'ಗೌತಮ್ ಗಂಭೀರ್ ಕೋಚಿಂಗ್ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ರಹಮಾನುಲ್ಲಾ ಗುರ್ಬಾಝ್!
ಭಾರತ ಟೆಸ್ಟ್ ತಂಡದ ಕಳಪೆ ಪ್ರದರ್ಶನ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಿ ಎನ್ನುವ ಕೂಗು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಅವರು ಉತ್ತಮ ಕೋಚ್ ಮತ್ತು ಒಳ್ಳೆಯ ಮನುಷ್ಯ ಎಂದು ಕೋಲ್ಕತಾ ನೈಟ್ ರೈಡರ್ಸ್ ಆಟಗಾರ ರಹಮನುಲ್ಲಾ ಗುರ್ಬಾಜ್ ಹೇಳಿದ್ದಾರೆ.
ಗೌತಮ್ ಗಂಭೀರ್ ಪರ ರಹಮಾನುಲ್ಲಾ ಗುರ್ಬಾಝ್ ಬ್ಯಾಟಿಂಗ್. -
ಮುಂಬೈ: ಭಾರತ ಕಳೆದ 12 ತಿಂಗಳುಗಳ ಅಂತರದಲ್ಲಿ ತವರಿನಲ್ಲಿ ಸತತ ಎರಡು ಟೆಸ್ಟ್ ಸರಣಿಯಲ್ಲಿ (IND vs SA) ಕ್ಲೀನ್‌ಸ್ವೀಪ್ ಆಘಾತ ಅನುಭವಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಸಾಲು ಸಾಲು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಭಾರತ ತಂಡ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಲು ಗೌತಮ್ ಗಂಭೀರ್ ಅವರ ನಿರ್ಧಾರಗಳು ಮತ್ತು ಆಯ್ಕೆಗಳೇ ನೇರ ಕಾರಣ ಹಾಗಾಗಿ, ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಿ ಎನ್ನುವ ಕೂಗುಗಳು ಕೇಳಿಬರುತ್ತಿವೆ. ಈ ಮಧ್ಯೆ, ಅಫ್ಘಾನಿಸ್ತಾನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ಕೆಕೆಆರ್ ಆಟಗಾರ ರಹಮನುಲ್ಲಾ ಗುರ್ಬಾಝ್ (Rahmanullah Gurbaz), ಗೌತಮ್ ಗಂಭೀರ್ ಪರ ಬ್ಯಾಟ್ ಬೀಸಿದ್ದಾರೆ.
ರೆಡ್ ಬಾಲ್ ಕ್ರಿಕೆಟ್ ತಂಡದಲ್ಲಿರುವ ಆಟಗಾರರ ಸಾಧನೆಯ ಮೇಲೆ ವೈಫಲ್ಯಗಳು ನಿರ್ಣಯಿಸಲ್ಪಡುತ್ತವೆ. ಅವರ ಸಾಧನೆಗಳು ಕುಂಠಿತವಾದ ಪರಿಣಾಮ ಮುಖ್ಯ ಕೋಚ್ ಗೌತಮ್ ಗಂಭೀರ್ ಟೀಕೆ ಎದುರಿಸುವಂತಾಗಿದೆ. ತವರಿನಲ್ಲಿ ದಕ್ಷಿಣ ಆಫ್ರಿಕಾ ಸೋಲಿಗೂ ಮುನ್ನ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಸೋಲು ಕಂಡಿತ್ತು. ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನೂ ಕಳೆದುಕೊಂಡಿತು. ಇದರಿಂದಾಗಿ ಗುವಾಹಟಿ ಟೆಸ್ಟ್ ಬಳಿಕ ಅಭಿಮಾನಿಗಳು ಗಂಭೀರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸುತ್ತಿದ್ದರು. ಈ ಪ್ರತಿಕ್ರಿಯೆ ನನಗೆ ಅರ್ಥವಾಗುತ್ತಿಲ್ಲ. ಗೌತಮ್ ಗಂಭೀರ್ ಅವರು ಉತ್ತಮ ಕೋಚ್ ಮತ್ತು ಒಳ್ಳೆಯ ಮನುಷ್ಯ ಎಂದು ಕೆಕೆಆರ್ ಮಾಜಿ ಆಟಗಾರ ಹೇಳಿದ್ದಾರೆ.
IND vs SA: ಗುವಾಹಟಿಯಲ್ಲಿ ಏನಾಯ್ತು ಹೇಳಿ? ಗೌತಮ್ ಗಂಭೀರ್‌ಗೆ ರವಿ ಶಾಸ್ತ್ರಿ ಪ್ರಶ್ನೆ!
ಈ ಕುರಿತು ಪಿಟಿಐ ಜೊತೆಗಿನ ಸಂವಾದದಲ್ಲಿ ಮಾತನಾಡಿರುವ ಕೆಕೆಆರ್ ಮಾಜಿ ಆಟಗಾರ ರಹಮನುಲ್ಲಾ ಗುರ್ಬಾಝ್, "ನಿಮ್ಮ ದೇಶದಲ್ಲಿ 1.4 ಬಿಲಿಯನ್ ಜನರಿದ್ದರೆ, 2-3 ಮಿಲಿಯನ್ ಜನರು ಅವರ ವಿರುದ್ಧ ಇರುತ್ತಾರೆ ಎಂದು ನೀವು ಹೇಳಬಹುದು. ಉಳಿದವರು ಗೌತಮ್ ಸರ್ ಮತ್ತು ಭಾರತ ತಂಡದ ಜೊತೆ ಇದ್ದಾರೆ. ಅವರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ನನ್ನ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ನಾನು ಪಡೆದಿರುವ ಅತ್ಯುತ್ತಮ ತರಬೇತುದಾರ ಮತ್ತು ಒಳ್ಳೆಯ ಮನುಷ್ಯ, ಮಾರ್ಗದರ್ಶಕ ಅವರು. ಅವರು ಕೆಲವು ವಿಷಯಗಳನ್ನು ನಿಭಾಯಿಸುವ ರೀತಿ ನಾನು ಇಷ್ಟಪಡುತ್ತೇನೆ. ಭಾರತ ತಂಡ, ಏಕದಿನ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು, ಟಿ20ಐ ಮಾದರಿಯಲ್ಲಿ ಏಷ್ಯಾಕಪ್ ಅನ್ನು ಗೆದ್ದಿದೆ. ಅವರು ಬಹಳಷ್ಟು ಸರಣಿಗಳನ್ನು ಗೆದ್ದಿದ್ದಾರೆ, ಆದ್ದರಿಂದ ಒಂದೇ ಸರಣಿಗೆ ಅವರನ್ನು ದೂಷಿಸಲು ಸಾಧ್ಯವಿಲ್ಲ," ಎಂದು ತಿಳಿಸಿದ್ದಾರೆ.
IND vs SA 2nd ODI: ರಾಯ್ಪುರದಲ್ಲೇ ಭಾರತಕ್ಕೆ ಸರಣಿ ಗೆಲುವಿನ ಚಿತ್ತ
ಗೌತಮ್ ಗಂಭೀರ್ ಶಿಸ್ತಿನ ಮನುಷ್ಯ: ಗುರ್ಬಾಝ್
ಗುರ್ಬಾಜ್ 2024ರ ಐಪಿಎಲ್ ಸೀಸನ್‌ನಲ್ಲಿ ಕೆಕೆಆರ್ ತಂಡದಲ್ಲಿದ್ದಾಗ ಗೌತಮ್ ಗಂಭೀರ್ ಅವರೊಂದಿಗೆ ಕೆಲಸ ಮಾಡಿದ್ದರು. ಅದೇ ಆವೃತ್ತಿಯಲ್ಲಿ ಕೆಕೆಆರ್ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು. ಆಟಗಾರರ ಮೇಲೆ ಒತ್ತಡ ಹೇರದೆ, ಉತ್ತಮ ಪ್ರದರ್ಶನ ತೋರಲು ಪೂರಕವಾದ ವಾತವರಣ ಕಲ್ಪಿಸಿಕೊಡುತ್ತಿದ್ದರು ಎಂದು ಆಫ್ಘನ್ ಆಟಗಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಗಂಭೀರ್ ತಮ್ಮ ಕೆಲಸದ ಬಗ್ಗೆ ಯೋಚಿಸುವ ರೀತಿ ನನಗೆ ತುಂಬಾ ಇಷ್ಟ. ಉತ್ತಮ ವಾತಾವರಣವಿದ್ದಾಗ, ನೀವು ಯಾವಾಗಲೂ ಉನ್ನತ ಸ್ಥಾನದಲ್ಲಿರುತ್ತೀರಿ. ಅವರು ಒತ್ತಡವಿಲ್ಲ, ಕಟ್ಟುನಿಟ್ಟಾಗಿಲ್ಲ. ನಮಗೆ ವಾತಾವರಣವನ್ನು ತುಂಬಾ ಸುಲಭಗೊಳಿಸಿದರು. ಅದಕ್ಕಾಗಿಯೇ ನಾವು ಟೂರ್ನಿಯನ್ನು ಗೆದ್ದಿದ್ದೇವೆ. ಅವರು ಕಟ್ಟುನಿಟ್ಟಾಗಿಲ್ಲ ಆದರೆ ಶಿಸ್ತುಬದ್ಧರಾಗಿದ್ದಾರೆ. ಏನಾದರೂ ಶಿಸ್ತಿಗೆ ವಿರುದ್ಧವಾದಾಗ ಮಾತ್ರ ಅವರು ಕಟ್ಟುನಿಟ್ಟಾಗಿರುತ್ತಾರೆ," ಎಂದು ಗಂಭೀರ್ ಪರ ಗುರ್ಬಾಝ್ ಬ್ಯಾಟ್ ಬೀಸಿದ್ದಾರೆ.