About Us Advertise with us Be a Reporter E-Paper

ಗುರು

ಸೋಮದತ್ತನ ಕಥಾಮೃತ… ಬುದ್ಧಿಯ ಬಲ

- ಬೇಲೂರು ರಾಮಮೂರ್ತಿ

ಒಂದು ಕಾಡಿನಲ್ಲಿ ಬಲಿಷ್ಠ ಸಿಂಹವೊಂದು ವಾಸವಾಗಿತ್ತು. ಬಹುಪಾಲು ಪ್ರಾಣಿಗಳು ಸಿಂಹಕ್ಕೆ ಆಹಾರವಾಗುತ್ತಿದ್ದವು. ಪ್ರಾಣಿಗಳು ಎಷ್ಟೇ ಕಷ್ಟಪಟ್ಟರೂ ಸಿಂಹದ ಬೇಟೆಯಿಂದ ತಪ್ಪಿಸಿಕೊಳ್ಳಲು ಆಗುತ್ತಿರಲಿಲ್ಲ. ಹೀಗಾಗಿ ಹಲವು ಪ್ರಾಣಿಗಳು ತಮ್ಮ ಗೂಡನ್ನು ಬಿಟ್ಟು ಹೊರಬರುತ್ತಿರಲಿಲ್ಲ. ಆದರೆ ಆಹಾರಕ್ಕಾಗಿ ಹೊರಬಂದ ಸಂದರ್ಭ ನೋಡಿಕೊಂಡಿದ್ದು ಸಿಂಹ ಬೇಟೆಯಾಡುತ್ತಿತ್ತು. ಬಲಿಷ್ಠ ಪ್ರಾಣಿಗಳಾದ ಆನೆ, ಒಂಟೆ ಕುದುರೆ ಮುಂತಾದುವುಗಳನ್ನು ಕಂಡರೆ ಸಿಂಹಕ್ಕೂ ಹೆದರಿಕೆ ಇತ್ತು. ಹೀಗಾಗಿ ಸಲೀಸಾಗಿ ಸಿಗುವ ಜಿಂಕೆ, ಹಸು, ಎತ್ತು, ಮೇಕೆ ಮುಂತಾದುವುಗಳನ್ನೇ ಕೊಂದು ತಿನ್ನುತ್ತಿತ್ತು. ಹೀಗಾದರೆ ನಮ್ಮ ಸಂತತಿಯೇ ನಾಶವಾಗಿ ಹೋಗುತ್ತದೆ ಎಂದು ಎಲ್ಲ ಪ್ರಾಣಿಗಳೂ ಒಂದು ದಿನ ಸಭೆ ಸೇರಿದವು. ಆ ಸಭೆಗೆ ಆನೆ, ಒಂಟೆ, ಕುದುರೆ ಮುಂತಾದುವೂ ಬಂದವು.

ಎಲ್ಲವೂ ಸಾಕಷ್ಟು ಸಮಯ ಚಿಂತಿಸಿ ಸಿಂಹದ ಪ್ರಭಾವದಿಂದ ವಂಚಿತರಾಗಬಾರದು ಎಂದರೆ ನಾವು ಹೋಗಿ ಸಿಂಹಕ್ಕೆ ಆಹಾರವಾಗೋಣ. ಅದರಿಂದ ಸಿಕ್ಕ ಸಿಕ್ಕ ಪ್ರಾಣಿಗಳನ್ನೆಲ್ಲಾ ಕೊಲ್ಲುವುದು ತಪ್ಪುತ್ತದೆ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದವು. ಆನೆ ಮತ್ತು ಕುದುರೆಗಳ ನೇತೃತ್ವದಲ್ಲಿ ಎಲ್ಲ ಪ್ರಾಣಿಗಳೂ ಸಿಂಹದ ಬಳಿ ಹೋಗಿ, ‘ನಮ್ಮಲ್ಲಿ ಒಬ್ಬರು ದಿನಾ ನಿನಗೆ ಆಹಾರವಾಗಿ ಬರುತ್ತಾರೆ. ನೀನು ಅವರನ್ನು ತಿಂದು ವಿಶ್ರಮಿಸಬೇಕು. ಮೊದಲಿನಂತೆ ಸಿಕ್ಕ ಸಿಕ್ಕ ಪ್ರಾಣಿಗಳನ್ನು ಕೊಲ್ಲುವುದು ಬೇಡ ಎಂದು ವಿನಂತಿಸಿಕೊಂಡವು. ಕಷ್ಟಪಟ್ಟು ಬೇಟೆಯಾಡುವುದು ತಪ್ಪಿ ಆಹಾರವೇ ಬಾಯಿ ಬಳಿಗೆ ಬಂದರೆ ಯಾರು ಸಿಂಹವೂ ಒಪ್ಪಿಕೊಂಡಿತು.

ಅಂದಿನಿಂದ ಒಂದೊಂದೇ ಪ್ರಾಣಿಗಳು ತಾನೇ ಸಿಂಹಕ್ಕೆ ಆಹಾರವಾಗಿ ಹೋಗುತ್ತಿತ್ತು. ಆದರೂ ಇದು ಎಷ್ಟು ದಿನ ನಡೆಯುವುದೋ ಎಂಬ ಆತಂಕವೂ ಇತ್ತು. ಹೇಗೂ ಬೀಸೊ ದೊಣ್ಣೆ ತಪ್ಪಿಸಿಕೊಂಡಂತಾಗಿದೆ ಅಂದುಕೊಂಡವು. ಹೀಗೆ ಒಂದೊಂದು ದಿನ ಒಂದೊಂದು ಪ್ರಾಣಿಯ ಸರದಿ ಬರುತ್ತಿತ್ತು. ಹೀಗಿರುವಾಗ ಅದೊಂದು ದಿನ ಮೊಲದ ಸರದಿ ಬಂತು. ಹೇಗೂ ಸಾಯುವುದು ನಿಶ್ಚಿತ, ಅದಕ್ಕೂ ಮೊದಲು ಒಂದು ಉಪಾಯವನ್ನು ಪ್ರಯೋಗಿಸೋಣ. ಅದು ಫಲಿಸಿದರೆ ಎಲ್ಲ ಪ್ರಾಣಿಗಳಿಗೂ ಲಾಭ ಎಂದುಕೊಂಡು, ಅಂದು ಸಿಂಹದ ಗುಹೆಗೆ ಬಹಳ ತಡವಾಗಿ ಹೋಯಿತು.

ಯಾಕೆ ಇಂದು ಯಾವ ಪ್ರಾಣಿಯೂ ಬರಲಿಲ್ಲವಲ್ಲ ಅಂತ ಸಿಂಹ ಕಾದೂ ಕಾದೂ ಬಹಳ ಕೋಪಗೊಂಡಿತ್ತು. ನಿಧಾನವಾಗಿ ಬರುತ್ತಿದ್ದ ಮೊಲವನ್ನು ಕಂಡೊಡನೆ, ‘ಯಾಕಿಷ್ಟು ತಡವಾಗಿ ಬಂದೆ?’ ಎಂದು ಘರ್ಜಿಸಿತು. ಮೊಲವು ವಿನಮ್ರತೆಯಿಂದ ‘ನಿನಗೆ ಆಹಾರವಾಗಬೇಕು ಅಂತ ಬೆಳಗ್ಗೆಯೇ ಹೊರಟೆ. ಆದರೆ ದಾರಿಯಲ್ಲಿ ಇನ್ನೊಂದು ಸಿಂಹ ನನ್ನನ್ನು ತಿನ್ನಲು ಬಂದಿತು. ನೀನು ನನ್ನನ್ನು ತಿನ್ನುವಂತಿಲ್ಲ, ನಾನು ಇನ್ನೊಂದು ಸಿಂಹಕ್ಕೆ ಆಹಾರ ಅಂತ ಹೇಳಿದ್ದಕ್ಕೆ, ಬಿಟ್ಟು ಅದ್ಯಾವ ಸಿಂಹ ನಿನ್ನನ್ನು ತಿನ್ನುವುದು ಎಂದು ನನ್ನ ಮೇಲೆ ಎಗರಲು ಬಂದಿತು. ಅದರಿಂದ ತಪ್ಪಿಸಿಕೊಂಡು ಬರುವುದರೊಳಗೆ ಇಷ್ಟು ತಡವಾಯಿತು’ ಎಂದು ಕಾರಣ ಹೇಳಿತು. ಅದನ್ನು ಕೇಳಿ ಕೋಪಗೊಂಡ ಸಿಂಹ ‘ನಾನಿರುವ ಕಾಡಿನಲ್ಲಿ ಅದ್ಯಾವುದು ಇನ್ನೊಂದು ಸಿಂಹ. ನನ್ನ ಆಹಾರಕ್ಕೆ ಅಡ್ಡಗಾಲು ಹಾಕಿರುವ ಅದನ್ನು ಬೇಟೆಯಾಡುತ್ತೇನೆ. ಅದೆಲ್ಲಿದೆ ತೋರಿಸು’ ಎಂದಿತು.

ಸರಿ ಎಂದು ಮೊಲವು ಸಿಂಹವನ್ನು ಅರ್ಧ ಕಾಡು ಅಲೆಸಿ ದೂರದಲ್ಲಿದ್ದ ಪಾಳು ಬಾವಿಯ ಬಳಿ ಬಂದು ನಿಂತಿತು. ಬಹಳ ಸಿಟ್ಟಿನಿಂದ ‘ಏನು ಇನ್ನೊಂದು ಸಿಂಹವನ್ನು ತೋರಿಸುತ್ತೇನೆ ಅಂತ ಕಾಡೆಲ್ಲ ಅಲೆಸಿ ಸುಸ್ತು ಮಾಡಿದ್ದೀಯ. ಅದೆಲ್ಲಿದೆ ಹೇಳು? ಎಂದು ಜೋರಾಗಿ ಘರ್ಜಿಸಿತು. ಆಗ ಮೊಲವು ಮೆಲುದನಿಯಲ್ಲಿ ‘ಜೋರಾಗಿ ಕಿರುಚಬೇಡಿ, ಆ ಸಿಂಹವು ಈ ಬಾವಿಯಲ್ಲಡಗಿದೆ. ನೀವೇ ನೋಡಿ’ ಎಂದಿತು.

ಸಿಟ್ಟಿನಿಂದ ಬಾವಿಯ ಕಟ್ಟೆಯ ಮೇಲೆ ಎರಡೂ ಕಾಲುಗಳನ್ನಿಟ್ಟು ಒಳಗೆ ಇಣುಕಿ ನೋಡಿದಾಗ ಸಿಂಹಕ್ಕೆ ಅದರ ಪ್ರತಿಭಿಂಬವೇ ಕಾಣಿಸಿತು. ಮತ್ತೊಂದು ಸಿಂಹವನ್ನು ನೋಡಿ ಜೋರಾಗಿ ಘರ್ಜಿಸಿದಾಗ ಅದರ ಪ್ರತಿಧ್ವನಿಯೇ ಕೇಳಿಸಿತು. ರಾಜನಾದ ನನಗೇ ಇಷ್ಟು ಅಗೌರವ ತೋರಿಸುತ್ತೀಯಾ? ಕೂಡಲೇ ನಿನ್ನನ್ನು ಮುಗಿಸುತ್ತೇನೆ ಎಂದು ಕೂಡಲೇ ಬಾವಿಯೊಳಗೆ ನೆಗೆಯಿತು.

ಪಾಳುಬಾವಿಯೊಳಗೆ ಬಿದ್ದು ಮೇಲೇರಲಾಗದೆ ಅಲ್ಲೇ ಸಿಂಹವು ಪ್ರಾಣ ಬಿಟ್ಟಿತು. ಹೀಗೆ ಮೊಲದ ಬುದ್ಧಿಯ ಬಲದಿಂದ ಕಾಡಿನ ಇತರ ಪ್ರಾಣಿಗಳು ನೆಮ್ಮದಿಯ ಜೀವನ ನಡೆಸುವಂತಾಯಿತು.

Tags

Related Articles

Leave a Reply

Your email address will not be published. Required fields are marked *

Language
Close