ಕನ್ನಡ ಮಾತಾಡುವುದೇ ಕನ್ನಡ ಉಳಿಸುವ ಮಾರ್ಗ

Posted In : ಅಂಕಣಗಳು, ಇದೇ ಅಂತರಂಗ ಸುದ್ದಿ

ಪಾಟೀಲ ಪುಟ್ಟಪ್ಪನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದಂದಿನಿಂದ ಎಸ್.ಜಿ.ಸಿದ್ದರಾಮಯ್ಯನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ತನಕ ಆಯಾ ಕಾಲಕ್ಕೆ ಅಧಿಕಾರಕ್ಕೆ ಬಂದ ಅಧ್ಯಕ್ಷರೆಲ್ಲ ರಾಜಧಾನಿಯಲ್ಲಿ ಇಂಗ್ಲಿಷ್ ಬೋರ್ಡ್‌ಗಳ ಹಾವಳಿ, ಆಡಳಿತದಲ್ಲಿ ಕನ್ನಡ ಜಾರಿ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಬಗ್ಗೆ ಪ್ರತಿಪಾದಿಸುತ್ತಲೇ ಬಂದಿದ್ದಾರೆ.ಆದರೆ ಪರಿಣಾಮ ಮಾತ್ರ ತೃಪ್ತಿದಾಯಕವಾಗಿಲ್ಲ. ಮೊನ್ನೆ ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ಬಹಳ ಬೇಸರದಿಂದ ಇದೇ ವಿಷಯದ ಬಗ್ಗೆ ಮಾತಾಡಿದ್ದಾರೆ.ಅಂದರೆ ಕಳೆದ ಮೂರು ದಶಕಗಳಿಂದ ಪ್ರಾಧಿಕಾರದ ಅಧ್ಯಕ್ಷರಾದವರು ಹೇಳಿದ್ದನ್ನೇ ಹೇಳುತ್ತಾ ಗಂಟಲು ಹರಿದುಕೊಂಡರೂ, ಅದರಿಂದ ಅಪೇಕ್ಷಿತ ಫಲ ಮಾತ್ರ ದೊರಕದಿರುವುದು ಮಾತ್ರ ದುರ್ದೈವವೇ ಸರಿ.

ಹಾಗೆಂದು ಪುಟ್ಟಪ್ಪನವರಿಂದ ಸಿದ್ದರಾಮಯ್ಯನವರೆಗೆ ಎಲ್ಲರೂ ಕನ್ನಡಿಗರನ್ನು ಉದ್ದೇಶಿಸಿಯೇ ಮಾತಾಡಿರುವುದು.ಈ ಅವಧಿಯಲ್ಲಿ ಅಧಿಕಾರದಲ್ಲಿದ್ದದ್ದು ಸಹ ಕನ್ನಡಿಗರ ಮತ್ತು ಕನ್ನಡ ಸರಕಾರವೇ. ತಮಿಳುನಾಡಿನಲ್ಲಿ ತಮಿಳರಲ್ಲದವರು ಮುಖ್ಯಮಂತ್ರಿಯಾಗಿದ್ದಾರೆ.ಆದರೆ ಕರ್ನಾಟಕದಲ್ಲಿ ಕನ್ನಡಿಗರ ಹೊರತಾಗಿ ಅನ್ಯ ಭಾಷಿಕರು ಮುಖ್ಯಮಂತ್ರಿಯಾಗಿಲ್ಲ.ಆದರೂ ಕನ್ನಡದ ಬಗ್ಗೆ ತಾತ್ಸರ ಏಕೆ ಎಂಬುದೇ ಅರ್ಥವಾಗುವುದಿಲ್ಲ.

ಹಾಗೆ ನೋಡಿದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕಾದ ಅಗತ್ಯವೇ ಇರಲಿಲ್ಲ.ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಬೇಕು ಎಂದು ಹೇಳಲು ಪ್ರತ್ಯೇಕ ಪ್ರಾಧಿಕಾರ ಬೇಕಾ ? ಸರಿ,ಪ್ರಾಧಿಕಾರ ರಚನೆಯಾಗಿ ಇಷ್ಟು ವರ್ಷಗಳಾಯಿತಲ್ಲ, ಅದು ಯಾವ ಉದ್ದೇಶಕ್ಕಾಗಿ ರಚನೆಯಾಗಿದೆಯೋ,ಆ ಉದ್ದೇಶವಾದರೂ ಈಡೇರಬೇಕಿತ್ತಲ್ಲ, ಅದೂ ಆಗಿಲ್ಲ.ಆದರೆ ಪ್ರಾಧಿಕಾರದ ಅಗತ್ಯ ಹಿಂದೆಂದಿಗಿಂತಲೂ ಈಗ ಜಾಸ್ತಿಯಾದಂತಿದೆ.ಕಾರಣ ಕನ್ನಡಕ್ಕೆ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ.

ಕರ್ನಾಟಕದಲ್ಲಿ ಕನ್ನಡಿಗರು ಕನ್ನಡವನ್ನು ಬಳಸಬೇಕೆ ಹೊರತು ಅಮೇರಿಕಾ,ಇಂಗ್ಲೆಂಡ್, ಜಪಾನ್‌ನಿಂದ ಬಂದವರಲ್ಲ ಅಥವಾ ಪರ ರಾಜ್ಯಗಳ ಜನ ಕನ್ನಡವನ್ನು ಉದ್ಧಾರ ಮಾಡಬೇಕೆಂದು ಯಾರೂ ಅಪೇಕ್ಷಿಸುವುದಿಲ್ಲ.ನಮ್ಮ ಕನ್ನಡಿಗರಿಗೆ ಅದೇನಾಗಿದೆಯೋ ಜಾಡ್ಯ, ಗೊತ್ತಿಲ್ಲ.ಕನ್ನಡವನ್ನು ಬಳಸಿ,ಕನ್ನಡ ಬೋರ್ಡ್ ಹಾಕಿ, ಕನ್ನಡದಲ್ಲಿ ಮಾತಾಡಿ ಎಂದು ಹೇಳಬೇಕು ! ಈಗಂತೂ ಕನ್ನಡವನ್ನು ಉಳಿಸಿ ಎಂದು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರ ನಾಲಗೆ ಮೇಲೆ ಇಂಗ್ಲಿಷ್ ಉಲಿಯುತ್ತಿದೆ. ನಮ್ಮ ಭಾಷೆಯ ಬಗ್ಗೆ ನಮಗೇ ಮೋಹ, ಮಮತೆ ಇಲ್ಲ.ಇಂಥ ಅಭಿಮಾನ ಶೂನ್ಯತೆಗೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಜಗತ್ತಿನ ಎಲ್ಲ ದೇಶಗಳಲ್ಲೂ ಸ್ಥಳಿಯರು ತಮ್ಮ ಭಾಷೆಯನ್ನೂ ಜತನದಿಂದ ಕಾಪಾಡಿಕೊಂಡಿದ್ದಾರೆ. ಇಸ್ರೇಲ್ ನಲ್ಲಿ ಯಹೂದಿಯರು ಯಾರೂ ಬಳಸದೇ, ಸತ್ತು ಹೋದ ಹೀಬ್ರೂ ಭಾಷೆಗೆ ಮರುಜೀವ ಕೊಟ್ಟಿದ್ದಾರೆ.ಇಡೀ ದೇಶದಲ್ಲಿ ಹೀಬ್ರೂ ನಕ್ಷತ್ರದಂತೆ ಕಂಗೊಳಿಸುತ್ತದೆ.

ಹೀಬ್ರೂ ಹೊಡೆತಕ್ಕೆ ಇಂಗ್ಲಿಷ್ ಕಲ್ಲವಿಲಗೊಂಡಿದೆ. ಹೀಬ್ರೂ ಇಲ್ಲದೆ ಇಸ್ರೇಲ್ ನಲ್ಲಿ ಜೀವಿಸುವುದು ಕಷ್ಟ. ಹೀಬ್ರೂ ಭಾಷೆಯನ್ನೇ ಎಲ್ಲರೂ ಬಳಸಬೇಕು,ಎಲ್ಲರೂ ಆ ಭಾಷೆಯಲ್ಲೇ ವ್ಯವಹರಿಸಬೇಕು ಎಂದು ಅಲ್ಲಿನ ಸರಕಾರ ಕಾಲಕಾಲಕ್ಕೆ ಆದೇಶ ಹೊರಡಿಸುವುದಿಲ್ಲ. ಹೀಬ್ರೂ ಅಭಿವೃದ್ಧಿ ಪ್ರಾಧಿಕಾರವೂ ಅಲ್ಲಿಲ್ಲ. ಎಲ್ಲರೂ ಹೀಬ್ರೂ ಭಾಷೆಯಲ್ಲೇ ಬೋರ್ಡ್ ಬರೆಯಿಸಬೇಕು ಎಂದು ಸರಕಾರ ಆದೇಶಿಸುವುದಿಲ್ಲ. ಆದರೂ ಜನರೇ ಈ ಎಲ್ಲವನ್ನೂ ತಮ್ಮ ಮನೆಯ ಕೆಲಸ ಎಂಬಂತೆ ಮಾಡುತ್ತಿದ್ದಾರೆ. ಇಂದಿಗೂ ಲಂಡನ್ ನಿಂದ ವಿಮಾನದಲ್ಲಿ ಕೇವಲ ಒಂದೂಕಾಲು ಗಂಟೆ ದೂರದಲ್ಲಿರುವ ಪ್ಯಾರಿಸ್ ನಲ್ಲಿ ಇಂಗ್ಲಿಷ್ ತಳವೂರಲು ಫ್ರೆಂಚರು ಅವಕಾಶ ಕೊಟ್ಟಿಲ್ಲ. ವಿಮಾನ ನಿಲ್ದಾಣದಿಂದ ಹಿಡಿದು ದೇಶದ ತುಂಬೆಲ್ಲ ಬರೀ ಫ್ರೆಂಚ್ ಬೋರ್ಡ್‌ಗಳೇ. ಬೇರೆ ದೇಶಗಳಿಂದ ಬಂದವರಿಗೆ ತೊಂದರೆಯಾಗಬಹುದೆಂಬ ರಿಯಾಯತಿಯನ್ನೂ ತೋರಿಲ್ಲ. ಆ ನೆಪದಲ್ಲಿ ಇಂಗ್ಲಿಷ್ ಬಂದು ಬೇರೂರಿದರೆ ಎಬ್ಬಿಸುವುದು ಕಷ್ಟ ಎಂದು ಅವರು ಆ ಭಾಷೆಗೆ ಅನುಮತಿಯನ್ನೇ ಕೊಟ್ಟಿಲ್ಲ.

‘ನಮ್ಮ ಭಾಷೆಯನ್ನು ನಾವೇ ಬಳಸದಿದ್ದರೆ ಬೇರೆಯವರು ಬಂದು ಬಳಸುತ್ತಾರಾ?’ ಎಂದು ಫ್ರೆಂಚರು ತಮ್ಮ ಮಕ್ಕಳಿಗೆ ಸಣ್ಣವರಿದ್ದಾಗಲೇ ಹೇಳಿಕೊಡುತ್ತಾರೆ. ಅವರಿಗೆ ಮಾತೃಭಾಷೆಯೇ ಸರ್ವಸ್ವ. ಕಲುಷಿತವಾದ ನೀರನ್ನೊಂದೇ ಅಲ್ಲ, ಭಾಷೆಯನ್ನೂ ಅವರು ಸಹಿಸರು. ತಮ್ಮ ಭಾಷೆಯ ಪಾವಿತ್ರ್ಯವನ್ನು ಕಾಪಾಡಲು ಅವರು ಫ್ರೆೆಂಚ್ ಅಕಾಡೆಮಿ ಸ್ಥಾಪಿಸಿಕೊಂಡಿದ್ದಾರೆ. ಮನಸ್ಸಿಗೆ ಬಂದ ಪದವನ್ನು ಬಳಸುವಂತಿಲ್ಲ.ಹೊಸ ಪದವನ್ನು ಟಂಕಿಸುವಾಗ ಅಕಾಡೆಮಿಯ ಅನುಮತಿ ಕಡ್ಡಾಯ. ಫ್ರೆಂಚರು ತಮ್ಮ ಭಾಷೆಯನ್ನು ತಾಯಿ ಗರ್ಭದಲ್ಲಿಟ್ಟು ಪೊರೆಯುವಂತೆ ಜೋಪಾನವಾಗಿ ಕಾಪಾಡಿದ್ದಾರೆ. ಹಾಗಂತ ಆ ಭಾಷೆಯನ್ನು ಮಾತಾಡುವವರ ಸಂಖ್ಯೆ ಕನ್ನಡಕ್ಕಿಂತ ಕಡಿಮೆ. ಇಂದಿಗೂ ಬ್ರಿಟಿಶ್ ಪ್ರಧಾನಿ ಮತ್ತು ಫ್ರೆಂಚ್ ಅಧ್ಯಕ್ಷರು ಭೇಟಿಯಾದರೆ, ತಮ್ಮ ತಮ್ಮ ಭಾಷೆಯನ್ನೂ ಬಿಟ್ಟುಕೊಡುವುದಿಲ್ಲ. ಫ್ರೆಂಚ್ ಅಧ್ಯಕ್ಷರಿಗೆ ಇಂಗ್ಲಿಷ್ ಬಂದರೂ ಮಾತಾಡುವುದಿಲ್ಲ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತಾಡಬಲ್ಲರು. ಆದರೆ ಅವರು ಯಾವುದೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಭಾಷೆಯ ಹೊರತಾಗಿ ಅನ್ಯ ಭಾಷೆಯಲ್ಲಿ ಮಾತಾಡುವುದಿಲ್ಲ. ರಷ್ಯನ್ ಭಾಷೆಯಲ್ಲಿ ಮಾತಾಡುವುದು ಅವಮಾನ ಎಂದು ಅವರು ಭಾವಿಸುವುದಿಲ್ಲ. ಅದೇ ಇಬ್ಬರು ಕನ್ನಡಿಗರು ಭೇಟಿಯಾದರೆ (ಇಬ್ಬರಿಗೂ ತಾವು ಕನ್ನಡಿಗರು ಎಂಬುದು ಗೊತ್ತಿರುತ್ತದೆ)ಇಂಗ್ಲಿಷ್‌ನಲ್ಲಿ ಮಾತಾಡುವ ಚಪಲ ! ಶುದ್ಧ ಕನ್ನಡದಲ್ಲಿ ಮಾತಾಡಿದರೆ ದಡ್ಡ ಎಂದು ಭಾವಿಸಬಹುದು ಎಂಬ ಕೀಳರಿಮೆ. ಹೀಗಾಗಿ ಮಧ್ಯೆ ಮಧ್ಯೆ ಇಂಗ್ಲಿಷ್ ಬರಲೇ ಬೇಕು. ಕನ್ನಡದಲ್ಲಿ ಹೇಳಿದ್ದನ್ನೇ What I
wanted to tell you is that…..ಎಂದು ಇಂಗ್ಲಿಷ್‌ನಲ್ಲಿ ಹೇಳುತ್ತಾರೆ. ಇದೆಂಥ ಕರ್ಮವೋ ಗೊತ್ತಿಲ್ಲ.

ಕರ್ನಾಟಕದಲ್ಲಿ ಮುಖ್ಯಮಂತ್ರಿಯಾದವರು, ಮಂತ್ರಿಗಳಾದವರೆಲ್ಲ ಅಪ್ಪಟ ಕನ್ನಡಿಗರೇ. ಅಂದರೆ ಇಲ್ಲಿ ತನಕ ಅಧಿಕಾರಕ್ಕೆ ಬಂದಿದ್ದು ಅಪ್ಪಟ ಕನ್ನಡ ಸರಕಾರವೇ. ಹಾಗೆ ನೋಡಿದರೆ ಇವರ ಇಂಗ್ಲಿಷ್ ಜ್ಞಾನ ಅಷ್ಟಕ್ಕಷ್ಟೇ. ಆದರೂ ಇವರಿಗೆ ಕನ್ನಡ ಅಂದರೆ ಏನೋ ಒಂಥರಾ ತಾತ್ಸಾರ. ಇವರಿಗೆ ಕನ್ನಡದ ಬಗ್ಗೆ ನಿಜವಾದ ಪ್ರೀತಿ ಇದ್ದಿದ್ದರೆ, ಅಧಿಕಾರಿಗಳಿಗೆ ಒದ್ದು ಕೆಲಸ ಮಾಡಿಸುತ್ತಿದ್ದರು. ಕನ್ನಡದ ಬಗ್ಗೆ ಪ್ರೀತಿ ತೋರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು, ವರ್ಗ ಮಾಡುತ್ತಿದ್ದರು.ಆದರೆ ಕನ್ನಡ ಬರದ,ಕನ್ನಡದ ಬಗ್ಗೆ ಗೌರವ ಇರದ ಅಧಿಕಾರಿಗಳೇ ಇಂದು ಮೆರೆಯುತ್ತಿದ್ದಾರೆ.ಆದರೆ ಅವರ ಮೇಲೆ ಯಾವ ಸರಕಾರವೂ ಇಲ್ಲಿ ತನಕ ಕ್ರಮಕ್ಕೆ ಮುಂದಾಗಿಲ್ಲ. ಯಹೂದಿಯರ ಹೀಬ್ರೂ ಪ್ರೇಮದಂತೆ ನಾವೂ ಕನ್ನಡ ಪ್ರೇಮವನ್ನು ಮೆರೆಯದಿದ್ದರೆ, ಕನ್ನಡಕ್ಕೆ ವಿಪತ್ತು ತಪ್ಪಿದ್ದಲ್ಲ.ಇಂಗ್ಲಿಷ್ ಕೂಡ ಕನ್ನಡದಂತೆ ಒಂದು ಭಾಷೆಯೇ ಹೊರತು ಅದೇ ಜ್ಞಾನವಲ್ಲ ಎಂಬ ಸರಳ ಸತ್ಯ ಅರಿವಾಗುವ ತನಕ ಕನ್ನಡಿಗರು What I wanted to tell you is that…..ಎಂದು ನಿರ್ಲಜ್ಜರಾಗಿ ಹೇಳುತ್ತಿರುತ್ತಾರೆ.ಅಷ್ಟಕ್ಕೂ ಕನ್ನಡ ಉಳಿಸುವುದು, ಬೆಳೆಸುವುದು ಅಭಿವೃದ್ಧಿ ಪ್ರಾಧಿಕಾರದ ಕೆಲಸವಲ್ಲ, ಪ್ರತಿಯೊಬ್ಬ ಕನ್ನಡಿಗನದು.

ಯುದ್ಧ ಮತ್ತು ಶಾಂತಿ.
ಇತ್ತೀಚೆಗೆ ಯೋಗಿ ನಿಶ್ಚಿಂತ ಜೀ ಅವರು ಮಾತಿನ ಮಧ್ಯೆ ಹೇಳಿದ ಪುಟ್ಟ ಪ್ರಸಂಗವಿದು. ಒಂದು ದಿನ ಶಿಷ್ಯನೊಬ್ಬ ತನ್ನ ಗುರುವಿಗೆ ಕೇಳಿದನಂತೆ-‘ನೀವು ನನಗೆ ಯುದ್ಧದಲ್ಲಿ ಹೇಗೆ ಸೆಣಸಬೇಕು ಎಂಬುದನ್ನು ಹೇಳಿಕೊಡುತ್ತೀರಿ. ಆದರೆ ಯಾವತ್ತೂ ಶಾಂತಿಯ ಮಹತ್ವದ ಬಗ್ಗೆ ಉಪದೇಶಿಸುತ್ತೀರಿ. ಇವೆರಡೂ ವಿರೋಧಾಭಾಸವಲ್ಲವೆ? ಯುದ್ಧ ಹಾಗೂ ಶಾಂತಿ ಒಟ್ಟಿಗೆ ನೆಲೆಸಲು ಹೇಗೆ ಸಾಧ್ಯ?  ಅದಕ್ಕೆ ಗುರು ನಿರ್ಭಾವುಕರಾಗಿ ಹೇಳಿದರಂತೆ- ‘ಯುದ್ಧ ಭೂಮಿಯಲ್ಲಿ ಗಾರ್ಡನರ್ (ಮಾಲಿ) ಆಗಿರುವುದಕ್ಕಿಂತ ಗಾರ್ಡನ್‌ನಲ್ಲಿ ಯೋಧನಾಗಿರುವುದು ವಾಸಿ’.

ನೀರಿನ ಗಾಜಿನ ಲೋಟದ ತೂಕವೆಷ್ಟು?
ಒತ್ತಡವನ್ನು ನಿಭಾಯಿಸುವುದು ಹೇಗೆ? (stress management) ಎಂಬ ವಿಷಯ ಕುರಿತು ಮನಶ್ಯಾಸ್ತ್ರಜ್ಞರೊಬ್ಬರು ಉಪನ್ಯಾಸ ನೀಡುತ್ತಿದ್ದರು. ಅವರು ನೀರು ತುಂಬಿದ ಗ್ಲಾಸಿನ ಲೋಟವನ್ನು ಎತ್ತಿ ತೋರಿಸುತ್ತಿದ್ದಂತೆ, ‘ಓಹೋ ಅದು ಅರ್ಧ ತುಂಬಿದೆಯಾ? ಅರ್ಧ ಖಾಲಿಯಾಗಿದೆಯಾ’? ಎಂಬ ಗೊತ್ತಿರುವ ಪ್ರಶ್ನೆಯನ್ನೇ ಕೇಳುತ್ತಾರೆ. ವಿದ್ಯಾರ್ಥಿಗಳು ಬೋರಿಂಗ್ ಎಂದು ಗೊಣಗಿಕೊಂಡರು. ಆದರೆ ಉಪನ್ಯಾಸಕರು, ಈ ನೀರು ತುಂಬಿದ ಗಾಜಿನ ಲೋಟ ಎಷ್ಟು ಭಾರವಾಗಿದೆ? ಎಂದು ಕೇಳಿದರು. ವಿದ್ಯಾರ್ಥಿಗಳಿಗೆ ಅಚ್ಚರಿ. ಮೇಸ್ಟ್ರು ಹೊಸ ಸಂಗತಿಯನ್ನು ಕಲಿಸುತ್ತಿದ್ದಾರೆಂದು ಅವರೆಲ್ಲ ಕುತೂಹಲಗೊಂಡರು. ವಿದ್ಯಾರ್ಥಿಗಳು ಎದ್ದು ನಿಂತು ‘50 ಗ್ರಾಂ, 75ಗ್ರಾಂ 150ಗ್ರಾಂ, 200ಗ್ರಾಂ, 250ಗ್ರಾಂ….’ ಎಂದು ತಾವು ಅಂದಾಜು ಮಾಡಿದಂತೆ ಹೇಳಿದರು. ಉಪನ್ಯಾಸಕರು ಅವರು ಹೇಳಿದ ಉತ್ತರವನ್ನೆಲ್ಲ ಸಮಾಧಾನದಿಂದ ಕೇಳಿದರು. ‘ಇನ್ನೊಂದು ಛಾನ್ಸ್‌ ಕೊಡುವೆ. ಸರಿ ಉತ್ತರ ಹೇಳಿ’ ಎಂದಾಗ ಯಾರೂ ಮಾತಾಡಲಿಲ್ಲ.

ಆಗ ಉಪನ್ಯಾಸಕರು ಹೇಳಿದರು- ‘ ನೀರು ತುಂಬಿದ ಗಾಜಿನ ಲೋಟದ ನಿಖರ ಭಾರ ಎಷ್ಟೇ ಇರಲಿ, ಅದು ಮುಖ್ಯವಲ್ಲ. ಅದು ನೀವು ಹೇಳಿದ ಯಾವುದಾದರೂ ಒಂದು ಉತ್ತರವಾಗಬಹುದು. ಅದನ್ನು ನೀವು ಎಷ್ಟು ಹೊತ್ತು ಹಿಡಿದಿರುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ಒಂದು ನಿಮಿಷ ಹಿಡಿದು ಎತ್ತುವುದು ಸಮಸ್ಯೆಯೇ ಅಲ್ಲ. ಒಂದು ತಾಸು ಎತ್ತಿ ಹಿಡಿದರೆ ಕೈ ನೋಯಬಹುದು. ಮೂರು ನಾಲ್ಕು ಗಂಟೆ ಎತ್ತಿದರೆ ಭುಜವೂ ನೋಯಬಹುದು. ಇಡೀ ದಿನ ಎತ್ತಿದರೆ ನಿತ್ರಾಣವಾಗಬಹುದು. ಪ್ರತಿಯೊಂದು ಸಂದರ್ಭದಲ್ಲೂ ಗಾಜಿನ ನೀರಿನ ಲೋಟದ ಭಾರ ಬದಲಾಗುವುದಿಲ್ಲ. ಅದು ಒಂದೇ ಆಗಿರುತ್ತದೆ. ಆದರೆ ಹೆಚ್ಚು ಹೊತ್ತು ಹಿಡಿದೆತ್ತಿದಷ್ಟೂ , ಅದು ಹೆಚ್ಚು ಹೆಚ್ಚು ಭಾರವೆಂದೆನಿಸುತ್ತದೆ.

ಉಪನ್ಯಾಸಕರ ಮಾತಿಗೆ ಎಲ್ಲ ವಿದ್ಯಾರ್ಥಿಗಳೂ ತಲೆ ಅಲ್ಲಾಡಿಸಿದರು. ಆಗ ಅವರು ಮುಂದುವರೆಸಿದರು- ‘ಚಿಂತೆ ಹಾಗೂ ಒತ್ತಡವೂ ಈ ಗಾಜಿನ ಲೋಟದಂತೆ. ಅವುಗಳ ಬಗ್ಗೆ ಎರಡು ನಿಮಿಷ ಯೋಚಿಸಿ, ಏನೂ ಆಗುವುದಿಲ್ಲ. ಎರಡು ಮೂರು ತಾಸು ಯೋಚಿಸಿ, ನಿಮ್ಮ ನೆಮ್ಮದಿ ಹಾಳಾಗುತ್ತದೆ. ಇಡೀ ದಿನ ಅವುಗಳ ಬಗ್ಗೆಯೇ ಯೋಚಿಸಿ, ನೀವು ಹುಚ್ಚರಾಗುತ್ತೀರಿ. ಮನಃಶಾಂತಿ ಸಂಪೂರ್ಣ ಹಾಳಾಗುತ್ತದೆ. ಯಾವಾಗ ನೀರಿನ ಗಾಜಿನ ಲೋಟವನ್ನು ಕೆಳಗಿಡಬೇಕೆಂಬುದು ಗೊತ್ತಿರಬೇಕು.’ ಎಲ್ಲರಿಗೂ stress management ಅಂದ್ರೆ ಏನೆಂದು ತಿಳಿಯಿತು.

ಉಚಿತ ವೈಫೈ ಎಂಬ ಪೀಡೆ
ಗ್ರಾಹಕರನ್ನು ಆಕರ್ಷಿಸಲು ಬಗೆಬಗೆಯ ತಂತ್ರಗಳನ್ನು ಬಳಸುವುದು ಸಾಮಾನ್ಯ. ಅವುಗಳಲ್ಲೊಂದು ವೈಫೈ. ಇತ್ತೀಚಿನ ದಿನಗಳಲ್ಲಿ ಎಲ್ಲ ಹೋಟೆಲ್, ರೆಸ್ಟೋರೆಂಟ್, ಕಾಫಿ ಡೇ, ಬೀದಿ ಬದಿ ರೆಸ್ಟುರಾ, ಡಾಬಾಗಳಲ್ಲೂ ಗ್ರಾಹಕರಿಗೆ ವೈಫೈ ಸೌಲಭ್ಯ ನೀಡಿ ಆಕರ್ಷಿಸುತ್ತಾರೆ.  ಕೆಲವರಿಗಂತೂ ವೈಫೈ ದೊಡ್ಡ ಆಕರ್ಷಣೆ. ಕೆಲವರು ಉಚಿತ ವೈಫೈ ಸಿಕ್ಕಿದೆಯೆಂದು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಚಾಟ್ ಮಾಡುವುದರಲ್ಲಿ ನಿರತರಾಗುತ್ತಾರೆ. ವೈಫೈ ಸೌಲಭ್ಯವಿರುವ ರೆಸ್ಟುರಾಗಳಲ್ಲಿ ಬರುವ ಗ್ರಾಹಕರು ತಮ್ಮ ತಮ್ಮಲ್ಲಿ ಮಾತಾಡುವುದಕ್ಕಿಂತ ಬೇರೆಯವರ ಜತೆ ಹರಟುವುದರಲ್ಲೇ ತಲ್ಲೀನರಾಗುತ್ತಾರೆ. ಉಚಿತ ವೈಫೈ ಸಿಕ್ಕಿದೆಯೆಂದು ಬೇಗನೆ ಎದ್ದು ಹೋಗುವುದಿಲ್ಲ. ಆದರೂ ಇದೊಂದು ವ್ಯವಹಾರದ ತಂತ್ರ. ಯುವಜನರಂತೂ ಉಚಿತ ವೈಫೈಗೆ ಮಾರು ಹೋಗಿದ್ದಾರೆ. ವೈಫೈ ಇದ್ದರೆ ಪರಸ್ಪರ ಮಾತು, ಹರಟೆಯೂ ರುಚಿಸುವುದಿಲ್ಲ. ಅಪರೂಪಕ್ಕೆ ಸಿಕ್ಕ ಸ್ನೇಹಿತರಿಗಿಂತ, ಹರಟೆಯೇ ಮುಖ್ಯ. ಸ್ನೇಹಿತರ ಜತೆ ತೆಗೆದ ಫೋಟೊ, ಸೆಲ್ಫಿಗಳನ್ನು ಬೇರೆಯವರಿಗೆ ಕಳಿಸುವುದರಲ್ಲಿ, ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುವುದರಲ್ಲಿ ತಲ್ಲೀನರಾಗಿರುತ್ತಾರೆಯೇ ಹೊರತು, ಪರಸ್ಪರ ಮಾತಾಡುವುದರಲ್ಲಿ ಅಲ್ಲ.

ಇತ್ತೀಚೆಗೆ ನಾನು ಇಸ್ರೇಲಿಗೆ ಹೋಗಿದ್ದಾಗ, ರಾಜಧಾನಿ ಜೆರುಸಲೆಮ್‌ನಲ್ಲಿರುವ ರೆಸ್ಟುರಾಗೆ ಹೋಗಿದ್ದೆ. ಜತೆಯಲ್ಲಿ ಅಪರೂಪಕ್ಕೆ ಸಿಕ್ಕ ಸ್ನೇಹಿತನಿದ್ದ. ಮಾತಾಡಲು ಸಾಕಷ್ಟು ವಿಷಯಗಳಿದ್ದವು. ಆದರೂ ಅಭ್ಯಾಸ ಬಲದಿಂದಲೋ ಏನೋ, ‘ವೈಫೈ ಪಾಸ್‌ವರ್ಡ್ ಹೇಳ್ತೀರಾ?’ ಎಂದು ನನ್ನ ಸ್ನೇಹಿತ ವೇಟರ್‌ಗೆ ಕೇಳಿದ. ಆತ ಅಲ್ಲಿಯೇ ಇದ್ದ ಫಲಕವನ್ನು ತೋರಿಸಿದ. ಅದರ ಮೇಲೆ ಬರೆದಿತ್ತು- ’’We do not have wi-fi . Please talk to each other’’ ಅದನ್ನು ಓದಿ ಖುಷಿಯಾಯಿತು.

ವೈಫೈ ತಾಪತ್ರಯಗಳು
ಸಾಮಾನ್ಯವಾಗಿ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಿಜಿನೆಸ್ ಲಾಂಜ್‌ಗಳಲ್ಲಿ ಉಚಿತ ವೈಫೈ ಸೌಲಭ್ಯವಿರುತ್ತದೆ. ಆದರೆ ಇಸ್ರೇಲ್‌ನ ಟೆಲ್ಅವಿವ್ನ ಬೆನ್‌ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕಾಲಿಟ್ಟರೆ ಎಲ್ಲೆಲ್ಲೂ ವೈಫೈ. ಅದೂ ಬಹಳ ಸ್ಟ್ರಾಂಗ್ ಸಿಗ್ನಲ್ ಇರುವ ವೈಫೈ. ಏಕಕಾಲದಲ್ಲಿ ಹನ್ನೆರಡು ಸಾವಿರ ಮಂದಿ ಉಪಯೋಗಿಸುವಂಥ ವೈಫೈ ಜಾಲ! ಬೋರ್ಡಿಂಗ್ ಪಾಸ್‌ಗಾಗಿ ತಾಸುಗಟ್ಟಲೆ ಕ್ಯೂದಲ್ಲಿ ನಿಲ್ಲುವ ಪ್ರಸಂಗ ಬಂದರೂ ಯಾರೂ ಗೊಣಗುವುದಿಲ್ಲ. ಎಲ್ಲರೂ ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಬಿಜಿ. ಯಾರಿಗೂ ಬೇರೆಯವರೊಂದಿಗೆ ಮಾತಾಡುವುದು ಬಿಡಿ, ನೋಡುವ ವ್ಯವಧಾನವೂ ಇಲ್ಲ. ಅಂಥ ಗಿಜಿಗುಡುವ ವಿಮಾನ ನಿಲ್ದಾಣದಲ್ಲಿ ಸಹ ಮೌನ. ಯಾರ ಗೊಣಗಾಟ ಇಲ್ಲ. ಚಿಕ್ಕ ಮಕ್ಕಳಿಗೆ ಆಟಿಕೆ ಸಾಮಾನು ಕೊಟ್ಟು ಕುಳ್ಳಿರಿಸಿದ ಹಾಗೆ. ವೈಫೈ ಇದ್ದರೆ ಎಲ್ಲರೂ ಶಾಂತ.

ವಿಮಾನ ನಿಲ್ದಾಣದಲ್ಲಿರುವ ಡ್ಯೂಟಿ ಫ್ರೀ ಶಾಪ್‌ನಲ್ಲಿರುವ ಮ್ಯಾನೇಜ ರ‌್ಗಳನ್ನು ಕೇಳಿದೆ- ‘ವೈಫೈನಿಂದ ನಿಮ್ಮ ಬಿಜಿನೆಸ್‌ಗೆ ಪರಿಣಾಮವಾಗಿದೆಯಾ?’ ಅದಕ್ಕೆ ಆತ ಹೇಳಿದ- ‘ಕಳೆದ ಎಂಟು ತಿಂಗಳಿನಿಂದ ಆಲ್‌ಏರಿಯಾ ವೈಫೈ ಜಾರಿಯಾದಂದಿನಿಂದ ಕನಿಷ್ಠ ಶೇ. ಐವತ್ತರಷ್ಟು ವ್ಯಾಪಾರ ಕಡಿಮೆಯಾಗಿದೆ. ಎಲ್ಲರೂ ಮೊಬೈಲ್ ಹಿಡಿದು ಕುಳಿತುಬಿಡುತ್ತಾರೆ. ಶಾಪಿಂಗ್ ಮಾಡಲು ಸಹ ಆಸಕ್ತಿ ತೋರುವುದಿಲ್ಲ. ವೈಫೈ ಇದ್ದರೆ ಊಟ-ತಿಂಡಿಯ ಬಗ್ಗೆ ಸಹ ಗಮನವಿರುವುದಿಲ್ಲ. ಅಷ್ಟೊಂದು ಧ್ಯಾನಾಸಕ್ತರಾಗಿ ಅದರೊಳಗೆ ಮುಳುಗಿರುತ್ತಾರೆ. ಕೆಲವು ಏರ್‌ಲೈನ್‌ಗಳು ವಿಮಾನದಲ್ಲಿ ವೈಫೈ ಸೌಲಭ್ಯ ನೀಡುತ್ತಿವೆ. ಹೀಗಾಗಿ ಬಹುತೇಕ ಪ್ರಯಾಣಿಕರು ಮಲಗುವುದೇ ಇಲ್ಲ.’

ಕೆಲವು ತಿಂಗಳುಗಳ ಹಿಂದೆ ಸಿಡ್ನಿಯಿಂದ ಮೆಲ್ಬೋರ್ನ್‌ಗೆ ಹೋಗುವ ಕ್ವಾಂಟಾಸ್ ಏರ್‌ಲೈನ್ಸ್‌ ವಿಮಾನ ಎರಡು ತಾಸು ತಡವಾಯಿತು. ವಿಮಾನವೇರಿದ ಪ್ರಯಾಣಿಕನೊಬ್ಬ ವೈಫೈ ಆನ್ ಮಾಡಿದಾಗ, ಹತ್ತಾರು ಮೊಬೈಲ್ ಹಾಟ್‌ಸ್ಪಾಟ್‌ಗಳು ಆನ್ ಆಗಿರುವುದು ತಿಳಿಯಿತು. ಆ ಪೈಕಿ ಒಂದು ಹಾಟ್‌ಸ್ಪಾಟ್ ಹೆಸರು- “Mobile Detonation Device.’ ಗಾಬರಿಗೊಂಡ ಪ್ರಯಾಣಿಕ, ಇದನ್ನು ಪೈಲಟ್ ಗಮನಕ್ಕೆ ತಂದ. ಪೈಲಟ್ ತಕ್ಷಣ ಹೈ ಅಲರ್ಟ್ ಘೋಷಿಸಿದ. ಈ ವೈಫೈ ಹಾಟ್‌ಸ್ಪಾಟ್ ಯಾರದ್ದೆಂದು ತಿಳಿಸುವಂತೆ ಸೂಚಿಸಿದ. ಯಾರೂ ಬಾಯಿಬಿಡಲಿಲ್ಲ. ಪೈಲಟ್ ಎಲ್ಲ ಪ್ರಯಾಣಿಕರನ್ನು ಸುರಕ್ಷತೆಯ ಕಾರಣದಿಂದ ಕೆಳಗಿಳಿಸಿದ. ಅಷ್ಟರೊಳಗೆ ಪ್ರಯಾಣಿಕನೊಬ್ಬ ತನ್ನ ವೈಫೈ ಹಾಟ್‌ಸ್ಪಾಟ್ ಹೆಸರನ್ನು ಬದಲಿಸಿದ್ದ.ಆನಂತರವೇ ವಿಮಾನ ಟೇಕಾಫ್ ಆಯಿತು.

ವೈಫೈ ಪಾಸ್‌ವರ್ಡ್
ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಡುವೆ ನಡೆದಿದೆಯೆನ್ನಲಾದ (ಕಾಲ್ಪನಿಕ) ಸಂಭಾಷಣೆ:
ಕೇಜ್ರಿವಾಲ- ಇಡೀ ದಿಲ್ಲಿಗೆ ಉಚಿತವಾಗಿ ವೈಫೈ ಸೌಲಭ್ಯ ನೀಡೋಣ
ಸಿಸೋಡಿಯಾ- ಅದಕ್ಕೆ ಬಹಳ ಖರ್ಚಾಗುತ್ತದಲ್ಲ?
ಕೇಜ್ರಿವಾಲ- ವೈಫೈ ಪಾಸ್‌ವರ್ಡ್‌ನ್ನು ಯಾರಿಗೂ ತಿಳಿಸದಿದ್ದರಾಯ್ತು!

 

Leave a Reply

Your email address will not be published. Required fields are marked *

sixteen + five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top