Padukone School of Badminton: ತಂದೆ ಜತೆ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟ ದೀಪಿಕಾ: 250 ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಕೇಂದ್ರಗಳ ಸ್ಥಾಪನೆ ಗುರಿ
Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಜತ ಸೇರಿ ಕಳೆದ ವರ್ಷ ಸ್ಥಾಪಿಸಿದ ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB) ಬಗ್ಗೆ ಮಂಗಳವಾರ ಇನ್ಸ್ಟಾಗ್ರಾಮ್ನಲ್ಲಿ ಹೊಸ ಅಪ್ಡೇಟ್ ನೀಡಿದ್ದಾರೆ.


ಬೆಂಗಳೂರು: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ತಮ್ಮ ತಂದೆ, ಬ್ಯಾಡ್ಮಿಂಟನ್ ದಂತಕಥೆ (Badminton Star) ಪ್ರಕಾಶ್ ಪಡುಕೋಣೆ (Prakash Padukone) ಜತೆ ಸೇರಿ ಕಳೆದ ವರ್ಷ ಸ್ಥಾಪಿಸಿದ ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (Padukone School of Badminton-PSB) ಬಗ್ಗೆ ಮಂಗಳವಾರ ಇನ್ಸ್ಟಾಗ್ರಾಮ್ನಲ್ಲಿ ಹೊಸ ಅಪ್ಡೇಟ್ ನೀಡಿದ್ದಾರೆ. ʼʼಬ್ಯಾಡ್ಮಿಂಟನ್ ಆಡುತ್ತ ಬೆಳೆದವಳಾಗಿ, ಈ ಕ್ರೀಡೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಜೀವನವನ್ನು ರೂಪಿಸುವುದನ್ನು ನಾನು ಅರಿತುಕೊಂಡಿದ್ದೇನೆ. ಪಿಎಸ್ಬಿ ಮೂಲಕ ಬ್ಯಾಡ್ಮಿಂಟನ್ನ ಸಂತೋಷ ಮತ್ತು ಶಿಸ್ತನ್ನು ಎಲ್ಲರಿಗೂ ತಲುಪಿಸಿ, ಆರೋಗ್ಯವಂತ, ಕೇಂದ್ರೀಕೃತ ಮತ್ತು ಕ್ರೀಡೆಯಿಂದ ಪ್ರೇರಿತ ಸಮುದಾಯವನ್ನು ರೂಪಿಸಲು ಆಶಿಸುತ್ತೇವೆ” ಎಂದು ದೀಪಿಕಾ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಪಿಎಸ್ಬಿ ತನ್ನ ಮೊದಲ ವರ್ಷದಲ್ಲಿಯೇ ಭಾರತದ 18 ನಗರಗಳಾದ ಬೆಂಗಳೂರು, ಎನ್ಸಿಆರ್, ಮುಂಬೈ, ಚೆನ್ನೈ, ಜೈಪುರ, ಪುಣೆ, ನಾಸಿಕ್, ಮೈಸೂರು, ಪಾಣಿಪತ್, ಡೆಹರಾಡೂನ್, ಉದಯಪುರ, ಕೊಯಮತ್ತೂರು, ಸಾಂಗ್ಲಿ, ಮತ್ತು ಸೂರತ್ನಲ್ಲಿ 75 ಮೂಲಭೂತ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದೆ. ಈ ವರ್ಷಾಂತ್ಯದ ವೇಳೆಗೆ 100 ಕೇಂದ್ರಗಳಿಗೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 250 ಕೇಂದ್ರಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ.
ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್ ಪೋಸ್ಟ್ ಇಲ್ಲಿದೆ:
ಪಿಎಸ್ಬಿ ಮಾರ್ಗದರ್ಶಕ ಮತ್ತು ಸಲಹೆಗಾರ ಪ್ರಕಾಶ್ ಪಡುಕೋಣೆ, “ಕ್ರೀಡೆಯು ಬೆಳವಣಿಗೆಯ ಅವಿಭಾಜ್ಯ ಭಾಗ. ಇದು ಶಿಸ್ತು, ಸ್ಥಿರತೆ ಮತ್ತು ಗೆಲುವಿನ ಮನೋಭಾವವನ್ನು ಕೋರ್ಟ್ನ ಆಚೆಗೂ ಹರಡುತ್ತದೆ. ಪಿಎಸ್ಬಿ ಮೂಲಕ ಗುಣಮಟ್ಟದ ತರಬೇತಿಯನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಿ, ಮೂಲಭೂತ ಹಂತದಿಂದ ಪ್ರತಿಭೆಗಳನ್ನು ಪೋಷಿಸಿ, ಭಾರತೀಯ ಬ್ಯಾಡ್ಮಿಂಟನ್ಗೆ ಬಲಿಷ್ಠ ಬುನಾದಿ ಹಾಕುವುದು ನಮ್ಮ ಗುರಿ” ಎಂದಿದ್ದಾರೆ.
ಪಿಎಸ್ಬಿಯನ್ನು ಸ್ಥಳೀಯ ತರಬೇತಿ ಕೇಂದ್ರಗಳನ್ನು ಶಾಲೆಗಳು, ಸಂಸ್ಥೆಗಳು ಸಹಯೋಗದಲ್ಲಿ ತೆರೆಯಲಾಗುತ್ತದೆ. ಬೆಂಗಳೂರಿನ ಮೂರು ಉನ್ನತ ಕಾರ್ಯಕ್ಷಮತೆ ಕೇಂದ್ರಗಳಲ್ಲಿ ಮುಖ್ಯ ತರಬೇತಿ ನಡೆಯುತ್ತದೆ. 100ಕ್ಕೂ ಹೆಚ್ಚು ತರಬೇತುದಾರರಿಗೆ ತರಬೇತಿ ನೀಡಲಾಗಿದೆ. ಉತ್ತಮ ಸೌಲಭ್ಯಗಳೊಂದಿಗೆ, ಪಿಎಸ್ಬಿ ಗುಣಮಟ್ಟದ ತರಬೇತಿ, ಸ್ಥಿರತೆ ಮತ್ತು ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಬೆಳೆಸುವತ್ತ ಗಮನ ಹರಿಸಿದೆ.
ನಟಿಯಾಗುವ ಮೊದಲು ದೀಪಿಕಾ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ಶಾಲಾ ದಿನಗಳಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ, ರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿದ್ದರು. ಆದರೆ ನಂತರ ಮಾಡೆಲಿಂಗ್ ಮತ್ತು ನಟನೆಯನ್ನು ಆಯ್ದುಕೊಂಡರು. ಈಗ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ, ನಟ ರಣವೀರ್ ಸಿಂಗ್ ಅವರನ್ನು ವಿವಾಹವಾಗಿದ್ದು, ಅವರಿಗೆ ದುಆ ಎಂಬ ಮಗಳಿದ್ದಾಳೆ.