ವಿಶ್ವವಾಣಿ

ಬಡವರ ಭಾಗ್ಯೋದಯ ಸಿದ್ದರಾಮಯ್ಯ 70

BENGALURU, INDIA – SEPTEMBER 18: Karnataka Chief Minister K Siddaramaiah poses for a profile shoot on September 18, 2015 in Bengaluru, India. (Photo by Hemant Mishra/Mint via Getty Images)

ಕರ್ನಾಟಕವು ಹಲವು ದಶಕಗಳಲ್ಲಿ ಅನೇಕ ರಾಜಕೀಯ ಮುತ್ಸದಿಗಳನ್ನು ಕಂಡಿದೆ. ಅನೇಕರು ಕನ್ನಡನಾಡಿನ ರಾಜಕೀಯದ ಹಾದಿಯಲ್ಲಿ ತಮ್ಮ  ರಾಜಕೀಯದ ಹೆಜ್ಜೆ ಗುರುತುಗಳನ್ನು ಊರಿದ್ದಾರೆ. ಎಸ್. ನಿಜಲಿಂಗಪ್ಪ ಅವರಿಂದ ಮೊದಲ್ಗೊಂಡು ಎಸ್.ಬಂಗಾರಪ್ಪನವರೆಗೆ, ಡಿ.ದೇವರಾಜ ಅರಸು ಅವರಿಂದ ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ,  ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕರ್ನಾಟಕವು 24 ಮುಖ್ಯಮಂತ್ರಿಗಳ ಆಡಳಿತವನ್ನು ನೋಡಿದೆ.

ಈ 24 ಮುಖ್ಯಮಂತ್ರಿಗಳ ಸಾಧನೆ ಹಾದಿಯನ್ನು ಗಮನಿಸಿದರೆ ಈ ಪೈಕಿ ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇವರೀರ್ವರು ತಮ್ಮ ಐದು ವರ್ಷಗಳ ಮುಖ್ಯಮಂತ್ರಿ ಅವಧಿಯನ್ನು ಸಂಪೂರ್ಣವಾಗಿ ಪೂರೈಸುವ ಮೂಲಕ ಗಮನ ಸೆಳೆದಿದ್ದಾರೆ. ಕರ್ನಾಟಕದ 60 ವರ್ಷಗಳ ಅಖಂಡ ಚರಿತ್ರೆಯಲ್ಲಿ ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇವರೀರ್ವರೇ ತಮಗೆ ದೊರಕಿದ 5 ವರ್ಷಗಳ ಅಧಿಕಾರವಾಧಿಯನ್ನು ಪೂರೈಸಿದ ಮುಖ್ಯಮಂತ್ರಿಗಳಾಗಿದ್ದಾರೆ.

ದೇವರಾಜ  ಮತ್ತು ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಹಾದಿಯನ್ನು ಅವಲೋಕಿಸಿದಾಗ ಅಹಿಂದ ಸಮುದಾಯದ ಪ್ರಗತಿಗೆ ಕಂಕಣಬದ್ಧರಾಗಿ ದುಡಿದ ಮುಖ್ಯಮಂತ್ರಿಗಳಾಗಿಯೂ ಇವರೀರ್ವರು ಗೋಚರಿಸುತ್ತಾರೆ. ಸಿದ್ದರಾಮಯ್ಯ ರಾಜಕೀಯ ಜೀವನದ ಹಾದಿಯೇ ಗಮನಾರ್ಹ. ಧ್ವನಿಯಿಲ್ಲದವರ ದನಿಯಾಗಿ, ಶೋಷಿತರ ನೆರವಿಗೆ ಸದಾ        ಸಿದ್ಧರಾಗಿರುವ ಪ್ರತಿಜ್ಞೆ ಪಡೆದವರಂತೆ ರಾಜಕೀಯ ಜೀವನ ಸವೆಸಿದವರು ಸಿದ್ದರಾಮಯ್ಯ.

1983ರಲ್ಲಿ ಲೋಕದಳದ ಅಭ್ಯರ್ಥಿಯಾಗಿ ಮೈಸೂರಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಮೊದಲ ಚುನಾವಣೆಯಲ್ಲಿಯೇ ಜನಮನ್ನಣೆ ಪಡೆದು ಗೆಲುವು ಗಳಿಸಿದರು. ರಾಜಕೀಯವಾಗಿ ಅಷ್ಟೇನೂ ಗುರುತಿಸಿಕೊಳ್ಳದ  ಸಿದ್ದರಾಮಯ್ಯ,  ಪಕ್ಷವಾಗಿ ಹೆಚ್ಚೇನೂ ಪ್ರಸಿದ್ಧಿ ಹೊಂದಿರದ ಲೋಕದಳದಿಂದ ಸ್ಪರ್ಧಿಸಿದ್ದು, ಸಿದ್ದರಾಮಯ್ಯ ಅವರ ಚುನಾವಣಾ ಗೆಲುವು 80 ರ ದಶಕದ ರಾಜಕೀಯದಲ್ಲಿ ಬಹಳ ದೊಡ್ಡ ಅಚ್ಚರಿಯಾಗಿತ್ತು. ಮೈಸೂರು ಪ್ರಾಂತ್ಯದಲ್ಲಿ ಒಂದೋ ಜನತಾ ಪಕ್ಷ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಕಾಣುತ್ತಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಜನಪ್ರಿಯರಾಗಿದ್ದ ಚರಣ್ ಸಿಂಗ್ ನಾಯಕತ್ವದ ಪಕ್ಷದಿಂದ ಮೈಸೂರಿನಲ್ಲಿ ಸಿದ್ದರಾಮಯ್ಯ ಗೆದ್ದದ್ದು ಈ ಪಕ್ಷ ಮುಂದಿನ ದಿನಗಳಲ್ಲಿ ಮೈಸೂರು ಪ್ರಾಂತ್ಯದಲ್ಲಿ ಪ್ರಬಲಗೊಳ್ಳುವ ಎಲ್ಲಾ ಸಾಧ್ಯತೆಗಳನ್ನೂ ಅಂದು ಹುಟ್ಟುಹಾಕಿತ್ತು.

 ಅದ್ಭುತ

ಅಂದು ಕರ್ನಾಟಕದಲ್ಲಿ ರಾಮಕೃಷ್ಣ ಹೆಗ್ಗಡೆಯವರ ಜನತಾಪಾರ್ಟಿ ಅಧಿಕಾರಕ್ಕೆ ಬಂತು. ಜನತಾ ಪಕ್ಷಕ್ಕೆ ಕಾಂಗ್ರೇಸೇತರ ಪಕ್ಷದ ಶಾಸಕನಾಗಿ ಸೇರ್ಪಡೆಗೊಂಡ ಸಿದ್ದರಾಮಯ್ಯ ಅವರಿಗೆ ರಾಮಕೃಷ್ಣ ಹೆಗಡೆ ಕನ್ನಡ ಕಾವಲು ಸಮಿತಿ ಅಧ್ಯಕ್ಷತೆಯ ಹೊಣೆಗಾರಿಕೆ ನೀಡಿದರು. ಜನತಾ ಪಾರ್ಟಿ ಸೇರಿದ ಸಿದ್ದರಾಮಯ್ಯ ಅವರಿಗೆ ಎಚ್.ಡಿ.ದೇವೇಗೌಡರ ರಾಜಕೀಯ ಮಾರ್ಗ ದರ್ಶನ ದೊರಕಿತ್ತು. ರಾಮಕೃಷ್ಣ ಹೆಗಡೆಯವರ ನಂತರ ಜನತಾ ಪಾರ್ಟಿಯಲ್ಲಿ ಪ್ರಭಾವಿಯಾಗಿದ್ದ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಆಪ್ತತೆಯಿಂದಲೇ ಕಂಡಿದ್ದರು.

ಜನತಾ ಪಾರ್ಟಿ ಸರ್ಕಾರದಲ್ಲಿ ಸಿದ್ದರಾಮಯ್ಯ  ಖಾತೆ ಸಚಿವರಾಗಿ ಅಧಿಕಾರ ಪಡೆದರು. ಸಿದ್ದರಾಮಯ್ಯ ಮೈಸೂರು ಪ್ರಾಂತ್ಯದಲ್ಲಿ ಅದೆಷ್ಟು ಪ್ರಭಾವಶಾಲಿ ನಾಯಕರಾಗಿ ರೂಪುಗೊಂಡರೆಂದರೆ ಶಾಸಕನಾದ ಎರಡೇ  ವರ್ಷದಲ್ಲಿ ಮತ್ತೊಮ್ಮೆ ಜನತಾಪಾರ್ಟಿಯಿಂದ ಸ್ಪರ್ಧಿಸಿ ಶಾಸಕರಾದರು. ಮೈಸೂರು ನಗರಸಭೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ದರಾಮಯ್ಯ ಅವರಿಗೇ ಹೊಣೆಗಾರಿಕೆಯನ್ನು ಜನತಾ ಪಕ್ಷದ ಮುಖಂಡರು ವಹಿಸಿದ್ದರು.

2013ರಲ್ಲಿ ಸಿದ್ದರಾಮಯ್ಯ ಕೊನೆಗೂ ಕರ್ನಾಟಕದ ಮುಖ್ಯಮಂತ್ರಿಗಳಾದರು.ಐದು ವರ್ಷಗಳ ಅಧಿಕಾರ ಪೂರೈಸಿದರು. ನಾನು ಗಮನಿಸಿದಂತೆ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡ ಅವರ ನಡುವೆ 1989ರಲ್ಲಿ ಭಿನ್ನಾಭಿಪ್ರಾಯಗಳು ಬಂದಾಗ  ಲಾಭ ಪಡೆದವರಂತೆ ಸಿದ್ದರಾಮಯ್ಯ ದೇವೇಗೌಡರ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡರು. ಹೀಗಾಗಿಯೇ ಸಿದ್ದರಾಮಯ್ಯ ಅವರಿಗೆ 1994ರಲ್ಲಿ ಜನತಾ ಪಕ್ಷದ ಸರ್ಕಾರದಲ್ಲಿ ಹಣಕಾಸು ಸಚಿವ ಸ್ಥಾನ ದೊರಕಿತು. ಅಂದಿನಿಂದ ಅವರು ಕರ್ನಾಟಕದ ಆರ್ಥಿಕ ವಿಚಾರಗಳಲ್ಲಿ ಪ್ರಬುದ್ಧವಾಗಿ ನಡೆದುಕೊಂಡದ್ದು ಇತಿಹಾಸ.

ದಾಖಲೆಯ ಬಜೆಟ್

ಸಿದ್ದರಾಮಯ್ಯ ಅವರಿಗೆ ಅಂದು ಹಣಕಾಸು ಸಚಿವ ಸ್ಥಾನ ದೊರಕಿದ್ದರಿಂದಾಗಿಯೇ 22ನೇ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸುವವರೆಗೂ ಸಿದ್ದರಾಮಯ್ಯ ದಾಖಲೆಯ 18 ಬಜೆಟ್‌ಗಳನ್ನು ಮಂಡಿಸಲು ಸಾಧ್ಯವಾಯಿತು.  ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಹಂತಹಂತವಾಗಿ ಪ್ರಬಲರಾಗುತ್ತಲೇ  ಒಂದಲ್ಲ ಒಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗಲೇ ಬೇಕೆಂಬ ಛಲ ಸಿದ್ದರಾಮಯ್ಯ ಅವರಲ್ಲಿತ್ತು. ಆ ಛಲ, ಹಠವನ್ನು ಅವರು ಈಡೇರಿಸಿಕೊಂಡರು ಕೂಡ. 1994ರಿಂದ 1999ರವರೆಗೆ ದೇವೇಗೌಡರು ದೇಶದ ಪ್ರಧಾನಿಯಾಗಲೇಬೇಕೆಂದು ರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾದ ಸಂದರ್ಭ, ಸಿದ್ದರಾಮಯ್ಯ ಕೂಡ ರಾಜ್ಯದಲ್ಲಿ ತಾನು ಮುಖ್ಯಮಂತ್ರಿಯಾಗಬೇಕೆಂಬ ಹಂಬಲ ಹೊಂದಿದ್ದು ಸ್ಪಷ್ಟವಾಗಿತ್ತು.

ಜನತಾ ಪಕ್ಷದಲ್ಲಿ ಜೆ.ಎಚ್.ಪಟೇಲ್ ಮತ್ತು ಸಿದ್ದರಾಮಯ್ಯ ಬಣಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಪಕ್ಷದಲ್ಲಿ ದೊಡ್ಡ  ಬಿರುಕನ್ನೇ ಸೃಷ್ಟಿಸಿತ್ತು.  ಈ ಇಬ್ಬರೂ ನಾಯಕರಿಗೂ  ಹಠ ಇತ್ತು. ಕೊನೆಗೆ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗುವಂತಾಯಿತು.

2006ರಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಾನೋರ್ವ ಪ್ರಬುದ್ಧ ನೇತಾರ ಎಂಬುದನ್ನು ಸಾಬೀತುಪಡಿಸಿದರು. ಆದರೆ, ಜೆಡಿಎಸ್‌ನಲ್ಲಿ ಕಂಡುಬಂದ ಆಂತರಿಕ ಭಿನ್ನಾಭಿಪ್ರಾಯಗಳು ಸಿದ್ದರಾಮಯ್ಯ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡುವಲ್ಲಿ ಪರ್ಯಾವಸಾನವಾಯಿತು. ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸಿ ಮುಖ್ಯಮಂತ್ರಿಯಾಗಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಿದರು.

ಕಾಂಗ್ರೆಸ್‌ಗೆ ಪುನರ್ಜನ್ಮ

ನಂತರ ನಡೆದ ಬೆಳವಣಿಗೆಗಳೆಲ್ಲಾ ರಾಜಕೀಯದ ಇತಿಹಾಸದ ಪುಟ ಸೇರಿದೆ. ದೇವೇಗೌಡರೊಂದಿಗೆ ಉಂಟಾದ ಮನಸ್ತಾಪದಿಂದಾಗಿ  ಕಾಂಗ್ರೆಸ್ ಕೈ ಹಿಡಿಯುವಂತಾಯಿತು. ರಾಜ್ಯದ ಹಳೇ ಪಕ್ಷವಾಗಿದ್ದ ಕಾಂಗ್ರೆಸ್‌ನಲ್ಲಿ ಕಂಡುಬಂದಿದ್ದ ಸಮರ್ಥ ನಾಯಕತ್ವದ ಕೊರತೆಯನ್ನು ತುಂಬುವಂತೆ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ದಿನದಿನಕ್ಕೂ ಬಲಿಷ್ಟರಾಗತೊಡಗಿದರು. ಅಹಿಂದ ಸಮುದಾಯದ ಬಲಿಷ್ಟ ನಾಯಕನಂತೆಯೂ ಸಿದ್ದರಾಮಯ್ಯ ರಾಜಕೀಯ ವಲಯದಲ್ಲಿ ಖ್ಯಾತರಾದರು. ಸಿದ್ದರಾಮಯ್ಯ ಪ್ರಭಾವದಿಂದಾಗಿಯೇ 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯುವಂತಾಯಿತು.

ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ತುರ್ತಾಗಿ ಜಾರಿಗೊಳಿಸಿದ ಅನ್ನಭಾಗ್ಯ ಮತ್ತು ಕ್ಷೀರಭಾಗ್ಯ ಎಂಬೆರಡು ಯೋಜನೆಗಳು ಅವರನ್ನು ಅಹಿಂದ ನಾಯಕನಿಂದ ಎಲ್ಲಾ ಸಮುದಾಯಕ್ಕೆ ಸಲ್ಲುವ  ನಾಯಕನನ್ನಾಗಿಸಿದ್ದು

2018ರ ಚುನಾವಣೆ ವಿಚಾರಕ್ಕೆ ಬಂದರೆ ಸಮುದಾಯದ ನಾಯಕನಾಗಿ ಸಿದ್ದರಾಮಯ್ಯ ಮತಗಳನ್ನು ತನ್ನ ಪಕ್ಷದತ್ತ ಸೆಳೆಯುವಲ್ಲಿ ಸಫಲರಾಗಲಿಲ್ಲ ಎಂಬುದು ಸ್ಪಷ್ಟ. ಅದೇಕೋ ಅವರ ಸರ್ಕಾರದ ಜನಪ್ರಿಯ ಯೋಜನೆಗಳಿಗೂ ಮತದಾರ ಮನ್ನಣೆ ನೀಡಲೇ ಇಲ್ಲ. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಹಿಂದ ಕೂಡ ಈ  ಚುನಾವಣೆಯಲ್ಲಿ ಗೆಲುವಿಗೆ ನೆರವಾಗಲಿಲ್ಲ. ಮೇಲ್ವರ್ಗದ ಮತಗಳು ಕಾಂಗ್ರೆಸ್ ಪರವಾಗಿ ನಿರೀಕ್ಷಿತ ರೀತಿಯಲ್ಲಿ ಚಲಾವಣೆಯಾಗದೇ ಇರುವುದೂ ಸೋಲಿಗೆ ಕಾರಣವಾಯಿತು.

ಮುಖ್ಯ ಜವಾಬ್ದಾರಿಯಲ್ಲಿ..

ಇರಲಿ, ಈ  ದಶಕಗಳಲ್ಲಿ ರಾಜಕೀಯ ಜೀವನದಲ್ಲಿ ಮಹತ್ತರವಾದ ಸಾಧನೆಗಳನ್ನು ಮಾಡಿರುವ ಸಿದ್ದರಾಮಯ್ಯ ಜನನಾಯಕನಾಗಿ ಸದಾ ಕಂಗೊಳಿಸುತ್ತಲೇ ಇರುತ್ತಾರೆ. ಇದೀಗ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷನಾಗಿ ಬಹುಮುಖ್ಯ ಹೊಣೆಗಾರಿಕೆಯೂ ಸಿದ್ದರಾಮಯ್ಯ ಅವರ ಮೇಲಿದೆ. ಈ ಹೊಣೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹೊಂದಿದ್ದ ಜವಾಬ್ದಾರಿಯಷ್ಟೇ ಮುಖ್ಯವಾದದ್ದು ಎಂದು ನನ್ನ ಅನಿಸಿಕೆ.

ದೇಶದ ಪ್ರಜಾಪ್ರಭುತ್ವವೇ ಇಂದು ನಾನಾ ಕಾರಣಗಳಿಂದ ಆತಂಕದ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ  ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ  ಉಂಟು ಮಾಡಲಾರರು ಎಂಬುದು ನನ್ನ ಭಾವನೆ. ಅಂತೆಯೇ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿನ ಸಮನ್ವಯ ವೇದಿಕೆ ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಬಲವಾಗಬೇಕಾದ ಅನಿವಾರ್ಯತೆ ಇದೆ ಎಂಬುದು ನನ್ನ ಬೇಡಿಕೆ.

ಒಂದಂತೂ ಸ್ಪಷ್ಟ, ದಕ್ಷಿಣ ಭಾರತದ ರಾಜಕೀಯ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ನೆರವಿಲ್ಲದೇ ಮುಂದಡಿಯಿಡಲು ಅಸಾಧ್ಯ. ಹೀಗಾಗಿ ಮಾಜಿ ಮುಖ್ಯಮಂತ್ರಿ ಯಾಗಿದ್ದರೂ ಕಾಂಗ್ರೆಸ್ ಪಾಲಿಗೆ ಸಿದ್ದರಾಮಯ್ಯ ಸಾರ್ವಭೌಮನೇ  ಹೌದು.  ಕಾಂಗ್ರೆಸ್ ಪಾಲಿಗೆ ಸಿದ್ದರಾಮಯ್ಯ ಅನಿವಾರ್ಯವೂ  ಸಿದ್ದರಾಮಯ್ಯ ಇಲ್ಲದೆ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದಲ್ಲಿಯೇ ಕಾಂಗ್ರೆಸ್‌ನ್ನು ಯೋಚಿಸುವುದು ಕಷ್ಟಸಾಧ್ಯ.

ಮೈಸೂರು ಪ್ರಾಂತ್ಯದ ಈ ಬಲಿಷ್ಟ ನಾಯಕ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೂಡಿಸಿರುವ  ದಟ್ಟ, ದಿಟ್ಟ ಹೆಜ್ಜೆ ಗುರುತುಗಳಿವು.

ಸಮಾಜವಾದಿ ತತ್ವ ಸಿದ್ಧಾಂತದ ತಳಹದಿಯಲ್ಲಿಯೇ ಅಧಿಕಾರದ ಸೌಧಕಟ್ಟಿದ, ಅಹಿಂದ ಸಿದ್ಧಾಂತದ ಪ್ರತಿಪಾದಕರಾಗಿಯೂ, ಇತರ ವರ್ಗದ ಬಡವರ ಪಾಲಿಗೂ ಭಾಗ್ಯಗಳ ಕರುಣಿಸಿದ ಭಾಗ್ಯದಾತ, ಕರುಣಾಳು ಸಿದ್ದರಾಮಯ್ಯ. ಅರಸು ಅವರ ನಂತರ ರಾಜ್ಯ ಕಂಡ ಬಡವರ ಪರ ಕಾಳಜಿಯುಳ್ಳ ಮುಖ್ಯಮಂತ್ರಿ  ಅದು ಸಿದ್ದರಾಮಯ್ಯ. ಅರಸು ಅವರಂತೆ ಐದು ವರ್ಷಗಳ ಸಾಂವಿಧಾನಿಕ ಅವಧಿಯನ್ನು ಅಧಿಕಾರದ ದಂಡ ಹಿಡಿದು ಅವಿಚ್ಛಿನ್ನವಾಗಿ ಮುಗಿಸಿ, ಚರಿತ್ರೆ ನಿರ್ಮಿಸಿದ್ದಾರೆ ಸಿದ್ದರಾಮಯ್ಯ! ಸಿದ್ದರಾಮಯ್ಯ ಹೋರಾಟದ ಹಾದಿಯಲ್ಲಿ ಅರಳಿದ ಜನಾದರದ ಕುಸುಮ. ಹುಂಬ, ಆನೆ ನಡೆದದ್ದೇ ದಾರಿ. ಆದರೆ ದೀನ ದಲಿತರ ಪರ. ಹಸಿದ ಒಡಲಿನ ಆಶಾಕಿರಣ. ಕೈ ಬಾಯಿ ಶುದ್ಧವಾಗಿ ಉಳಿಸಿಕೊಂಡ ನಾಯಕ. ಭ್ರಷ್ಟರಲ್ಲ. ಸ್ವಜನಪಕ್ಷಪಾತಿಯಲ್ಲ. ಸಾಮಾಜಿಕ ಸ್ತರ ಸಮಾನತೆಯ ಕನಸುಗಾರ. ಹಗರಣಮುಕ್ತ ಆಡಳಿತ ನೀಡಿದ ಮುಖ್ಯಮಂತ್ರಿ. ಸಿದ್ದರಾಮಯ್ಯ  ನಾಡು ಕಂಡ ಒಬ್ಬ ಧೀಮಂತ ನಾಯಕ.

 

ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಅವಮಾನಕ್ಕೆ ತುತ್ತಾದ ಹೊತ್ತಿನಲ್ಲಿ, ಮೋದಿ ಅವರ ಪ್ರಚಂಡ ನಾಗಾಲೋಟದ ಎದುರಿನಲ್ಲಿ ಎದೆತಟ್ಟಿ, ತೊಡೆತಟ್ಟಿ ಸೇರಿಗೆ ಸವ್ವಾಸೇರು ಅಂತ ನಿಂತವರು ಸಿದ್ದರಾಮಯ್ಯ. ಹೈಕಮಾಂಡನ್ನು ಐದು ವರ್ಷ ಸಾಕಿದ್ದು ಸಿದ್ದರಾಮಯ್ಯ. ದೇಶದ ಕಾಂಗ್ರೆಸ್ಸಿನ ಮಾನ ಮರ್ಯಾದೆಯನ್ನು ನಿಜಕ್ಕೂ ಉಳಿಸಿದ್ದು, ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವೀರೋಚಿತ ಸ್ಪರ್ಧೆ ನೀಡಿದ್ದು ಸಿದ್ದರಾಮಯ್ಯ. ಹಾಗೇ ಈಗಣ ಸಮ್ಮಿಶ್ರ ಸರಕಾರದ ರಾಜಕೀಯ ದೊಂಬರಾಟವನ್ನ  ಸಿದ್ದರಾಮಯ್ಯನವರ ಐದು ವರ್ಷದ ಏಕಚಕ್ರಾಧಿಪತ್ಯ ಮತ್ತು ಅದರ ಸಂಭಾಳಿಕೆ, ಸಿದ್ದರಾಮಯ್ಯನವರ ರಾಜಕೀಯ ಚಾಣಾಕ್ಷತನ, ನಾಯಕತ್ವದ ಪಟುತ್ವಕ್ಕೆ ಪರಮ ಸಾಕ್ಷಿ. ಅಧಿಕಾರರಹಿತ ವರ್ತಮಾನದಲ್ಲೂ ಕರ್ನಾಟಕದ ರಾಜಕಾರಣದ ಸ್ಟಾರ್ ರಾಜಕಾರಣಿ ಯಾರು ಅಂದರೆ ಅದು ಸಿದ್ದರಾಮಯ್ಯನವರೇ. ಶಾರೀರಿಕವಾಗಿ, ಮಾನಸಿಕವಾಗಿ ಸದಾ ಸಮತೋಲನ ಕಾದುಕೊಂಡ ಎವರ್‌ಗ್ರೀನ್ ಸಿದ್ದರಾಮಯ್ಯನವರಿಗೆ ಇಂದು 70ರ ಹರಯ. ನೂರಕ್ಕೆ ಕೇವಲ ಮೂರು ದಶಕವಷ್ಟೇ ಬಾಕಿ. ಅವರು ಸೆಂಚುರಿ ಬಾರಿಸಲಿ. ಮತ್ತೆ ಕರ್ನಾಟಕ ರಾಜಕಾರಣದ ಕೇಂದ್ರಬಿಂದುವಾಗಲಿ. ಅವರ ಜನಪರ ಕಾಳಜಿಯ  ಅವರನ್ನು ಮತ್ತೊಮ್ಮೆ ಈ ರಾಜ್ಯದ ‘ಗುರಿಕಾರ’ನ ಹುದ್ದೆಗೆ ಏರಿಸಲಿ. ಅದೇ ಅವರ ಹುಟ್ಟುಹಬ್ಬದ ಈ ದಿನ ‘ವಿಶ್ವವಾಣಿ’ಯ ಆಶಯ. ್ಝ

-ಬಿ. ಗಣಪತಿ