About Us Advertise with us Be a Reporter E-Paper

ವಿರಾಮ

ಕವಿಶೈಲದಲ್ಲಿ ಕುವೆಂಪು ಮಾತನಾಡಿದಾಗ

ಅಂಜನಾದ್ರಿ

‘ಕುವೆಂಪುರವರೊಡನೆ ಮಾತನಾಡ ಬೇಕು’  ಕೇವಲ ಕುಪ್ಪಳಿ ಮತ್ತು ಕವಿಶೈಲದೊಂದಿಗಿನ ಅಭಿಮಾನ ಮಾತ್ರವಲ್ಲದೆ, ಈ ಕವಿಶೈಲದಲ್ಲಿ ಕುಳಿತು ಕುವೆಂಪುರವರ ಕೆಲವು ರಚನೆಗಳನ್ನು ಅನುಸಂಧಾನ ಮಾಡಿದರೆ ಅವರೊಂದಿಗೆ ಮಾತನಾಡಿದಷ್ಟೇ ಸಮಾಧಾನ. ನಿಸರ್ಗ ಪ್ರಿಯರಾದ ಕುವೆಂಪುರವರು ಪ್ರಕೃತಿಯಲ್ಲಿ ಪರಮಾತ್ಮನನ್ನು ಕಂಡವರು. ಕವಿ ಮನಸ್ಸಿಗೆ ಪ್ರಕೃತಿಯಾರಾಧನೆಯು ಪರಮಾತ್ಮನ ಆರಾಧನೆಯಾಗಿರುತ್ತದೆ ಎಂಬುದಕ್ಕೆ ಅವರ ‘ಆನಂದಮಯ ಈ ಜಗಹೃದಯ’ ಕವನದ ಸಾಲುಗಳು ಸಾಕ್ಷಿ.

ಉದಯದಳೇನ್ ಹೃದಯವ ಕಾಣ್

ಅದೆ ಅಮೃತದ ಹೆಣ್ಣೋ

ಶಿವಕಾಣದ ಕವಿ ಕುರುಡನೊ

ಶಿವ ಕಾವ್ಯದ ಕಣ್ಣೊ

ರವಿವದನವೆ

ಬರಿಕಣ್ಣದು ಮಣ್ಣೊ

ಶಿವನಲ್ಲದೆ ಸೌಂದರ್ಯವೆ?

ಶಿವ ಮುಖದ ಕಣ್ಣೊ

ಕುವೆಂಪು ಹುಟ್ಟಿದ್ದೇ ನಿಸರ್ಗದ ಮಡಿಲಲ್ಲಿ. ಅವರ ಉಸಿರೇ ಹಸಿರು ಮತ್ತು ಪ್ರಕೃತಿ. ಮಲೆನಾಡಿನ ಹಸಿರನ್ನು,

‘ಹಸುರಾಗದ, ಹಸಿರು ಮುಗಿಲು;

ಹಸುರು ಗದ್ದೆಯೀ ಬಯಲು;

ಹಸುರಿನ ಮಲೆ; ಹಸಿರು ಕಣಿವೆ;

ಹಸುರು ಸಂಜೆ ಈ ಬಿಸಿಲು’

ಎಂದು ಹೇಳುವ ಕುವೆಂಪುರವರು ಕವಿಶೈಲದ ರಮಣೀಯ ಪ್ರಕೃತಿ ಸೊಬಗನ್ನು ಹೀಗೆ ಕಂಡಿದ್ದಾರೆ:

‘ಹಸುರತ್ತಲ್! ಹಸುರಿತ್ತಲ್!

ಹಸುರೆತ್ತಲ್ ಕಡಲಿನಲಿ

ಹಸುರ್ಗಟ್ಟಿತೋ ಕವಿಯಾತ್ಮಂ

ಹಸುರು ನೆತ್ತರ್

ಕುವೆಂಪುರವರು ಹುಟ್ಟಿದ ಜಾಗದ ಮಣ್ಣಿನ ವಾಸನೆಗೆ ಮತ್ತು ಪರಿಸರದ ಕವಿಶೈಲಕ್ಕೆ ಮಾರು ಹೋಗಿದ್ದರು. ಅವರ ಆಹಾರ, ಧ್ಯಾನ, ಉಸಿರು ಮುಂತಾದುವೆಲ್ಲವೂ ಆ ಕವಿಶೈಲದ ಗಿರಿಪಂಕ್ತಿಗಳು.

ಕುವೆಂಪುರವರು ತಮ್ಮ ‘ಮಲೆನಾಡಿನ ಚಿತ್ರಗಳು’ ಪುಸ್ತಕದಲ್ಲಿ ಕವಿಶೈಲವನ್ನು ‘ಕಣ್ಣಿಲ್ಲದವನಿಗೆ ಅದು ಒಂದು ಕಲ್ಲುಕಾಡು, ಕಲಾವಿದನಿಗೆ ಸಗ್ಗವೀಡು’ ಎಂದು ಬಣ್ಣಿಸುತ್ತಾರೆ. ಅಷ್ಟೇ ಅಲ್ಲದೆ, ‘ನಾನು ಮೈಸೂರಿನಲ್ಲಿದ್ದರೂ ಪ್ರತಿದಿನ ಪ್ರಾತಃಕಾಲ ಸಮಯದಲ್ಲಿ ಮಲೆನಾಡಿನ ನವಿಲುಕಲ್ಲಿನಲ್ಲೂ, ಪ್ರತಿಸಂಜೆ ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡುತ್ತೇನೆ. ಅಲ್ಲಿನ ಪರ್ವತ ಶ್ರೇಣಿ,  ಹಸುರು ಹೊದ್ದಿಕೆಯ ಅರಣ್ಯ, ಪಕ್ಷಿಗಳ ಕಲರವ, ಕಾನನದ ಗಂಭೀರ ಮೌನ, ಸಂಧ್ಯೆಯಲಿ ಮಿಳಿತವಾಗುವ ಕಿರಣಗಳ ಬಣ್ಣನೆ ಮುಂತಾದುವನ್ನು ನೆನೆದರೆ ತನುವಿನಲ್ಲಿ ಮಿಂಚಿನ ಹೊನಲು ಹರಿದು, ಹೃದಯ ಕಂಪಿಸಿ ಮನವು ಭಾವವೇಶದಲ್ಲಿ ಮೈಮರೆ ಯುತ್ತದೆ’ ಎನ್ನುತ್ತಾರೆ.

‘ಕವಿಶೈಲದಲ್ಲಿ ಸಂಜೆ’ ಕವನದಲ್ಲಿ ಭಾವನಾತ್ಮಕವಾಗಿ ಕುವೆಂಪು ಬರೆದದ್ದು ಹೀಗೆ:

‘ಪಶ್ಚಿಮ ಗಿರಿಶಿಖರದಲಿ ಸಂಧ್ಯೆಯ ರವಿ

ನಿರ್ಜನ ಕವಿಶೈಲದೊಳಗೊಬ್ಬನೆ ಕವಿ

ಮಲೆನಾಡಿನ ಬುವಿ ಮೇಲರುಣಚ್ಛವಿ

ವಸಂತ ಸಂಧ್ಯಾ ಸುವರ್ಣಕ್ರಾಂತಿ-

ಅನಂತ ಶಾಂತಿ’

ಕವಿಶೈಲವನ್ನು ಪಕ್ಷಿಕಾಶಿಯಾಗಿ  ಕುವೆಂಪುರವರಿಗೆ ನಿಸರ್ಗದ ಶಿಖರಗಳು, ವ್ಯಾಘ್ರ ಭಲ್ಲೂಕಗಳು, ಅಸಂಖ್ಯಾತ ಪಕ್ಷಿ ಸಂಕುಲಗಳು……ಈ ಜೀವಕಾಶಿಯನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಕವಿ ಹೃದಯ ಮಾರ್ದನಿಸುತ್ತದೆ. ಸಮಾಜದಲ್ಲಿ ಕಾಣಬರುವ ದ್ವಂದ್ವನೀತಿಯ ಜನರಿಗೆ ಕವಿ ಹೃದಯ ಹೇಳುತ್ತದೆ, ‘ಇಲ್ಲಿ ನಿನಗೆ ಪ್ರವೇಶವಿಲ್ಲ. ಇದು ಪಕ್ಷಿಕಾಶಿ. ಶಕ್ತಿಯ ಕಾವಲಿದೆ. ಕೊಲ್ಲುವ ಬತ್ತಳಿಕೆ, ಬಿಲ್ಲುಬಾಣಗಳನ್ನು ಅಲ್ಲೇ ಇಟ್ಟು, ಬಿಂಕಮಾತು, ಯುಕ್ತಿಯನ್ನು ತ್ಯಜಿಸಿ, ಕೈಮುಗಿದು ಗರ್ವವನ್ನಳಿದು ಬಾ, ನಾಡಿ ನಾಡಿಯಲ್ಲಿ ಮೋಕ್ಷ ಪಕ್ಷಿಯ ಉಲುಹು ಹರಿವಂತೆ ನಲಿದು ಬಾ’ ಎಂದು ಮಾನವರನ್ನು

‘ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ

ಇದು ಪಕ್ಷಿಕಾಶಿ

….

ಬಿಂಕದುಕುತಿಯನು ಕೊಂಕು

ಯುಕುತಿಯನು ಅಲ್ಲೆ ಬಿಟ್ಟು ಬಾ,

ಮೈಯ ತೊಳೆದು ಬಾ, ಕಯ್ಯ ಮುಗಿದು ಬಾ,

ಹಮ್ಮನುಳಿದು ಬಾ,

ಇಕ್ಷು ಮಧುರಮೆನೆ ಮೋಕ್ಷ ಪಕ್ಷಿಯಲಿ

ನಾಡಿ ನಾಡಿಯಲಿ ಹಾಡಿ ಹರಿದು

ನಲಿದಾಡಬಹುದು ಬಾ

ಅಂದು ಕುಪ್ಪಳಿಯ ಮನೆ ಮತ್ತು ಕವಿಶೈಲದಲ್ಲಿ ಸುಮಾರು ಮೂರು ತಾಸು ತಿರುಗಾಡುವಾಗ ಕುವೆಂಪುರವರ ಹಲವು ಕವನಗಳು ನೆನಪಾದವು. ಅವುಗಳ ಗುನುಗಿನಲ್ಲಿ ಕವಿಯೊಡನೆ ಅನುಸಂಧಾನ  ಮೈಮನ ಹಗುರವಾಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close