ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs SA: ಅಭಿಷೇಕ್‌ ಶರ್ಮಾರನ್ನು ಕಟ್ಟಿ ಹಾಕಲು ವಿಶೇಷ ರಣತಂತ್ರ ರೂಪಿಸಿರುವ ದಕ್ಷಿಣ ಆಫ್ರಿಕಾ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಫೆಬ್ರವರಿ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರನ್ನು ಕಟ್ಟಿ ಹಾಕಲು ಹರಿಣ ಪಡೆ ಈಗಾಗಲೇ ರಣತಂತ್ರವನ್ನು ರೂಪಿಸಿದೆ.

ಅಭಿಷೇಕ್‌ ಶರ್ಮಾರನ್ನು ಕಟ್ಟಿ ಹಾಕಲು ಏಡೆನ್‌ ಮಾರ್ಕ್ರಮ್‌ ರಣತಂತ್ರ!

ಅಭಿಷೇಕ್‌ ಶರ್ಮಾ ಭೀತಿಯಲ್ಲಿ ದಕ್ಷಿಣ ಆಫ್ರಿಕಾ. -

Profile
Ramesh Kote Feb 20, 2026 7:26 PM

ಅಹಮದಾಬಾದ್‌: ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಪವರ್‌ಪ್ಲೇನಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವ ವೇಳೆ ಅಭಿಷೇಕ್ ಶರ್ಮಾ (Abhishek Sharma) ಎದುರಿಸುತ್ತಿರುವ ಸಮಸ್ಯೆಗಳು ಭಾರತ ತಂಡಕ್ಕೆ ಚಿಂತೆಯ ವಿಷಯವಾಗಿ ಪರಿಣಮಿಸಿವೆ. ಎಡಗೈ ಬ್ಯಾಟರ್ ನಿರಂತರವಾಗಿ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಅವುಗಳಲ್ಲಿ ಎರಡು ಬಾರಿ ಸ್ಪಿನ್ನರ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ. ಇತ್ತೀಚಿನ ಎರಡು ಪಂದ್ಯಗಳಲ್ಲಿ ಪಾಕಿಸ್ತಾನದ ಸಲ್ಮಾನ್ ಆಘಾ ಹಾಗೂ ನೆದರ್ಲೆಂಡ್ಸ್‌ನ ಆರ್ಯನ್ ದತ್‌, ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿ ಅವರ ದುರ್ಬಲತೆಯನ್ನು ಬಹಿರಂಗಪಡಿಸಿದ್ದಾರೆ. ಫೆಬ್ರವರಿ 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಸೂಪರ್-8ರ ಪಂದ್ಯಕ್ಕೂ (IND vs SA) ಮುನ್ನ ಭಾರತ ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.

ಹರಿಣ ಪಡೆಯು ಅಪಾಯಕಾರಿ ಅಭಿಷೇಕ್ ಶರ್ಮಾ ವಿರುದ್ಧ ತಂತ್ರ ರೂಪಿಸಲು ಈಗಾಗಲೇ ಮುಂದಾಗಿದೆ. ಪಂದ್ಯಕ್ಕೂ ಎರಡು ದಿನ ಮುನ್ನ ನಡೆದ ಅಭ್ಯಾಸದ ಸಮಯದಲ್ಲಿ ನಾಯಕ ಏಡೆನ್‌ ಮಾರ್ಕ್ರಮ್, ಎಡಗೈ ಬ್ಯಾಟರ್‌ಗೆ ರೌಂಡ್ ದಿ ವಿಕೆಟ್ ಬೌಲ್‌ ಮಾಡುತ್ತಿರುವುದು ಕಂಡುಬಂದಿದೆ. ಹಿಂದಿನ ಪಂದ್ಯದಲ್ಲಿ ಆರ್ಯನ್ ದತ್‌ ಕೂಡ ರೌಂಡ್‌ ದಿ ವಿಕೆಟ್‌ ಎಸೆದು ಟೀಮ್‌ ಇಂಡಿಯಾ ಆರಂಭಿಕನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದರು. ಇದೀಗ ತಂತ್ರವನ್ನು ಅನುಸರಿಸಲು ಏಡೆನ್‌ ಮಾರ್ಕ್ರಮ್‌ ಎದುರು ನೋಡುತ್ತಿದೆ. ಇದಲ್ಲದೆ ಕೇಶವ್ ಮಹಾರಾಜ್ ಕೂಡ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದು, ಪವರ್‌ಪ್ಲೇನಲ್ಲಿ ಮಾರ್ಕ್ರಮ್‌, ಸ್ಪಿನ್ನರ್‌ಗಳನ್ನು ಹೆಚ್ಚಾಗಿ ಬಳಿಸಿಕೊಳ್ಳಬಹುದು ಎಂದು ಇದರಿಂದ ತಿಳಿದಿದೆ.

IND vs SA: ಭಾರತ ತಂಡವನ್ನು ಗೆಲ್ಲಿಸಬಲ್ಲ ಇಬ್ಬರು ಬೌಲರ್‌ಗಳನ್ನು ಆರಿಸಿದ ಶಾನ್‌ ಪೊಲಾಕ್‌!

ವೈಫಲ್ಯದ ಹೊರತಾಗಿಯೂ ಅಭಿಷೇಕ್‌ಗೆ ಬೆಂಬಲ

ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆದರೂ, ಅಭಿಷೇಕ್ ಶರ್ಮಾರನ್ನು ಕೈಬಿಟ್ಟು ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್‌ XIನಲ್ಲಿ ಆಡಿಸುವ ಪ್ರಶ್ನೆಯೇ ಇಲ್ಲ ಎಂದು ತಂಡದ ಮೂಲಗಳು ಸ್ಪಷ್ಟಪಡಿಸಿವೆ. ಪಂಜಾಬ್‌ನ ಈ ಬ್ಯಾಟರ್ ಶೀಘ್ರದಲ್ಲೇ ತನ್ನ ಫಾರ್ಮ್‌ಗೆ ಮರಳುವ ನಿರೀಕ್ಷೆಯಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ತೋರಿದ ಪ್ರದರ್ಶನವೇ ಅವರನ್ನು ಟಿ20ಐ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಏರಲು ಸಹಾಯ ಮಾಡಿದೆ.

ಅಕ್ಷರ್‌ ಪಟೇಲ್‌ ಮರಳುವ ಸಾಧ್ಯತೆ

ಇದಾದರೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಹಿಂದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಉಪ ನಾಯಕ ಅಕ್ಷರ್ ಪಟೇಲ್ ತಂಡಕ್ಕೆ ಮರಳುವ ಸಾಧ್ಯತೆಯಿದ್ದು, ವಾಷಿಂಗ್ಟನ್ ಸುಂದರ್ ಪ್ಲೇಯಿಂಗ್‌ xiನಿಂದ ಹೊರಗುಳಿಯಬಹುದು. ಇದನ್ನು ಹೊರತುಪಡಿಸಿದರೆ, ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಅದೇ ಪ್ಲೇಯಿಂಗ್ ಇಲೆವೆನ್‌ನ್ನು ಮುಂದುವರಿಸುವ ನಿರೀಕ್ಷೆಯಿದೆ.

IND vs SA: ಅಭಿಷೇಕ್‌ ಶರ್ಮಾ ಔಟ್‌? ಸೂಪರ್‌-8ರ ಪದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

ಇನ್ನು ಸೂಪರ್‌-8ರ ಮೊದಲನೇ ಗುಂಪಿನ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಪಂದ್ಯವಾಗಿ ಈ ಹೈವೋಲ್ಟೇಜ್ ಕಾದಾಟ ಪರಿಣಮಿಸಬಹುದು. ಈ ಪಂದ್ಯದಲ್ಲಿ ಗೆಲ್ಲುವ ತಂಡ ಗುಂಪಿನ ಅಗ್ರಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಆದರೆ ಟಿ20ಐ ಕ್ರಿಕೆಟ್‌ನಲ್ಲಿ ಯಾವಾಗ ಏನು ಸಂಭವಿಸಬಹುದು ಎಂಬುದು ಖಚಿತವಿಲ್ಲ. ಈ ಟೂರ್ನಿಯಲ್ಲಿ ಇನ್ನೂ ಅಜೇಯರಾಗಿರುವ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳೂ ಅಚ್ಚರಿ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿವೆ.