About Us Advertise with us Be a Reporter E-Paper

ವಿ +

ಒತ್ತಡ ಹಿಮ್ಮೆಟ್ಟಿಸಬೇಕೇ ಇಲ್ಲಿದೆ ಟಿಪ್ಸ್

- ಶಿಶಿರ್ ಮುದೂರಿ

ನಿತ್ಯದ ಜಂಜಾಟದಲ್ಲಿ ಒತ್ತಡ ಹೆಚ್ಚುತ್ತಾ ಹೆಚ್ಚುತ್ತಾ, ಅದೊಂದು ಪ್ರೆಷರ್ ಕುಕರ್ ರೀತಿ ಅಪಾಯ ಕಾರಿ ಮಟ್ಟವನ್ನೂ ಮುಟ್ಟಬಹುದು! ಒತ್ತಡಗಳು ಅಪಾಯದ ಮಟ್ಟವನ್ನು ಮುಟ್ಟುವ ಮೊದಲೇ, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಸಮಂಜಸ. ಒತ್ತಡ ಅನುಕೂಲ ಎನಿಸುವ ನಾಲ್ಕು ಸೂತ್ರಗಳು ಇಲ್ಲಿವೆ.

ಆಶಾ ಭಾವನೆ ಹೊಂದಿರುವುದು ಸದಾ ಮುಖ್ಯ. ಆಶಾ ಭಾವನೆ ಹೊಂದಿರುವ ವ್ಯಕ್ತಿಯು ಎಂತಹದ್ದೇ ತೊಡಕು ಎದುರಾದಾಗಲೂ, ತಕ್ಷಣ ಅದರ ಕುರಿತು ಯೋಚಿಸಿ, ಆ ತೊಡಕನ್ನು ನಿವಾರಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಸಮಸ್ಯೆಯನ್ನು ವಿಶ್ಲೇಷಿಸಿ, ಅದನ್ನು ನಿವಾರಿಸುವ ಸಲುವಾಗಿ, ಆ ಸಮಸ್ಯೆಯ ಒಂದು ಭಾಗವನ್ನೇ ಸಕಾರಾತ್ಮಕವಾಗಿ ಪರಿವರ್ತಿಸುವ ಕಲೆ ಅಂತಹವರಲ್ಲಿ ಇರುತ್ತದೆ.

*ಮನುಷ್ಯನ ಮಿದುಳಿಗೆ ಒಂದು ಶಕ್ತಿ ಇದೆ. ಅದನ್ನೇ ದೌರ್ಬಲ್ಯ ಎಂದು ಸಹ ಒಂದು ಬಾರಿ ಒಂದು ವಿಚಾರದ ಕುರಿತು ಮಾತ್ರ ಮಿದುಳು ಯೋಚಿಸಬಲ್ಲದು. ಬೇಸರ, ಯೋಚನೆ, ಚಿಂತೆಯನ್ನೇ ತುಂಬಿಕೊಂಡರೆ, ಅಲ್ಲಿ ಸಕರಾತ್ಮಕ ಯೋಚನೆಗಳಿಗೆ ತಾವೆಲ್ಲಿ? ಆದ್ದರಿಂದ ಸಕರಾತ್ಮಕ ಮತ್ತು ಉತ್ಸಾಹ ತುಂಬುವ ವಿಚಾರಗಳ ಕುರಿತು ಯೋಚಿಸಬೇಕು.

*ಬಳಸುವ ಭಾಷೆ ವ್ಯಕ್ತಿಯೊಬ್ಬನ ಜೀವನದಲ್ಲಿ ಆತ ಬಳಸುವ ಭಾಷೆ ಆತನ ವ್ಯಕ್ತಿತ್ವವನ್ನು ನಿರ್ಧರಿಸಬಲ್ಲದು. ನೆಗೆಟಿವ್ ವಿಚಾರಗಳನ್ನೇ ಹೇಳುತ್ತಾ ಇರುವುದರ ಬದಲು, ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದಾಗಲೂ, ಸಕರಾತ್ಮಕ ಮತ್ತು ಪೊಸಿಟಿವ್ ಆಗಿಯೇ ಮಾತನಾಡಬೇಕು. ನಾವು ಕುಗ್ಗಿದ್ದೇವೆ ತೋರಿಸಿಕೊಳ್ಳದೆ, ಸಕಾರಾತ್ಮಕವಾಗಿ ಮಾತನಾಡುತ್ತಾ ಇತರರಲ್ಲಿ ಹುರುಪು ತುಂಬಿದಾಗ, ಸಮಸ್ಯೆ ನಿವಾರಣೆ ಸುಲಭವಾಗುತ್ತದೆ.

ಇದಕ್ಕೆ ಒಂದು ಪುಟ್ಟ ತಂತ್ರ ಇದೆ. ‘ಸಮಸ್ಯೆ’ ಅಥವಾ ‘ತೊಂದರೆ’ ಎಂಬ ಶಬ್ದದ ಬದಲು, ‘ಪರಿಸ್ಥಿತಿ’ ಶಬ್ದವನ್ನು ಉಪಯೋಗಿಸುವುದರಿಂದ, ಸಮಸ್ಯೆಯನ್ನು ಬೇರೊಂದು ದೃಷ್ಟಿಕೋನದಲ್ಲಿ ನೋಡಲು ಸಾಧ್ಯ. ಒಂದು ಘಟನೆಯನ್ನು ಪರಿಹರಿಸಲು ಎದುರಾದ ಒಂದು ಘಟನೆ ಎಂದು ವಿಶ್ಲೇಷಿಸುವುದರ ಮೂಲಕ ಆ ‘ಸಮಸ್ಯೆ’ಯನ್ನು ಬೇಗನೆ ನಿವಾರಿಸುವ ಸಾಧ್ಯತೆ ಹೆಚ್ಚುತ್ತದೆ.

‘ಪರಿಸ್ಥಿತಿ’ ಎಂಬ ಶಬ್ದಕ್ಕಿಂತ ‘ಸವಾಲು’ ಎಂಬ ಶಬ್ದ ಸಕಾರಾತ್ಮಕ ಮತ್ತು ಚುರುಕಿನದ್ದು. ‘ನನಗೊಂದು ಸಮಸ್ಯೆ ಎದುರಾಗಿದೆ, ಏನು ಮಾಡುವುದೋ ಎಂಬ ಚಿಂತೆ ಹತ್ತಿದೆ’ ಎನ್ನುವ ಬದಲು ‘ನನ್ನ ಎದುರು ಒಂದು ಕುತೂಹಲಕಾರಿ ಸವಾಲು ಎದುರಾಗಿದೆ, ಅದನ್ನು ಸುಲಭವಾಗಿ ಪರಿಹರಿಸಲು ಮಾರ್ಗ ಇನ್ನೇನು ದೊರಕುವ ಹಂತದಲ್ಲಿದೆ’ ಎಂದಾಗ, ಭಾಷೆಯ ಬಳಕೆಯ ಪ್ರಾಮುಖ್ಯತೆ ಅರಿವಾದೀತು. ‘ಸವಾಲು’ ಎಂಬ ಶಬ್ದವೇ ಮನುಷ್ಯನಲ್ಲಿ ಹುರುಪನ್ನು , ಉತ್ಸಾಹವನ್ನು ತುಂಬುತ್ತದೆ.

*ಕಠಿಣ ಎನಿಸುವ ಪರಿಸ್ಥಿತಿ ಎದುರಾದಾಗ, ಅದನ್ನು ಬಗೆಹರಿಸಲು ಕೆಲವು ಸರಳ ಮಾರ್ಗಗಳನ್ನು ಅನುಸರಿಸಬಹುದು. ನಿಡಿದಾಗಿ ಶ್ವಾಸ ತೆಗೆದುಕೊಂಡು, ರಿಲಾಕ್‌ಸ್ ಆಗಬೇಕು. ಒಂದೆರಡು ನಿಮಿಷ ನಿಶ್ಶಬ್ದವಾಗಿ, ಧ್ಯಾನಸ್ಥ ಸ್ಥಿತಿಯನ್ನು ಹೋಲುವಂತೆ ಕುಳಿತು ನಮಗೆ ನಾವೇ ಹೇಳಿಕೊಳ್ಳಬೇಕು :

‘ಈಗ ಸಂತಸದಲ್ಲಿದ್ದೇನೆ, ಉಲ್ಲಾಸದಲ್ಲಿದ್ದೇನೆ, ಚಿಂತೆ ದೂರವಾಗುತ್ತಿದೆ’
ಈ ರೀತಿ ನಾಲ್ಕಾರು ಬಾರಿ ಮೌನವಾಗಿ ಅಥವಾ ನಿಮಗೆ ಕೇಳುವಂತೆ ಹೇಳಿಕೊಳ್ಳಬೇಕು.
ಆ ನಂತರ ‘ಸರಿ, ಈಗ ಕಾರ್ಯಮುಖನಾಗುತ್ತೇನೆ. ಕೆಲಸ ಮಾಡುವುದೆಂದರೆ ನನಗೆ ಇಷ್ಟ. ಕೆಲಸ ಎಂದರೆ ನನಗೆ ಬೇಸರ ಇಲ್ಲ. ಇದಕ್ಕೆ ಪರಿಹಾರವಾಗಿ ಮೊದಲಿಗೆ ಈ ಕೆಲಸ ಎಂದು ಪರಿಸ್ಥಿತಿಯನ್ನು ನಿಭಾಯಿಸಲು ಏನು ಮಾಡಬೇಕು, ಅದರ ಮೊದಲ ಹೆಜ್ಜೆಯನ್ನು ಇಡಬೇಕು. ಒಂದೊಂದೇ ಹೆಜ್ಜೆ ಇಡುತ್ತಾ ಸಾಗಿದರೆ, ಗುರಿ ಮುಟ್ಟಬಹುದು.

ಒಂದನ್ನು ನೆನಪಿಡಿ : ಒಬ್ಬ ಯಶಸ್ವಿ ವ್ಯಕ್ತಿಯಾಗಲು, ಸಂತಸ ತುಂಬಿದ ವ್ಯಕ್ತಿ ಆಗಲು ಸ್ವಲ್ಪ ಕಷ್ಟ ಪಡಬೇಕು. ಜೀವನದಲ್ಲಿ ಕೆಲವು ತೊಡಕುಗಳು, ಸಮಸ್ಯೆಗಳು ಎಲ್ಲರಿಗೂ ಬರುತ್ತವೆ. ಅವುಗಳನ್ನು ಬೇಗನೆ, ತ್ವರಿತವಾಗಿ ಪರಿಹರಿಸಿಕೊಂಡಷ್ಟೂ, ಚಿಂತೆ ದೂರವಾಗುತ್ತದೆ, ಸಂತಸ ಹತ್ತರ ಬರುತ್ತದೆ, ಉಲ್ಲಾಸ ತುಂಬುತ್ತದೆ. ಬೇಸರಗೊಳ್ಳದೆ ಕೆಲಸದಲ್ಲಿ, ಕಾರ್ಯದಲ್ಲಿ ತೊಡಗಿಕೊಂಡಾಗ ಕಟ್ಟಿಟ್ಟ ಬುತ್ತಿ.

Tags

Related Articles

Leave a Reply

Your email address will not be published. Required fields are marked *

Language
Close