About Us Advertise with us Be a Reporter E-Paper

ಯಾತ್ರಾಯಾತ್ರಾ panel2

ಅಂದು ಆ ಶ್ರವಣ ಇಂದು ಈ ಕೃಷ್ಣ …

ಶ್ವೇತಾ

ಹೆತ್ತುಹೊತ್ತು, ಸಾಕಿ ಸಲುಹಿದ ಜೀವಗಳಿಗೆ ಮುಪ್ಪು ಆವರಿಸಿದೊಡನೆ ತೆಪ್ಪಗೆ ವೃದ್ಧಾಶ್ರಮಕ್ಕೆ ಅಟ್ಟುವ ಈ ಕಾಲಘಟ್ಟದಲ್ಲಿ ಶ್ರವಣಕುಮಾರನಂಥವರು ಎಲ್ಲಿಯಾ ದರೂ ಇದ್ದಾರಾ ಎಂದು ಬೂದುಗನ್ನಡಿಯಲ್ಲಿ ಹುಡುಕುವಂತಾಗಿದೆ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಮಧ್ಯಪ್ರದೇಶದ ಜಬಲ್‌ಪುರದ ಕೈಲಾಶ್‌ಗಿರಿ ಬ್ರಹ್ಮಚಾರಿ, ಒಂದು ಬುಟ್ಟಿಯಲ್ಲಿ ತನ್ನ ತಾಯಿಯನ್ನು, ಮತ್ತೊಂದರಲ್ಲಿ ಒಂದಷ್ಟು ಬಟ್ಟೆಗಳನ್ನು ತುಂಬಿ ಕೊಂಡು ತನ್ನ ತಾಯಿಯನ್ನು ಹೆಗಲ ಮೇಲೆ ಹೊತ್ತು ಧಾರ್ಮಿಕ ಸ್ಥಳಗಳಿಗೆ ಕಾಲ್ನಡಿಗೆಯಲ್ಲೇ ಇತರರಿಗೆ ಮಾದರಿಯಾಗಿದ್ದು, ಎಲ್ಲರ ಸ್ಮೃತಿಯಿಂದ ಈಗಾಗಲೇ ಮಾಸಿಹೋಗಿದೆ. ಮತ್ತೆ ಅಂಥ ಐತಿಹಾಸಿಕ ಘಟನೆಗಳನ್ನು ನೆನಪಿಸುವಂತಿದೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬೆಂಗಳೂರಿನ ಡಿ. ಕೃಷ್ಣಕುಮಾರ್ ಅವರ ‘ಮಾತೃ ಸೇವಾ ಸಂಕಲ್ಪ ಯಾತ್ರಾ’.

ಕೃಷ್ಣಕುಮಾರ್ ಒಂದು ಪ್ರತಿಷ್ಠಿತ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರು. ನಾಲ್ಕು ವರ್ಷಗಳ ಹಿಂದೆ ಅವರ ತಂದೆ ದಕ್ಷಿಣಮೂರ್ತಿ ನಿಧನರಾದರು. ಆ ವೇಳೆ ಮೈಸೂರಿನ ತಮ್ಮ ಮನೆ ಯಲ್ಲಿ ತಾಯಿ ಚೂಡಾರತ್ನ(70) ಏಕಾಂಗಿ ಜೀವನ ಕಳೆಯುವಂತಾಯಿತು. ತನ್ನ ತಾಯಿಯನ್ನು ನೋಡಲು ಮನೆಗೆ ತೆರಳಿದಾಗ ತನ್ನ ತಾಯಿ ಹಂಪಿ, ಹಳೇಬೀಡು, ಬೇಲೂರು ನೋಡುವಾಸೆಯನ್ನು ಮಗ ನೊಂದಿಗೆ ವ್ಯಕ್ತಪಡಿಸಿದರು. ‘ತಂದೆ ಅವರು ಇದ್ದಾ ಗಂತೂ ನನ್ನಮ್ಮ ಹೊಸ್ತಿಲು ದಾಟಿ ಹೋದವರಲ್ಲ, ತಾವು ಆಯ್ತು ತಮ್ಮ ಅಡುಗೆಮನೆಯಾಯ್ತು ಅಂತ ಇದ್ದೋರು. ಅವರ ಸಣ್ಣ ಆಸೆ ಈಡೇರಿಸೋಕೆ ಇದೊಂದು ಸುವರ್ಣಾವಕಾಶ’ ಎಂದೆನಿಸಿದ ಕೃಷ್ಣ ಕುಮಾರ್, ತನ್ನ ತಾಯಿಯ ಕನಸನ್ನು ನನಸಾಗಿಸು ವುದೇ ನನ್ನ ಜೀವನದ ಪರಮಗುರಿ ಎಂದು ಗಟ್ಟಿ ನಿರ್ಧಾರ ಕೈಗೊಂಡು, ರಾಜೀನಾಮೆ ನೀಡಿ, ಜನವರಿ 16 ರಂದು ಮಾತೃ ಸೇವಾ ಸಂಕಲ್ಪ ಯಾತ್ರಾಗೆ ಹೊರಟರು. ತಾಯಿ ಕೇಳಿದ್ದು, ಕೇವಲ ಬೇಲೂರು ಹಳೇಬೀಡು ಹಂಪಿ ಮಾತ್ರವಾದರೂ ಇಡೀ ದೇಶ ವನ್ನು ತನ್ನ ಅಮ್ಮನಿಗೆ ತೋರಿಸುವ ಹೆಬ್ಬಯಕೆ ಇವರದ್ದಾಯಿತು.

ಕಾರು, ರೈಲು ಅಥವಾ ಬಸ್ಸಿನಲ್ಲಿ ಹೋಗ ಬಹುದಿತ್ತು. ಆದರೆ ಅವರು ಆಯ್ಕೆ ಮಾಡಿಕೊಂಡಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ತನ್ನ ಅಪ್ಪ ಕೊಡಿಸಿದ ಬಜಾಜ್ ಚೇತಕ್ ಸ್ಕೂಟರ್‌ನ್ನ. ಕಾರಣ ಈ ಗಾಡಿಯಲ್ಲಿ ತೆರಳಿದರೆ ಹಳ್ಳಿಯ ದರ್ಶನ ಮಾಡಬಹುದು. ಜತೆಗೆ ಎಲ್ಲಾ ದೇವಾಲಯಗಳಿಗೂ ಭೇಟಿ ನೀಡಬಹುದು ಎಂಬ ಸದುದ್ದೇಶದಿಂದ. ಆ ಸ್ಕೂಟರ್‌ನಲ್ಲಿ ಪ್ರಯಾಣಕ್ಕೆ ಅವಶ್ಯಕ ವಿರುವ ಎಲ್ಲಾ ವಸ್ತುಗಳನ್ನಿರಿಸಿಕೊಂಡು, ದೀರ್ಘ ಪ್ರಯಾಣದಲ್ಲಿ ತಮ್ಮ ತಾಯಿಗೆ ಆಯಾಸವಾಗದಂತೆ ಮೆತ್ತನೆಯ ಬಟ್ಟೆಗಳಿಂದ ಹಿಂಬಂದಿಯ ಸೀಟನ್ನು ವಿನ್ಯಾಸಗೊಳಿಸಿ ಪ್ರಯಾಣ ಶುರುಮಾಡಿದರು. ಬರೋಬ್ಬರಿ 7 ತಿಂಗಳು, ಸರಿ ಸುಮಾರು 25,000 ಕಿ.ಮೀ ದೂರ ಆ ಸ್ಕೂಟರಿನಲ್ಲಿ ಕ್ರಮಿಸಿ, ಕರ್ನಾಟಕ, ಕೇರಳ, ತಮಿಳು ನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾ ರಾಷ್ಟ್ರದ ಎಲ್ಲೋರಾ, ಭೀಮ ಶಂಕರ, ಗಣೇಶವಾಡಿ, ನೌಬಾದ್ ಸೇರಿ ಬಹುತೇಕ ಎಲ್ಲಾ ದೇವಾಲಯಗಳ, ಸುಪ್ರಸಿದ್ಧ ತಾಣಗಳ ದರ್ಶನವನ್ನು ತಮ್ಮ ತಾಯಿಗೆ ಮಾಡಿಸಿದ್ದಾರೆ. ಹಳೇ ಕಾಲದ ವಾಹನ ಆಗಾಗ್ಗೆ ರಿಪೇರಿಗೆ ಬಂದರೂ ಅದನ್ನು ತಾವೇ ಖುದ್ದು ಸರಿಪಡಿಸಿಕೊಂಡು, ಯಾತ್ರಾ ಮುಂದುವರಿಸಿದ್ದಾರೆ. ಯಾವುದೇ ಹೋಟೆಲ್‌ಗಳು, ಲಾಡ್‌ಜ್ಗಳಲ್ಲಿ ತಂಗದೇ ಮಠಗಳನ್ನೇ ಆಶ್ರಯಿಸಿದ್ದ ರಂತೆ. ಸದ್ಯ ಡಿ. ಕೃಷ್ಣಕುಮಾರ್, ತಮ್ಮ ತಾಯಿ ಚೂಡಾರತ್ನ ಅವರ ಕನಸನ್ನು ನನಸಾಗಿಸಿಕೊಂಡು, ಉತ್ತರ ಕರ್ನಾಟಕ ದಿಂದ ಬೆಂಗಳೂರಿನತ್ತ ಹೆಜ್ಜೆ ಹಾಕಿದ್ದಾರೆ.

ಈಗ ಬಿಸಿ ರೊಟ್ಟಿಗಾಗಿ ಸಿಟಿ ಜೀವನದಲ್ಲಿ ಮೈಬಗ್ಗಿಸಿ ದುಡಿಯುವ ಶ್ರಮಿಕರು. ಇಷ್ಟೆಲ್ಲಾ ಸುತ್ತಾಡೋಕೆ ಯಾರ ಬಳಿಯೂ ಸಮಯ ವಿಲ್ಲದಿರ ಬಹುದು. ಏಳೆಂಟು ತಿಂಗಳು ರಜೆ ಹಾಕಿ, ಅಥವಾ ರಾಜೀನಾಮೆ ನೀಡಿಯೋ ಮುಂದಿನ ಜೀವನ ವನ್ನು ಸಜೆ ಮಾಡಿಕೊಳ್ಳುವುದು ಉಚಿತವೂ ಅಲ್ಲ. ಆದರೆ, ವೀಕೆಂಡಿನಲ್ಲಿ ಆದರೂ ನಿಮ್ಮ ಪೋಷಕರಿ ಗೊಂದಿಷ್ಟು ಸಮಯ ಮೀಸಲಿಡಿ. ಕೇವಲ ಕೃಷ್ಣ ಕುಮಾರ್ ಅವರ ಯಾತ್ರಾ ವಿಡಿಯೋವನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಶೇರ್ ಮಾಡುತ್ತಾ, ಒಂದಷ್ಟು ಗಿಟ್ಟಿಸಿಕೊಳ್ಳುವ ಬದಲಿಗೆ ವಾರಂತ್ಯದಲ್ಲಿ ನೀವು ಸುತ್ತಾಡುವ ಸ್ಥಳಗಳಿಗೆ ಅವರನ್ನೂ ಕರೆದೊಯ್ದರೆ, ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಖುಷಿ ಪಟ್ಟಾರು. ದಿನವಿಡೀ ಬಿಳಿಗೋಡೆ ನೋಡುತ್ತಾ ಕಾಲಕಳೆಯುವ ಆ ಹಿರಿ ಜೀವಗಳ ಕಣ್ಣುಗಳಿಗೆ ಬಣ್ಣದ ಜಗತ್ತನ್ನು ತೋರುವ ಸಣ್ಣ ಕೈಂಕರ್ಯ ನಿಮ್ಮಿಂದಾಗಲಿ ಎಂಬುದೇ ನಮ್ಮ ಆಶಯ.

Tags

Related Articles

Leave a Reply

Your email address will not be published. Required fields are marked *

Language
Close