About Us Advertise with us Be a Reporter E-Paper

ಗುರು

ಶ್ರಾವಣದ ಹೊಸ್ತಿಲು ಪೂಜೆ

ಸಂದೇಶ್ ಎಚ್. ನಾಯ್‌ಕ್, ಹಕ್ಲಾಡಿ

ಷಾಢದ ಜಡಿಮಳೆಯ ನಲುಗಿ ಹೋಗುವ ಹಸಿರು ಸಂಪತ್ತು ಶ್ರಾವಣದಲ್ಲಿ ಜೀವಕಳೆಯ ಸಮೃದ್ಧತೆಯೊಂದಿಗೆ ನಳನಳಿಸಲಾರಂಭಿಸುತ್ತದೆ. ಆ ಜೀವಕಳೆಯ ಪುಳಕ ಮೈಮನ ಹಾಗೂ ಮನೆಯನ್ನೆಲ್ಲಾ ಆವರಿಸಿದೆಯೋ ಎಂಬಂತೆ ಹಬ್ಬಗಳ ಸಡಗರ ಸಂಭ್ರಮ ಹಬ್ಬುತ್ತದೆ. ಎಲ್ಲೆಡೆಯ ಶ್ರಾವಣ ಮಾಸ ನಮ್ಮ ಕರಾವಳಿ ಮಾಲೆನಾಡು ಪ್ರದೇಶಗಳಲ್ಲಿ ಸೋಣ ಎಂದೆನಿಸಿಕೊಂಡಿದೆ. ಈ ಮಾಸದಲ್ಲಿ, ಕರಾವಳಿ ಹಾಗೂ ಮಲೆನಾಡು ಪ್ರದೇಶದ ಎಲ್ಲಾ ದೇವಾಲಯಗಳಲ್ಲಿ ಸೋಣೆ ಆರತಿಯೆಂಬ ವಿಶೇಷ ಪೂಜಾ ವಿಧಿ ನೆರವೇರುತ್ತದೆ. ಅದರೊಂದಿಗೆ ನಡೆಯುವ ಇನ್ನೊಂದು ಆಚರಣೆಯೆಂದರೆ ಹೊಸ್ತಿಲ ಪೂಜೆ ಹೊಸ್ತಿಲಜ್ಜಿಯನ್ನು ಆಹ್ವಾನಿಸುವುದು ಮತ್ತು ಕಳುಹಿಸುವುದು. ಇದನ್ನು ಸರಳವಾಗಿ ಅಜ್ಜಿ ಶಾಸ್ತ್ರ ಎಂದೂ ಕರೆಯಲಾಗುತ್ತದೆ. ಈ ಮೂಲಕ ಲಕ್ಷ್ಮಿಗೆ ಪೂಜಿ ಸಲ್ಲಿಸಲ್ಪಡುತ್ತದೆ.

ಸೋಣದಲ್ಲಿ ಮಹಿಳೆಯರು, ಮಕ್ಕಳಿಗೆ ಮನೆಯ ಅಕ್ಕಪಕ್ಕದ ಬಯಲು, ಗದ್ದೆ ಹಾಗೂ ಬದುಗಳಲ್ಲೆಲ್ಲಾ ಸುತ್ತಾಡಿ ಕೆಲವು ವಿಶಿಷ್ಟವಾದ ಹೂವು ಹಾಗೂ ಸಣ್ಣ ಸಣ್ಣ ಜಾತಿಯ ಗಿಡಗಳನ್ನು ಜಾಗರೂಕತೆಯಿಂದ ಆರಿಸಿಕೊಂಡು ತರುವ ಕೆಲಸ. ಇದು ಹೊಸ್ತಿಲ ಪೂಜೆಗೆ ಅವರ ಬಹುಮುಖ್ಯ ಪೂರ್ವ ತಯಾರಿಯಾಗಿದೆ. ಸಾಮಾನ್ಯವಾಗಿ ಪೂಜೆಗಳಿಗೆ ಬಳಸುವ ಮಾಮೂಲಿ ಹೂವುಗಳಿಗಿಂತಲೂ ಬಗೆಯ ಹೂವುಗಳಿಗೇ ಈ ಆಚರಣೆಯಲ್ಲಿ ಹೆಚ್ಚು ಪ್ರಾಮುಖ್ಯತೆ. ಧಾನ್ಯಗಳ ಮೊಳಕೆಯ ಕೊಳ್ ಹೂವು ಇಲ್ಲಿ ಪ್ರಧಾನವಾಗಿ ಬಳಸಲ್ಪಡುತ್ತದೆ. ಇದರೊಂದಿಗೆ ಸ್ಥಳೀಯವಾಗಿ ದೊರಕುವ ಸೋಣೆ ಹೂವು, ದಂಟು ಸೋಣೆ, ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಚಿಗಿತುಕೊಳ್ಳುವ ಕಾಗೆ ಕಾಲು, ಗುಬ್ಬಿ ಕಾಲು ಎಂಬ ಹೆಸರಿನ ಸಣ್ಣ ಜಾತಿಯ ವಿಶಿಷ್ಟ ಸಸ್ಯಗಳನ್ನೂ ಬಳಸುತ್ತಾರೆ.

ಕೊಳ್ ಹೂವು: ಈ ಹಬ್ಬದ ಆಚರಣೆಗೆಂದೇ ಬಳಸಲ್ಪಡುವ ‘ಕೊಳ್ ಹೂವು’ ಒಂದು ವಿಭಿನ್ನವಾದ ಹೂವು. ಯಾವುದೇ ಮಾರುಕಟ್ಟೆಗೆ ಎಡತಾಕದೇ, ಗಿಡ, ಸುತ್ತದೇ ಮನೆಯಲ್ಲಿಯೇ ಸ್ವತಃ ತಯಾರಿಸಿಕೊಳ್ಳುವ ಈ ಹೂವು ಸ್ವಾವಲಂಬನೆಯ ಸಂಕೇತ. ಉದ್ದು, ಹುರುಳಿ, ಹೆಸರು ಹಾಗೂ ಮೆಂತೆ ಇತ್ಯಾದಿ ಧಾನ್ಯಗಳನ್ನು ನೀರಿನಲ್ಲಿ ನೆನೆ ಹಾಕಿ ಮೊಳಕೆ ಬರಿಸಿ ಮಣ್ಣಿನ ಸಣ್ಣ ಗುಪ್ಪೆಮಾಡಿ ಬಿತ್ತಿ ಅದರ ಮೇಲೆ ಒಂದು ದೊಡ್ಡ ಅಗಲ ಬಾಯಿಯ ಪಾತ್ರೆಯನ್ನು ಗಾಳಿಯಾಡದಂತೆ ಬೋರಲು ಹಾಕಲಾಗುತ್ತದೆ. ನಾಲ್ಕಾರು ದಿನಗಳ ನಂತರ ಮೂಡುವ ಸಣ್ಣ ಸಣ್ಣ ಎಳೆಯ ಗಿಡಗಳನ್ನು ಹೂವಿನಂತೆ ಬಳಸುತ್ತಾರೆ. ಅದನ್ನು ‘ಕೊಳ್ ಹೂವು’ ಎಂದು ಕರೆಯುತ್ತಾರೆ.

ಅಥವಾ ಸೋಣ ಸಂಕ್ರಮಣದ ದಿನದಿಂದ ಹೊಸ್ತಿಲಿಗೆ ಹೂವು ಹಾಕಿ ಪೂಜಿಸುವ ಈ ಶಾಸ್ತ್ರ ಪ್ರಾರಂಭವಾಗುತ್ತದೆ. ಬಹುತೇಕ ಮಹಿಳೆಯರೇ ಈ ಪೂಜೆಯನ್ನು ನೆರವೇರಿಸುತ್ತಾರೆ. ಗೃಹಿಣಿಯರು ಅಂದು ಬೇಗನೇ ಎದ್ದು ಸ್ನಾನ ಮಾಡಿ ಶುಚಿಯಾಗಿ, ಮನೆಯ ಎಲ್ಲಾ ಹೊಸ್ತಿಲುಗಳನ್ನೂ ಚೆನ್ನಾಗಿ ತೊಳೆದು ಒರೆಸಿ ಶುದ್ಧಗೊಳಿಸುತ್ತಾರೆ. ಪ್ರತಿಯೊಂದು ಹೊಸ್ತಿಲ ಮೇಲೆಯೂ ರಂಗೋಲಿ ಬರೆದು ಅರಿಶಿನ ಕುಂಕುಮಗಳನ್ನು ಹಚ್ಚಿ, ಮುಂಚಿತವಾಗಿಯೇ ಆರಿಸಿಕೊಂಡು ಬಂದಿರುವ ಬಗೆ ಬಗೆಯ ನೈಸರ್ಗಿಕ ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಹೂವು ಹಾಗೂ ಗಿಡಗಳನ್ನು ಚಿಕ್ಕ ಚಿಕ್ಕ ಕಟ್ಟುಗಳಂತೆ ಮಾಡಿ ಒಳಮುಖವಾಗಿ ಹೊಸ್ತಿಲಿನ ಎರಡೂ ಬದಿಗಳಲ್ಲಿ ಹಾಗೂ ಮಧ್ಯದಲ್ಲಿ ಇಟ್ಟು ಪೂಜಿಸಲಾಗುತ್ತದೆ. ದೂಪ ದೀಪಗಳ ಆರಾಧನೆಯೂ ನಡೆಯುತ್ತದೆ. ಗಿಂಡಿಗಳಲ್ಲಿ ನೀರನ್ನು ಇಡುವ ಕ್ರಮವೂ ಇದೆ. ಇದು ಹೊಸ್ತಿಲಜ್ಜಿಯನ್ನು ಬರಮಾಡಿಕೊಳ್ಳುವುದರ ಸಂಕೇತವಾಗಿ ಹೂವನ್ನು ಒಳಮುಖವಾಗಿ ಇರಿಸಲಾಗುತ್ತದೆ.

ಸಿಂಹ ಸಂಕ್ರಮಣದಿಂದ ಆರಂಭವಾಗುವ ಈ ಹೊಸ್ತಿಲ ಪೂಜೆಯನ್ನು ಗೃಹಿಣಿಯರು ಪ್ರತಿದಿನವೂ ಬೆಳಗ್ಗೆ ಚಾಚೂ ತಪ್ಪದೆ ನಡೆಸುತ್ತಾರೆ. ಕೆಲವು ಸಮುದಾಯಗಳಲ್ಲಿ ಭರ್ತಿ ಒಂದು ತಿಂಗಳು ಇದು ಇನ್ನು ಕೆಲವರು ಗಣೇಶ ಚತುರ್ಥಿಯ ತನಕ ಮಾಡಿ ನಂತರ ನಿಲ್ಲಿಸುತ್ತಾರೆ. ಆ ಶಾಸ್ತ್ರ ನಡೆಯುವ ಅವಧಿಯ ಕೊನೆಯ ದಿನದಂದು ಹೊಸ್ತಿಲಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಂದು ಸಂಜೆ ಆ ಹೂವುಗಳನ್ನು ಬಳಸಿ ಯಥಾಪ್ರಕಾರವೇ ತುಸು ವಿಶೇಷ ರೀತಿಯಲ್ಲಿ ಹೊಸ್ತಿಲನ್ನು ಅಲಂಕರಿಸಲಾಗುತ್ತದೆ. ಈ ಹೂವುಗಳನ್ನು ಹೊರಮುಖವಾಗಿ ಇಟ್ಟು ಪೂಜೆ ಮಾಡುವುದು ಕ್ರಮ. ವಿಶೇಷ ಪೂಜಾ ವಿಧಿ ವಿಧಾನಗಳನ್ನು ಈ ಸಂದರ್ಭದಲ್ಲಿ ಅನುಸರಿಸಲಾಗುತ್ತರಾದರೂ, ಅದು ಪ್ರಾದೇಶಿಕವಾಗಿ ಹಾಗೂ ಸಾಮುದಾಯಿಕವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ದೋಸೆ, ಸೇವಿಗೆ, ಕಡುಬು ಇನ್ನಿತ್ಯಾದಿ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ಅವುಗಳನ್ನು ಹೊಸ್ತಿಲ ಮೇಲಿಟ್ಟು ನೈವೇದ್ಯ ಮಾಡುತ್ತಾರೆ. ಮನೆಗೆ ಬಂದ ಅತಿಥಿಗಳಿಗೂ ಅದನ್ನೇ ನೀಡಲಾಗುತ್ತದೆ. ಇದರೊಂದಿಗೆ ಮುತ್ತೈದೆಯರಿಗೆ ಬಾಗಿನ ನೀಡುವ ಕ್ರಮವೂ ಇದೆ. ಯಾವುದೇ ವಿಜೃಂಭಣೆ ಅಥವಾ ಆಡಂಭರವಿಲ್ಲದೆ ಸರಳವಾಗಿ ಆಚರಿಸಲ್ಪಡುವ ಈ ಹಬ್ಬಗಳು ಹಳ್ಳಿಯ ವೈಶಿಷ್ಟ್ಯತೆಯ ಪ್ರತೀಕವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close