ಅಶ್ವಿನ್‌ಗೆ ಬಯಸದೇ ಬಂದ ನಾಯಕತ್ವ ಭಾಗ್ಯ

Posted In : ಸಂಗಮ, ಸಂಪುಟ

-ಅಶೋಕ್ ನಾಯಕ್

ಈ ವರ್ಷದ ಐಪಿಎಲ್ ಪಂದ್ಯಾವಳಿ ಹಲವು ಹಗ್ಗ ಜಗ್ಗಾಟಕ್ಕೆ ಸಾಕ್ಷಿಯಾಗಿದೆ. ಅದು ಗೆಲುವಿಗೆ ಮಾತ್ರವಲ್ಲ, ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಗಳಲ್ಲಿ ಒಂದರಲ್ಲಿ ತಮ್ಮ ಸ್ಥಾನ ಭದ್ರಪಡಿಸುವ ತಂಡಗಳ ಶತ ಪ್ರಯತ್ನಕ್ಕೂ ಸಾಕ್ಷಿ.  2007ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಪರಿಚಯಿಸಿದ ಈ ಮನೋರಂಜನಾ ಕೂಟ, 2008ರಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭವಾಗಿ, ಮೊದಲ ಐಪಿಎಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ, ಟೀಂ ಇಂಡಿಯಾದ ಮಾಜಿ ನಾಯಕ, ‘ಕ್ಯಾಪ್ಟನ್ ಕೂಲ್’ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್‌ಸ್ ತಂಡವನ್ನು ರೋಮಾಂಚಕಾರಿಯಾಗಿ ಸೋಲಿಸಿ, ಕಪ್ ತನ್ನದಾಗಿಸಿಕೊಂಡಿತು. ಸಹಜವಾಗಿಯೇ, ಕ್ರಿಕೆಟ್ ಅಭಿಮಾನಿಗಳ ಫೇವರೀಟ್ ಹಳದಿ ಜರ್ಸಿ ಧರಿಸಿದ ಚೆನ್ನೈ ಆಗಿದ್ದರೂ, ರಾಯಲ್‌ಸ್ ಕಪ್ ಎತ್ತುವ ಮೂಲಕ ಚುಟುಕು ಕ್ರಿಕೆಟ್ (ಟಿ20) ಪಂದ್ಯಾವಳಿಯಲ್ಲಿ ಏನೂ ನಡೆಯಬಹುದು ಎಂದು ತೋರಿಸಿ, ಅಚ್ಚರಿ ಮೂಡಿಸಿತು.

ಅನಂತರ, 2009ರಲ್ಲಿ ರಾಯಲ್ಸ್ ಚ್ಯಾಲೆಂಜರ್ಸ್ ಬೆಂಗಳೂರು ತಂಡವನ್ನು ಡೆಕ್ಕನ್ ಚಾರ್ಜರ್ಸ್ ತಂಡ, 2010ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 2011ರಲ್ಲಿ ರಾಯಲ್‌ಸ್ ಚ್ಯಾಲೆಂಜರ್‌ಸ್ ತಂಡವನ್ನು ಸೋಲಿಸಿ ಚೆನ್ನೈ ತಂಡ ಮತ್ತೊಮ್ಮೆ ಪ್ರಶಸ್ತಿಗೆ ಕೈಯೊಡ್ಡಿತು. 2012ರಲ್ಲಿ ಚೆನ್ನೈ ತಂಡವನ್ನೇ ಸೋಲಿಸಿ, ಮಾಜಿ ಕ್ರಿಕೆಟಿಗ ಗಂಭೀರ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸೋಲಿಸಿ, ಐಪಿಎಲ್ ಕಪ್ ಮೇಲೆ ತನ್ನದು ಪ್ರಭುತ್ವ ಇದೆಯೆಂದು ಸಾಬೀತು ಮಾಡಿತು. 2013ರಲ್ಲಿ ಮುಂಬೈ ಇಂಡಿಯನ್ಸ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಗೆ ಗೆಲ್ಲಲು ತನ್ನಲ್ಲೂ ಸಾಮರ್ಥ್ಯವಿದೆ ಎಂದು ತೋರ್ಪಡಿಸಿತು.

2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬನ್ನು ಸೋಲಿಸಿ, ಕೋಲ್ಕತಾ ನೈಟ್ ರೈಡರ್ಸ್ ಎರಡನೇ ಬಾರಿ ಪ್ರಶಸ್ತಿಗರ ಭಾಜನವಾಯಿತು. 2015ರಲ್ಲಿ ಮಗದೊಮ್ಮೆ ಮುಂಬೈ ಇಂಡಿಯನ್‌ಸ್ ತಂಡ ಚೆನ್ನೈ ತಂಡವನ್ನು ಸೋಲಿಸಿ, ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆಯಿತು. 2016ರಲ್ಲಿ ಡೆಕ್ಕನ್ ಚಾರ್ಜರ್ಸ್ ನಿಂದ ಸನ್‌ರೈಸರ್ಸ್ ಹೈದರಾಬಾದ್ ಆಗಿ ನಾಮಕರಣಗೊಂಡ ಹೈದರಾಬಾದ್ ತಂಡ 2009ರ ಬಳಿಕ ರಾಯಲ್‌ಸ್ ಚ್ಯಾಲೆಂಜರ್ಸ್ ತಂಡವನ್ನು ಚೋಕರ್ಸ್ ಸ್ಥಾನ ಕೊಟ್ಟು, ಚಾಂಪಿಯನ್ ಎನಿಸಿಕೊಂಡಿತು. 2017ರ ಫೈನಲ್ ಪಂದ್ಯಾವಳಿ ಲೋ ಸ್ಕೋರಿಂಗ್ ಪಂದ್ಯಕ್ಕೆ ಸಾಕ್ಷಿಯಾಯಿತು.

(ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ 2016ರಿಂದ ಚೆನ್ನೈ ಸೂಪರ್ ಕಿಂಗ್‌ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಎರಡು ವರ್ಷಗಳ ಐಪಿಎಲ್ ನಿಷೇಧ ಶಿಕ್ಷೆಗೆ ಒಳಪಟ್ಟ ಕಾರಣ, ರೈಸಿಂಗ್ ಪುಣೆ ವಾರಿಯರ್ಸ್ ಮತ್ತು ಗುಜರಾತ್ ಲಯನ್ಸ್ ಎಂಬ ಹೊಸ ಫ್ರಾಂಚೈಸಿಗಳು ಭಾಗವಹಿಸಿದ್ದವು. ಪುಣೆ ವಾರಿಯರ್ಸ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕನಾದರೆ, ಅವರ ತಂಡದ ಸುರೇಶ್ ರೈನಾ ಗುಜರಾತ್ ಲಯನ್ಸ್ ತಂಡದ ನಾಯಕತ್ವ ವಹಿಸಿದ್ದರು) ರೈಸಿಂಗ್ ಪುಣೆ ವಾರಿಯರ್ಸ್ ತಂಡವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿ, ಮುಂಬೈ ಇಂಡಿಯನ್ಸ್ ತಂಡ ಸತತ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.

ಆದರೆ, ಪ್ರಸಕ್ತ ವರ್ಷ(2018) ದ ಎಲ್ಲ ಕ್ರಿಕೆಟ್ ಪ್ರಿಯರಿಗೂ ತಿಳಿದಿರುವಂತೆ, ಪಂದ್ಯಾವಳಿ ಕ್ಲೈಮಾಕ್ಸ್ ಹಂತಕ್ಕೆ ತಲುಪಿದ್ದು, ಪ್ಲೇಆಫ್ ಹಂತ ತಲುಪಲು ಭಾರೀ ಜಿದ್ದಾಜಿದ್ದಿಗೆ ತೊಡಗಿವೆ. ಕಾರಣ, ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಚೆನ್ನೈ, ಮುಂಬೈ ಹಾಗೂ ಕೋಲ್ಕತಾ ತಂಡಕ್ಕೆ ಭಾರೀ ಸ್ಪರ್ಧೆ ಒಡ್ಡುತ್ತಿವೆ. ಈ ಬಾರಿ ನಾಯಕತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದಿರುವ ಪಂಜಾಬ್, ಸನ್‌ರೈಸ್, ಕೋಲ್ಕತಾ ತಂಡಗಳು ಜ್ಯಾಕ್ ಪಾಟ್ ಹೊಡೆದಂತೆ, ಸರಿಸಮನಾದ ನೀಡುತ್ತಿವೆ. ಪರಿಣಾಮ, ಮುಂಬೈ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ಬೆಂಗಳೂರು ತಂಡದಲ್ಲಿ ವಿರಾಟ್ ಸೇರಿದಂತೆ, ಅಬ್ರಹಾಂ ಡಿವಿಲಿಯರ್ಸ್ ಕೂಡ ತಮ್ಮ ಘನತೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಪ್ರಸಕ್ತ ಐಪಿಎಲ್ ನಲ್ಲಿ ತಂಡದ ಅಂಕಪಟ್ಟಿಯಲ್ಲಿ ಮೇಲೇರಬೇಕೆಂದರೆ, ಇವರಿಬ್ಬರ ಆಟ ಪ್ರಮುಖ ಪಾತ್ರ ವಹಿಸಲಿದೆ. ಉಳಿದವರದ್ದು ಹೋದ ಪುಟ್ಟ..ಬಂದ ಪುಟ್ಟ ಎಂಬಂತಹ ಸ್ಥಿತಿ.

ಮುಂಬೈ ತಂಡದಲ್ಲಿ ಘಟಾನುಘಟಿಗಳ ಆಟಗಾರರ ಕಳಪೆ ನಿರ್ವಹಣೆಯಿಂದ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಹಂತಕ್ಕೇರಲು ಹರಸಾಹಸ ಆಗೊಮ್ಮೆ, ಈಗೊಮ್ಮೆ ಪಾಂಡ್ಯ ಸಹೋದರರು ಮಿಂಚುತ್ತಿದ್ದರೆ, ಪೋಲಾರ್ಡ್ ಬ್ಯಾಟಿನಿಂದ ರನ್ ಹರಿದು ಬರುತ್ತಿಲ್ಲ. ರೋಹಿತ್ ಬ್ಯಾಟ್ ಮಾತನಾಡುತ್ತಿಲ್ಲ. ನಾಯಕತ್ವದಲ್ಲಿ ಹಲವು ಬದಲಾವಣೆಯನ್ನು ಕಂಡ ಕಿಂಗ್‌ಸ್ ಇಲೆವೆನ್ ಪಂಜಾಬ್ ತಂಡಕ್ಕೆ ರವಿಚಂದ್ರನ್ ಅಶ್ವಿನ್ ಸಾರಥ್ಯ ಸಿಕ್ಕಿದೆ. ಚೆನ್ನೈ ತಂಡದಲ್ಲಿ ಅಶ್ವಿನ್ ಪ್ರಧಾನ ಸ್ಪಿನ್ನರ್ ಆಗಿದ್ದವರು. ಆದರೆ ಈ ಬಾರಿ ನಾಯಕನಾಗಿ, ಪಂಜಾಬ್ ತಂಡವನ್ನು ಪ್ಲೇಆಫ್ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ರಾಯಲ್ ಚ್ಯಾಲೆಂಜರ್ ತಂಡದ ಖಾಯಂ ಸದಸ್ಯರಾಗಿದ್ದ ವಿಂಡೀಸ್ ದೈತ್ಯ ಕ್ರಿಸ್ಟೋಫರ್ ಹಾಗೂ ಕರ್ನಾಟಕದ ಕೆ.ಎಲ್.ರಾಹುಲ್ ಕೂಡ ಪಂಜಾಬ್ ಪರ ಆರಂಭಿಕರಾಗಿ ರನ್ ಹರಿಸುವುದಲ್ಲದೇ, ದೀರ್ಘ ಇನ್ನಿಂಗ್‌ಸ್ ಕಟ್ಟುವಲ್ಲಿ ಸಫಲತೆ ಕಾಣುತ್ತಿದ್ದಾರೆ. ಇತ್ತೀಚಿನ ಮೂರು ಪಂದ್ಯಗಳ ಸತತ ಸೋಲಿಗೆ ಪ್ರೀತಿ ಜಿಂಟಾ, ಸೆಹ್ವಾಗ್‌ರನ್ನು ತರಾಟೆಗೆ ತೆಗೆದುಕೊಂಡರೂ, ತಂಡದ ನಿರ್ವಹಣೆ ಮೇಲೆ ಪರಿಣಾಮ ಬೀರದೆಂದು ಆಶಿಸೋಣ.

ಪ್ರಸಕ್ತ ಸಾಲಿನ ಐಪಿಎಲ್ ಆರಂಭವಾಗುವ ಮುನ್ನ ಕಿಂಗ್ಸ್ ಇಲೆವೆನ್ ತಂಡದ ನಿರ್ದೇಶಕರಾಗಿರುವ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು, ಪಂಜಾಬ್ ತಂಡದ ನೂತನ ನಾಯಕ ಅಶ್ವಿನ್‌ರೊಂದಿಗಿನ ಮಾತುಕತೆ ನಂತರ, ಮಾಧ್ಯಮಕ್ಕೆ, ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕ ಬೌಲರ್ ಆಗಿರಬೇಕು. ಹಲವು ವರ್ಷಗಳಿಂದ ಭಾರತೀಯ ತಂಡ ಯಾವುದೇ ಬೌಲರ್ ನನ್ನು ನಾಯಕನನ್ನಾಗಿ ಪಡೆದಿಲ್ಲ ಎಂದಿದ್ದರು.

ಮಹೇಂದ್ರ ಸಿಂಗ್ ಧೋನಿ ಅವರು ಟೀಂ ಇಂಡಿಯಾದ ನಾಯಕತ್ವ ವಹಿಸಿದ ನಂತರ, ಭಾರತೀಯ ಕ್ರಿಕೆಟ್ ತಂಡ ಕ್ರಿಕೆಟ್‌ನ ಮೂರು ಅವತರಣಿಕೆಯಲ್ಲೂ ಹಲವು ಬಾರಿ ಯಶ ಸಾಧಿಸಿದೆ. ಮಹೇಂದ್ರ ಸಿಂಗ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಿದ ನಂತರ ವಿರಾಟ್ ಕೊಹ್ಲಿ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಹಾಗೂ ಸುರೇಶ್ ರೈನಾ (ಬಾಂಗ್ಲಾದೇಶ ಸರಣಿ) ನಾಯಕನ ಹೊಣೆ ನಿಭಾಯಿಸಿದ್ದಾರೆ. ಹೀಗಿರುವಾಗ, ಓರ್ವ ಬೌಲರಿಗೆ ಹೊಣೆ ಹೊರಿಸುವುದು ತಂಡದ ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರದು.

ಓರ್ವ ಬೌಲರಾಗಿ ಹೆಚ್ಚು ವಿಕೆಟ್ ಕಬಳಿಸದಿದ್ದರೂ, ನಾಯಕನಾಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅವರಿಗೆ ಸೆಹ್ವಾಗ್ ಅವರ ಮಾರ್ಗದರ್ಶನವೂ ದೊರೆಯುತ್ತಿದೆ. ಒಂದು ವೇಳೆ ಪಂಜಾಬ್ ಈ ಬಾರಿ ಪ್ರಶಸ್ತಿಗೆ ಕೈಯೊಡ್ಡಿದರೆ, ರವಿಚಂದ್ರನ್ ಅಶ್ವಿನ್ ನಾಯಕತ್ವ ಪರೀಕ್ಷೆಯಲ್ಲಿ ಪಾಸಾದಂತೆ. ಜತೆಗೆ ಕೊಹ್ಲಿಗೆ ಬದಲಿ ಉಸ್ತುವಾರಿ ನಾಯಕನಾಗಿ ಟಿ20ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ಹೆಸರು ಸೇರ್ಪಡೆಯಾದರೂ ಅಚ್ಚರಿಯಿಲ್ಲ.

 

Leave a Reply

Your email address will not be published. Required fields are marked *

four × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top