ಜಾಗತಿಕವಾಗಿ ಯುಎಫ್ಸಿ ಆ್ಯಪ್‌ನಲ್ಲಿ ನೇರ ಪ್ರಸಾರವಾಗಲಿದೆ ಎಪಿಎಫ್ಸಿ ಇಂಡಿಯಾ ಮತ್ತು ಬಾಕ್ಸಿಂಗ್‌ಬೇ
ಡಿಸೆಂಬರ್ 5 ರಂದು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿರುವ ಎಪಿಎಫ್ಸಿ ಇಂಡಿಯಾ 1, ಯುಎಫ್ಸಿ ಆ್ಯಪ್‌ನಲ್ಲಿ ಜಾಗತಿಕವಾಗಿ ನೇರಪ್ರಸಾರ ಕಾಣಲಿರುವ ಭಾರತದ ಮೊದಲ ವೃತ್ತಿಪರ ಎಂಎಂಎ (Mixed Martial Arts) ಪಂದ್ಯಾವಳಿಯಾಗಲಿದೆ. ಈ ಕಾರ್ಯಕ್ರಮದಲ್ಲಿ ಆರು ವೃತ್ತಿಪರ ಎಂಎಂಎ ಪಂದ್ಯಗಳು ಹಾಗೂ ಆರು ಪ್ರೊ-ಬಾಕ್ಸಿಂಗ್ ಪಂದ್ಯಗಳು ನಡೆಯಲಿದ್ದು, ಭಾರತೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ
-
Ashok Nayak
Nov 2, 2025 2:32 PM
ಬೆಂಗಳೂರು: ಭಾರತೀಯ ಸಮರ ಕ್ರೀಡಾ (Combat Sports) ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಲಿದೆ. ಮಾಜಿ ಯುಎಫ್‌ಸಿ ಲೈಟ್‌ವೇಟ್ ಚಾಂಪಿಯನ್ ಆಂಥೋನಿ ಪೆಟ್ಟಿಸ್ ನೇತೃತ್ವದ ಆಂಥೋನಿ ಪೆಟ್ಟಿಸ್ ಫೈಟಿಂಗ್ ಚಾಂಪಿಯನ್‌ಶಿಪ್ (ಎಪಿಎಫ್ಸಿ) ಇಂಡಿಯಾ ಮತ್ತು ಚಲನಚಿತ್ರ ನಟ ಹಾಗೂ ಉದ್ಯಮಿ ರಾಣಾ ದಗ್ಗುಬಾಟಿ ಸಹ-ಪ್ರಾಯೋಜಕತ್ವದ ಬಾಕ್ಸಿಂಗ್ ಬೇ (BoxingBay), ಇನ್ನು ಮುಂದೆ ಯುಎಫ್ಸಿಯ ಅಧಿಕೃತ ಆ್ಯಪ್‌ನಲ್ಲಿ ವಿಶ್ವಾದ್ಯಂತ ನೇರಪ್ರಸಾರ ಗೊಳ್ಳಲಿರುವ ಭಾರತದ ಮೊಟ್ಟಮೊದಲ ಸಮರ ಕ್ರೀಡಾಕೂಟಗಳಾಗಿ ಇತಿಹಾಸ ನಿರ್ಮಿಸಲಿವೆ.
ಡಿಸೆಂಬರ್ 5 ರಂದು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿರುವ ಎಪಿಎಫ್ಸಿ ಇಂಡಿಯಾ 1, ಯುಎಫ್ಸಿ ಆ್ಯಪ್‌ನಲ್ಲಿ ಜಾಗತಿಕವಾಗಿ ನೇರಪ್ರಸಾರ ಕಾಣಲಿರುವ ಭಾರತದ ಮೊದಲ ವೃತ್ತಿಪರ ಎಂಎಂಎ (Mixed Martial Arts) ಪಂದ್ಯಾವಳಿಯಾಗಲಿದೆ. ಈ ಕಾರ್ಯಕ್ರಮದಲ್ಲಿ ಆರು ವೃತ್ತಿಪರ ಎಂಎಂಎ ಪಂದ್ಯಗಳು ಹಾಗೂ ಆರು ಪ್ರೊ-ಬಾಕ್ಸಿಂಗ್ ಪಂದ್ಯಗಳು ನಡೆಯಲಿದ್ದು, ಭಾರತೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ಬೆಂಗಳೂರಿನ ಕ್ರೀಡಾ ಸಂಸ್ಕೃತಿ ಮತ್ತು ಬೆಳೆಯುತ್ತಿರುವ ಎಂಎಂಎ ಸಮುದಾಯದ ಬಲದೊಂದಿಗೆ, ಈ ಪಂದ್ಯಾವಳಿಯು ನಿರ್ಮಾಣ ಗುಣಮಟ್ಟ, ಸುರಕ್ಷತಾ ಮಾನದಂಡ ಮತ್ತು ಜಾಗತಿಕ ಮನ್ನಣೆ ಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.
ಈ ಐತಿಹಾಸಿಕ ಸಹಭಾಗಿತ್ವವು ಭಾರತೀಯ ಕ್ರೀಡಾಪಟುಗಳಿಗೆ ಜಾಗತಿಕ ವೇದಿಕೆಯ ಬಾಗಿಲು ತೆರೆದಿದೆ. ಎಂಎಂಎ ಹೋರಾಟಗಾರರು ಮತ್ತು ವೃತ್ತಿಪರ ಬಾಕ್ಸರ್‌ಗಳು ತಮ್ಮ ಪ್ರತಿಭೆಯನ್ನು ನೇರವಾಗಿ ಅಂತರರಾಷ್ಟ್ರೀಯ ಪ್ರೇಕ್ಷಕರ ಮುಂದೆ ಪ್ರದರ್ಶಿಸಲು ಇದೊಂದು ಸುವರ್ಣಾವಕಾಶ ವಾಗಿದೆ.
ಇದನ್ನೂ ಓದಿ: Bangalore News: ಇಂಡಿಯಾ ರೈಜಿಂಗ್ ಫೌಂಡೇಶನ್ ₹1000 ಕೋಟಿ ಮೊತ್ತದ ಲಾಭರಹಿತ R&D ಗ್ರಾಂಟ್ ನಿಧಿ ಘೋಷಣೆ
ಈ ಸರಣಿಯ ಮೊದಲ ಎರಡು ಕಾರ್ಯಕ್ರಮಗಳಾಗಿ ಡಿಸೆಂಬರ್ 5 ರಂದು ಎಪಿಎಫ್ಸಿ ಇಂಡಿಯಾ 1 ಮತ್ತು ಡಿಸೆಂಬರ್ 21 ರಂದು ಬಾಕ್ಸಿಂಗ್‌ಬೇ 4 ನೇರಪ್ರಸಾರವಾಗಲಿದ್ದು, ಬೆಂಗಳೂರು ಮತ್ತು ವೈಜಾಗ್ ಪ್ರಮುಖ ಆತಿಥೇಯ ನಗರಗಳಾಗಿ ಆಯ್ಕೆಯಾಗಿವೆ. ಇದು ಜಾಗತಿಕ ರಂಗದಲ್ಲಿ ಭಾರತೀಯ ಸಮರ ಕ್ರೀಡೆಗಳ ನವಯುಗದ ಆರಂಭದ ಸಂಕೇತವಾಗಿದೆ.
ಎಪಿಎಫ್ಸಿ ಇಂಡಿಯಾದ ಪ್ರವರ್ತಕ ಆಂಥೋನಿ ಪೆಟ್ಟಿಸ್ ಈ ಬಗ್ಗೆ ಮಾತನಾಡಿ, “ಎಪಿಎಫ್ಸಿಯನ್ನು ಮೊದಲ ಬಾರಿಗೆ ಭಾರತಕ್ಕೆ ತರುತ್ತಿರುವುದು ನನಗೆ ಬಹಳ ರೋಮಾಂಚನ ತಂದಿದೆ. ವಿಶ್ವಾ ದ್ಯಂತದ ಹೋರಾಟಗಾರರಿಗೆ ಅವಕಾಶಗಳನ್ನು ಸೃಷ್ಟಿಸಬೇಕೆಂಬ ನಮ್ಮ ಧ್ಯೇಯಕ್ಕೆ ಬದ್ಧರಾಗಿದ್ದು, ಜಾಗತಿಕವಾಗಿ ವಿಸ್ತರಿಸುವ ನಮ್ಮ ಪಯಣದಲ್ಲಿ ಇದೊಂದು ಮಹತ್ವದ ಹೆಜ್ಜೆ. ಯುಎಫ್ಸಿ ಫೈಟ್ ಪಾಸ್ ಮೂಲಕ ಭಾರತದ ಅದ್ಭುತ ಪ್ರತಿಭೆಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಮತ್ತು ವಿಶ್ವದಾದ್ಯಂತದ ಅಭಿಮಾನಿಗಳನ್ನು ಮಿಶ್ರ ಸಮರ ಕಲೆಗಳ ಭವಿಷ್ಯದೊಂದಿಗೆ ಬೆಸೆಯಲು ನಾವು ಹೆಮ್ಮೆಪಡುತ್ತೇವೆ.” ಎಂದು ಹೇಳಿದರು.
ನಟ ಮತ್ತು ಉದ್ಯಮಿ ರಾಣಾ ದಗ್ಗುಬಾಟಿ ಮಾತನಾಡಿ, “ಕ್ರೀಡೆ ಮತ್ತು ಪಾಪ್ ಸಂಸ್ಕೃತಿಯನ್ನು ಒಂದುಗೂಡಿಸಿ, ಭಾರತದಲ್ಲಿ ಬಾಕ್ಸಿಂಗ್‌ಗೆ ಹೊಸ ರೂಪ ನೀಡುವ ಚಿಂತನೆಯೊಂದಿಗೆ 'ಬಾಕ್ಸಿಂಗ್ ಬೇ' ಆರಂಭವಾಯಿತು. ಇಂದು ನಮ್ಮ ಕಾರ್ಯಕ್ರಮಗಳು ಯುಎಫ್ಸಿ ಆ್ಯಪ್‌ನಲ್ಲಿ ಜಾಗತಿಕವಾಗಿ ಪ್ರಸಾರವಾಗುತ್ತಿರುವುದು ಒಂದು ದೊಡ್ಡ ಯಶಸ್ಸು. ಕೆನೆಲೊ vs ಕ್ರಾಫರ್ಡ್ ಅವರಂತಹ ಶ್ರೇಷ್ಠ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲು ಭಾರತೀಯ ಬಾಕ್ಸರ್‌ಗಳು ಅರ್ಹರು ಎಂಬುದನ್ನು ಜಗತ್ತಿಗೆ ತೋರಿಸಲು ಇದು ವೇದಿಕೆ ಕಲ್ಪಿಸುತ್ತದೆ ಮತ್ತು ನಿಶಾಂತ್ ದೇವ್ ಅವರಂತಹ ಶ್ರೇಷ್ಠ ಬಾಕ್ಸರ್ ಗಳನ್ನು ರೂಪಿಸಲು ನಮಗೆ ನೆರವಾಗುತ್ತದೆ.” ಎಂದು ಹೇಳಿದರು.
ಯುಎಫ್ಸಿಯ ಮುಖ್ಯ ವಾಣಿಜ್ಯ ಅಧಿಕಾರಿ ಹಂಟರ್ ಕ್ಯಾಂಪ್‌ಬೆಲ್ ಮಾತನಾಡಿ “ಭಾರತವು ಎಂಎಂಎ ಕ್ರೀಡೆಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಭಿಮಾನಿ ಬಳಗವನ್ನು ಹೊಂದಿದೆ. ಈ ಫೈಟ್ ಪಾಸ್ ಕಾರ್ಯಕ್ರಮಗಳು ಈ ಮಾರುಕಟ್ಟೆಯಲ್ಲಿ ಉದಯೋನ್ಮುಖ ತಾರೆಗಳನ್ನು ರೂಪಿಸಲು ಸಹಾಯ ಮಾಡುತ್ತವೆ ಮತ್ತು ಈ ಕ್ರೀಡೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವು ದರಲ್ಲಿ ಸಂಶಯವಿಲ್ಲ.” ಎಂದು ಹೇಳಿದರು.
ಈ ಮಹತ್ವದ ಬೆಳವಣಿಗೆಯು ಭಾರತೀಯ ಸಮರ ಕ್ರೀಡಾ ಜಗತ್ತಿನಲ್ಲಿ ಹೊಸ ಪರ್ವವನ್ನು ಆರಂಭಿಸಿದೆ. ಇದು ಹೋರಾಟಗಾರರಿಗೆ ಜಾಗತಿಕ ಅವಕಾಶಗಳ ಹೆಬ್ಬಾಗಿಲಾದರೆ, ಅಭಿಮಾನಿಗಳಿಗೆ ಅಂತರರಾಷ್ಟ್ರೀಯ ದರ್ಜೆಯ ಸಮರವನ್ನು ಮನೆಯಲ್ಲೇ ನೇರಪ್ರಸಾರದಲ್ಲಿ ವೀಕ್ಷಿಸುವ ಅವಕಾಶ ನೀಡುತ್ತದೆ. ಭಾರತವನ್ನು ಸಮರ ಕ್ರೀಡೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು, ತಳಮಟ್ಟದಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಜಾಗತಿಕ ವೇದಿಕೆಯಲ್ಲಿ ದೇಶದ ಗೌರವವನ್ನು ಹೆಚ್ಚಿಸಲು ಇದು ಪೂರಕವಾಗಲಿದೆ.
ಎಪಿಎಫ್ಸಿ ಇಂಡಿಯಾ ಕುರಿತು:
ಎಪಿಎಫ್ಸಿ ಇಂಡಿಯಾ, ಆಂಥೋನಿ ಪೆಟ್ಟಿಸ್ ಅವರ ಜಾಗತಿಕ ಎಂಎಂಎ ಸಂಸ್ಥೆಯ ಅಧಿಕೃತ ಭಾರತೀಯ ಅಂಗಸಂಸ್ಥೆಯಾಗಿದೆ. ಸ್ಥಳೀಯ ಎಂಎಂಎ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುರಿಯೊಂದಿಗೆ, ಇದು ರೋಚಕ ಲೈವ್ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಮತ್ತು ಹೋರಾಟ ಗಾರರಿಗೆ ಯುಎಫ್ಸಿ ಕಡೆಗೆ ಸ್ಪಷ್ಟ ಮಾರ್ಗವನ್ನು ಒದಗಿಸುತ್ತದೆ.
ಬಾಕ್ಸಿಂಗ್‌ಬೇ ಕುರಿತು:
ಇಂಡಿಯನ್ ಬಾಕ್ಸಿಂಗ್ ಕೌನ್ಸಿಲ್ (IBC) ಮತ್ತು ಇಂಡಿಯನ್ ಪ್ರೊ ಬಾಕ್ಸಿಂಗ್ ಲೀಗ್ (IPBL) ಪರಿಸರ ವ್ಯವಸ್ಥೆಯ ಭಾಗವಾಗಿರುವ ಬಾಕ್ಸಿಂಗ್‌ಬೇ, ನಟ ರಾಣಾ ದಗ್ಗುಬಾಟಿ ಅವರ ಬೆಂಬಲದೊಂದಿಗೆ ಬಾಕ್ಸಿಂಗ್ ಅನ್ನು ಪಾಪ್ ಸಂಸ್ಕೃತಿಯೊಂದಿಗೆ ಬೆಸೆಯುತ್ತಿದೆ. ಬ್ರೂವರೀಸ್, ಸ್ಟುಡಿಯೋಗಳು ಮತ್ತು ಕ್ರೀಡಾಂಗಣಗಳಂತಹ ವಿಭಿನ್ನ ಸ್ಥಳಗಳಲ್ಲಿ ವಿಶ್ವದರ್ಜೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಇದು ಭಾರತದಲ್ಲಿ ವೃತ್ತಿಪರ ಬಾಕ್ಸಿಂಗ್ ಅನುಭವಕ್ಕೆ ಕ್ರಾಂತಿಕಾರಿ ತಿರುವು ನೀಡುತ್ತಿದೆ.