ಲಿವ್-ಇನ್ ಸಂಬಂಧಗಳ ವಿವಿಧ ಆಯಾಮಗಳು

Posted In : ಸಂಗಮ, ಸಂಪುಟ

ಮೊನ್ನೆ ನಟಿಯೊಬ್ಬಳ ‘ಲಿವ್ ಇನ್’ಸಂಬಂಧವು ಮುರಿದು ಬಿದ್ದ ಹಿನ್ನೆಲೆಯಲ್ಲಿ ಟಿವಿ ಚಾನೆಲ್ ಒಂದರ ಚರ್ಚೆಯಲ್ಲಿ ಆಕೆಗೆ ಆಗಿರಬಹುದಾದ ಅನ್ಯಾಯ, ಕಾನೂನುರೀತ್ಯಾ ಅದಕ್ಕೆ ಪರಿಹಾರ ಮುಂತಾದವುಗಳನ್ನು ಚರ್ಚಿಸಿ ಹಿಂದಿರುಗುತ್ತಿದ್ದೆ. ಕಾಕತಾಳೀಯವೋ ಎನ್ನುವಂತೆ ಆಗ ನನಗೆ ಪರಿಚಯಸ್ಥ ಮಹಿಳೆಯೊಬ್ಬರು ಫೋನಾಯಿಸಿ ಬಿಕ್ಕಿ ಬಿಕ್ಕಿ ಅಳುತ್ತ ಹೇಳಿದರು- ‘ಮಾವನವರು ತೀರಿ ಹೋದ ಮೇಲೆ, ಗಂಡ ಹಾಗೂ ಅತ್ತೆಯ ಕಿರುಕುಳ ಜಾಸ್ತಿಯಾಗಿದ್ದು, ಈಗ ನೆಪಮಾತ್ರಕ್ಕಾದರೂ ಇರುವ ಏಕೈಕ ಆಸ್ತಿಯಾದ ಮನೆಯನ್ನು ಮಾರುತ್ತಾರಂತೆ. ನಿನ್ನ ಪಾಲು ಒಂದಿಷ್ಟು ನಿನಗೂ ಕೊಡುತ್ತೇವೆ.

ನೀನು ಹಾಗೂ ನಿನ್ನ ಮಗಳು ಬೇರೆ ಜೀವಿಸಿ’ ಎಂದು. ವಿವಾಹವಾಗದೇ ಲಿವ್-ಇನ್ ಸಂಬಂಧಗಳಲ್ಲಿ ಮಹಿಳೆಗಾಗುವ ಅನ್ಯಾಯ, ಪರಿಹಾರದ ಬಗ್ಗೆ ಟಿವಿಯಲ್ಲಿ ಆಗ ತಾನೇ ಚರ್ಚಿಸಿದ್ದ ನನಗೆ ಶಾಸ್ತ್ರೋಕ್ತವಾಗಿ, ಕಾನೂನು ಪ್ರಕಾರವಾಗಿ ವಿವಾಹವಾಗುವ ಮಹಿಳೆಯರಿಗೇ ನ್ಯಾಯ ಸಿಗದಾದಾಗ ಇನ್ನು ‘ಲಿವ್-ಇನ್’ಸಂಬಂಧಗಳಲ್ಲಿ ನ್ಯಾಯ ಸಿಗುತ್ತದೆಯೇ ಎಂಬ ಶಂಕಾಭಾವನೆ, ನಿರಾಸೆ, ಜುಗುಪ್ಸೆ ಎಲ್ಲವೂ ಒಮ್ಮೆಲೇ ಉಂಟಾದವು. ಒಂದೆಡೆ ಪಾಶ್ಚಿಮಾತ್ಯರನ್ನು ಕುರುಡಾಗಿ ಅನುಸರಿಸುತ್ತ ತೀರಾ ಆಧುನಿಕರು ಅಥವಾ ಮಾಡರ್ನ್ ಎನಿಸಿಕೊಳ್ಳುವ ಜನ; ಮತ್ತೊಂದೆಡೆ ಎಷ್ಟೇ ಶಿಕ್ಷಿತರಾದರೂ, ಹೆಂಡತಿಯನ್ನು ಸಮಾನಳೆಂದು ನೋಡದ, ಪಾಳೆಗಾರಿಕೆ ಮನಸ್ಥಿತಿಯ ಸಂಕುಚಿತ ಮನೋಭಾವದ ಜನ. ಅಳಬೇಕೋ, ನಗಬೇಕೋ ತಿಳಿಯಲಿಲ್ಲ.

ಲಿವ್-ಇನ್ ಸಂಬಂಧಗಳು ನಿಷಿದ್ಧ ವಿಷಯ. ಅದರ ಬಗ್ಗೆ ಮುಕ್ತವಾಗಿ ಮಾತನಾಡುವುದೂ ಸಲ್ಲ. ಹಾಗಾಗಿಯೇ ಇಂತಹ ಸಂಬಂಧಗಳಲ್ಲಿರುವವರು ಕೂಡ ತಾವು ಲಿವ್-ಇನ್‌ನಲ್ಲಿ ಇದ್ದೇವೆಂದು ಧೈರ್ಯದಿಂದ, ತಲೆಯೆತ್ತಿ ಹೇಳಿಕೊಳ್ಳುವುದಿಲ್ಲ. ಹೀಗಿದ್ದರೂ ಭಾರತದ ಮಹಾನಗರಗಳಾದ ಮುಂಬೈ, ದೆಹಲಿ, ಬೆಂಗಳೂರು, ಪುಣೆ, ಚಂಡೀಗಡ ಮೊದಲಾದವುಗಳಲ್ಲಿ ಇಂತಹ ಸಂಬಂಧಗಳು ಹೆಚ್ಚುತ್ತಿವೆ ಎಂಬುದಂತೂ ಸತ್ಯ. ಇಂತಹ ನಿಷಿದ್ಧ, ಗಂಭೀರ ವಿಷಯದ ಕೆಲ ಸ್ತರಗಳನ್ನು ಬಿಚ್ಚಿಡಬೇಕೆನಿಸಿ ಕನ್ನಡದಲ್ಲಿ ಇದರ ಸಮಾನಾರ್ಥಕ ಪದಗಳಿಗಾಗಿ ಹುಡುಕಾಡಿದೆ.

ಸಂಸ್ಕೃತ, ಹಿಂದಿಯಲ್ಲೂ ಹುಡುಕಿದೆ. ಊಹೂಂ. ಆ ಪದವೇ ಇಲ್ಲ. ಏಕೆಂದರೆ ಪ್ರಾಥಮಿಕವಾಗಿ ಇದು ನಮ್ಮ ಸಂಸ್ಕೃತಿಯೇ ಅಲ್ಲ. ‘ವಿವಾಹೇತರ ಸಹಬಾಳ್ವೆ’ಅಥವಾ ‘ವಿವಾಹೇತರ ಸಮಜೀವನ’ಎಂಬವುಗಳು ಉದ್ದ ಎನಿಸಿದರೂ ಚಿಕ್ಕ ಪದ ಲಿವ್-ಇನ್‌ಗೆ ಅತ್ಯಂತ ನಿಕಟವಾದವು ಎನಿಸುತ್ತದೆ. ಇದರರ್ಥ ಇಷ್ಟೇ. ವಿವಾಹವಾಗದೇ, ವಿವಾಹವಾದಂತೇ ಜೊತೆಯಲ್ಲಿ ಬಾಳ್ವೆ ನಡೆಸುವುದು. ಅನೇಕರು ಮರೆತಿರಬಹುದು – 2010ರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಈ ರೀತಿಯ ಸಂಬಂಧಗಳನ್ನು ಸಮರ್ಥಿಸುತ್ತ ವಿವಾಹಪೂರ್ವ ಲೈಂಗಿಕತೆ ಹಾಗೂ ವಿವಾಹೇತರ ಸಹಬಾಳ್ವೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿ ಆಕೆಯು ಐಪಿಸಿ ಕಲಂ 499 ಉಲ್ಲಂಘನೆ ಮಾಡಿದ್ದು, ಆಕೆಯ ವಿರುದ್ಧ ಕ್ರಮ ಜರುಗಿಸಬೇಕೆಂದು ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು.

ಖುಷೂ/ಕಣಿಯಮ್ಮಾಳ್ ಎಂಬ ಆ ಪ್ರಕರಣದಲ್ಲಿ ಕೋರ್ಟ್ ಹೇಳಿದ್ದಿಷ್ಟೇ- ‘ಲಿವ್-ಇನ್ ಸಂಬಂಧಗಳು ಸಮಾಜದಲ್ಲಿ ಅನೈತಿಕ ಎನಿಸಿಕೊಂಡರೂ ಕಾನೂನುಬಾಹಿರವಲ್ಲ’ಎಂದು. ಇಂತಹ ಸಂಬಂಧಕ್ಕೆ ಕಾನೂನಿನ ಸಮರ್ಥನೆ ಸಿಕ್ಕಿದ್ದು 2005ರಲ್ಲಿ ಜಾರಿಗೆ ಬಂದ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಅನ್ವಯ. 2005ನೇ ಇಸವಿಗಿಂತ ಮುಂಚೆ ವಿವಾಹಿತ ಮಹಿಳೆಯ ಮೇಲೆ ದೌರ್ಜನ್ಯ ನಡೆದಾಗ, ಆಕೆಗಿದ್ದ ಏಕಮಾತ್ರ ದಾರಿ ಎಂದರೆ ಐಪಿಸಿ ಕಲಂ 498ಅ ಪ್ರಕಾರ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದು. ಆ ಕಲಂ ಪ್ರಕಾರ ದೌರ್ಜನ್ಯ ಎಂದರೆ ಕೇವಲ ದೈಹಿಕ ದೌರ್ಜನ್ಯ, ಹೊಡಿ-ಬಡಿ ಮಾಡಿದ್ದು ಎಂದು ಸಂಕುಚಿತವಾಗಿ ಅರ್ಥೈಸಲ್ಪಟ್ಟಿತ್ತು.

ಇದು ತಪ್ಪಿದರೆ, ಅಗತ್ಯ ಕುಟುಂಬ ನಿರ್ವಹಣಾ ಮೊಬಲಗು ಅಥವಾ ಅಗತ್ಯ ಪೋಷಕ ಹಣಕ್ಕಾಗಿ ಸಿಆರ್‌ಪಿಸಿ ಕಲಂ 125ರ ಅನ್ವಯ ದಾವೆ ಹೂಡಬೇಕಿತ್ತು. ಈ ಪರಿಹಾರಗಳು ಕೇವಲ ವಿವಾಹಿತ ಸಂತ್ರಸ್ತೆಗಷ್ಟೇ ಸೀಮಿತವಾಗಿತ್ತು. ಆದರೆ, 2005ರಲ್ಲಿ ಜಾರಿಗೆ ಬಂದ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ ಕಲಂ 2(ಊ) ಪ್ರಕಾರ ‘ವಿವಾಹದ ರೀತಿಯ ಸಂಬಂಧ’ಅಂದರೆ ಲಿವ್-ಇನ್‌ಗಳಲ್ಲಿರುವ ಸಂತ್ರಸ್ತೆಯರಿಗೂ ಪರಿಹಾರ ಸಿಕ್ಕಿದೆ. ಈ ಕಲಂ ಒಂದು ನಿಟ್ಟಿನಲ್ಲಿ ವಿವಾಹೇತರ ಸಹಬಾಳ್ವೆ ಕಾನೂನುಬಾಹಿರವಲ್ಲ ಎಂದು ಪ್ರತಿಪಾದಿಸಿದೆ.

ಈ ಕಾಯಿದೆಯು ದೌರ್ಜನ್ಯ ಎಂಬ ಪದಕ್ಕೆ ವ್ಯಾಪಕ ಅರ್ಥ ಕಲ್ಪಿಸಿದೆ. ದೌರ್ಜನ್ಯ ಎಂದರೆ ಕೇವಲ ದೈಹಿಕ ದೌರ್ಜನ್ಯ ಅಷ್ಟೇ ಅಲ್ಲ, ಮೂದಲಿಸುವುದು, ಬಯ್ಯುವುದು ಒಳಗೊಂಡಂತೆ ಮೌಖಿಕ ದೌರ್ಜನ್ಯ, ಮಾನಸಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಊಟ-ಬಟ್ಟೆ ಕೊಡದೇ ಇರುವುದು, ಮನೆಯಿಂದ ಹೊರಗಟ್ಟುವುದು ಇತ್ಯಾದಿ ಒಳಗೊಂಡ ಆರ್ಥಿಕ ದೌರ್ಜನ್ಯ ಎಂದು ವಿಶಾಲವಾಗಿ ವ್ಯಾಖ್ಯಾನಿಸಿದೆ. ಹಾಗೆಯೇ ಈ ಕಾಯಿದೆಯನ್ವಯ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಬೇಕಿಲ್ಲ. ಆರ್ಥಿಕ ಪರಿಹಾರ ಮೊದಲುಗೊಂಡು ಇರಲು ವಸತಿ, ವೈದ್ಯಕೀಯ ನಿರ್ವಹಣೆ, ಮಕ್ಕಳ ಶಾಲೆ ಖರ್ಚು ನಿರ್ವಹಣೆ ಸೇರಿ ಹಲವು ರೀತಿಯ ಪರಿಹಾರದ ಜತೆಗೆ ಇಂತಹ ಪ್ರಕರಣಗಳಲ್ಲಿ ಕಾನೂನಿನ ಉಚಿತ ನೆರವು ಕೂಡ ಪಡೆದುಕೊಳ್ಳಬಹುದು.

2013ರಲ್ಲಿ ಇಂದಿರಾ ಶರ್ಮ / ವಿ.ಕೆ.ವಿ. ಶರ್ಮ  ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಲಿವ್-ಇನ್ ಸಂಬಂಧಗಳಿಗೆ ಪರಿಮಿತಿ ಹಾಕಿದೆ. ಅದೇನೆಂದರೆ: 1) ಇಂತಹ ಸಂಬಂಧಗಳಲ್ಲಿ ಪುರುಷ ಹಾಗೂ ಸ್ತ್ರೀ ಕಾನೂನಿನ ಪ್ರಕಾರ ಮದುವೆಯಾಗಬಲ್ಲ ವಯಸ್ಸಿನವರಾಗಿರಬೇಕು. ಅಂದರೆ ಸ್ತ್ರೀಗೆ 18, ಪುರುಷನಿಗೆ 21 ವರ್ಷ ವಯಸ್ಸಾಗಿರಬೇಕು.

2) ಇಂತಹ ಸಂಬಂಧದಲ್ಲಿರುವ ಪುರುಷನಾಗಲೀ, ಸ್ತ್ರೀಯಾಗಲಿ ವಿವಾಹಿತರಾಗಿರಕೂಡದು. ಅಂದರೆ ವಿವಾಹವಾಗಿದ್ದು, ಹೆಂಡತಿ ಅಥವಾ ಗಂಡ ಜೀವಂತವಿದ್ದು ಮತ್ತೊಬ್ಬರ ಜೊತೆ ‘ವಿವಾಹೇತರ ಸಹಬಾಳ್ವೆ’ ನಡೆಸುವುದು ದ್ವಿಪತ್ನಿತ್ವ ಅಥವಾ ದ್ವಿಪತಿತ್ವ ಎನಿಸಿಕೊಳ್ಳುವುದರಿಂದ ಅಂತಹ ಸಂಬಂಧಗಳಲ್ಲಿ ಸಂತ್ರಸ್ತ ಸ್ತ್ರೀಗೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಕಾಯಿದೆಯ ಅನ್ವಯ ದ್ವಿಪತ್ನಿತ್ವ/ದ್ವಿಪತಿತ್ವದಲ್ಲಿರುವ ಸಂತ್ರಸ್ತರಿಗೆ ಪರಿಹಾರ ಸಿಕ್ಕುವುದಿಲ್ಲ ಎಂದು ಕೂಡ ಕೋರ್ಟ್ ಹೇಳಿದೆ.

3) ಪುರುಷ, ಸ್ತ್ರೀ ಇಬ್ಬರೂ ತಂತಮ್ಮ ತಿಳಿವಳಿಕೆಯಿಂದಲೇ, ಸ್ವ-ಇಚ್ಛೆಯಿಂದ ಕೂಡಿ ಸಹಜೀವನ ನಡೆಸಿರಬೇಕು. ಯಾರ ಬಲವಂತಕ್ಕಾಗಿ ಅಥವಾ ಭಯಕ್ಕೆ ಒಳಪಟ್ಟು ಇಂತಹ ಸಂಬಂಧಕ್ಕೆ ಸಮ್ಮತಿಸಿರಬಾರದು.

4) ಸಹಬಾಳ್ವೆ ದೀರ್ಘಕಾಲ ನಡೆಸಿರಬೇಕು. ಕೇವಲ ವಾರಕ್ಕೊಮ್ಮೆ ಭೇಟಿ, ತಿಂಗಳಿಗೊಮ್ಮೆ ಭೇಟಿ ಇದ್ದಂತಹ ಸಂಬಂಧಗಳು
ಲಿವ್-ಇನ್ ಎನಿಸಿಕೊಳ್ಳುವುದಿಲ್ಲ ಎಂದಿದೆ ಕೋರ್ಟ್.

5) ಲೈಂಗಿಕ ಸಂಬಂಧ ಕೇವಲ ವೈಭೋಗ ಮನೋರಂಜನೆಯಲ್ಲದೇ ಭಾವನಾತ್ಮಕ ಸಂಬಂಧವೇರ್ಪಟ್ಟಿರಬೇಕು ಎಂದು ಕೋರ್ಟ್ ಹೇಳಿದೆ.

6) ಇಂತಹ ಸಂಬಂಧಗಳಲ್ಲಿ ಸ್ತ್ರೀಯನ್ನು ಕೇವಲ ಮನೆಗೆಲಸಕ್ಕೋ ಅಥವಾ ಲೈಂಗಿಕ ತೃಪ್ತಿಗಷ್ಟೇ ಇಟ್ಟುಕೊಳ್ಳದೇ ಇಬ್ಬರೂ ಪತಿ-ಪತ್ನಿಯರಂತೇ ಜವಾಬ್ದಾರಿಗಳನ್ನು ಹಂಚಿಕೊಂಡಿರಬೇಕು. ಮೇಲೆ ಹೇಳಿದಂತೆ ಇರುವ ಸಂಬಂಧಗಳು ಮಾತ್ರ ‘ಲಿವ್-ಇನ್’ ಎನಿಸಿಕೊಳ್ಳುತ್ತವೆ ಎಂದ ಸರ್ವೋಚ್ಚ ನ್ಯಾಯಾಲಯ, ಅಂತಹ ಲಿವ್-ಇನ್ ಸಂಬಂಧಗಳಲ್ಲಿ ಮಾತ್ರ ಸಂತ್ರಸ್ತ ಸ್ತ್ರೀಗೆ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯನ್ವಯ ಪರಿಹಾರ ಸಿಗುತ್ತದೆ ಎಂದು ವ್ಯಾಖ್ಯಾನಿಸಿದೆ.

2010ರಲ್ಲಿ ಭಾರತ ಮಾತಾ / ವಿಜಯ ರಂಗನಾಥನ್ ಹಾಗೂ ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ನಿರ್ಣಯದಲ್ಲಿ ಲಿವ್-ಇನ್‌ಗಳಲ್ಲಿ ಹುಟ್ಟಿದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿಲ್ಲವೆಂದೂ, ಆದರೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕಿದೆಯೆಂದೂ ಹೇಳಿದೆ. ಕೇವಲ ಸ್ವಯಾರ್ಜಿತ ಸ್ಥಿರ ಆಸ್ತಿಯಷ್ಟೇ ಅಲ್ಲದೆ, ಹಣ-ಒಡವೆ ಒಳಗೊಂಡು ಸ್ವಯಾರ್ಜಿತ ಚರ ಆಸ್ತಿಯಲ್ಲೂ ಹಕ್ಕಿದೆ ಎಂದು ನಿರ್ಣಯಿಸಿದೆ. ತೀರಾ ಇತ್ತೀಚೆಗೆ 2015ರಲ್ಲಿ ವಕೀಲ ಉದಯ ಗುಪ್ತ ನಡೆಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿ ತೀರಿಕೊಂಡ ಬಳಿಕ ಮತ್ತೊಬ್ಬ ಮಹಿಳೆಯೊಂದಿಗೆ ಸುಮಾರು 20 ವರ್ಷಗಳಷ್ಟು ದೀರ್ಘಕಾಲ ‘ವಿವಾಹೇತರ ಸಹಬಾಳ್ವೆ’ಯಲ್ಲಿದ್ದು, ಆ ಮಹಿಳೆಗೂ ಪತ್ನಿಯಂತೆಯೇ ಆಸ್ತಿಯಲ್ಲಿ ಪಾಲು ಸಿಗಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.

ಕಾನೂನಿನ ದೃಷ್ಟಿಯಲ್ಲಿ ಇಷ್ಟು ಬೆಂಬಲವಿದ್ದರೂ, ಶೇ.95ರಷ್ಟು ಲಿವ್-ಇನ್ ಸಂಬಂಧಗಳು ಅಲ್ಪಾವಧಿಯಲ್ಲೇ ಮುರಿದುಬೀಳುತ್ತವೆ ಹಾಗೂ ಸಾಮಾನ್ಯವಾಗಿ ಮಹಿಳೆಯೇ ಬಲಿಪಶುವಾಗಿರುತ್ತಾಳೆ. ಪೊಲೀಸ್ ಠಾಣೆಗೆ ಬರುವ ಅತ್ಯಾಚಾರ ದೂರುಗಳಲ್ಲಿ ಬಹಳಷ್ಟು ದೂರುಗಳು ಪ್ರೀತಿಸಿದ ಹುಡುಗ ಮದುವೆಯಾಗಲು ನಿರಾಕರಿಸಿದಾಗ ಅಥವಾ ಲಿವ್-ಇನ್ ಸಂಬಂಧಗಳಲ್ಲಿರುವ ಹುಡುಗ ಆ ಸಂಬಂಧವನ್ನು ಮುಂದುವರಿಸಲು ಒಪ್ಪದಿದ್ದಾಗ ಹುಡುಗಿಯು ಹುಡುಗನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದಂಥವು ಆಗಿವೆ.

ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಒಂದು ಸಮೀಕ್ಷೆ ಪ್ರಕಾರ ವರ್ಷದಲ್ಲಿ ದಾಖಲಾದ ಒಟ್ಟು 1600 ಅತ್ಯಾಚಾರ ಪ್ರಕರಣಗಳಲ್ಲಿ ಶೇ.25ರಷ್ಟು ಪ್ರಕರಣಗಳಲ್ಲಿ ಲಿವ್ -ಇನ್ ಸಂಬಂಧದಲ್ಲಿದ್ದ ಹುಡುಗನು ಹುಡುಗಿಯನ್ನು ಮದುವೆಯಾಗಲು ಒಪ್ಪದಿದ್ದಾಗ ದಾಖಲಾಗಿರುವಂಥವು. 2015ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಲಿವ್-ಇನ್ ಸಂಬಂಧಗಳಿಂದ ದಾಖಲಾಗುವ ಅತ್ಯಾಚಾರ ಪ್ರಕರಣಗಳನ್ನು ಅತ್ಯಾಚಾರ ಎಂದು ಪರಿಗಣಿಸಬಾರದು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು (****) ಹಾಕಲಾಯಿತು. ನ್ಯಾಯಾಲಯವು ಅರ್ಜಿಯನ್ನು ವಜಾ ಮಾಡಿತಾದರೂ ತನಿಖಾಧಿಕಾರಿಗೆ ಕೆಲವು ನಿರ್ದೇಶನಗಳನ್ನು ಕೊಟ್ಟಿತು.

ಏನೆಂದರೆ, ಇತರ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯನ್ನು ತಕ್ಷಣ ಬಂಧಿಸಿದಂತೆ ಲಿವ್-ಇನ್ ಅತ್ಯಾಚಾರಗಳ ಆರೋಪಿಗಳನ್ನು ಬಂಧಿಸಬಾರದು ಹಾಗೂ ವೈದ್ಯಕೀಯ ಪರೀಕ್ಷಾ ವರದಿ ಹಾಗೂ ಇತರ ಸಾಕ್ಷ್ಯಗಳೆಲ್ಲವನ್ನೂ ಸಂಗ್ರಹಿಸಿದ ನಂತರವೇ ಬಂಧಿಸಬೇಕೆಂದು ನಿರ್ದೇಶಿಸಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಲಿವ್-ಇನ್ ಹೆಚ್ಚಾಗುತ್ತಿರುವುದೇಕೆ? ಒಂಟಿತನ ದೂರ ಮಾಡಲು, ಪ್ರೀತಿಸಿದವರ ಜತೆ ಹೆಚ್ಚು ಸಮಯ ಕಳೆಯಲು ಎಂದು ಕೆಲವರು ಕಾರಣ ಕೊಡುತ್ತಾರೆ. ಇನ್ನು ಮದುವೆಯಾಗುವ ವ್ಯಕ್ತಿಯ ಜತೆ ಮುಂಚೆಯೇ ಸಹಬಾಳ್ವೆ ನಡೆಸಿದರೆ ಅವರೊಂದಿಗೆ ಜೀವನ ಪರ್ಯಂತ ಬಾಳಬಹುದೇ ಇಲ್ಲವೇ ಎಂಬುದು ತಿಳಿಯುತ್ತದೆ ಎಂದು ಪೆದ್ದುಪೆದ್ದಾಗಿ ಹೇಳುವವರಿದ್ದಾರೆ, ನಂಬುವವರೂ ಇದ್ದಾರೆ.

ಲಿವ್-ಇನ್ ಎನ್ನುವುದು ರಾಸಾಯನಿಕಶಾಸ್ತ್ರ ಲ್ಯಾಬ್‌ಗಳಲ್ಲಿ ಮಾಡುವ ಪ್ರಯೋಗದಂತೆಯೇ? ಅಥವಾ ಮದುವೆ ಮುಂಚಿನ ******* ಇದ್ದಂತೆಯೇ? ಲಿವ್-ಇನ್‌ನಲ್ಲಿದ್ದವರು ಮದುವೆಯಾದಾಗ ಅಂತಹ ವಿವಾಹಗಳು ಹೆಚ್ಚು ಕಾಲ ಮುಂದುವರಿಯುತ್ತವೆಂಬ ಖಾತ್ರಿಯೂ ಇಲ್ಲ, ಲಿವ್-ಇನ್ ಇರದೇ ಮದುವೆಯಾದರೆ ಅಂತಹ ಮದುವೆಗಳು ಬೇಗ ಮುರಿಯುತ್ತವೆ ಎಂಬುದೂ ಅಷ್ಟೇ ನಿರಾಧಾರ. ವಿವಾಹ ಸಂಬಂಧಗಳಲ್ಲಿ ಬದ್ಧತೆಯಿರುತ್ತದೆ. ಇಂತಹ ಬದ್ಧತೆಯಿಂದ ನುಣುಚಿಕೊಳ್ಳಲು ಲಿವ್-ಇನ್ ಸುಲಭ ಮಾರ್ಗವಾಗಿದೆ. ಲಿವ್-ಇನ್ ಎಂಬುದು ದಿನ ಬೆಳಗಾದರೆ ನವೀಕರಿಸಬೇಕಾದ ಅಲಿಖಿತ ಒಪ್ಪಂದವಿದ್ದಂತೆ. ಇಬ್ಬರಲ್ಲಿ ಒಬ್ಬರಿಗೆ ಆ ಕ್ಷಣವೇ ಅದರಿಂದ ಹೊರಬರಬೇಕೆನಿಸಿದಾಗಲೂ ಇನ್ನೊಬ್ಬರ ಒಪ್ಪಿಗೆಯಿಲ್ಲದೇ ಹೊರನಡೆಯಬಹುದು. ಇಂತಹ ಸಂಬಂಧಗಳಲ್ಲಿ ಇಬ್ಬರಿಗೂ ಭಾವನಾತ್ಮಕ ಸ್ಥಿರತೆ ಇರದು.

ನಂಬಿಕೆ ದ್ರೋಹ ಆಗಬಹುದೆಂಬ ಭಯ, ಆತಂಕ ಸದಾ ಕಾಡುತ್ತದೆ. ಮಾನಸಿಕ ಸ್ಥಿರತೆ, ಮಾನಸಿಕ ಬಲ ಕುಂದುತ್ತದೆ, ಆತ್ಮಗೌರವ ಕುಗ್ಗುತ್ತದೆ. ಮಾನಸಿಕ ಖಿನ್ನತೆ ಆವರಿಸುವ ಸಂಭವವೂ ಹೆಚ್ಚು. ಇಂತಹ ಸಂಬಂಧಗಳು ಮುರಿದು ಬಿದ್ದಾಗ ಸ್ತ್ರೀಗೆ ಬೇರೊಂದು ಮದುವೆಯಾಗುವುದಾಗಲಿ ಅಥವಾ ಸಮಾಜದಲ್ಲಿ ತಲೆ ಎತ್ತಿ ನಡೆಯುವುದಾಗಲಿ ಕಷ್ಟಸಾಧ್ಯವಾಗುತ್ತದೆ. ಕಳೆದ ತಿಂಗಳು ಹಾಂಕಾಂಗ್ ಪ್ರವಾಸ ಹೋದಾಗ ಅಲ್ಲಿಯ ಸ್ಥಳೀಯ ಟೂರಿಸ್ಟ್ ಗೈಡ್ ಸುಮಾರು 40ರ ಪ್ರಾಯದ ಮಹಿಳೆ. ಅವಿವಾಹಿತೆ.

ತಾನು ಮದುವೆಯಾಗದಿರುವುದಕ್ಕೆ ಆಕೆ ಕೊಟ್ಟ ಕಾರಣ ಇಷ್ಟೇ- ‘ನಿಮ್ಮ ದೇಶ (ಭಾರತ)ದಲ್ಲಿರುವಂತೆ ಗುರು-ಹಿರಿಯರು ನಿಶ್ಚಯಿಸುವ ವಿವಾಹಗಳು ಇಲ್ಲಿಲ್ಲ. ನಾವೇ ಸ್ವತಃ ಹುಡುಕಿಕೊಳ್ಳಬೇಕು. ಅದಕ್ಕಾಗಿ ಸಮಯ ವ್ಯಯಿಸಬೇಕು. ಬದ್ಧತೆ ಇರುವ ಒಳ್ಳೆಯ ಹುಡುಗರು ಸಿಗುವುದೇ ವಿರಳ. ಹುಡುಗ ಸಿಕ್ಕರೂ ಇಂದಿನ ಇಂಟರ್ನೆಟ್ ಯುಗದಲ್ಲಿ ಆನ್‌ಲೈನ್ ಡೇಟಿಂಗ್, ಚಾಟಿಂಗ್ ಹಾವಳಿಯಲ್ಲಿ ಒಂದು ಸ್ಥಿರ ಸಂಬಂಧಕ್ಕೆ ಅಂಟಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ’ಎಂದು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಮ್ಮೆ ವಿವಾಹವಾದರೆ ಕಷ್ಟವೋ, ಸುಖವೋ, ಅದು ಜೀವನಪರ್ಯಂತ ಇರುವ ನಂಟು ಎಂಬ ಭಾವನೆಯೇ ವಿವಾಹಿತರಿಗೆ ಅದರಲ್ಲೂ ವಿವಾಹಿತ ಮಹಿಳೆಗೆ ಪಾಶ್ಚಿಮಾತ್ಯ ದೇಶಗಳಲ್ಲೂ ಸಿಗದಂತಹ ಮಾನಸಿಕ, ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸುತ್ತದೆ. ಈ ಅಂಶವನ್ನು ಭಾರತೀಯ ವಿವಾಹವೆಂದರೆ ಮೂಗು ಮುರಿಯುವ ಯುವಜನರು ತಿಳಿದರೆ ಒಳ್ಳೆಯದು.

ಡಿ.ರೂಪ ಮೌದ್ಗಲ್, ಐಪಿಎಸ್ ಅಧಿಕಾರಿ

One thought on “ಲಿವ್-ಇನ್ ಸಂಬಂಧಗಳ ವಿವಿಧ ಆಯಾಮಗಳು

Leave a Reply

Your email address will not be published. Required fields are marked *

10 + 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top