ವಿಶ್ವವಾಣಿ

ಕೊಡಗಿನ ಜತೆ ನಾಡು ನಿಂತ ಪರಿ, ನಾಡುಮುರುಕರಿಗೆ ಮಾದರಿ!

ರಾಜಕೀಯಕ್ಕೆ ಗೌರವ-ಘನತೆ ತಂದವರಲ್ಲಿ ಪ್ರಮುಖರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಸ್ತಂಗತರಾದ ಕಳೆದ ಗುರುವಾರ ರಾತ್ರಿ ೮ ಗಂಟೆ ಸಮಯ. ಕೊಡಗಿನಿಂದ ಒಬ್ಬರು ಪತ್ರಿಕಾ ಕಚೇರಿಗೆ ದೂರವಾಣಿ ಕರೆ ಮಾಡಿದ್ದರು. ಇಲ್ಲಿ ಕೊಡಗಿನಲ್ಲಿ ಬೆಳಗಿನಿಂದ ಕಂಡಾಪಟ್ಟೆ ಮಳೆ ಆಗುತ್ತಿದೆ. ಕೆಲವೆಡೆ ಭೂಕುಸಿತವಾಗುತ್ತಿದೆ. ಮನೆ ಕೂಡ ಉರುಳಿದೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮದವರು ಬೆಳಗಿನಿಂದಲೂ ವಾಜಪೇಯಿ ತೀರಾ ಅಸ್ವಸ್ಥ ಎಂದು ತೋರಿಸುತ್ತಿದ್ದರು. ಇದೀಗ ಸಂಜೆಯಿಂದ ಅವರು ವಿಽವಶರಾದ ಸುದ್ದಿಯನ್ನು ಮಾತ್ರ ಬಿತ್ತರಿಸುತ್ತಿದ್ದಾರೆ. ಈ ಮಾಧ್ಯಮಗಳಿಗೆ ಒಬ್ಬ ರಾಜಕಾರಣಿ, ಅದರಲ್ಲೂ ಮಾಜಿ ಪ್ರಧಾನಿ ಬಗ್ಗೆ ಇರುವ ಆಸ್ಥೆ  ಸಂಕಷ್ಟದಲ್ಲಿರುವ ಕೊಡಗಿನ ಜನರ ಬಗ್ಗೆ ಇಲ್ಲ. ನಾಳೆ ನೀವಾದರೂ ಕೊಡಗಿನ ಅತಿವೃಷ್ಟಿ ಮತ್ತದರ ಅನಾಹುತವನ್ನು ಮುಖಪುಟದ ಮುಖ್ಯಸುದ್ದಿಯಾಗಿ ಪ್ರಕಟಿಸಿ ಎಂದು ಆಗ್ರಹಪೂರ್ವಕವಾಗಿ ಹೇಳಿದರು.

‘ಇಲ್ಲಪ್ಪಾ, ವಾಜಪೇಯಿ ಅವರು ಈ ದೇಶ ಕಂಡ  ನಾಯಕ, ಸರ್ವಮಾನ್ಯ ಪ್ರಧಾನಿ ಆಗಿದ್ದವರು, ಮೇಲಾಗಿ ಅವರು ಯಾವುದೋ ಒಂದು ಪಕ್ಷಕ್ಕೆ ಸೀಮಿತರಾದ ರಾಜಕಾರಣಿ ಆಗಿರಲಿಲ್ಲ. ಪಕ್ಷಭೇದ ಮರೆತು ಎಲ್ಲರ ಪ್ರಶಂಸೆಗೂ ಪಾತ್ರರಾದ ಮಾನವತಾವಾದಿ. ಈ ದೇಶಕ್ಕೆ ಹೆಮ್ಮೆ ತಂದವರು. ಭಾರತ ರತ್ನ ಎನಿಸಿಕೊಂಡವರು. ಅವರನ್ನು ಬರೀ ರಾಜಕಾರಣಿಯಾಗಿ ನೋಡುವುದು ತರವಲ್ಲ. ಹೀಗಾಗಿ ಅವರು ಅಸ್ತಂಗತರಾ ವಾರ್ತೆಗೆ ಪ್ರಾಮುಖ್ಯಕೊಟ್ಟಿದ್ದಾರೆ. ಹಾಗೆಂದು ಕೊಡಗಿನ ಬಗ್ಗೆ ಮಾಧ್ಯಮದವರಿಗೆ ಕಾಳಜಿ ಇಲ್ಲ ಎಂದೇನೂ ಅಲ್ಲ. ಅಸಡ್ಡೆಯಿಂದ ನೋಡಲಾಗುತ್ತಿದೆ ಎಂದೂ ಅರ್ಥವಲ್ಲ. ‘ಸುದ್ದಿ ಮೌಲ್ಯ’ ಬೇಡುವ ಸಂದರ್ಭ ಹಾಗಿದೆ ಅಷ್ಟೇ. ಇವತ್ತು ವಾಜಪೇಯಿ ವಿಽವಶರಾದ ಸುದ್ದಿಗೆ ಸಿಕ್ಕಿರುವ ಪ್ರಾಮುಖ್ಯ ನಾಳೆ ಕೊಡಗಿನ ಅನಾಹುತಕ್ಕೂ ಸಿಗುತ್ತದೆ’ ಅಂದರೆ ಅದನ್ನು ಆತ ಒಪ್ಪಲು ತಯಾರಿರಲಿಲ್ಲ. ‘ವಾಜಪೇಯಿ ಅವರಿಗೂ ಕೊಡಗಿಗೂ ಯಾವುದೇ ಸಂಬಂಧ ಇಲ್ಲ, ಅವರು ಒಮ್ಮೆಯೂ ಕೊಡಗಿಗೆ ಬಂದಿಲ್ಲ, ಇವತ್ತೂ ನಮ್ಮೂರಲ್ಲಿ ಆಗಿರುವ ಅನಾಹುತವೇ ನಮಗೆ ಮುಖ್ಯ, ಮಾಧ್ಯಮದವರು ಸೇರಿ ಎಲ್ಲರೂ ಹೀಗಾಡುತ್ತಿರುವುದರಿಂದಲೇ ಕೊಡವರು ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸುತ್ತಿರುವುದು’ ಎಂದೆಲ್ಲ ಬಡಬಡಿಸಿದ. ಕೊಡಗಿನ ವಿಕೋಪ ತಂದ ಕೋಪದಲ್ಲಿ ಆತ ಆ ಮಾತಾಡಿದ್ದನೋ, ವಾಜಪೇಯಿ ಅವರ ಬಗ್ಗೆ ತಿಳಿದುಕೊಳ್ಳದೇ ಸಿಡುಕಿದ್ದನೋ ಗೊತ್ತಾಗಲಿಲ್ಲ. ‘ಅಲ್ಲಪ್ಪಾ, ವಾಜಪೇಯಿ ಅವರು ಈ ದೇಶದ ಪ್ರಧಾನಿ ಆಗಿದ್ದವರು, ಕೊಡಗು ಭಾರತದಲ್ಲೇ ಇದೆ ತಾನೇ, ಅದು ಭಾರತದ ಅವಿಭಾಜ್ಯ ಅಂಗ ತಾನೇ, ಒಂದೊಮ್ಮೆ ಕೊಡಗು ಪ್ರತ್ಯೇಕ ರಾಜ್ಯವಾದರೆ ಅದು ಕೂಡ ಭಾರತದಲ್ಲೇ ಇರುತ್ತದೆ ಅಲ್ಲವೇ’ ಎಂದು ಮರುಪ್ರಶ್ನಿಸಿದಾಗ ನಿರುತ್ತರನಾದ. ಆದರೆ ಸೋಲೊಪ್ಪಿಕೊಳ್ಳದೆ ‘ಕೊಡಗಿನ ಬಗ್ಗೆ ಯಾರಿಗೂ ಕಾಳಜಿ ಇಲ್ಲ’ ಎಂದು ಸಿಡುಕುತ್ತಲೇ -ನ್ ಸಂಪರ್ಕ ತುಂಡರಿಸಿದ!

ಯಾರಿಗಿಲ್ಲ ಕೊಡಗಿನ ಬಗ್ಗೆ ಕಾಳಜಿ?! ಅದೂ ಪ್ರಕೃತಿ ವಿಕೋಪ ಅದನ್ನು ‘ಒದ್ದೆಮುದ್ದೆ’ ಮಾಡಿಟ್ಟಿರುವ ಇಂಥ ದುರಂತ ಸನ್ನಿವೇಶದಲ್ಲಿ..!

ಮಳೆಮೂಲ ಪ್ರಕೃತಿ ವಿಕೋಪದಿಂದ ಕಳೆದೊಂದು ಶತಮಾನದಲ್ಲೇ ಕಂಡು-ಕೇಳರಿಯದಷ್ಟು ಭೀಕರ ಅನಾಹುತಕ್ಕೆ ಸಾಕ್ಷಿಯಾಗಿರುವ ಕೊಡಗಿನ ಸಂಕಷ್ಟ ತಮ್ಮ ಮನೆಯದೇ ಎಂಬಷ್ಟರ ಮಟ್ಟಿಗೆ ಇಡೀ ಕರ್ನಾಟಕ ಎದ್ದು ನಿಂತಿದೆ. ಅಲ್ಲಿ ಉರುಳಿದ ಮನೆ ತಮ್ಮದೇ, ಕರಗಿದ ಬೆಟ್ಟ ತಮ್ಮದೇ, ಕೊಚ್ಚಿಕೊಂಡು ಹೋದ ತೋಟ, ಗದ್ದೆ, ಹೊಲ ತಮ್ಮದೇ, ಅಲ್ಲಿ ಬೀದಿಗೆ ಬಿದ್ದ ಜನ ತಮ್ಮವರೇ ಎಂಬಷ್ಟರ ಮಟ್ಟಿಗೆ ನೋವು, ಸಂಕಟವನ್ನು ನಾಡಿನ ಜನ ಅನುಭವಿಸುತ್ತಿದ್ದಾರೆ. ತತ್ಪರಿಣಾಮವಾಗಿ ಜಾತಿ, ಧರ್ಮ, ಊರು, ಕೇರಿ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಮಲೆನಾಡು, ಬಯಲುಸೀಮೆ ಎಂಬ ಯಾವುದೇ ಭೇಧ-ಭಾವವಿಲ್ಲದೆ ಕೊಡಗಿನ ನೆರವಿಗೆ ಅಸಂಖ್ಯ ಕೊಡುಗೈಗಳು ಮುಂದೆ ಬಂದಿವೆ. ಕೃಷಿಕರು, ಕಾರ್ಮಿಕರು ಸೇರಿದಂತೆ ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಟ್ಟಿರುವ ಕಾವೇರಿಯ ತವರೂರಲ್ಲಿ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿರುವ ಸಾವಿರಾರು ಜನರ ಕಣ್ಣೀರು ಒರೆಸಲು ಲಕ್ಷಾಂತರ ಕೈಗಳು ಪೈಪೋಟಿಗೆ ಇಳಿದಿವೆ. ಕುಡಿಯುವ ನೀರು, ಆಹಾರ, ದವಸ-ಧಾನ್ಯ, ಔಷಧ, ಉಡುಪು, ತಾತ್ಕಾಲಿಕ ವಸತಿ ಪರಿಕರಗಳು ನೂರಾರು ಲಾರಿಗಳಲ್ಲಿ ಕೊಡಗಿನತ್ತ ಧಾವಿಸಿವೆ. ನೂರಾರು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು, ಸಾವಿರಾರು ಜನರು ಸ್ವಯಂ ಪ್ರೇರಣೆಯಿಂದ ಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜ್ಯ ಸರಕಾರ ಹಾಗೂ ಪ್ರತಿಪಕ್ಷ ಜತೆಜತೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಿಮ್ಮ ಜತೆ ನಾವಿದ್ದೇವೆ ಎಂಬ ಭರವಸೆ, ವಿಶ್ವಾಸವನ್ನು ಕೊಡಗಿನ ಜನರಲ್ಲಿ ತುಂಬಿದ್ದಾರೆ. ಸರಕಾರದ್ದು ಕರ್ತವ್ಯ ಪಾಲನೆ. ಪ್ರತಿಪಕ್ಷದ್ದು ಸಾಮಾಜಿಕ ಜವಾಬ್ದಾರಿ. ಆದರೆ ಇವೆರಡಕ್ಕಿಂತಲೂ ಮಿಗಿಲಾದದ್ದು ನೂರಾರು ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಜನಸಾಮಾನ್ಯರು ಮಾನವೀಯತೆ ಆಧಾರದ ಮೇಲೆ ಸಂತ್ರಸ್ತರ ನೆರವಿಗೆ ನಿಂತಿರುವುದು!

ಹಾಗೆ ನೋಡಿದರೆ ಮಾಧ್ಯಮಗಳು ಅದರಲ್ಲೂ ಮುದ್ರಣ ಮಾಧ್ಯಮಗಳು ವಾಜಪೇಯಿ ಅವರು ಅಸ್ತಂಗತರಾದ ಸುದ್ದಿ ಜತೆಜತೆಗೆ ಕೊಡಗು ಮತ್ತು ಕೇರಳ ಪ್ರಕೃತಿ ವಿಕೋಪದ ಬಗ್ಗೆ, ಅದರಿಂದಾದ ಅನಾಹುತಗಳ ಬಗ್ಗೆ ‘ಸುದ್ದಿಬಾಹುಳ್ಯ’ದ ನಡುವೆಯೂ ಅನ್ಯಾಯಕ್ಕೆ ಆಸ್ಪದವಿಲ್ಲದಂತೆ ಪ್ರಸಾರ ಮಾಡಿವೆ. ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವಾಗುತ್ತಿದ್ದಂತೆ ಕೊಡಗು, ಕೇರಳ ಅತಿವೃಷ್ಟಿ ಅವಾಂತರಗಳದ್ದೇ ಅಗ್ರಪಾಲು. ಬರೀ ಸಚಿತ್ರ ವರದಿ ಬಿತ್ತರಿಸಿದ್ದಷ್ಟೇ ಅಲ್ಲ, ಕೆಲವು ಮಾಧ್ಯಮ ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಟೊಂಕಕಟ್ಟಿ ನಿಂತಿವೆ. ಕೊಡಗಿನ ಜನರ ಪಡಿಪಾಟಲು ತಮ್ಮದೇ ಎಂದು ಭಾವಿಸಿವೆ. ಹಣ, ಆಹಾರ, ನೀರು, ಉಡುಪು ಮತ್ತಿತರ ವಸ್ತುಗಳ ಸಂಗ್ರಹಣೆಯಲ್ಲಿ ನಿರತವಾಗಿವೆ. ಸಂಗ್ರಸಿಹಿದ್ದನ್ನು ಕಳುಹಿಸಿ ಕೊಟ್ಟಿವೆ. ವೃತ್ತಿಪರತೆ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಮೆರೆದಿವೆ. ಕಾಳಜಿ ಇಲ್ಲದಿದ್ದರೆ ಇದೆಲ್ಲವನ್ನೂ ಮಾಡಲಾಗುತ್ತಿತ್ತೇ?!

ನಿಜ, ಕರ್ನಾಟಕದ ಪಶ್ಚಿಮಘಟ್ಟ ಪರ್ವತ ಶ್ರೇಣಿಗೆ ಸೇರಿದ ಕೊಡಗು ಇದೀಗ ಮಳೆಮೂಲ ಪ್ರಕೃತಿ ವಿಕೋಪದಿಂದ ತತ್ತರಿಸಿ ಹೋಗಿದೆ. ೧೯೨೪ ರ ನಂತರ ಭೀಕರ ಅತಿವೃಷ್ಟಿ ಹೊಡೆತಕ್ಕೆ ನಡುಗಿ ಹೋಗಿರುವ ಕೊಡಗಿನಲ್ಲಿ ಎಲ್ಲೆಂದರಲ್ಲಿ ಭೂಮಿ ಬಾಯ್ಬಿಟ್ಟಿದೆ. ಉಕ್ಕಿ ಹರಿದ ನದಿ, ತೊರೆ, ಕಾಲುವೆಗಳ ಪ್ರವಾಹಕ್ಕೆ ಭೂಮಿ ಕುಸಿದು ಜರುಗಿದೆ. ಅಲ್ಲಿ ಬರೀ ನದಿ, ತೊರೆಗಳಷ್ಟೇ ಅಲ್ಲ ಬೆಟ್ಟ, ಕಣಿವೆಗಳು, ಕಾಫಿ, ಏಲಕ್ಕಿ, ಮೆಣಸು, ಅರಿಶಿನ, ಶುಂಠಿ ತೋಟಗಳು ಕರಗಿ ಹರಿದು ಹೋಗಿವೆ. ಮನೆ ಮತ್ತಿತರ ಕಟ್ಟಡಗಳಂತೂ ಕುಸಿದ ಕಣಿವೆಯಲ್ಲಿ ದೋಣಿಯಂತೆ ಸಾಗಿಹೋಗಿ ಮುರಿದು ಅವಶೇಷಗಳಾಗಿವೆ. ರಸ್ತೆಗಳೂ ಎಲ್ಲೆಂದರಲ್ಲಿ ಬಿರುಕು ಬಿಟ್ಟು ಚಂಬಲ್ ಕಣಿವೆಯಂತಾಗಿವೆ. ಬೆಟ್ಟ ಎಲ್ಲಿತ್ತು, ಕಣಿವೆ ಎಲ್ಲಿತ್ತು, ತೋಟ ಎಲ್ಲಿತ್ತು, ಮನೆ ಎಲ್ಲಿತ್ತು ಎಂಬುದರ ಗುರುತು ಗೊತ್ತಾಗದಂತೆ ನಾಮಾವಶೇಷವಾಗಿದೆ. ಭೂಕುಸಿತ ಹಾಗೂ ಬಿರುಕಿನಿಂದ ಸಣ್ಣ-ಸಣ್ಣ ದ್ವೀಪಗಳು ನಿರ್ಮಾಣವಾಗಿ ಜನ ಅದರೊಳಗೆ ಬಂಽಯಾಗಿದ್ದಾರೆ. ದಕ್ಷಿಣ ಕಾಶ್ಮೀರದ ಕೆಲಭಾಗಗಳು ಈಗ ಅಕ್ಷರಶಃ ಮಣ್ಣಿನ ಮುದ್ದೆ. ಪಕ್ಕದ ರಾಜ್ಯ ಕೇರಳದ ಪರಿಸ್ಥಿತಿಯಂತೂ ಇನ್ನೂ ಭೀಕರ. ಸತತ ಸುರಿದ ಮಳೆಯಿಂದ ಇತ್ತ ಕೊಡಗು ಎಂತೋ ಅಂತೆಯೇ ಅದಕ್ಕೆ ಹೊಂದಿಕೊಂಡಿರುವ ದೇವರನಾಡು ಕೇರಳವನ್ನೂ ನೀರಲ್ಲಿ ಹುಡುಕುವ ಸ್ಥಿತಿ. ಹಿಂದೆಂದೂ ಕಂಡು-ಕೇಳರಿಯದ ವರುಣಾನಾಹುತಕ್ಕೆ ನೀರಿಡಿದು ಮಲಗಿವೆ. ಇಂಥ ಸನ್ನಿವೇಶದಲ್ಲಿ ಜನ ಸ್ವಯಂ ಪ್ರೇರಣೆಯಿಂದ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸಿರುವುದು ನಾಡು ಮತ್ತು ದೇಶ ಒಟ್ಟು ಕುಟುಂಬದಂತಿರುವುದರ ಪ್ರತೀಕ. ರಾಜಕೀಯ, ಸಾಮಾಜಿಕ, ಪ್ರಾದೇಶಿಕ ಭಿನ್ನಾಭಿಪ್ರಾಯಗಳು ಏನೇ ಇರಬಹುದು, ಆದರೆ ಕಷ್ಟ ಕಾಲದಲ್ಲಿ ಎಲ್ಲವನ್ನೂ ಮರೆತು ಒಬ್ಬರ ನೆರವಿಗೆ ಮತ್ತೊಬ್ಬರು ಮುಂದೆ ಬರುವುದು ಇದೆಯಲ್ಲ, ಅದು ಮಾನವೀಯತೆ ಇನ್ನೂ ಮಾಸಿಲ್ಲ ಎಂಬುದರ ದ್ಯೋತಕ.

ಕೊಡಗಿನ ಅನಾಹುತಕ್ಕೆ ಬರೀ ಕರ್ನಾಟಕ ಮಾತ್ರವಲ್ಲ, ದೇಶ-ವಿದೇಶಗಳಿಂದಲೂ ಖಾಸಗಿ ನೆರವು ಹರಿದು ಬರುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಅರಬ್ ಮತ್ತಿತರ ರಾಷ್ಟ್ರಗಳಿಂದಲೂ ಕನ್ನಡಿಗರು ದೇಣಿಗೆ ನೀಡುತ್ತಿದ್ದಾರೆ. ಕೇರಳದಲ್ಲಾಗಿರುವ ಅನಾಹುತಕ್ಕೂ ಅಷ್ಟೇ. ಕೊಡಗಿಗೆ ಹೋಲಿಸಿದರೆ ಅಲ್ಲಾಗಿರುವ ನಷ್ಟದ ಪ್ರಮಾಣ ಹೆಚ್ಚು. ಅಲ್ಲಿಗೂ ದೇಶದ ನಾನಾ ರಾಜ್ಯಗಳು ಹಾಗೂ ವಿದೇಶಗಳಿಂದ ಅಪಾರ ಪ್ರಮಾಣದ ನೆರವು ಹರಿದು ಬರುತ್ತಿದೆ. ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಕಳೆದ ಈದ್ ಉಲ್ ಜುಹಾ ಆಚರಣೆ ಸಂದರ್ಭ ಅಲ್ಲಿನ ನಾನಾ ಬ್ಯಾಂಕ್‌ಗಳ ಎಟಿಎಂಗಳಿಂದ ಸುಮಾರು ೪೫೫ ಕೋಟಿ ರುಪಾಯಿಗಳನ್ನು ಡ್ರಾ ಮಾಡಲಾಗಿತ್ತು. ಈ ಬಾರಿ ಅದರಲ್ಲಿ ಅರ್ಧದಷ್ಟು ಅಂದರೆ ಸುಮಾರು ೨೨೭.೫೦ ಕೋಟಿ ರುಪಾಯಿಗಳನ್ನು ಮಾತ್ರ ಎಟಿಎಂಗಳಿಂದ ಡ್ರಾ ಮಾಡಲಾಗಿದೆ. ಉಳಿದ ಅರ್ಧದಷ್ಟನ್ನುಕೇರಳ ಪರಿಹಾರ ನಿಽಗೆ ಕೊಡುಗೆಯಾಗಿ ನೀಡಬೇಕೆಂದು ಕಣಿವೆಯ ಮುಸ್ಲಿಂ ಮುಖಂಡರು ಸಮುದಾಯದವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಿಂದೆ ೨೦೧೪ ರಲ್ಲಿಯೂ ಇದೇ ರೀತಿ ಹಣವನ್ನು ಪ್ರಕೃತಿ ವಿಕೋಪ ಪರಿಹಾರ ನಿಽಗೆ ನೀಡಿದ್ದನ್ನು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಅಂದರೆ ಅನಿವಾರ್ಯ ಸಂದರ್ಭಕ್ಕೆ ದೇಶವಾಸಿಗಳು ಜಾತಿ-ಧರ್ಮ ಭೇದವಿಲ್ಲದೆ ಹೇಗೆ ಎದ್ದು ನಿಲ್ಲುತ್ತಾರೆ ಎಂಬುದಕ್ಕೆ ಇದು ಮತ್ತೊಂದು ಉತ್ತಮ ಉದಾಹರಣೆ!

ಸಂಕಷ್ಟ ಕಾಲದಲ್ಲಿ ಅನ್ಯರನ್ನು ಆತುಕೊಳ್ಳುವ ಸುಬುದ್ಧಿ ಅನಾವರಣ ಇದೇ ಮೊದಲೇನೂ ಅಲ್ಲ. ಹತ್ತು ವರ್ಷಗಳ ಹಿಂದೆ ಗಡಿಯಂಚಿನ ಮಂತ್ರಾಲಯ ಸೇರಿದಂತೆ ಉತ್ತರ ಕರ್ನಾಟಕ ಇದೇ ರೀತಿ ನೆರೆಹಾವಳಿಗೆ ತತ್ತರಿಸಿದ ಸಂದರ್ಭ ಇರಬಹುದು, ನೆರೆಯ ತಮಿಳುನಾಡು ಪ್ರವಾಹದಲ್ಲಿ ಮುಳುಗಿದ ಸನ್ನಿವೇಶ ಇರಬಹುದು, ಇನ್ನೊಂದು ನೆರೆರಾಜ್ಯ ಮಹಾರಾಷ್ಟ್ರದ ಲಾತೂರ್ ಭೂಕಂಪ ಇರಬಹುದು, ಉತ್ತರ ಭಾರತದ ಕೇದಾರ-ಬದರಿನಾಥ ಮತ್ತಿತರ ಯಾತ್ರಾಸ್ಥಳಗಳು ಪ್ರವಾಹಕ್ಕೆ ಸಿಕ್ಕಿ ನಲುಗಿದಾಗ ಇರಬಹುದು – ಇದೇ ರೀತಿ ಕರ್ನಾಟಕ ಮತ್ತು ದೇಶದ ಇತರ ರಾಜ್ಯಗಳು ನೆರವಿಗೆ ತಾಮುಂದು-ನಾಮುಂದು ಎಂದು ಧಾವಿಸಿವೆ. ಅಂಥ ಸಂದರ್ಭಗಳಲ್ಲಿ ನಾಡು, ನುಡಿ, ಜಲ ಸೇರಿದಂತೆ ಯಾವುದೇ ಅಂತಾರಾಜ್ಯ ವಿವಾದಗಳೂ ಪರಿಗಣಿತವಾಗಿಲ್ಲ. ಅದು ಸರಕಾರವಿರಬಹುದು, ಜನಸಾಮಾನ್ಯರಿರಬಹುದು ಒಬ್ಬೊರಿಗೊಬ್ಬರು ಸಹಾಯದ ಸದ್ಭಾವನೆ ಪ್ರದರ್ಶನದ ಮೂಲಕ ಪರರ ಸಂಕಷ್ಟಕ್ಕಾಗುವ, ಪರಹಿತ ಕಾಯುವ ಈ ದೇಶದ ಮೂಲಸಂಸ್ಕಾರದ ಸತ್ಸಂಪ್ರದಾಯವನ್ನು ಎತ್ತಿ ಹಿಡಿದಿದೆ. ಈಗದು ಕೊಡಗು ಮತ್ತು ಕೇರಳದಲ್ಲಿ ಮತ್ತೆ ಪ್ರತಿಬಿಂಬಿತವಾಗುತ್ತಿದೆ.

ಇಲ್ಲಿ ಇನ್ನೂ ಒಂದು ವಿಚಾರ. ಕೊಡಗಿನ ಸಂಕಷ್ಟಕ್ಕೆ ಇಡೀ ರಾಜ್ಯ ಒಟ್ಟು ಕುಟುಂಬ ರೀತಿಯಲ್ಲಿ ನಿಂತಿರುವ ರೀತಿ ತಮ್ಮ ಸ್ವಾರ್ಥಕ್ಕಾಗಿ ಪ್ರತ್ಯೇಕ ರಾಜ್ಯ ಕೂಗಿಗೆ ಇಂಬುಗೊಡುತ್ತಿರುವ ಕುತ್ಸಿತ ಮನೋಭಾವದ ರಾಜಕಾರಣಿಗಳಿಗೊಂದು ದೊಡ್ಡ ಪಾಠ. ಸಂಪುಟದಲ್ಲಿ ಸ್ಥಾನಮಾನ ಸಿಗಲಿಲ್ಲ ಎಂದರೆ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವುದು. ಸಾಲಮನ್ನಾ ವಿಚಾರದಲ್ಲಿ ಹಳೇ ಮೈಸೂರಿಗೆ ಸಿಂಹಪಾಲು ಸಿಕ್ಕಿದೆ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸಿ ಪ್ರತ್ಯೇಕ ರಾಜ್ಯದ ಬಾವುಟ ಹಾರಿಸಲು ಮುಂದಾಗುವುದು, ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಸೂಕ್ತ ಅನುದಾನ ಕೊಟ್ಟಿಲ್ಲ, ಹಳೇ ಮೈಸೂರು ಭಾಗಕ್ಕೆ ಹೆಚ್ಚು ಕೊಡಲಾಗಿದೆ ಎಂದು ಮತ್ತದೇ ಸುಳ್ಳು ಹೇಳಿ ಆ ಭಾಗದ ಜನರನ್ನು ರೊಚ್ಚಿಗೆಬ್ಬಿಸುವುದು, ಲಿಂಗಾಯತರು-ವೀರಶೈವರಿಗೆ ತಂದಿಡುವುದು, ಲಿಂಗಾಯತರು-ಒಕ್ಕಲಿಗರ ನಡುವೆ ಬೆಂಕಿ ಹಚ್ಚುವುದು, ಮೇಲ್ವರ್ಗವದರು ಹಿಂದುಳಿದ ವರ್ಗದವರ ನಡುವೆ ಹಗೆ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು, ಅಽಕಾರ ಸಿಕ್ಕಾಗ ಒಂದು ನ್ಯಾಯ, ಅಽಕಾರ ತಪ್ಪಿ ಹೋದಾಗ ಮತ್ತೊಂದು ನ್ಯಾಯ – ಹೀಗೆ ತಮ್ಮ ಸ್ವಾರ್ಥ ಸಾಧನೆಗೆ ನಾಡು ಮತ್ತು ನಾಡಿನ ಜನರ ಭಾವನೆಗಳನ್ನು ಛಿದ್ರ-ಛಿದ್ರ ಮಾಡಿಡುವ  ರಾಜಕಾರಣಿಗಳಿಗೆ ಕೊಡಗು ಪ್ರಕೃತಿ ವಿಕೋಪ ವಿಚಾರದಲ್ಲಿ ಇಡೀ ನಾಡು ಪ್ರತಿಸ್ಪಂದಿಸುತ್ತಿರುವ ರೀತಿ ನಿಜಕ್ಕೂ ಆದರ್ಶವಾಗಬೇಕು. ತಮಗೆ ಅಽಕಾರ ಸಿಗಲಿಲ್ಲ ಎಂಬ ಕಾರಣಕ್ಕೆ, ಕೇವಲ ರಾಜಕೀಯ ಮಾಡಲೋಸುಗ ಈ ನಾಡನ್ನು ವಿಭಜಿಸಲು ಹೇಸದ, ಅದಕ್ಕಾಗಿ ಜನರನ್ನು ಬೀದಿಗಿಳಿಸಿ ನಕಲಿ ಹೋರಾಟ ನಡೆಸುವ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಜನರ ನಡುವೆ ವೈಷಮ್ಯದ ಕಿಚ್ಚು ಹಚ್ಚುವ ರಾಜಕಾರಣಿಗಳು ಏಕತೆ, ಅದಕ್ಕಿರುವ ಶಕ್ತಿ, ಅದಕ್ಕೆ ಊರುಗೋಲಾಗುವ ಪ್ರೀತಿ ಬಗ್ಗೆ ಕೊಡಗು ಸಂದರ್ಭವನ್ನು ಪರಾಮರ್ಶೆ ಮಾಡಿ ಅರಿತುಕೊಳ್ಳಬೇಕು.

ರಾಜಕೀಯ ಅಽಕಾರ ಬರುತ್ತದೆ, ಹೋಗುತ್ತದೆ. ಯಾವುದೂ ಶಾಶ್ವತವಾಗಿ ನಿಲ್ಲುವುದಿಲ್ಲ. ಆದರೆ ಅಽಕಾರ ಇದ್ದಾಗ ಮತ್ತು ಇಲ್ಲದಿದ್ದಾಗ ಯಾರು, ಹೇಗೆ ವರ್ತಿಸಿದರು ಎಂಬುದು ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಅಽಕಾರ ಹೋದ ಹದಿನೈದು ವರ್ಷಗಳ ನಂತರ ವಾಜಪೇಯಿ ಅವರು ವಿಽವಶರಾದ ಸಂದರ್ಭದಲ್ಲಿ ದೇಶ-ವಿದೇಶಗಳ ಜನ ಹೇಗೆ ಕಂಬನಿ ಮಿಡಿದರು, ಅವರ ರಾಜಕೀಯ ನೀತಿ, ವ್ಯಕ್ತಿತ್ವವನ್ನು ಹೇಗೆ ಕೊಂಡಾಡಿದರು ಎಂಬುದು ಇದಕ್ಕೆ ತೀರಾ ಇತ್ತೀಚಿನ ಸಾಕ್ಷಿ. ಅದೇ ರೀತಿ ಅಽಕಾರೇತರ ಮಾನವೀಯ ಮೌಲ್ಯಗಳು ಹೇಗೆ ವಿಜೃಂಭಿಸುತ್ತವೆ ಎಂಬುದಕ್ಕೆ ಈಗ ಕೊಡಗಿನ ಜನರ ಸಂಕಷ್ಟ ಸಮಯದಲ್ಲಿ ನಾಡಿನ ಜನ ಸ್ಪಂದಿಸುತ್ತಿರುವ ರೀತಿ ಕೂಡ..!