About Us Advertise with us Be a Reporter E-Paper

ಗೆಜೆಟಿಯರ್

ಸೋಷಿಯಲ್ ಮೀಡಿಯಾ ಸರ್ಟಿಫಿಕೇಟ್

*ವಿಕ್ರಮ ಜೋಶಿ

ಸೋಷಿಯಲ್ ಮೀಡಿಯಾವನ್ನು ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ನಿಮಗೆ ಏನಾದರೂ ಅನಿಸಿದರೆ ಅದು ನಿಮ್ಮ ಭ್ರಮೆ. ನೀವು ಭೂಮಿಯ ಮೇಲೆ ಇಲ್ಲದೇ ಹೋದರೂ ಸರಿ, ಆದರೆ ನಿಮ್ಮ ಪ್ರೊಫೈಲ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದರೆ ನಿಮಗೆ ಸಮಾಜವು ‘ಲೀವಿಂಗ್ ಸರ್ಟಿಫಿಕೇಟ್’ ಕೊಡುತ್ತದೆ, ಅಷ್ಟು ಸೀರಿಯಸ್ ಆಗಿದ್ದೇವೆ ನಾವು. ಇವತ್ತು ಮದುವೆ, ಕೆಲಸ, ಕಲಿಕೆ, ಸೋಷಿಯಲ್ ನೆಟ್‌ವರ್ಕ್ ಏನೇ ಇರಲಿ ಎಲ್ಲದಕ್ಕೂ ಜಾತಕ ಎನ್ನುವುದಿದೆಯಲ್ಲ ಅದೇ ನಮ್ಮ ಸೋಷಿಯಲ್ ಮೀಡಿಯಾ ಮೊದಲು ಮದುವೆ ವಿಷಯ ಬಂದಾಗ ಹುಡುಗ ಅಥವಾ ಹುಡುಗಿಯ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಅವರ ಗುರುತು, ಪರಿಚಯದವರ ಹತ್ತಿರ ವಿಚಾರಿಸುತ್ತಿದ್ದರು. ಸಮಾಜದಲ್ಲಿ ಆ ವ್ಯಕ್ತಿಯ ಬಗ್ಗೆ ಜನರ ಅಭಿಪ್ರಾಯ ಏನಿದೆ ಎನ್ನುವುದನ್ನು ಅರಿತು ಮುಂದಿನ ಹೆಜ್ಜೆಯ ನಿರ್ಧಾರವಾಗುತ್ತಿತ್ತು.

ಅದೇ ಕೆಲಸದ ವಿಷಯದಲ್ಲಿ ಬೈಯೋ ಡಾಟಾ ಕೆಳಗೆ ರೆಫರೆನ್‌ಸ್ ಎನ್ನುವ ಒಂದು ವಿಭಾಗವೇ ಇರುತ್ತಿತ್ತು. ಅದಲ್ಲದೆ ನಮಗೆ ಗೊತ್ತಿರುವವರನ್ನು ಮಾತಾಡಿಸಿ ಅವನ ಬಗ್ಗೆ ಕೇಳಿ ತಿಳಿಯುತ್ತಿದ್ದರು. ಇಂದು ಡಾಟ್ ಕಾಮ್ ಸಾಮಾಜಿಕ ನಡುವಳಿಕೆಯನ್ನು ಬದಲಾಯಿಸಿದೆ. ಕಣ್ಣಿನಲ್ಲಿ ಕಂಡರೂ ಸೋಷಿಯಲ್ ಮೀಡಿಯಾದಲ್ಲಿ ಪರಾಂಬರಿಸಿ ನೋಡು ಎನ್ನುವ ದಿನಗಳು ಬಂದಿವೆ. ಬದುಕಿನಲ್ಲಿ ಸಾಧನೆಯ ಪುಸ್ತಕ ಬರೆಯುವ ಮೊದಲು ಸೋಷಿಯಲ್ ಮೀಡಿಯಾ ಮುನ್ನುಡಿಯೊಂದು ಚೆನ್ನಾಗಿರಬೇಕು ಎನ್ನುವ ಹಂತಕ್ಕೆ ನಮ್ಮ ಸಮಾಜ ತಲುಪಿದೆ.

ಸೋಷಿಯಲ್ ಮೀಡಿಯಾ ಒಂದು ವರ್ಚ್ಯುಯಲ್ ಸೊಸೈಟಿ!
‘ಅಡಿಕೆ ಕದ್ದು ಹೋದ ಮಾನ, ಆನೆ ಕೊಟ್ಟರು ಬಾರದು’ ಎನ್ನುವ ಮಾತಿದೆ. ಅಂದರೆ ಸಮಾಜದಲ್ಲಿ ಒಮ್ಮೆ ಮಾನವನ್ನು ಕಳೆದುಕೊಂಡರೆ ಅದನ್ನು ಮತ್ತೆ ಪುನಃ ಸರಿಪಡಿಸಲು ಕಷ್ಟ ಪಡಬೇಕು, ಆದರೂ ಮೊದಲು ಬಿದ್ದ ಕಲೆಯನ್ನು ಸಂಪೂರ್ಣವಾಗಿ ಅಳಿಸುವುದಕ್ಕೆ ಅಸಾಧ್ಯ. ಹೀಗಾಗಿ ಜನರು ಸಮಾಜದಲ್ಲಿ ಬಹಳ ಎಚ್ಚರಿಕೆಯಿಂದ ಬದುಕುತ್ತಿದ್ದರು. ಹುಡುಗ ಅಥವಾ ಹುಡುಗಿಯ ಹೆಸರು ಕೆಟ್ಟಿದ್ದರೆ ನಾಳೆ ಅದು ಸಮಾಜದಲ್ಲಿ ಅವರ ನಡುವಳಿಕೆಯ ಭಾವಚಿತ್ರವಾಗಿ ತೂಗಾಡುತ್ತಿತ್ತು. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಎನ್ನುವ ಮಾತಿದೆಯಲ್ಲ, ಹಾಗೆ ಸಾವಿರ ಸುಳ್ಳು ಹೇಳಿ ಮಾಡಲು ಮುಂದಾದ ಮದುವೆಯಲ್ಲಿಯೂ ಕೊನೆಯ ತನಕ ಎಲ್ಲಾದರೂ ಒಂದು ಎಡವಟ್ಟು ಆಗಬಹುದು ಎನ್ನುವ ಇರುತ್ತಿತ್ತು. ಎಷ್ಟೊಂದು ಮದುವೆ ಮರಿದು ಹೋದ ಸಂಗತಿಗಳನ್ನು ನಾವು ಕೇಳಿಲ್ಲವೇ? ಇದು ಕೇವಲ ಮದುವೆಗೆ ಅಷ್ಟೇ ಸೀಮಿತವಲ್ಲ ಅವನ ನಡುವಳಿಕೆಗಳು ಸಮಾಜದಲ್ಲಿ ಆತನಿಗೆ ಅದಕ್ಕೆ ಸಮನಾದ ಅಂತಸ್ತಿನ ನಿರ್ಮಾಣಕ್ಕೆ ಕಾರಣವಾಗುತ್ತವೆ.

ಮಾತು, ವಿಚಾರ, ನಡುವಳಿಕೆಗಳು ಸರಿಯಾಗಿರದೇ ಹೋದರೆ ಸಮಾಜದಲ್ಲಿ ಆ ವ್ಯಕ್ತಿಯ ತೇಜೋವದೆ ನಡೆದು ಹೋಗುತ್ತದೆ. ಟಿವಿ ಅಥವಾ ಪೇಪರಿನಲ್ಲಿಯೇ ಬರಬೇಕು ಎನ್ನುವ ನಿಯಮವಿಲ್ಲ ಬಾಯಿಯಿಂದ ಬಾಯಿಗೆ ವ್ಯಕ್ತಿಯ ಕುರಿತು ಮಾತು ವರ್ಗಾವಣೆಯಾಗಿ ಅದಕ್ಕೆ ತಕ್ಕನಾದ ಪ್ರಿಂಟ್ ರೆಡಿಯಾಗಿರುತ್ತದೆ. ಕೆಲಸದಲ್ಲಿ ಇದು ಭಿನ್ನವಿಲ್ಲ. ಅಲ್ಲಿ ನಡುವಳಿಕೆ ಹೇಗಿದೆ ಎನ್ನುವುದರ ಬಿಂಬವೇ ಪ್ರಮಾಣ ಪತ್ರ. ಒಮ್ಮೆ ಆ ಪ್ರಮಾಣಪತ್ರದಲ್ಲಿ ಕೆಂಪು ಶಾಯಿಯ ಶರಾ ಮೂಡಿದರೆ ಮುಗಿಯಿತು, ಅಲ್ಲಿ ಎಲ್ಲವೂ ಕೊನೆಗಾಣುತ್ತಿತ್ತು. ಕೆಲಸದ ಅರ್ಜಿಗಳು ಪರಿಶೀಲನೆಗೆ ಬಂದಾಗ ಅಂಕಗಳನ್ನು ನೋಡುವ ಮೊದಲು ನಡವಳಿಕೆಯ ಪ್ರಮಾಣಪತ್ರವನ್ನು ನೋಡುತ್ತಿದ್ದರು. ಯಾರಿಗೂ ಒಬ್ಬರ ಬದುಕನ್ನು ಹಾಳು ಮಾಡುವ ಮನಸ್ಸಿರುವುದಿಲ್ಲ ಆದರೆ ವರ್ತನೆ ಮಿತಿಮೀರಿದಾಗ ಕೈಲಿರುತ್ತಿತ್ತು ಈ ಬ್ರಹ್ಮಾಸ್ತ್ರ.

ಇವತ್ತು ಎಲ್ಲವೂ ಬದಲಾಗಿದೆ. ಮನೆಯಲ್ಲಿ ಅಜ್ಜ, ಅಜ್ಜಿಯಿಂದ ಮೊಮ್ಮಕ್ಕಳವರೆಗೆ ಸೋಷಿಯಲ್ ಮೀಡಿಯಾ ಕಾರ್ಯಕರ್ತರೇ! ಪಕ್ಕದ ಮನೆಯ ಹುಡುಗಿ ಜೀನ್‌ಸ್ ಹಾಕಿದ್ದನ್ನು ಫೇಸ್‌ಬುಕ್‌ನಲ್ಲಿ ನೋಡಿ, ಅದರ ಬಗ್ಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಚರ್ಚೆ ನಡೆಯುತ್ತದೆ. ಹುಡುಗರು ಪ್ರವಾಸಕ್ಕೆ ಹೋದಾಗ ನಡೆಸಿದ ಬಾಟಲಿ ಪಾರ್ಟಿಯ ವಿಷಯ ಅಪ್ಪನಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮಗನ ನಶೆ ಇಳಿಯುವುದರೊಳಗೆ ಗೊತ್ತಾಗುತ್ತದೆ. ಪರೀಕ್ಷೆಯ ವೇಳೆ ಎಷ್ಟು ಹೊತ್ತು ಯಾರೆಲ್ಲ ಆನ್‌ಲೈನ್ ಇರುತ್ತಾರೆ ಎನ್ನುವುದನ್ನು ಶಾಲೆಯ ಪ್ರಾಧ್ಯಾಪಕರು ಲೆಕ್ಕ ಇಟ್ಟಿರುತ್ತಾರೆ. ಮಹಿಳೆಯರ ಸಬಲೀಕರಣದ ಕುರಿತು ನಾಲ್ಕು ಪುಸ್ತಕವನ್ನೇ ಆತ ಬರೆದಿರಲಿ, ಖಾತೆಯ ಮೂಲಕ ಮಹಿಳೆಯರ ವಿರುದ್ಧ ಬರೆದ ನಾಲ್ಕು ಸಾಲುಗಳು ಅವನ ವ್ಯಕ್ತಿತ್ವವನ್ನು ಸಾರುತ್ತದೆ. ಕೆಲಸವನ್ನು ಮಾಡದ ಸೋಂಬೇರಿ ಇರಬಹುದು ಆದರೆ ಆತ ಲಿಂಕ್ಡ್ಇನ್‌ನಲ್ಲಿ ತೋರಿಸುವ ಆಸಕ್ತಿ ಆತನಿಗೆ ಹೆಚ್ಚು ವೇತನದ ಕೆಲಸ ಕೊಡುತ್ತದೆ. ಇನ್ನೊಬ್ಬ ಲ್ಯಾಬೋರೇಟರಿಯಲ್ಲಿ ಕೂತು ದಿನವಿಡಿ ಸಂಶೋಧನೆ ನಡೆಸುತ್ತಿರಬಹುದು ಆದರೆ ಆತನ ಪ್ರೊಫೈಲ್‌ನಲ್ಲಿ ಏನೂ ಇಲ್ಲವೆಂದರೆ ಯಾರೂ ಅವನೆಡೆ ಆಸಕ್ತಿ ತೋರಿಸುವುದಿಲ್ಲ.

ಜಗತ್ತಿನಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎನ್ನುವುದಕ್ಕಿಂತ ವರ್ಚುವಲ್ ರಿಯಾಲಿಟಿ ಬಗ್ಗೆ ಜನರ ನಂಬಿಕೆ ಇದಕ್ಕೆ ಕಾರಣವಿದೆ. ಒಂದು ರಿಸರ್ಚ್ ಪ್ರಕಾರ ಚಿಕ್ಕ ಮಕ್ಕಳು ತಾವು ಎಚ್ಚರವಿರುವಾಗ ಸುಮಾರು ಒಂಬತ್ತು ತಾಸು ಇಂಟರ್ನೆಟ್ ಬಳಕೆ ಮಾಡುತ್ತಾರಂತೆ. ದೊಡ್ಡವರು ಸುಮಾರು ಮೂರು ಗಂಟೆಗಳ ಕಾಲ ಸೋಷಿಯಲ್ ಮೀಡಿಯಾದಲ್ಲಿ ಇರುತ್ತಾರಂತೆ, ಹಾಗೆಯೇ ಕೆಲಸದ ಸಮಯದ ಶೇ.30 ಸೋಷಿಯಲ್ ಮೀಡಿಯಾ ಬಳಕೆಗೆ ವ್ಯಯ ಆಗುತ್ತಿದೆ. ನಾವು ಇಂದು ಈ ಗ್ಯಾಜೆಟ್ ಲೋಕದಲ್ಲಿ ಎರಡು ಸಮಾಜದಲ್ಲಿ ಇರುತ್ತಿದ್ದೇವೆ. ಮೊದಲನೆಯದು ನಮ್ಮೆದುರಿಗಿನ ಜನರು, ಮಾತು, ಕಥೆ, ಸಮಾಜ. ಎರಡನೆಯದು ಸೋಷಿಯಲ್ ಮೀಡಿಯಾದಲ್ಲಿರುವ ಮೊದಲಗಿಂತ ಎರಡನೆಯ ವರ್ಚುವಲ್ ಸಮಾಜದಲ್ಲಿಯೇ ನಾವು ಹೆಚ್ಚು ವಾಸ ಹಾಗೂ ಒಡನಾಟ ಮಾಡುತ್ತಿದ್ದೇವೆ ಹೀಗಾಗಿ ಅಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ನೀಡ್ ಆಪ್ ದಿ ಟೈಮ್.

ವರ್ಚುವಲ್ ಸೊಸೈಟಿಯಲ್ಲಿ ಬದುಕುವುದು ಹೇಗೆ?
ಸೋಷಿಯಲ್ ಮೀಡಿಯಾವನ್ನು ಇವತ್ತು ಕಡೆಗಣಿಸುವ ಹಾಗಿಲ್ಲ. ನಾನು ಮನೆಯಲ್ಲಿ ಒಂದು ತರಹ ಇರುತ್ತೇನೆ, ಕಂಪ್ಯೂಟರ್ ಒಳಗೆ ಇನ್ನೊಂದು ತರಹ ಇರುತ್ತೇನೆ ಎನ್ನುವ ದಿನಗಳು ಇದಲ್ಲ. ನೀವು ಮೊಬೈಲ್ ಹೊರಗಡೆ ಹೇಗೆ ಇರಿ, ಜನಕ್ಕೆ ಮೊಬೈಲ್ ಒಳಗಡೆ ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಗೆಟಪ್ ಹೇಗಿದೆ ಎನ್ನುವುದೇ ಮುಖ್ಯ. ಸಮಾಜದಲ್ಲಿ ನಿಮ್ಮ ಸಾಧನೆಯ ಅಳತೆಗೋಲು ಅಂದರೆ ಜನರು ನಿಮ್ಮನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಗೆ ನೋಡುತ್ತಾರೆ ಎನ್ನುವುದು. ಪ್ರಭಾವಿ ರಾಜಕಾರಣಿಗಳ ಮೇಕ್ ಓವರ್ ಆಗಿರುವುದೇ ಇಂದು ಸೋಷಿಯಲ್ ಮೀಡಿಯಾದಿಂದ. ಅದಕ್ಕಾಗಿಯೇ ನುರಿತ ತಜ್ಞರು ಇರುತ್ತಾರೆ. ನಮಗೆ ನಾವೇ ನಮ್ಮ ಮೇಕ್ ಓವರ್ ಮಾಡಿಕೊಳ್ಳಬೇಕು. ಜನರ ಮನಸ್ಸನ್ನು ಗೆಲ್ಲುವ ಸ್ಟಾಟರ್ಜಿ ಮೊದಲ ದಿನದಿಂದಲೇ ಇರಬೇಕು. ಹೀಗಾಗಿ ನಾವು ಸೋಷಿಯಲ್ ಮೀಡಿಯಾ ( ಟ್ವಿಟರ್, ವಾಟ್ಸಾಪ್, ಇನ್ಸ್ಟಾಗ್ರಾಮ್, ಲಿಂಕ್‌ಡ್ಇನ್, ಇತ್ಯಾದಿ)ದಲ್ಲಿ ತಮಾಷೆಗಾಗಿ, ಅಥವಾ ಮನರಂಜನೆಗೆ ಅಂತ ಸಮಾಜದ ನಡುವಳಿಕೆಯ ವಿರುದ್ಧ ನಮ್ಮನ್ನು ನಾವು ವ್ಯಕ್ತಪಡಿಸುವಾಗ ಬಹಳ ಕಾಳಜಿ ವಹಿಸಬೇಕು. ಅಗತ್ಯವಿದೆಯೇ? ಅದರ ಪರಿಣಾಮ ಇವತ್ತು ಏನು? ನಾಳೆ ಏನು? ಅದರಿಂದ ನನಗೆ ಏನು ನಷ್ಟ? ಮನೆಯವರಿಗೆ ಏನು ತೊಂದರೆ ಆಗಬಹುದು? ಇವೆಲ್ಲವನ್ನೂ ವಿಚಾರ ಮಾಡಬೇಕು. ಸಮಾಜದಲ್ಲಿ ಬದುಕಿದ ಹಾಗೆ ಸೋಷಿಯಲ್ ಮೀಡಿಯಾದಲ್ಲೂ ಬದುಕಬೇಕು.

ಇತ್ತೀಚೆಗೆ ಕಾನೂನು ಕೂಡ ಅಷ್ಟೇ ಬಲವಾಗಿದೆ, ವಾಟ್‌ಸ್ಆ್ಯಪ್ ಮೆಸೇಜ್, ಟ್ವಿಟರ್ ಸ್ಕ್ರೀನ್ ಶಾಟ್‌ಗಳು ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ಕಾಲೇಜಿನಿಂದ ಹೊರಗಡೆ ಬಂದು ಕೆಲಸ ಹುಡುಕುವಾಗ, ಅಥವಾ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಸ್ವಿಚ್ ಓವರ್ ಮಾಡುವಾಗ ಲಿಂಕ್‌ಡ್ಇನ್ ನಂತಹ ವೃತ್ತಿಪರ ಜಾಲತಾಣಗಳು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ನೀವು ತೀರಾ ರಾಜಕೀಯ ಆಸಕ್ತಿಯನ್ನು ಅಂತಹ ಪ್ರೊಫೆಷನಲ್ ವೆಬ್‌ಸೈಟ್‌ನಲ್ಲಿ ತೋರಿಸದರೆ ಅದು ತಪ್ಪಾಗುತ್ತದೆ. ಹಾಗೆಯೇ ಕೆಲಸದ ಕುರಿತು, ಕಂಪನಿಯ ಕುರಿತು ತೀರಾ ಇತರೆ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ಕೂಡ ಕೆಲಸ. ಒಂದೊಳ್ಳೆ ಇಮೇಜ್ ಬೇಕು ಅಂತ ನಾವು ಹೇಗೆ ಸಮಾಜದಲ್ಲಿ ನಮ್ಮ ವರ್ತನೆಯನ್ನು ಗಮನಿಸುತ್ತೆವೆಯೋ ಹಾಗೆಯೇ ಸೋಷಿಯಲ್ ಮೀಡಿಯಾಲ್ಲಿ ಕೂಡ ನಮ್ಮ ಚಟುವಟಿಕೆಗಳ ಬಗ್ಗೆ ಅತೀವ ಕಾಳಜಿ ವಹಿಸಬೇಕು. ಒಂದು ತಪ್ಪಾದ ಪೋಸ್‌ಟ್ ಸಾಕು ವರ್ಷಗಳ ಇಮೇಜ್ ಕೆಡಿಸಲು, ಯಾಕೆಂದರೆ ವರ್ಚುವಲ್ ಸೊಸೈಟಿ ಇಸ್ ವೆರಿ ಫಾಸ್‌ಟ್ ಆ್ಯಂಡ್ ಫ್ಯುರಿಯಸ್. ಕಾಳಜಿಯಿಂದ ಸೋಷಿಯಲ್ ಮೀಡಿಯಾ ಬಳಸಿ. ಒಂದು ಮಾತು ನೆನಪಿರಲಿ, ನಾಳೆ ಮಕ್ಕಳ ಬದುಕು ನಮ್ಮ ಪ್ರೊಫೈಲ್ ನಿಂದಾಗಿ ಬೇಡ!

Tags

Related Articles

Leave a Reply

Your email address will not be published. Required fields are marked *

Language
Close