುವುದಕ್ಕೂ ಅಪಾರ ವ್ಯತ್ಯಾಸವಿದೆ. ಮೊದಲನೆಯ ಆದ್ಯತೆಯನ್ನು ಇಟ್ಟುಕೊಂಡು ಹುಟ್ಟಿದ ಖಾಸಗೀ ಶಾಲೆಗಳಲ್ಲಿ ಶೈಕ್ಷಣಿಕ ಮೌಲ್ಯಗಳು ಜೀವಂತವಾಗೇ ಇದೆ. ಯಾವುದರ ಘನತೆ, ಗೌರವವೂ ಕಡಿಮೆಯಾಗಿಲ್ಲ. ದಂಧೆಯ ರೂಪದಲ್ಲಿ ಹುಟ್ಟಿಕೊಂಡವು ಮಾತ್ರ ಹತ್ತು ತಿಂಗಳ ವ್ಯವಹಾರವನ್ನು ಮಾಡುತ್ತವೆ. ಯಾವಾಗ ಶಿಕ್ಷಣವೂ ವ್ಯವಹಾರವಾಯಿತೋ ಆವಾಗಲೇ ಮಕ್ಕಳು ನಿಜವಾದ ಶಿಕ್ಷಣದಿಂದ ವಂಚಿತರಾದರು. ಖಾಸಗಿ ವಿದ್ಯಾಸಂಸ್ಥೆಗಳು ಸರಕಾರಿ ಶಾಲೆಗಳ ಮೇಲೆ ಪ್ರಭಾವ ಬೀರಿ, ಅವು ಇಂಥ ಶಾಲೆಗಳನ್ನೇ ಅನುಕರಿಸಲು ಅತ್ತ ಅದೂ ಅಲ್ಲದ, ಇತ್ತ ಮೂಲಕ್ಕೂ ಸಿಗದ ರೂಪದಲ್ಲಿ ಹಳಿ ತಪ್ಪಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದವು. ಎಲ್ಲವನ್ನೂ ಗಮನಿಸಬೇಕಾದ ಸರಕಾರ ಕಣ್ಮುಚ್ಚಿ ಕುಳಿತಿತು…

ಕಾಲ ಕಳೆದಂತೆ ಅಧ್ಯಯನ, ಪರೀಕ್ಷೆ, ಮೌಲ್ಯಮಾಪನ, ಅಂಕವಿತರಣೆ, ಪದವಿ ಪ್ರದಾನಗಳೆಲ್ಲ ಸಾಮೂಹಿಕ ದಂಧೆಯಾಗಿ ಪರಿವರ್ತಿತವಾದವು. ಇಂತಹ ಕಡೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಯಾವ ಮಾನುಷ ರೂಪದ ಭಾವನಾತ್ಮಕವಾದ ಸಂಬಂಧವಿರಲು ಸಾಧ್ಯ? ಕಲಿತ ಶಾಲೆಯ ವಿರುದ್ಧವೇ ಮಾತಾಡುವವರು, ಅಸಡ್ಡೆಯಲ್ಲಿ ನೋಡುವವರಿದ್ದಾರೆ. ಮೊದಲೆಲ್ಲಾ ಕಲಿತ ಶಾಲೆ, ಗುರುಗಳಲ್ಲಿ ತೀರದ ಒಂದು ಭಾವವಿರುತಿತ್ತು. ಮೇಷ್ಟ್ರುಗಳನ್ನು ಮಾತಾಡಿಸುವಾಗಲೂ ಒಂದು ಅವ್ಯಕ್ತ ಭಯ, ಗೌರವವಿರುತಿತ್ತು. ಕಾರಣ ಶಾಲೆಯಲ್ಲಿ ಮಾತ್ರ ಅವರು ಗುರುಗಳಾಗಿರದೆ, ಪ್ರತಿಮನೆಯ ಸದಸ್ಯರೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ಮಾತಾಡುತ್ತಿದ್ದರು. ಶಾಲೆಯಲ್ಲಿ ನಮ್ಮ ಓದಿನ ಬಗೆಗಿನ ವಿಚಾರವನ್ನು ಮನೆಗೆ ಮುಟ್ಟಿಸುತ್ತಿದ್ದರು.

ಈ ಭಯದಿಂದ ತಪ್ಪುಮಾಡುವ ಸಾಧ್ಯತೆಗಳು ಕಡಿಮೆಯಿತ್ತು. ತಪ್ಪಿದಾಗ ತಿದ್ದಿತೀಡಿ ಸರಿದಾರಿಗೆ ತರುತ್ತಿದ್ದರು. ಇದರಿಂದಾಗಿ ದಾರಿತಪ್ಪುವ ಸಾಧ್ಯತೆ ಕಡಿಮೆಯಿರುತಿತ್ತು. ಶಾಲೆಗಷ್ಟೇ ಗುರುಗಳ ಪರಿಚಯವಿರದೇ ಮನೆ, ಊರು-ಕೇರಿಗೇ ಪರಿಚಯವಿರುವ ಆ (ಈಗಲೂ ಅಂಥ ಶಾಲೆಗಳಿವೆ) ಕಲಿತವರು ಬೇರೇನೂ ಇಲ್ಲದಿದ್ದರೂ ಮಾನಸಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ ಶ್ರೀಮಂತರೇ. ಕೊನೆಯಪಕ್ಷ ಇದಾವುದೂ ಇರದಿದ್ದರೂ ಅಡ್ಡಿಯಿಲ್ಲ, ತನಗೆ ಬೋಧಿಸುವ ಗುರುವಿನೊಂದಿಗೆ ಭಾವನಾತ್ಮಕವಾದ, ಮಾನಸಿಕವಾದ ಸಂಬಂಧವೂ ಇಲ್ಲದೇ ಹೋದರೆ ಏನನ್ನು ಕಲಿಯಲು ಸಾಧ್ಯವಿದೆ? ಎಲ್ಲವೂ ಕೇವಲ ಹಣದಲ್ಲಿಯೇ ನಿರ್ಧಾರವಾಗುತ್ತದೆಂದಾದರೆ ಯಾವ ಮೌಲ್ಯದ ಬಗ್ಗೆ ಎಷ್ಟು ಮಾತಾಡಿದರೇನು? ಕಡಿಮೆ ಫೀಸು ತಗೊಳ್ಳುವ ಖಾಸಗಿ ಶಾಲೆಯಾದರೂ ಪರವಾಗಿಲ್ಲ ಅಂತ ಹೇಳುವವರಿಗೆ ನಿಜವಾದ ಶಿಕ್ಷಣದ ಅಗತ್ಯವಾದರೂ ಏನಿದೆ? ನಾವು ಹಣ ಕೊಡ್ತೇವೆ, ನಮಗೆ ಅಂಕಗಳನ್ನು ಕೊಡಿ ಅಷ್ಟೆ, ಅಂತ ಮಾತಾಡುವವರ ಮುಂದೆ ಶಿಕ್ಷಣದ ಯಾವ ಮೌಲ್ಯವನ್ನು ಹೇಳಿ ಪ್ರಯೋಜನವಿದೆ ?

ನಮ್ಮ ನಡುವಿನ ಒಳ್ಳೆಯ ಉಪಾಧ್ಯಾಯರಲ್ಲಿ ಹೆಚ್ಚು ಕಲಿತಿರುವವರು ಇರುವುದು ಕಳಪೆಯಾಗಿ ಕಾಣುವ ಸರಕಾರಿ ಶಾಲೆಗಳಲ್ಲಿ. ಆದರೂ ಸರಕಾರಿ ಶಾಲೆಗಳು ಕುಸಿಯುತ್ತಿವೆ. ಕೇರಳದಲ್ಲಂತೂ ಮುಚ್ಚುತ್ತಿವೆ. ಕರ್ನಾಟಕ ಆ ಹಾದಿಯಲ್ಲಿದೆ. ಸರಕಾರವೇ ಪ್ರತಿವರ್ಷ ಆಹ್ವಾನವೀಯುವುದರಿಂದ ‘ಗಿಳಿಯೋದು ಶುಕಪಾಠ’ದಂಥ ಕಳಪೆಯಾದ ಆಂಗ್ಲಮಾಧ್ಯಮ ಶಾಲೆಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. ಉಳ್ಳವರು ಇಂಥ ಖಾಸಗಿ ಶಾಲೆಗಳಿಗೆ , ಬಡವರು ಶಾಲೆಗೆ ಹೋಗುವಂತಾಗಿ ಸರಕಾರವೇ ಅಸಮಾನತೆ ಹುಟ್ಟುಹಾಕಿದೆ. ಹೀಗಿದ್ದಾಗ, ನಾವೆಲ್ಲ ಒಂದೇ ದೇಶದ ಮಕ್ಕಳು ಅಂತ ಹೇಗೆ ಹೇಳಲು ಸಾಧ್ಯ? ಜನರಲ್ಲಿ ಸ್ವಾಸ್ಥ್ಯ ಮತ್ತು ಸಮುದಾಯಪ್ರಜ್ಞೆ ಹೇಗೆ ಹುಟ್ಟೀತು? ಬಡವರಿಗಿದು ಒಳ್ಳೆಯದಲ್ಲ ; ಉಳ್ಳವರಿಗೆ ಜ್ಞಾನಾರ್ಜನೆಯ ದೃಷ್ಟಿಯಿಂದ ಹಿತವಲ್ಲ.

ಕನ್ನಡ ಮಾಧ್ಯಮದ ಕಲಿಕೆ ಉಪಯೋಗವಿಲ್ಲವೆಂಬ ಪ್ರಜ್ಞೆ ಎಲ್ಲೆಲ್ಲೂ ಬೆಳೆದು, ಒಂದು ಶಾಲೆಯ ಅಸ್ತಿತ್ವವನ್ನು ಮಾಧ್ಯಮದ ಪ್ರಶ್ನೆಯಾಗಿ ನೋಡುವ ಮಟ್ಟಕ್ಕೆ ನಾವು ಕುಬ್ಜರಾಗಿದ್ದೇವೆ. ಅಷ್ಟಿಷ್ಟು ಕಾಸಿರುವವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಮನಸು ಮಾಡಿರುವುದರಿಂದ ಸರಕಾರ ತನ್ನದು ಅಂತ ಅಂದುಕೊಂಡ ಯಾವ ಶಾಲೆಗಳನ್ನೂ ಭವಿಷ್ಯದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲವೇನೋ! ಖಾಸಗಿ ಶಾಲೆಗಳ ಬಗ್ಗೆಯಾಗಲೀ, ಆಂಗ್ಲಮಾಧ್ಯಮ ಶಾಲೆಗಳ ಬಗ್ಗೆಯಾಗಲೀ ಅಸಡ್ಡೆ, ಅಗೌರವ ಖಂಡಿತಾ ಇಲ್ಲವೇ ಇಲ್ಲ. ಗಟ್ಟಿಯಾಗಿ ಅಸ್ತಿತ್ವವನ್ನು ಉಳಿಸಿಕೊಂಡೂ, ಸುಂದರ, ಸ್ವಚ್ಛ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ, ಒಳ್ಳೆಯ ವಿದ್ಯಾರ್ಥಿಗಳ ಸಮೂಹವನ್ನೇ ಒಳಗೊಂಡ ಖಾಸಗಿ ಶಾಲೆಗಳಲ್ಲಿ ದುಡಿಯುವವರೂ ಅನೇಕರಿದ್ದಾರೆ.

ನಮ್ಮ ಮಕ್ಕಳು ಆಂಗ್ಲಕಲ್ಪಿತ ಭ್ರಮಾಲೋಕದಲ್ಲಿ ಬದುಕುತ್ತಿರುವವರು ಅಂತ ಹೇಳುವ ಅನಂತಮೂರ್ತಿಯವರು ಸಾಮಾನ್ಯ ಶಾಲೆಗಳ ಮಾತಾಡುತ್ತಾರೆ. ಎಲ್ಲಾ ವಿಷಯಗಳನ್ನೂ ಮಕ್ಕಳಿಗೆ ಆಪ್ತವಾಗಿ ಗೊತ್ತಿರುವ ದೇಶಭಾಷೆಯಾದ ಕನ್ನಡದಲ್ಲೇ ಹೇಳಿಕೊಡಬೇಕು. ಇದರಿಂದ ವಿಷಯಜ್ಞಾನ ಬೆಳೆಯುತ್ತದೆ. 5ನೆಯ ತರಗತಿಯಿಂದ ಇಂಗ್ಲಿಷ್‌ನ್ನು ಮಾತನಾಡಲು ಕಲಿಸಿದರೆ ಸಾಕು. ಇದರಿಂದ ಮುಂದಿನ ಹಂತಗಳಲ್ಲಿ ಬೇಕಾಗುವ ಆ ಭಾಷೆ ಕುರಿತ ಭಯವೂ ಹೋಗುತ್ತದೆಂದು ಅಭಿಪ್ರಾಯ ಪಟ್ಟಿದ್ದಾರೆ. ಮಾನವಿಕ ವಿಷಯಗಳನ್ನಾದರೂ ದೇಶದ ಭಾಷೆಯಲ್ಲಿ ನಮ್ಮ ಮಕ್ಕಳು ಓದುವಂತಾಗಬೇಕು. ಚರಿತ್ರೆ, ಭೂಗೋಳ, ಪರ್ಯಾವರಣ- ಇವೇ ಮುಂತಾದವುಗಳನ್ನು ದೇಶಭಾಷೆಯಲ್ಲಿ ನಮ್ಮ ಮಕ್ಕಳು ಓದುವುದು ವೈಜ್ಞಾನಿಕವಾಗಿ ಸಮರ್ಥನೀಯ ಎನ್ನಲಾಗಿದೆ.

ಇದರಿಂದಾಗಿ ಸುತ್ತಲ ಜಗತ್ತಿಗೆ ಸ್ಪಂದಿಸುವುದು ಸಾಧ್ಯವಾಗುತ್ತದೆ ಎಂದು ಚಿಂತಿಸಿದ್ದರು, ಅನಂತಮೂರ್ತಿ. ಒಂದು, ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಕಲಿಸುವುದು ಹಾಗೂ ಎರಡನೆಯದಾಗಿ ಖಾಸಗೀ ಆಂಗ್ಲಮಾಧ್ಯಮದ ಶಾಲೆಗಳಲ್ಲಿ ಮಾನವಿಕ ವಿಷಯಗಳನ್ನು ಮಕ್ಕಳ ಜ್ಞಾನಾಭಿವೃದ್ಧಿಯ ಸಲುವಾಗಿ ಕನ್ನಡದಲ್ಲಿ ಬೋಧಿಸುವುದು ಅತಿ ಮುಖ್ಯವೆಂದು ಹೇಳುತ್ತಾ ಕನ್ನಡದ ಉಳಿವು, ನಮ್ಮ ಮಕ್ಕಳಲ್ಲಿ ಬೆಳೆಯಬೇಕಾದ ಸೃಜನಶೀಲತೆಯ ಬಗ್ಗೆ ವಿವರಿಸಿದ್ದರು. ನಮ್ಮ ನಮ್ಮ ಮನೆಗಳಲ್ಲಿ ನಾವು ನಮ್ಮ ಶ್ರೀಮಂತ ಕನ್ನಡದಲ್ಲಿ ಮಾತಾಡೋಣ. ನಮ್ಮ ಮನೆಯ ಹಿತ್ತಲಿನ ದಣಪೆ ದಾಟಿ ಹೊರಜಗತ್ತಿಗೆ ಅಗತ್ಯಬಿದ್ದ ಸ್ಥಳದಲ್ಲಿ ಮಾತ್ರ ವ್ಯವಹಾರಕ್ಕೆ ಇಂಗ್ಲಿಷ್‌ನ್ನು ಬಳಸೋಣವೆಂದು ಎಲ್ಲ ಅಂದರೆ ಎಲ್ಲ ಕನ್ನಡಿಗರೂ ಪ್ರಾಮಾಣಿಕವಾಗಿ ನಿಶ್ಚಯಗೊಳಿಸಿಕೊಳ್ಳಬೇಕಿದೆ.

ಗಾಂಧಿ ಹೇಳಿದ ಒಂದು ಮಾತು ಇಲ್ಲಿ ನೆನಪಾಗುತ್ತಿದೆ. ‘ಒಂದು ಅತ್ಯುತ್ತಮ ಸೃಜನಶೀಲ ಭಾರತೀಯ ಮನಸಿನಲ್ಲಿ ಎರಡು ಅಂಶಗಳು ಕೂಡಿಕೊಂಡಿರುತ್ತವೆ. 1. ನಮ್ಮ ನೆಲದ ಪರಂಪರೆಯಲ್ಲಿ ಬೇರೂರಿ ಅದರ ಸತ್ವವನ್ನು ಹೀರಿಕೊಳ್ಳಬಲ್ಲ ಶಕ್ತಿ. 2. ಹೊರಗಿನ ನಿತ್ಯನೂತನ ಆಕಾಶಕ್ಕೆ ತೆರೆದಿದ್ದು, ಎಲ್ಲೆಡೆಯಿಂದಲೂ ಪ್ರೇರಣೆಗಳನ್ನು ಪಡೆದುಕೊಳ್ಳಬಲ್ಲ ಶಕ್ತಿ. ಕುವೆಂಪು, ಕಾರಂತ, ಡಿವಿಜಿ, ಮಾಸ್ತಿ, ಪುತಿನ ಶ್ರೀರಂಗರಲ್ಲಿ ಇವೆರಡೂ ಕೂಡಿದ ವ್ಯಕ್ತಿತ್ವವನ್ನು ಕಾಣಬಹುದು ಅಂತ ಅನಂತಮೂರ್ತಿಯವರು ಹೇಳುತ್ತಾರೆ . ನಮ್ಮ ನಮ್ಮ ವೈಚಾರಿಕತೆ ಹುಟ್ಟುವುದು ಕೂಡ ಇಲ್ಲಿಂದಲೇ. ಆಧುನಿಕತೆ ಎಷ್ಟು ಬೆಳೆದಿದೆಯೆಂದರೆ ಯಾವ ದೇಸೀಯತೆಯನ್ನೂ ಉಳಿಸಿಕೊಳ್ಳಲಾಗದೇ ಹೋಗುವ ಬರ್ಬರತೆ ಆವರಿಸಿದೆ.

ಕನ್ನಡ ಪೂರ್ಣವಾಗಿ ಉಳಿಯದೇ, ಅಳಿಯದೇ ಒಂದು ಅತಂತ್ರವಾದ ಸ್ಥಿತಿಯಲ್ಲಿ ಕೋಮಾವಸ್ಥೆಗೆ ಹೋಗಿರುವುದರಿಂದ ನಮ್ಮ ಮಕ್ಕಳು ನಮ್ಮ ಮನೆಯ ಮಕ್ಕಳಾಗಿ ಬೆಳೆಯುತ್ತಿಲ್ಲವೆಂದು ಅನಿಸುತ್ತಿದೆ. ಜಾಗತೀಕರಣದ ಪರಿಣಾಮವಿದು. ಇದರಿಂದಾಗಿ ಅತ್ತ ಆಂಗ್ಲಭಾಷೆಯೂ ಸರಿಯಾಗಿ ಬರದ, ಇತ್ತ ಕನ್ನಡವೂ ಬರದ ಒಂದು ಎಡವಟ್ಟು ಜನಾಂಗ ದೇಶದಲ್ಲಿ ಬೆಳೆಯುತ್ತಿದೆ. ದೇಶವನ್ನು ಬಡತನದಿಂದ ಮೇಲೆತ್ತಲು ನಮ್ಮ ಸರಕಾರ ಶತಪ್ರಯತ್ನ ಮಾಡುತ್ತಿದೆಯೆಂದು ಸರಕಾರದ ಹಣ ತಿಂದು ತೇಗುವ ರಾಜಕಾರಣಿಗಳಂತೆ, ತಮ್ಮ ಮಕ್ಕಳು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೆಂಬ ಮಹದಾಸೆಯಿಂದ ಆಂಗ್ಲಮಾಧ್ಯಮ ಶಾಲೆಗಳಿಗೆ ಸೇರಿಸಿ, ಕನ್ನಡದ ಉಳಿವಿನ ಬಗ್ಗೆ ನಾಟಕೀಯವಾಗಿ ಮಾತನಾಡುತ್ತ ಒಳಗೊಳಗೇ ಅಣಕ ಮಾಡುವವರಿದ್ದಾರೆ.

ಸರಳವಾದ ವಿಚಾರವನ್ನು ಸರಳವಾದ ರೀತಿಯಲ್ಲಿ ಹೇಳುವುದಕ್ಕೂ, ಸರಳವಾದ ವಿಚಾರವನ್ನು ಸರಳವಾಗಿ ಕೇಳಿ ತಿಳಿಯುವುದಕ್ಕೂ, ಸರಳವಾದ ಸಂಗತಿಯನ್ನು ಓದುವುದಕ್ಕೂ, ಸರಳವಾದ ಅಭಿಪ್ರಾಯಗಳನ್ನು ಸರಳವಾಗಿ ಬರೆಯುವುದಕ್ಕೂ ದೇಶಭಾಷೆಯಲ್ಲೇ ಬೋಧನೆಯಾಗಬೇಕೆಂಬುದು ಜಾಗತಿಕ ಭಾಷಾಶಾಸ್ತ್ರಜ್ಞರ ಪ್ರತಿಪಾದನೆ. ಇದನ್ನೇ ಮತ್ತಷ್ಟು ಪುಷ್ಟೀಕರಿಸುತ್ತಾ ದೇಶಾದ್ಯಂತ ಮಾತೃಭಾಷೆಗಳ ಮೂಲಕವೇ ಮೂಲ ಶಿಕ್ಷಣ ನೀಡಲು ಸಾಧ್ಯವಾದರೆ ಭವಿಷ್ಯದಲ್ಲಿ ಪ್ರತಿಭಾವಂತ ಜನಾಂಗವನ್ನು ರೂಪಿಸಲು ಅವಕಾಶವಿದೆ.

Tags

Related Articles

Leave a Reply

Your email address will not be published. Required fields are marked *

Language
Close